ನನಗೆ ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ..
– ಸುರೇಶ ಕಂಜರ್ಪಣೆ
ನಾನೇನಾಗಬೇಕು, ನನಗೇನು ಬೇಕು ಎರಡನ್ನೂ ಜವಾಬ್ದಾರಿ ಪ್ರಜ್ಞೆಯಲ್ಲಿ ತೊರಿಸಿಕೊಡುವ ಕಟ್ಟಳೆ.
ನಮ್ಮ ದೇಶಕ್ಕೇ ಹೊಸತಾದ ಪ್ರಜಾಸತ್ತೆಯ ಹೊಸ ಹೆಜ್ಜೆ ಹೊಸ ದಾರಿ ತೋರಿಕೊಟ್ಟ ದಾರಿಸೂಚಿ.
ಅದರ ರಕ್ಷಣೆಯ ಜವಾಬ್ದಾರಿಯೂ ನಮ್ಮದೇ ಎಂಬುದೇ ಅದರ ಸೋಜಿಗ. ಈ ಅರ್ಥದಲ್ಲಿ ಅದು ನಮ್ಮ ಉಸಿರಂತೆ. ಜೀವ ಊಡುವುದನ್ನು ಜತನ ಮಾಡುವ ಜವಾಬ್ದಾರಿ ನನ್ನದು.
ಅಧಿಕಾರ ಕಳಕೊಂಡ ಶಕ್ತಿಗಳು ಮರುಧಾಳಿ ಮಾಡುತ್ತಿರುವ ದಿನಗಳಿವು. ಸಂವಿಧಾನದಿಂದ ಎಲ್ಲವನ್ನೂಪಡಕೊಂಡ ನಾವು ಈಗ ಅದರ ರಕ್ಷಣೆಗಿಳಿದು ಋಣ ಮುಕ್ತರಾಗಬೇಕು.
ಭಾರತದ ಸಂವಿಧಾನ ಬರಿಯ ಒಣ ನಿಯಮಗಳ ಪುಸ್ತಕ ಅಲ್ಲ.
-ರಾಜಾರಾಮ್ ತಲ್ಲೂರು.
ಭಾರತದ ಸಂವಿಧಾನ ಬರಿಯ ಒಣ ನಿಯಮಗಳ ಪುಸ್ತಕ ಅಲ್ಲ. ಬದಲಿಗೆ ಅದು ನಮ್ಮ ಸಾಮಾಜಿಕ ಬದುಕಿಗೆ ಒಂದು ಸಂಹಿತೆಯ ರೂಪದಲ್ಲಿದೆ.
ಅದನ್ನು ನಮ್ಮ ಬದುಕಿಗೆ, ಕಾಲಕ್ಕೆ ಹೊಂದುವಂತೆ interpret ಮಾಡಬಹುದು ಎಂಬುದು ಅದರ ಧೀಮಂತಿಕೆ.
ಅದೇ ವೇಳೆಗೆ ಅಡಗಿಸಿಟ್ಟುಕೊಂಡಿರುವ ಹಿತಾಸಕ್ತಿಗಳಿರುವವರ ಕೈಗೆ ಸಂವಿಧಾನ ಸಿಕ್ಕಾಗ ಅದು ಹೇಗೆಲ್ಲ Interpret ಆಗತೊಡಗಿದೆ ಎಂಬುದೂ ಈಗೀಗ ನಮ್ಮ ಗಮನಕ್ಕೆ ಬರುತ್ತಿದೆ.
ಈವತ್ತಿನ ವಿಷಮ ಸ್ಥಿತಿಯಲ್ಲಿ ಒಂದೇ ಒಂದು ಆಶಾಕಿರಣ ಎಂದರೆ ಆ ಎಲ್ಲ ವಿಪರೀತಗಳನ್ನೂ ಸಂವಿಧಾನಕರ್ತರು ಆವತ್ತೇ ಮುಂದಾಗಿ ಊಹಿಸಿ ಮದ್ದರೆದಿಟ್ಟಿದ್ದಾರೆ.
ಅದನ್ನು ದೇಶ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರೆ ಸಾಕು.

ಹರ ಕೊಲ್ಲಲ್ ಪರ ಕಾಯ್ವನೇ?
– ಗಿರಿಜಾ ಶಾಸ್ತ್ರಿ
ಸಂವಿಧಾನದಲ್ಲಿರುವ ನಮ್ಮ ಹಕ್ಕು ಬಾಧ್ಯತೆಗಳಿಗೂ ನಮ್ಮ ಬದುಕಿನ ನಡಾವಳಿಗಳಿಗೂ ಅಗಾಧ ಅಂತರವಿದೆ ಎನಿಸುತ್ತದೆ. ಶಾಸನವಾಗಿ ಕಾಗದದ ಮೇಲೆ ಆದರ್ಶ ಇರಬಹುದು ಆದರೆ ಅದು ನಮ್ಮ ಬದುಕಿನ ದರ್ಶನ ವಾಗಿ ಉಳಿದಿಲ್ಲ ಎನ್ನುವುದು ದುರಂತ.
ಶಾಸನವನ್ನು ಅರ್ಥೈಸಿಕೊಳ್ಳುವುದರಲ್ಲೇ ಗೊಂದಲವಿದೆ. ಒಬ್ಬರ ಹಕ್ಕು ಇನ್ನೊಬ್ಬರಿಗೆ ಮಾರಕವಾಗಬಾರದು ಎಂಬುದನ್ನು ನಿರ್ಧರಿಸುವ ಮಾನದಂಡಗಳೇನು? ಈಗ ಎಲ್ಲವೂ ಸಾಪೇಕ್ಷವಾಗಿದೆ. ಯಾರು ಹೇಗೆ ಬೇಕಾದರೂ ಅರ್ಥೈಸಬಹುದು.
ನಮ್ಮ ನ್ಯಾಯಾಂಗವೂ ಇದಕ್ಕೆ ಹೊರತಾಗಿಲ್ಲ ಎಂದಮೇಲೆ ಹೇಳುವುದೇನಿದೆ?
ಸರಕಾರದ ಚುಕ್ಕಾಣಿ ಹಿಡಿದವರೇ ಸಂವಿಧಾನದ ಶಾಸನಗಳಿಗೆ ಬದ್ಧರಾಗಿ ನಡೆದುಕೊಳ್ಳಲು ವಿಫಲರಾಗಿರುವಾಗ ದೂರುವುದಾದರೂ ಯಾರನ್ನು?- ಶಾಸನವನ್ನೇ ಬುಡಮೇಲು ಮಾಡುತ್ತೇನೆ ಎನ್ನುವ ಭಂಡರಿರುವಾಗ?
ಹರ ಕೊಲ್ಲಲ್ ಪರ ಕಾಯ್ವನೇ?

ಅತ್ಯಂತ ವಿಕಸನಗೊಂಡ ಪ್ರಜಾಪ್ರಭುತ್ವ
-ಶ್ರೀನಿವಾಸ ಕಾರ್ಕಳ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರಭಾವದೊಂದಿಗೆ ಹೇಗೆ ಬದುಕಬೇಕು ಎಂಬುದರ ನೀತಿ ಸಂಹಿತೆಯೇ ಸಂವಿಧಾನ.
ಈ ಅರ್ಥದಲ್ಲಿ ಸಂವಿಧಾನ ಎಂಬುದು ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಆತ್ಮ, ಹೃದಯ ಎಲ್ಲವೂ. ಸರ್ವಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು, ಸರ್ವ ಜನರ ಅಭಿಪ್ರಾಯವನ್ನು ಪಡೆದುಕೊಂಡು, ಜಗತ್ತಿನ ಅನೇಕ ದೇಶಗಳ ಉತ್ಕೃಷ್ಟ ಸಂವಿಧಾನದ ಸಕಾರಾತ್ಮಕ ಅಂಶಗಳನ್ನು ಒಳಗೊಳಿಸಿಕೊಂಡು ರೂಪಿಸಲಾದ ನಮ್ಮ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡರೆ ಸಾಕು, ಈ ದೇಶ ‘ಸರ್ವಜನಾಂಗದ ಶಾಂತಿಯ ತೋಟ’ವಾಗಬಲ್ಲುದು.
‘ಸಾರೇ ಜಹಾಂಸೆ ಅಚ್ಛಾ’ ಆಗಬಲ್ಲುವುದು. ನಿಜ ಅರ್ಥದ ಸರ್ವಾಂಗೀಣ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಬಲ್ಲುವುದು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಆ ಮೂಲಕ ಸಂವಿಧಾನವನ್ನು ಅಗೌರವಿಸುವುದೇ ನಿಜ ಅರ್ಥದಲ್ಲಿ ದೇಶದ್ರೋಹದ ಕೆಲಸ. ಸಂವಿಧಾನ ಪತನಗೊಂಡ ದಿನ ಬಹುಭಾಷೆ, ಬಹುಸಂಸ್ಕೃತಿ, ಬಹುಧರ್ಮ ಹೀಗೆ ಬಹುತ್ವವೇ ಜೀವಾಳವಾಗಿರುವ ಪ್ರಜಾಸತ್ತಾತ್ಮಕ ಭವ್ಯ ಭಾರತವೂ ಪತನಗೊಳ್ಳುತ್ತದೆ.

ಎಲ್ಲರೀತಿಯ ಪ್ರಭುತ್ವಗಳಿಗಿಂತಲೂ ಪ್ರಜಾಪ್ರಭುತ್ವವೇ ಉತ್ತಮ
– ಪ್ರಸಾದ್ ರಕ್ಷಿದಿ
ಎಲ್ಲರೀತಿಯ ಪ್ರಭುತ್ವಗಳಿಗಿಂತಲೂ ಪ್ರಜಾಪ್ರಭುತ್ವವೇ ಉತ್ತಮ ಎಂಬ ನಂಬಿಕೆಯಿರುವ ನಮ್ಮಂತವರಿಗೆ. ಈ ಪ್ರಜಾಪ್ರಭುತ್ವದ ತಳಹದಿ ಮತ್ತು ಆಧಾರ ಎರಡೂ ಆಗಿರುವ ಸಂವಿಧಾನ ಅತ್ಯಂತ ಪ್ರಮುಖವಾದ ಹಾಗೂ ಜತನದಿಂದ ಕಾಪಾಡಿಕೊಳ್ಳಬೇಕಾದ ಜೀವನಿಧಿ.
ಸಂವಿಧಾನವನ್ನು ಕೂಡಾ ಕಾಲಕಾಲಕ್ಕೆ ಅಂದಿನ ಅಗತ್ಯಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕವಾಗಿ ತಿದ್ದುಪಡಿ ಮಾಡಬಹುದು ಎಂಬ ಅಂಶವೂ ಕೂಡಾ ಅದರ ಜೀವಂತಿಕೆಯ ಭಾಗ.
ನಾವೆಲ್ಲ ಮನುಷ್ಯರಾಗಿ ವರ್ತಿಸಲು ಅವಕಾಶ ನೀಡುವ ಮತ್ತು ಅದಕ್ಕೆ ಭದ್ರತೆಯ ಖಾತ್ರಿ ನೀಡುವ ವೇದಿಕೆ ನಮ್ಮ ಸಂವಿಧಾನ.

ಇಂದಿನ ತುರ್ತು ಅಗತ್ಯ – ಸಂವಿಧಾನದ ಬೆಳಕಲ್ಲಿ ಜೀವಿಸುವುದೇ ಆಗಿದೆ.
– ಡಾ. ಕೃಷ್ಣ ಗಿಳಿಯಾರು
ನಮ್ಮ ನಂತರದ ಪೀಳಿಗೆ ಇಂದಿನ ತ್ವೇಷಮಯ ವಾತಾವರಣದ ಮುಂದುವರಿಕೆಯಲ್ಲಿ ನಿರ್ಭಯವಾಗಿ ಬದುಕಲು ಅಸಾಧ್ಯವೇನೊ ಎಂಬ ಕಳವಳ ನನ್ನನ್ನು ಸದಾ ಕಾಡುತ್ತದೆ. ಆಗ ನನಗೆ ಧೈರ್ಯ ತುಂಬುವುದು ನಮ್ಮ ಸಂವಿಧಾನ. ಇಂದಿನ ತುರ್ತು ಅಗತ್ಯ ಯಾವ ಧಾರ್ಮಿಕ ಪಾಠವಲ್ಲ, ಸಂವಿಧಾನದ ಬೆಳಕಲ್ಲಿ ಜೀವಿಸುವುದೇ ಆಗಿದೆ. ಸಂವಿಧಾನ ವಿರೋಧಿ ಧೋರಣೆಗಳಿಗೆ ಪ್ರೋತ್ಸಾಹ ಸಿಗದಂತೆ ನೋಡಿಕೊಳ್ಳಬೇಕಾಗಿದೆ.





ನಶಿಸಿ ಹೋಗುತ್ತಿರುವ ಒಂದು ನಿರ್ದಿಷ್ಟ ಪ್ರಭೇದ,ಪೀಳಿಗೆ,ಜೀವಸಂಕುಲ……ಅಂತೆಲ್ಲ ಇರುವ ಹಾಗೆ, ಸದ್ಯದ ಸ್ಥಿತಿಯಲ್ಲಿ “ನಶಿಸಿ ಹೋಗುತ್ತಿರುವ ಆಶಯ”- ಈ ನಮ್ಮ ಸಂವಿಧಾನದ್ದು! ಹೀಗಿರುವಾಗ ಸಂವಿಧಾನವನ್ನು ಜೀವಜಲ ಚಿಮುಕಿಸಿ ಆಗಾಗ ತಡವಿ ಉಪಚರಿಸಿ ಜೀವಂತವಿರಿಸುವ ಇಂಥ ಪ್ರಯತ್ನ ನಿಜವಾದ ಗಣರಾಜ್ಯೋತ್ಸವದ ಸೆಲೆಬ್ರೇಶನ್! ಇಷ್ಟಪಟ್ಟದ್ದನ್ನು ನಮ್ಮದಾಗಿಸಿಕೊಳ್ಳುವ ಮನುಷ್ಯ ಗುಣ- ಸಂವಿಧಾನದ ಆಶಯಗಳೊಂದಿಗೆ ನಿರಂತರ ಅನುಸಂಧಾನ ನಡೆಸುತ್ತಿರಲೆಂದು ಆಶಿಸುತ್ತೇನೆ.