ನಿದ್ದೆ ಕದ್ದ ಫೇಸ್ ಬುಕ್!
ಎನ್ ಸಂಧ್ಯಾರಾಣಿ
’ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದ್ದ ಬರಹ
ರಾತ್ರಿ ೧೨ ದಾಟಿತ್ತು, ಕೆಳಗಿನ ಮನೆಯಲ್ಲಿ ಮರಗೆಲಸದ ಸರ್….ರ್, ಟರ್…….ರ್ ಸದ್ದು ಆಗಷ್ಟೆ ನಿಂತಿತ್ತು. ಪಕ್ಕದ ಕಟ್ಟಡದಲ್ಲಿ ಯಾವಾಗಲೂ ದೇವರಂತೆ ನಿದ್ದೆ ಮಾಡುತ್ತಿದ್ದ ಮಗು ಯಾಕೋ ಕುಸು ಕುಸು ಅಳುತ್ತಿತ್ತು… ಹರಡಿದ್ದ ಪುಸ್ತಕಗಳನ್ನೆಲ್ಲಾ ಎತ್ತಿ ಜೋಡಿಸಿ, ಚಾಪೆ ಮಡಸಿಟ್ಟೆ. ಕಿಟಕಿ ಸಂದಿಯಿಂದ ಕಾಣುತ್ತಿದ್ದ ಚೂರು ಆಕಾಶದಲ್ಲಿ ಇಷ್ಟೇ ಇಷ್ಟಗಲ ಚಂದ್ರ, ಕಿಟಕಿ ಪಕ್ಕದ ಪಾರಿಜಾತದ ಗಿಡ ಇನ್ನೂ ಚಂದ ಕಾಣಿಸುತ್ತಿತ್ತು. ಡಸ್ಟ್ ಅಲರ್ಜಿಗೆಂದು ನಾನು ತೆಗೆದುಕೊಳ್ಳುವ ಮಾತ್ರೆ ಜಾಗೃತವಾಗಿ ನಾನು ಇನ್ನೇನು ನಿದ್ದೆಗೆ ಜಾರುವ ಹೊತ್ತು…ಅಷ್ಟರಲ್ಲಿ, ಬುದ್ಧಿ ’ನಿಲ್ಲು ನಿಲ್ಲೆ ಪತಂಗ, ಬೇಡ ಬೇಡ ಬೆಂಕಿಯ ಸಂಗ…’ ಎಂದು ಎಚ್ಚರಿಕೆ ನೀಡುತ್ತಿದ್ದರೂ ನಿರ್ಲಕ್ಷಿಸಿ, ಮೊಬೈಲ್ ಕೈಗೆತ್ತಿಕೊಂಡೆ, f ಅನ್ನುವ ಅಕ್ಷರವನ್ನು ಒಮ್ಮೆ ಬೆರಳಿನಿಂದ ಸ್ಪರ್ಷಿಸಿದೆ, ಅಷ್ಟೆ! ಇನ್ನೆಲ್ಲಿ ನಿದ್ದೆ?! ಯಾವುದಾದರೂ ಮುಖ್ಯವಾದ ನೋಟಿಫಿಕೇಶನ್ ಗಳನ್ನು ಮಾತ್ರ ನೋಡುತ್ತೇನೆ ಅಂತ ಮುಂದಿಟ್ಟ ಹೆಜ್ಜೆ, ಅದನ್ನು ನೋಡಿ, ಸ್ನೇಹಿತರ ಗೋಡೆಯ ಅಂದ ಚಂದವನ್ನು ಗಮನಿಸಿ, ನಾನು ಹಾಕಿದ್ದ ಸ್ಟೇಟಸ್ ಮೆಸೇಜ್ ಗೆ ಬಂದ ಮೆಚ್ಚುಗೆ, ಅಭಿಪ್ರಾಯಗಳನ್ನು ನೋಡಿ, ಅವುಗಳಲ್ಲಿ ಕೆಲವಕ್ಕೆ ಲೈಕ್ ಒತ್ತಿ, ಕೆಲವಕ್ಕೆ ಉತ್ತರಿಸಿ….. and the journey continues!
Saans Letey Huye Kabhi Ehsaas Hua Na Tha ‘Saahil’,
Aaj Aawaaz Teri Sunkar Rooh Mehsoos Kee Mainey. – ‘Sahil’
(ಉಸಿರಾಡುವಾಗ ಅರಿವಿಗೇ ಬರಲಿಲ್ಲ ’ಸಾಹಿಲ್’
ಇಂದು ನಿನ್ನ ದನಿ ಕೇಳಿದಾಗ, ನನ್ನೊಳಗಿನ ಆತ್ಮ ಸ್ಪರ್ಷಕ್ಕೆ ದಕ್ಕಿತು…) – ಸಾಹಿಲ್
ಈ ಸಾಲು ಕಣ್ಣಿಗೆ ಬಿತ್ತು, ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಕೂತು ಈ ಶಾಯರ್ ನಡುರಾತ್ರಿಯಲಿ ಬರೆಯುವ ಇಂತಹ ಶಾಯರಿಗೊಂದು ಲೈಕ್ ಒತ್ತದಿದ್ದರೆ ’ಮೆಚ್ಚನಾ ಗುಲ್ಜಾರನು’ ಅಂದುಕೊಂಡು ಅದನ್ನು ಲೈಕಿಸಿದ್ದಯ್ತು, ಹೀಗೆ ಹೋಗಿ, ಹಾಗೆ ಬಂದುಬಿಡುತ್ತೇನೆ ಅಂದುಕೊಂಡು ಫೇಸ್ ಬುಕ್ಕಿನ ನಮ್ಮ ಖಾಸಗಿ ದರ್ಬಾರ್ ’ಅಂತಃಪುರಕ್ಕೊಮ್ಮೆ ಇಣುಕಿದೆ, ಅರೆರೆ ಸುಮಾರು ಜನ ಫೇಸ್ ಬುಕ್ ಪೀಡಿತರು ಎದ್ದಿದ್ದ ಕುರುಹು, ನಾನು ಸಂತೋಷದಿಂದ ಹರಟೆಯಲ್ಲಿ ಶಾಮೀಲಾದೆ! ಸ್ನೇಹಿತೆಯೊಬ್ಬಳು ಹಾಕಿದ್ದ ಒಂದು ತುಂಟ ಮೆಸೇಜಿಗೆ ಅಷ್ಟೇ ತುಂಟತನದ ಉತ್ತರಗಳು ಪಟ ಪಟ ಬಂದು ಬೀಳುತ್ತಿದ್ದವು, ವಯಸ್ಸು ೧೫ ವರ್ಷದ ಹಿಂದಕ್ಕೆ ಲಾಗ ಹೊಡೆಯಿತು! ’ತುಟಿಯ ಮೇಲೆ ತುಂಟ ಕಿರುನಗೆ’, ಬೆರಳ ತುದಿಯಲ್ಲಿ ಕೆಂಡಸಂಪಿಗೆ – ಟೈಪಿಸಿ, ಟೈಪಿಸಿ! ಅಷ್ಟರಲ್ಲಿ ಗೆಳತಿಯಿಂದ ಒಂದು SOS, ’ಸಂಧ್ಯಾ!!!!, ಇದ್ದೀಯಾ?!!!’ ಅಂತ! ಎಲ್ಲಾ ಮುಗಿಯುವಷ್ಟರಲ್ಲಿ ’ಕಣ್ಣನು ಕಡಿದರು, ನಿದ್ದೆಯೆ ಬಾರದು’!
ಒಂದು ಸಲ ಹೀಗಾಯ್ತು, ಆಗ ನನಗಿನ್ನೂ ಫೇಸ್ ಬುಕ್ ಮತ್ತು ಇಷ್ಟು ಏರಿರಲಿಲ್ಲ, ಇನ್ನೂ ಫೇಸ್ ಬುಕ್ಕಿನ ಅಂಗಳದಲ್ಲಿ ಅಂಬೆಗಾಲಿಡುತ್ತಿದ್ದೆ. ಬೆಳಗ್ಗೆದ್ದು “Good Morning Friends!” ಅಂತ ಒಂದು ಸ್ಟೇಟಸ್ ಹಾಕಿ, ಸಂಜೆಗೊಮ್ಮೆ ಆಫೀಸಿನಿಂದ ಹೊರಡುವ ಮೊದಲು ಅದಕ್ಕೊಂದು ಪ್ರದಕ್ಷಿಣೆ ಹಾಕಿ ಬರ್ತಿದ್ದ ಕಾಲ! ಸಂಜೆ ಸಿಕ್ಕ ಗೆಳತಿಯೊಬ್ಬಳ ಕಣ್ಣು ಕೆಂಪಗಾಗಿ, ಊದಿದ್ದು ಕಂಡು, ’ಅದೆಷ್ಟು ನಿದ್ದೆ ಕೆಟ್ಟೆಯೇ ಮಾರಾಯ್ತಿ’ ಎಂದು ರೇಗಿಸಿದೆ. ಅವಳೊಂದು ನಿಟ್ಟುಸಿರು ಬಿಟ್ಟು, ’ಇತ್ತೀಚೆಗೆ ರಾತ್ರಿ ೨ ಗಂಟೆವರೆಗೂ ನಿದ್ದೆ ಮಾಡೋಕ್ಕಾಗ್ತಾ ಇಲ್ಲ, ಎಫ್ ಬುಕೇಮಿಯಾ’ ಅಂದ್ಲು. ನಾನು ಮಹಾನ್ ಅನುಕಂಪದಿಂದ ’ಅಂದ್ರೆ..? ನಿನಗೆ ಇನ್ಸೋಮ್ನಿಯಾ ಇದೆಯೇನೇ..’ ಅಂದೆ, ಅವಳೂ ಅಷ್ಟೇ ಅನುಕಂಪದಿಂದ ನನ್ನನ್ನು ನೋಡಿ, “ನಮ್ಮನೇಲಿ ನೆಟ್ ಇದೆ, ಹಾಗಾಗಿ ಫೇಸ್ ಬುಕ್ ಸಹ ಇದೆ” ಅಂದಿದ್ದಳು. ನನಗೇನಾದ್ರೂ ಅರ್ಥ ಆಗಿದ್ರೆ ’like button’ ಮೇಲಾಣೆ! ಆಮೇಲೆ, ಕಾವೇರಿಯಿಂದ ಸುಮಾರು ನೀರು ತಮಿಳುನಾಡಿಗೆ ಹರಿದಿದೆ, ನಮ್ಮ ಮನೆಗೂ ನೆಟ್ ಬಂದಿದೆ…ಈಗ ನಾನೂ ಒಬ್ಬ ಸಹ ಫೇಸ್ ಬುಕ್ ಭಾದಿತೆ!
ಫೇಸ್ ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್ ಬರ್ಗ್ ಹೇಳುವ ಹಾಗೆ ವಿಶ್ವದ ಪ್ರತಿ ಏಳು ಜನರಲ್ಲಿ ಒಬ್ಬರು ಫೇಸ್ ಬುಕ್ ಬಳಸುತ್ತಿದ್ದಾರಂತೆ, ಇನ್ನು ಮೊಬೈಲಿನಲ್ಲಿ ಫೇಸ್ ಬುಕ್ ಬಳಸುವವರ ಸಂಖ್ಯೆ ೬೦ ಕೋಟಿ ದಾಟಿದೆಯಂತೆ. ಸರಿ ಸುಮಾರು ೬ ಕೋಟಿ ಜನ ಭಾರತದಲ್ಲಿ ಫೇಸ್ ಬುಕ್ ಬಳಕೆದಾರರಿದ್ದಾರಂತೆ! ಇಂಟರ್ನೆಟ್ ಪ್ರಪಂಚದಲ್ಲಿ ಸಾಮಾಜಿಕ ತಾಣಗಳು ಹಲವಾರಿದ್ದರೂ ಫೇಸ್ ಬುಕ್ ಅದರ ಮುಂಚೂಣಿಯಲ್ಲಿದೆ. ಇದು ಈಗ ಕೇವಲ ಸಾಮಾಜಿಕ ತಾಣವಾಗಿ ಉಳಿದಿಲ್ಲ, ಇದು ಒಂದು ಮುಖ್ಯ ವರ್ಚುಯಲ್ ವಾಹಿನಿಯಾಗಿ ಬೆಳೆಯುತ್ತಿದೆ. ನಗರ ಜೀವನದ ಅನಾಥ ಪ್ರಜ್ಞೆ, ತಣ್ಣನೆಯ ಸೊಫೆಸ್ಟಿಕೇಟೆಡ್ ಕ್ರೌರ್ಯ, ಒಂಟಿತನ ಮತ್ತು ಏಕಾಕಿತನದ ಕಾರಣದಿಂದ ಫೇಸ್ ಬುಕ್ ಕೇವಲ ಹದಿಹರೆಯದವರನ್ನಷ್ಟೇ ಅಲ್ಲ, ವಯಸ್ಕ ಹಾಗು ಮಧ್ಯವಯಸ್ಕರನ್ನೂ ಸೆಳೆದಿದೆ. ಇಲ್ಲೇ ಹಳೆಯ ಗೆಳೆಯ-ಗೆಳತಿಯರು ಭೇಟಿಯಾಗುತ್ತಾರೆ, ಇಲ್ಲೇ ಹೊಸ ಪರಿಚಯಗಳು ಚಿಗುರೊಡೆಯುತ್ತದೆ, ಸ್ನೇಹವಾಗುತ್ತದೆ, ಹಾಯ್ ಹಲ್ಲೋಗಳ ನಡುವೆ ಒಂದು ಮೇಲ್ಪದರದ, ನಿರಪಾಯಕಾರಿ, ಸಣ್ಣ ಪ್ಲರ್ಟಿಂಗ್ ನಡೆಯುತ್ತದೆ, ಇಲ್ಲಿ ಸಿಗುವ ಸ್ನೇಹವಲಯ ಮತ್ತು ಅದು ಕೊಡುವ ಒಂದು ಸಮಾಧಾನ ಎಷ್ಟೋ ಸಂಬಂಧಗಳನ್ನು ಉಳಿಸಿದೆ ಮತ್ತು ಕೆಲವು ಸಲ ಸುಭದ್ರ ಎಂದುಕೊಂಡಿದ್ದ ಸಂಬಂಧಗಳು ಬಿರುಕು ಬಿಡುವಂತೆ ಮಾಡಿವೆ.
ಫೇಸ್ ಬುಕ್ಕಿಗೆ ಬರುವಷ್ಟರಲ್ಲಿ ನಾನು ಬೆಂಗಳೂರಿಗೆ ಹಳಬಳು, ಆದರೆ ಅಷ್ಟು ವರ್ಷಗಳಲ್ಲಿ ನನ್ನ ಸ್ನೇಹವಲಯದಲ್ಲಿದ್ದದ್ದು ಬೆರಳೆಣಿಕೆಯಷ್ಟು ಆತ್ಮೀಯ ಸಂಬಂಧಗಳು ಮಾತ್ರ, ಪುಸ್ತಕ ಬಿಡುಗಡೆ ಸಮಾರಂಭಗಳಿಗೆ ಹೋಗುತ್ತಿದ್ದೆ, ನಾಟಕಗಳಿಗೆ ಹೋಗುತ್ತಿದ್ದೆ, ಅದೇ ವಲಯದಲ್ಲಿದ್ದರೂ ಸಹ ಆ ವಲಯದ ಹೊಸ್ತಿಲ ಆಚೆಗೇ ಇದ್ದೆ ನಾನು. ಆಮೇಲೆ ಫೇಸ್ ಬುಕ್ ನ ಅಂಗಳಕ್ಕೆ ಬಂದೆ, ಇಲ್ಲಿನ ಸ್ನೇಹ ವಲಯ ದೊಡ್ಡದಾಗುತ್ತಾ ಹೋಯಿತು, ಹಾಯ್, ಹಲ್ಲೋ, ಸ್ಟೇಟಸ್, ಕಾಮೆಂಟ್ ಗಳ ನಡುವೆಯೇ ಒಂದು ಆತ್ಮೀಯ ವಲಯ ಸೃಷ್ಟಿಯಾಯಿತು. ಅಷ್ಟರಲ್ಲಿ ಗೆಳತಿಯರಾದ ಜಯಲಕ್ಷ್ಮಿ ಪಾಟೀಲ್, ಅಂಜಲಿ ರಾಮಣ್ಣ ಎಲ್ಲಾ ಸೇರಿ ಅಂತಃಪುರ ಅನ್ನುವ ಒಂದು ಖಾಸಗಿ ದರ್ಬಾರ್ ಅನ್ನು ಪ್ರಾರಂಭಿಸಿದರು, ’ಎಷ್ಟೋಂದ್ ಜನ ಇಲ್ಲಿ, ಯಾರು ನಮ್ಮೋರು’ ಅನ್ನಿಸುತ್ತಿದ್ದು ಹೋಗಿ ಈಗ, ಎಷ್ಟೋಂದ್ ಜನ ಗೆಳತಿಯರು ಆಗಿದೆ! ಒಗ್ಗರಣೆಯ ಹದದಿಂದ ಹಿಡಿದು, ಮೊನ್ನೆ ಮೊನ್ನೆ ಮಮತಾ ಬ್ಯಾನರ್ಜೀ ’ಅತ್ಯಾಚಾರಗಳು ಹೆಚ್ಚಾಗಲು ಹೆಣ್ಣು-ಗಂಡುಗಳ ನಡುವೆ ಹೆಚ್ಚುತ್ತಿರುವ ಸಾಹಚರ್ಯವೇ ಕಾರಣ’ ಎನ್ನುವ ಸ್ಟುಪಿಡಾದಿ ಸ್ಟುಪಿಡ್ ಹೇಳಿಕೆಗಳವರೆಗೂ ಚರ್ಚೆ ಆಗಿದೆ. ದಿನದ ಯಾವುದೇ ಹೊತ್ತಿರಲಿ, ಸರಿ ರಾತ್ರಿ ಹೊತ್ತಿರಲಿ ಇಲ್ಲಿ ಬಾಗಿಲು ತಟ್ಟಿದರೆ, ಯಾರಾದರೂ ಸಿಕ್ಕೇ ಸಿಗುತ್ತಾರೆ. ಈಗ ಯಾವುದೇ ಸಾಂಸ್ಕೃತಿಕ ಸಾಹಿತ್ಯ ವಲಯಗಳಿಗೆ ಹೋದರೂ ಅಲ್ಲೊಂದು ಸ್ನೇಹಪೂರ್ವಕ ’ಹಾಯ್’ ಇರುತ್ತದೆ, ಮೊದಲಿನಂತೆ ಸಾಲಿನ ಕೊನೆಯಲ್ಲಿ ಕೂತು, ಮೌನವಾಗಿ ಎದ್ದು ಬರುವುದಿಲ್ಲ, ಸಮಾರಂಭದ ಪ್ರಾರಂಭದ ವೇಳೆಗೇ ಮೊದಲೇ ಅಲ್ಲಿ ಹೋಗಿರುತ್ತೇನೆ, ಗೆಳತಿಯರು ಸಿಕ್ಕೇ ಸಿಗುತ್ತಾರೆ ಅನ್ನುವ ನಿರೀಕ್ಷೆಯಲ್ಲಿ, ಸಮಾರಂಭ ಮುಗಿದ ಮೇಲೆ ಒಂದು ಕಾಫಿ, ಒಂದಿಷ್ಟು ಹರಟೆ, ಒಮ್ಮೊಮ್ಮೆ ಅಲ್ಲಿಂದಲೇ ಒಂದು ತಿರುಗಾಟ, ಅದಕ್ಕಾಗಿ ಫೇಸ್ ಬುಕ್ಕಿಗೆ ಒಂದು ಥ್ಯಾಂಕ್ಸ್! ಮೊನ್ನೆ ತಾನೆ ಗೆಳತಿ ಉಷಾ ಕಟ್ಟೀಮನೆ ಫೇಸ್ ಬುಕ್ಕಿನಲ್ಲಿರುವ ಒಂದು ಕೃಷಿಲೋಕದ ಬಗ್ಗೆ ಬರೆದಿದ್ದರು, ಸಮಾನ ಮನಸ್ಕರ ’ಸಮಾನ’, (https://www.facebook.com/groups/samanakannada/), ಪದಗಳಲ್ಲಿ ಆಟವಾಡುವ ’pun ನ್ನೀರು’ https://www.facebook.com/groups/123140757792005/, ಕಥೆ – ಕವನಗಳ ತಾಣ ಸಾಹಿತ್ಯ ಸಂಪಿಗೆ (https://www.facebook.com/groups/kannadablog/), ರಂಗಭೂಮಿಗೊಂದು ಪುಟ (https://www.facebook.com/groups/rangabhoomi/), ಆಜಾದ್ ಅವರ ಪದಾರ್ಥ ಚಿಂತಾಮಣಿ (https://www.facebook.com/groups/342520122466608/), ಕನ್ನಡ ವೈಕಿಪೀಡಿಯಾ ಪುಟ (https://www.facebook.com/groups/kannadawikipedia/), ಎಲ್ಲಾ ಭಾಷೆಯ ಉತ್ತಮ ಚಿತ್ರಗಳ ಬಗ್ಗೆ ಚರ್ಚಿಸುವ ವರ್ಲ್ಡ್ ಸಿನಿಮಾ (https://www.facebook.com/groups/351682978185099/), ಇಂತಹ ಇನ್ನೂ ಅನೇಕ ಗುಂಪುಗಳು. ಹೀಗೆ ಇಂಟರ್ನೆಟ್ ಒದಗಿಸಬಹುದಾದ ಸಕಲ ಸಾಧ್ಯತೆಗಳನ್ನೂ ಫೇಸ್ ಬುಕ್ ಸಮರ್ಥವಾಗಿ ಬಳಸಿಕೊಂಡಿದೆ.

ಇದೆಲ್ಲಾ ಬರೆಯುತ್ತಲೇ ಇಲ್ಲಿನ ಇನ್ನೊಂದು ಘಟನೆ ನೆನಪಾಗುತ್ತದೆ, ನನ್ನ ಗೆಳತಿಯೊಬ್ಬಳು ಹೇಳಿದ್ದು : ಇಲ್ಲೇ ಫೇಸ್ ಬುಕ್ಕಿನಲ್ಲಿ ಅವಳಿಗೆ ಗೆಳತಿಯೊಬ್ಬಳು ಪರಿಚಯವಾಗಿದ್ದಾಳೆ. ಪರಿಚಯ ಆತ್ಮೀಯತೆಗೆ ತಿರುಗಿದೆ, ಮನೆಗೆ ಬಂದು ಹೋಗುವವರೆಗೇ ಆಗಿದೆ. ಆ ಹೊಸ ಗೆಳತಿ ಸುಂದರಿ, ಅದ್ಭುತವಾದ ಮಾತುಗಾರ್ತಿ, ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವಳು, ವಿಶ್ಲೇಷಿಸಬಲ್ಲವಳು, ಆದರೆ ಆರ್ಥಿಕವಾಗಿ ದುರ್ಬಲೆ. ನನ್ನ ಗೆಳತಿಗೆ ಮಾನಸಿಕವಾಗಿ ಎಂತಹ ಕಂಫರ್ಟ್ ಒದಗಿಸಿದಳು ಅಂದರೆ, ಈಕೆ ಅವಳ ಭಾರವನ್ನು ತಾನೂ ಹಂಚಿಕೊಳ್ಳಲು ಮುಂದೆ ಬಂದಳು, ಮೊದಲು ಸಣ್ಣದಾಗಿ ಶುರುವಾದ ಹಣಕಾಸಿನ ಸಹಾಯ, ಅವಳ ಕಾಯಿಲೆಗೆ, ಮಗನ ಫೀಸಿಗೆ, ಆ ತಿಂಗಳು ತಡವಾದ ಸಂಬಳಕ್ಕೆ… ಹೀಗೆ ಬೆಳೆಯುತ್ತಾ ಹೋಯಿತು. ಆಕೆ ಕೊಟ್ಟ ಮಾನಸಿಕ ಆಸರೆಗೆ ಇವಳೂ ಸಹ ತನ್ನೊಳಗನ್ನು ಅವಳೊಡನೆ ಹಂಚಿಕೊಳ್ಳುತ್ತಾ ಹೋದಳು. ಒಮ್ಮೆ ಅಕಸ್ಮಾತ್ತಾಗಿ ಇಬ್ಬರಿಗೂ ಪರಿಚಯವಿದ್ದ ಮತ್ತೊಬ್ಬ ಗೆಳತಿ ಬಾಯ್ತಪ್ಪಿ ಇವಳ ಖಾಸಗಿ ವಿಷಯ ಕೇಳಿದಾಗ ನನ್ನ ಗೆಳತಿಗೆ ಶಾಕ್! ಆಮೇಲೆ ಇಬ್ಬರೂ ಕೂತು ಮಾತಾಡಿದಾಗ ಗೊತ್ತಾದದ್ದು, ಆ ಫೇಸ್ ಬುಕ್ ಗೆಳತಿ ಇಬ್ಬರಿಗೂ ಬೇರೆ ಬೇರೆ ಕಥೆಗಳನ್ನು ಹೇಳಿ ಅದೇ ಸಮಯದಲ್ಲಿ ಹಣ ಪಡೆದಿದ್ದಾಳೆ, ಮತ್ತು ಒಬ್ಬರ ಮೇಲೆ ಇನ್ನೊಬ್ಬರಿಗೆ ಅವರ ಖಾಸಗಿ ಸಂಗತಿಗಳಿಗೆ ಉಪ್ಪು ಖಾರ ಬೆರಸಿ ಹೇಳಿದ್ದಾಳೆ ಅಂತ… ಆ ಆಘಾತ ಮತ್ತು ಅದು ನೀಡಿದ ಹೊಡೆತದಿಂದ ಸುಧಾರಿಸಿಕೊಳ್ಳುವುದೂ ಇಬ್ಬರಿಗೂ ಸುಮಾರು ದಿನಗಳು ಬೇಕಾಗಿದೆ…
ಇಂತಹ ಉದಾಹರಣೆಗಳೂ ಇಲ್ಲದಿಲ್ಲ, ಇದು ಒಂದು ವರ್ಚುಯಲ್ ಪ್ರಪಂಚ. ಹೊರಗಿನ ಪ್ರಪಂಚದಲ್ಲಿ ಆಗುವ ಪರಿಚಯಗಳಿಗೆ ಒಂದು ಸಮಾನವಾದ ಪರಿಚಯಗಳಿರುತ್ತವೆ, ಸಮಾನವಾದ ಹಿನ್ನಲೆ ಇರುತ್ತದೆ, ಆದರೆ ಇಲ್ಲಿ ಹಾಗಲ್ಲ. ಇಲ್ಲಿ ನಮಗೆ ತಿಳಿಯುವುದು ಅವರು ಎಷ್ಟು ಹೇಳಬಯಸುತ್ತಾರೋ ಅಷ್ಟು ಮಾತ್ರ. ಹಾಗಾಗುವಾಗ ಒಂದು ಮಟ್ಟದ ಎಚ್ಚರಿಕೆ ಅಗತ್ಯ. ಇಲ್ಲಿನ ಪರಿಚಯಗಳಿಗೂ ಮತ್ತು ಸ್ನೇಹಗಳಿಗೂ ಇರುವ ವ್ಯತ್ಯಾಸವನ್ನು ಗಮನದಲ್ಲಿಟ್ಟಿಕೊಂಡಿರುವುದು ಕ್ಷೇಮ..
ಫೇಸ್ ಬುಕ್ ಹೇಗೆ ಖಾಸಗಿತನವನ್ನು ಹಾಳು ಮಾದುತ್ತದೆ ಎಂದು ನನ್ನ ಸ್ನೇಹಿತ ವಿವರಿಸಿದಾಗ, ಅರೆ ಹೌದಲ್ಲ ಅನ್ನಿಸಿತು. ಅಷ್ಟೇ ಅಲ್ಲ ನನ್ನ ಗೆಳತಿಯ ಮಗಳು ಹೇಳಿದ ಕಥೆ ಇನ್ನೂ ಸ್ವಾರಸ್ಯಕರ. ಅವಳ ಕಂಪನಿಯ ಹೆಚ್ ಆರ್ ವಿಭಾಗ ಹೊಸಬರನ್ನು ಕೆಲಸಕ್ಕೆ ತೆಗೆದು ಕೊಳ್ಳುವಾಗ ಮತ್ತು ತೆಗೆದು ಕೊಂಡ ನಂತರ ಸಹ ಅವರು ನೀಡಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅವರ ಫೇಸ್ ಬುಕ್ ಪುಟಗಳ ಸಹಾಯ ತೆಗೆದುಕೊಳ್ಳುತ್ತಾರಂತೆ!
ಇದರ ಜೊತೆಗಿನ ಅನುಸಂಧಾನದ ನಂತರ ನನ್ನ ಲೈಬ್ರರಿ ಕಾರ್ಡ್ ಬಳಕೆ, ಕ್ರೆಡಿಟ್ ಕಾರ್ಡ್ ಬಳಕೆಗಿಂತಾ ಕಡಿಮೆ ಆಗಿದೆ ಅನ್ನುವುದು ನನ್ನ ಖಾಸಗೀ ದುಖಃ!
ನನ್ನ ಮಗನ ಫೇಸ್ ಬುಕ್ ವಲಯದಲ್ಲಿ ನಾನೂ ಇರುವುದರಿಂದ ಮತ್ತು ನಾನು ಅದರಲ್ಲಿ ಅವನು ಹಾಕುವ ಕಾಮೆಂಟ್ ಗಳ ಬಗ್ಗೆ ಸ್ಟೇಟಸ್ ಗಳ ಬಗ್ಗೆ ಯಾವತ್ತೂ ಮಾತನಾಡದೇ ಇರುವುದರಿಂದ ಅವನ ಸ್ನೇಹ ವಲಯದಲ್ಲಿ ನನ್ನದೂ ಒಂದು ನೋಟ ಇದೆ! ಮಗಳ ಫೇಸ್ ಬುಕ್ ಹುಚ್ಚಿನಿಂದ ಅವಳ ಓದಿಗೆ ತೊಂದರೆ ಆಗಬಾರದೆಂದು ನನ್ನ ಗೆಳತಿ ಮಗಳ ಕಂಪ್ಯೂಟರ್ ಬಳಕೆಯ ಅವಧಿಯನ್ನು ನಿಗದಿ ಪಡಿಸಿದ್ದಾಳೆ. ಅದಕ್ಕೆ ಮಗಳದೇನೂ ದೊಡ್ಡ ಪ್ರತಿರೋಧ ವ್ಯಕ್ತವಾಗದಿದ್ದಾಗ ಅವಳಿಗೂ ಅಚ್ಚರಿ! ಸುಮಾರು ೨-೩ ತಿಂಗಳಾದ ಮೇಲೆ ಇವಳಿಗೆ ಮನೆಯಲ್ಲಿರುವ ವೈ ಫೈ ಸಂಪರ್ಕ ನೆನಪಾಗಿದೆ! ಪ್ರತಿ ಮೊಬೈಲೂ ಈಗ ಒಂದು ಪುಟ್ಟ ಕಂಪ್ಯೂಟರ್, ಹಾಗಾಗಿ ಕಂಪ್ಯೂಟರ್ ನ ವೀಸಾ ಇಲ್ಲದೆಯೂ ಫೇಸ್ ಬುಕ್ ಯಾತ್ರೆ ಸಾಧ್ಯ!
ಮೊಬೈಲ್ ನಲ್ಲಿ ಫೇಸ್ ಬುಕ್ ಎಂಬ ಅಂಶವೇ ನಮ್ಮೆಲ್ಲರ ನಿದ್ದೆ ಕದಿಯುವ ಕಳ್ಳ ಅಂತ ನನ್ನ ನಂಬಿಕೆ! ಕಂಪ್ಯೂಟರ್ ಆಫ್ ಆಗಿದ್ದಾಗಲೂ, ಲೈಟು ಆರಿಸಿದ ಮೇಲೂ, ಹಾಸಿಗೆಯಲ್ಲಿರುವಾಗಲೂ ಮೂಬೈಲ್ ನಲ್ಲಿ ಬರುವ ಒಂದು ಸಣ್ಣ ’ಟಣ್’ ಶಬ್ಧ ಹೇಗೆ ನಮಗೆ ಅರಿವೇ ಇಲ್ಲದಂತೆ ತನ್ನ ಬಾಹುಗಳಲ್ಲಿ ಸೆಳೆದುಕೊಂಡು ನಿದ್ದೆ ಕದ್ದು ಬಿಡುತ್ತದಲ್ಲ? ಹೀಗೆ ಒಮ್ಮೆ ರಾತ್ರಿಯ ನೀರವತೆಯಲ್ಲಿ ಗುಲ್ಜಾರ್ ಹಾಡಿನ ಸಾಲುಗಳು ಟೇಪ್ ರೆಕಾರ್ಡರಿನಿಂದ ಹನಿ ಹನಿಯಾಗಿ ಹರಿದು ನನ್ನ ಮನಸ್ಸನ್ನು ಕಡಲಂತೆ ಆವರಿಸಿದಾಗ ತಡೆಯಲಾಗದೆ ಅದನ್ನು ನನ್ನ ಫೇಸ್ ಬುಕ್ ಗೋಡೆಗೆ ದಾಟಿಸಿದೆ ನೋಡಿ, ಅದೇ ಅರ್ಥದ ಅಂತಹದೇ ಹಾಡುಗಳು, ಲೈಕ್ ಗಳೂ, ಕಾಮೆಂಟ್ ಗಳೂ …. ನಿದ್ದೆ ಕೆಟ್ಟವಳು ನಾನೊಬ್ಬಳೇ ಅಲ್ಲ ಅಂತ ಸಮಾಧಾನ!
ಟೆಲಿಫೋನ್, ಮೊಬೈಲ್ ಬಂದು ಪತ್ರ ಬರೆಯುವ, ಓದುವ, ಕಾಪಿಟ್ಟುಕೊಂಡು ಪದೇ ಪದೇ ಸವಿಯುವ ಸುಖ ನಮಗೆ ಎರವಾಯ್ತು, ಈಗ ಫೇಸ್ ಬುಕ್ಕಿನಿಂದ ನಾವು ಪರಸ್ಪರ ಮಾತನಾಡುವ ಸುಖಕ್ಕೂ ಎರವಾಗುತ್ತಿದ್ದೇವಾ ಅಂತ ಯೋಚಿಸುತ್ತೇನೆ. ಇದು ನಮ್ಮನ್ನು ಮತ್ತಷ್ಟು ದ್ವೀಪವಾಗಿಸುತ್ತಿದೆಯಾ ಅನ್ನುವ ಸಣ್ಣ ದುಗುಡ ಸಹ ಮನದಲ್ಲಿ..
ಇಷ್ಟೆಲ್ಲಾ ಹೇಳುವಾಗಲೂ ನನ್ನ ಲ್ಯಾಪ್ ಟಾಪಿನ ಗೋಡೆಯ ಅಂಚಿನಲ್ಲಿ ಫೇಸ್ ಬುಕ್ ದೀಪ ಮಿನುಗುತ್ತಿದೆ ಅನ್ನುವುದೂ ಅಷ್ಟೇ ಸತ್ಯ!
ಒಂದು ತಮಾಷೆ ಪ್ರಕರಣ ಹೇಳಿ ಈ ಲೇಖನ ಮುಗಿಸುತ್ತೇನೆ : ಮೊನ್ನೆ ನನ್ನ ತಂಗಿಯ ಮಗ ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡು ಹೇಳುತ್ತಿದ್ದ, “ಅಮ್ಮ ನೀನು ಹೀಗೆ ಬೈತಾ ಇರು, ಎಲ್ಲಾನೂ ನಾನು ಫೇಸ್ ಬುಕ್ಕಿಗೆ ಹಾಕಿ, ಎಲ್ರಿಗೂ ಹೇಳ್ತೀನಿ ನಮ್ಮಮ್ಮ ಎಷ್ಟು ಬೈತಾರೆ ಅಂತ…”! ಅವನ ವಯಸ್ಸು ಈಗ ಎಂಟು ವರ್ಷ!! ಅವನ ಸ್ನೇಹಿತರೂ ಸಹ ಫೇಸ್ ಬುಕ್ಕಿನ ಬಗ್ಗೆ ಮಾತನಾಡುತ್ತಾರೆ ಎಂದರೆ….!
‘ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ..’ ಎಂಬ ಜಿ ಎಸ್ ಎಸ್ ಕವಿತೆ ಟೇಪ್ ರೆಕಾರ್ಡರ್ ನಲ್ಲಿ ಮೊರೆಯುತ್ತಿದೆ.. ಅರೆರೆ..! ಈ ಫೇಸ್ ಬುಕ್ ಎಂಬ ನಿದ್ದೆ ಕದ್ದ ಚೋರನ ವಿಷಯದಲ್ಲೂ ಈ ಹಾಡು ಅಷ್ಟೇ ನಿಜ.
‘ಕಂಡ ಕಂಡ ಕಡೆ ಸೊಂಡಿಲ ಚಾಚುವ ಫೇಸ್ ಬುಕ್ಕಿಗೆ ಅಂಕುಶವಿಲ್ಲ..’







ನಿದ್ದೆಯೇನು, ಬುದ್ಧಿಯನ್ನೇ ಕಸಿದುಕೊಂಡುಬಿಡುವಂಥದಿದು ಈ ಫೇಸ್ ಬುಕ್ಕು…
ಇದನ್ನು ಓದಿದ ಕೂಡಲೇ ಥಟ್ಟನೆ ಮನಸ್ಸಿಗೆ ಹೊಳೆದದ್ದು “ವಾಹ್, ಈ ಆರ್ಟಿಕಲ್ ಗೆ ಒಂದು ‘super like'” ಎಂದು! ಈ ಮಟ್ಟಕ್ಕೆ FB ನಮ್ಮನಾವರಿಸಿಬಿಟ್ಟಿದೆ! ಇನ್ನು,ಇದರ ಮುಂದಿನ consequences ಏನಾಗಬಹುದು ಎಂದು ಕಾದು ನೋಡಬೇಕು!
sathyada anaavarana…nice writeup
ಇಲ್ಲಿನ ಅಪಾಯ ಮತ್ತು ನಿರುಪದ್ರವಿ ಸಂಬಂಧಗಳ ಬಗ್ಗೆ ಚೆನ್ನಾಗಿ ವಿವರಿಸಿದ್ದೀರ.ಎಂಥ ವಿಚಿತ್ರ ನೋಡಿ:ಹಾಗೆ ನೋಡಿದರೆ ನಮ್ಮ Friends ಲಿಸ್ಟ್ ನಲ್ಲಿರುವ 90% ಜನರನ್ನು ನಾವು ನೋಡಿಯೇ ಇರುವದಿಲ್ಲ.10% ಜನರೊಂದಿಗೆ ಗೆಳೆತನವೇನೋ ಇದೆ,ಆದರೆ 5% ಜನರೊಂದಿಗೆ ಮಾತ್ರ ಮಾತನಾಡಿದ್ದೇವೆ ಮತ್ತು 2% ಜನರೊಂದಿಗೆ ಪ್ರತಿದಿನ ಸಂಪರ್ಕದಲ್ಲಿರುತ್ತೇವೆ.ಇಷ್ಟಾಗಿಯೂ ಫೇಸ್ ಬುಕ್ ಈ ಪರಿ ಬೆಳೆದು ನಿಲ್ಲಲು ಕಾರಣವೇನಿರಬಹುದು?
ಮನುಷ್ಯನ ‘ಇಣುಕಿ ನೋಡುವ ಪ್ರವೃತ್ತಿ’ಯೇ? 😉
-Rj
Baraha chennagi moodi bandhidhe. Facebook, adharolagina gumpugalu, haleya gelathiyara maru parichaya, hosa gelathiyaru….mukha kaanadharindha dhairyavaagi maathaaduva pari…. Ellavannu official sandhya avaru bareddhiruva reethi chennagidhe. Thanks.
ಚೆನ್ನಾಗಿದೆ
Fantastic sandya.Not only u are a voracious reader but also a music lover. ur song quotaitons are very nice. I appreciate it. I enjoyed it.Everything comes in front of ur eyes.
ಅದ್ಭುತ ಬರಹ ಸಂಧ್ಯಾ … ಅಕ್ಷರಕ್ಷರವೂ ಪೂರ ಪೂರ ನಿಜ.. ಒಂದು ಲೈಕು ಒತ್ತಿಯೇ ಬಿಟ್ಟೆ…
ಮೊನ್ನೆ ಮುಕ್ತ ಧಾರಾವಾಹಿಯಲ್ಲಿ ಶಾರದಮ್ಮ ಪಾಂಡುಗೆ ಹೇಳ್ತಿದ್ರು “ಫೇಸ್ ಬುಕ್ ಬಿಡಪ್ಪಾ; ಯಾರಾದ್ರೂ ಸತ್ತ ಸುದ್ದಿಗೂ ಲೈಕು ಒತ್ತುತಾರೆ” ಅಂತ.. ನಿಮ್ಮ ಲೇಖನ ಓದುವಾಗ ನೆನಪಾಯಿತು.
RJ ಸರ್ ಕೊಟ್ಟ “ನೋಡಿದರೆ ನಮ್ಮ Friends ಲಿಸ್ಟ್ ನಲ್ಲಿರುವ 90% ಜನರನ್ನು ನಾವು ನೋಡಿಯೇ ಇರುವದಿಲ್ಲ.10% ಜನರೊಂದಿಗೆ ಗೆಳೆತನವೇನೋ ಇದೆ,ಆದರೆ 5% ಜನರೊಂದಿಗೆ ಮಾತ್ರ ಮಾತನಾಡಿದ್ದೇವೆ ಮತ್ತು 2% ಜನರೊಂದಿಗೆ ಪ್ರತಿದಿನ ಸಂಪರ್ಕದಲ್ಲಿರುತ್ತೇವೆ.” ಅಬ್ಬಾ ಹೌದಲ್ಲವಾ ಅನಿಸಿತು.
ನಿಮ್ಮ ಬರಹ ನಿಜ. ಫೇಸ್ ಬುಕ್ ಒಂದು ಬಿಡುಗಡೆಯ ತಾಣ ಹೇಗೋ ಬಂಧನವೂ ಹೌದು. ಮಗುವಿನ ಜೊತೆ ಕಳೆಯುವ ಅರ್ಧಗಂಟೆಯನ್ನು ಫೇಸ್ ಬುಕ್ ಮೇಲೆ ಕಳೆಯೋರಿದ್ದಾರೆ. ಅಮ್ಮನ ಜೊತೆ ಹತ್ತು ನಿಮಿಷ ಮಾತಾಡಲು ಸಿಡಿಮಿಡಿಗೊಳ್ಲುವವರು ಫೇಸ್ ಬುಕ್ಕಿನಲ್ಲಿ ಗಂಟೆಗಟ್ಟಲೆ ಇರುತ್ತಾರೆ. ಈ ಜಗತ್ತನ್ನು ತಾವರೆ ಎಲೆಯ ಮೇಲಿನ ನೀರಿನ ಹನಿ ಅನ್ನುತ್ತಿದ್ದರು. ಫೇಸ್ ಬುಕ್ ಸ್ನೇಹವೂ ಹಂಗೇನಾ ಅನ್ನಿಸೋದಿಲ್ವಾ..
ಪ್ರೀತಿಯ ಸಂಧ್ಯಾ ಮೇಡಂ…ಸಮಯ ೧೨.೩೪ ರಾತ್ರಿ…ಈಗ ಕಾಮೆಂಟ್ ಟೈಪ್ ಮಾಡ್ತಾ ಇದ್ದೇನೆ….ಇದೇ ಎಫ್ ಬಿ ಯ ಮಹಿಮೆ,ಅಮಲು….
”ನಿಂಗಿ, ನಿಂಗಿ-ನಿಂಗಿ, ನಿಂಗಿ… ನಿದ್ದೆ ಕದ್ದೆಯಲ್ಲೇ ನಿಂಗಿ…”
-ಹಾಡು ನೆನಪಾಯ್ತು ನಂಗೆ …
ಲೇಖನ ಓದಿ ಪ್ರತಿಕ್ರಯಿಸಿದ, ಮೆಚ್ಚಿದ ನಿಮಗೆ ನನ್ನ ಧನ್ಯವಾದಗಳು!
Wow…Tumba chennagide Sandhya akka. Sakhi li oododakke aagirlilla.
ಉತ್ತಮ ಲೇಖನ ! ಉತ್ತಮ ನಿರೂಪಣೆ , ನೀವು 100% ಫೇಸ್ ಬುಕ್ಕಿ ಕಣ್ರೀ, ಅದಕ್ಕೆ ಈ ವಿಷಯದ ಬಗ್ಗೆ ತಲೆಯಿಂದ ಬಾಲದವರೆಗೂ ಚೆನ್ನಾಗಿ ಬರೆದಿರೋದು. ನಾ ನಿಮ್ಮೊಡನೆ ಈ ರೀತಿ ಮಾತನಾಡಲು ಫೇಸ್ ಬುಕ್ಕೇ ಕಾರಣ 🙂
ಅಭಿನಂನೆಗಳು ಸಂದ್ಯಾರಾಣಿಯವರೆ ಬಹಳ ಚನ್ನಾಗಿ ಬರೆದಿದ್ದೀರಿ,,,
ಹೌದು ಇಂದು ಫೇಸ್ಬುಕ್ ಒಂದು ಕ್ರಾಂತಿಯಾಗಿದೆ . ಮೊಬೈಲಿನಂತೆಯೇ . ಇದರ ಸದುಪಯೋಗ ನಮ್ಮ ಕೈಯಲ್ಲಿದೆ. ಇಂದು ನಿಮ್ಮ ಕಂಪ್ಯೂಟರ್ ನಿಂದಲೇ ವಿಶ್ವ ಪರ್ಯಟನೆ ಮಾಡಬಹುದು , ಹೊಸ ಹೊಸ ಮಿತ್ರರನ್ನು ಗಳಿಸಬಹುದು. ಆದರೆ ಎಚ್ಚರ ತಪ್ಪಿದರೆ ಮುಂದಿನ ಜೀವನವೇ ಅಸಹ್ಯ, ದುಖಮಯವಾಗಬಹುದು. ನಮ್ಮೆ ವೈಯುಕ್ತಿಕ ಮಾಹಿತಿ, ಛಾಯಾ ಚಿತ್ರಗಳ ಬಳಕೆಯ ಬಗ್ಗೆ ಎಚ್ಚರವಿರಬೇಕು. ಇಲ್ಲಿ ಬಹುತೇಕ ಮಿತ್ರರು ಕೇವಲ ಕಾಲ ಹರಣ ಮಾಡಲು ಬಯಸುತ್ತಾರೆ. ಆದರೆ ಇದು ಒಂದು ಅತಿಶಕ್ತಿಯುತ ಮಾಧ್ಯಮ ಮತ್ತು ಇದನ್ನು ಬಳಸಿ ಸಾಮಾಜಿಕ ಕ್ರಾಂತಿಯನ್ನು ಮಾಡಬಹುದು ಆದರೆ ಹಾಗಾಗುತ್ತಿಲ್ಲಾ. ಯಾಕೆಂದರೆ ಮಾನವನ ಸಹಜ ಗುಣವು ಕ್ರಾಂತಿ, ಬದಲಾವಣೆ ಇನ್ನೊಬ್ಬರು ಮಾಡಲಿ ನಮಗೇಕೆ ಅದರ ಉಸ್ತುವಾರಿ. ಆದುದರಿಂದ ಇಲ್ಲಿ ಹೆಚ್ಚಿನ ಸಮಯ ಅನುತ್ಪಾದಿತ ಕೆಲಸಕ್ಕೆ ವಿನಿಯೋಗಿಸಲ್ಪಡುತ್ತದೆ.ನಾವು ಇದರ ಸದುಪಯೋಗ ಮಾಡಿ ನಮ್ಮ ಸಮಾಜದ ಒಳಿತಿಗೆ ಉಪಯೋಗಿಸಬಹುಇದೆ..?
Sandhyakka face book is injurious to health………… ;):P
kannada e site tumba channagide