ನಾನು ಚನ್ನಣ್ಣನ ಮಗನೆಂದೇ ತಿಳಿದಿದ್ದರು..

ಅಗಲಿದ ಹಿರಿಯ ಬಂಧು, ಸಾಹಿತಿ ಡಾ.ಚನ್ನಣ್ಣ ವಾಲೀಕಾರ್

ಸಿದ್ಧರಾಮ ಕೂಡ್ಲಿಗಿ

70ರ ದಶಕದಲ್ಲಿ ರಾಯಚೂರಿನಲ್ಲಿ ನಾನು 3ನೇ ಅಥವಾ 4ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆಯ ಸಮೀಪವೇ ಬಂಡಾಯ ಬರಹಗಾರ ಡಾ.ಚೆನ್ನಣ್ಣ ವಾಲೀಕಾರ್ ಅವರ ಮನೆ ಇತ್ತು. ನನ್ನ ಅಪ್ಪನೊಂದಿಗೆ ಹಾಗೂ ನನ್ನ ದೊಡ್ಡಪ್ಪ ಸಾಹಿತಿ ಶಾಂತರಸರೊಂದಿಗೆ ಒಡನಾಟವಿದ್ದವರು. ಅಜಾನುಬಾಹು, ದೃಢ ನಿಲುವು, ಕ್ರಾಂತಿಕಾರಿಯ ಕುರುಹಾದ ಕೆಂಪು ಅಂಗಿ ಅವರ ಉಡುಗೆ.

ನಾನು ಆಗ ಅರ್ಥವಾಗಲಿ ಬಿಡಲಿ ಪುಸ್ತಕಗಳ ವಾಕ್ಯಗಳನ್ನು ತಪ್ಪಿಲ್ಲದಂತೆ ಓದುತ್ತಿದ್ದೆ. ಅದನ್ನು ನೋಡಿ ಬೆರಗಾಗಿದ್ದ ಚೆನ್ನಣ್ಣನವರು ಒಂದು ದಿನ ತಮ್ಮ ಮನೆಗೆ ಕರೆದರು. ಅಲ್ಲಿ ತಮ್ಮ ಮನೆಯಲ್ಲಿದ್ದ ಅವರ ಕೃತಿ “ಬೆಳ್ಯ”ವನ್ನು ನನಗೆ ಓದಲು ಹೇಳಿದರು. ಅಪ್ಪಟ ಗ್ರಾಮೀಣ ಭಾಷೆಯಲ್ಲಿದ್ದ ಓದಲೂ ಕಡುಕಷ್ಟಕರವಾಗಿದ್ದ ಅದನ್ನು ಓದಿದೆ. ಅವರಿಗೆ ಎಷ್ಟು ಖುಷಿಯಾಯ್ತೆಂದರೆ ತಮ್ಮ ಪತ್ನಿಯನ್ನು ಕರೆದು ” ಏ ನೋಡ್ ಬಾ ಇಲ್ಲಿ, ಕುಂದ್ರು ಸಿದ್ರಾಮ ನನ್ ಪುಸ್ತಕ ಹೆಂಗ್ ಓದ್ತಾನ್ ನೋಡು ” ಎಂದು ಅವರನ್ನು ಎದುರಿಗೇ ಕೂಡಿಸಿ ನನ್ನಿಂದ ಓದಿಸಿದರು. ಆಗ ಅವರಿಗಿನ್ನೂ ಮಕ್ಕಳಾಗಿರಲಿಲ್ಲ. ನನ್ನನ್ನೇ ಒಬ್ಬ ಮಗನೆಂದೇ ತಿಳಿದು, ಅವರಿಬ್ಬರೂ ಎಷ್ಟು ಸಂಭ್ರಮಪಟ್ಟರೆಂದರೆ ಅಂದಿನಿಂದ ತಮ್ಮ ಮನೆಗೆ ಕರೆಯುವುದು ಪ್ರೀತಿ ತೋರುವುದು ನಡೆದಿತ್ತು.

ಆಗಾಗ ತಮ್ಮ ಮನೆಗೆ ಕರೆದು ” ಸಿದ್ರಾಮ ನಿಮ್ ಚಿಗವ್ವ ಕರಿಯಕತ್ತಾಳೋ ” ಎಂದು ಮನೆಗೆ ಕರೆದೊಯ್ದು ಮನೆಯಲ್ಲಿ ಏನಾದರೂ ತಿಂಡಿ ಇದ್ದರೆ ಕೊಡುತ್ತಿದ್ದರು. ಯಾರಾದರೂ ಸಾಹಿತಿಗಳು ಅವರ ಮನೆಗೆ ಬಂದರೆ ಮೊದಲು ನನ್ನನ್ನು ಕರೆಸಿ ” ಈ ಹುಡುಗ ತಪ್ಪಿಲ್ದಂಗ್ ಹೆಂಗ್ ಓದ್ತಾನ್ ನೋಡ್ರಿ ” ಎಂದು ತೋರಿಸುತ್ತಿದ್ದರು. ಆ ಪ್ರೀತಿ ಇಂದಿಗೂ ನನಗೆ ಹಸಿರಾಗಿದೆ. ಆಗಾಗ ತಮ್ಮ ಕಂಚಿನ ಕಂಠದಿಂದ ಡಪ್ಪಿನಾಟದ ಹಾಡುಗಳನ್ನು ಜೋರಾಗಿ ಹೇಳುತ್ತಿದ್ದರು. ನನಗೆ ಆ ಹಾಡುಗಳನ್ನು ಅವರ ದನಿಯಲ್ಲಿ ಕೇಳಲಿಕ್ಕೇ ಖುಷಿಯಾಗುತ್ತಿತ್ತು.

ಮುಂದೆ ಅವರು ಬಂಡಾಯ ಸಾಹಿತಿಗಳಾಗಿ ಹೈದ್ರಾಬಾದ್ ಕರ್ನಾಟಕದ ಪ್ರಮುಖ ಬರಹಗಾರರಾಗಿ ಗುರುತಿಸಿಕೊಂಡರು. ಆ ನಂತರ ವಿವಿಧ ಕಾರಣಗಳಿಂದ ಅವರೊಂದಿಗೆ ನನ್ನ ಭೇಟಿ ಕಡಿಮೆಯಾಯಿತು. ಆದರೆ ಯಾವಾಗಲಾದರೊಮ್ಮೆ ಸಮ್ಮೇಳನಗಳಲ್ಲಿ ಕಂಡಾಗ ಅದೇ ಮೊದಲಿನ ಪ್ರೀತಿಯನ್ನೇ ತೋರುತ್ತಿದ್ದರು. ಇತ್ತೀಚೆಗೆ ಅವರು ಬರೆದ “ವ್ಯೋಮಾವ್ಯೋಮ” ಕಾವ್ಯದ ಒಂದಷ್ಟು ಭಾಗವನ್ನು ಕಳಿಸಿ ಫೋನಾಯಿಸಿದರು. ಮನೆಯಲ್ಲಿ ಎಲ್ಲರೂ ಹೇಗಿದ್ದಾರೆಂದು ಪ್ರೀತಿಯಿಂದ ಕೇಳಿದರು.
ವಿವಿಧ ಲೇಖಕರಿಂಡ ತಮ್ಮ ಕಾವ್ಯದ ವಿಮರ್ಶಾ ಸಂಕಲನವೊಂದನ್ನು ಹೊರತರಲಿದ್ದು, ಕಾವ್ಯದ ಒಂದು ಭಾಗವನ್ನು ವಿಮರ್ಶೆ ಮಾಡಿ ಕಳಿಸಲು ತಿಳಿಸಿದರು. ಮೊದಲಿನ ಪ್ರೀತಿಯನ್ನು ನೆನೆಯುತ್ತಲೇ ಒಂದು ಪುಟ್ಟ ಬರಹವನ್ನು ಬರೆದು ಕಳಿಸಿದೆ. ಆ ಪುಸ್ತಕ ಪ್ರಕಟವಾದ ನಂತರ ಅದನ್ನು ನನಗೆ ಕಳಿಸಿದರು. ಇಂದಿಗೂ ನನಗೆ ಅದೊಂದು ಮರೆಯಲಾಗದ ಸಂಗತಿ.

ಕವಿ, ವಿಮರ್ಶಕ, ಸಂಶೋಧಕ, ವಿದ್ವಾಂಸ, ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕರಾಗಿದ್ದ ಡಾ.ಚನ್ನಣ್ಣ ವಾಲೀಕಾರ್ ಅವರು ಇದುವರೆವಿಗೂ ಸುಮಾರು ಐವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ ಇವರು ಬರೆದ 1030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ ‘ವ್ಯೋಮಾವ್ಯೋಮ’. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ವಾಕ್ಯ, ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಬಳಸದಿರುವುದು ಇದರ ವಿಶೇಷ ಪ್ರಯೋಗ. ಬಂಡಾಯ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಇವರು ಅನೇಕ ಸಲ ಸಂಘಟನೆಯ ರಾಜ್ಯ ಸಂಚಾಲಕನಾಗಿ ಅದರ ಮುಂಚೂಣಿ ನಾಯಕನಾಗಿ ಕೆಲಸ ಮಾಡಿದ್ದಾರೆ.

ಪ್ರಥಮ ಪಿಯುಸಿ ತರಗತಿಗೆ ಇವರ ಒಂದು ಅನುಭವ ಕಥನ ” ಶಾಸ್ತ್ರಿ ಮಾಸ್ತರ ಮತ್ತು ಮಕ್ಕಳು ” ಎಂಬ ಪಾಠ ಇದೆ. ಅದನ್ನು ಓದಿ ಪಾಠ ಮಾಡುವಾಗಲೆಲ್ಲ ಅವರ ನೆನಪುಗಳು ಕಾಡುತ್ತಿರುತ್ತವೆ.

ಬೆಳಿಗ್ಗೆ ಎದ್ದ ತಕ್ಷಣ ವಾಟ್ಸಪ್ ನಲ್ಲಿ ಹಿರಿಯರಾದ ಲಿಂಗಾರೆಡ್ಡಿ ಶೇರಿಯವರು ಕಳಿಸಿದ್ದ ಡಾ.ಚನ್ನಣ್ಣ ವಾಲೀಕಾರ್ ನಿಧನ ಎಂಬ ಸುದ್ಧಿ ಓದಿ ತುಂಬಾ ಆಘಾತವಾದಂತೆನಿಸಿತು.

 

‍ಲೇಖಕರು avadhi

November 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

    • Nagraj Harapanhalli

      ಕಪ್ಪು ನೆಲದ ಕವಿ ಮತ್ತಷ್ಟು ಹತ್ತಿರವಾದರು…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: