
ಎ ನಾಗಿಣಿ
ಎ ನಾಗಿಣಿ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್ ಮತ್ತು ಚಿನ್ನದ ಪದಕದೊಡನೆ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ತೆಲುಗಿನಿಂದ ಅನುವಾದಿಸಿದ ಲೇಖಕಿ ಓಲ್ಗಾ ಅವರ ʼಆತ್ಮ ಸಂಗಾತʼ ಇವರ ಮೊದಲ ಅನುವಾದಿತ ಕಥೆ. ಯುವ ಬರಹಗಾರರಾದ ನಾಗಿಣಿ ಸದ್ಯ ಬೆಂಗಳೂರಿನ ಐ.ಎಸ್.ಬಿ.ಆರ್. ಕಾನೂನು ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಈ ಸಂಚಿಕೆಯಲ್ಲಿ ಪಿ. ಸತ್ಯವತಿಯವರ ಕತೆಯೊಂದನ್ನು ತೆಲುಗಿನಿಂದ ಅನುವಾದಿಸಿದ್ದಾರೆ.

೧೯೪೦ ರಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲಕಲೂರಿನಲ್ಲಿ ಪಿ. ಸತ್ಯವತಿ ಜನಿಸಿದರು. ಆಂಧ್ರ ಕಲಾಪರಿಷತ್ತಿನಿಂದ ಎಂ.ಎ.ಇಂಗ್ಲಿಷ್ ಪದವಿ ಪಡೆದ ಅವರು ವಿಜಯವಾಡದ ಎಸ್.ಎ.ಎಸ್. ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಇವರು ಅಧ್ಯಯನ ಮಾಡಿದ್ದು ಇಂಗ್ಲಿಷ್ ಸಾಹಿತ್ಯವಾದರೂ ಪರಿಶೀಲಿಸಿದ್ದು ತೆಲುಗು ಸಮಾಜ. ಇವರು ಮುಖ್ಯವಾಗಿ ಕಥಾ ಪ್ರಕಾರದಲ್ಲಿ ಬರೆದವರು. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರಿಗಿರುವ ಸಮಸ್ಯೆಗಳಿಗಿಂತ ತಾವೇ ಮೇಲೆಳೆದುಕೊಳ್ಳುವ ಸಮಸ್ಯೆಗಳು ಹೆಚ್ಚಾದಲ್ಲಿ ಅವರ ಮೇಲೆ ಸಮಾಜ ಹೇರುವ ನಿರ್ಬಂಧಗಳು, ಅವಮಾನಗಳಿಗೆ ಕೊನೆಯೇ ಇರುವುದಿಲ್ಲ. ಇದನ್ನು ಸಮರ್ಥವಾಗಿ ಎದುರುಗೊಳ್ಳಬೇಕಾದರೆ ಸಮಸ್ಯೆಯ ಸ್ವರೂಪದ ಅರಿವು ಮುಖ್ಯವೆಂಬುದನ್ನು ಸತ್ಯವತಿ ಅವರ ಕಥೆಗಳು ಮಾತನಾಡುತ್ತವೆ.
ಮರ್ರಿನೀಡ, ಸತ್ಯವತಿ ಕಥಲು, ಇಲ್ಲಲಕಗಾನೇ, ಮಂತ್ರನಗರಿ ಕಥಾಸಂಕಲನಗಳು. ಪಡುಚುದನಂ ರೈಲುಬಂಡಿ, ಗೊಡುಗು, ಆ ತಪ್ಪು ನೀದಿ ಕಾದು ಕಾದಂಬರಿಗಳು. ಮೆಲಕುವ, ರಾಗಭೂಪಾಲಂ ಪ್ರಬಂಧ ಸಂಕಲನಗಳು. ಡಾ.ಭೋಯಿಭೀಮನ್ನ ಸಾಹಿತ್ಯ ಪ್ರಶಸ್ತಿ, ಮಾಲತಿ ಚಂದೂರ್ ಪ್ರಶಸ್ತಿ, ಗುರಜಾಡ ಪ್ರಶಸ್ತಿ, ಆಂಧ್ರ ಪ್ರದೇಶ ಸರಕಾರದಿಂದ ಕಳಾರತ್ನ ಪ್ರಶಸ್ತಿ, ೨೦೧೯ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, ೨೦೨೦ ರಲ್ಲಿ ಕುವೆಂಪು ರಾಷ್ಟ್ರಿಯ ಪ್ರಶಸ್ತಿಗಳು ಸತ್ಯವತಿಯವರ ಸಾಹಿತ್ಯ ಕೃಷಿಗೆ ಸಂದ ಗೌರವ.
ಗರತಿ ಆಗುವ ಮುನ್ನ ಆಕೆ ಒಬ್ಬ ಯುವತಿ. ವಿದ್ಯೆ, ಬುದ್ಧಿ, ಸಮಯಸ್ಫೂರ್ತಿ, ಕೌಶಲ, ಹಾಸ್ಯ, ಲಾಸ್ಯ ಎಲ್ಲಾ ಬೆರೆತ ಸುಂದರ ಹುಡುಗಿ.
ಹುಡುಗಿಯ ಅಂದ ಚೆಂದ, ಜಾಣತನ, ಅವಳ ಅಪ್ಪ ಆಫರ್ ಮಾಡಿದ ವರದಕ್ಷಿಣೆ ಹಿಡಿಸಿದ ಹುಡುಗನೊಬ್ಬ ಆ ಹುಡುಗಿಯ ಕೊರಳಲ್ಲಿ ತಾಳಿ ಹಾಕಿ, ಒಂದು ಮನೆಗೆ ಒಡತಿಯಾಗಿಸಿ, ‘ಇಗೋ ಅಮ್ಮಣ್ಣಿ ಈ ಮನೆ ನಿನ್ನದು’ ಅಂದ. ಕೂಡಲೇ ಗರತಿ ಸೆರಗು ಸೊಂಟಕ್ಕೆ ಬಿಗಿದು, ಮನೆ ಸಾರಿಸಿ ಸುಂದರವಾದ ರಂಗೋಲಿ ಬಿಡಿಸಿದಳು. ಆ ಒಡೆಯ ಕೂಡಲೇ ಗರತಿಯನ್ನು ಮೆಚ್ಚಿ, ‘ನೀನು ಮನೆ ಸಾರಿಸುವುದರಲ್ಲಿ ಪಳಗಿದವಳು – ರಂಗೋಲಿ ಹಾಕುವಲ್ಲಿ ಅದಕ್ಕಿಂತಲೂ ಕೈ ತಿರುಗಿದವಳು- ಶಭಾಷ್! ಕೀಪ್ ಇಟ್ ಅಪ್ ಎಂದು ಇಂಗ್ಲೀಷಿನಲ್ಲಿ ಮೆಚ್ಚಿ ಭುಜ ತಟ್ಟಿದ.
ಅಷ್ಟೇ. ಆ ಗರತಿ ಉಬ್ಬಿ ಹೋದಳು. ಮನೆ ಸಾರಿಸುವುದೊಂದೇ ಪರಮ ಧ್ಯೇಯವಾಗಿ ಬದುಕು ಮುಂದುವರೆಸಿದಳು. ಯಾವಾಗಲೂ ಮನೆಯನ್ನು ಶುಭ್ರವಾಗಿ ಸಾರಿಸಿ ಬಣ್ಣ ಬಣ್ಣದ ರಂಗವಲ್ಲಿಯಿಂದ ತಿದ್ದಿ ತೀಡುತ್ತಿದ್ದಳು. ಆ ಚೆಂದವಾಗಿ ಅವಳ ಬದುಕು ಮೂರು ಒರಸು ಬಟ್ಟೆಗಳೂ ಆರು ರಂಗೋಲಿ ಬುಟ್ಟಿಗಳೂ ಆಯಿತು. ಹೀಗೇ ಒಂದು ದಿನಾ ಆ ಗರತಿ ಮನೆಸಾರಿಸುತ್ತಾ ಸಾರಿಸುತ್ತಾ ‘ನನ್ನ ಹೆಸರೇನಪ್ಪ!’ ಅಂದುಕೊಂಡಳು. ಹಾಗಂದುಕೊಂಡು ಬೆಚ್ಚಿ ಬಿದ್ದಳು. ಕೈಯಲ್ಲಿದ್ದ ಬಟ್ಟೆ, ಬುಟ್ಟಿ ಬಿಸಾಕಿ ಕಿಟಕಿಯ ಹತ್ತಿರ ನಿಂತು ತಲೆ ಕೆರೆದುಕೊಳ್ಳುತ್ತಾ, ‘ನನ್ನ ಹೆಸರೇನು….. ನನ್ನ ಹೆಸರೇನು!’ ಎಂದು ತುಂಬಾ ಯೋಚನೆ ಮಾಡಿದಳು. ಎದುರಿನ ಮನೆಯ ಮುಂದೆ ನೇಮ್ ಬೋರ್ಡ್ ನೇತಾಡುತ್ತಿತ್ತು. ಮಿಸೆಸ್ ಎಂ.ಸುಹಾಸಿನಿ ಎಂ.ಎ.ಪಿ.ಎಚ್ ಡಿ. – ಪ್ರಿನ್ಸಿಪಾಲ್ ‘ಎಕ್ಸ್’ ಕಾಲೇಜು ಎಂದು ಬರೆದಿತ್ತು. ಹೌದು ನನಗೂ ಒಂದು ಹೆಸರು ಇತ್ತಲ್ಲವಾ – ಮರೆತೇ ಬಿಟ್ಟೆನಲ್ಲಾ? ಮನೆ ಸಾರಿಸುವ ಸಂಭ್ರಮದಲ್ಲಿ ಹೆಸರು ಮರೆತು ಬಿಟ್ಟೆ. ಈಗ ಏನು ಮಾಡಲಿ ಎಂದು ಆ ಗರತಿ ಗಾಬರಿಯಾದಳು. ಮನಸು ಸಿಕ್ಕು ಸಿಕ್ಕಾಯಿತು. ಆ ಹೊತ್ತಿಗೆ ಹೇಗೋ ಮನೆ ಸಾರಿಸಿದಳು. ಅಷ್ಟರಲ್ಲಿ ಕೆಲಸದವಳು ಬಂದಳು. ಹೋಗಲಿ ಅವಳಿಗಾದರೂ ನೆನಪಿರಬಹುದೆಂದು, ‘ಹುಡುಗಿ, ನಿನಗೆ ನನ್ನ ಹೆಸರು ಗೊತ್ತಾ!’ ಎಂದು ಕೇಳಿದಳು.
‘ಅಯ್ಯೋ ಒಡತಿಯರ ಹೆಸರಿನಿಂದ ನಮಗೇನಾಗಬೇಕು ತಾಯಿ! ನಮಗೆ ನೀವೆಂದರೆ ಒಡತಿಯೇ! ಇಂಥಿಂಥಾ ಬಿಳಿಯ ಬಿಲ್ಡಿಂಗ್ ನ ಕೆಳಗಿನ ಪೋರ್ಷನ್ ನ ಒಡತಿಯೆಂದರೆ ನೀವು’ ಅಂದಳು ಕೆಲಸದವಳು.
‘ಹೌದು ಬಿಡು. ನಿನಗೆ ಹೇಗೆ ಗೊತ್ತಾಗಬೇಕು’ ಅಂದುಕೊಂಡಳು ಗರತಿ.

ಮಕ್ಕಳು ಸ್ಕೂಲಿನಿಂದ ಮಧ್ಯಾಹ್ನ ಊಟಕ್ಕೆ ಬಂದರು. ಮಕ್ಕಳಿಗಾದರೂ ನೆನಪಿರಬಹುದು ನನ್ನ ಹೆಸರು ಅಂದುಕೊಂಡಳು ಗರತಿ.
‘ಮಕ್ಕಳಾ, ನನ್ನ ಹೆಸರು ಗೊತ್ತಾ?’ ಎಂದು ಕೇಳಿದಳು. ಅವರಿಗೆ ಆಶ್ಚರ್ಯವೋ ಆಶ್ಚರ್ಯ. ‘ನೀನು ಅಮ್ಮ…ನಿನ್ನ ಹೆಸರು ಅಮ್ಮನೇ….ನಾವು ಹುಟ್ಟಿದಾಗಿನಿಂದ ನೀನು ಅಮ್ಮ ಅಂತ ಗೊತ್ತು ಅಷ್ಟೇ. ಅಪ್ಪನ ಹೆಸರಿಗೆ ಪತ್ರಗಳು ಬರುತ್ತವೆ. ಅವರನ್ನು ಎಲ್ಲರೂ ಅದೇ ಹೆಸರಿನಿಂದ ಕರೆಯುತ್ತಾರಲ್ಲ ಅದಕ್ಕೇ ನಮಗೆ ಗೊತ್ತು. ನಿನ್ನ ಹೆಸರು ನೀನು ಯಾವತ್ತೂ ನಮಗೆ ಹೇಳಲೇ ಇಲ್ಲ! ಹೋಗಲಿ ನಿನ್ನ ಹೆಸರಿಗೆ ಪತ್ರಗಳೂ ಬರುವುದಿಲ್ಲ’ ಅಂದುಬಿಟ್ಟರು ಮಕ್ಕಳು. ಹೌದು ಅವಳಿಗೆ ಪತ್ರಗಳು ಬರೆಯುವುದಾದರೂ ಯಾರು? ಅಪ್ಪ ಅಮ್ಮ ಇರುವರಾದರೂ ತಿಂಗಳಿಗೆ, ಎರಡು ತಿಂಗಳಿಗೊಮ್ಮೆ ಫೋನು ಮಾಡುತ್ತಾರೆ. ತಂಗಿ, ಅಕ್ಕ ಕೂಡ ಅವರವರ ಮನೆ ಸಾರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ. ಅವರು ಯಾವುದಾದರೂ ಮದುವೆ, ಪೂಜೆ ಅಂತ ಸಿಕ್ಕಾಗ ಹೊಸ ರಂಗವಲ್ಲಿಗಳ ಕುರಿತೋ… ಹೊಸ ಅಡುಗೆಯ ಕುರಿತೋ ಮಾತಾಡಿದ್ದೇ ಬಿಟ್ಟು ಪತ್ರಗಳಿಲ್ಲ. ಗರತಿ ನಿರಾಶಳಾದಳು. ಅಶಾಂತಿ ಹೆಚ್ಚಾಯಿತು. ಆಕೆಯ ಹೆಸರು ಹೇಗಾದರೂ ನೆನಪಿಸಿಕೊಳ್ಳಬೇಕೆಂದು ಪರಿತಪಿಸಿದಳು. ಅಷ್ಟರಲ್ಲಿ ನೆರೆ ಮನೆಯ ಗರತಿ ಕುಂಕುಮಕ್ಕೆ ಕರೆಯಲು ಬಂದಳು. ಹೋಗಲಿ ಆಕೆಗಾದರೂ ನೆನಪಿರಬಹುದಾ ಎಂದು ಕೇಳಿದಾಗ ಆಕೆ ಕಿಸಕ್ಕನೆ ನಕ್ಕುಬಿಟ್ಟು, ‘ಹೌದೌದು! ನಿಮ್ಮ ಹೆಸರು ನಾನು ಕೇಳಿದ್ದೂ ಇಲ್ಲ, ನೀವು ಹೇಳಿದ್ದೂ ಇಲ್ಲ. ಬಲಗಡೆಯ ಬಿಳಿಯ ಬಿಲ್ಡಿಂಗ್ ನಲ್ಲಿರುವವಳು, ಅಗೋ ಆ ಔಷಧಿ ಕಂಪೆನಿಯ ಮೇನೇಜರ್ ಅವರ ಹೆಂಡತಿ ಅಂತಲೋ ಇಲ್ಲವಾದರೆ ಕೆಂಪಗೆ, ತೆಳ್ಳಗೆ, ಎತ್ತರಕ್ಕಿರುವಾಕೆ ಅಂತಲೋ ಮಾತಾಡಿಕೊಳ್ಳುತ್ತೇವೆ……’ ಹೀಗಂದು ಬಿಡಬೇಕೇ ಆ ಗರತಿ.
ಇನ್ನು ಲಾಭವಿಲ್ಲ…. ಮಕ್ಕಳು ಸ್ನೇಹಿತರು ಏನು ಹೇಳಿಯಾರು…. ಅವರಿಗೆ ಕಮಲಾಳ ಅಮ್ಮ ಅಂತಲೋ, ಆಂಟೀ ಅಂತಲೋ ಗೊತ್ತು. ಇನ್ನು ಪತಿ ಮಹಾಶಯರೊಬ್ಬರೇ ಗತಿ….ನೆನಪಿದ್ದರೆ ಅವರಿಗೆ ಮಾತ್ರ ಇದ್ದಿರಬೇಕು.
ರಾತ್ರಿ ಊಟಕ್ಕೆ ಕೂತಾಗ ಕೇಳಿದಳು. ‘ಏನ್ರೀ ನನ್ನ ಹೆಸರು ಮರೆತು ಹೋದೆ ಕಣ್ರೀ…ನಿಮಗೆ ನೆನಪಿದ್ದರೆ ಹೇಳುತ್ತೀರಾ!’
ಪತಿ ಮಹಾಶಯರು ಜೋರಾಗಿ ನಕ್ಕುಬಿಟ್ಟು ‘ಅದೇನು ಇವಳೇ ಯಾವತ್ತೂ ಇಲ್ಲದ್ದು ಈ ದಿನ ಹೆಸರಿನ ಪ್ರಸ್ತಾಪ? ನಿನ್ನನ್ನು ಮದುವೆ ಆದಾಗಿನಿಂದ ‘ಇವಳೇ’ ಎಂದು ಕರೆಯುವುದು ರೂಡಿಯಾಗಿಬಿಟ್ಟಿದೆ. ನೀನು ಕೂಡ ಯಾವತ್ತೂ ಹಾಗೆ ಕರೆಯಬೇಡಿ, ನನಗೂ ಒಂದು ಹೆಸರಿದೆ ಎಂದು ಹೇಳಿದ್ದೇ ಇಲ್ಲ…ಹಾಗಾಗಿ ನನಗೂ ಮರೆತು ಹೋಯಿತು….ಆದರೇನು? ನಿನ್ನನ್ನು ಎಲ್ಲಾ ಮಿಸೆಸ್ ಮೂರ್ತಿ ಎಂದು ಗುರುತಿಸುತ್ತಾರಲ್ಲ’
‘ಮಿಸೆಸ್ ಮೂರ್ತಿ ಅಲ್ಲ ರೀ, ನನ್ನ ಹೆಸರು ನನಗೆ ಬೇಕು – ಈಗ ಏನು ಮಾಡುವುದು?’ ಅಂದಳು ವೇದನೆಯಿಂದ.
‘ಅದಕ್ಕೇನು. ಹೋಗಲಿ ಯಾವುದೋ ಒಂದು ಹೊಸ ನಾಮಕರಣ ಮಾಡಿಕೊಂಡರಾಯಿತು’ ಎಂದು ಆತ ಸಲಹೆ ಇತ್ತ.
‘ಇದೊಳ್ಳೆ ಕಥೆ ಆಯ್ತಲ್ಲ…ನಿಮ್ಮ ಹೆಸರು ಸತ್ಯನಾರಾಯಣ ಮೂರ್ತಿ ಆಗಿರುವಾಗ ನಿಮ್ಮನ್ನು ಶಿವರಾವು ಅಂತಲೋ ಸುಂದರರಾವು ಅಂತಲೋ ಕರೆದರೆ ಸುಮ್ಮನಿರುತ್ತೀರಾ? ನನ್ನ ಹೆಸರೇ ನನಗೆ ಬೇಕು’ ಅಂದಳು.
‘ಓದಿಕೊಂಡಿದ್ದೀ ತಾನೇ…ಸರ್ಟಿಫಿಕೇಟಿನ ಮೇಲೆ ಹೆಸರು ಇರುತ್ತದಲ್ಲ. ಅಷ್ಟೂ ಕಾಮನ್ ಸೆನ್ಸ್ ಇಲ್ಲವಾದರೆರ ಹೇಗೆ…ಹೋಗಿ ನೋಡಿಕೋ’ ಆತ ಮತ್ತೊಂದು ಸಲಹೆ ಕೊಟ್ಟ.
ಗರತಿ ಸರ್ಟಿಫಿಕೇಟ್ ಗಾಗಿ ಲಗುಬಗೆಯಿಂದ ಹುಡುಕಿದಳು…ಬೀರುವಿನಲ್ಲಿ ರೇಷ್ಮೆ ಸೀರೆ, ಷಿಫಾನ್ ಸೀರೆ, ವಾಯಿಲ್ ಸೀರೆ, ಅವುಗಳಿಗೆ ಮ್ಯಾಚಿಂಗ್ ಕುಪ್ಪಸ,ಲಂಗ,ಬಳೆ, ಮುತ್ತು, ಪಿನ್ನು,ಕುಂಕುಮ ಡಬ್ಬಿ, ಗಂಧದ ಭರಣಿ, ಬೆಳ್ಳಿ ತಟ್ಟೆ, ಬಂಗಾರದ ಒಡವೆ ಎಲ್ಲಾ ಅಚ್ಚುಕಟ್ಟಾಗಿ ಹೊಂದಿಸಿ ಕಂಡಿದ್ದವೇ ಹೊರತು ಸರ್ಟಿಫಿಕೇಟಿನ ಸುಳಿವೇ ಇಲ್ಲ. ಹೌದು. ಮದುವೆ ಆಗಿ ಈ ಮನೆಗೆ ಬಂದಾಗ ಜೊತೆಗೆ ತಂದಿರಲಿಲ್ಲ..
‘ಏನೂಂದ್ರೆ….ನಾನು ಯಾವ ಸರ್ಟಿಫಿಕೇಟೂ ಇಲ್ಲಿಗೆ ತಂದಿರಲಿಲ್ಲ…. ತವರಿಗೆ ಹೋಗಿ ಹುಡುಕಿ ನನ್ನ ಹೆಸರು ಕೇಳಿ ತಿಳಿದುಕೊಂಡು ಎರಡೇ ದಿನಗಳಲ್ಲಿ ವಾಪಸು ಬಂದುಬಿಡತೇನೆ’ ಎಂದು ಗಂಡನನ್ನು ಕೇಳಿದಳು.
‘ಇದೊಳ್ಳೆ ಕಥೆ ಆಯ್ತಲ್ಲ. ಹೆಸರಿಗಾಗಿ ಊರಿಗೆ ಹೋಗಬೇಕಾ? ನೀನು ಊರಿಗೆ ಹೋದರೆ ಈ ಎರಡು ದಿನ ಮನೆ ಸಾರಿಸುವವರು ಯಾರು?’ ಅಂದ ಗಂಡ. ನಿಜವೇ…ಅವಳು ಎಲ್ಲರಿಗಿಂತ ಚೆನ್ನಾಗಿ ಸಾರಿಸುವಳೆಂದಲ್ಲವೇ ಇಷ್ಟು ದಿನ ಆ ಕೆಲಸ ಬೇರೆಯವರಿಗೆ ಬಿಟ್ಟು ಕೊಡದಿರುವುದು. ಯಾರ ಹೊರೆ ಅವರಿಗೇ ಇದೆ. ಇವರಿಗೆ ಆಫೀಸು…. ಮಕ್ಕಳಿಗೆ ಸ್ಕೂಲು….ಪಾಪ ಅವರಿಗೆ ಯಾಕೆ ಈ ಶ್ರಮ ಎಲ್ಲ…ಅಂದುಕೊಂಡು ಇಷ್ಟು ದಿನ ತಾನೇ ಈ ಕೆಲಸಗಳೆಲ್ಲ ಮಾಡುತ್ತಾ ಬಂದಳು. ಪಾಪ ಇದೆಲ್ಲಾ ಅವರ ಕೈಲಾಗಲ್ಲ.
ಅಷ್ಟಕ್ಕೂ ಹೆಸರೇ ಗೊತ್ತಿಲ್ಲದೇ ಹೇಗೆ ಬದುಕುವುದು.
ಇಷ್ಟು ದಿನ ಆ ಸಂಗತಿ ನೆನಪಾಗಿಲ್ಲದ ಕಾರಣ ಈ ಹಿಂಸೆ ಇರಲಿಲ್ಲ. ಈಗ ನೆನಪಾದ ಮೇಲೆ ತುಂಬಾ ಕಷ್ಟವಾಗುತ್ತಿದೆ.

‘ಎರಡು ದಿನ ಹೇಗಾದರೂ ನಿಭಾಯಿಸಿಕೊಳ್ಳಿ…. ನಾನು ಹೋಗಿ ನನ್ನ ಹೆಸರು ತಿಳಿದುಕೊಳ್ಳದಿದ್ದರೆ ಬದುಕಲಾರೆ’ ಎಂದು ಬೇಡಿಕೊಂಡು ಹೊರಬಿದ್ದಳು ಗರತಿ.
‘ಯಾಕಮ್ಮಾ ಇದ್ದಕ್ಕಿದ್ದಂತೆ ಬಂದೆ? ಅಳಿಯ, ಮಕ್ಕಳು ಕ್ಷೇಮವಾ? ಒಬ್ಬಳೇ ಬಂದೆ?’ ಎಂದು ಅಪ್ಪ ಅಮ್ಮ ಆತ್ಮೀಯತೆಯಿಂದ ಮಾತನಾಡಿಸಿದರೂ ಅದಕ್ಕೆ ಸಂಕೋಚದ ಎಳೆಯನ್ನೂ ಜೋಡಿಸಿದರು. ಬಂದ ಕೆಲಸ ತಕ್ಷಣ ನೆನಪಾಗಿ…
‘ಅಮ್ಮ ನನ್ನ ಹೆಸರು ಏನು ಹೇಳಮ್ಮಾ..’ ಗರತಿ ದೀನಳಾಗಿ ಕೇಳಿದಳು.
‘ನೀನು ನಮ್ಮ ಹಿರಿಯ ಮಗಳು. ಬಿ.ಎ ತನಕ ಓದಿಸಿ, ಐವತ್ತು ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡಿದೆವು… ಎರಡು ಹೆರಿಗೆ ಮಾಡಿಸಿದೆವು.. ಪ್ರತಿ ಹೆರಿಗೆಗೂ ನಾವೇ ಆಸ್ಪತ್ರೆಯ ಖರ್ಚು ನೋಡಿಕೊಂಡೆವು…ನಿನಗೆ ಇಬ್ಬರು ಮಕ್ಕಳು. ನಿನ್ನ ಗಂಡನಿಗೆ ಒಳ್ಳೆಯ ನೌಕರಿ. ತುಂಬಾ ಒಳ್ಳೆಯವನು ಕೂಡ. ನಿನ್ನ ಮಕ್ಕಳು ಬುದ್ಧಿವಂತರು.
‘ನನ್ನ ಚರಿತ್ರೆ ಅಲ್ಲಮ್ಮಾ….ನನ್ನ ಹೆಸರು ಬೇಕಮ್ಮಾ ನನಗೆ. ಹೋಗಲಿ ನನ್ನ ಸರ್ಟಿಫಿಕೇಟು ಎಲ್ಲಿವೆ ಅಂತಾದರೂ ಹೇಳು’.
‘ಗೊತ್ತಿಲ್ಲಮ್ಮಾ ಈ ನಡುವೆ ಅಲ್ಮೇರಾದಲ್ಲಿನ ಹಳೆಯ ಹಾಳೆಗಳೆಲ್ಲಾ ತೆಗಿಸಿ ಗಾಜಿನ ಸಾಮಾನು ಹೊಂದಿಸಿದೆವು. ಕೆಲವು ಮುಖ್ಯ ಅನಿಸಿದ ಫೈಲುಗಳೆಲ್ಲಾ ಅಟ್ಟದ ಮೇಲೆ ಹಾಕಿದೆವು…ನಾಳೆ ಹುಡುಕಿಸಿದರಾಯಿತು…ಈಗ ಅದಕ್ಕೇನು ಅವಸರ..ಹಾಯಾಗಿ ಸ್ನಾನ ಮುಗಿಸಿ ಊಟ ಮಾಡಮ್ಮಾ’ ಅಂದಳು ಆ ಗರತಿಯ ತಾಯಿ. ಗರತಿ ಹಾಯಾಗಿ ಸ್ನಾನ ಮಾಡಿ ಊಟ ಮುಗಿಸಿದಳಾದರೂ ನಿದ್ದೆ ಹತ್ತಿರ ಸುಳಿದಿಲ್ಲ…. ಹಾಡುತ್ತಾ ಕುಣಿಯುತ್ತಾ ಮನೆ ಸಾರಿಸುತ್ತಾ ರಂಗೋಲಿ ಬಿಡಿಸುತ್ತಾ ಹೆಸರು ಮರೆತರೆ ಈ ಥರದ ಸಂಕಷ್ಟ ಎದುರಾಗುವುದೆಂದು ಗೊತ್ತಿರಲಿಲ್ಲ.
ಬೆಳಗಾಯಿತು. ಆದರೆ ಫೈಲುಗಳನ್ನು ಹುಡುಕುವುದು ಮಾತ್ರ ಮುಗಿಯಲಿಲ್ಲ. ಅಷ್ಟರಲ್ಲಿ ಆ ಗರತಿ ಕಂಡಕಂಡವರನ್ನೆಲ್ಲಾ ಕೇಳಿದಳು…ಮನೆ, ಮರ, ಗುಡಿ, ಅವಳು ಓದಿದ ಶಾಲೆ, ಕಾಲೇಜುಗಳಲ್ಲಿ ಕೇಳಿ ಕೇಳಿ ಕಿರುಚಿ,ಅರಚಿ,ಸಿಡುಕಿ ಕಟ್ಟಕಡೆಗೆ ಒಬ್ಬ ಗೆಳತಿಯನ್ನು ಕಂಡು ತನ್ನ ಹೆಸರು ಪತ್ತೆ ಮಾಡಿದಳು. ಆ ಗೆಳತಿ ಇವಳ ಹಾಗೇ ಕಾಲೇಜಿನಲ್ಲಿ ಓದಿ, ಇವಳ ಹಾಗೆಯೇ ಮದುವೆಯಾಗಿ,ಮನೆ ಸಾರಿಸುವುದೊಂದೇ ಜೀವನವಾಗಿಸಿಕೊಳ್ಳದೆ, ಅದು ಜೀವನದ ಒಂದು ಭಾಗವಾಗಿ ಮಾತ್ರ ಜೀವಿಸುತ್ತಾ ತನ್ನ ಹೆಸರಿನ ಜತೆಗೆ ತನ್ನ ಗೆಳತಿಯರ ಹೆಸರೂ ನೆನಪಿಟ್ಟುಕೊಂಡ ವ್ಯಕ್ತಿ… ಆ ಗೆಳತಿ ಈ ಗರತಿಯನ್ನು ನೋಡಿದ ತಕ್ಷಣ ಗುರುತು ಹಿಡಿದು, ‘ಓ; ಹಾಯ್ ಶಾರದಾ! ನನ್ನ ಪ್ರೀತಿಯ ಶಾರದಾ!’ ಎಂದು ಕೇಕೆ ಹಾಕುತ್ತಾ ಅಪ್ಪಿಕೊಂಡಳು. ಆಗ ದಾಹದಿಂದ ಒಣಗಿ, ಬರಡಾಗಿ, ಜೀವ ಹೋಗಲು ಸಿದ್ಧವಾಗಿದ್ದ ಗರತಿಯ ಜೀವಕ್ಕೆ ಹೊಸ ಹೂಜಿಯಲ್ಲಿನ ನೀರನ್ನು ಸ್ಪೂನಿನಿಂದ ಬಾಯಿಗೆ ಹಾಕಿ ಬದುಕಿಸಿದ ಚೆಂದವಾಗಿ….ಆ ಗೆಳತಿ ಬದುಕಿಸಿದಳು.
‘ನೀನು ಶಾರದ. ನೀನು ನಮ್ಮ ಸ್ಕೂಲಿನ ಹತ್ತನೆಯ ತರಗತಿಯ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದವಳು. ಕಾಲೇಜಿನ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ನೀನು ಚೆನ್ನಾಗಿ ಚಿತ್ರ ಬರೆಯುತ್ತಿದ್ದೆ. ನಾವು ಹತ್ತು ಜನ ಗೆಳತಿಯರು…ನಾವು ಆಗಾಗ ಭೇಟಿಯಾಗುತ್ತೇವೆ..ಪತ್ರ ಬರೆದುಕೊಳ್ಳುತ್ತೇವೆ. ನೀನೊಬ್ಬಳೇ ನಮಗೆ ಸಿಗದೇ ಹೋದೆ. ಯಾಕೆ ಹೀಗೆ ಅಜ್ಞಾತ ವಾಸ ಮಾಡುತ್ತಿರುವಿ?’ ಜೋರು ಮಾಡಿ ಕೇಳಿದಳು.
‘ಹೌದು ಪ್ರಮೀಲಾ…ನೀನು ಹೇಳಿದ್ದು ನಿಜ. ನಾನು ಶಾರದ….ನೀನು ಹೇಳುವವರೆಗೂ ನನಗೆ ನೆನಪಾಗಲಿಲ್ಲ. ನನ್ನ ಮೆದುಳಿನ ಕೋಣೆಗಳೆಲ್ಲಾ ಮನೆ ಎಷ್ಟು ಚೆಂದವಾಗಿ ಸಾರಿಸಬೇಕೆಂಬ ವಿಷಯದಿಂದ ತುಂಬಿ ಹೋಗಿವೆ. ಬೇರೆ ಯಾವುದೂ ನೆನಪಿಲ್ಲ. ನೀನು ಕಂಡಿರದಿದ್ದರೆ ನಾನು ಹುಚ್ಚಿಯಾಗುತ್ತಿದ್ದೆ’ ಎಂದು ಶಾರದಾ ಹೆಸರಿನ ಆ ಗರತಿ ಅಂದಳು. ಶಾರದಾ ನೇರವಾಗಿ ಮನೆಗೆ ಬಂದು ಅಟ್ಟ ಹತ್ತಿ ಹಳೆಯ ಫೈಲುಗಳೆಲ್ಲ ಬುಡಮೇಲು ಮಾಡಿ ಅವಳ ಸರ್ಟಿಫಿಕೇಟ್, ಬಿಡಿಸಿದ ಚಿತ್ರ…ಹಳೆಯ ಆಲ್ಬಮ್ ಗಳನ್ನೆಲ್ಲಾ ಸಂಗ್ರಹಿಸಿದಳು. ತಾನು ಸ್ಕೂಲು, ಕಾಲೇಜುಗಳಲ್ಲಿ ಗೆದ್ದ ಬಹುಮಾನಗಳನ್ನು ಹುಡುಕಿ ಪತ್ತೆ ಹಚ್ಚಿದಳು.
ಬೆಟ್ಟದಷ್ಟು ಖುಷಿಯಿಂದ ಮನೆಗೆ ವಾಪಸು ಬಂದಳು. ‘ನೀನಿಲ್ಲ….ಮನೆ ನೋಡು ಹೇಗಾಗಿದೆ…ಸಂತೆಯ ಹಾಗೆ. ಸದ್ಯ ನೀನು ಬಂದಾಯ್ತು. ನಮಗೆ ಇನ್ನು ಹಬ್ಬ ಇವಳೇ’. ಶಾರದೆಯ ಗಂಡ ನುಡಿದ. ‘ಮನೆ ಸಾರಿಸಿದ ಮಾತ್ರಕ್ಕೆ ಹಬ್ಬ ಆಗಲ್ಲ ಕಣ್ರೀ…ಅದಿರಲಿ ಇನ್ನು ನೀವು ನನ್ನನ್ನು ಇವಳೇ ಅವಳೇ ಅಂತ ಕರೆಯಬೇಡಿ. ನನ್ನ ಹೆಸರು ಶಾರದ…ಶಾರದಾ ಅಂತ ಕರೆಯಬೇಕು ಗೊತ್ತಾಯ್ತಾ…’ ಅಂದು ಹಾಡುತ್ತಾ ಒಳಗೆ ಹೋದಳು. ಯಾವ ಮೂಲೆಯಲ್ಲಿ ದೂಳಿದೆ, ಯಾವ ಜಾಗದಲ್ಲಿ ಸಾಮಾನು ಆರ್ಡರ್ ಆಗಿಲ್ಲ ಎಂದು ಸೀರಿಯಸ್ ಆಗಿ ಹುಡುಕುತ್ತಾ, ಡಿಸಿಪ್ಲಿನ್ ಗಾಗಿ ಒದ್ದಾಡುತ್ತಿದ್ದ ಶಾರದಾ ಎರಡು ದಿನದಿಂದ ಒರೆಸದೆ ಇರುವ ಸೋಫಾದಲ್ಲಿ ಹಾಯಾಗಿ ಕುಳಿತು, ತಾನು ತಂದಿದ್ದ ಬೊಂಬೆಗಳನ್ನು ಮಕ್ಕಳಿಗೆ ತೋರಿಸುತ್ತಿದ್ದಳು.
ನಾನೇಕೆ ಅನುವಾದಿಸುತ್ತೇನೆ:
ಮೊದಲು ಅನುವಾದದ ಕುರಿತು ಆಸಕ್ತಿ ಬಂದದ್ದು ಕನ್ನಡ ಎಂ.ಎ ತರಗತಿಯಲ್ಲಿ. ʼಅನುವಾದ ಮಾಡಬೇಕಾದರೆ ಎರಡು ಭಾಷೆಗಳು ಚೆನ್ನಾಗಿ ಗೊತ್ತಿರಬೇಕು. ಒಂದು ಮೂಲ ಭಾಷೆ. ಇನ್ನೊಂದು ಉದ್ದಿಷ್ಟ ಭಾಷೆ. ಒಂದು ಭಾಷೆಯಲ್ಲಿನ ಉತ್ತಮ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ತರುವುದು ಅನುವಾದಕರ ಹೊಣೆಗಾರಿಕೆ ʼ ಅಂತ ಮೇಷ್ಟರು ಹೇಳುವಾಗ ನನ್ನ ತಲೆಯಲ್ಲಿ ಹೊಳೆದದ್ದು ಕನ್ನಡ ಮತ್ತು ತೆಲುಗು. ಇಂಗ್ಲಿಷ್ ಪದ್ಯವೊಂದರ ಒಂದು ಸಾಲಿನ ಪದಗಳನ್ನು ಅದಲು ಬದಲು ಮಾಡುತ್ತಾ ಕನ್ನಡಕ್ಕೆ ಅನುವಾದಿಸುವ ಆ ತರಗತಿ ತುಂಬಾ ಆಸಕ್ತಿದಾಯಕವಾಗಿತ್ತು. ಸಮಯ ಸರಿದದ್ದೇ ಗೊತ್ತಾಗಲಿಲ್ಲ.
ನಂತರ ಅನುವಾದಿಸಿದ್ದು ಯಾವುದೋ ಚಂದಮಾಮ ಕತೆ, ಒಂದು ಪ್ಯಾರಾಗ್ರಾಫಿನಷ್ಟು ವಿಜ್ಞಾನ ಲೇಖನ. ಇವೆಲ್ಲಾ ಅಸೈನ್ಮೆಂಟಿನ ಭಾಗ. ಎಂದಿನಂತೆ ಆ ದಿನ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೇಂದ್ರ ಸಾಹಿತ್ಯ ಅಕಾದೆಮಿಯ ಲೈಬ್ರರಿಗೆ ಹೋದಾಗ ʼಶಬ್ದನಾʼ ವತಿಯಿಂದ ತೆಲುಗು,ಕನ್ನಡ ಭಾಷೆಗಳ ಅನುವಾದದ ಕುರಿತು ಕಾರ್ಯಕ್ರಮ ಇತ್ತು. ಕೆಲವರು ತೆಲುಗು,ಕನ್ನಡ ಲೇಖಕರು ಅಲ್ಲಿದ್ದರು. ಮರುದಿವಸ ಅನಿಸಿದ್ದು,ಯಾವುದಾದರೂ ತೆಲುಗಿನ ಪಠ್ಯ ಕನ್ನಡಕ್ಕೆ ಅನುವಾದಿಸಿದರೆ ಹೇಗೆ? ನಾನು ನಾಲ್ಕನೆಯ ತರಗತಿಯ ವರೆಗೆ ತೆಲುಗು ಓದಿದ್ದು,ಅಮ್ಮ ಓದುತ್ತಿದ್ದ ʼಸ್ವಾತಿʼ ತೆಲುಗು ವಾರ ಪತ್ರಿಕೆಯ ಕಥೆಗಳು ನೆನಪಾದವು. ಪ್ರಯತ್ನಿಸಿದರೆ ಕಷ್ಟವಲ್ಲ ಅನಿಸಿತು. ಲೈಬ್ರರಿಯಲ್ಲಿ ತೆಲುಗು ಪುಸ್ತಕಗಳನ್ನು ಹುಡುಕಿದಾಗ ಒಂದು ಕಥಾಸಂಕಲನ ಸಿಕ್ಕಿತು. ಸರಿ. ಯಾವ ಕಥೆ ಅನುವಾದಿಸುವುದು? “ಯಾವುದೇ ಸಾಹಿತ್ಯ ಬರಹ ಓದುಗರನ್ನು ಯೋಚಿಸುವಂತೆ ಮಾಡಬೇಕು”. ತರಗತಿಯಲ್ಲಿ ಮೇಷ್ಟರು ಹೇಳಿದ ಮಾತು. ಕೆಲವು ಕಥೆಗಳನ್ನು ಓದಿದಾಗ ತೆಲುಗು ಲೇಖಕಿ ಓಲ್ಗಾ ಅವರ ಕಥೆಗಳು ತುಂಬಾ ಹಿಡಿಸಿದವು. ಅವರ ಕತೆಗಳ ಹೆಣ್ಣು ತನ್ನ ದುಃಸ್ಥಿತಿಗೆ ಗೋಗರೆಯುವವಳಲ್ಲ. ಗೊಂದಲವಿಲ್ಲದ ದೃಢ ಮನಸ್ಸಿನವಳು.
ಓದುಗರನ್ನು ಯೋಚಿಸುವಂತೆ ಮಾಡಬಲ್ಲವಳು ಅನಿಸಿತು. ನಂತರ ಪರೀಕ್ಷೆಯ ಓದಿನ ಕಡೆಗೆ ಗಮನ ಹರಿಸಿ ಅನುವಾದ ಸಾದ್ಯವಾಗಲಿಲ್ಲ. ಕೆಲಸ ದೊರೆತು ನಿರಾಳ ಆದ ಬಳಿಕ ಓಲ್ಗಾ ಅವರ ಎಲ್ಲ ಬರಹಗಳನ್ನೂ ಕೊಂಡು ಓದಿದೆ. ಅವರ ʼತೋಡುʼ ನೀಳ್ಗತೆಯನ್ನು ʼಆತ್ಮ ಸಂಗಾತʼ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದೆ. ಈಗ ಪಿ.ಸತ್ಯವತಿಯವರನ್ನು ಓದಿದಾಗ ಹಿಡಿಸಿದ್ದು, ಹೆಸರಿನ ರೂಪಕದ ಮೂಲಕ ತನ್ನ ಅಸ್ತಿತ್ವವನ್ನು ಮರಳಿ ಹುಡುಕುವ ಸಾಮಾನ್ಯ ಗೃಹಿಣಿಯ ಕತೆ. ಮನೆ ಸಾರಿಸುತ್ತಾ ತಮ್ಮನ್ನು ತಾವು ಮರೆತು ಅಮ್ಮ,ಹೆಂಡತಿ,ಮಗಳು,ಸೊಸೆ,ಅಕ್ಕ,ತಂಗಿ ಎಂದಷ್ಟೇ ಗುರುತಿಸಿಕೊಳ್ಳುವಲ್ಲಿ ತೃಪ್ತಿಗೆ ಸೀಮಿತವಾಗದೇ ತಮ್ಮತನವನ್ನೂ ಉಳಿಸಿಕೊಂಡಲ್ಲಿ ಹೆಣ್ಣುಮಕ್ಕಳು ಉಸಿರಾಡಬಲ್ಲರು, ಸಮಾಜದಲ್ಲಿ ಪರಾವಲಂಬಿಗಳನ್ನು ಕಡಿಮೆ ಮಾಡಬಲ್ಲರು.
ನಾನು ಓದಿದ ಕನ್ನಡ ಕಥೆಗಳಲ್ಲಿನ ಹೆಣ್ಣು ತನ್ನನ್ನು ವ್ಯಕ್ತಿಯಾಗಿ ಗುರುತಿಸದೇ ಇರುವ ಸಮಾಜವನ್ನು ತೋರಿಸಿ ಸುಮ್ಮನಾದಳೇ ಹೊರತು ಸಮಾಜ ಗುರುತಿಸುವ ಮೊದಲು ತನ್ನನ್ನು ತಾನು ಗುರುತಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡಿದಂತೆ ಕಂಡಿರಲಿಲ್ಲ. ಸಮಾಜದ ಕಣ್ಣಿಗೆ ಅವಳು ಹೇಗೆ ಕಾಣುವಳು ಎಂಬುದರ ಆಚೆಗೆ ತಾನು ಯಾರು ಎಂದು ಅರಿತಾಗ,ತಾನಾಗೇ ಸಮಾಜದ ಕಣ್ಣಿಗೆ ಭಿನ್ನವಾಗಿ ಕಾಣುವಳು. ಈ ಭಿನ್ನತೆಯೇ ಅವಳ ಅಸ್ತಿತ್ವ. ಈ ಅಸ್ತಿತ್ವ ಸಮಾಜದ ಅರಿವಿಗೆ ಬಂದಾಗ ಅವಳನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನ ಬದಲಾಗುವ ಸಾಧ್ಯತೆ ಇದೆ. ಹೀಗೆ ತನ್ನನ್ನು ತಾನು ಗುರುತಿಸಿಕೊಂಡು ತನ್ನ ಸುತ್ತ ಇರುವವರೂ ತನ್ನನ್ನು ಗುರುತಿಸುವಂತೆ ಮಾಡಿದ ಹೆಣ್ಣಿನ ಮಾದರಿಯನ್ನು ತೋರಿಸಿದ ಕಥೆಗಳು ಕನ್ನಡ ಓದುಗರಿಗೆ ತಲುಪಬೇಕೆಂಬ ಸಣ್ಣ ಪ್ರಯತ್ನ ಇದು.






ಹೀಗೆ ಹೆಸರೇ ಇಲ್ಲದೆ ಕರಗಿ ಹೋಗುತ್ತಿರುವ ಅದೆಷ್ಟೋ ಹೆಣ್ಣು ಜೀವಗಳು ಇಂದಿಗೂ ಇವೆ . ಅಂಥವರೆಲ್ಲ ಈ ಕಥೆ ಓದಿ ತಮ್ಮ ಅಸ್ಮಿತೆ ಯನ್ನು ಕಾಣುವಂತಾದರೆ ಎಷ್ಟು ಚೆನ್ನ! ಪಿಸುಮಾತಿನಲ್ಲಿ ಎಚ್ಚರಿಸುವ ಗೆಳತಿಯಂಥ ಬರಹವಿದು .