ನಿಂಗು ಒಳಗೊಂದು ಕಲಾ
ನೂರಅಹಮದ ಮಕಾನದಾರ
ದಾಂಪತ್ಯ ಬದುಕಿನ ಸಹಜ ಭಾವಗಳ ನುಡಿ ತೋರಣ
ಹೃದಯ ಬಡಿತಕ್ಕೆ ತಾಳವಾಗಿ, ಹಸಿವಿಗೆ ಕಸುವಾಗಿ, ಕವಿತೆಗೆ ಕಲ್ಪನೆಯಾಗಿ, ವಿಚಾರಕ್ಕೆ ವಿಮರ್ಶಕಿಯಾಗಿ, ಸೋಲಿಗೆ ಗೆಲುವಾಗಿದ್ದವಳು ಕಲಾ ಎನ್ನುತ್ತ ಇನ್ನೂ ಕಲಾರಾಧನೆಯಲ್ಲಿರುವ ಪತಿ. ತಮ್ಮೆಲ್ಲ ಬರವಣಿಗೆ ಹಿಂದಿನ ಶಕ್ತಿಯಾಗಿದ್ದ ಅಮ್ಮ, ಈಗ ಅಕ್ಷರವಾಗಿದ್ದಾಳಂತೆ ಮಕ್ಕಳ ಪಾಲಿಗೆ. ಕಲಾ ಟೀಚರ್ಗೆ ಸ್ವರ್ಗಕ್ಕೆ ವರ್ಗವಾಗಿದೆಯಂತೆ!, ಮತ್ತೇ ತಮ್ಮೂರಿಗೆ ವರ್ಗ ಮಾಡಿಸಿಕೊಳ್ತಾರಂತೆ! ಹೀಗಂತ ಕಾದು ಕುಳಿತ ಮೈದುನರು. ನಿನಗೆ ಅಕ್ಕಾ ಅನ್ನುವುದಕ್ಕಿಂತ ಅವ್ವಾ ಎನುವುದೇ ಲೇಸೆನಿಸುತ್ತಿದೆ ಎಂದು ಅವ್ವಾ ಎನಲು ಕಾಯುತ್ತಿರುವ ತಮ್ಮ. ಏನೇ ಆಗಲಿ ಗಂಡನ ಪಾಲಿನ ಹೆಂಡತಿ, ಮಕ್ಕಳ ಪಾಲಿನ ತಾಯಿ, ತಮ್ಮನ ಪಾಲಿನ ಅಕ್ಕ, ಮೈದುನರ ಪಾಲಿನ ಅತ್ತಿಗೆ ಈಗ ನೆನಪಿನ ಹೊತ್ತಿಗೆಯಾಗಿದ್ದಾರೆ.
ಹೌದು, ಅಗಲಿಕೆ ಅನಿವಾರ್ಯವಾದರೂ ಕೂಡ ಆ ಅನಿವಾರ್ಯತೆಗೊಂದು ಅರ್ಥ ಕಲ್ಪಿಸುವ ಪ್ರಯತ್ನ ಡಾ.ನಿಂಗು ಸೊಲಗಿ ಕುಟುಂಬ ಮಾಡಿದೆ. ಇತ್ತಿಚೆಗಷ್ಟೆ ಡಾ. ನಿಂಗು ಅವರ ಪತ್ನಿ ಕಲಾವತಿ ಅವರು ನಿಧನ ಹೊಂದಿದರು. ಆದರೆ ಆ ತಾಯಿಯ ಆಸೆಯಂತೆಯೇ ಅವರೇ ನಿಗದಿ ಮಾಡಿದ ದಿನದಂತೆ ಅವರ ಪುತ್ರ ಚೇತನ್ ಸೊಲಗಿ ವಿವಾಹ ನೆರವೇರುತ್ತಿದೆ.

ಮನಸ್ಸುಗಳು ಭಾರವಾಗಿವೆ. ಆದರೇನು ಮಾಡುವುದು ಅಮ್ಮನ ಆಸೆಯಂತೆ ಅಮ್ಮ ನಿಗದಿ ಮಾಡಿದ ಕಲ್ಯಾಣ ಮಂಟಪದಲ್ಲಿ ಚೇತನ್ ವಿವಾಹವಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನನ್ನಿನ್ನ ನಗಿ ನೋಡಿ ಪುಸ್ತಕ ವಿವಾಹದ ಆಮಂತ್ರಣವಾಗಬೇಕಿತ್ತು. ಆದರೆ ಈ ಕುಟುಂಬದಲ್ಲಿ ನಡೆದ ಈ ಘಟನೆ ಸಣ್ಣದೇನು ಅಲ್ಲ. ಕುಟುಂಬದ ಕಳೆಯಾಗಿದ್ದ ಕಲಾ ಟೀಚರ್ಗೆ ಚೇತನ್ ಹಾಗೂ ವಿಶ್ವಾಸ್ ಇಬ್ಬರೇ ಮಕ್ಕಳಾಗಿರಲಿಲ್ಲ. ಅವರ ಬಳಿ ಕಲಿತ ವಿದ್ಯಾರ್ಥಿಗಳೆಲ್ಲವೂ ಅವರ ಮಕ್ಕಳಂತೆ. ಇಂದಿಗೂ ಕೂಡ ಮಕ್ಕಳು ಟೀಚರ್ ನೆನೆದು ಕಣ್ಣೀರಿಡುತ್ತಿರುವುದು ಇದಕ್ಕೆ ಉದಾಹರಣೆ.
ಈ ಕಾರಣದಿಂದ ಸಾಹಿತ್ತಿಕ ಹಿನ್ನೆಲೆಯ ಸೊಲಗಿ ಕುಟುಂಬ ಸೃಜನಶೀಲತೆ, ಹೊಸತನ ಮೈಗೂಡಿಸಿಕೊಂಡಿರುವಂತಹದ್ದು, ಹೀಗಾಗಿ ದಾಂಪತ್ಯ, ಪ್ರೇಮ ಹೀಗೆ ಎಲ್ಲದರ ಹೂರಣವನ್ನು ತುಂಬಿದ ಹೊತ್ತಿಗೆ ಮದುವೆಯ ಆಮಂತ್ರಣವಾಗಬೇಕಾಗಿದ್ದು, ಈಗ ತಾಂಬೂಲವಾಗಿ ಬದಲಾಗಿದೆ. ಇಲ್ಲಿ ಅಗಲಿದ ಮಡದಿಯ ಸ್ಮರಣೆ ಇದೆ. ಡಾ.ನಿಂಗು ಅವರ ಮೂರು ದಶಕದ ದಾಂಪತ್ಯದ ಜೀವನ ಪುಸ್ತಕದಲ್ಲಿದೆ. ದಾಂಪತ್ಯದ ಪಾಠವಿದೆ. ತರುಣರ ಪ್ರೇಮ ಕಾವ್ಯವೂ ಇದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳ ಕನಸ್ಸಿದೆ. ಹೀಗೆ ಹೇಳುತ್ತಾ ಹೋದರೆ ದಾಂಪತ್ಯಕ್ಕೊಂದು ಪಾಠವಾಗಬಲ್ಲ ಕೃತಿ ಇದಾಗಿದೆ.
ಬಹುಶಃ ಈ ಪುಸ್ತಕದ ಹೆಸರೇ ನನ್ನಿನ್ನ ನಗಿ ನೋಡಿ ಎಂದಾದರೆ ಅದರ ಅಡಿ ಬರಹ ಜೀವ ಭಾವಗಳ ನುಡಿ ತೋರಣ ಎಂದಿದೆ. ಆದರೆ ಈ ಪುಸ್ತಕ ಖಾಸಗಿಯಾಗಿರಬಹುದು. ಆದರೆ ಪುಸ್ತಕದಲ್ಲಿನ ಪ್ರತಿ ಅಕ್ಷರ ತೋರಣ ಎಲ್ಲರ ಜೀವನಕ್ಕೂಂದು ಸಂದೇಶ. ತಾಯಿ ಮಕ್ಕಳ ಮಮತೆ, ಗಂಡ ಹೆಂಡತಿಯ ಕಕ್ಕುಲತೆ, ಅತ್ತಿಗೆ ಮೈದುನರ ಸಂಬಂಧ, ಅಕ್ಕ ತಮ್ಮನ ಬಾಂಧವ್ಯ. ಹೀಗೆ ಜೀವನದಲ್ಲಿ ಒಂದು ಕುಟುಂಬದಲ್ಲಿರಬೇಕಾದ ಸಂಬಂಧಗಳನ್ನು ಹೇಗೆ ನಿರ್ವಹಿಸಿಕೊಂಡು ಹೋಗಬೇಕು ಎನ್ನುವುದರ ಬಗೆಗೊಂದು ನೀತಿ ಪಾಠ ಈ ಪುಸ್ತಕದಲ್ಲಿದೆ.

ನೀ ನಕ್ಕ ನಗಿಯ ಕ್ಯಾದಿಗಿ ಗರಿಯು
ಬಿಚ್ಚಿ ಬಿಚ್ಚಿದಾಂಗ ಚೆಲುವು
ಆ ಚೆಲುವಿನೊಳಗ ತುಂಬೈತಿ ಒಲವು
ಮೂಡೈತಿ ಮನಕ ಗೆಲವು ಎಂದು ತನ್ನ ಪ್ರಾಣೇಶ್ವರಿಯ ನಗೆಯ ಬಗ್ಗೆ ಕೇಳುವ ನಿಂಗು. ಒಟ್ಟು 16 ವಾಸ್ತವ ಬರಹಗಳ ಹೂರಣದ ಹೊತ್ತಿಗೆ ಇದಾಗಿದೆ. ಇದು ಪ್ರೇಮ ಅಲ್ಲ. ಪಪ್ಪಿ ಲವ್. ಮಕ್ಕಳ ಭವಿಷ್ಯ. ತಮ್ಮ ಹಾಗೂ ಇಂದಿನ ಮಕ್ಕಳ ಬಾಲ್ಯದ ಬಗೆಗಿನ ಆತಂಕ, ಮಕ್ಕಳ ಬಗೆಗೆ ಪಾಲಕರ ಕಾಳಜಿಯ ಜಾಗೃತಿ ಮೂಡಿಸುವುದಂತೂ ನಿಜ. ಮೂರು ದಶಕದ ದಾಂಪತ್ಯದ ಪ್ರತಿ ಕ್ಷಣ ಹಾಗೂ ಘಟನೆಗಳನ್ನು ಅಕ್ಷರದಲ್ಲಿ ಸೆರೆ ಹಿಡಿದ ನಿಂಗು ಬರೆಯುವಾಗ ಅದೆಷ್ಟು ಬಾರಿ ತುಟಿ ಕಚ್ಚಿ, ದುಃಖದ ಕಟ್ಟೆ ಒಡೆದು ಅತ್ತಿರಬಹುದು? ಆಗ ಬರಹಕ್ಕಾಗಿ ಮುಂದೆ ನಿಲ್ಲಿಸಿಕೊಂಡ ಮಡದಿ ಕಲಾ ಅವರೇ ನಿಂಗು ಅವರನ್ನು ಮಗುವಿನಂತೆ ಸಂತೈಸಿ ಮತ್ತೇ ಬರೆ ಎಂದು ಪ್ರೇರೆಪಿಸಿದಂತೆ ಕಂಡು ಬರುತ್ತದೆ. 132 ಪುಟಗಳ ಈ ಪುಸ್ತಕ ಓದಲಾರಂಭಿಸಿದರೆ ಬಿಡುವಿಲ್ಲದೇ ಓದಿಸಿಕೊಂಡು ಹೋಗಬಲ್ಲ ಮಾಂತ್ರಿಕ ಶಕ್ತಿ ಈ ಹೊತ್ತಿಗೆಯ ಅಕ್ಷರಗಳಲ್ಲಿದೆ.
ಅಮ್ಮ ನೀನಿಲ್ಲದ ಬದುಕೊಂದು ಬದುಕೆ?
ಪರಮಾತ್ಮನೆಂಬೋನು ದಾರಿಲಿ ಸಿಕ್ಕರೆ
ಅವನಿಗೆ ಒಳ್ಳೆತನದ ಪಾಠ ಮಾಡಿ ಬಿಡು
ಎಂದು ಹೇಳುವ ಚೇತನ್ನ ಅಮ್ಮನ ಕುರಿತಾದ ಕಾವ್ಯದಲ್ಲಿ ಅಮ್ಮನ ಬಗೆಗಿನ ಪ್ರೀತಿಯ ಜೊತೆಗೆ ದೇವರಿಗೂ ಒಳ್ಳೆತನದ ಪಾಠ ಮಾಡಲು ತಾಯಿಯನ್ನು ಅಂಗಲಾಚಿದ ಆ ಕಾವ್ಯ ಕಣ್ಣೀರು ತರಿಸುವುದಂತೂ ಸತ್ಯ. ಕೊನೆಯದಾಗಿ ಹೇಳಬೇಕೆಂದರೆ ಈ ಪುಸ್ತಕವನ್ನು ಕವನ ಸಂಕಲವೆನ್ನಬೇಕೋ? ಕಥಾ ಸಂಕಲನವೆನ್ನಬೇಕೋ? ನೀತಿ ಕಥೆಗಳ ಕೃತಿ ಎನ್ನಬೇಕೋ? ಪ್ರೇಮ ಕಥೆಗಳ ಸಂಕಲನವೆನ್ನಬೇಕೋ? ಈ ಪುಸ್ತಕಕ್ಕೊಂದು ಚೌಕಟ್ಟು ಹಾಕುವುದು ಕಷ್ಟ ಸಾಧ್ಯ. ಇಲ್ಲಿ ಎಲ್ಲವೂ ಇದೆ. ಅದಕ್ಕೆ ಹೇಳಿದ್ದು ಡಾ.ನಿಂಗು ಒಳಗೊಂದು ಕಲಾ ಇದೆ ಅಂತ. ಈ ಪುಸ್ತಕವೇ ಚೇತನ್ ಮದುವೆಯಲ್ಲಿ ಅಕ್ಷರ ತಾಂಬೂಲವಾಗಿದ್ದು, ಓದಿದವರ ಜೀವನಕ್ಕೊಂದು ನೀತಿ ಪಾಠ ಈ ಹೊತ್ತಿಗೆಯಿಂದ ಸಿಗುವುದಂತೂ ನಿಶ್ಚಿತ.






0 Comments