ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ

ಡಾ ನಾ ದಾಮೋದರ ಶೆಟ್ಟಿ

ಯುವತಲೆಮಾರಿನ ಪ್ರಮುಖ ಬರಹಗಾರರಲ್ಲೊಬ್ಬರಾದ ಇಂದ್ರಕುಮಾರ್‌ ಎಚ್‌.ಬಿ. ಅವರು ಕವಿ, ಕತೆಗಾರ ಹಾಗೂ ಕಾದಂಬರಿಕಾರರಾಗಿ ಮುನ್ನೆಲೆಗೆ ಬಂದವರು. ಮೃದುಲಾ, ಹುಲಿಕಾನು ಕಾದಂಬರಿಗಳನ್ನು ಬರೆದ ಬಳಿಕ ಇದೀಗ ʻಎತ್ತರʼ ಎಂಬ ಬೃಹತ್‌ ಕಾದಂಬರಿಯ ಮೂಲಕ ಸಾಹಿತ್ಯಲೋಕದಲ್ಲಿ ಬಲವಾದ ಹೆಜ್ಜೆಗಳನ್ನಿಟ್ಟವರು. ಬರೆದ ಪ್ರತಿಯೊಂದು ಕೃತಿಗೂ ಒಂದಲ್ಲಾ ಒಂದು ಪುರಸ್ಕಾರವನ್ನು ತಮ್ಮದಾಗಿಸುತ್ತ ಸಾಗುತ್ತಿರುವ ಇಂದ್ರಕುಮಾರ್‌ ʻಎತ್ತರʼದ ಮೂಲಕ ಕನ್ನಡ ಕಾದಂಬರಿ ಪ್ರಪಂಚದಲ್ಲಿ ಢಾಳಾದ ಮುದ್ರೆಯನ್ನೊತ್ತುವ ಧಾವಂತದಲ್ಲಿದ್ದಾರೆ.

ಇಡಿಯ ಕಥಾವಸ್ತುವಿನೊಳಗೆ ʻಎತ್ತರʼ ಓತಪ್ರೋತಗೊಂಡು ರೂಪಕವಾಗಿ ಕುಳಿತಿದೆ. ಇಲ್ಲಿನ ಪ್ರತಿಯೊಂದು ಪಾತ್ರವನ್ನು ಅದರ ಎತ್ತರ ಹಾಗೂ ಬಿತ್ತರದ ದೃಷ್ಟಿಯಲ್ಲಿ ನೋಡಬೇಕು. ಕತ್ಲೆಕಾನನ್ನು ಕೂಡ. ಪಾತ್ರಗಳು ನಗರದಿಂದ ಕಾನನಕ್ಕೆ ಬಂದವುಗಳು. ಕಾನನದ ನಿಗೂಢತೆಯೊಂದಿಗೆ ಬೆರೆತವುಗಳು. ಕಾನನವಾದರೋ ಬರಿಯ ಕಾನನವಲ್ಲ; ಅದು ಎತ್ತರದ ಕಾನು, ಬಿತ್ತರದ ಕಾನು. ಅದು ಭ್ರಮೆಯ ಕಾನು, ಕುತೂಹಲದ ಕಾನು. ಕಾದಂಬರಿಕಾರರೇ ಹೇಳುವಂತೆ ಅದು ʻಕತ್ಲೆಕಾನು,ʼ ಬೆಳಕಿನ ಕಾನು, ಸುತ್ತಲೆ ಕಾನು, ತಿರುಗಲೆ ಕಾನು, ಐಷಾರಾಮಿ ಕಾನು ಕೂಡ. 

ʻಆ ಹೂವಿನಿಂದಲೇ ಇಷ್ಟೆಲ್ಲ ಆಯಿತು ಅನ್ನಬಹುದೆ. ಗೊತ್ತಿಲ್ಲ!ʼ ಇದು ಕಾದಂಬರಿಯ ಮೊದಲ ವಾಕ್ಯ ಆ ಹೂವು ಸುಂದರವಾಗಿದೆ. ಪರಿಮಳಭರಿತವಾಗಿದೆ. ಆ ಹೂವು ಕೈಬದಲಾಯಿಸುತ್ತೆ, ಅಂತರ್ಗತವಾಗುತ್ತೆ, ಕೊನೆಗೆ ಯಾರಿಗೂ ಬೇಡವಾಗುತ್ತೆ. ಎತ್ತರ ಕಾದಂಬರಿಯ ನಾಮಪಲ್ಲಟಿತ ರವಿಕಿರಣನ ಬದುಕೂ ಹಾಗೇನೆ. ಇತರ ಪಾತ್ರಗಳದು ಕೂಡ. ಹಾಗಾಗಿ ಹೂವೂ ರೂಪಕವೆ!

