ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್‌’

ನಿವೇದಿತಾ ಎಚ್

ಪ್ರಪಂಚ ಕಂಡ ಎಲ್ಲಾ ಮಹಾ ಪುರುಷರ ಹಿಂದೆ ಇರುವ ಮಹಿಳೆಯ ಪರಿಚಯ ನಮಗಾರಿಗೂ ಇರುವುದಿಲ್ಲ. ಅವರ ವ್ಯಕ್ತಿತ್ವ, ಪುರುಷನ ಮಹಾ ಮಹಿಮೆಯ ಮಹತ್ವದ ಗರಿಮೆಯ ಗರಿಷ್ಟತೆ ಅಥವಾ ಕನಿಷ್ಟತೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ʻಧ್ವನಿʻಯ ತೀಕ್ಷ್ಣತೆಯಾಗಲೀ, ಅರ್ದ್ರತೆಯಾಗಲೀ, ಗಡುಸುತನವಾಗಲೀ ನಮ್ಮ ಅರಿವಿಗೆ ಬರಲು ಸಾಧ್ಯವೇ ಇಲ್ಲ. ಮಹಾಪುರುಷನ ನೆರಳಿನಂತೆ ಬಾಳಿ ಬದುಕುವ ಅಳಿಯುವ ಇವರುಗಳು ಹಾಗೆಯೇ ಕರಗಿ ಹೋಗುತ್ತಾರೆ.

ಪ್ರಪಂಚ ಕಂಡ ಮಹಾನ್‌ ಸಂತ ಗಾಂಧೀಜೀ ಪತ್ನಿ ಕಸ್ತೂರ್‌ ಬಾ ಅವರನ್ನು ʻಗಾಂಧೀಜಿ ಪತ್ನಿʻ ಎಂದೇ ನಾವು ಗುರುತಿಸುತ್ತೇವೆ. ಆದರೂ ಗಾಂಧೀಜಿ‌, ಕಠಿಣತಮ, ವ್ರತಸದೃಶ ಜೀವನ ನಡೆಸಲು ಹೃತ್ಪೂರ್ವಕವಾಗಿ ಸಹಕರಿಸಿ, ಅವರ ಮಾದರೀ ಜೀವನದ ಕನಸನ್ನು ನನಸು ಮಾಡಲು ತಾವೂ ಜೀವನವನ್ನು ವ್ರತದಂತೆ ಪಾಲಿಸಿದವರು ಕಸ್ತೂರ್‌ ಬಾ. ಹೆಚ್ಚಿನ ವಿದ್ಯಾಭ್ಯಾಸ ಇಲ್ಲದೇ, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ, ಸಂಸಾರದ ತಾಪತ್ರಯಗಳಲ್ಲಿ ಸಿಲುಕಿ, ಆದರ್ಶಮಯ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡ ಬಾ, ತಾವಾಗಿಯೇ ಎಲ್ಲಿಯೂ ಏನನ್ನೂ ಸ್ವತಃ ತಾವಾಗಿಯೇ  ದಾಖಲಿಸಿಲ್ಲ. ಹಾಗೆ ದಾಖಲಿಸಲು ಅವರಿಗೆ ಸಮಯವಾಗಲೀ, ಅವಕಾಶವಾಗಲೀ ಇರಲಿಲ್ಲ ಎಂಬುದೇ ಸತ್ಯ.

ಹಾಗೆ ಎಲ್ಲರಿಂದ ಅಪಾರವಾಗಿ ಗೌರವಿಸಲ್ಪಡುವ ಆದರೆ ವ್ಯವಸ್ಥಿತವಾಗಿ ಮರೆಯಲ್ಪಟ್ಟಿರುವ ಕಸ್ತೂರ್ ಬಾ ಅವರ ಮನದಮಾತುಗಳನ್ನು, ಆಸೆ-ಆಕಾಂಕ್ಷೆಗಳನ್ನು, ತಳಮಳಗಳನ್ನು, ಬೇಸರಗಳನ್ನು, ದುಃಖಗಳನ್ನು, ನಿರಾಶೆಗಳನ್ನು, ವೇದನೆಗಳನ್ನು, ಆತಂಕಗಳನ್ನು, ಸಂತೋಷಗಳನ್ನು, ಸಿಟ್ಟುಗಳನ್ನು ಸ್ತ್ರೀವಾದಿ ನೆಲೆಯಿಂದ ಯೋಚಿಸಿ, ಮಾನಸಿಕವಾಗಿ ಪರಕಾಯ ಪ್ರವೇಶಮಾಡಿ ಬರಹಕ್ಕಿಳಿಸಿ, ಬಹಳ ಆಪ್ತವಾಗಿ ಕಸ್ತೂರ್‌ ರನ್ನು ನಮಗೆ ಕಟ್ಟಿಕೊಟ್ಟಿದ್ದಾರೆ ಎಚ್.ಎಸ್.ಅನುಪಮಾ ತಮ್ಮ ʼನಾನು ಕಸ್ತೂರ್”‌ ಪುಸ್ತಕದಲ್ಲಿ.

ಅನುಪಮಾರನ್ನು ಸೆಳೆದ ಕಸ್ತೂರ್‌ ರನ್ನು ಬರಹಕ್ಕಿಳಿಸ ಬೇಕೆಂಬ ಉತ್ಕಟ ಇಚ್ಛೆ, ಅಷ್ಟು ಸುಲಭವಾಗಿ ಪೂರೈಸಿದ್ದಲ್ಲ ಎಂಬುದು ಪುಸ್ತಕದ ಮೊದಲ ಅಧ್ಯಾಯ ʻಅರಳೀಕಟ್ಟೆಯ ಬೇವಿ ಮರʻ ಓದಿದಾಗ ತಿಳಿಯುತ್ತದೆ. ಲೇಖಕರೇ ಇದರಬಗ್ಗೆ ಸಖೇದಾಶ್ಚರ್ಯ ವ್ಯಕ್ತ ಪಡಿಸುತ್ತಾ,

ಬಾ ಬದುಕಿನ ಕೆಲವು ಅವಧಿಗಳ ಕುರಿತು ಎಲ್ಲೂ ಮಾಹಿತಿ ದೊರೆಯಲಿಲ್ಲ. ಅಂತಹ ಖಾಲಿ ಜಾಗಗಳು ಪ್ರತಿ ಹೆಣ್ಣು ಬದುಕಿನ ಚರಿತ್ರೆಯಲ್ಲಿ ಪದೇಪದೇ ಕಾಣಬಹುದು. ೩೪೦೦೦ ಪತ್ರಗಳನ್ನು ಬರೆದ, ಬಹಳಷ್ಟು ಪತ್ರಗಳಲ್ಲಿ ತನ್ನ ಪತ್ನಿ-ಕುಟುಂಬದ ಬಗ್ಗೆ ಒಂದು ಸಾಲಾದರೂ ಉಲ್ಲೇಖಿಸಿರುವ ಗಾಂಧಿ ಎಂಬ ವಿಪುಲ ಬರಹಗಾರನಪತ್ನಿಗೇ ಹೀಗಾದರೆ, ಇನ್ನು ಆ ಕಾಲದಲ್ಲಿ ಬದುಕಿದ್ದ ಅಸಂಖ್ಯ ಹೆಣ್ಣು ಜೀವಗಳ ಚಹರೆಯಿರಲಿ, ಹೆಸರು ಸಹಾ ನಮ್ಮ ನೆನಪಿನಲ್ಲಿಲ್ಲವಲ್ಲ ಎಂದು ವಿಷಾದವಾಗುತ್ತದೆ. ಜ್ಯೋತಿಬಾ, ಬಾಪು, ಪೆರಿಯಾರರೇ ಮೊದಲಾಗಿ ಸಮಾಜಕ್ಕೆ ತೆತ್ತುಕೊಂಡ ಅನೇಕರ ಹೆಗಲಿಗೆ ಹೆಗಲಾಗಿ ದುಡಿದ ಅಸಂಖ್ಯ ಮಹಿಳೆಯರು, ಪುರುಷರ ಪತ್ನಿಯರು ಸಂಪೂರ್ಣ ವಿಸ್ಮೃತಿಗೆ ಸರಿದಿದ್ದಾರೆ. ಚರಿತ್ರೆಯಲ್ಲಿ ಹೆಣ್ಣುಹೆಜ್ಜೆ ಗುರುತುಗಳು ಕಣ್ಣಿಗೆ ಕಾಣದಷ್ಟು ಮಸುಕಾಗಿವೆ”.

ಪ್ರಸ್ತುತ ಪುಸ್ತಕ ಅಂತಹ ಉದಾತ್ತ ಮಹಿಳೆಯರ ದುಃಖವನ್ನು ಶಮನ ಮಾಡುವತ್ತಲಿನ ದಿಟ್ಟ ಹೆಜ್ಜೆಯಂತಿದೆ.

ಗಾಂಧೀಜಿ ಬಗೆಗೆ ದೊರೆತ ವಿಪುಲ ಸಾಹಿತ್ಯವನ್ನು ಬಳಸಿಕೊಂಡು, ಅಲ್ಲಿ ದೊರೆತ ಬಾ ರ ಕುರಿತ ಅಲ್ಪಸ್ವಲ್ಪ ವಿವರಣೆಗಳನ್ನು ಬಳಸಿಕೊಂಡು, ʻಕಸ್ತೂರ್‌ʻ ರನ್ನು ಕಥೆ ಹೇಳುವಿಕೆಗೆ ಹಚ್ಚುವ ಅನುಪಮಾರ ಶೈಲಿ ಆಪ್ತವಾಗಿ ಮೂಡಿ ಬಂದಿದೆ. ಜಗತ್ತಿಗೆ ಸತ್ಯಾಗ್ರಹವನ್ನು ತೋರಿಸಿಕೊಟ್ಟವರು ಗಾಂಧೀಜಿ ಎಂಬುದು ನಿಜವಾದರೂ, ಸತ್ಯಾಗ್ರಹದ ಕಲ್ಪನೆ ಗಾಂಧೀಜಿ ಗೆ ಬಂದದ್ದೇ ಕಸ್ತೂರ್‌ ರ ದಿಟ್ಟ ವ್ಯಕ್ತಿತ್ವದಿಂದ! ಕಸ್ತೂರ್‌ ಮದುವೆಯಾಗಿ ಬಂದಾಗ ಇದ್ದ ಮೋಹನ ಕರಮಚಂದ ಗಾಂಧಿ, ನಿಧಾನಕ್ಕೆ ತೆರೆದುಕೊಳ್ಳುತ್ತಾ, ಮೋಹಿಸುವ ಪತಿ, ಆಜ್ಞಾಧಾರಕ ಪುತ್ರ, ಗಳಿಸುವ ಹುಚ್ಚು ಹತ್ತಿಸಿಕೊಂಡ ಗಂಡಸು, ಹೆರಿಗೆ ಬಾಣಂತನಗಳನ್ನು ಮಾಡಿದಾತ, ಆದರ್ಶದ ಸೆಳೆತಕ್ಕೆ ಒಳಗಾದ ವ್ಯಕ್ತಿ, ಅನ್ಯಾಯದಕ್ಕೆ ದನಿ ಏರಿಸುವ ಜವಾಬ್ದಾರಿಯುತ ನಾಗರೀಕ, ನೋವಿಗೆ ಮಿಡಿವ ಸಹೃದಯಿ, ಹೋರಾಟದ ಕೆಚ್ಚು ರೂಢಿಸಿಕೊಂಡ ಸೌಮ್ಯ ಕ್ರಾಂತಿಕಾರಿ, ನಿಯಮದ ಕಟ್ಟು ಹಾಕಿಕೊಂಡ ಸಂತ, ಬ್ರಹ್ಮಚರ್ಯವ್ರತಿ, ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದ ಸಾಮಾನ್ಯ, ಸಮಾನತೆಯ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಮಾನವತಾವಾದಿ… ಹೀಗೆ ಮೋಹನದಾಸ, ಗಾಂಧೀಜೀ ಯಾದದ್ದು, ಬಾಪು ಆದದ್ದನ್ನು ಕಸ್ತೂರ್‌ ರಿಂದಲೇ ಹೇಳಿಸುತ್ತಾರೆ. ಕಸ್ತೂರ್‌ ಕೂಡ ಕಸ್ತೂರ್‌ ಬಾ ಆದದ್ದು, ಅರಳಿಮರದಂತಹ ಪತಿಯ ಸರಿಸಮಾನರಾಗಿ ಜೊತೆಜೊತೆಗೇ ಹೆಜ್ಜೆ ಹಾಕಿದ ಕಸ್ತೂರ್‌, ಮಕ್ಕಳ ವಿಷಯಕ್ಕೆ ಮಾತ್ರ ಗಾಂಧಿಜೀಯನ್ನು ದೂರುತ್ತಾರೆಯೇ ಹೊರತು, ಇನ್ನೆಲ್ಲಾ ಬದಲಾವಣೆಗಳೂ ತಮ್ಮ ವ್ಯಕ್ತಿತ್ವ ವಿಕಸನದ ಫಲ, ಅದೂ ಗಾಂಧೀಜೀಯ ಸಖ್ಯದಿಂದ ಆದದ್ದು ಎಂಬುದನ್ನು ಹೆಮ್ಮೆಯಿಂದ ಕಸ್ತೂರ್‌ ರಿಂದ ಹೇಳಿಸಿರುವುದು, ಗಾಂಧಿಜೀ ಉತ್ತಮ ಪತಿಯಾಗಿರಲಿಲ್ಲ ಎಂಬ ಆರೋಪಕ್ಕೆ ಉತ್ತರದಂತಿದೆ. ಅಂತಿಮ ದಿನಗಳಲ್ಲೂ ಪತಿಯ ಇಚ್ಛೆ, ಆದರ್ಶಗಳಿಗೆ ಲೋಪ ತರದೇ ಹೋದ ಕಸ್ತೂರ್‌ ಒಂದು ಅಚ್ಚರಿ.

ಲೇಖಕಿ ಬಹಳ ಎಚ್ಚರಿಕೆಯಿಂದ ಕಸ್ತೂರ್‌ ಬಾ ರ ದನಿಯಾಗಿದ್ದಾರೆ. ತಮ್ಮ ಜ್ಞಾನ, ಸ್ತ್ರೀವಾದ, ಹೋರಾಟದ ಮನೋಭಾವ, ಅನ್ಯಾಯವನ್ನು ಪ್ರತಿಭಟಿಸುವ ಗುಣ ಎಲ್ಲವನ್ನೂ ಮರೆತು, ಮುಗ್ಧ, ಕಸ್ತೂರ್‌ ರ ನಾಲಗೆಯಾಗಿದ್ದಾರೆ. ಅದನ್ನು ಪ್ರಜ್ಞಾ ಪೂರ್ವಕವಾಗಿ ಮಾಡಲು ಕಷ್ಟವಾಯಿತು ಎಂದೂ ಲೇಖಕಿ ಹೇಳುತ್ತಾರೆ. ಓದುತ್ತಾ ಹೋದಂತೆ, ತಮ್ಮ ಇಡೀ ಜೀವನವನ್ನು ಉತ್ಸಾಹದಿಂದ ಆದರೆ ನಿರುದ್ವೇಗದಿಂದ ಬಣ್ಣಿಸುವ ಕಸ್ತೂರ್‌ ರ ಚಿತ್ರ ಕಣ್ಣ ಮುಂದೆ ಬರುವುದು ಪುಸ್ತಕಕ್ಕೆ ಸಂದ ನ್ಯಾಯವಾಗಿದೆ. ಗಾಂಧೀಜೀಯ ಬೃಹತ್‌ ಛತ್ರಛಾಯೆಯ ಅಡಿಯಲ್ಲಿಯೂ ತನ್ನ ಗಟ್ಟಿತನವನ್ನು ತನ್ನ ಪರಿಮಿತಿಯಲ್ಲಿ ಉಳಿಸಿಕೊಂಡು ಬಂದು, ಅವರಿಗೂ ಅಪರೋಕ್ಷವಾಗಿ ಬಲವಾದ ಕಸ್ತೂರ್‌ ಮೌನಕ್ರಾಂತಿಕಾರಿ.

ಸುಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿದ್ದ ಕಸ್ತೂರ್‌ ರ ತೆರೆದುಕೊಳ್ಳುವಿಕೆಯ ಜೊತೆಗೆ, ಗಾಂಧಿಜೀ ಕೂಡ ಹೊಸದಾಗಿ ಮತ್ತೆ ಅರ್ಥವಾಗುತ್ತಾ ಹೋಗುತ್ತಾರೆ. ಇದು ಕೃತಿಯ ಬಲ. ಗಾಂಧೀಜೀಯ ಜೀವನಕಥೆಯಲ್ಲಿ ದೊರೆಯುವ ಕಸ್ತೂರ್‌ ರ ಅತ್ಯಲ್ಪ ಚಿತ್ರಣವನ್ನಿಟ್ಟುಕೊಂಡು, ಅದಕ್ಕೆ ಕಸ್ತೂರ್‌ ದನಿ ತುಂಬಿದ ಅನುಪಮಾ ರ ಪ್ರಯೋಗಾತ್ಮಕ ಶೈಲಿ ಸುಂದರವಾಗಿದೆ.

ಕಸ್ತೂರ್‌ ಬಾ ಅವರ ೧೫೩ನೆಯ ಜಯಂತಿಯನ್ನು ಇದೇ ಏಪ್ರಿಲ ೧೧ಕ್ಕೆ ಆಚರಿಸುತ್ತಿದ್ದೇವೆ.  ಆ ಹಿನ್ನೆಲೆಯಲ್ಲಿ, ನಾನು ಮತ್ತೆ ಓದಿದ ʻನಾನು ಕಸ್ತೂರ್‌ʻ ಮತ್ತೆ ಕಾಡಿತು.

‍ಲೇಖಕರು Admin

9 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading