ಟಾಲ್ಸ್ಟಾಯ್ ಅವರ ‘ಅನ್ನಾ ಕರೆನಿನ’ ‘ಅಘನಾಶಿನಿ’ಯಾಗಿ ಅನುವಾದಿಸಿದವರು ಕೆ ಶ್ರೀನಾಥ್
‘ಸೃಷ್ಟಿ ಪ್ರಕಾಶನ‘ ಈ ಅನುವಾದಿತ ಕಾದಂಬರಿಯನ್ನು ಪ್ರಕಟಿಸಿದ್ದು, ಅನುವಾದಕರ ಮಾತು ಇಲ್ಲಿದೆ.
ತಲೆ ತಲಾಂತರಗಳಿಂದ ನಮ್ಮ ಸಮಾಜವು ಪುರುಷ ಪ್ರಾಧಾನ್ಯವಾಗಿಯೇ ಮುಂದುವರಿಯುತ್ತಾ ಬಂದಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ಹೊಸಾ ದಾರಿಗಳನ್ನು ಕಂಡುಕೊಂಡ ಈ ಶತಮಾನವೂ ಕೂಡ ಅದರಿಂದ ಹೊರತಾಗಿಲ್ಲ. ಭೌತಿಕವಾಗಿ ಸ್ತ್ರೀ ಸ್ವಾತಂತ್ರ್ಯದ ಬಗ್ಗೆಗಿನ ಘೋಷಣೆಗಳು ಕೇಳಿ ಬರುತ್ತಿದ್ದರೂ ಕೂಡ, ತಾತ್ವಿಕವಾಗಿ ಮತ್ತು ಮಾನಸಿಕವಾಗಿ ಅದೊಂದು ದೂರದ ಬೆಟ್ಟವಾಗಿಯೇ ಉಳಿದುಬಿಟ್ಟಿದೆ. ನೈತಿಕತೆಯ ಕಟ್ಟುಪಾಡುಗಳನ್ನು ಪುರುಷ ಮತ್ತು ಸ್ತ್ರೀಯ ಮೇಲೆ ಹೇರಲ್ಪಟ್ಟಿದ್ದರೂ ಕೂಡ, ಅದು ಪುರುಷ ವರ್ಗಕ್ಕೆ ಅನ್ವಯವಾಗದೇ ಇರುವ ರೀತಿಯಲ್ಲಿ ರೂಪಿಸಲ್ಪಟ್ಟಿದೆ.
polygamy (ಬಹು ಪತ್ನಿತ್ವ) ಗೆ ಸಿಕ್ಕಂತಹ ಮನ್ನಣೆಯು poly andry (ಬಹು ಪತಿತ್ವ) ಗೆ ಸಿಕ್ಕಿಲ್ಲ. ಆದರೂ ನಮ್ಮ ಪುರಾಣದಲ್ಲಿ ದ್ರೌಪದಿಯಂತಹವರ ಉದಾಹರಣೆಗಳು ಇವೆ. ಗಂಭೀರವಾಗಿ ಗಮನಿಸ ಬೇಕಾದದ್ದೆಂದರೆ ಮನುಷ್ಯನ ಸಹಜ ಪ್ರವೃತಿಯು ಹೆಚ್ಚು ಕಡಿಮೆ ಪ್ರಾಣಿಗಳನ್ನು ಬಹಳಷ್ಟು ಹೋಲುತ್ತದೆ. ಆದರೆ ಲೈಂಗಿಕತೆಯ ವಿಷಯಕ್ಕೆ ಬಂದರೆ ಅದನ್ನು ನೈತಿಕತೆಯ ಕಟ್ಟು ಪಾಡುಗಳಿಂದ ಬಂದಿಸಿಡಲಾಗಿದೆ. ಆದರೂ ಕೂಡ ಇದಕ್ಕೆ ಹೊರತಾಗಿರುವವರು ಪುರುಷರು. ಅವರಿಗೆ ರಾಜಾರೋಷವಾಗಿ ತಮ್ಮಲ್ಲಿನ ಉದ್ಭವಿಸಿದ ವಿವಾಹೇತರ ಕಾಮನೆಗಳಿಗೆ ಮಣಿಯುವ ಸವಲತ್ತನ್ನು ಸಮಾಜ ಕಲ್ಪಿಸಿಕೊಟ್ಟಿದೆ. ಆದರೆ ನೈತಿಕತೆಯ ಬೇಲಿಯನ್ನು ಸ್ತ್ರೀ ಕುಲದ ಸುತ್ತಲೂ ನಿರ್ಮಿಸಲಾಗಿದೆ. ಸ್ತ್ರೀ ಕುಲಕ್ಕೂ ಪುರುಷರಿಗಿರುವಂತಹ ಇಂತಹ ಸವಲತ್ತನ್ನು ಅನುಭವಿಸುವ ಹಕ್ಕನ್ನು ಸಮಾಜವು ಯಾಕೆ ಕಲ್ಪಿಸಿಕೊಟ್ಟಿಲ್ಲ ಅನ್ನುವುದೇ ಇಲ್ಲಿನ ಪ್ರಶ್ನೆ.
ಟಾಲ್ಸ್ಟಾಯ್ ಬರೆದಂತಹ ಅನ್ನಾ ಕರೆನಿನ 1877 ರಲ್ಲಿ ಪ್ರಕಟಗೊಂಡಿತು, ಅದನ್ನು ಆ ಕಾಲದಲ್ಲಿ ಎಂದೂ ಬರೆಯದೇ ಇದ್ದಂತಹ ಶ್ರೇಷ್ಟ ಕಾದಂಬರಿ ಎಂದು ಪರಿಗಣಿಸಲಾಗಿತ್ತು. ಅದೊಂದು ಸಂಕಿರ್ಣತೆಯಿಂದ ಕೂಡಿದ ಪರಸ್ಪರವಾಗಿ ಹೆಣೆದಂತಹ ಪ್ರೀತಿಯ, ದಾಂಪತ್ಯದ್ರೋಹದ, ಕುಟುಂಬದ ಮತ್ತು ಸಮಾಜದ ಸಂಗತಿಗಳನ್ನು ಹೊಂದಿದ ಕಥಾನಕವಾಗಿದೆ. ಇದೊಂದು ಹತ್ತೊಂಭತ್ತನೆ ಶತಮಾನದ ಶ್ರೀಮಂತ ವರ್ಗದಲ್ಲಿನ ಘಟನೆಗಳನ್ನು ಒಳಗೊಂಡಿದೆ. ಈ ಕಥಾನಕದ ಹೃದಯದಲ್ಲಿ ಇರುವುದು ಎರಡು ಕಥೆಗಳು. ಒಂದು ಭಾವೋದ್ರಿಕ್ತ ಅಘನಾಶಿನಿ(ಅನ್ನ ಕರೆನಿನ) ಮತ್ತು ಭಗವಾನ್ (ವ್ರಾನ್ಸಕಿ) ರನ್ನು ಒಳಗೊಂಡಿರುವುದು, ಇನ್ನೊಂದು ತೇಜಸ್ವಿಯ (ಲೆವಿನ್) ನೈತಿಕವಾದಂತಹ ಮತ್ತು ಆಧ್ಯಾತ್ಮಿಕವಾದ ಪಯಣವನ್ನು ಒಳಗೊಂಡಿರುವುದು.
ಅಘನಾಶಿನಿಯೊಬ್ಬಳ ಪಾತ್ರವೇ ಸಾಕು ಇಡಿ ಸಾಹಿತ್ಯ ಕ್ಷೇತ್ರದಲ್ಲಿಯೇ ಅತ್ಯಂತ ಬಲವಾದ ಮತ್ತು ದುರಂತದಿಂದ ಕೂಡಿದ ಪಾತ್ರವಾಗಿ ಪ್ರತಿಬಿಂಬಿತವಾಗುವುದಕ್ಕೆ. ಅವಳನ್ನು ಒಬ್ಬಳು ರೂಪವತಿ, ಬುದ್ಧಿವಂತೆ ಮತ್ತು ಅತ್ಯಾಕರ್ಷಕ ಹೆಣ್ಣನ್ನಾಗಿ ಮತ್ತು ಸರಕಾರದಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಹೊಂದಿರುವ ಸುಧಾಕರ ಹೆಗ್ಡೆಯ (ಅಲೆಕ್ಸಿ ಆರ್ಕಡೊವಿಚ್) ಪತ್ನಿಯನ್ನಾಗಿ ಪರಿಚಯಿಸಲಾಗಿದೆ. ಅವಳ ತೋರಿಕೆಗಷ್ಟೇ ಪಡೆದ ಸಂಪೂರ್ಣತೆಯಿಂದ ಕೂಡಿದ ಜೀವನದ ಹೊರತಾಗಿಯೂ, ತಾನೊಂದು ಪ್ರೇಮರಹಿತವಾದ ಮದುವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಭಾವಿಸುತ್ತಿರುತ್ತಾಳೆ. ಮತ್ತು ಭಗವಾನ್ (ವ್ರಾನ್ಸಕಿ) ನ ಜೊತೆಯಲ್ಲಿ ಗಾಡಾನುರಕ್ತತೆಯ ಪ್ರಣಯ ಪ್ರಸಂಗವೊಂದನ್ನು ಪ್ರಾರಂಬಿಸುತ್ತಾಳೆ. ಈ ಪ್ರಣಯ ಪ್ರಸಂಗವು ಅವಳ ಸಾಮಾಜಿಕವಾದ ಪ್ತ್ರತ್ಯೇಕೀಕರಣ, ವೈಯಕ್ತಿಕವಾದ ಯಾತನೆ ಮತ್ತು ಅಂತಿಮವಾಗಿ ಅವಳು ಅವನತಿಗೊಳ್ಳುವ ಘಟನೆಗಳಿಗೆ ಎಡೆಮಾಡಿಕೊಡುತ್ತದೆ.
ಟಾಲ್ಸ್ಟಾಯ್ ಪಾಂಡಿತ್ಯಪೂರ್ಣವಾಗಿ ಅಘನಾಶಿನಿಯ(ಅನ್ನಾ) ಆಂತರಿಕ ಹೋರಾಟಗಳನ್ನು ಮತ್ತು ಅವಳ ಆಯ್ಕೆಯಗಳಿಂದ ಉಂಟಾಗುವು ಪರಿಣಾಮಗಳನ್ನು ಚಿತ್ರಿಸುತ್ತಾನೆ. ಅವಳ ಭಗವಾನ್ ನ(ವ್ರಾನ್ಸಕಿ) ಮೇಲಿನ ಪ್ರೀತಿಯು ಪ್ರಾಮಾಣಿಕತೆಯಿಂದ ಮತ್ತು ತೀವ್ರತೆಯಿಂದ ಕೂಡಿದ್ದು. ಆದಕ್ಕೆ ದಂಡವಾಗಿ ಅವಳು ತೆತ್ತಿದ್ದೆಂದರೆ ಸಮಾಜದಲ್ಲಿ ಗಳಿಸಿದ್ದ ಕೀರ್ತಿ ಮತ್ತು ಸ್ಥಾನವನ್ನು, ಮತ್ತು ಜೊತೆಗೇ ಅವಳ ಕುಟುಂಬವನ್ನು ಮತ್ತು ಅವಳಲ್ಲಿ ಸಾಕಾರಗೊಂಡಿದ್ದ ಪ್ರಜ್ಞಾವಂತ ಮನಸ್ಸನ್ನು. ಇವರ ಪ್ರಣಯ ಪ್ರಸಂಗವು ಗಾಢವಾಗುತ್ತಿದ್ದಂತೆಯೇ ಅಘನಾಶಿನಿಯನ್ನು ಈರ್ಷ್ಯೆ ಮತ್ತು ಅಬಧ್ರತೆಯು ಹೆಚ್ಚೆಚ್ಚು ಆಹುತಿ ತೆಗೆದುಕೊಳ್ಳಲು ಶುರುಮಾಡುತ್ತದೆ, ಅವಳಿದ್ದ ಸಮಾಜದಲ್ಲಿನ ಕಠಿಣವಾದ ನೈತಿಕ ಕಟ್ಟುಪಾಡುಗಳ ಜೊತೆಯಲ್ಲಿ ತನ್ನ ಸಂತೋಷದಿಂದ ಇರಬೇಕೆನ್ನುವ ಇಂಗಿತವನ್ನು ಸಮನ್ವಯಗೊಳಿಸಿಕೊಳ್ಳಲು ವಿಫಲಳಾಗುತ್ತಾಳೆ. ಈ ಕಾದಂಬರಿಯು ಅವಳ ಭಾವನಾತ್ಮಕವಾದ ಕುಸಿತವನ್ನು ಮತ್ತು ಆಳವಾದ ಮನಶ್ಶಾಸ್ತ್ರೀಯವಾದ ಒಳನೋಟಗಳನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಅದು ಕೊನೆಗೂ ಕಾಣಿಸುವುದು ಹೇಗೆ ಸಾಮಾಜಿಕವಾದ ನೀತಿ ನಿಯಮಗಳು ಮತ್ತು ಅವಳದೇ ಆದ ಆಂತರಿಕವಾದ ಸಂಘರ್ಷಗಳು ಅವಳನ್ನು ದುರಂತದಿಂದ ಕೂಡಿದ ಅಂತ್ಯದತ್ತ ಒಯ್ಯುತ್ತದೆ ಎನ್ನುವುದನ್ನು.
ಅಘನಾಶಿನಿಯ ಕ್ಷೋಭೆಯಿಂದ ಕೂಡಿದ ವಿನಾಶಕಾರಿ ಪ್ರಣಯ ಪ್ರಸಂಗಕ್ಕೆ ವ್ಯತಿರುಕ್ತವಾಗಿ, ಈ ಕಾದಂಬರಿಯು ಪ್ರಸ್ತುತ ಪಡಿಸುವುದು ತೇಜಸ್ವಿಯ (ಲೆವಿನ್) ಪಾತ್ರವನ್ನು, ಮತ್ತು ಅವನ ಕಥಾಹಂದರವು ಬದುಕಿನ ಅರ್ಥ ಮತ್ತು ಫಲಪ್ರಾಪ್ತಿಯ ಅನ್ವೇಷಣೆಯ ಸುತ್ತಾ ಹರಡಿಕೊಂಡಿರುತ್ತದೆ. ಅನೇಕ ಬಾರಿ ತೇಜಸ್ವಿಯ ಬಗ್ಗೆಗಿನ ಘಟನೆಗಳು ಟಾಲ್ಸ್ಟಾಯ್ ನ ಸ್ವಂತವಾದ ಅನುಭವಗಳಿಗೆ ಹೋಲುತ್ತವೆ. ಅಂದರೆ ಅವನದೇ ಆದ ನೈತಿಕ ಹಾಗೂ ತಾತ್ವಿಕ ಒಳನೋಟಗಳ ಚಿಂತನೆಗಳು ಈ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗುತ್ತವೆ. ತೇಜಸ್ವಿಯು ಒಬ್ಬ ಭೂಮಾಲೀಕ ಮತ್ತು ಅವನು ಸಮಾಜದಲ್ಲಿನ ತನ್ನ ಪಾತ್ರದ ಬಗ್ಗೆ ಸೆಣೆಸಾಡುತ್ತಾನೆ, ಒಂದು ಅರ್ಥಪೂರ್ಣವಾದ ಬದುಕಿಗೋಸ್ಕರ ಅವನ ನಂಬಿಕೆ ಮತ್ತು ಆಕಾಂಕ್ಷೆಗಳ ಜೊತೆಯಲ್ಲಿ. ಶ್ರೀಮಂತ ಕುಟುಂಬದ ಕ್ರಿಷ್ಣಳ (ಕಿಟ್ಟಿ) ಮೇಲೆ ಅವನಿಗಿದ್ದ ಪ್ರೀತಿ ಒಂದು ರೀತಿಯಲ್ಲಿ ಅಘನಾಶಿನಿಯ ಭಗವಾನ್ ನ ಜೊತೆಯ ಸಂಭಂಧಕ್ಕೆ ಪೂರಕವಾಗಿದೆ ಅನ್ನುವ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಅಘನಾಶಿನಿಯ ಪ್ರಣಯವು ಹತಾಶೆಯ ಕಡೆಗೆ ಕರೆದೊಯ್ದರೆ, ತೇಜಸ್ವಿಯ ಪಯಣವು ಪ್ರೀತಿ ಮತ್ತು ಕೌಟುಂಬಿಕ ಸಂತೋಷದೆಡೆಗೆ ಕರೆದೊಯ್ಯುತ್ತದೆ. ಅದನ್ನು ಅವನು ಗಳಿಸಿದ್ದು ಅವನದೇ ಆದಂತಹ ಸವಾಲುಗಳನ್ನು ಎದುರಿಸುವಲ್ಲಿ ಪಟ್ಟ ಶ್ರಮಗಳ ಹೊರತಾಗಿಯೂ.
ಕಾದಂಬರಿಯ ಕೇಂದ್ರ ಬಿಂದುಗಳಲ್ಲಿ ಒಂದು ಎಂದು ಕರೆಯಬಹುದಾದ ವಸ್ತು ಎಂದರೆ ವೈಯ್ಯುಕ್ತಿಕವಾದ ಅಭಿಲಾಷೆ ಮತ್ತು ಸಮುದಾಯದ ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ. ಟಾಲ್ಸ್ಟಾಯ್ ಹತ್ತೊಂಬತ್ತನೇ ಶತಮಾನದ ಕಠಿಣವಾದ ಶ್ರೀಮಂತ ವರ್ಗದ ಸಾಮಾಜಿಕ ಕಟ್ಟಳೆಗಳ ಬಗ್ಗೆ ಆಳವಾಗಿ ಪರಿಶೋಧಿಸುತ್ತಾನೆ. ಮತ್ತು ಅವುಗಳು ತೋರಿಕೆ, ಅಂತಸ್ತು, ಸ್ಥಾನಮಾನ, ಮತ್ತು ನೈತಿಕತೆಯ ನಿಯಮಗಳಷ್ಟೇ ವೈಯ್ಯುಕ್ತಿಕ ನಡವಳಿಕೆಗಳನ್ನು ನಿರ್ದೇಶಿಸುತ್ತಿದ್ದುದು. ಸಮಾಜದ ಕಟ್ಟಳೆಗಳ ಪ್ರಕ್ರಾರ ನಡೆದುಕೊಳ್ಳುವುದರ ಬದಲು ತನ್ನ ಹೃದಯದಿಂದ ಪುಟಿದೆದ್ದ ಭಾವನೆಗಳನ್ನು ಅನುಸರಿಸ ಬೇಕೆಂಬ ಅಘನಾಶಿನಿಯ ನಿರ್ಧಾರವು ಅವಳಿಗೆ ಬರೀ ಸಂಕಷ್ಟ ಮತ್ತು ಸಂಕಟವೊಂದನ್ನೇ ತಂದು ಕೊಡಲಿಲ್ಲ, ಅದು ಅವಳನ್ನು ಸಾಮಾಜಿಕವಾಗಿ ವಿನಾಶದೆಡೆಗೆ ತಳ್ಳಿತು. ಗೆಳತಿಯರಿಂದ ಅವಳು ಎದುರಿಸಿದ ತೀರ್ಮಾನ ತಿರಸ್ಕಾರಗಳು ಅವಳದಂತೆಹ ಕ್ಷಮಿಸುವ ಮನೋಭಾವವೇ ಇಲ್ಲದ ಸಮಾಜದ ನಡುವೆ ಬದುಕುತ್ತಿದ್ದಳು ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಅವಳು ಅದೆಂತಹ ಸಮಾಜದಲ್ಲಿ ಜೀವಿಸುತ್ತಿದ್ದಳು ಎಂದರೆ ಹೆಂಗಸರಿಗೆ ತಾಯ್ತನದ ಮತ್ತು ಮದುವೆಯ ಪರಿಕಲ್ಪನೆಯಿಂದ ಹೊರಬರುವುದೆಂದರೆ ಅದೊಂದು ಮಹಾಪರಾಧ ಎನ್ನುವಂತಹ ಸಮಾಜದಲ್ಲಿ ಬದುಕುತ್ತಿದ್ದಳು.
ಅಘನಾಶಿನಿಯ ಪಾತ್ರದ ಮೂಲಕ, ಟಾಲ್ಸ್ಟಾಯ್ ಪ್ರೀತಿಯಲ್ಲಿನ ಸಂಕೀರ್ಣತೆಗಳ ಪರಿಕಲ್ಪನೆಗಳನ್ನು ಅನ್ವೇಶಿಸುತ್ತಾನೆ. ಅದು ಹೇಗೆ ಅದಕ್ಕೆ ಉನ್ನತಿಯ ಕಡೆಗೆ ಕರೆದೊಯ್ಯ ಬಹುದು ಅಥವ ವಿನಾಶದೆಡೆಗೂ ಕೂಡ ಎಳೆದೊಯ್ಯ ಬಲ್ಲದು ಎಂದು, ಮತ್ತು ವ್ಯಕ್ತಿಗಳನ್ನು ಸಂತೋಷಕ್ಕೆ ಮತ್ತು ಹತಾಶೆಗೆ, ಎರಡಕ್ಕೂ ಕೂಡ ಈಡುಮಾಡಬಲ್ಲ ಶಕ್ತಿಯು ಅದಕ್ಕಿದೆ ಎಂದು. ಅಘನಾಶಿನಿಯ ತೀವ್ರವಾದ ಭಾವೋದ್ರಿಕ್ತ ಅನುಭವವನ್ನು ಹೆಚ್ಚು ಸ್ಥಿರತೆಯಿಂದ ಕೂಡಿದ ಸಾಂಪ್ರದಾಯಿಕವಾದ ತೇಜಸ್ವಿ ಮತ್ತು ಕ್ರಿಷ್ಣಳ ಸಂಬಂಧಕ್ಕೆ ಹೋಲಿಸಿದರೆ ಅದು ಬಹಳಷ್ಟು ಪರಸ್ಪರವಾಗಿ ವಿಭಿನ್ನತೆಯಿಂದ ಕೂಡಿದ್ದಾಗಿತ್ತು. ಈ ವಿಭಿನ್ನತೆಯು ಪ್ರೀತಿಯ ಬೇರೆ ಬೇರೆಯದೇ ರೀತಿಯ ಆಯಾಮಗಳನ್ನು ಸಚಿತ್ರಗೊಳಿಸುತ್ತದೆ. ತೇಜಸ್ವಿಯ ಪ್ರೀತಿಯು ಒಡನಾಟ, ಕರ್ತವ್ಯ ಮತ್ತು ನೈತಿಕತೆಯ ತಳಹದಿಯಲ್ಲಿ ಬೇರೂರಿದ್ದರೆ, ಅಘನಾಶಿನಿಯದು ಭಾವೋದ್ರಿಕ್ತತೆ, ಹಠಾತ್ ಪ್ರೇರಣೆ ಮತ್ತು ದುರಂತದಲ್ಲಿ ಅಂತ್ಯಗೊಳ್ಳುವಂತಹ ತಳಹದಿಯನ್ನು ಹೊಂದಿದ ಪ್ರೀತಿ ಅಂತ ಹೇಳಬಹುದು.
ಟಾಲ್ಸ್ಟಾಯ್ ಮೇಧಾವಿ ಅಂತ ಕರೆಸಿಕೊಳ್ಳುವುದಕ್ಕೆ ಕಾರಣ ಇಡೀ ಮಾನವನ ಅನುಭವದ ಸಂಪೂರ್ಣವಾದ ಮತ್ತು ವಿಶಾಲವಾದ ವ್ಯಾಪ್ತಿಯನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಹೊಂದಿರುವುದರಿಂದ. ಅವನು ಸೃಷ್ಟಿಸಿದ ಪಾತ್ರಗಳೆಲ್ಲವೂ ಸಂಕೀರ್ಣತೆಯಿಂದ ಕೂಡಿದ, ಅನೇಕ ಆಯಾಮಗಳನ್ನು ಹೊಂದಿದ, ಆಳವಾದಂತಹ ಮಾನವೀಯತೆಯಲ್ಲಿ ಮೆರೆಯುವ ಪಾತ್ರಗಳು. ಅವುಗಳು ವಿಶ್ವವ್ಯಾಪ್ತಿಯಾದ ಪ್ರಶ್ನೆಗಳಿಂದ ಕೂಡಿರುತ್ತವೆ, ಅದು ಪ್ರೀತಿಯ, ಸಂತೊಷದ ಮತ್ತು ನೈತಿಕತೆಯ ಸ್ವರೂಪದ ಬಗ್ಗೆ ಮತ್ತು ಬದುಕಿನ ಅರ್ಥದ ಬಗ್ಗೆ ವಿಶ್ಲೇಷಿಸುತ್ತದೆ, ಅವನ ಅಘನಾಶಿನಿಯ ಚಿತ್ರಣವು, ವಿಶಿಷ್ಟವಾಗಿ, ಸಹಾನುಭೂತಿಯಿಂದ ಮತ್ತು ಜೊತೆಜೊತೆಗೆ ನಿಷ್ಠುರವಾದ ವಿಮರ್ಶಾತ್ಮಕತೆಯಿಂದ ಕೂಡಿದೆ. ಅವಳೊಬ್ಬಳು ಬರೀ ಸರಳವಾದಂತಹ ಸಮಾಜದಲ್ಲಿನ ಬಲಿಪಷುವೊಂದೇ ಆಗಿರಲಿಲ್ಲ, ಅಥವ ಅವಳದೇ ಆದ ಆಯ್ಕೆಯಿಂದ ಈ ಸ್ಥಿತಿಯನ್ನು ತಲುಪಲಿಲ್ಲ, ಆದರೆ ಅವಳು ಸಂಪೂರ್ಣವಾಗಿ ಅರಿತುಕೊಂಡ ವ್ಯಕ್ತಿಯಾಗಿದ್ದಳು ಮತ್ತು ಅವಳ ಸತ್ವ ಮತ್ತು ನ್ಯೂನತೆಗಳನ್ನು ಶ್ರೇಷ್ಟವಾದ ಸೂಕ್ಷ್ಮಾತಿ ಸೂಕ್ಷ್ಮತೆಯಿಂದ ಚಿತ್ರಿಸಲಾಗಿದೆ.
ಈ ಎಲ್ಲಾ ವೈಯ್ಯುಕ್ತಿಕ ಸಂಬಂದಗಳ ಜೊತೆಗೇ ಈ ಪುಸ್ತಕದಲ್ಲಿ ಸಮಾಜವು ಬದಲಾವಣೆಗೊಳ್ಳುತ್ತಿದ್ದ ಕಾರ್ಯಗತಿಯನ್ನು ವಿವರವಾಗಿ ಪರಿಚಯಿಸಲಾಗಿದೆ. ತೇಜಸ್ವಿಯ (ಲೆವಿನ್) ಪಾತ್ರದ ಮೂಲಕ ಟಾಲ್ಸ್ಟಾಯ್ ಸಾಮಾಜಿಕ ಸುಧಾರಣೆ, ವ್ಯವಸಾಯ ಮತ್ತು ಗ್ರಾಮಾಂತರ ಮತ್ತು ನಗರದ ಜೀವನದ ಬಗ್ಗೆ ಮನೋಜ್ಞವಾಗಿ ವಿಶ್ಲೇಷಿಸುತ್ತಾನೆ. ತೇಜಸ್ವಿಯ ತನ್ನ ಕೃಷಿ ಭೂಮಿಯ ಬಗ್ಗೆಗಿನ ಹೆಣಗಾಟಗಳು, ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸ ಬೇಕೆನ್ನುವ ಅವನ ಇಚ್ಚೆ, ಮತ್ತು ಅವನ ಆಧ್ಯಾತ್ಮಿಕ ಜಿಜ್ಞಾಸೆಗಳ ಬಗ್ಗೆಗಿನ ಚಿಂತನೆ ಇವೆಲ್ಲವೂ ಟಾಲ್ಸ್ಟಾಯ್ ನ ವೈಯ್ಯುಕ್ತಿಕವಾದ ಅಭಿಪ್ರಾಯಕ್ಕೆ ಹೊಂದಿಕೊಳ್ಳುತ್ತದೆ ಅನ್ನುವ ರೀತಿಯಲ್ಲಿ ದೇಶವು ಪಯಣಿಸುತ್ತಿರುವ ನೈತಿಕ ಹಾದಿಯ ಬಗ್ಗೆಗಿನ ಕಾಳಜಿಯನ್ನು ಈ ಪುಸ್ತಕ ಪ್ರತಿಧ್ವನಿಸುತ್ತದೆ.
ಟಾಲ್ಸ್ಟಾಯ್ ನ ಗದ್ಯದ ಶೈಲಿಯು ಅದರ ವಾಸ್ತವಿಕತೆಯ ಮತ್ತು ಆಳವಾದ ಮನಶ್ಯಾಸ್ತ್ರೀಯ ವಿಶ್ಲೇಷಣೆಗಳ ಕಾರಣದಿಂದ ಗಹನವಾಗಿ ಗುರುತಿಸಲ್ಪಟ್ಟಿದೆ. ಅವನು ಸೃಷ್ಟಿಸಿದ ಪಾತ್ರಗಳ ಆಂತರಿಕ ಆಲೋಚನೆಗಳ ಮತ್ತು ಪ್ರೇರಣೆಗಳ ಬಗ್ಗೆ ಸ್ಪಂದಿಸುವ ಸಾಮರ್ಥ್ಯವು ಅವನಿಗೆ ಇದೆ. ಅದೇ ಕಾರಣಕ್ಕೆ ಅವನು ಅಳವಾಗಿ ತನ್ಮಯತೆಯನ್ನು ಉಂಟುಮಾಡುವ ಸಾಚ ಮತ್ತು ಅಪ್ಪಟ ಕಥನವನ್ನು ಸೃಷ್ಟಿ ಮಾಡುವ ಬರಹಗಾರನಾಗಿದ್ದಾನೆ. ಮಾನವನ ಸ್ವಭಾವಗಳ ಮತ್ತು ಸಮಾಜದ ಬಗ್ಗೆ ಅವನ ಗಮನ ಹರಿಸುವ ಶಕ್ತಿಯ ಕಾರಣದಿಂದ ಅದು ಅವನ ಕಾಲದಲ್ಲಿ ಇದ್ದಷ್ಟೇ ಈ ಕಾಲದಲ್ಲೂ ಕೂಡ ಪ್ರಸ್ತುತವಾಗಿದೆ.
ಕಡೆಯದಾಗಿ, ಅಘನಾಶಿನಿಯು (ಅನ್ನ ಕರೆನಿನ) ಮಾನವೀಯ ಭಾವನೆಗಳ ಸಂಕೀರ್ಣತೆಯಿಂದ ಕೂಡಿದ ಆಯಾಮಗಳ ಬಗ್ಗೆ ಮತ್ತು ಆಯ್ಕೆಗಳ ಕಾರಣಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪ್ರಸ್ತುತ ಪಡಿಸುವ ಕಾದಂಬರಿಯು ಇದಾಗಿದೆ. ಈ ಕಾದಂಬರಿಯು ಸ್ಪಷ್ಟವಾದ ಮತ್ತು ಎರಡು ಮಾತಿಲ್ಲದಂತಹ ಪ್ರೀತಿಯನ್ನು ಉತ್ಕರ್ಷಗೊಳಿಸುವ ಅಥವ ವಿನಾಶಗೊಳಿಸುವುದನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಮತ್ತು ಅದು ಸಂತೊಷದ ಆಯಾಮಗಳ, ನೈತಿಕ ಜವಾಬ್ದಾರಿಗಳ ಮತ್ತು ನಮ್ಮ ಜೀವನಕ್ಕೆ ರೂಪವೊಂದನ್ನು ಕೊಡುವ ಸಾಮಾಜಿಕ ಒತ್ತಡಗಳ ಬಗ್ಗೆ ಗಾಢವಾದ ಒಳನೋಟಗಳನ್ನು ಸವಿಸ್ತಾರವಾಗಿ ಬಿಂಬಿಸುತ್ತದೆ.
ಟಾಲ್ಸ್ಟಾಯ್ ನ ಈ ಮೇರು ಕೃತಿಯು ಎಲ್ಲಾ ವೈರುಧ್ಯಗಳ ಮತ್ತು ಸಂಕೀರ್ಣತೆಗಳ ನಡುವೆಯೂ ಮಾನವೀಯತೆಯನ್ನು ಉಳಿಸಿಕೊಳ್ಳುವುದು ಎಂದರೆ ಏನು ಎನ್ನುವುದರ ಬಗ್ಗೆ ಗಾಢವಾಗಿ ಅನ್ವೇಷಿಸುತ್ತದೆ.
ಅನ್ನ ಕರೆನಿನವನ್ನು ನಾನು ಓದಿದ ನಂತರ ಮನುಷ್ಯ ಸಹಜವಾದ ಸ್ಪಂದನೆಗಳು, ಭಾವಲಹರಿ, ನೈತಿಕತೆಯ ಬಗ್ಗೆಗಿನ ಮಾನವ ಸಹಜವಾದಂತಹ ಧೋರಣೆ ಮತ್ತು ಅದಲ್ಲದೇ ನೈತಿಕತೆಯ ಬಗ್ಗೆಗಿನ ವ್ಯಾಖ್ಯಾನ, ಇವೆಲ್ಲವೂ ಎಲ್ಲ ಮನುಷ್ಯ ಜೀವಿಗಳಲ್ಲಿಯೂ ಒಂದೇ ನಮೂನೆಯಲ್ಲಿ ಇರುವುದರ ಬಗ್ಗೆಗಿನ ಅರಿವು ನನಗಾಯಿತು. ಅದೇ ಕಾರಣಕ್ಕೆ ಈ ಕಾದಂಬರಿಯ ಭಾವಾನುವಾದವನ್ನು ನಮ್ಮ ಪರಿಸರಕ್ಕೆ ಅಳವಡಿಸಿಕೊಂಡು ಮಾಡಬೇಕೆಂದು ನಿರ್ಧರಿಸಿದೆ. ನದಿಗಳು ಮನುಷ್ಯನ ಕೊಳಕನ್ನೆಲ್ಲಾ ಹೊತ್ತುಕೊಂಡು ಸಮುದ್ರವನ್ನು ತಲುಪುವಾಗ ತನ್ನ ಪರಿಶುದ್ಧತೆ ಮತ್ತು ನಿರ್ಮಲತ್ವದಿಂದಲೇ ಸಾಗರವನ್ನು ಸೇರುವುದು ಮತ್ತು ಅದೇ ಸಮುದ್ರದ ಆವಿ ಪುನಃ ಮಳೆ ಸುರಿಸಿ ಸಮೃದ್ಧಿಯನ್ನು ಪುನಃಸ್ಥಾಪಿಸುವುದು. ಹೊರ ನೋಟಕ್ಕೆ ಅನ್ನ ಕರೆನಿನ ನೈತಿಕತೆಯ ಹಾದಿಯಿಂದ ಸ್ವಲ್ಪ ದೂರ ಸರಿದಳು ಎಂದಾದರೂ ಕೂಡ ತನ್ನ ಪರಿಶುದ್ಧ ಆಲೋಚನೆಗಳನ್ನು ಕಾಪಾಡಿಕೊಂಡು ಬಂದಳು. ಅದೇ ಕಾರಣಕ್ಕೆ ಅತ್ಯಂತ ಪರಿಶುದ್ಧವಾದ ನದಿಯಾದ ಅಘನಾಶಿನಿಯ ಹೆಸರನ್ನು ಈ ಕಾದಂಬರಿಗೆ ನಾನು ಇಟ್ಟಿದ್ದು. ಇದಲ್ಲದೇ ನನ್ನ ಹಿಂದಿನ ಕೃತಿಯ ಅನುವಾದದಲ್ಲಿ ಅಂದರೆ ದಾಸ್ತೊವಿಸ್ಕಿಯ ಬ್ರದರ್ಸ್ ಕರಮಜೋವ್ ನ ಅನುವಾದವನ್ನು ಓದುವಾಗ ಕೆಲವು ಓದುಗರು ರಷ್ಯದ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಸ್ವಲ್ಪ ಕಷ್ಟಕರ ಎಂಬುದರ ಬಗ್ಗೆ ನನಗೆ ತಿಳಿಸಿದ್ದರು. ಅದೇ ಕಾರಣಕ್ಕೆ ಹೆಸರಲ್ಲೇನಿದೆ ಭಾವವು ಒಂದೇ ಆಗಿದ್ದಾಗ ಎನ್ನುವ ಕಾರಣಕ್ಕೆ ಪ್ರತಿಯೊಂದು ಪಾತ್ರಕ್ಕೂ ನಮ್ಮ ದೇಶೀಯ ಹೆಸರುಗಳನ್ನು ಇಟ್ಟಿದ್ದೇನೆ. ಅದಲ್ಲದೇ ಮೂಲ ಕೃತಿಯಲ್ಲಿನ ಪ್ರಮುಖ ಪಾತ್ರಗಳ ಬದಲಾದ ಹೆಸರುಗಳ ಪಟ್ಟಿಯೊಂದನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.
ಇಲ್ಲಿ ಪ್ರಮುಖವಾಗಿ ಟಾಲ್ಸ್ಟಾಯ್ ಕೈಗೆತ್ತಿಕೊಂಡ ವಿಷಯವೆಂದರೆ ಜಮೀನುದಾರಿಕೆಯ ಮತ್ತು ಭೂಮಾಲೀಕತ್ವದ ಸಮಸ್ಯೆಯನ್ನು. ಅದರ ಬಗ್ಗೆ ತೇಜಸ್ವಿಯ ಪಾತ್ರದ ಮೂಲಕ ಸುಧಾರಣಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅದಲ್ಲದೇ ತೇಜಸ್ವಿಯ ನಾಸ್ತಿಕತೆಯ ಬಗ್ಗೆ ಅವನದೇ ಆದ ಪರ್ಯಾಲೋಚನೆಯನ್ನು ಬಿಂಬಿಸಲಾಗಿದೆ. ದೇವರ ಅಸ್ತಿತ್ವದ ಬಗ್ಗೆ ಅವನಿಗೆ ನಂಬಿಕೆಯಿಲ್ಲದಿದ್ದರೂ ತನ್ನ ಹೆಂಡತಿಯ ಪ್ರಸವದ ಸಮಯದಲ್ಲಿ ದೇವರ ಮೊರೆ ಹೋಗುವುದರ ಬಗ್ಗೆ ಮನೋಜ್ಞವಾಗಿ ಬಣ್ಣಿಸಲಾಗಿದೆ. ಕೊನೆಗೂ ತೇಜಸ್ವಿಯು ದೇವರೆಂದರೆ ತಪ್ಪು ಸರಿಗಳ ಕಲ್ಪನೆಗಳ ಬಗ್ಗೆಗಿನ ನಂಬಿಕೆ ಎಂಬ ತೀರ್ಮಾನಕ್ಕೆ ಬರುತ್ತಾನೆ.
ಈ ಭಾವಾನುವಾದವನ್ನು ಮಾಡುವ ಆಲೋಚನೆ ಬಂದಾಗ ಪ್ರಕಾಶಿಸಲು ಮುಂದೆ ಬಂದ ಸೃಷ್ಟಿ ಪ್ರಕಾಶನ ಸಂಸ್ಥೆಯ ನಾಗೇಶ್ ಅವರಿಗೆ ನಾನು ಚಿರಋಣಿ.






0 Comments