ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’

maamuli-gand-1-11

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ‘ನೀನು ಕಥೆಗಳನ್ನು ಬರೆಯುತ್ತಾ ಇರಬೇಕು…’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ.

ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ‘ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ‘ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.26ರಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ‘ಉಡಿಯಲ್ಲಿಯ ಉರಿ’ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ.

ಎರಡನೇ ಕಥಾ ಸಂಕಲನ ‘ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ‘ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ.

ಫೆಬ್ರುವರಿ-09ರ ಮಯೂರದಲ್ಲಿ ‘ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್ ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ… “ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ‘ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್ ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’

ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ‘ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ‘ದೊಡ್ಡವರ ನಾಯಿ’, ‘ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ.

ಹೀಗೆ ಏನೇ ಹೇಳಿದರೂ ‘ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ.

ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ… ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.

ನಿಮ್ಮ ಪ್ರೀತಿಯ ಬಯಸುತ್ತಾ…

mkmk1

ಸಂಪರ್ಕ

ಕಲಿಗಣನಾಥ ಗುಡದೂರು

ಇಂಗ್ಲಿಷ್ ಉಪನ್ಯಾಸಕ

ಸಂಕೇತ ಪಿ.ಯು.ಕಾಲೇಜ್

ಸಿಂಧನೂರು-584128

ಜಿಲ್ಲೆ: ರಾಯಚೂರು

ಮೊ: 9916051329

‍ಲೇಖಕರು avadhi

1 March, 2009

1 Comment

  1. ನಾಗತಿಹಳ್ಳಿ ರಮೇಶ

    ಅಕ್ಕರೆಯ ಕಗು ನೀನು ನಿನ್ನ ಬರವಣಿಗೆ, ನಿನ್ನೆಲ್ಲ ಬದುಕನ್ನು ಅವ್ವ ನೊಂದಿಗೆ ನೋಡುವ ಸೌಭಾಗ್ಯ ನನ್ನದು ನಿನ್ನದು. ಸದಾ ಕಾಡುವ ನಿನ್ನ ಮಗುವಂತ ಮನಸ್ಸು ನನ್ನಲ್ಲಿ ಸಾವಿರಾರು ಆನೆಬಲ ತಂದಿದೆ. ಕೂಡಿ ಕಟ್ಟುವ ಬಾಳಿಸುವ ಕಾಲವೇ ನಮ್ಮತ್ತ ಸರಿದು ಬಂದಿದೆ. ಮಾಮೂಲಿ ಗಾಂಧಿ ನಾಡಿನೆಲ್ಲೆಡೆ ಪಸರಿಸಲಿ. ಯುನಿವರ್ಸಿಟಿ, ಅಕಾಡೆಮಿ ಉಪನ್ಯಾಸ ಗಳೆಲ್ಲ ಕೆ.ಎಚ್.ರಂಗನಾಥ್, ಎಚ್.ಜಿ.ಗೋವಿಂದೇಗೌಡ, ಸ.ರಘುನಾಥ, ಕೊಟಗನಹಳ್ಳಿ ರಾಮಯ್ಯ, ಜೆನ್ನಿ, ಮಹಂತೇಶ ನವಕಲ್, ರಂಜಾನ್ ದರ್ಗಾ, ಜೆಸ್ಟಿಸ್. ನಾಗಮೋಹನ್ ದಾಸ್, ಬಾಲೆನಹಳ್ಳಿ ನರಸಿಂಹಮೂರ್ತಿ, ಎಂ,ಎಸ್,ಜಹಂಗೀರ್, ಸೂಫಿ ಸೈಂಟಿಸ್ಟ್. ವಿ.ಟಿ.ಪದ್ಮನಾಭ, ಎಸ್.ದಿವಾಕರ್, ವಸುಧೇಂದ್ರ, ವಿ.ಆರ್,ಕಾರ್ಪೆ೦ಟರ- ಇನ್ನೂ ಅನೇಕಾನೇಕ ಮಂದಿಯನ್ನು ಕಂಡು ಅ ನಿಜವಾದ ಕಲೆಯನ್ನು ಕಾಣಬೇಕಾಗಿದೆ. ಆಗ ಅವಕ್ಕೆ ವಸ್ತುಗಳ ಹಿಂಬಾಲಿಸುವ ಗುಣ ಕಾಣೆಯಾಗಿ ಘನ ಕಾಣುವುದು. ನಿನ್ನೆ ರಾತ್ರಿಯಿಂದ ಒಂದು ಜೀವ ಮತ್ತೆ ಮತ್ತೆ ಕಾಡುತ್ತಿದೆ, ಯಾಕೆ ಗೊತ್ತ ಬರೀ ಬಿಟ್ಟಿ ಉಪದೇಶಗಳನ್ನು ಕೊಡುವ ಬರೆಯುವ ಮಹಾನ್ ಕವಿಗಳು, ಕಥೆಗಾರರು, ನಾಟಕಕಾರರ ಬರಿದಾದ ಬೋಳಿಸುವ ಬದುಕ ಕಂಡು ನೊಂದ ಬೆಂದ ನನ್ನ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು, ಬದುಕ ಕಟ್ಟಿಕೊಳ್ಳಲು ಹೆಣಗುತ್ತಿದ್ದ, ಕೊರಗುತ್ತಿದ್ದ ಬೇಸತ್ತು ಅಳುತಿದ್ದ ಆ ಕೇರಿ ಹುಡುಗನಿಗೆ ಬದುಕ ಕಟ್ಟಿಕೊಡಲು ಮುಂದೆಬಂದ ತಾಯ್ತನದ ಅತುಕೊಳ್ಳುವ ಜೀವ ವಸುಧೇಂದ್ರನ ಪ್ರೀತಿ, ಕಾಳಜಿ, ನನಗೆ ನನ್ನವ್ವ ಸಿಕ್ಕಿದಂತಾಗಿದೆ. ಇಷ್ಟು ಸಾಕು. ಮುಂದೆ…
    -ನಾಗತಿಹಳ್ಳಿ ರಮೇಶ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading