ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ ಷ ರಂಗನ್ನವರ ಓದಿದ ‘ಹಂಗಿಲ್ಲದ ಅಂಗಳ’

ನಾಗರಾಜ ಷ ರಂಗನ್ನವರ

“ಬಡವನಾದರೇನು ಪ್ರೀಯೆ…”. ಎಂಬ ಜನಪ್ರಿಯ ಗೀತೆಯ ಮೂಲಕ ಜನಪ್ರಿಯರಾಗಿರುವ ಸತ್ಯಾನಂದ ಪಾತ್ರೋಟ ಅವರದ್ದು ಸರಳ ಸಹಜ ವ್ಯಕ್ತಿತ್ವ. ಯಾವ ಆಡಂಬರಗಳಿಲ್ಲದೆ ಜನಸಾಮಾನ್ಯ ಜೀವನ ಶೈಲಿಯನ್ನು ಬದುಕಿರುವ ಸತ್ಯಾನಂದ ಅವರು, ಅದನ್ನೇ ತಮ್ಮ ಸಾಹಿತ್ಯದಲ್ಲೂ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಅವರ “ಹಂಗಿಲ್ಲದ ಅಂಗಳ” ಕವನ ಸಂಕಲನ ಕುರಿತು ಸಾರಾಂಶವಾಗಿ ಹೇಳಬಹುದಾದಲ್ಲಿ..

ಅಂತರಂಗ ಬಹಿರಂಗ ಎಂಬ ದ್ವಂದ್ವ ನಿವಾರಣೆ ಮಾಡುವ ಅದ್ವೈತ ಭಾವದ ಆಧ್ಯಾತ್ಮ ನಿಲುವುಗಳನ್ನು ಈ ಕವನಗಳಲ್ಲಿ ಕಾಣಬಹುದು. ಇಂದಿನ ರಾಜಕೀಯ ಪ್ರೇರಿತ ಜೀವನವನ್ನು ನಡೆಸುವ ಜನಮಾನಸವು, ತಮ್ಮ ಆಂತರಿಕ ಕೀಳರಿಮೆಯನ್ನು (Inner Inferiority ) ಹೋಗಲಾಡಿಸಿಕೊಳ್ಳಲು ಇಲ್ಲ ಸಲ್ಲದ “ಜಾತಿವ್ಯವಸ್ಥೆ”ಯನ್ನು ಪೋಷಿಸುತ್ತಿದೆ. ಇಂತಹ ಆಧುನಿಕ ಪೋ(ಶೋ)ಷಣೆಯ ಕುರಿತು ಜಾಗೃತಿ ಮೂಡಿಸುವ ಆಶಯವನ್ನು ಸತ್ಯಾನಂದ ಅವರ ಕವನಗಳು ಹೊತ್ತಿವೆ. ಇನ್ನೂ ಕೆಲವು ಕವನಗಳು ಭಾವವನ್ನು ಉಲ್ಲೇಖಿಸುವುದಾದಲ್ಲಿ…

ಸಾಮಾಜಿಕ ಸಂಗತಿಗಳ ಸಂತೆಯಲಿ ಕಳೆದುಹೋಗಿರುವ ಮಾನವನ ತುಮುಲವನ್ನು , ಬುದ್ಧನಿಗೊಂದಿಷ್ಟು ದಾರಿ ಬಿಡಿ ಕವನದಲ್ಲಿ ಕಾಣುವೆವು..
“ಅಂದು,
ತಥಾಗತನ ಸದ್ದಿಲ್ಲದ ನಡುಗೆಗೆ
ಕಾಡು ಮಿಡಿದಿತ್ತು, ಕಾರಿರುಳು ಕರಗಿತ್ತು
ತಣ್ಣನೆಯ ಅವನ ಮಾತಿಗೆ
ತಂಗಾಳಿ ತೀಡಿತ್ತು, ನಾಡೆಲ್ಲ ಕುಣಿದಿತ್ತು
ಅಂಗುಲಿಮಾಲನೂ – ಸೋತು
ಸುಣ್ಣವಾಗಿದ್ದ-
ಅವನೆದೆಯ ಒಸುಗೆಗೆ”

ಕಾಲದೇಶಗಳನ್ನು ದಾಟಿಕೊಂಡು ಸಾಗಿಬಂದಿರುವ ಮಾನವನ “ಪರಿವರ್ತನಾ ಯಾತ್ರೆ”ಯನ್ನು ಅವರ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕವನದಲ್ಲಿ ನೋಡುವೆವು…
” ಶುದ್ಧ ಪೂರ್ಣಿಮೆಯ ದಿನ
ಸಿದ್ಧಾರ್ಥ,
ಬರೀ ಬುದ್ಧನಾಗಲಿಲ್ಲ
ಮಗುವಾದ, ಶುದ್ಧ ಮನುಷ್ಯನಾದ
ಹರ ಹರಿ ಇಹ ಪರಗಳ
ಕುರಿತು
ಹರಟಲಿಲ್ಲ, ತಲೆ ಕೆಡಿಸಿಕೊಳ್ಳಲಿಲ್ಲ
ಎದುರಿಗಿದ್ದದ್ದೆಲ್ಲ ಸತ್ಯವೆಂದ
ಪ್ರೀತಿಯನೇ ಬಿತ್ತಿ, ಪ್ರೀತಿಯನೇ ಬೆಳೆದು, ಪ್ರೀತಿಯನೇ-
ಹಂಚಿದ
ಪ್ರೀತಿಗೆ ಹೊಸ ಭಾಷ್ಯ ಬರೆದ.
ಅಭಿಷಕ್ತವನು ಕಾಲ ಕಸ ಮಾಡಿದ
ಸಿದ್ಧಾರ್ಥ
ಅನಭಿಷಿಕ್ತ ಬುದ್ಧನಾದ
ಬದ್ಧತೆಯ ಬದುಕಿಗೆ, ಬೆಳಕಿಗೆ
ಅದೆಂತಹ ಅಚ್ಚರಿಯ ರೂಪಕ
ಕಾಲ ಕಳೆಯಿತು
ಅನಭಿಷಕ್ತ-ಅಭಿಷಕ್ತ
ಮೌನದಲಿ ಪರಿತ್ಯಕ್ತ”
“ಕೇರಿ ಕೇರಿಯ ಸುತ್ತಿ
ಎಲ್ಲರೊಳಗೊಂದಾದ
ಗಾಂಧಿ,
ಇಲ್ಲಿರುವ ಎಲ್ಲರಿಗೂ
ಭಾರತ ಒಂದೆಂದ
ಕೊನೆಗೆ ಗುಂಡಿಗೆ ಬಲಿಯಾಗಿ
ವರ್ಷಕ್ಕೊಂದೆರೆಡು ಸಲ
ಬೆಳ್ಳಂ ಬೆಳಿಗ್ಗೆ ಸುಳಿದು, ಸುದ್ದಿಯಾಗಿ
ಮತ್ತೆ ಮಂಗಮಾಯ.
‘ರಘುಪತಿ ರಾಘವ , ರಾಜಾರಾಮ
………….. ‘
ಮೂಲೆಯಲ್ಲಿ ಸುತ್ತಿಟ್ಟ ಚಾಪೆ
ಫ್ಯಾಶನ್ನಾಗಿದೆ ಈಗ ಗಾಂಧಿಗಿರಿ ಕೂಡ”
“ಬುದ್ಧ ಬಸವ ಗಾಂಧಿ
ಈ ನೆಲದ ಬೆಳಕು
ನೆಲದ ಮಕ್ಕಳಿಗೇಕಿಲ್ಲ ಅವರ ನೆರಳು
ನೆರಳಾಗಲು , ಬೆಳಕಾಗಲು
ಅಂಬೇಡ್ಕರ್-ನೆಲದಿಂದೆದ್ದ
ನೆಲದ ಮರೆಯ ನಿಧಾನ”

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೊತ್ತರ ಭಾರತದ ಬದಲಾದ ವ ಬದಲಾಗದ ಸ್ಥಿತಿಗಳನ್ನು ವ್ಯಕ್ತಪಡಿಸುತ್ತದೆ ನೀ ತಂದ ಸ್ವಾತಂತ್ರ್ಯ
“ಕಾಶ್ಮೀರ ಕಣಿವೆಯಲಿ ಕನ್ಯೆಯ ಪಾದದಲಿ
ಅನುಮಾನ, ಆತಂಕದ ನಾಗರದ ಹುತ್ತ
ಪಕ್ಕದಲ್ಲಿಯೇ ಕುಳಿತಿದ್ದಾನೆ, ಭಯೋತ್ಪಾದಕ, ನರಹಂತಕ
ಕುದುರೆಯೇರಿ ವಿತ್ತಂಡದಲಿ ಮೆರೆಯುತ್ತಿದ್ದಾನೆ ವಿದೂಷಕ
ಅವಗಿಲ್ಲ ಯಾರ, ಯಾವುದರ ದರಕಾರ
ಅವನದ್ದೇ ಸರಕಾರ”
“ಮರುಗಬೇಡೆಲೋ ಅಜ್ಜ, ಕೊರಗಬೇಡಲೋ ಅಜ
ಬಸವಾದಿ ಶರಣರು, ದಾಸಾದಿ ಶ್ರೇಷ್ಠರು
ಸಿಕ್ಕು ನರಳುತ್ತಿದ್ದಾರೆ- ಸ್ವ ಜಾತಿ ಜಾಲಿಯಲಿ
ಕಳೆದರೂ ಅರವತ್ತು
ನೀನೊಬ್ಬ ಸಿಕ್ಕಿಲ್ಲ ಯಾರೊಬ್ಬರ ಕೈಯಲಿ
ಇದು ನಿನ್ನ ಪುಣ್ಯ!
ನನ್ನಂಥವರ ಭಾಗ್ಯ !
ಇರಬೇಕು ನೀ ಹೀಗೆ ನಮ್ಮ ಜೊತೆ ಅನವರತ
ಪಳೆಯುಳಿಕೆಯಾಗಿ ನರಳುತಿದೆ ಸ್ವಾತಂತ್ರ್ಯ”

ಇನ್ನೂ ಪುಸ್ತಕದ ಶೀರ್ಷಿಕೆ ಹೊತ್ತ ಹಂಗಿಲ್ಲದ ಅಂಗಳ ಕೇವಲ ಸತ್ಯಾನಂದ ಅವರ ಜೀವದನಿ ಅಷ್ಟೇ ಅಲ್ಲದೆ ಶ್ರಮಿಕರ ಶೋಷಿತರ ಆತ್ಮಪ್ರತಿಧ್ವನಿಯಾಗಿದೆ….

“ನಾವು ಕಲ್ಲು ಒಡೆಯುತ್ತೇವೆ
ಯಾರಿಗೂ ಕಲ್ಲು ಹೊಡೆಯುವುದಿಲ್ಲ
ನಾವು ಕಲ್ಲು ಕಟೆಯುತ್ತೇವೆ
ಯಾರೊಬ್ಬರ ಕಣ್ಣಲ್ಲಿ ರಕ್ತ ಬಿಡಿ:
ಹನಿ ಕಣ್ಣೀರು ಬರಿಸುವುದಿಲ್ಲ
ನಾವೇ ಒಡೆದ, ನಾವೇ ಕಟೆದ ಕಲ್ಲುಗಳಿಂದಲ್ಲವೇ
ಇದೇ ನೆಲದ ಮೇಲೆ
ಗುಡಿ, ಗುಂಡಾರ, ಮಠ, ಮಸೀದಿ ಚರ್ಚು
ಕಟ್ಟೆ, ಕಾಲುವೆ, ಮನೆ, ಮಹಲು
ನಿಮ್ಮ ಮನೆಯೊಳಗಿನ ಜಗುಲಿ ಆಕಾರಗೊಂಡದ್ದು
ಅಷ್ಟೇ ಏಕೆ?
ನೀವು ಏಕಾಂತದಲಿ ಆಡುತ್ತ ಪಿಸು ಮಾತು
ಅಂಗಾತ, ಮುಂಗಾತ
ಮಂಗಾಟ ಆಡುವುದು
ಊಸರವಳ್ಳಿಯಾಗಿ ರೂಪಾಂತರಗೊಳ್ಳುವುದು
……………………………………………….
ನಾವೇ ಒಡೆದ , ಕಟೆದ ಕಲ್ಲಿನಲಿ
ಕಾಣಬಹುದು ಅಲ್ಲಮನ ಅನುಭಾವ
ಬಸವಣ್ಣನ ಕಾಯಕ, ದಾಸೋಹ, ಪ್ರಸಾದ
ಸಿದ್ಧರಾಮನ ಕರ್ಮಯೋಗ
ಉಪವಾಸದಲ್ಲೂ-
ನಮ್ಮದು ಹಂಗಿಲ್ಲದ ಅಂಗಳ
ಇಣುಕಿ ಇಣುಕಿ ನೋಡುತ್ತಾನೆ ಚಂದಿರ..”

ಅವರ ಸಂತ್ರಸ್ತನ ಸ್ವಗತ ಕವನವು ಬಾಗಲಕೋಟೆಯ ಮುಳುಡೆಯಿಂದ ಪೀಡಿತ ಜನರ ಆತ್ಮಗೀತೆಯಾಗಿದೆ…
“ಮೈ, ಕೈ ತುಂಬಿಕೊಂಡ ಕೃಷ್ಣೆ
ನಿರ್ವಿಕಾರವಾಗಿ ಬಿದ್ದಿದ್ದಾಳೆ ಈಗ ಹೆಣಬವಾಗಿ
ಕಾಲಾನುಕಾಲ ಅವಳಕ್ಕಪಕ್ಕದಲಿ
ಬೈಗು ಬೆಳಗು ಕಂಡು
ಸಿಹಿ ಕಹಿ ಉಂಡ ಜನ,
ಆಡಿದ್ದರು ಕುಂಟಲಪಿ, ಹಿಡಿದಿದ್ದರು ಕುಸ್ತಿ
ಹಬ್ಬದಲಿ ಸಂಭ್ರಮಿಸಿ, ದಿಬ್ಬಣದಲಿ ವಿರಮಿಸಿ
ಆಗಿತ್ತು ಅವರವರ ಊರು,ಕೇರಿ ಅವರಿಗೆ ನಂದನವನ
ಈಗ ಹುಡುಕುವುದೆಲ್ಲಿ, ಆ ಊರು, ಕೇರಿ
ಎಷ್ಟು ಕೊಟ್ಟರು, ಬರುವುದು ಮತ್ತೆ-
ಆ ಸಿರಿ, ಸೊಬಗಿನೈಸಿರಿ
ಎದುರಾಗುವನು ಮುದುಕ ಚಿಂದಿ ಬಟ್ಟೆಯಲಿ
ನೋಡಲಾಗದು ಅವನ ಸ್ಥಿತಿ ಗತಿ
ಕಳಕೊಂಡದ್ದಕ್ಕೆ ಇಲ್ಲ ಇತಿಮಿತಿ
ಹುಟ್ಟಿ ಬದುಕಿ ಬಾಳಿದ ಊರು, ಸುರಿಯುತ್ತಿದೆ ಹಾಳು
ಪಹರೆ ತಿರುಗುತ್ತದೆ ಅಲ್ಲಿ ಈಗ ಒಂಟಿ ಬೆಕ್ಕು
ಸೂರ್ಯ ಚಂದ್ರ ನಕ್ಷತ್ರಗಳಿಲ್ಲದ ಊರು
ನೆನೆಯುತ್ತ ಕುಳಿತಿದ್ದೇನೆ ನಾನು
ಜುಳು ಜುಳು ಹರಿಯುವ ಹಳ್ಳ
ಚಿಲಿಪಿಲಿ ಗುಟ್ಟುವ ಹಕ್ಕಿಗಳ ದಂಡು
ಹಸಿರು ಹೊಲಗಳ ಆಸುಪಾಸಿನಲಿ
ತಿರುಗುವ ಕುರಿ, ದನಗಳ ಹಿಂಡು
ಕಾಣುತ್ತಿಲ್ಲ ಒಂದೂ
ಒಂದಾಗಿ ಉಳಿದಿಲ್ಲ ಬಂಧು ಬಳಗ-
ನಂಬಿದ ದೇವರು, ದಿಂಡರು
ಭೂತಾಕಾರದಲಿ ಕುಣಿಯುತಿವೆ
ಅಲ್ಲಲ್ಲಿ ಸೆರಗು ಹಾಸಿ ಪಬ್ಬು ಬಾರುಗಳು
ಬಿರುಕು ಬಿಟ್ಟಿವೆ ಒಂದಾದ ಮನಸುಗಳು
ಕೃಷ್ಣೆಯಲಿ ಮುಳುಗಿವೆ ಎಲ್ಲ ಕನಸುಗಳು
ಇಂಥಲ್ಲಿ ಹುಡುಕುವುದೆಲ್ಲಿ
ಅಜ್ಜ,‌ಮುತ್ತಾತರ ಆಸ್ತಿ
ಸಂಸ್ಕೃತಿ-ಉಪಸಂಸ್ಕೃತಿ
ಬಂದ ಪರಿಹಾರ ಉಳಿದಿಲ್ಲ ಸೆರಗಿನಲಿ
ರಾಜಕೀಯ ತಪ್ಪಿಲ್ಲ ಇವರ ಹೆಸರಿನಲಿ
ಕೃಷ್ಣೆ,
ನೀನೋ ನಿರ್ವಿಕಾರದಲಿ
ಎಲ್ಲವನೂ ನೋಡುತ್ತಾ
ಬಿದ್ದಿರುವೆ ಹೆಣವಾಗಿ
ಎಲ್ಲವನ್ನೂ ಕಳಕೊಂಡ ಜನಕೆ
ಒಂದಂಗುಲ ಸ್ಥಳವಿಲ್ಲ- ಸಂಸ್ಕಾರಕ್ಕಾಗಿ

ಹೀಗೆ ಸತ್ಯಾನಂದ ಪಾತ್ರೋಟ ಅವರ ಕವನಗಳು ದೈನಂದಿನ ಜೀವನದ ಆಗುಹೋಗುಗಳನ್ನೇ ಮುಖ್ಯ ವಸ್ತುವಾಗಿ ಆವರಿಸಿಕೊಂಡಿವೆ. ಈ ಕವನಗಳದ್ದು ನೇರ ನಿರೂಪಣೆಯೆ ಅವುಗಳನ್ನು ಒಂದೇ ಬೈಠಕ್’ನಲ್ಲಿ ಓದಿ ಮುಗಿಸುವಷ್ಟು ಮತ್ತೊಂದು ಹಿರಿಮೆ.

‍ಲೇಖಕರು Admin

17 March, 2022

1 Comment

  1. T S SHRAVANA KUMARI

    ಕವನ ಸಂಕಲನಕ್ಕೆ ಉತ್ತಮ ಪ್ರವೇಶ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading