ನಿಮ್ಮ ಹಣ್ಣುಗಳನ್ನು ನೀವೇ ಕೀಳಿರಿ
ಇಂಗ್ಲಂಡಿನ ಕೆಲವು ಕಂಟ್ರಿಸೈಡ್ಗೆ ನೀವು ಪ್ರವಾಸ ಹೊರಟರೆ ನಿಮಗೆ ಶುದ್ಧವಾದ ಗಾಳಿ, ಕಣ್ಣಿಗೆ ತಂಪನ್ನೆರಚುವ ಹಸುರು ಯಥೇಚ್ಛ ಸಿಗುತ್ತದೆ. ಅದರಲ್ಲೂ ಜೂನ್ ತಿಂಗಳು. ಸೆಕೆಗಾಲವೆಂದೂ ಕರೆಯಬಹುದಾದ ಹವಾಮಾನ. ಆಗ ನಾನು ಸಸೆಕ್ಸ್ನ ಎಮ್ಸ್ವರ್ತ್ನಲ್ಲಿ ಒಂದು ತೋಟದ ಹೊರಗೆ ನಿಂತು ಬೋರ್ಡು ಓದುತ್ತಿದ್ದೆ. ನನಗದು ಮೋಜು ತಂದಿತ್ತು. ’ಪಿಕ್ ಯುವರ್ ಓನ್ ಸ್ಟ್ರಾಬೆರ್ರೀಸ್’ ಎಂದು ಬರೆದಿದ್ದ ಬೋರ್ಡು ಓದಿ ಗೆಳತಿ ಕ್ಲಾಡಿಯಾರಿಗೆ ತೋರಿಸಿ ಅರ್ಥ ಕೇಳಬೇಕೆಂದುಕೊಳ್ಳುತ್ತಿರುವಾಗಲೇ ಆಕೆ ತೋಟದ ಒಳಕ್ಕೆ ನಡೆದಿದ್ದರು.
ನೆಲದಲ್ಲಿ, ಒಣಗಿದ ಬೈಹುಲ್ಲಿನ ಮೇಲೆ ಮೆತ್ತನೆ ಮಲಗಿದ್ದ ಕೆಂಪನೆಯ ಸ್ಟ್ರಾ ಬೆರ್ರಿಗಳು! ಯಾರ ಬಾಯಲ್ಲಾದರೂ ನೀರೂರಬೇಕು ಎಂಬಷ್ಟರಲ್ಲಿ ಕ್ಲಾಡಿಯಾ ಕೆಲವು ಹಣ್ಣುಗಳನ್ನು ಕೊಯ್ದೂ ತಿಂದೂ ಆಗಿತ್ತು. ಎರಡು ಹಣ್ಣುಗಳನ್ನು ನನ್ನ ಕೈಗೂ ಹಾಕಿದ್ದರು. ರುಚಿ ನೋಡಲು ಕೆಲವು ಹಣ್ಣುಗಳನ್ನು ತಿನ್ನಲೂ ಬಹುದಂತೆ. ಅದೇನೂ ಅಪರಾಧವಲ್ಲ. ಜೂನ್ ತಿಂಗಳಲ್ಲಿಯೇ ವಿಂಬಲ್ಡನ್ ಟೆನ್ನಿಸ್ ಟೂರ್ನಮೆಂಟ್ ನಡೆಯುವುದು. ಅಲ್ಲಿ ಇದೇ ಸ್ಟ್ರಾಬೆರ್ರಿಯನ್ನು ಒಂದಕ್ಕೆ ಒಂದು ಪೌಂಡಿನಂತೆ ಮಾರುವುದಾಗಿಯೂ ಕೇಳಿದ್ದೆ. ಇದೇನು ಇವರು ಹೀಗೆ ಕೊಯ್ದು ತಿಂತಾರಲ್ಲಾ! ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲವೇ? ಹಾಗೆ ಅಂದುಕೊಳ್ಳುತ್ತಲೇ ನಾನೂ ಮೂರ್ನಾರಲ್ಕು ಹಣ್ಣುಗಳನ್ನು ತಿಂದೆ. ದೊಡ್ಡ ನಿಂಬೆ ಹಣ್ಣ ಗಾತ್ರದ ಹಣ್ಣುಗಳು! .
ನಿಜ. ಅಲ್ಲಿ ತೋಟದವರಾಗಿ ಯಾರೊಬ್ಬರೂ ಕಾಣಿಸಲಿಲ್ಲ. ಸಹಾಯಕ್ಕೂ ಜನ ಇಲ್ಲ. ನಿಮ್ಮ ಪಾಡಿಗೆ ನೀವೇ ಕೊಯ್ದುಕೊಳ್ಳಬೇಕು, ಅಲ್ಲಿರುವ ಪುಟ್ಟ ಕೇಬಿನ್ ಒಂದರಲ್ಲಿ ಪ್ಲಾಸ್ಟಿಕ್ ಪಾತ್ರೆಗಳು ಸಿಗುತ್ತವೆ. ನಿಮಗೆ ಬೇಕಾದಷ್ಟು ಹಣ್ಣುಗಳನ್ನು ಅಲ್ಲೇ ಇರುವ ತೂಕದ ಯಂತ್ರದಲ್ಲಿಟ್ಟು ತೂಗಿಸಿ, ಅದಕ್ಕಾಗುವ ದುಡ್ಡನ್ನು ಯಂತ್ರಕ್ಕೆ ನುಗ್ಗಿಸಿ ಚಿಲ್ಲರೆಯಿದ್ದರೆ ಅದನ್ನೂ ಪಡೆದುಕೊಂಡು ಅಲ್ಲಿಂದ ರೈಟ್ ಹೇಳಬಹುದು. ಅದೇ ತೋಟದಲ್ಲಿ ಕೆಲವೊಮ್ಮೆ ರಾಸ್ಬೆರ್ರಿ, ಬ್ಲ್ಯಾಕ್ಬೆರ್ರಿ, ಗ್ರೀನ್ ಯಾಪ್ಪಲ್ಗಳೂ ಇರುತ್ತವೆ. ಅದರ ಕಥೇನೂ ಅಷ್ಟೇನೆ.
ನನಗೆ ಹೀಗೂ ಒಂದು ಯೋಚನೆ ಬಂತು: ನಮ್ಮ ದೇಶದಲ್ಲಿಯೂ ಈ ಥರದ ತೋಟಗಳಿರಬೇಕು. ಒಳಗೆ ಥರಥರದ ಹಣ್ಣುಗಳಿರಬೇಕು. ಹೊರಗಡೆ ’ನಿಮ್ಮ ಹಣ್ಣಗಳನ್ನು ನೀವೇ ಕೀಳಿರಿ’ ಎಂದು ದೊಡ್ಡ ಬೋರ್ಡು ನಿಲ್ಲಿಸಬೇಕು.
ಸೈಕಲ್ಲುಗಳು:
ನಾವು ಸೈಕಲನ್ನು ಇಷ್ಟಪಡುವ ಕಾಲವೊಂದಿತ್ತು. ಆಗ ಕಾಲೇಜು ಅಧ್ಯಾಪ
ಕರು, ಕಛೇರಿಗಳಲ್ಲಿ ಕೆಲಸ ಮಾಡುವ ಆಫೀಸರು, ಗುಮಾಸ್ತರು ಎಲ್ಲ ಸೈಕಲ್ನಲ್ಲಿ ಸವಾರಿ ಮಾಡುತ್ತಿದ್ದರು. ಕ್ರಮೇಣ ಕಾಲೇಜು ವಿದ್ಯಾರ್ಥಿಗಳು ಸೈಕಲ್ನಲ್ಲಿ ಕಾಲೇಜಿಗೆ ಹೋಗತೊಡಗಿದರು. ಈಗ ಕಾಲ ಬದಲಾಗಿದೆ. ನಗರದ ಮನೆಗಳಲ್ಲೆಲ್ಲ ಕಾರುಗಳಿವೆ. ಕನಿಷ್ಟ ದ್ವಿಚಕ್ರ ಮೋಟಾರು ವಾಹನವಾದರೂ ಇದ್ದೇ ಇರುತ್ತದೆ. ಆದ್ದರಿಂದ ಯಾರಿಗೂ ಸೈಕಲ್ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಬಿಡಿ.
ಒಂದು ಬಗೆಯ ತಾತ್ಸಾರವೇ ತುಂಬಿಕೊಂಡಿದೆ. ಸೈಕಲ್ ತುಳಿದು ಕಛೇರಿಗೆ ಹೋಗುವವರಿದ್ದರೆ ಆತ ಜುಗ್ಗನೆನಿಸಿಕೊಳ್ಳುತ್ತಾನೆ. ಅಂಥವನನ್ನು ಕೀಳಾಗಿ ಕಾಣುವುದಕ್ಕೆ, ಗೇಲಿ ಮಾಡುವುದಕ್ಕೆ ಮಂದಿ ಸಾಲುಗಟ್ಟಿ ನಿಲ್ಲುತ್ತಾರೆ.
ಯುರೋಪಿನ ಜನಸಂಖ್ಯೆ ಭಾರತಕ್ಕೆ ಹೋಲಿಸಿದರೆ ಏನೇನೂ ಅಲ್ಲ. ಆದರೆ ಯುವಕರು ಬಲುಬೇಗ ಉದ್ಯೋಗವನ್ನರಸಿಯೋ ವಿದ್ಯಾಭ್ಯಾಸಕ್ಕೋ ನಗರಕ್ಕೆ ಬಂದುಬಿಡುತ್ತಾರೆ. ಹಾಗಾಗಿ ನಗರದ ಜನಸಂಖ್ಯೆ ಬಲುಬೇಗ ಅಧಿಕವಾಗುತ್ತ ಹೋಗುತ್ತದೆ. ಒಂದು ಗಣತಿಯ ಪ್ರಕಾರ ಫ್ರಾನ್ಸಿನ ಜನಸಂಖ್ಯೆಯ ೨೦ರಲ್ಲಿ ೫ರಷ್ಟು ಜನ ಪ್ಯಾರಿಸ್ನಲ್ಲಿ ಮಾತ್ರ ವಾಸಿಸುತ್ತಾರೆ. ಅದಕ್ಕೆ ಹೊಂದಿಕೊಂಡು ಸಾಕಷ್ಟು ಟ್ರಾಫಿಕ್ಜಾಮ್ಗಳೂ ಆಗುತ್ತವೆ. ಕಳೆದ ಮೂರುವರ್ಷಕ್ಕೆ ಹಿಂದೆ ಪ್ಯಾರಿಸ್ನ ಮೇಯರ್ ವಾಹನ ದಟ್ಟಣೆ ಕಡಿಮೆ ಮಾಡಲೆಂದು ಹತ್ತು ಸಾವಿರ ಸೈಕಲ್ಲುಗಳನ್ನು ಪ್ಯಾರಿಸ್ನ ನಾಗರಿಕರಿಗೆ ಉಚಿತವಾಗಿ ಕೊಡಿಸಿದನಂತೆ. ಪರಿಣಾಮವಾಗಿ ಟ್ರಾಫಿಕ್ ಜಾಮ್ನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂತು ಎನ್ನಲಾಗಿದೆ.
ಯುರೋಪಿನ ಜನರಿಗೆ ತಾವು ಸೈಕಲ್ಲಿನಲ್ಲಿ ಪ್ರಯಾಣಿಸುತ್ತಿದ್ದೇವೆ ಎಂಬ ಕಾರಣಕ್ಕೆ ಯಾವುದೇ ಬಗೆಯ ಕೀಳರಿಮೆಯಿಲ್ಲ. ಆಫೀಸಿನ ಸಮಯಕ್ಕೆ ಸರಿಯಾಗಿ ತಲುಪುವುದಕ್ಕೆ ಅವರಿಗೆ
ಸಾಧ್ಯವಾಗಿದೆ. ಅದು ಹೇಗೇಂತ ನೀವು ಕೇಳಬಹುದು. ಹೆಚ್ಚಿನ ಯುರೋಪ್ ದೇಶಗಳಲ್ಲಿ ವಾಹನಗಳ ಮುಖ್ಯ ರಸ್ತೆಯ ಬದಿಗೇನೆ ಸುಮಾರು ಮೂರಡಿ ಅಗಲಕ್ಕೆ ಸೈಕಲ್ ರಸ್ತೆಯಿದೆ. ಅದು ಪೂರ್ತಿಯಾಗಿ ಸೈಕಲ್ಲಿಗೆ ಮೀಸಲಿರಿಸಲಾದ ರಸ್ತೆ. ಪಾದಚಾರಿಗಳೂ ಅಲ್ಲಿಗೆ ಬರುವುದಿಲ್ಲ. ಸೈಕಲ್ ಸವಾರರು ಹಾರ್ನ್ ಬಳಸುವ ಪ್ರಮೇಯ ಕೂಡ ಬರುವುದಿಲ್ಲ.
ಹೆಚ್ಚಿನ ಯುರೋಪ್ ದೇಶಗಳಲ್ಲಿ ಪೇಟೆಯ ನಡುನಡುವೆ ಸೈಕಲ್ ಸ್ಟಾಂಡ್ಗಳಿರುತ್ತವೆ. ಅಲ್ಲಿ ಸೈಕಲ್ಲುಗಳನ್ನು ಒಂದು ಯಾಂತ್ರಿಕ ಗೂಟಕ್ಕೆ ಬಿಗಿಯಲಾಗಿರುತ್ತದೆ. ನಿಮಗೆ ಬಾಡಿಗೆ ಸೈಕಲ್ಲು ಬೇಕಿದ್ದಲ್ಲಿ ಆ ಗೂಟಕ್ಕೆ ನಿರ್ದಿಷ್ಟ ಪಾವಲಿಯನ್ನು(ಯೂರೋ) ನುಗ್ಗಿಸಿದ ತಕ್ಷಣ ಸೈಕಲ್ ಗೂಟದಿಂದ ಬಿಡಿಸಿಕೊಂಡು ನಿಮ್ಮದಾಗುತ್ತದೆ. ಅಲ್ಲಿ ನಿಮ್ಮ ಸಹಾಯಕ್ಕೆ ನೀವೇ ಬರಬೇಕಷ್ಟೆ. ಉದ್ಯೋಗ ನಿಮಿತ್ತವಾಗಿ ದೂರ ಪ್ರಯಾಣಿಸುವವರು ತಮ್ಮ ಕಾರಿನ ಹಿಂದುಗಡೆ ಅಥವಾ ಟಾಪಿನಲ್ಲಿ ಕನಿಷ್ಟ ಮೂರು ಸೈಕಲ್ಲುಗಳನ್ನು ಕೊಂಡೊಯ್ಯುವುದಕ್ಕೆ ಬೇಕಾದ ಕ್ಯಾರಿಯರ್ ಇಟ್ಟುಕೊಂಡಿರುತ್ತಾರೆ.
ನಿರ್ದಿಷ್ಟ ಪಟ್ಟಣವನ್ನು ತಲುಪಿದ ಬಳಿಕ ಕಾರನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ ಅಲ್ಲಿಂದ ಮುಂದೆ ತಮ್ಮ ಸೈಕಲ್ಲನ್ನು ಕಾರಿನಿಂದಿಳಿಸಿ ಕಛೇರಿಗೋ ಇನ್ನಿತರ ಸ್ಥಳಕ್ಕೋ ಹೊರಟು ಹೋಗುತ್ತಾರೆ. ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಲ್ಲಿನ ಜನರು ಸಾಮೂಹಿಕವಾಗಿ ಸಹಕರಿಸುತ್ತಾರೆ. ಭಾರತದಲ್ಲಿ ಈ ತೆರನಾದ ಪ್ರತ್ಯೇಕ ಸೈಕಲ್ ರಸ್ತೆಗಳನ್ನು ಮಾಡುತ್ತಿದ್ದರೆ ಹಾಗೂ ಜನರು
ಸೈಕಲ್ಲನ್ನು ತುಚ್ಛವಾಗಿ ಕಾಣದೆ ಅದು ನಮ್ಮ ದೇಶಪ್ರೇಮದ ದ್ಯೋತಕ ಎಂದು ಭಾವಿಸುವುದು ಸಾಧ್ಯವಾದರೆ ಟ್ರಾಫಿಕ್ ಜಾಮಿನಿಂದ ಬಚಾವಾಗಬಹುದು. ಪೆಟ್ರೋಲ್ ಉಳತಾಯ ಮಾಡಬಹುದು. (ನಿತ್ಯ ಸೈಕಲ್ ತುಳಿಯುವುದರ ಮೂಲಕ) ಆರೋಗ್ಯ ಸಂಪನ್ನತೆಯನ್ನು ಕಾಯ್ದುಕೊಳ್ಳಬಹುದು.









Nice
thankyou
“ನಮ್ಮ ದೇಶದಲ್ಲಿಯೂ ಈ ಥರದ ತೋಟಗಳಿರಬೇಕು. ಒಳಗೆ ಥರಥರದ ಹಣ್ಣುಗಳಿರಬೇಕು. ಹೊರಗಡೆ ’ನಿಮ್ಮ ಹಣ್ಣಗಳನ್ನು ನೀವೇ ಕೀಳಿರಿ’ ಎಂದು ದೊಡ್ಡ ಬೋರ್ಡು ನಿಲ್ಲಿಸಬೇಕು.”
ಆದರೆ, ಹಾಗೇನಾದರೂ ನಮ್ಮಲ್ಲಿ ಬೋರ್ಡ್ ಇಟ್ಟರೇ! ಹಣ್ಣೂಗಳಿರಲಿ, ಪೂರಾ ಮರವನ್ನೇ ಕಡಿದುಕೊಂಡು ಹೋಗುವ ಅಪಾಯವೂ ಇದೆ. ಇದರ ಅರ್ಥ ಅಲ್ಲಿನವರೆಲ್ಲ ಸತ್ಯ ಸಂಧರೂ ನಮ್ಮವರು ಕಳ್ಳರು ಅಂತ ಅಲ್ಲ ಸಾರ್, ಇಲ್ಲಿನ ವ್ಯವಸ್ಥೆ ಹೀಗಿದೆ ಅಷ್ಟೇ!
ಬರಹ ಚೆನ್ನಾಗಿತ್ತು.
naanuu vyavastheya baggene heliddu. dhanyavaadagalu. naada
ತುಂಬಾ ಚೆನ್ನಾಗಿ ಬರೆದಿದ್ದೀರ ಸರ್
board yilladene avaravare hannannu keeluthare..yinnu board bere hakidreee…allige…!!!
nija,nija