ಆತಎತ್ತರದ ಮನೆಯೊಡತಿ ಕಾದಂಬರಿಯೆಂಬಾಕೆಯ ಮನೆಯಲ್ಲಿ ಟೈಪಿಸ್ಟ್‌ ಆದದ್ದು, ಅತ್ತ ಲಲಿತಾ ಹಂತಹಂತವಾಗಿ ಕೊಡುತ್ತಿದ್ದ ಪುಟಗಳನ್ನು ಟೈಪು ಮಾಡುತ್ತಲಿರುವಾಗಲೇ ಇತ್ತ ಇಂದ್ರಕುಮಾರರ ʻಎತ್ತರʼ ಕಾದಂಬರಿಯು ರೂಪುಗೊಳ್ಳುತ್ತ ಹೋದದ್ದು, ಆತ ಸರಿತಾಳ ಮನೆಯಲ್ಲಿ ಬಗೆಬಗೆಯ ʻತಿಂಡಿತಿನಸುʼಗಳನ್ನು ಅಯಾಚಿತವಾಗಿ ಮೆದ್ದದ್ದು, ಆಕೆಯ ತಂಗಿ ವಿಮಲಾಳ ಜೊತೆ ʻವಿಪ್ರಲಂಬ ಶೃಂಗಾರʼವಾಡಿದ್ದು, ಪಾರೋತಿಗೆ ʻಅನಿರೀಕ್ಷಿತ ಗಂಡʼನಾದದ್ದು, ಲಲಿತಾಳ ಬಾಯಲ್ಲಿ ನಿರಂತರ ʻಜೊಲ್ಲುʼ ಸುರಿಯುವುದಕ್ಕೆ ಕಾರಣವಾದದ್ದು, ಮನೆಯೊಡತಿ ಕಾದಂಬರಿ ಆತನ ಅನೂಹ್ಯ ವರ್ಚಸ್ಸಿಗೆ ಕುತೂಹಲಗೊಂಡದ್ದು- ಹೀಗೆ ಎಲ್ಲರೂ ಆತನ ಹಿಂದೆ ಬಿದ್ದವರೆ. ವಿಚಿತ್ರವೆಂದರೆ ಇಲ್ಲಿನ ಪ್ರತಿ ಹೆಣ್ಣಿಗೂ ಮಿಕ್ಕವರು ಆತನ ಹಿಂದೆ ಬಿದ್ದುದು ಗೊತ್ತು. ಆತನೇನು ಪಂಚನಾರಿಯರ ನಡುವಿನ ವಿಟಪುರುಷನೆ?

ಪ್ರತಿಯೊಂದು ಪಾತ್ರದ ವ್ಯಕ್ತಿತ್ವ ಅನುಕ್ರಮವಾಗಿ ಹೂವಿನಂತೆ ಅರಳುತ್ತಲೂ, ಮುದುಡುತ್ತಲೂ ಹೋಗುವುದರ ಸಂರಚನೆ ಕಾದಂಬರಿಯಲ್ಲಿದೆ. ಒಗಟಿನಂತೆ ನಿಗೂಢವಾದ, ಭ್ರಮಾತ್ಮಕವಾದ ʻಕತ್ಲೆಕಾನುʼ ತನ್ನೊಳಗೆ ಹುದುಗಿಸಿಟ್ಟಿದ್ದ ಚರಿತ್ರಾತ್ಮಕ ವಿಚಾರಗಳನ್ನು ಎಲ್ಲೂ ವಾಚ್ಯವಾಗದಂತೆ ಹಂತಹಂತವಾಗಿ ಬಿಚ್ಚಿತೋರಿದ್ದು ಕೂಡ ಕಾದಂಬರಿಯ ವೈಶಿಷ್ಟ್ಯವೆ. ಸೆಕ್ಸ್‌ ವಿಚಾರಗಳನ್ನು ಕಾದಂಬರಿಕಾರರು ಬಳಸುವಾಗ ವಹಿಸಿದ ಭಾಷಾ ನೈಪುಣ್ಯ, ಸಹನೆ ಹಾಗೂ ಸ್ವೋಪಜ್ಞತೆಗೆ ಪರ್ಯಾಯ ಕಾಣುವುದು ಕನ್ನಡ ಸಾಹಿತ್ಯದಲ್ಲಿ ಕಷ್ಟ. ಮಾಸ್ತಿಯವರು ಚಿಕವೀರರಾಜೇಂದ್ರದಲ್ಲಿ ಬಳಸಿದ ಭಾಷೆಯ ʻಆಧುನಿಕ ರೂಪʼದಂತೆ ಇಲ್ಲಿನ ಭಾಷೆ ತೋರಿಹೋಗುತ್ತದೆ. ಪ್ರತಿಯೊಂದು ವಿಚಾರದ ಎತ್ತರ ಬಿತ್ತರಗಳನ್ನು ತಪಶೀಲು ಮಾಡುವ ಕ್ರಮವೇ ಚಂದ. ಪುನರಾವರ್ತನೆಗಳನ್ನು ಕಡಿತಗೊಳಿಸುತ್ತಿದ್ದರೆ ಕಾದಂಬರಿ ಇನ್ನಷ್ಟು ಬೆಡಗು ಪಡೆಯುತ್ತಿತ್ತು. ಇಷ್ಟು ದೀರ್ಘವಾಗುವುದೂ ತಪ್ಪುತ್ತಿತ್ತು.

ಕಾದಂಬರಿಯನ್ನು ಹೆಣೆಯುವುದು ಒಂದು ಅಭೂತಪೂರ್ವ ಕಲೆ. ಇಂದ್ರಕುಮಾರ್‌ ಎಚ್.‌ಬಿ. ಕನ್ನಡ ಸಾರಸ್ವತಲೋಕದ ನಾಡಿಮಿಡಿತಕ್ಕೆ ಹೊಸ ರಕುತವನ್ನೇ ಆವಾಹಿಸಿ ಕೊಟ್ಟಿದ್ದಾರೆ ʻಎತ್ತರʼ ಕಾದಂಬರಿಯ ಮೂಲಕ. 

‍ಲೇಖಕರು avadhi

14 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading