ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಾರನಾಯಕ’ನ ದುರಂತ – ಸ್ವರ್ಣ ಕಂಡಂತೆ

೧೭-೦೧-೨೦೧೪ರಂದು ಸಂಜೆ ೭ ಗಂಟೆಗೆ ಕೆ ಎಚ್ ಕಲಾಸೌಧದಲ್ಲಿ ನಾಟಕ ಪ್ರದರ್ಶನವಿರುತ್ತದೆ.

ಸಂಪರ್ಕ ಸಂಖ್ಯೆ :  9448050950

***

’ಮಾರನಾಯಕ’ ನಾಟಕ

– ಸ್ವರ್ಣ

ಮಾರನಾಯಕ. ಶೇಕ್ಸ್ ಪಿಯರನ ಮ್ಯಾಕ್ಬೆತ್ ನಿಂದ ಪ್ರೇರಣೆ ಪಡೆದು ಎಚ್.ಎಸ್.ಶಿವಪ್ರಕಾಶರು ರಚಿಸಿ ಸುರೇಶ್ ಆನಗಳ್ಳಿ ನಿರ್ದೇಶಿಸಿ ಅನೇಕ ತಂಡದವರು ಅಭಿನಯಿಸಿದ ನಾಟಕ. ಎಲ್ಲರಿಗೂ ತಿಳಿದಂತೆ ಮ್ಯಾಕ್ ಬೆತ್ ಮಹತ್ವಾಕಾಂಕ್ಷಿಯಾದ ಸೇನಾನಾಯಕನ ಕಥೆ. ಇಂಗ್ಲಿಷಿನ ನಾಟಕದಲ್ಲಿ ಈ ಸೇನಾನಾಯಕನಿಗೆ ‘ಮಹಾರಾಜ ‘ನಾಗುವ ಬಯಕೆ ಹುಟ್ಟಿಸುವವರು ಭವಿಷ್ಯ ನುಡಿಯುವ ಮೂವರು ಮಾಟಗಾತಿಯರಾದರೆ ಮಾರನಾಯಕನಲ್ಲಿ ಆಸೆಯ ಬೀಜ ಬಿತ್ತುವರು ಐವರು ಕಾಟ್ಟೇರಿಯರು
ಇದೊಂದು ಕಾಡಿನ ಕಥೆ ಎಂದು ನಿರ್ದೇಶಕನಂತೆ ಕಾಣುವ ಸೂತ್ರಧಾರನೊಂದಿಗೆ ನಾಟಕ ತೆರೆದುಕೊಳ್ಳುತ್ತದೆ. ಭದ್ರಪ್ಪ ನಾಯಕ ತನ್ನ ದೊಡ್ಡಪ್ಪ ರುದ್ರಪ್ಪ ನಾಯಕನನ್ನು ಕೊಂದು ಸಿಂಹಾಸನವನ್ನೆರುತ್ತಾನೆ. ರುದ್ರಪ್ಪನಾಯಕನ ಮಗ ಸಿಧ್ಧಪ್ಪ ನಾಯಕ ಜೈನ ಸನ್ಯಾಸಿಯಾಗುತ್ತಾನೆ. ವೀರ ನಾಯಕ ಮತ್ತು ಧೀರ ನಾಯಕ ಭದ್ರಪ್ಪ ನಾಯಕನ ಇಬ್ಬರು ಮಕ್ಕಳು, ಮಾರನಾಯಕ ಅವನ ದಂಡನಾಯಕ. ಸೂತ್ರಧಾರನ ಪೀಠಿಕೆಯ ನಂತರ ಕಥೆ ರಂಗದ ಮೇಲೆ ಆರಂಭವಾಗುತ್ತದೆ.
ಬದುಕಿನ ಆಟವನ್ನು ತನ್ನದೇ ರೀತಿಯಲ್ಲಿ ಆಡಿದ ಭದ್ರಪ್ಪ ನಾಯಕ ಮೊದಲ ಬಾರಿಗೆ ರಂಗದ ಮೇಲೆ ಕಾಣಿಸಿಕೊಳ್ಳುವಾಗ ಕೈಲಿ ದಾಳವಿರುತ್ತದೆ. ಬಂಡೆದ್ದ ವೀರನಾಯಕನ ಸದೆಬಡೆಯಲು ರಾಜ ಮಾರನಾಯಕನನ್ನು ಕಳುಹಿ ಯುಧ್ಧರಂಗದ ಸಮಾಚಾರಕ್ಕಾಗಿ ಕಾಯುತ್ತಿರುತ್ತಾನೆ. ಯುಧ್ಧದಿಂದ ಮರಳಿದ ಸೈನಿಕನೊಬ್ಬ ನಡೆದ ಭೀಕರ ಕಾಳಗವನ್ನು ವರ್ಣಿಸಿ ಗೆಲುವು ತಮ್ಮದಾಯಿತೆಂದು ಸಾರುತ್ತಾನೆ. “ಇದೋ ಗಾಯಗೊಂಡ ಈ ಸೈನಿಕನ ಮೈ ಮೇಲಿನ ಗಾಯಗಳು ಇವನ ಆಭೂಶಣಗಳು” ಎನ್ನುವ ರಾಜನ ವ್ಯಂಗ್ಯ ನಾಟುತ್ತದೆ. ವೀರಗತಿ , ವೀರಮರಣ , ರಾಜನಿಷ್ಟೆಗಳ ಹೆಸರಿನಲ್ಲಿ ನಡೆಯುವ ಮುಗ್ಧ ಪ್ರಾಣಬಲಿಗಳನು ಲೆಕ್ಖ ಇಡುವವರು ಯಾರು ?

ಗೆಲುವಿನೊಂದಿಗೆ ಹಿಂತಿರುಗಿದ ಮಾರನಾಯಕನಿಗೆ, ರಾಜ ತನ್ನ ಮಗನಿಗೆ ನಡು ಬೀದಿಯಲ್ಲಿ ನೇಣು ಶಿಕ್ಷೆ ಕೊಡು , ಇದರಿಂದ ಮುಂದೆ ರಾಜನ ವಿರುಧ್ಧ ಬಂಡೇಳುವವರಿಗೆ ಒಂದು ಪಾಠ ವಾಗಲಿ ಎನ್ನುತ್ತಾನೆ. ತಾನೇ ಸಾಕಿದ ಮಗುವಿಗೆ ನೇಣು ಕೊಡಲು ತನ್ನಿಂದಾಗದು ಎಂದು ಹಿಂಜರಿವ ಮಾರನಾಯಕನಿಗೆ “ಅವನು ರಾಜ ಮತ್ತು ತಂದೆ ಇಬ್ಬರ ವಿರುಧ್ಧವೂ ಕತ್ತಿ ಎತ್ತಿದ್ದಾನೆ, ಆದರೆ ಅವನಿಗೆ ಎರಡು ಮರಣ ದಂಡನೆಗಳನ್ನು ಕೊಡಲಾಗದು ಎಂಬ ನೋವು ನನ್ನದು “ ಎನ್ನುವ ರಾಜನ ಮನದ ಭಾವ ಸ್ಪಷ್ಟವಾಗಿ ನನಗೆ ತಿಳಿಯಲಿಲ್ಲ . ಉಳಿದ ಇನ್ನೊಬ್ಬ ಮಗ ಧೀರನಾಯಕನಿಗೆ ರಾಜ್ಯವನ್ನುವಹಿಸಿ ಕೊಡುವುದಾಗಿ ಹೇಳುವ ಭದ್ರಪ್ಪ ನಾಯಕ, ಮಾರನಾಯಕನಿಗೆ ಈ ಕದನವನ್ನು ಗೆದ್ದುದ್ದಕ್ಕೆ ಒಂದು ದಿನದ ಮಟ್ಟಿಗೆ ಅವನ ಅತಿಥಿಯಾಗುವ ಬಹುಮಾನವನ್ನು ಕೊಡುತ್ತಾನೆ .
ನಾಟಕದುದ್ದಕ್ಕೂ ಕಾಡುವುದು ಕಾಟ್ಟೇರಿಯರು ನೆಲೆಗೊಂಡ ಕಾಡು. ಕೊನೆ ಮೊದಲಿಲ್ಲದ , ನೂರಾರು ಕಾಟ್ಟೇರಿಯರ ಪ್ರಚೋದನೆಗೆ ಕ್ಷಣ ಕ್ಷಣವೂ ಒಳಗಾಗುವ ಮನುಷ್ಯನ ಮನಸಿನ ಪ್ರತಿಬಿಂಬದಂತಹ ಕಾಡು. ಈ ಕಾಡನ್ನು ಹಾದು ಹೋಗುತ್ತಿರುವ ಮಾರನಾಯಕನನ್ನು ‘ಒಂದು ದಿನದ ರಾಜ’ ಕರೆದು “ನಿನ್ನ ಹಾಗೂ ಸಿಂಹಾಸನದ ನಡುವಿನ ಕಂಟಕವನ್ನು ಕಳೆದುಕೊಂಡರೆ ನೀನೆ ರಾಜ ನಿನ್ನ ಹೆಂಡತಿಯೇ ರಾಣಿ” ಎಂದು ಕಾಟ್ಟೇರಿಯರು ಹೇಳುತ್ತಾರೆ . ಮುದಿ ರಾಜನನ್ನು , ಇನ್ನೂ ಸಣ್ಣವನಾದ ಅವನ ಹಸುಳೆಯನ್ನು ರಕ್ಷಿಸಿ ಅವರಿಂದ ಆಳಲ್ಪಡುವ ನೆಲಕ್ಕಾಗಿ ಹೊಡೆದಾಡಬೇಕೆ ? ಎಂಬ ಪ್ರಶ್ನೆಯನ್ನು ಅದಾಗಲೇ ಹೊತ್ತಿದ್ದ ಮಾರನಾಯಕನ ಪ್ರಶ್ನೆಯನ್ನು ಈ ಮಾತು ಉದ್ದೇಶವಾಗಿ ಬದಲಾಯಿಸುತ್ತದೆ. ಆದರೆ ತನ್ನ ಹಾಗೂ ಸಿಂಹಾಸನದ ನಡುವಿನ ಕಂಟಕ ಯಾವುದು ಎಂದು ಕೇಳಿದ ನಾಯಕನಿಗೆ ಕಾಟ್ಟೇರಿಯರಿಂದ ಉತ್ತರ ಸಿಗುವುದಿಲ್ಲ.

ಮಾರನಾಯಕನ ಹೆಂಡತಿ ಮಂಗಳೆ ತುಂಬು ಗರ್ಭಿಣಿ. ಬಸಿರೊಳಗೆ ಹೊರಳಾಡಿ ಸುಖದ ನೋವುಣಿಸುತ್ತಿರುವ ಕೂಸಿನ ಜೊತೆ ಆಕೆ ಮಾತನಾಡುವ ಮೂಲಕ ತನ್ನೊಂದಿಗೆ ತಾನೇ ಮಾತನಾಡಿಕೊಳ್ಳುವ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅವಳ ಬಳಿಯೂ ಬರುವ ಕಾಟ್ಟೇರಿಯರು ಕಂಟಕ ನಿವಾರಿಸಿಕೊಂಡರೆ ನಿನ್ನ ಗಂಡ ಮಹಾರಾಜ, ನೀನು ಮಹಾರಾಣಿ ಮತ್ತು ನಿನ್ನ ಹೊಟ್ಟೆಯಲ್ಲಿರುವ ಮಗ ಮೂರು ಲೋಕದ ಒಡೆಯ ವಜ್ರಕಾಯನಾಗುತ್ತಾನೆ ಎಂದು ಅವಳ ಆಸೆಗಳಿಗೂ ನೀರೆರೆಯುತ್ತಾರೆ.
ಅರಮನೆಯಿಂದ ಮಾರನಾಯಕನ ಮನೆಗೆ ಆತಿಥ್ಯಕ್ಕೆಂದು ಬರುತ್ತಿರುವ ರಾಜನಿಗೆ ಗುಡುಗು , ಮಿಂಚಿನ ಆರ್ಭಟದ ಮಳೆಯ ರಾತ್ರಿಯ ಕಾಡು ವಿಚಿತ್ರವಾಗಿ ಕಂಡು ಅಶುಭ ಸೂಚನೆಗಳಾದರೂ ನಾಯಕನ ಮನೆಗೆ ಬರುತ್ತಾನೆ. ಗಂಡ ಹೆಂಡಿರು ರಾಜ ಮತ್ತು ಸಂಗಡ ಬಂದಿರುವ ಪರಿವಾರವನ್ನು ಸ್ವಾಗತಿಸುವ ದೃಶ್ಯದ ವಿಡಂಬನೆ ಎದ್ದು ಕಾಣುತ್ತದೆ. ಹೆರಿಗೆ ಬೇನೆಯ ಅಂಚಿನಲ್ಲಿರುವ ಮಂಗಳೆಗೆ ಆ ರಾತ್ರಿಯ ಮಹಾಮಳೆಗೆ ‘ಮುದಿ’ ಮರವೊಂದು ಬಿದ್ದ ಸದ್ದು , ಕಂಟಕದ ಉತ್ತರವೆಂಬ ಮಿಂಚನ್ನು ತೋರಿಸುತ್ತದೆ. ಆಕೆ ಸಿಂಹಾಸನ ಮತ್ತು ತನ್ನ ಗಂಡನ ನಡುವೆ ಮುಳ್ಳಾಗಿರುವ ಮುದಿ ರಾಜನನ್ನು ಕೊಲ್ಲಬೇಕೆಂಬ ತೀರ್ಮಾನ ಮಾಡುತ್ತಾಳೆ. ಕೋಣೆಗೆ ಬಂದ ಗಂಡನಿಗೆ ಬಸಿರಿನಲ್ಲಿರುವ ಕೂಸು ಹೊರಬರಲು ಹೋರಾಡುತ್ತಿದ್ದರೂ ‘ಕಂಟಕ’ ನಿವಾರಣೆಯಾಗುವವರೆಗೂ ತಾನು ಹಡೆಯುವುದಿಲ್ಲವೆಂದೂ , ಮೂರುಲೋಕದ ಒಡೆಯನಾಗಲಿರುವ ತಮ್ಮ ಮಗ ವಜ್ರಕಾಯನಿಗಾಗಿ ನಾವು ಸಿಂಹಾಸನವನ್ನು ಪಡೆಯಲೇ ಬೇಕೆಂದೂ, ಬಲವಂತ ಮಾಡಿದರೆ ಬಸಿರನ್ನು ಸೀಳಿ ಮಗುವನ್ನು ಪಡೆಯಬಹುದೆಂದು ಮಾರನಾಯಕನನ್ನು ಕ್ರೂರ ಸಂಚಿಗೆ ಅಣಿಮಾಡುತ್ತಾಳೆ. ಮತ್ತಿನಲ್ಲಿ ಮಲಗಿರುವ ರಾಜನನ್ನು ಕೊಂದು ,ಕೊಂದ ಕತ್ತಿಯನ್ನು ರಾಜ ಪರಿವಾರದೊಡನೆ ಬಂದ ಧೀರ ನಾಯಕನ ಕೈಗಿತ್ತು ಆ ಕೊಲೆಯ ಅಪರಾಧವನ್ನು ಅವನ ತಲೆಗೆ ಕಟ್ಟುವ ಸಂಚನ್ನು ಅರುಹುತ್ತಾಳೆ. ಮೊದಲು ತಿರಸ್ಕರಿಸುವ ಮಾರನಾಯಕನನ್ನು ಇನ್ನಿಲ್ಲದಂತೆ ಒಪ್ಪಿಸುತ್ತಾಳೆ. ಸಂಚಿಗೆ ಒಪ್ಪಿದ ನಾಯ್ಕ ಮಲಗಿರುವ ರಾಜನ ಬಳಿ ಹೋಗಲು ಇಡಬೇಕಾದ ಹತ್ತು ಹೆಜ್ಜೆಗಳನ್ನು ಕಾಟ್ಟೇರಿಗಳು ಸಿಂಹಾಸನದೆಡೆಗಿನ ಹತ್ತು ಮೆಟ್ಟಿಲುಗಳು ಎಂದು ಮಾರ್ಮಿಕವಾಗಿ ವರ್ಣಿಸುತ್ತಾರೆ. ರಾಜನನ್ನು ಕೊಂದ ನಾಯಕ ರಾಜ ಕುಮಾರನ ಕೈಗೆ ರಕ್ತವನ್ನು ಹಚ್ಚಿ , ಕತ್ತಿ ಇಟ್ಟು ಬಿಡುವ ಕ್ಷಣವೇ ಕೇಳುವ ತನ್ನ ಮಗುವಿನ ಮೊದಲ ಅಳು ನಾಯಕನಿಗೆ ಕಾಟೇರಿಯರ ಮಾತಿನ ಮೇಲಿನ ವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ಮಗನೇ ತಂದೆಯನ್ನು ಕೊಂದನೆಂದು ಎಣಿಸಿ , ದಂಡನಾಯಕನನ್ನೇ ರಾಜನಾಗುವಂತೆ ರಾಜ ಪ್ರಮುಖರು ಒಪ್ಪಿಸುತ್ತಾರೆ.

ಧೀರನಾಯಕನನ್ನು ಸೆರೆಮನೆಯಲ್ಲಿಡಲಾಗುತ್ತದೆ ಆದರೆ ಮಂಗಳೆಗೆ ‘ಮಿಡಿ ನಾಗರವನ್ನು‘ ಕೊಲ್ಲದೇ ಸೆರೆಮನೆಯಲ್ಲಿಟ್ಟದ್ದು ಸಮಾಧಾನವಿಲ್ಲ. “ಅವನನ್ನು ಕೊಲ್ಲುವುದು ಎಷ್ಟು ಹೊತ್ತಿನ ಕೆಲಸ, ಹೊಸವರ್ಷಕ್ಕೆ ಬಲಿ ಕೊಡಲಿಲ್ಲವೆಂದರೆ ಮಹಾನವಮಿಗೆ ಕೊಡೋಲ್ಲವೇನು?” ಎಂಬ ಮಾರನಾಯಕನ ಮಾತು ಅದುವರೆಗೂ ಸೀರಿಯಸ್ಸಾಗಿ ಹೋಗುತ್ತಿದ್ದ ನಾಟಕದ ಮಧ್ಯೆ ನಗೆಯಲೆಯನ್ನು ಎಬ್ಬಿಸಿದರೂ , ಧೀರನಾಯಕನನ್ನೂ ಕೊಲ್ಲುವ ಮಾರನಾಯಕನ ಇಂಗಿತ ವ್ಯಕ್ತವಾಗುತ್ತದೆ.
ಮಾರನಾಯಕ ಮತ್ತು ಮಂಗಳೆ ಮೂರುಲೋಕದ ಒಡೆಯನಾಗಲಿರುವ ಮಗ ವಜ್ರಕಾಯನ ಆಗಮನದ ಸಂತಸಕ್ಕಾಗಿ ಔತಣ ಕೂಟವನ್ನು ಏರ್ಪಡಿಸುತ್ತಾರೆ. ಆ ಕೂಟದಲ್ಲಿ ನಾಯಕನಿಗೆ ಭದ್ರಪ್ಪನಾಯಕ ಬಂದಂತೆ ಭಾಸವಾಗುತ್ತದೆ. ಈ ದೃಶ್ಯ ರಂಗದ ಮೇಲೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಷ್ಟರಲ್ಲಿ ಸೆರೆಮನೆಯಿಂದ ತಪ್ಪಿಸಿಕೊಂಡ ಧೀರ ನಾಯಕ ಮಾರನಾಯಕನ ಮಗುವನ್ನು ಕೊಂದು ಕಾಡೊಳಗೆ ನುಗ್ಗಿ ಪರಾರಿಯಾಗುತ್ತಾನೆ , ಅವನನ್ನು ಬೆನ್ನಟ್ಟಿಕೊಂಡು ಮಂಗಳೆಯೂ ಉನ್ಮತ್ತಳಾಗಿ ಕಾಡು ಸೇರುತ್ತಾಳೆ. ಮಂಗಳೆಯನ್ನು ಕರೆತರಲು ಕಾಡಿಗೆ ನುಗ್ಗಿದ ಮಾರನಾಯಕನಿಗೆ ಕಾಟ್ಟೇರಿಯರು ಮತ್ತೆ ಕಾಣಿಸಿಕೊಳ್ಳುತ್ತಾರೆ. ಜೈನ ಮುನಿಯಾದ ಸಿಧ್ಧನಾಯಕನಿಗೆ ಸಂಜೀವಿನಿ ಇರುವ ಸ್ಥಳ ಗೊತ್ತೆಂದು ತಿಳಿಸಿ ನಡೆದ ಘೋರಕ್ಕೆ ಪರಿಹಾರವಾಗಿ ಅದನ್ನು ತರುವಂತೆ ಹೇಳುತ್ತಾರೆ.
ತಪಸ್ಸು ಮಾಡುತ್ತಿರುವ ಸಿಧ್ಧನಾಯಕನನ್ನು ಮಾರನಾಯಕ ಸಂಜೀವಿನಿಗಾಗಿ ಪೀಡಿಸಿದಾಗ , ಎದುರಿಗಿರುವ ಮರಕ್ಕೆ ನೇಣು ಬಿಗಿದುಕೊಂಡ ಮಂಗಳೆಯನ್ನು ತೋರಿಸಿ ಆ ಮರದ ಬುಡದಲ್ಲಿ ಅಗೆದರೆ ಸಂಜೀವಿನಿ ಸಿಗುವುದೆಂದು ಆದರೆ ಹಾಗೆ ಅಗೆದರೆ ಮಾರನಾಯಕ ಶಾಶ್ವತವಾಗಿ ಮಂಗಳೆಯನ್ನು ಕಳೆದುಕೊಳ್ಳುತ್ತಾನೆಂದು, ಈ ಎಲ್ಲ ಪ್ರಯತ್ನಗಳಿಗೂ ಮೊದಲು ಅವನು ಈ ಕಾಡನ್ನು ನಿವಾರಿಸಿಕೊಳ್ಳ ಬೇಕೆಂದು ಹೇಳುತ್ತಾನೆ. ಕಾಡು ನಿವಾರಣೆಯ ಪ್ರಯತ್ನದಲ್ಲಿರುವ ಮಾರನಾಯಕನಿಗೆ ಕಾಟ್ಟೇರಿಗಳು ಕಾಡನ್ನು ಕಡಿಯಲು ಕತ್ತಿಯಲ್ಲ ಕೊಡಲಿ ಬೇಕು ಎಂದು ಹೇಳುವಲ್ಲಿ ನಾಟಕಕಾರರು ಮನುಷ್ಯ ತನ್ನೊಳಗಿನ ಕಾಡನ್ನು ಕಡಿಯುವ ಪ್ರಯತ್ನದ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆಂದು ತೋರುತ್ತದೆ. ಕಾಡನ್ನು ನಿವಾರಿಸಿಕೊಳ್ಳಲಾಗದ ಮಾರನಾಯಕ ಬೊಂಬೆಯಾಗಿ ನಿಲ್ಲುವುದರೊಂದಿಗೆ ರಂಗದ ಮೇಲೆ ಮತ್ತೆ ಸೂತ್ರಧಾರನ ಆಗಮನವಾಗುತ್ತದೆ. ಈ ಕಾಡಿನ ಕಥೆಯನ್ನು ಮರೆತುಬಿಡುವಂತೆ ಹೇಳುವ ಸೂತ್ರಧಾರನ ಮಾತುಗಳನ್ನು ಪಾಲಿಸುವುದು ಕಷ್ಟ.
ಮ್ಯಾಕ್ಬೆತ್ ಗೂ ಮಾರನಾಯಕನಿಗೂ ಸಾಮ್ಯವಿದ್ದರೂ ಮಾರನಾಯಕ ಈ ನೆಲದ ಕಥೆಯನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹೇಳುತ್ತದೆ. ಮ್ಯಾಕ್ಬೆತ್ ಗೆ ತನ್ನ ಅಂತ್ಯ ಕಾಡು ನಡೆದು ಊರು ಸೇರಿದಾಗ ಮತ್ತು ತಾಯ ಹೊಟ್ಟೆಯಿಂದ ಬರದವನಿಂದ ಎಂದು ತಿಳಿದಿದ್ದರೆ ಮಾರನಾಯಕನಿಗೆ ಇದ್ಯಾವುದೂ ಗೊತ್ತಿಲ್ಲ. ಮ್ಯಾಕ್ಬೆತ್ನಲ್ಲಿ ಲೇಡಿ ಮ್ಯಾಕ್ಬೆತ್ ಳ ಪಶ್ಚಾತ್ತಾಪ ಮತ್ತು ತೊಳಲಾಟದ ಭ್ರಮೆ ವಿವರವಾಗಿ ಚಿತ್ರಿತವಾಗಿದ್ದರೆ ಮಾರನಾಯಕ ಅದನ್ನು ಸೂಚ್ಯವಾಗಿ ಹೇಳುತ್ತದೆ.
ನಟರ ಬಗ್ಗೆ ನಾಟಕದ ಕರಪತ್ರದಲ್ಲಿ ಮುದ್ರಿಸದ ಕಾರಣ ಎಲ್ಲ ಹೆಸರುಗಳೂ ನೆನೆಪಿನಲ್ಲಿಲ್ಲ. ಕಾಟ್ಟೇರಿಯರ ಪಾತ್ರ ಮತ್ತು ನಟನೆ ಮನದಲ್ಲಿ ಅಚ್ಚೊತ್ತಿದೆ. ಭದ್ರಪ್ಪ ನಾಯಕನಾಗಿ ಶ್ರೀಪತಿ ಮಂಜನಬೈಲು , ಮಾರನಾಯಕನಾಗಿ ಸುವರ್ಣ ಮತ್ತು ಮಂಗಳೆಯಾಗಿ ಶಿವಾನಿಯವರ ಅಭಿನಯ ನೋಡಿ ಆನಂದಿಸುವಂತದು. ಹಿನ್ನೆಲೆ ಸಂಗೀತ ಹೊರಗೆ ಬಂದ ಮೇಲೆ ನೆನಪಿನಲ್ಲುಳಿಯದಿದ್ದರೂ ಹಿತವಾಗಿದೆ. ಕಾಡನ್ನು ರಂಗದ ಮೇಲೆ ತಂದದ್ದು ಒಳ್ಳೆಯ ಪ್ರಯತ್ನ. ಅಲ್ಲಲ್ಲಿ ಬೆಳಕು ಮತ್ತು ಧ್ವನಿ ಕಿರಿಕಿರಿ ಉಂಟುಮಾಡಿದ್ದು ಮರೆತು ಬಿಡಬಹುದಾದ ವಿಷಯ.
ಟಿಪ್ಪಣಿ : ಕಾಟ್ಟೇರಿ – ಒಂದು ಭೂತದ ಹೆಸರು
 

 

‍ಲೇಖಕರು G

15 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading