ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರಿನಲ್ಲಿ ಮುಳುಗಿ ಸತ್ತ ಸ್ಪುರದ್ರೂಪಿ ಪುರುಷ – ಮತ್ತೊಂದು ಮಾರ್ಕ್ವೆಜ಼್ ಕಥೆ

(ಇದೊಂದು ಮಕ್ಕಳಿಗಾಗಿ ಕತೆ)

ಜೆ.ವಿ.ಕಾರ್ಲೋ, ಹಾಸನ (ಅನುವಾದ)

ಮೂಲ : ಗಾಬ್ರಿಯೆಲ್ ಗಾರ್ಸಿಯಾ ಮಾರ್ಕೆಜ಼್

ಸಮುದ್ರದೊಳಗಿಂದ ತೇಲಿ ಬರುತ್ತಿರುವ ಆ ಬೃಹತ್ ಗಾತ್ರದ ವಸ್ತುವನ್ನು ಮೊದಲು ನೋಡಿದ ಮಕ್ಕಳು ಅದೊಂದು ಶತ್ರು ನಾವೆಯೆಂದುಕೊಂಡರು. ಆದರೆ ಅದರ ಮೇಲೊಂದು ಬಾವುಟ, ಪಟಸ್ತಂಭ ಇಲ್ಲದಿರುವುದು ಕಂಡು ಅದೊಂದು ತಿಮಿಂಗಿಲವೆಂದುಕೊಂಡರು. ಅದು ದಡಕ್ಕೆ ಬಂದು ಬಿದ್ದಾಗ, ಅದಕ್ಕಂಟಿದ್ದ ಸಮುದ್ರದ ಕಸ, ಕೊಳೆ, ಜೆಲ್ಲಿ ಮೀನಿನ ಪಳೆಯುಳಿಕೆಗಳನ್ನೆಲ್ಲಾ ತೆಗೆದು ಶುಚಿಗೊಳಿಸಿದಾಗಲೇ ಅವರಿಗೆ ಗೊತ್ತಾಗಿದ್ದು ಅದು ಯಾರೋ ನೀರೊಳಗೆ ಮುಳುಗಿ ಸತ್ತ ಒಬ್ಬ ಗಂಡಸಿನ ದೇಹವೆಂದು.
ಮಕ್ಕಳಿಗೆ ಅದೊಂದು ಆಟದ ವಸ್ತುವಾಯಿತು. ಮಧ್ಯಾಹ್ನದವರೆಗೆ ಮರಳಿನಲ್ಲಿ ಅದನ್ನು ಹೂಳುತ್ತಾ, ತೆಗೆಯುತ್ತಾ ಆಟವಾಡುವುದೇ ಅವರ ಕಾಯಕವಾಯ್ತು. ಅಷ್ಟರಲ್ಲಿ ಯಾರೋ ವಯಸ್ಕರು ಇದನ್ನು ಗಮನಿಸಿ ಊರಲ್ಲಿ ಸುದ್ದಿ ಹರಡಿದರು. ಅವನನ್ನು ಎತ್ತಿಕೊಂಡು ಹತ್ತಿರದ ಮನೆಯಲ್ಲಿ ಇಳಿಸಿದ ಊರವರಿಗೆ ಈ ಮನುಷ್ಯ, ಇತರೆ ಮನುಷ್ಯರಿಗಿಂತ ಬಹಳ ದಿನಗಳಿಂದ ನೀರು ಕುಡಿಕುಡಿದು ಕುದುರೆಗಿಂತ ಭಾರವಾಗಿದ್ದಾನೆ ಎಂದೆನಿಸಿತು. ಅವನನ್ನು ನೆಲದ ಮೇಲಿರಿಸಿದಾಗ ಅವನು ಅವರೆಲ್ಲರಿಗಿಂತ ಎತ್ತರವಾಗಿರುವುದು ಕಾಣಿಸಿತು. ಯಾಕೆಂದರೆ ಅವನನ್ನು ಇಳಿಸಿದ ಕೋಣೆ ಅವನ ಎತ್ತರಕ್ಕೆ ಕಿರಿದಾಗಿ ಕಾಣಿಸುತ್ತಿತ್ತು. ನೀರಲ್ಲಿ ಮುಳುಗಿ ಸತ್ತ ಕೆಲವು ಮನುಷ್ಯರು ಬೆಳೆಯುತ್ತಿರುತ್ತಾರೇನೋ ಎಂದು ಅವರೆಂದುಕೊಂಡರು. ಅವನು ಸಮುದ್ರದ ವಾಸನೆ ಹೊಡೆಯುತ್ತಿದ್ದ. ಅವನ ಆಕಾರ ಮಾತ್ರದಿಂದಲೇ ಅವನದೊಂದು ಮಾನವ ಕಳೇಬರವೆಂದು ಗೊತ್ತಾಗುತ್ತಿತ್ತು. ಉಳಿದಂತೆ ಅವನ ದೇಹ ಮಣ್ಣು ಮತ್ತು ಮೀನಿನ ಚೆಕ್ಕೆಗಳಿಂದ ಆವೃತ್ತವಾಗಿರುವಂತೆ ಕಾಣಿಸುತ್ತಿತ್ತು.
ಅವನೊಬ್ಬ ಅಪರಿಚಿತನೆಂದು ಭಾವಿಸಲು ಅವನ ಮುಖ ಸ್ವಚ್ಚ ಮಾಡಿ ನೋಡುವ ಅಗತ್ಯವಿರಲಿಲ್ಲ. ಆ ಊರಲ್ಲಿ ಕೇವಲ ಇಪ್ಪತ್ತು ಚಿಲ್ಲರೆ ಮರಗಳಿಂದ ಕಟ್ಟಿದ್ದ ಮನೆಗಳಿದ್ದವು. ಎಲ್ಲಾ ಮನೆಗಳಿಗೂ ಹೂತೋಟಗಳಿಲ್ಲದ ಕಲ್ಲು ಚಪ್ಪಡಿಯ ಅಂಗಳವಿತ್ತು. ಮನೆಗಳೆಲ್ಲಾ ಸಮುದ್ರದೊಳಗೆ ಚಾಚಿಕೊಂಡ ಬರಡು ಶಿಖರಭೂಮಿಯ ಉದ್ದಕ್ಕೂ ಹರಡಿಕೊಂಡಿದ್ದವು. ಜೋರಾಗಿ ಗಾಳಿ ಬೀಸಿದರೆ ಮಕ್ಕಳೆಲ್ಲಿ ಹಾರಿ ಸಮುದ್ರದೊಳಗೆ ಬೀಳುತ್ತವೋ ಎಂಬ ದಿಗಿಲಿನಿಂದಲೇ ಊರಿನ ಹೆಂಗಸರು ದಿನ ನೂಕುತ್ತಿದ್ದರು.
ಅಂದು ರಾತ್ರಿ ಊರಿನ ಗಂಡಸರ್ಯಾರೂ ಮೀನು ಹಿಡಿಯಲು ಸಮುದ್ರಕ್ಕೆ ಹೋಗಲಿಲ್ಲ. ಅವರೆಲ್ಲಾ, ಯಾರಾದರೂ ಕಳೆದು ಹೋಗಿದ್ದಾರೆಯೇ ಎಂದು ವಿಚಾರಿಸಿಕೊಳ್ಳಲು ಅಕ್ಕಪಕ್ಕದ ಊರುಗಳಿಗೆ ಹೋಗಿದ್ದರೆ, ಹೆಂಗಸರೆಲ್ಲಾ ನೀರಲ್ಲಿ ಮುಳುಗಿ ಸತ್ತ ಮನುಷ್ಯನ ಆರೈಕಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ಅವನಿಗಂಟಿದ್ದ ಮಣ್ಣು ಕೊಳೆಯನ್ನೆಲ್ಲಾ ಹುಲ್ಲಿನಿಂದ ಮಾಡಿದ್ದ ಬ್ರಶ್ಶುಗಳಿಂದ ಉಜ್ಜಿ ತೆಗೆಯತೊಡಗಿದರೆ, ಮತ್ತೆ ಕೆಲವರು ಅವನ ತಲೆಕೂದಲುಗಳಲ್ಲಿ ಸಿಕ್ಕಿಕೊಂಡ ಸಣ್ಣ ಸಣ್ಣ ಕಲ್ಲಿನ ಕಣಗಳನ್ನು ಬಿಡಿಸತೊಡಗಿದರು. ಮತ್ತೂ ಕೆಲವರು ಅವನ ಮೈಗೆ ಹತ್ತಿದ್ದ ಮೀನಿನ ಪಳೆಯುಳಿಕೆಗಳನ್ನೆಲ್ಲಾ ಮೀನುಗಳನ್ನು ಶುಚಿಗೊಳಿಸುವ ಕತ್ತಿಗಳಿಂದ ಹೆರೆಯತೊಡಗಿದರು. ಅವನಿಗಂಟಿದ್ದ ಸಮುದ್ರ ಪಾಚಿ, ಮತ್ತಿತರ ಕಸ ಈ ಸಮುದ್ರದಲ್ಲವೆಂದು ಅವರಿಗನಿಸಿತು. ಅವನ ಬಟ್ಟೆಗಳೂ ಕೂಡ ಎಲ್ಲೋ ಆಳ ಸಮುದ್ರದಲ್ಲಿ ಹವಳದ ದಂಡೆಗಳನ್ನು ಉಜ್ಜಿಕೊಂಡು ಬಂದಂತೆ ಚಿಂದಿಯಾಗಿದ್ದವು. ಅವನ ಮುಖ, ನೀರಿನಲ್ಲಿ ಮುಳುಗಿ ಸತ್ತ ಇತರ ಹೆಣಗಳ ಮುಖದಂತೆ ಭೀಭತ್ಸವಾಗಿರದೆ ಪ್ರಶಾಂತವಾಗಿತ್ತು. ಅವನನ್ನು ಪೂರ್ಣವಾಗಿ ಶುಚಿಗೊಳಿಸಿದ ನಂತರವೇ ಅವನೆಂತಾ ಮನುಷ್ಯನೆಂದು ಅವರಿಗೆ ಅರಿವಾಗಿದ್ದು. ಇದು ಅವರನ್ನು ಸ್ಥಂಭಿಭೂತಗೊಳಿಸಿತು. ಅವನು, ಅವರು ನೋಡಿದ್ದ ಗಂಡಸರಿಗಿಂತ ಎತ್ತರವಷ್ಟೇ ಅಲ್ಲ, ಅತ್ಯಂತ ಬಲಶಾಲಿಯೂ, ವೀರ್ಯವಂತನೂ, ಸ್ಪುರದ್ರೂಪಿಯೂ ಆಗಿದ್ದ. ಅವನನ್ನು ಕಲ್ಪಿಸಿಕೊಳ್ಳಲು ಆಗುವಷ್ಟು ಸ್ಥಳಾವಕಾಶ ಆ ಹೆಣ್ಣುಮಕ್ಕಳ ತಲೆಯೊಳಗಿರಲಿಲ್ಲ.
ಅವನನ್ನು ಮಲಗಿಸುವಂತ ಹಾಸಿಗೆಯಾಗಲಿ, ಅವನ ಭಾರ ತಡೆದುಕೊಳ್ಳಬಲ್ಲ ಬೆಂಚಾಗಲಿ ಆ ಊರಲ್ಲಿರಲಿಲ್ಲ. ಆ ಊರಿನಲ್ಲೇ ಎತ್ತರದ ಗಂಡಸಿನ ಪ್ಯಾಂಟಾಗಲಿ, ಠೊಣಪನ ಶಟರ್ಾಗಲಿ, ದಪ್ಪ ಕಾಲಿನವನ ಶೂಗಳಾಗಲಿ ಇವನಿಗೆ ಹೊಂದಿಕೊಳ್ಳಲಿಲ್ಲ. ಅವನ ಗಾತ್ರ, ಸೌಂದರ್ಯದಿಂದ ಪರವಶರಾದ ಆ ಹೆಣ್ಣುಮಕ್ಕಳು ಹಳೆಯ ಹಾಯಿಪಟದಿಂದಲೇ ಅವನಿಗೊಂದು ಹೊಸ ಪ್ಯಾಂಟನ್ನು ಹೊಲೆಯತೊಡಗಿದರು. ಹಾಗೆಯೇ ಒಂದು ರಂಗುರಂಗಿನ ನಾರು ಬಟ್ಟೆಯಿಂದ ಶರ್ಟನ್ನೂ ಹೊಲೆಯತೊಡಗಿದರು. ಸತ್ತ ವ್ಯಕ್ತಿಗೆ ಘನತೆ ಗೌರವಗಳಿಂದ ಬೀಳ್ಕೊಡಬೇಕೆಂಬುದು ಅವರ ಇಚ್ಛೆ. ವತರ್ುಲಾಕಾರದಲ್ಲಿ ಕುಳಿತು ಹೊಲಿಗೆಯ ಮಧ್ಯ ಮಧ್ಯದಲ್ಲಿ ಅವರು ಸತ್ತ ವ್ಯಕ್ತಿಯತ್ತಲೊಮ್ಮೆ ಕಣ್ಣು ಹಾಯಿಸುತ್ತಿದ್ದರು. ಸಮುದ್ರ ಇಂದು ಎಂದಿಗಿಂತಲೂ ಅಶಾಂತವಾಗಿತ್ತು. ಗಾಳಿ ತಟಸ್ಥವಾಗಿತ್ತು. ಈ ಬದಲಾವಣೆಗೆ ಈ ಸತ್ತ ಮನುಷ್ಯನೇ ಕಾರಣನೆಂದು ಅವರಿಗನ್ನಿಸಿತ್ತು. ಈ ಮನುಷ್ಯ ಈ ಊರಿನಲ್ಲಿ ನೆಲೆಸಿದ್ದಿದ್ದರೆ ಅವನ ಮನೆಯ ಬಾಗಿಲುಗಳು ತುಂಬಾ ಅಗಲವಾಗಿರುತ್ತಿದ್ದವು. ಛಾವಣಿ ಎಲ್ಲ ಮನೆಗಳಿಗಿಂತ ಎತ್ತರವಾಗಿರುತ್ತಿತ್ತು.
ಅವನ ಮಂಚ ಗಟ್ಟಿಮುಟ್ಟಾಗಿರುವ ದೋಣಿಯ ಮಧ್ಯಭಾಗದ ಮರದಿಂದಲೇ ಮಾಡಿರಬೇಕಿತ್ತು, ಮತ್ತು ಅವುಗಳಿಗೆ ಗಟ್ಟಿಮುಟ್ಟಾದ ಕಬ್ಬಿಣದ ಬೋಲ್ಟುಗಳೇ ಉಪಯೋಗಿಸಬೆಕಿತ್ತು. ಅವನ ಹೆಂಡತಿ! ಒಹ್, ಎಷ್ಟೊಂದು ಅದೃಷ್ಟವಂತೆಯಾಗಿರುತ್ತಿದ್ದಳು. ಅವನ ವ್ಯಕ್ತಿತ್ವ ಎಷ್ಟೊಂದು ಅಧಿಕಾರಯುತವಾಗಿ ಕಾಣುತ್ತಿತ್ತೆಂದರೆ, ಮೀನು ಹಿಡಿಯಲು ಅವನು ಬಲೆಯನ್ನೇ ಬೀಸಬೇಕಿರಲಿಲ್ಲ. ಅವನು ಮೀನುಗಳ ಹೆಸರುಗಳನ್ನು ಹಿಡಿದು ಕರೆದರೆ ಸಾಕಿತ್ತು. ತಾವಾಗಿಯೇ ನಾ ಮುಂದು ತಾ ಮುಂದೆಂದು ಬಂದು ಬಿದ್ದಿರುತ್ತಿದ್ದವು. ಅವನ ಬಲಿಷ್ಠ ಕೈಬೆರಳುಗಳಿಂದ ಬಂಡೆಗಳ ಮೇಲೆ ಬಗೆದರೆ ಸಾಕಿತ್ತು. ಅಲ್ಲಿ ಗುಳಿಗಳು ಮೂಡಿ ಗಿಡಗಳನ್ನು ನೆಡಬಹುದಿತ್ತು..,ನೀರಿನ ಬುಗ್ಗೆಗಳನ್ನು ಏಳಿಸಬಹುದಿತ್ತು. ಹೀಗೆ ಈ ಹೆಣ್ಣು ಮಕ್ಕಳ ಯೋಚನಾಲಹರಿ ಸಾಗುತ್ತಿತ್ತು. ಹಾಗೆಯೇ ಅವರು ಇವನ ಮುಂದೆ ಅವರ ಗಂಡಂದಿರನ್ನು ಹೋಲಿಸಿಕೊಳ್ಳತೊಡಗಿದರು. ಯಾವ ಕೋನದಿಂದಲೂ ಅಳೆದರೂ ಇವರುಗಳು ನಾಲಾಯಕ್, ನಿಷ್ಪ್ರಯೋಜಕರೆಂದು ಅವರಿಗೆ ಮನದಟ್ಟಾಯಿತು. ಇವನು ಒಂದು ರಾತ್ರಿಯಲ್ಲಿ ಮಾಡುವಂತ ಕೆಲಸ ಇವರು ಜೀವನಪೂತರ್ಿ ಬೋರಾಡಿದರೂ ಸಾಧ್ಯವಾಗದೆಂದು ತಿಳಿದು ಅವರು ತಮ್ಮ ಗಂಡಂದಿರನ್ನು ಅಸಹ್ಯಪಟ್ಟುಕೊಳ್ಳತೊಡಗಿದರು. ವಯಸ್ಸಿನ ಹೆಣ್ಣು ಮಕ್ಕಳೆಲ್ಲಾ ಕಲ್ಪನಾವಿಲಾಸದಲ್ಲಿ ತೇಲುತ್ತಿರುವಾಗ ಒಬ್ಬಳು ವಯಸ್ಸಾದ ಹೆಂಗಸು ಯಾವುದೇ ವಾಂಛೆಗಳಿಲ್ಲದ ಸ್ವರದಲ್ಲಿ ಹೇಳಿದಳು:
‘ಇವನ ಮುಖ ಎಸ್ತೆಬಾನ್ನಂತಿದೆ.’
ಅದು ಸತ್ಯವಾಗಿತ್ತು. ಅವರೆಲ್ಲಾ ಮತ್ತೊಮ್ಮೆ ಅವನತ್ತ ನೋಡಿದರು. ನಿಜವಾಗಲೂ ಅವನಿಗೆ ಬೇರಾವ ಹೆಸರುಗಳಿರಲು ಸಾಧ್ಯವಿರಲಿಲ್ಲ. ಆದರೆ, ಎಳೆವಯಸ್ಸಿನ ಹೆಣ್ಣುಮಕ್ಕಳು ಇದನ್ನೊಪ್ಪಲು ತಯಾರಿರಲಿಲ್ಲ. ತಾವು ಶೃಂಗರಿಸಿದ ಹೆಣ ಲೌತಾರೊನದೆಂದು ಅವರ ಅಭಿಮತ. ಅದೊಂದು ಅವಾಸ್ತವ ಕಲ್ಪನೆಯಾಗಿತ್ತು. ಅವನಿಗಾಗಿ ಅವರು ಹೊಲಿದ ಪ್ಯಾಂಟು ಅವನಳತೆಗೆ ಬಿಗಿಯಾಗಿತ್ತು. ಹೊರಗೆದ್ದು ಕಾಣದ ಅವನ ಹೃದಯ ವೈಶ್ಯಾಲತೆ ಅವರು ಹೊಲೆದ ಶರ್ಟಿನ ಗುಂಡಿಗಳನ್ನು ಕಿತ್ತು ಹಾಕಿತು. ಮಧ್ಯರಾತ್ರಿಯ ನಂತರ ಸಮುದ್ರ ಶಾಂತವಾಯಿತು. ಗಾಳಿ ಮಂದವಾಗಿ ಬೀಸತೊಡಗಿತು. ನೀರವತೆ ಎಲ್ಲಾ ಸಂಶಯಗಳನ್ನು ತೊಡೆದು ಹಾಕಿತು. ಅವನು ಖಂಡಿತವಾಗಿಯೂ ಎಸ್ತೆಬಾನ್. ಅವನನ್ನು ಶುಚಿಗೊಳಿಸಿದ, ಸ್ನಾನ ಮಾಡಿಸಿದ, ಗಡ್ಡ ಹೆರೆದ, ಉಗುರುಗಳನ್ನು ಕತ್ತರಿಸಿದ ಹೆಂಗಸರು ಅವನನ್ನು ನೆಲದ ಮೇಲೆ ಎಳದುಕೊಂಡು ಹೋಗುವ ದೃಶ್ಯವನ್ನು ನೆನೆದು ಕಂಪಿಸಿದರು.
ಸತ್ತ ಮೇಲೂ ಇಷ್ಟೊಂದು ಭಾರ ಗಾತ್ರದ ದೇಹದಿಂದ ಅವನೆಷ್ಟು ಕಷ್ಟಪಟ್ಟಿರಬಹುದೆಂದು ನೆನೆದು ದುಃಖ ಪಟ್ಟರು. ಜೀವಂತವಿದ್ದಾಗ ಅವನು ಒಂದು ಮನೆಯನ್ನು ಒಳ ಹೊಕ್ಕಲು ಎಷ್ಟೊಂದು ಕಷ್ಟ ಪಟ್ಟಿರಬಹುದು ಎಂದು ಆ ಹೆಣ್ಣು ಮಕ್ಕಳು ಊಹಿಸಿಕೊಳ್ಳುತ್ತಾ ವಿಷಾದಪಡತೊಡಗಿದರು. ತಲೆಗೆಲ್ಲಿ ತೊಲೆ ಹೊಡೆಯುವದೋ ಎಂಬ ಹೆದರಿಕೆಯಿಂದ ಮೈಯನ್ನು ಕುಬ್ಜಗೊಳಿಸಿ, ಅವನನ್ನು ಕುಳ್ಳಿರಿಸಲು ಮನೆಯೊಡತಿ ಗಟ್ಟಿಮುಟ್ಟಾದ ಕುರ್ಚಿಯನ್ನು ಹುಡುಕುವ ಪರದಾಟ ನೋಡಿ ಇವನು, ಅದೆಲ್ಲಿ ಮುರಿದು ಹೋಗುವುದೋ ಎಂಬ ಭಯದಿಂದ ‘ಪರವಾಯಿಲ್ಲ ಕಣಮ್ಮ, ನಾನು ನಿಂತು ಕೊಂಡೇ ಇರುತ್ತೇನೆ. ಅದೇ ನನಗೆ ಖುಷಿ.’ ಎಂದು ಬಲವಂತವಾಗಿ ನಗುವ ನಾಟಕ.. ಹಿಂಸೆ ತಾಳಲಾರದೇ ‘ನಾನು ಹೊರಟೆ ಕಣಮ್ಮ’ ಎಂದು ಇವನು ಹೊರಡಲಣಿಯಾಗುವುದು, ಆಗ ಮನೆಯವರು, ‘ಒಂದು ಲೋಟ ಬಿಸಿ ಬಿಸಿ ಕಾಫಿ ಕುಡಿದಾದರೂ ಹೋಗಪ್ಪ ಎಸ್ತೆಬಾನ್’ ಎನ್ನುವುದು, ಇವನು ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ನಿಲ್ಲುವುದು..ಅವನು ಹೊರಟು ಹೋದ ನಂತರ, ‘ಸಧ್ಯ ಈ ಸ್ಪುರದ್ರೂಪಿ ದೈತ್ಯ ಹೊರಟು ಹೋದನಲ್ಲ ಎಂದು ಮನೆಯವರು ಸಮಧಾನದ ನಿಟ್ಟಿಸಿರು ಬಿಡುವುದು.
ಆ ಮುಂಜಾವಿನ ವೇಳೆಯಲ್ಲಿ ಇದನ್ನೇ ಆ ಹೆಂಗಳೆಯರು ನೆನೆದು ವಿಷಾದಪಡುತ್ತಿದ್ದರು. ಸೂರ್ಯ ಹುಟ್ಟುತ್ತಿದ್ದಂತೆ ಬಿಸಿಲ ಕಿರಣಗಳು ಅವನಿಗೆಲ್ಲಿ ಘಾಸಿಗೊಳಿಸುತ್ತವೋ ಎಂದು ಅ ಹೆಣ್ಣುಮಕ್ಕಳು ಅವನ ಮುಖದ ಮೇಲೆ ಒಂದು ಕರವಸ್ತ್ರವನ್ನು ಮುಚ್ಚಿದರು. ಅವನೀಗ ತನ್ನನ್ನು ತಾನೇ ಯಾವುದೇ ರೀತಿಯಲ್ಲೂ ರಕ್ಷಿಕೊಳ್ಳಲು ಅಶಕ್ತನಾಗಿ, ತಮ್ಮ ಗಂಡಸರ ಹಾಗೇ ಅಸಹಾಯಕನಾಗಿ, ಶಾಶ್ವತವಾಗಿ ಮೃತನಾದವನಂತೆಯೇ ತೋರುತ್ತಿದ್ದ. ಇದನ್ನು ನೋಡುತ್ತಾ ಅವರ ಹೃದಯಗಳಲ್ಲಿ ದುಃಖದ ಸೆಲೆ ಒಡೆಯಿತು. ಮೊದಲು ಹರೆಯದ ಹೆಣ್ಣುಮಕ್ಕಳು ಅಳಲು ಶುರುವಿಟ್ಟುಕೊಂಡರು. ಕ್ರಮೇಣ ಎಲ್ಲಾ ಹೆಣ್ಣು ಮಕ್ಕಳೂ, ಮೊದಲು ನಿಡುಸುಯ್ಯುತ್ತಾ, ಬಿಕ್ಕುತ್ತಾ ಜೋರಾಗಿ ಅಳಲು ಶುರುಮಾಡಿದರು. ಅಷ್ಟರಲ್ಲಿ ಒಬ್ಬೊಬ್ಬರಾಗಿ ಹಿಂದಿರುಗಿದ ಗಂಡಸರು ಈ ಮನುಷ್ಯ ಅಕ್ಕ ಪಕ್ಕದ ಯಾವುದೇ ಊರಿನವನಲ್ಲ ಎಂದು ಸಾರಿದರು. ಇದನ್ನು ಕೇಳಿ ದುಃಖದ ಮಧ್ಯೆಯೂ ಆ ಹೆಣ್ಮಕ್ಕಳು ಸಂತೋಷಪಟ್ಟರು.
‘ದೇವರಿಗೆ ಅನಂತಾನಂತ ವಂದನೆಗಳು! ಇವನು ನಮ್ಮವ, ನಮ್ಮವ.’ ಎಂದರು ಹರ್ಷದಿಂದ.

ಹೆಂಗಸರನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸದ ಗಂಡಸರು, ಯಾರೋ ಸತ್ತ ವ್ಯಕ್ತಿಯನ್ನು ಮಧ್ಯದಲ್ಲಿಟ್ಟುಕೊಂಡು ಗೋಳಾಡುತ್ತಿರುವ ಅವರನ್ನು ‘ಹುಚ್ಚು ಮುಂಡೇವು’ ಎಂದು ಕೊಂಡರು. ಊರೂರು ಸುತ್ತಿ ಬಳಲಿದ್ದ ಅವರಿಗೆ ಬಿಸಿಲು ಬಲಿಯುವ ಮೊದಲೇ ಈ ಹೆಣದ ಗತಿ ಕಾಣಿಸುವ ಜರೂರಿತ್ತು. ಬಿಸಾಕಿದ ದೋಣಿಯ ಮರದ ತುಂಡುಗಳನ್ನು ಜೋಡಿಸಿ ಅವರು ಆ ಧೈತ್ಯನ ಭಾರವನ್ನು ತಡೆದುಕೊಳ್ಳಬಲ್ಲ ಚಟ್ಟವನ್ನು ಕಟ್ಟಿದರು. ಅವನನ್ನು ಸಾಮಾನು ಸಾಗಿಸುವ ಹಡಗಿನ ಲಂಗರಿಗೆ ಕಟ್ಟಿ, ಈ ಮೊದಲು ಅನೇಕ ಶವಗಳಿಗೆ ಮಾಡಿದಂತೆ, ಮತ್ತೆಂದೂ ದಡಕ್ಕೆ ಬಾರದಂತೆ ಆಳವಾದ ಸಮುದ್ರದಲ್ಲಿ ಬಿಡುವ ಯೋಚನೆಯಿತ್ತು. ಅವರುಗಳು ಅವಸರಪಟ್ಟಷ್ಟೂ ಹೆಂಗಸರು ಒಂದಲ್ಲ ಒಂದು ಕಾರಣ ಕೊಟ್ಟು ನಿಧಾನಗೊಳಿಸುತ್ತಿದ್ದರು. ಅವನಿಗೆ ಕೆಟ್ಟ ದೃಷ್ಟಿ ತಗುಲದಿರಲೆಂದು, ದೇವರ ಸಂತರ ತಾಯಿತಗಳನ್ನು ಅವನ ಎದೆಯ ಮೇಲೆ, ತೋಳಿನ ಮೆಲೆ ಕಟ್ಟುತ್ತಾ, ಪವಿತ್ರ ಜಲದಿಂದ ಅವನನ್ನು ಪ್ರೋಕ್ಷಿಸುತ್ತಾ ಮರಿಕೋಳಿಯಂತೆ ಅವನ ಸುತ್ತ ಓಡಾಡತೊಡಗಿದರು. ಗಂಡಸರು ಅಸಹನೆಯಿಂದ ಕುದಿಯತೊಡಗಿದರು. ಏನು ಮಾಡಿದರೇನು? ಈ ಹೆಣ ಶಾಕರ್್ ಮೀನುಗಳಿಂದ ಪಾರಾಗಲು ಸಾಧ್ಯವೇಯಿಲ್ಲ ಎಂದು ಬಡಬಡಿಸತೊಡಗಿದರು. ಹೆಂಗಸರು ಕೇಳದವರಂತೆ ತಮ್ಮ ಕಾರ್ಯಗಳಲ್ಲೇ ಮಗ್ನರಾಗಿದ್ದರು. ಕೊನೆಗೊಮ್ಮೆ ಗಂಡಸರು ಸಿಡಿದುಬಿದ್ದರು. ‘ಈ ಅನಾಥ ಶವಕ್ಕೇಕಿಷ್ಟು ಸಿಂಗಾರ? ಅವನ್ಯಾರೋ? ಎಲ್ಲಿಯವನೋ? ಯಾರಿಗೊತ್ತು?’ ಗಂಡಸರ ಸಂವೇದನಾಹೀನ ಗದರಿಕೆಯಿಂದ ಹೌಹಾರಿದ ವಯಸ್ಸಾದ ಹೆಣ್ಣುಮಗಳೊಬ್ಬಳು ಹೆಣದ ಮುಖದ ಮೇಲೆ ಮುಚ್ಚಿದ್ದ ಕರವಸ್ತ್ರವನ್ನು ತೆಗೆದಳು. ಈಗ ದಿಗ್ಮೂಡರಾಗುವ ಸರದಿ ಗಂಡಸರದಾಯಿತು.
ಅವನೇ ಎಸ್ತೆಬಾನ್ನೆಂದು ಅವರಿಗೆ ಮನದಟ್ಟಾಗುವುದು ತಡವಾಗಲಿಲ್ಲ. ಕಾಲಿಗೆ ಬೂಟುಗಳಿಲ್ಲದ, ಅಳತೆಗೆಟ್ಟ ಪ್ಯಾಂಟು ತೊಟ್ಟ, ಕತ್ತಿಯಂದ ಉಗುರು ಕತ್ತರಿಸಬೇಕಾದ, ಈಗ ಗಂಡು ತಿಮಿಂಗಲದಂತೆ ಬಿದ್ದುಕೊಂಡಿರುವವನೇ ಈ ಎಸ್ತೆಬಾನ್, ಬೇರಾರು ಅಲ್ಲ. ಕರವಸ್ತ್ರವನ್ನು ತೆಗೆಯುತ್ತಿದ್ದಂತೆ, ಈ ರೀತಿಯ ಲಜ್ಜೆಗೇಡಿ ಪರಿಸ್ಥಿತಿಯಲ್ಲಿ ತಾನಿರಬೇಕಾಗಿ ಬಂದ ಸಂಧರ್ಬಕ್ಕಾಗಿ ಅವನ ಮುಖದಲ್ಲಿ ನಾಚಿಕೆ ಮಡುಗಟ್ಟಿಕೊಂಡಿದ್ದು ಅವರಿಗೆ ಕಾಣಿಸದಿರಲಿಲ್ಲ. ಅವನ ದೈತ್ಯಾಕಾರಕ್ಕೆ, ರೂಪಕ್ಕೆ ಪಾಪ ಅವನನ್ನು ಹೇಗೆ ದೂಷಿಸುವುದು? ಹೀಗಂತ ಗೊತ್ತಿದ್ದರೆ ಪಾಪ ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಸಾಯುತ್ತಿದ್ದನೇನೋ? ಸುಮ್ಮಸುಮ್ಮನೆ ಬೇರೆಯವರಿಗೆ ಉಪದ್ರವ ಕೊಡಲು ಯಾರು ತಯಾರಿದ್ದಾರೆ ಹೇಳಿ? ಎಸ್ತೆಬಾನನೇ ಏಕೆ, ಯಾರು ಬೇಕಿದ್ದರು ಈ ದಾರಿ ಕಂಡುಕೊಳ್ಳುತ್ತಿದ್ದರು. ನಿರಂತರ ರಾತ್ರಿಗಳನ್ನು ಸಮುದ್ರದ ಮೇಲೆ ಕಳೆಯುತ್ತಿದ್ದ ಯಾವದೇ ಗಂಡಿಸಿಗೂ ಬದುಕಿರುತ್ತಿದ್ದವನಿಗಿಂತ ನೀರಲ್ಲಿ ಮುಳುಗಿ ಸತ್ತವನ ಮೇಲೆಯೇ ಹೆಂಡಂದಿರಿಗೆ ಹೆಚ್ಚು ಆಕರ್ಷಣೆ ಎಂದು ಗೊತ್ತಾಗುವುದು ತಡವಾಗುತ್ತಿರಲಿಲ್ಲ.
ಹೀಗೆ, ನೀರಿನಲ್ಲಿ ಮುಳುಗಿ ಸತ್ತ ಯಾವನೋ ಅನಾಮಿಕನೊಬ್ಬನಿಗೆ ಅವರೆಲ್ಲಾ ಸೇರಿ ಒಂದು ದೊಡ್ಡ ಶವಸಂಸ್ಕಾರವನ್ನು ಇರಿಸಿಕೊಂಡರು. ನೆರೆಹೊರೆಯ ಹಳ್ಳಿಗಳನ್ನೆಲ್ಲಾ ಸುತ್ತಾಡಿ ಹೆಂಗಸರು ಹೂಗಳನ್ನು ಶೇಖರಿಸಿ ತಂದರು. ಇವರು ಹೇಳಿದ ಕತೆಯನ್ನು ಪರಾಮಶರ್ಿಸಲೆಂದೇ ನೆರೆಹೊರೆಯ ಹಳ್ಳಿಗಳ ಹೆಂಗಸರು ಇವರೊಟ್ಟಿಗೆ ಬಂದರು. ಅವರೂ ಕೂಡ ಮತ್ತಷ್ಟು ಹೂಗಳನ್ನು ತರಲು ಹೋಗಿ ಮತ್ತಷ್ಟು ಜನರನ್ನು ಕರರೆದುತಂದರು. ಕೊನೆಗೆ ಎಷ್ಟೊಂದು ಹೂಗಳು, ಜನರು ತುಂಬಿ ಹೋದರೆಂದರೆ ಅಲ್ಲಿ ಕಾಲಿಡಲೂ ಜಾಗವಿರಲಿಲ್ಲ. ಕೊನೆಗೊಮ್ಮೆ, ಅವನಿಗೆ ಅನಾಥನಂತೆಯೇ ವಿದಾಯ ಹೇಳಲು ಅವರ ಮನಸ್ಸುಗಳು ಒಪ್ಪಲಿಲ್ಲ. ತಮ್ಮೊಳಗಿರುವ ಗೌರವಸ್ಥರನ್ನೇ ಅವನ ತಂದೆ ತಾಯಿಗಳೆಂದು ಆರಿಸಿ, ಮತ್ತೂ ಮುಂದುವರೆದು ಅವನ ಅಣ್ಣ,ತಮ್ಮ ಬಂಧುಗಳೆಂದು ಇಡೀ ಹಳ್ಳಿಯೇ ಅವನ ನೆಂಟಸ್ತಿಕೆಯಲ್ಲಿ ಜೋಡಿಸಿಕೊಂಡಿತು. ಈ ಹಳ್ಳಿ ಹೆಂಗಸರ ವಿಳಾಪವನ್ನು ದೂರದಿಂದಲೇ ಕೇಳಿಸಿಕೊಂಡ ಒಂದು ಹಡಗಿನ ನಾವಿಕರು ದಿಕ್ಕು ಕೆಟ್ಟು ಹೋದರು. ಪುರಾಣದ ಕತೆಯಲ್ಲಿನ ಮೋಹಿನಿಯರ ಆಲಾಪನೆಗಳಿಗೆ ಸಮ್ಮೋಹನಗೊಂಡು ನಾಶವಾಗದಂತೆ ಹಡಗಿನ ಪಟಸ್ಥಂಭಕ್ಕೆ ಹಗ್ಗಗಳಿಂದ ಬಿಗಿಸಿಕೊಂಡ ನಾಯಕನ ಕತೆ ಜನರಿಗೆ ನೆನಪಿಗೆ ಬಂತು. ಸತ್ತವನಿಗೆ ಹೆಗಲು ಕೊಡಲು ನಾ ಮುಂದು, ತಾ ಮುಂದೆಂದು ದೊಡ್ಡ ರಂಪಾಟವೇ ಉಂಟಾಯ್ತು. ಅಂತೂ ಅವನನ್ನು ಹೆಗಲಿಗೇರಿಸಿ ಸಮುದ್ರದ ಕಡೆಗೆ ನಡೆದಾಗ ಹಳ್ಳಿಯವರಿಗೆ, ಸತ್ತವನ ಮುಖದ ಮೇಲಿನ ಕಾಂತಿಯಿಂದಾಗಿ ಮೊತ್ತ ಮೊದಲ ಭಾರಿ ತಮ್ಮ ಜೀವನದ, ಕನಸುಗಳ ಹಾಗೂ ವಾಸಿಸುವ ನೆಲದ ಬರಡುತನ ಮುಖಕ್ಕೆ ರಾಚಿದಂತೆ ಹೊಡೆಯತೊಡಗಿತು.
ಅವರಿಗೆ ಅವನ ಮೇಲೆ ಎಂತ ಆತ್ಮೀಯತೆ ಬೆಳೆಯಿತೆಂದರೆ, ಬೇಕಾದರೆ ಅವನು ಮತ್ತೊಮ್ಮೆ ಬರಲಿ ಎಂದು ಲಂಗರು ತೊಡಿಸದೆಯೇ ಸಮುದ್ರಕ್ಕೆ ಇಳಿಸಿದರು. ಅವನ ದೇಹ ನೀರೊಳಗೆ ಇಳಿದ ಕೆಲವು ಶತಮಾನಗಳ ಕ್ಷಣಗಳಷ್ಟು ಕಾಲ ಅವರು ಉಸಿರು ಬಿಗಿ ಹಿಡಿದು ನಿಂತಿದ್ದರು. ನಂತರ ಅವರೊಮ್ಮೆ ಒಬ್ಬರನ್ನೊಬ್ಬರ ಮಖಗಳನ್ನು ನೋಡಿ ಕೊಂಡರು. ಆ ಗಳಿಗೆಯಿಂದಲೇ ಅವರಲ್ಲೊಂದು ಅಗಾಧ ಬದಲಾವಣೆಯಾಗಿತ್ತು. ತಮ್ಮ ಹಳ್ಳಿ ಮುಂದೆಂದೂ ಹಿಂದಿನಂತಿರುವುದಿಲ್ಲವೆಂದು ಅವರಿಗೆ ಖಾತ್ರಿಯಾಗಿತ್ತು. ಎಸ್ತೆಬಾನನ ಸವಿ ನೆನಪಿಗಾಗಿ ಅವರ ಹಳ್ಳಿ ಜೀವಕಳೆಯಿಂದ, ಹೂದೋಟಗಳಿಂದ, ಬಂಡೆಗಳ ಮೇಲಿನಿಂದ ಚಿಮ್ಮುವ ಒರತೆಗಳಿಂದ ನಳನಳಿಸಲು ಅವರು ತೀಮರ್ಾನಿಸಿಯಾಗಿತ್ತು. ತಾವು ವಾಸಿಸುವ ಗೂಡುಗಳನ್ನು ಕೆಡವಿ, ಅಗಲವಾದ ಬಾಗಿಲು, ಎತ್ತರದ ಛಾವಣಿ ಮತ್ತು ಗಟ್ಟಿಮುಟ್ಟಾದ ಕುಚರ್ಿಗಳುಳ್ಳ ಸುಂದರವಾದ ಮನೆಗಳನ್ನು ಮಾಡಲು ಅವರು ನಿರ್ಧರಿಸಿಯಾಗಿತ್ತು. ಒಂದೊಮ್ಮೆ ಎಸ್ತೆಬಾನ್ ಮರಳಿ ಬಂದರೆ ಅವನಿಗೆ ಏನೂ ತೊಂದರೆಯಾಗಬಾರದು. ‘ಸಧ್ಯ ಈ ಸ್ಪುರದ್ರೂಪಿ ದೈತ್ಯ ಹೊರಟು ಹೋದನಲ್ಲ!..’ ಎಂದು ಯಾರೂ ಹೇಳುವಂತಾಗಬಾರದು. ಇಲ್ಲಿಂದ ಹಾದು ಹೋಗುವ ನಾವೆಗಳು ಕೂಡ ದಿಕ್ಕೆಟ್ಟು ಪಥ ತಿರುಗಿಸಿ ಓಡದೇ, ಬೆಳಗಿನ ಜಾವ ಹಳ್ಳಿಯ ಹೂದೋಟಗಳಲ್ಲಿ ಅರಳಿರುವ ಹೂಗಳ ಸುಗಂಧಕ್ಕೆ ಪ್ರಯಾಣಿಕರೆಲ್ಲಾ ಎಚ್ಚೆತ್ತು ಹೊರ ಬಂದು ನೋಡುವಂತಾಗಬೇಕು. ಸ್ವತಃ, ಹದಿನಾಲ್ಕು ಬಾಷೆಗಳನ್ನಾಡುವ ನಾವೆಯ ಕಪ್ತಾನನೇ ಕೆಳಗಿಳಿದು ಬಂದು, ಅವರಿಗೆಲ್ಲಾ, ‘ಎಷ್ಟೊಂದು ಸುಂದರವಾದ, ಪ್ರಶಾಂತವಾದ ಹಳ್ಳಿ ನೋಡಿ! ಜನರೆಲ್ಲಾ ಇನ್ನೂ ಬೆಚ್ಚಗೆ ಹಾಯಾಗಿ ನಿದ್ರಿಸುತ್ತಿದ್ದಾರೆ. ಅಗೋ, ಹುಟ್ಟುತ್ತಿರುವ ಆ ಸೂರ್ಯನ ವೈಭವವನ್ನು ನೋಡಿ! ಸೂರ್ಯಕಾಂತಿಗಳಿಗೆ ಯಾವ ಕಡೆ ಮೋರೆ ತಿರುಗಿಸುವುದೆಂದೇ ತೋಚುತ್ತಿಲ್ಲ!..ಅದುವೇ ಎಸ್ತೆಬಾನನ ಹಳ್ಳಿ!’ ಎನ್ನುವಂತಿರಬೇಕು.
******
(ಗಾಬ್ರಿಯೆಲ್ ಗಾರ್ಸಿಯ ಮಾರ್ಕೆಜ಼ನ ”The Handsomest Drowned Man in the World’ ಕತೆಯ ಅನುವಾದ)
 

‍ಲೇಖಕರು G

27 May, 2014

1 Comment

  1. Uma Rao

    Idu khandita Makkala Kate alla.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading