ಹಾಡು ಹುಟ್ಟಿದ ಸಮಯ

-ಎ ಆರ್ ಮಣಿಕಾಂತ್
ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಗೀತೆರಚನೆ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಜಾನಕಿ
ನಿಲ್ಲೇ ಪತಂಗ ನಿಲ್ಲು ನಿಲ್ಲೇ ಪತಂಗ
ಬೇಡ ಬೇಡ ಬೆಂಕಿಯ ಸಂಗ ||ಪ||
ಕಾಣದ ಜ್ವಾಲೆ ಕಾಮದ ಲೀಲೆ
ಕಾಡುತ ಹಾಡಿದೆ ಕಣ್ಣುಮುಚ್ಚಾಲೆ
ಕ್ಷಣಿಕದ ಚಪಲಕೆ ಬಲಿಯಾಗುವೆಯಾ
ಶ್ರೀಮತಿ ಎನಿಸಿ ಮತಿ ನೀಗುವೆಯಾ? ||1||
ಧರ್ಮದ ಸೇವಕಿ ನೀನಾಗುವೆಯೋ
ನರಕದ ನಾಯಕಿ ನೀನೆನಿಸುವೆಯೋ
ಕಾರ್ಕೋಟಕ ವಿಷ ನೀ ಭರಿಸುವೆಯಾ
ಅಮೃತ ವಾಹಿನಿ ನೀನಾಗುವೆಯಾ? ||2||
ವಿನಾಶದ ಸುಳಿಗೆ ಸಿಲುಕದೆ ಬಾ
ವಿಷದ ಕೂಪಕೆ ಜಾರದೆ ಬಾ
ವಿವೇಕದ ಗಡಿಯ ಮೀರದೆ ಬಾ
ವಿವಾಹ ಜೀವನ ಪೂಜೆಗೆ ಬಾ ||3||

ಒಂದು ಸಿನಿಮಾ ಗೆಲ್ಲಬೇಕೆಂದರೆ, ಅದರಲ್ಲಿ ಚೆಂದದ ಕಥೆ, ಬಿಗಿಯಾದ ಚಿತ್ರಕತೆ, ಚುರುಕಾದ, ಚಿನಕುರುಳಿಯಂಥ ಸಂಭಾಷಣೆ ಇರಬೇಕು. ವಾಹ್ ವಾಹ್ ಎಂಬಂಥ ಛಾಯಾಗ್ರಹಣವಿರಬೇಕು. ಸಂಕಲನ ಚುರುಕಾಗಿರಬೇಕು. ಇದರ ಜತೆಗೆ ಮಧುರ ಸಂಗೀತವಿರಬೇಕು, ಇಂಪಾದ ಹಾಡುಗಳಿರಬೇಕು… ಈ `ರಹಸ್ಯ’ವನ್ನು ಅರ್ಥಮಾಡಿಕೊಂಡಿದ್ದ ನಿರ್ದೇಶಕರ ಪೈಕಿ ಪುಟ್ಟಣ್ಣ ಕಣಗಾಲ್ ಮತ್ತು ದೊರೆ-ಭಗವಾನ್ ಪ್ರಮುಖರು.
ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರಿಗೆ ತಮ್ಮ ಸಿನಿಮಾದ ಹಾಡುಗಳ ಬಗ್ಗೆ ಒಂದು ಐಡಿಯಾ ಇರುತ್ತಿತ್ತು. ಹಾಡಿನ ಸಾಲುಗಳು ಹೀಗೇ ಇರಬೇಕೆಂದೂ ಅವರಿಗೊಂದು ಅಂದಾಜಿರುತ್ತಿತ್ತು. ಇದನ್ನು ನೆನಪುಮಾಡಿಕೊಂಡೇ ಅದೊಮ್ಮೆ ದಲಿತ ಕವಿ ಸಿದ್ಧಲಿಂಗಯ್ಯ ಹೇಳಿದ್ದರು: ಪುಟ್ಟಣ್ಣ ಕಣಗಾಲ್ ಅವರಿಗೆ ಅಪರೂಪದ ಪಾಂಡಿತ್ಯವಿತ್ತು. ಕನ್ನಡ ಭಾಷೆಯ ಮೇಲೆ, ಪದ ಬಳಕೆಯ ವಿಷಯದಲ್ಲಿ ಒಬ್ಬ ವಿದ್ವಾಂಸನಿಗಿರುತ್ತಲ್ಲ? ಅಷ್ಟರಮಟ್ಟಿಗಿನ ತಿಳಿವಳಿಕೆಯಿತ್ತು. ತಮ್ಮ ಸಿನಿಮಾದ ಹಾಡುಗಳು ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವುದರ ಜತೆಗೆ, ಪ್ರೇಕ್ಷಕರಿಗೆ ಒಂದು ಸಂದೇಶವನ್ನೂ ನೀಡುವಂತಿರಬೇಕು ಎಂದು ಅವರು ಸದಾ ಬಯಸುತ್ತಿದ್ದರು…’
ತಮ್ಮ ಸಿನಿಮಾಗಳಿಗೆ ಪುಟ್ಟಣ್ಣನವರು ಹಾಡು ಬರೆಸುತ್ತಿದ್ದ ಶೈಲಿ ಕೂಡ ವಿಶಿಷ್ಟವೇ. `ಸಂಗೀತ ನಿರ್ದೇಶಕರು ಟ್ಯೂನ್ ಕೇಳಿಸ್ತಾರೆ. ಅನಂತರ ನೀವು ಹಾಡು ಬರ್ಕೊಂಡು ಬನ್ನಿ’ ಎಂದು ಅವರು ಎಂದೂ ಹೇಳುತ್ತಿರಲಿಲ್ಲ. ಕಥೆ-ಚಿತ್ರಕಥೆ ಸಿದ್ಧವಾದ ನಂತರ, ಇಂತಿಂಥ ಸಂದರ್ಭಗಳಲ್ಲಿ ಹಾಡು ಬರಬೇಕು ಎಂದು ಅವರೇ ನಿರ್ಧರಿಸುತ್ತಿದ್ದರು. (ಈ ವಿಷಯದಲ್ಲಿ ನಿರ್ಮಾಪಕರೂ ಸೇರಿದಂತೆ ಯಾರೇ ಹಸ್ತಕ್ಷೇಪ ಮಾಡುವುದನ್ನೂ ಅವರು ಸಹಿಸುತ್ತಿರಲಿಲ್ಲ.) ನಂತರ ಯಾವುದಾದರೂ ಒಂದು ಪ್ರಶಾಂತ ವಾತಾವರಣದ ತಾಣಕ್ಕೆ ಸಂಗೀತ ನಿರ್ದೇಶಕರು, ಗೀತೆರಚನೆಕಾರರೊಂದಿಗೆ ಹೋಗಿ ಒಂದೆರಡು ದಿನ ಅಲ್ಲಿಯೇ ಕ್ಯಾಂಪ್ ಹೂಡಿ, ಟ್ಯೂನ್ ಕೇಳಿಸುತ್ತಿದ್ದರು. ನಂತರ ಗೀತೆರಚನೆಕಾರರನ್ನು ಒಂದಿಷ್ಟು ಹೊಗಳಿ, ಹುರಿದುಂಬಿಸಿ- `ಆ ಶಾರದಾಂಬೆಯನ್ನು ಈಗ ಒಲಿಸಿಕೊಳ್ಳಿ ಕವಿಗಳೇ. ನಿಮ್ಮ ಹಾಡುಗಳು ಈ ಪುಟ್ಟಣ್ಣನ ಸಿನಿಮಾವನ್ನು ಇನ್ನಷ್ಟು ದೊಡ್ಡ ಎತ್ತರಕ್ಕೆ ಕೊಂಡಿಯ್ಯುವ ಹಾಗಿರಲಿ’ ಎನ್ನುತ್ತಿದ್ದರು.
ಪುಟ್ಟಣ್ಣ ಅವರಂಥ ಶ್ರೇಷ್ಠ ನಿದರ್ೇಶಕರು ಹೀಗೆ ಹೇಳುವುದನ್ನು ಕೇಳಿ ಸಹಜವಾಗಿಯೇ ಗೀತೆರಚನೆಕಾರರ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಹೆಚ್ಚಿನ ಸಿನಿಮಾಗಳಲ್ಲಿ ಪುಟ್ಟಣ್ಣನವರು ಇಬ್ಬರು ಅಥವಾ ಮೂವರು ಗೀತರಚನೆಕಾರರಿಂದ ಹಾಡು ಬರೆಸುತ್ತಿದ್ದರು. ಹೀಗಾಗಿ `ಉಳಿದವರಿಗಿಂತ’ ಚೆನ್ನಾಗಿ ಬರೆಯಬೇಕೆಂಬ ತಪನೆ ಎಲ್ಲರಿಗೂ ಇರುತ್ತಿತ್ತು.
`ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕಾಗಿ `ನಿಲ್ಲು ನಿಲ್ಲೇ ಪತಂಗ’ ಗೀತೆಯನ್ನು ಪುಟ್ಟಣ್ಣ ಹೇಗೆ ಬರೆಸಿದರು ಎಂದು ಹೇಳಲು ಹೊರಟಾಗ ಇದೆಲ್ಲ ನೆನಪಾಯಿತು. ಈ ಹಾಡು ಹುಟ್ಟಿದ ಸಮಯವನ್ನು ವಿವರಿಸುವ ಮೊದಲು ಈ ಹಾಡಿನ ಬಗ್ಗೆ ಪುಟ್ಟಣ್ಣನವರ ಅಭಿಪ್ರಾಯವೇನಿತ್ತು ಎಂದು ತಿಳಿಯೋಣ.
ಆ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪುಟ್ಟಣ್ಣ ಹೀಗೆಂದಿದ್ದರು:
`ನಿಲ್ಲೇ ಪತಂಗ…’ ನನಗೆ ಬಹಳ ಇಷ್ಟವಾದ ಹಾಡು. ಎಲ್ಲರಿಗೂ ಗೊತ್ತಿರುವಂತೆ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಬಹಳ ಉತ್ತಮವಾದ ಸ್ಥಾನವಿದೆ. ಅದರಲ್ಲೂ ಶ್ರೀಮತಿ ಎನಿಸಿಕೊಂಡವರನ್ನು ನಮ್ಮ ಜನ ವಿಶೇಷ ಗೌರವದಿಂದ ಕಾಣುತ್ತಾರೆ. ಇದೆಲ್ಲ ಗೊತ್ತಿದ್ದೂ `ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ನಾಯಕಿ, ಆಸೆಯನ್ನು ಗೆಲ್ಲಲಾರದೆ ಪರಪುರುಷನ ಜತೆಯಲ್ಲಿ ಮರೆಯಲ್ಲಿ ಸರಸ ಸಲ್ಲಾಪ ಮಾಡುತ್ತಾ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಹೋಗುತ್ತಾಳೆ. ಅದನ್ನು ಗಮನಿಸಿದ ನಾಯಕಿಯ ತಂಗಿ, ಅಷ್ಟೇ ಸಂಯಮದಿಂದ- ಈ ಮೋಹ, ಕಾಮ ಕೇವಲ ಕ್ಷಣಿಕವಾದದ್ದು. ಅದರ ಹಿಂದೆ ಹೋಗಿ ಬದುಕನ್ನೇ ಹಾಳು ಮಾಡ್ಕೋಬೇಡ’ ಎಂದು ಬುದ್ಧಿ ಹೇಳುತ್ತಾಳೆ. ಆ ಸಂದರ್ಭದಲ್ಲಿ ಬರುವ ಹಾಡಿದು.
ಇದು, ನಾನು ನನ್ನ ಅನುಭವದಿಂದ ಬರೆಸಿದ ಹಾಡು.ನನ್ನ ಜೀವನದಲ್ಲಿ ಅಂಥ ಆಮಿಷಕ್ಕೆ ಬಲಿಯಾದ ಎಷ್ಟೋ ಹೆಣ್ಣುಗಳನ್ನು ಭೇಟಿಯಾಗಿದ್ದೇನೆ. ಯಾವುದೋ ಕಾಲ್ಪನಿಕ ಆಸೆಗಾಗಿ ಹುಡುಗರ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಂಡು ದುಃಖದಲ್ಲಿ ಮುಳುಗಿದ್ದ ಹೆಣ್ಣುಮಕ್ಕಳ ಸ್ನೇಹವೂ ನನಗಿದೆ. ಅಂಥ ಹೆಣ್ಣುಮಕ್ಕಳನ್ನು ಎಚ್ಚರಿಸಿದ ಹಾಗೆ ಆಗುತ್ತೆ ಎಂಬ ಉದ್ದೇಶದಿಂದಲೇ ಈ ಹಾಡನ್ನು ನಾನು ಚಿತ್ರದಲ್ಲಿ ಅಳವಡಿಸಿಕೊಂಡೆ…’
* * *
`ನಿಲ್ಲೇ ಪತಂಗ…’ ಗೀತೆ ಸೃಷ್ಟಿಯಾದ ಸಂದರ್ಭ ಕೂಡ ರೋಚಕವೇ. ಮೊದಲೇ ಹೇಳಿದಂತೆ, ಹಾಡು ಬರೆಸುವ ಉದ್ದೇಶದಿಂದಲೇ ಸಂಗೀತ ನಿರ್ದೇಶಕ ರಂಗರಾವ್, ಚಿತ್ರಸಾಹಿತಿ ಹಾಗೂ ತಮ್ಮ ಜೀವದ ಗೆಳೆಯ ವಿಜಯನಾರಸಿಂಹ ಅವರೊಂದಿಗೆ ಒಂದು ಗೆಸ್ಟ್ ಹೌಸ್ ನಲ್ಲಿ ಪುಟ್ಟಣ್ಣ ಬಿಡಾರ ಹೂಡಿದ್ದರು. ರಂಗರಾವ್ ಅವರಿಂದ ಹಾಡಿನ ಟ್ಯೂನ್ ಕೇಳಿಸಿದ್ದರು. ನಂತರ- `ನೋಡೋ ವಿಜಯಾ, ಈ ಸಿನಿಮಾದಲ್ಲಿ, ಮದುವೆಯಾದ ನಂತರವೂ ಅಕ್ಕ ಅಡ್ಡದಾರಿ ಹಿಡಿದಿರ್ತಾಳೆ. ಅದನ್ನು ಕಂಡ ತಂಗಿ- ನೀನು ಹೀಗೆ ಮಾಡೋದಾ? ಇದೆಲ್ಲ ಸರಿ ಅನ್ಸುತ್ತಾ ನಿಂಗೆ? ನಾನು ಗೃಹಿಣಿ ಅನ್ನೋ ನೆನಪೇ ಇಲ್ವ ನಿಂಗೆ? ನಿನ್ನ ಬುದ್ಧಿಗೆ ಏನಾಗಿದೆ? ಈ ತಪ್ಪು ಕೆಲಸದಿಂದ ಆಚೆ ಬಾ’ ಎಂದು ಬುದ್ಧಿ ಹೇಳಬೇಕು. ಈ ಸಂದರ್ಭಕ್ಕೆ ಒಂದು ಹಾಡು ಬರೆದು ಕೊಡು. ಕಾಮನೆಗಳ ತೀವ್ರತೆಯಿಂದ ತೊಳಲಾಡುವ ಹೆಣ್ಣಿಗೆ ಉಪದೇಶ ಹೇಳಿದಂತೆ ಆ ಹಾಡಿರಬೇಕು. ಹುಂ, ಆ ಶಾರದಾಂಬೆಯನ್ನು ಆವಾಹಿಸಿಕೋ…’ ಎಂದರು.
`ಸರಿ, ಸರಿ’ ಎಂದ ವಿಜಯನಾರಸಿಂಹ, ಪಲ್ಲವಿಯನ್ನು ಹೇಗೆ ಬರೆಯುವುದು ಎಂದು ಯೋಚಿಸುತ್ತಿದ್ದಾಗಲೇ ದಿಢೀರನೆ ಕರೆಂಟ್ ಹೋಯಿತು. ಕರೆಂಟ್ ಬಂದ ನಂತರ ಹಾಡು ಬರೆದರಾಯ್ತು ಎಂದುಕೊಂಡು ಮೋಂಬತ್ತಿ ಹಚ್ಚಿಟ್ಟು ವಿಜಯನಾರಸಿಂಹ ಅವರೊಂದಿಗೆ ಮಾತುಕತೆಗೆ ಕೂತರು ಪುಟ್ಟಣ್ಣ ಮತ್ತು ರಂಗರಾವ್.
ಈ ಮೂವರ ಪಟ್ಟಾಂಗ ಶುರುವಾದ ಕೆಲವೇ ನಿಮಿಷಗಳಲ್ಲಿ, ಅದುವರೆಗೂ ವಿದ್ಯುತ್ ಬಲ್ಬ್ ನ ಸುತ್ತ ಸುತ್ತುತ್ತಿದ್ದ ಒಂದೆರಡು ಮಿಡತೆಗಳು ಸೀದಾ ಕೆಳಗಿಳಿದು ಬಂದು ಮೋಂಬತ್ತಿಯ ಸುತ್ತಲೇ ಗಿರಕಿ ಹೊಡೆಯಲು ಶುರುಮಾಡಿದವು. ಇದನ್ನು ಗಮನಿಸಿದ ಪುಟ್ಟಣ್ಣ, ಅದನ್ನು ಕೈಬೀಸಿ ಅತ್ತ ಓಡಿಸಲು ಒಂದೆರಡು ಬಾರಿ ಪ್ರಯತ್ನಿಸಿದರು. ಆದರೆ, ಆ ಮಿಡತೆ, ಮತ್ತೆ ಮತ್ತೆ ಅಲ್ಲಿಗೇ ಬರುತ್ತಿತ್ತು. ಅದನ್ನು ಕಂಡವರೇ- `ಅಯ್ಯೋ, ಇದೇನಪ್ಪ ಇದು? ಇದು ಬದುಕಿಕೊಳ್ಳಲಿ ಅಂತ ಓಡಿಸಿದ್ರೆ, ಅದು ಅಷ್ಟು ದೂರ ಹೋಗಿ, ಅಲ್ಲಿ ನಿಲ್ಲದೇ ಮತ್ತೆ ಈ ಬೆಂಕಿಯ ಕಡೆಗೇ ವಾಪಸ್ ಬರ್ತಿದೆಯಲ್ಲ…’ ಅಂದರಂತೆ.
ಈ ಸಂದರ್ಭದಲ್ಲಿ ಕೂಡ ಹಾಡಿನ ಪಲ್ಲವಿ ಹೇಗಿರಬೇಕೆಂದೇ ಯೋಚಿಸುತ್ತಿದ್ದ ವಿಜಯನಾರಸಿಂಹರಿಗೆ ತಕ್ಷಣವೇ ಮೈಯೊಳಗೆ ಮಿಂಚು ಹರಿದಂತಾಯಿತು. ಮೇಲಿಂದ ಮೇಲೆ ಮೋಂಬತ್ತಿಯ ಬೆಳಕಿಗೆ ಮುತ್ತಿಡಲು ಬರುತ್ತಿದ್ದ ಮಿಡತೆ-ಆಸೆಯಿಂದ; ಕಾಮದಿಂದ ಕುರುಡಾಗಿದ್ದ `ಎಡಕಲ್ಲು ಗುಡ್ಡದ ಮೇಲೆ’ಯ ನಾಯಕಿಯಂತೆಯೇ ಅವರಿಗೆ ಕಾಣಿಸಿತು. ಮರುಕ್ಷಣವೇ ಅವರು ಭವ್ಯ-ದಿವ್ಯ ಎಂಬಂಥ ಸಾಲುಗಳನ್ನು ಬರೆದೇಬಿಟ್ಟರು. `ನಿಲ್ಲು ನಿಲ್ಲೇ ಪತಂಗ.. ಬೇಡ ಬೇಡ ಬೆಂಕಿಯ ಸಂಗ…!’ ಮುಂದೆ, ಮೊದಲ ಚರಣ ಬರೆಯುವಾಗ ನಾಯಕಿಯನ್ನು ತಿವಿದು ಎಚ್ಚರಿಸುವಂಥ ಸಾಲಿರಬೇಕು ಎಂಬ ಯೋಚನೆ ಬಂದಾಗ- `ಕ್ಷಣಿಕದ ಚಪಲಕೆ ಬಲಿಯಾಗುವೆಯಾ / ಶ್ರೀಮತಿ ಎನಿಸಿ ಮತಿ ನೀಗುವೆಯಾ?’ ಎಂಬ ಇನ್ನೊಂದು ದಿವ್ಯ ಸಾಲು ವಿಜಯನಾರಸಿಂಹರ ಲೇಖನಿಯಿಂದ ಮೂಡಿಬಂತು.
* * *
ಇಲ್ಲಿ, ವಿಜಯನಾರಸಿಂಹ ಅವರ ಬಗ್ಗೆ ನಾಲ್ಕು ಮಾತು ಹೇಳಬೇಕು. ಕನ್ನಡದ ಶ್ರೇಷ್ಠ ಗೀತೆರಚನೆಕಾರರಲ್ಲಿ ಒಬ್ಬರು ವಿಜಯನಾರಸಿಂಹ. `ಭಾರತ ಭೂಶಿರ ಮಂದಿರ ಸುಂದರಿ’, `ವಸಂತ ಬರೆದನು ಒಲವಿನ ಓಲೆ’, `ವಿರಹಾ ನೂರು ನೂರು ತರಹಾ’, `ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ’, `ಹಾವಿನ ದ್ವೇಷ ಹನ್ನೆರಡು ವರುಷ’, `ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’, `ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ…’ ಹೀಗೆ, ಅವರು ಬರೆದ ಸೂಪರ್ ಹಿಟ್ ಗೀತೆಗಳ ಪಟ್ಟಿ ದೊಡ್ಡದಿದೆ.
ಎಷ್ಟೇ ಮಧುರಗೀತೆ ಬರೆದರೂ ಕನ್ನಡ ಸಾಹಿತ್ಯ ಪರಿಷತ್ ನವರು ತಮ್ಮ ಸಾಹಿತ್ಯಸೇವೆ ಗಮನಿಸಿ ಒಂದು ಪ್ರಶಸ್ತಿ ಕೊಡಲಿಲ್ಲ. ಒಮ್ಮೆಯಾದರೂ ವಿದ್ವಜ್ಜನರ ಸಮ್ಮುಖದಲ್ಲಿ ಸನ್ಮಾನಿಸಲಿಲ್ಲ, ಪುರಸ್ಕರಿಸಲಿಲ್ಲ ಎಂಬ ಒಂದು ಕೊರಗು ವಿಜಯನಾರಸಿಂಹ ಅವರಿಗಿತ್ತು. ಇನ್ನೊಬ್ಬ ಶ್ರೇಷ್ಠ ಗೀತರಚನೆಕಾರ ಚಿ. ಉದಯಶಂಕರ್ ಅವರಿಗೂ ಅಂಥದೇ ನೋವಿತ್ತು. ಒಂದು ಸಂದರ್ಭದಲ್ಲಿ ಉದಯಶಂಕರ್ ತಮಾಷೆಯಾಗಿ- `ವಿಜಯನಾರಸಿಂಹ ಅವರೆ, ಒಂದು ಕೆಲ್ಸ ಮಾಡೋಣ. ನಾವೇ ಒಂದು ದಿನ ಸಾಹಿತ್ಯ ಪರಿಷತ್ ಗೆ ಹೋಗಿ ಒಬ್ಬರಿಗೊಬ್ಬರು ಸನ್ಮಾನ ಮಾಡಿಕೊಂಡುಬಿಡೋಣ. ನಮ್ಮ ಆಸೆ ಹಾಗಾದ್ರೂ ಈಡೇರಲಿ’ ಎಂದರಂತೆ.
ದುರಂತವೆಂದರೆ- ವಿಜಯನಾರಸಿಂಹ ಅವರನ್ನು ಸನ್ಮಾನಿಸಬೇಕೆಂಬ ಬುದ್ಧಿ ಸಾಹಿತ್ಯ ಪರಿಷತ್ ನ ಜನರಿಗೆ ಕಡೆಗೂ ಬರಲಿಲ್ಲ. ಆದರೆ, ಅವರು ತೀರಿಕೊಂಡ ದಿನ ಯಾರೋ ದಡಬಡಿಸಿ ಬಂದು- `ನಾವು ಸಾಹಿತ್ಯ ಪರಿಷತ್ ನಿಂದ ಬಂದಿದ್ದೀವಿ’ ಎಂದು ಹೇಳಿ, ಹಾರ ಹಾಕಿ ಹೋದರಂತೆ. ಈ ಘಟನೆಯನ್ನು ನೋವಿನಿಂದಲೇ ನೆನೆಯುವ ವಿಜಯನಾರಸಿಂಹ ಅವರ ಮೊಮ್ಮಗ ಸುದತ್ತ ಗೌತಂ ಹೇಳುತ್ತಾರೆ: `ಅಲ್ಲ ಸಾರ್, ನಮ್ಮ ತಾತ ಬದುಕಿದ್ದಾಗ ಬಾರದ ಪುರಸ್ಕಾರ, ಅವರು ಬಾರದ ಲೋಕಕ್ಕೆ ಹೋದ ನಂತರ ಬಂತು. ಅದರಿಂದ ಏನುಪಯೋಗ?’
ಅವರ ನೋವಿನ ಪ್ರಶ್ನೆಗೆ ಉತ್ತರಿಸುವುದಾದರೂ ಹೇಗೆ?




ನನ್ನ ಮೆಚ್ಚಿನ ಅಂಕಣ ತಪ್ಪಿ ಹೋಯಿತಲ್ಲ ಎನ್ನುವ ಕೊರಗು ಈಗ ತೀರಿತು. ಮಣಿಕಾಂತ್ ಸಾರ್ ಮತ್ತು ಅವಧಿಗೂ ಧನ್ಯವಾದಗಳು.