ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನೂ ಹೋಗಿಬಿಟ್ಟೆಯಾ ಮುದ್ದು..

ನಾ ದಿವಾಕರ

ಇತ್ತೀಚೆಗೆ ಗಿರೀಶ್ ಕಾರ್ನಾಡರನ್ನು ಕುರಿತು ಲೇಖನವೊಂದನ್ನು ಬರೆಯುತ್ತಿದ್ದಾಗ ನೀವು ನಮ್ಮೊಡನಿರಬೇಕಿತ್ತು ಎಂದು ಹೇಳಬಹುದಾದ ವ್ಯಕ್ತಿಗಳನ್ನು ನೆನೆಯುತ್ತಿದ್ದಾಗ ಸಾಕಷ್ಟು ನೆನಪುಗಳು ಮೂಡಿಬಂದವು. ನಾವು ಎಷ್ಟೊಂದು ಆತ್ಮೀಯರನ್ನು ಅತಿ ಹತ್ತಿರದಲ್ಲೇ ಕಳೆದುಕೊಳ್ಳುತ್ತಿದ್ದೇವಲ್ಲಾ ಎನಿಸಿತ್ತು. ಕರ್ನಾಟಕದ ಬೌದ್ಧಿಕ ಜಗತ್ತು ಏಕೆ ಹೀಗೆ ಬರಿದಾಗುತ್ತಿದೆ ಎನಿಸಿತ್ತು.

ಇಂದು ನಾನೆಣಿಸಿದ ಈ ಪಟ್ಟಿಗೆ ನಮ್ಮೆಲ್ಲರ ಸ್ನೇಹಿತ, ಮಂದಸ್ಮಿತ ಗೆಳೆಯ ಮುದ್ದುಕೃಷ್ಣ ( ಮುದ್ದು ಎಂದು ಕರೆಯುವುದು ವಾಡಿಕೆ) ನಮ್ಮನ್ನಗಲಿದ್ದಾರೆ. ಮತ್ತೆ ನನ್ನ ಆ ಪಟ್ಟಿಯನ್ನು ವಿಸ್ತರಿಸಿ ತನ್ನ ಪತ್ನಿಯನ್ನೂ ಕರೆದೊಯ್ದುಬಿಟ್ಟಿದ್ದಾನೆ , ಪಾಪಿ.

ಬಾಲ್ಯ ಸ್ನೇಹಿತನಲ್ಲದಿದ್ದರೂ 20 ವರ್ಷಗಳ ಸ್ನೇಹ. ದಿನವೂ ಭೇಟಿಯಾಗದಿದ್ದರೂ ಅಲ್ಲಲ್ಲಿ ಭೇಟಿಯಾದ ಸಂದರ್ಭಗಳು. ದಿನವಿಡೀ ಹರಟೆ ಹೊಡೆಯುತ್ತಾ ಕಾಫಿ ಕುಡಿಯದಿದ್ದರೂ ಸಿಕ್ಕ ಕೆಲವೇ ನಿಮಿಷಗಳನ್ನು ರಸನಿಮಿಷಗಳನ್ನಾಗಿ ಮಾಡಿ, ಕೆನ್ನೆ ಕುಣಿಸುತ್ತಾ ನಗುತ್ತಿದ್ದ ಮುದ್ದು ಅದೇಕೋ ಹಠಾತ್ತನೆ ನಿರ್ಗಮಿಸಿಬಿಟ್ಟಿದ್ದಾನೆ.

ಅದೆಲ್ಲೋ ಸಾವಿರ ಮೈಲುಗಳಾಚೆಯ ಊರಿನಲ್ಲಿ. ಈ ಸುದ್ದಿ ಕೇಳಿದಾಗ ಗೆಳೆಯ ರಂಗಸ್ವಾಮಿಗೆ ಇದು ಖಚಿತವೇ ಎಂದು ಕೇಳಿದೆ. ಏಕೆಂದರೆ ಕೆಲವೇ ದಿನಗಳ ಹಿಂದೆ ಭೇಟಿಯಾಗಿದ್ದನಲ್ಲವೇ ? ಟಾಟಾ ಕಾರ್ ಷೋರೂಂನಲ್ಲಿ ಹೊಸ ಕಾರುಕೊಂಡು ಡಿಲಿವರಿ ಪಡೆಯಲು ಕಾಯುತ್ತಿದ್ದ. “ ಕಾರು ಬೊಂಬಾಟಾಗಿದ್ಯಮ್ಮಾ ಯಾರ್ಮಾತೂ ಕೇಳ್ಬೇಡ ಇದನ್ನೇ ತೊಗೋ ” ಎಂದು ಹೇಳಿದ್ದೂ ಉಂಟು, ಅದೇ ನಗುಮೊಗದಿಂದ.

ಮುದ್ದು ಮೂಲತಃ ರಂಗಕರ್ಮಿ ಆದರೆ ರಂಗಸಜ್ಜಿಕೆಗೆ ಸೀಮಿತವಾದವನಲ್ಲ. ಅವನು ಚರ್ಚೆ ಮಾಡದ ವಿಚಾರವೇ ಇರಲಿಲ್ಲ ಎನ್ನಬಹುದು. ಹಾಸ್ಯ ಚಟಾಕಿಗಳ ನಡುವೆಯೇ ಗಂಭೀರ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದ, ಖಂಡತುಂಡವಾಗಿ ಖಂಡಿಸುತ್ತಲೂ ಇದ್ದ. ಇದ್ದುದನ್ನು ಇದ್ಹಾಗೇ ಹೇಳುವ ಸ್ಥೈರ್ಯ ಅವನಲ್ಲಿತ್ತು. ಹಾಗಾಗಿಯೂ ಅಜಾತಶತ್ರುವಾಗಿಯೇ ಉಳಿದ.

“ನೀನೇನ್  ಪ್ರಯೋಜನ ಇಲ್ಲ ಬಿಡು ಗುರು, ಒಂದ್ಸಲ ಆಂದೋಲನ ಸರ್ಕಲ್ ಹತ್ತಿರ ಮೀನು ತಿಂದ್ ನೋಡು ಅದರ ಮಜಾನೇ ಬೇರೆ ” ಅಂತ ರೇಗಿಸ್ತಿದ್ದ. ಫೇಸ್ ಬುಕ್ ಮೂಲಕ ಮೈಸೂರಿನ ಬಹುತೇಕ ಗೆಳೆಯರ ಹುಟ್ಟುಹಬ್ಬದ ಮಾಹಿತಿ ಒದಗಿಸುತ್ತಿದ್ದುದು ಅವನ ಹಿರಿಮೆಗಳಲ್ಲೊಂದು ಎಂದು ನನ್ನ ಭಾವನೆ. ಎಲ್ಲರೂ ನಮ್ಮ ಫೇಸ್ ಬುಕ್ ಗೆಳೆಯರಾಗಿರುವುದಿಲ್ಲ. ಆದರೆ ಅವನ  ಹುಟ್ಟು ಹಬ್ಬದ ಶುಭಾಶಯ ಸಂದೇಶ ಎಷ್ಟೋ ಗೆಳೆಯರನ್ನು ಸಂಪಾದಿಸಲು ನೆರವಾಗಿದೆ.

“ ಅದೇನ್ ಗುರು ಅಷ್ಟು ಧೈರ್ಯವಾಗಿ ಖಂಡಿಸಿ ಬರೀತೀಯಾ ಹುಷಾರಾಗಿರಮ್ಮಾ” ಎಂದು ಹಲವು ಬಾರಿ ಎಚ್ಚರಿಸುತ್ತಿದ್ದ ಮುದ್ದು ಮರುಕ್ಷಣವೇ “ಇಲ್ಲ ಬರಿ ಗುರು ಸತ್ಯ ಹೇಳೋಕೆ ಯಾಕೆ ಹೆದರಬೇಕು ” ಅಂತಾನೂ ಹೇಳ್ತಿದ್ದ. ಇದು ಅವನ ಬೌದ್ಧಿಕ ಚಿಂತನೆಯ ಒಂದು ಝಲಕ್ ಅಷ್ಟೆ.

ತನಗನಿಸಿದ್ದನ್ನು ನೇರವಾಗಿ ಹೇಳಲು ಎಂದೂ ಹಿಂಜರಿಯದ ಮುದ್ದು ‘ರಾಮಾಯಣ ದರ್ಶನಂ’ ನಾಟಕವನ್ನು ವಿಮರ್ಶಿಸಿದ್ದು, ಬಹುರೂಪಿಯ ಬಗ್ಗೆ ಟೀಕೆ ಮಾಡಿದ್ದು ಇವೆಲ್ಲವೂ ಅಳಿಸಲಾಗದ ಕ್ಷಣಗಳು. ನಾನು ನಿವೃತ್ತನಾಗುವೆನೆಂದು ಹೇಳಿದಾಗ ಭವಿಷ್ಯದ ಬದುಕನ್ನು ಹೇಗೆ ನಿರ್ವಹಿಸಬೇಕು ಎಂದು ಸಲಹೆಗಳನ್ನೂ ನೀಡಿದ್ದ.

ಇಂತಹ ಒಬ್ಬ ಸರಳ ಜೀವಿ, ಅಮೂಲ್ಯ ಗೆಳೆಯ ಇಂದು ನಮ್ಮೆಲ್ಲರನ್ನಗಲಿದ್ದಾನೆ. ನೀನು ಇರಬೇಕಿತ್ತು ಮುದ್ದು.. ಇಷ್ಟೇ ಹೇಳಲು ಸಾಧ್ಯ ಕಣ್ಣುಗಳು ಮಸುಕಾಗುತ್ತಿವೆ, ಹೋಗಿಬಾ ಗೆಳೆಯ.

 

‍ಲೇಖಕರು avadhi

9 July, 2019

1 Comment

  1. T S SHRAVANA KUMARI

    ಮನ ತಟ್ಟಿದ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading