
ಪರಮೇಶ್ವರಯ್ಯ ಸೊಪ್ಪಿಮಠ
ತಮ್ಮಣ್ಣ ಅವರು ಮೊದಲಿನಿಂದಲೂ ಮಕ್ಕಳ ಸಾಹಿತ್ಯದ ಮೇಲೆಯೇ ತಮ್ಮ ಬರವಣಿಗೆಯನ್ನು ಗಟ್ಟಿಗೊಳಿಸುತ್ತಾ ಬಂದವರು. ಅವರಲ್ಲಿ ಮನೆ ಮಾಡಿರುವ ಮಕ್ಕಳ ಸಾಹಿತ್ಯ ಪ್ರೀತಿ, ಮಕ್ಕಳ ಸಾಹಿತ್ಯ ರಚನೆಯ ಆಸಕ್ತಿಯ ಫಲವಾಗಿ ೨೦ಕ್ಕೂ ಹೆಚ್ಚು ಕೃತಿಗಳನ್ನು ಮಕ್ಕಳ ಸಾಹಿತ್ಯಕ್ಕೆ ಅವರು ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲಿ ಮಕ್ಕಳಿಗಾಗಿ ಕಥೆಗಳು, ಕವನ ಸಂಕಲನ, ಶಿಶುಪ್ರಾಸ, ಲಲಿತ ಬರಹ, ಕಾದಂಬರಿ ಹೀಗೆ ಅನೇಕ ಪ್ರಕಾರಗಳಲ್ಲಿ ಅವರು ರಚನೆ ಮಾಡಿದ್ದಾರೆ. ಹಾಗಾಗಿ ಪ್ರಸ್ತುತ ದಿನದಲ್ಲಿ ಮಕ್ಕಳ ಸಾಹಿತ್ಯದಲ್ಲಿ ಬಹಳ ಗಂಭೀರವಾಗಿ ತೊಡಗಿಕೊಂಡಿರುವ ಕೆಲವೇ ಕೆಲವು ಲೇಖಕರಲ್ಲಿ ತಮ್ಮಣ್ಣ ನವರೂ ಒಬ್ಬರು.
ಪ್ರಸ್ತುತ ದಿನದಲ್ಲಿ ನಾವು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ ಪರಿಸರ ಸಮತೋಲನ. ಇದರ ಬಗ್ಗೆ ಸರಿಯಾದ ಪ್ರಜ್ಞೆ ಇಲ್ಲದೆ ಮುಂದಿನ ಪೀಳಿಗೆಯ ಮಕ್ಕಳಿಗೆ ಏನು ಕೊಡುಗೆ ನೀಡುತ್ತಿದ್ದೇವೆ ಎನ್ನುವ ಬಹು ದೊಡ್ಡ ಪ್ರಶ್ನೇ ಇಂದು ಸದಾ ದೊಡ್ಡವರನ್ನು ಇಂದು ಕಾಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ಪರಿಸರ ಪ್ರಜ್ಞೆಯನ್ನು ಮೂಡಿಸಲೆಂದೇ ಹಸಿರು ಸಾಹಿತ್ಯವೆನ್ನುವ ಸಾಹಿತ್ಯ ಪ್ರಕಾರವೂ ಉದಯಿಸಿದೆ.
ಇಂದಿನ ತಂತ್ರಜ್ಞಾನ, ಆಧುನಿಕ ಜೀವನ ಶೈಲಿಯ ಮೋಹಕ್ಕೆ ಒಳಗಾಗಿರುವ ದೊಡ್ಡವರು ಮತ್ತು ಅವರನ್ನು ಅನುಸರಿಸುತ್ತಿರುವ ಮಕ್ಕಳಲ್ಲಿ ನಿಸರ್ಗದೊಂದಿಗೆ ಸುಮಧುರ ಬಾಂಧವ್ಯ ಬೆಳೆಸುವ ಸವಾಲು ನಮ್ಮಗಳ ಮುಂದಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಆಕರ್ಷಿಸುವ ಸಾಹಿತ್ಯದ ರಚನೆಯೂ ಹೆಚ್ಚು ಹೆಚ್ಚು ಆಗಬೇಕಿದೆ. ಏಕೆಂದರೆ ಮಕ್ಕಳ ಸಾಹಿತ್ಯವು ಪರಿಸರದ ಕುರಿತು ಜ್ಞಾನ, ಜಾಗೃತಿ ಮತ್ತು ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿನ ಒಂದು ಅರ್ಥ ಪೂರ್ಣ ಪ್ರಯತ್ನವೇ ತಮ್ಮಣ್ಣ ಬೀಗಾರ ಅವರ ‘ಗಿರಗಿಟ್ಟಿ’ ಕಥಾ ಸಂಕಲನ.
ಬಳ್ಳಾರಿಯಂತಹ ಬಯಲುಸೀಮೆಯಲ್ಲಿ ಬೆಳೆದ ನನ್ನಂತವನಿಗೆ ಮಲೆನಾಡಿನ ದಟ್ಟವಾದ ಕಾಡು, ಗುಡ್ಡ, ಬೆಟ್ಟ, ನಿಸರ್ಗದ ನಲಿವುಗಳು, ಬಾಲ್ಯದ ಹುಡುಗಾಟಿಕೆ, ವಾಸ್ತವ ಬದುಕು, ಅಲ್ಲಿನ ಪ್ರಾಣಿಗಳ ಜೊತೆ ಹೊಂದಿರುವ ಸುಮಧುರ ಬಾಂಧವ್ಯ ಹೀಗೆ ಮಕ್ಕಳು ಬಾಲ್ಯವನ್ನು ಹೇಗೆ ಖುಷಿ ಖುಷಿಯಾಗಿ ಅನುಭವಿಸಬಹುದು ಎಂಬುದು ತಮ್ಮಣ್ಣ ಅವರ ಬರವಣಿಗೆಯಿಂದ ಸ್ಪಷ್ಟವಾಗಿ ಕಾಣುತ್ತದೆ.

ಬೀಗಾರರು ಶಿಕ್ಷಕ ವೃತ್ತಿಯಲ್ಲಿದ್ದುದ್ದರಿಂದ ಮಕ್ಕಳ ಜೊತೆ ನೇರ ಒಡನಾಟದ ಮೂಲಕ ಮಕ್ಕಳ ಮನಸ್ಸುನ್ನು ಸ್ಪಷ್ಟವಾಗಿ ಅರಿತಿರುವುದು ಅವರ ಕೃತಿಗಳಲ್ಲಿ ಗುರುತಿಸಬಹುದಾಗಿದೆ. ಮಕ್ಕಳ ಮುಗ್ಧತೆಗೆ ಎಲ್ಲಿಯೂ ಧಕ್ಕೆಯಾಗದಂತೆ ಬರೆಯುವ ಅವರ ಸಾಮರ್ಥ್ಯವೇ ಅವರ ಪ್ಲಸ್ ಪಾಯಿಂಟ್. ಈ ನಿಟ್ಟಿನಲ್ಲಿ ಅವರ ಚಿಂವ್ ಚಿಂವ್, ಕಪ್ಪೆಯ ಪಯಣ, ಜಿಂಕೆ ಮರಿ, ಹಸಿರೂರಿನ ಹುಡುಗ, ಮರ ಬಿದ್ದಾಗ, ಬಾವಲಿಯ ಗುಹೆ, ಉಲ್ಟಾ ಅಂಗಿ, ಜೊತೆಗೆ ಗಿರಗಿಟ್ಟಿ ಕಥಾ ಸಂಲಕನವೂ ಸೇರಿಕೊಳ್ಳುತ್ತದೆ.
ಗಿರಗಿಟ್ಟೆ ಮಕ್ಕಳ ಕಥಾ ಸಂಕಲನದಲ್ಲಿ ಕಲ್ಪನೆಯ ಜತೆಜತೆಗೇ ವಾಸ್ತವ, ಮಕ್ಕಳ ನಗು, ಜಗಳ, ಪ್ರಶ್ನೆ-ಉತ್ತರ ಹೀಗೆ ಎಲ್ಲವೂ ಮೇಳೈಸಿರುವುದನ್ನು ಕಾಣುತ್ತೇವೆ. ಇದು ಮಕ್ಕಳಿಗಾಗಿ ಎಂದು ಅವರು ಬರೆದಿದ್ದರೂ… ಮಕ್ಕಳನ್ನಷ್ಟೇ ಅಲ್ಲ, ದೊಡ್ಡವರನ್ನೂ ತನ್ನೆಡೆಗೆ ಸೆಳೆಯುತ್ತದೆ. ಕತ್ತಲು, ಕಪ್ಪೆಯ ಕಣ್ಣು, ಓತಿರಾಜ, ದೆವ್ವದ ಮರ, ಗಿರಗಿಟ್ಟೆ, ಹಸಿವಾಗಿಲ್ವಾ, ಕಲ್ಲಿನೊಂದಿಗೆ, ಕಥೆ ಹೇಳುವ ಮರ, ಹಣ್ಣು ತಿನ್ನೋ ಆಸೆ, ಮಣ್ಣಿನ ವಾಸನೆ ಹೀಗೆ ಹದಿನೈದು ಕಥೆಗಳನ್ನು ಈ ‘ಗಿರಗಿಟ್ಟಿ’ ಕೃತಿ ಒಳಗೊಂಡಿದೆ.
ಮಕ್ಕಳ ಸಾಹಿತ್ಯ ಲೋಕದಲ್ಲಿ ಪ್ರಾಣಿ ಪಕ್ಷಿಗಳದ್ದು ಅಗ್ರಸ್ಥಾನ. ಆದರೆ, ಇಲ್ಲೂ ನರಿ, ಸಿಂಹ, ಜಿಂಕೆ ಮುಂತಾದ ಕೆಲವೇ ಜೀವಿಗಳು ಬಹುತೇಕರ ಬರಹಗಳಲ್ಲಿ ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಬೀಗಾರರು ಪ್ರಾಣಿ ಪಕ್ಷಿಲೋಕದಲ್ಲಿ ಯಾರೂ ಹೆಚ್ಚಾಗಿ ಗಮನಿಸಿದ ಅಂಶಗಳನ್ನು ಗುರುತಿಸುವ ಮೂಲಕ ಪರಿಸರದ ಮಹತ್ವವನ್ನು ಸಾರುವ ಪ್ರಯತ್ನ ಈ ಕಥೆಗಳಲ್ಲಿ ಮಾಡಿದ್ದಾರೆ.
ಮಲೆನಾಡಿನಲ್ಲಿ ವಾಸಿಸುವ ಕಪ್ಪು ಮುಸುಡಿನ ಮಂಗಗಳು, ಅವುಗಳ ಕಿರಚಾಟ, ಓತಿಕ್ಯಾತ, ನರಿ, ಅಳಿಲು, ಜಿಂಕೆ ಇವೆಲ್ಲವೂ ಮಕ್ಕಳ ಕನಸಿನಲ್ಲಿ ಹಾರಿ ಬರುವಂತೆ ಮಾಡಿದ್ದಾರೆ. ಮಳೆಗಾಲದ ಕಪ್ಪೆಗಳು, ಅವುಗಳ ಚಲನೆ, ಆಹಾರ ಇವನ್ನೆಲ್ಲ ಮಕ್ಕಳ ಕಣ್ಣ ಮುಂದೆ ನಡೆಯುವಂತೆ ಚಿತ್ರಿಸಿ, ಕುತೂಹಲ ಹುಟ್ಟಿಸುತ್ತಾರೆ. ಕಾಡು ಕೋಳಿ, ಕಾಡುಕುರಿ, ಹಾವುಗಳು, ಅಂತೆಯೆ ಜಿರಲೆಗಳೂ ಕತೆಗಳಲ್ಲಿ ಮತ್ತೊಂದು ಲೋಕವನ್ನು ಸೃಷ್ಟಿಸುತ್ತವೆ. ಕುಂಬಾರ ಹುಳು, ಜೇನುಗೂಡು, ನಾಯಿ ಮತ್ತು ಬೆಕ್ಕುಗಳು ಮಕ್ಕಳಿಗೆ ಹೆಚ್ಚು ಪ್ರಿಯವಾಗಿರುವುದರಿಂದ ಅವನ್ನು ಬಳಸಿಕೊಳ್ಳುವುದರಲ್ಲಿ ಅವುಗಳ ಮೂಲಕ ಮಕ್ಕಳಿಗೆ ವಿಶಿಷ್ಟ ಅನುಭವ ನೀಡುತ್ತಾ ಅವರ ಜ್ಞಾನ ಪರಿಧಿಯನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ.
ಮೊದಲ ಕಥೆ ಕತ್ತಲುದಲ್ಲಿ ಇಶಾನ್‌ನು ತನಗೆ ಇಷ್ಟವಾದ ನಾಯಿಮರಿಯನ್ನು ತುಂಬಾ ಪ್ರೀತಿಯಿಂದ ಮನೆಗೆ ಕರೆ ತರಲು ಹೆಣಗಾಡುತ್ತಾನೆ. ಆದರೆ ದಾರಿ ಮಧ್ಯದಲ್ಲಿಯೇ ಅವನ ಅಪ್ಪನ ರ‍್ತನೆಯು ಪ್ರಸ್ತುತ ದಿನದಲ್ಲಿ ದೊಡ್ಡವರು ಮಕ್ಕಳ ಕನಸುಗಳಿಗೆ ಬೆಲೆ ನೀಡುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ಒಂದು ರೀತಿ ಇದು ಮಕ್ಕಳ ಮೇಲಿನ ದಬ್ಬಾಳಿಕೆಯನ್ನು ಪ್ರತಿಪಾದಿಸುತ್ತದೆ. ಮಕ್ಕಳ ಹಕ್ಕುಗಳಿಗೆ ಬೆಲೆ ಸಿಗುತ್ತಿಲ್ಲ ಎನ್ನುವುದನ್ನು ಕೂಡಾ ಇಲ್ಲಿ ಎತ್ತಿ ತೊರಿಸುವ ಕೆಲಸವಾಗಿದೆ.

ನಿಸರ್ಗದ ಕೌತುಕಗಳನ್ನು ಅಚ್ಚರಿಯ ಕಣ್ಣಿಂದ ಮಕ್ಕಳು ನೋಡುತ್ತಿರುತ್ತಾರೆ. ಸುತ್ತಲಿನ ಪ್ರಾಣಿ ಪಕ್ಷಿಗಳೊಂದಿಗೆ ಅಕ್ಕರೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಎನ್ನುವುದನ್ನು ತಮ್ಮಣ್ಣನವರು ಕಪ್ಪೆಯ ಕಣ್ಣು ಕತೆಯಲ್ಲಿ ಪ್ರತಿಪಾದಿಸುತ್ತಾರೆ. ರವಿಯ ಮೂಲಕ ಮಕ್ಕಳಿಗೆ ಕಪ್ಪೆಗಳ ಕುರಿತಾದ ಆಸಕ್ತಿ ಬೆಳೆಸುತ್ತಾ, ಅದರ ಕಣ್ಣು, ದೈಹಿಕ ರಚನೆ, ವರ್ತನೆಗಳನ್ನು ವಿವರವಾಗಿ ಅನಾವರಣದಲ್ಲಿ ನಾವು ನೊಡುತ್ತೇವೆ. ಅದರಲ್ಲೂ ಬಹಳ ವಿಶೇಷವಾಗಿ ಕಪ್ಪೆ ಕಣ್ಣುಗಳ ಬಗ್ಗೆ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಾರೆ.
ಅದೇ ರೀತಿ ಮಕ್ಕಳಲ್ಲಿ ಪರಿಸರ ಪ್ರಜ್ಞೆಗೆ ಪೂರಕವಾದ ರೋಹನ, ಗಣಪ ಮತ್ತು ನಾನು ಕತೆಯಲ್ಲಿ ಕಾಡಿನ ಮೂಲಕ ಮಕ್ಕಳನ್ನು ನಿಸರ್ಗದೊಳಗೆ ಅವರು ಕರೆದೊಯ್ಯುತ್ತಾರೆ. ಪ್ರಸ್ತುತ ದಿನದಲ್ಲಿ ಅರಣ್ಯದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ. ಇಂದು ಹಳ್ಳಿ ಮಕ್ಕಳಿಗೆ ಕಾಡು ಸಿಗುವುದು ಕಷ್ಟವಾಗುತ್ತಿದ್ದು ಇನ್ನೂ ನಗರದ ಮಕ್ಕಳು ಚಿತ್ರದಲ್ಲಿ ನೊಡುವಂತಾಗುತ್ತಿದೆ. ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಪರಿಸರದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಬದುಕು ದುಸ್ಥರವಾಗುತ್ತದೆ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂಬುದು ತಮ್ಮಣ್ಣ ಅವರ ಮನದಲ್ಲಿ ಸದಾ ಗುಯಿಗುಡುತ್ತಿರುತ್ತದೆ ಎನಿಸುತ್ತದೆ.
ಹಸಿವಾಗಿಲ್ವಾ ಕಥೆಯಲ್ಲಿ ತಾಯಿ ಹಸಿವಾಗಿದ್ದರೂ ಮನೆಯವರನ್ನೆಲ್ಲಾ ಉಣಿಸಿ ಅದರಲ್ಲಿಯೇ ತೃಪ್ತಿ ಪಡುತ್ತಾಳೆ. ಅದರ ಜೊತೆಗೆ ಅಸಹಾಯಕರಿಗೆ ಸದಾ ನೆರವನ್ನು ಚಾಚಬೇಕು ಎನ್ನುವ ಮಾನವೀಯತೆಯ ಗುಣ ಎದ್ದು ಕಾಣುತ್ತಿದೆ. ಇಂದು ಸ್ವಾರ್ಥ ತುಂಬಿದ ಈ ಪ್ರಪಂಚದಲ್ಲಿ ಇಂತಹ ಕಥೆಗಳು ಹೆಚ್ಚು ಅಗತ್ಯವಿವೆ ಎನ್ನಿಸುತ್ತವೆ. ಅಂತಹದೇ ಇನ್ನೊಂದು ಪುಟ್ಟಿ ಜಿರಲೆಯನ್ನು ಬದುಕಿಸುವುದರ ಜೊತೆ ಓತಿ ರಾಜನನ್ನು ಮಕ್ಕಳಿಗೆ ವಿಭಿನ್ನವಾಗಿ ತಮ್ಮಣ್ಣ ಅವರು ತಿಳಿಸುವ ಶೈಲಿ ಹೆಚ್ಚು ಆಕರ್ಷಕವಾಗಿದೆ.
‘ಕಲ್ಲಿನೊಂದಿಗೆ’ ಕಥೆ ನಿರ್ಜೀವ ವಸ್ತುವಿಗೂ ನಮ್ಮ ಪರಿಸರದಲ್ಲಿ ಮಹತ್ವವಿದೆ ಎನ್ನುವುದನ್ನು ಮಕ್ಕಳಿಗೆ ತಿಳಿಸುತ್ತದೆ. ಮಕ್ಕಳು ಅವುಗಳನ್ನೂ ವಿಭಿನ್ನವಾಗಿ ನೋಡುತ್ತಾ, ತಮ್ಮ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಕೊಡುತ್ತಾರೆ. ಸೂರ್ಯ ಮತ್ತು ಕಲ್ಲುಗಳ ಹೋಲಿಕೆಯೂ ಕತೆಯಲ್ಲಿ ನಡೆಯುತ್ತದೆ. ಒಬ್ಬ ಮಕ್ಕಳ ಬರಹಗಾರನಿಗೆ ಮಕ್ಕಳಿಗೆ ಪ್ರಿಯವಾಗುವ ಪ್ರತಿಯೊಂದು ವಸ್ತುವೂ ಕಥೆಯಾಗಬಹುದು ಎನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆಯಾಗಿದೆ.
ದೆವ್ವದ ಮರ ಕತೆಯಲ್ಲಿ ಬಸರಿ ಮರ ಮಕ್ಕಳಲ್ಲಿ ದೆವ್ವವಾಗಿ ಭಯ ಮೂಡಿಸಿರುತ್ತದೆ. ಅಧ್ಯಾಪಕರು ಬಸರಿ ಮರದಲ್ಲಿ ಭೂತಪಿಶಾಚಿಗಳು ಇರುತ್ತವೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸುತ್ತಾ ಮಕ್ಕಳಲ್ಲಿ ಅರಿವಿಲ್ಲದಂತೆ ವೈಜ್ಞಾನಿಕ ಮನೋಭಾವ ಬೆಳೆಸುವ ರೀತಿ ಆರ‍್ಷಕವಾಗಿದೆ.
‘ಕಥೆ ಹೇಳುವ ಮರ’ವು ಇಂಗ್ಲಿಷನ ಪ್ರಸಿದ್ಧ ಶೆಲ್ ಸಿಲ್ವರ್ ಸ್ಟೈನ್ ೧೯೬೪ರಲ್ಲಿ ಬರೆದ ಚಿತ್ರಪುಸ್ತಕ ‘ದಿ ಗಿವಿಂಗ್ ಟ್ರೀ’ಯನ್ನು ಹೋಲುತ್ತದೆ. ಕವಿತಾರೂಪದ ಆ ಚಿತ್ರ ಪುಸ್ತಕದ ಕಥೆಯು ಹುಡುಗ ಮತ್ತು ಮರ ಈ ಎರಡು ಪಾತ್ರಗಳನ್ನು ಕೇಂದ್ರೀಕರಿಸಿದೆ. ಆ ಕವಿತೆಯಲ್ಲಿ ಪರಿಸರ ಮನುಷ್ಯನಿಗೆ ಎಲ್ಲವನ್ನು ನೀಡಿದರೂ ಮನುಷ್ಯ ಪರಿಸರ ನಾಶ ಮಾಡುತ್ತಾ ಸ್ವಾರ್ಥಿಯಾಗಿದ್ದಾನೆ ಎಂಬುದನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ತಮ್ಮಣ್ಣನವರು ಈ ಕತೆಯನ್ನು ಚಿತ್ರಿಸಿದ್ದಾರೆ. ಈ ಬಗೆಯ ಮನುಷ್ಯನ ಕೃತ್ರಿಮ, ಕೃತಘ್ನ ನಡೆವಳಿಕೆಗಳು ಪರಿಸರದ ಕುರಿತು ಹೆಚ್ಚು ಚಿಂತಿಸಲು ಹಸಿರು ಸಾಹಿತ್ಯವನ್ನು ಇವತ್ತು ನಾವು ಪ್ರೇರೇಪಿಸಬೇಕಿವೆ.
ಮನುಷ್ಯ ತನ್ನ ಬದುಕಿನ ಪ್ರತಿಯೊಂದನ್ನೂ ನಿಸರ್ಗದಿಂದ ಪಡೆಯುತ್ತಿದ್ದರೂ ಅದರ ಬಗ್ಗೆ ಕಿಂಚಿತ್ ಕಾಳಜಿಯನ್ನೂ ತೊರಿಸದೇ ಭೂಮಿಯನ್ನು ಕಾಂಕ್ರಿಟ್ ಮಯವಾಗಿಸುತ್ತಿರುವುದು ಒಂದು ರೀತಿ ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತಾಗಿದೆ. ಇದರಿಂದ ಮನುಷ್ಯನೊಬ್ಬನೇ ಅಲ್ಲದೇ ಸಮಸ್ತ ಜೀವ ಕೋಟಿಗಳು ವಿನಾಶದತ್ತ ಸಾಗುತ್ತಿರುವ ಅಪಾಯವನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾ, ಅದಕ್ಕೆ ಪರಿಸರವನ್ನು ಹಿಂದಿನವರಂತೆ ಪೂಜಿಸುವುದು ಅನಿವಾರ್ಯ ಎನ್ನುವ ಮಾತುಗಳು ಕತೆಗಳಲ್ಲಿ ಪರೋಕ್ಷವಾಗಿ ಮಹತ್ವ ಪಡೆಯುತ್ತವೆ.
ಗಿರಗಿಟ್ಟೆ ಕಥಾ ಪುಸ್ತಕದಲ್ಲಿ ತಮ್ಮಣ್ಣನವರು ಕಾಲ್ಪನಿಕ ಮತ್ತು ನೈಜ ಘಟನೆಗಳ ಸಮ್ಮಿಳಿತಗೊಳಿಸಿ ಭ್ರಮಾಲೋಕದ ಮೂಲಕ ಮಕ್ಕಳ ಮನಸ್ಸಿಗೆ ಹತ್ತಿರವಾಗುತ್ತಾರೆ. ಈ ಕಥೆಗಳು ಮಕ್ಕಳಿಗೆ ತುಂಬಾ ಮುದ ನೀಡುತ್ತವೆ. ಹಿರಿಯರು ಇಲ್ಲಿನ ಕಥೆಗಳನ್ನು ಓದಿದಾಗ ಮತ್ತೆ ಬಾಲ್ಯವನ್ನು ನೆನಪಾಗುವಂತಿದೆ.

ಕತೆಗಳಲ್ಲಿ ಬರುವ ಕೆಲವು ಮತುಗಳು
ಛೇ… ಮರದ ಮೇಲಿನ ಹಲಸಿನ ಹಣ್ಣು ನನಗೆ ಸಿಗಬಾರದಿತ್ತೆ.
ಪಾಪ.. ಹಕ್ಕಿಗಳಿಗೂ ಕನ್ನಡಿಯ ಪರಿಕಲ್ಪನೆ ಇರಬೇಕಿತ್ತು.
ಭೂಮಿಗೆ ಗುರುತ್ವಾಕರ್ಷಣಬಲ ಇಲ್ಲದಿದ್ದರೆ ಹೇಗಿರುತ್ತಿತ್ತು..? ಎನ್ನುವ ಪ್ರಶ್ನೆಗಳು ಕುತೂಹಲದ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರೆ,
ಪರಿಸರದ ಕುರಿತಾಗಿ ಅದಕ್ಕೆ ‘ನಮಸ್ಕರಿಸುವುದಲ್ಲ ಬೊಗಸೆ ಒಡ್ಡಿ ನಿಲ್ಲಬೇಕಾಗಿದೆ’ ಎನ್ನುವ ಮಾತುಗಳು ವಾಸ್ತವವನ್ನು ತೀಕ್ಷ್ಣನೋಟದಲ್ಲಿ ಪ್ರತಿಧ್ವನಿಸುತ್ತವೆ.
ಇಂತಹ ಕಥೆಗಳನ್ನು ಇಂದು ನಾವು ಹೆಚ್ಚೆಚ್ಚು ಮಕ್ಕಳ ಮುಂದಿಡಬೇಕು. ಏಕೆಂದರೆ ವಾಸ್ತವ ಸ್ಥಿತಿ-ಗತಿಗಳ ಪರಿಚಯ ಅವರಿಗೆ ಸ್ಪಷ್ಟವಾಗಿ ಅರಿವಿರಬೇಕು. ಆ ಮೂಲಕ ಅವರು ಭವಿಷ್ಯವನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ.
ತಮ್ಮಣ್ಣರು ಈ ‘ಗಿರಗಿಟ್ಟಿ’ ಹೊತ್ತಿಗೆಯ ಬಹುತೇಕ ಕಥೆಗಳು ನಿಸರ್ಗದ ಸುತ್ತ ಸುತ್ತುತ್ತಲೇ ಮಕ್ಕಳಿಗೆ ಅವರಿಗೆ ಅರಿವಿಲ್ಲದಂತೆ ಪರಿಸರದ ಕುರಿತು ಜಾಗೃತಿ ಮೂಡಿಸುತ್ತವೆ. ಅದರ ಜೊತೆಗೆ ಮಕ್ಕಳ ಬದುಕಿಗೆ ಅಗತ್ಯವಾದ ನೈತಿಕ ಮೌಲ್ಯಗಳ ಬೀಜಗಳನ್ನು ಬೀಗಾರರು ಇಲ್ಲಿ ಬಿತ್ತಿದ್ದಾರೆ. ಈ ರೀತಿ ವಾಸ್ತವದ ಜೊತೆಗೆ ಮಕ್ಕಳ ಬದುಕಿಗೆ ಅಗತ್ಯವಾದವನ್ನು ಕುತೂಹಲದ ಮೂಲಕ ತಿಳಿಸುವ ಕೃತಿಗಳ, ಅದರಲ್ಲೂ ವಿಶೇಷವಾಗಿ ಪರಿಸರದ ಬಗ್ಗೆ ಹೊಸ ಹೊಸ ತಂತ್ರಗಳ ಮೂಲ ಪ್ರಜ್ಞೆ ಮೂಡಿಸುವ ಕೃತಿಗಳು ಮಕ್ಕಳ ಸಾಹಿತ್ಯದಲ್ಲಿ ಹೊರ ಬರಲಿ ಎನ್ನುವ ಒತ್ತಾಸೆ ಇಂದು ಬಲಿಯುತ್ತಿರುವುದು ಉತ್ತಮ ಬೆಳವಣಿಗೆ ಕೂಡಾ ಹೌದು.






0 Comments