ಚಿದಂಬರ್ ನರೇಂದ್ರ
ಖಲೀಲ್ ಜಿಬ್ರಾನ್ ಹೇಳುವಂತೆ ನಮ್ಮ ಮೌನಗಳನ್ನ ಹಾಡಬಲ್ಲವ ಮಾತ್ರ ಒಬ್ಬ ಶ್ರೇಷ್ಠ ಗಾಯಕ. ಅಂಥ ಒಂದು ಚೈತನ್ಯ ಮೊಹಮ್ಮದ ರಫಿಯ ಪುಣ್ಯತಿಥಿ ಇವತ್ತು. ರಫಿಯ ಹಾಡಿನ ಗುಂಗಿನಲ್ಲಿ ಈ ಹಿಂದೆ ಬರೆದ ಕೆಲ ಸಾಲುಗಳು, ನಾಲ್ಕು ಹೊಸ ಸಾಲುಗಳೊಂದಿಗೆ.
ರಫೀಯ ಹಾಡಿನ ಗುಂಗಿನಲ್ಲಿ…….

ಮಹಮ್ಮದ ರಫಿ ತೂ ಬಹುತ್ ಯಾದ ಆಯಾ……
ಕರುಳ ನುಡಿಸುವ ಕುಸುರಿ
ಕಣ ಕಣದಿ ಹರಿಸಿ
ಮನ ದುಂಬಿ ಹಾರೈಸಿದ
ಈತನ ಅಮ್ಮಿಯ ವಾತ್ಸಲ್ಯಕ್ಕೊಂದು ನಮಸ್ಕಾರ.
ಈ ಸಾಬಿಯ ಎದೆಗೆ ಕೊಳ್ಳಿಯಿಟ್ಟು
ದನಿಯ ಆರ್ತವಾಗಿಸಿದ
ಆ ಮಾಯಕಾರರ
ಮಾಯೆಗೊಂದು ನಮಸ್ಕಾರ.
ಇವನ ಉಸಿರ ಹೊತ್ತು ತಂದು
ಅಗಣಿತ ಸ್ತಬ್ಧ ಹೃದಯಗಳಲ್ಲಿ
ಪ್ರಾಣದ ಕಿಡಿ ಹೊತ್ತಿಸಿದ ಗಾಳಿಯ
ಅಂತಃಕರಣಕ್ಕೊಂದು ನಮಸ್ಕಾರ.
ಧ್ವನಿಸಲಾಗದ ನಮ್ಮ ದೈನ್ಯತೆಯನರಿತು
ಈ ಪ್ರವಾದಿಯ ಧರೆಗೆ ಕರೆ ತಂದ
ಅಲ್ಲಾಹುವಿನ ಅಪಾರ
ಕರುಣೆಗೊಂದು ನಮಸ್ಕಾರ.
ನನ್ನದನ್ನೆಲ್ಲ ತನ್ನದೇ ಎಂಬಂತೆ ಹಾಡಿ
ಮಾನ ಉಳಿಸಿದ
ರಫೀ ಸಾಹೇಬರ
ಉಪಕಾರಕ್ಕೊಂದು ನಮಸ್ಕಾರ.






ಬಹುತ್ ಖೂಬ್, ಬಹುತ್ ಬಢಿಯಾ! ರಫಿ ಹಮ್ ಸಬ್ ಕೆ ದಿಲ್ ಮೇಂ ರಹನೇವಾಲೆ ಅಪನಾ ಹೀ ಆವಾಜ್ ಹೈ, ಅಪನೇ ಘರ ಕೆ ಹೀ ಆದಮೀ ಹೈ, ಹರ್ ಕಿಸೀ ಕೊ ಐಸಾ ಹೀ ಲಗತಾ ಹೈ!
ರಫಿಯ ಹಾಡಿನ ಗುಂಗಿನಲ್ಲಿ ಅವರ ಬಗೆಗೆ ಕವನ ರೂಪದಲ್ಲಿ ಬಹಳ ಚೆನ್ನಾಗಿ ದಾಖಲಿಸಿದ್ದೀರಿ, ರಫಿ ನಮ್ಮನ್ನು ಅಗಲಿ ಹೋಗಿದ್ದಾರೆ ಎಂದು ಇಂದಿಗೂ ನನಗೆ ಅನಿಸಿಲ್ಲ. ಅವರು ಹಾಡಿದ ಸುಮಧುರ ಗೀತೆಗಳ ಗುಂಗು ಅಷ್ಟು ಸುಲಭಕ್ಕೆ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅವರು ಹಾಡಿದ ಗೀತೆಗಳ ಮೂಲಕ ಪ್ರತಿ ದಿನ ಅವರನ್ನು ನಾನು ಭೇಟಿಯಾಗುತ್ತೇನೆ.ರಫೀ ಒಂದು ಸುಂದರ ನೆನಪು ಮತ್ತು ಕನಸು.