ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ ಎಂ ಹುಡೇದ ಓದಿದ ‘ಮಕ್ಕಳ ಬಾಳಿನ ಬೆಳಕು, ಸಾವಿತ್ರಿಬಾಯಿಫುಲೆ’

  ನಾಗರಾಜ ಎಂ ಹುಡೇದ 

ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ.
ಅಕ್ಷರದವ್ವ ‘ಸಾವಿತ್ರಿಬಾಯಿ ಫುಲೆ’ ಯವರ ಕುರಿತಾಗಿ ಅನೇಕ ಕೃತಿಗಳು, ನಾಟಕಗಳು, ಚಲನಚಿತ್ರಗಳು ನಾಡಿನ ಆಸಕ್ತರನ್ನು ತಲುಪಿವೆ. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಬಾಳಿನ ಬೆಳಕಾಗಿರುವ ಸಾವಿತ್ರಿಬಾಯಿ ಫುಲೆ ಅವರನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವನ್ನು ಸಾಹಿತಿ ಶಂಕರ ದೇವರು ಹಿರೇಮಠ ಅವರು ಮಾಡಿದ್ದಾರೆ. ಶಿಕ್ಷಕರಾಗಿರುವ ಶಂಕರ ಹಿರೇಮಠ ಅವರು ಮಕ್ಕಳಿಗಾಗಿ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ, ಕಾರ್ಯಕ್ರಮಗಳನ್ನು ಸಂಘಟಿಸಿ ಮಕ್ಕಳಿಗೂ , ಮಕ್ಕಳ ಸಾಹಿತಿಗಳನ್ನೂ ಪ್ರೋತ್ಸಾಹಿಸುತ್ತಿರುವುದು ಅವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತದೆ.

ಮಕ್ಕಳಬಾಳಿನ ಬೆಳಕಾಗಿರುವ ‘ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ’ ಯವರ ಬಾಲ್ಯ ಜೀವನ, ಶಿಕ್ಷಣ, ಅವರ ಹೋರಾಟದ ಬದುಕು, ಶಾಲೆಗಳನ್ನು ಪ್ರಾರಂಭಿಸಿದ ರೀತಿ, ಸಮಾಜ ಅವರನ್ನು ಕಂಡ ಬಗೆಯನ್ನು ಬಹಳ ಸರಳ ಸುಂದರವಾಗಿ , ಓದಿ ಅರ್ಥೈಸಿಕೊಳ್ಳುವಂತೆ ಕೃತಿ ರಚಿಸಿದ್ದಾರೆ. ಒಟ್ಟು ೧೬ ಅಧ್ಯಾಯಗಳಲ್ಲಿ ಸಾವಿತ್ರಿಬಾಯಿವರ ಜೀವನ ನಮಗೆ ಸ್ಫೂರ್ತಿಯಾಗುವಂತೆ ರಚಸಿದ್ದಾರೆ. ಎಲ್ಲಾ ಅಧ್ಯಾಯಗಳಲ್ಲೂ ಸರ್ವಜ್ಞ ಮತ್ತು ಶರಣರ ವಚನಗಳನ್ನು ಬಳಸಿ ಮತ್ತಷ್ಟು ಮೆರಗು ಬರುವಂತೆ ಮಾಡಿದ್ದಾರೆ.

ರೇಖಾ ಚಿತ್ರಗಳೂ ಸಹಿತ ಮಕ್ಕಳ ಮನಸ್ಸನ್ನು ಸೆಳೆಯುವಂತಿವೆ. ಲೇಖಕರು ಹಲವಾರು ಪ್ರಮುಖ ಕೃತಿಗಳ ಅಧ್ಯಯನ , ಅವಲೋಕನ ಮಾಡಿರುವುದು ಕಂಡುಬರುತ್ತದೆ. ಆದ್ದರಿಂದಲೇ ನಿಖರತೆ ಮತ್ತು ನಿರ್ದಿಷ್ಟತೆ ಇಲ್ಲಿರುವ ಪಠ್ಯಾಂಶದಲ್ಲಿ ವ್ಯಕ್ತವಾಗಿದೆ.

ಅಧ್ಯಾಯ ಒಂದರಲ್ಲಿ ಅಕ್ಷರ ಮತ್ತು ಶಿಕ್ಷಣದ ವಾಖ್ಯೆಗಳನ್ನು ಹೆಸರಿಸುವ ಮೂಲಕ ಕೃತಿಗೆ ಪ್ರವೇಶ ಕಲ್ಪಿಸಿದ್ದಾರೆ. ಸಾವಿತ್ರಿಬಾಯಿಯವರ ಬಾಲ್ಯದ ರೋಚಕ ಅಂಶಗಳಿವೆ. ಜನೇವರಿ ೩ ೧೮೩೧ ಮಹಾರಾಷ್ಟç ರಾಜ್ಯದ ಸತಾರಾ ಜಿಲ್ಲೆಯ ನಾಯಗಾಂವನ ಹಳ್ಳಿಯಲ್ಲಿ ಜನನವಾಗುತ್ತದೆ. ಆ ಕಾಲದಲ್ಲಿ ಶಿಕ್ಷಣ ಮಹಿಳೆಯರಿಗೆ ಕನಸಾಗಿತ್ತು. ಬಾಲ್ಯವಿವಾಹವು ಸಾಮಾನ್ಯವಾಗಿತ್ತು. ಸಮಾಜ ಸುಧಾರಕ ಜ್ಯೋತಿಬಾಫುಲೆಯವರನ್ನು ಮದುವೆಯಾದ ಮೇಲೆ ಅವರಿಂದಲೇ ಶಿಕ್ಷಣ ಪಡೆದು ದೇಶದ ಪ್ರಥಮ ಶಿಕ್ಷಕಿಯಾಗಿ ಹೊರಹೊಮ್ಮಿದರು. ಹಂತಹAತವಾಗಿ ಹದಿನೆಂಟು ಶಾಲೆಗಳನ್ನು ಸ್ಥಾಪಿಸಿ ಸಾವಿರಾರು ಹೆಣ್ಣುಮಕ್ಕಳ ಬಾಳಿಗೆ ಜ್ಯೋತಿಯಾದಳು.

ಭಾರತದ ಮೊದಲ ಕನ್ಯಾಶಾಲೆ ಪುಣೆಯ ಬುಧವಾರ ಪೇಟೆಯಲ್ಲಿಯ ಭಿಡೆಮವರ ವಾಡೆಯಲ್ಲಿ ಆರಂಬಿಸಿದರು. ಶೋಷಿತರ ಕಷ್ಟಗಳು ನಿವಾರಣೆಯಾಗಬೇಕಾದರೆ, ಅವರ ದಾರಿದ್ರ ದೂರಾಗಬೇಕಾದರೆ ಶಿಕ್ಷಣ ಬೇಕೆಬೇಕು ಎಂದು ಬಲವಾಗಿ ನಂಬಿದ್ದರು. ಆ ಮಹಾತಾಯಿ ಅನುಭವಿಸಿದ ನೋವು ನೂರಾರು. ಅದಕ್ಕಾಗಿ ಶಿಕ್ಷಣದಿಂದ ಮಾತ್ರ ಸರ್ವರ ಏಳಿಗೆ ಸಾಧ್ಯವೆಂಬುದನ್ನು ಸಾವಿತ್ರಿಬಾಯಿ ಮನಗಂಡಿದ್ದರು. ಆ ನಿಟ್ಟಿನಲ್ಲಿಯೇ ಅವರ ದೃಢ ಹೆಜ್ಜೆಗಳಿದ್ದವು.

“ನಡೆಯುವುದೊಂದೆ ಭೂಮಿ ಕುಡಿಯುವುದೊಂದೆ ನೀರು| ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ| ನಡುವೆ ಎತ್ತಣದು ಸರ್ವಜ್ಞ.” ಎನ್ನುವಂತೆ ಎಲ್ಲಾ ಜಾತಿಯ ಹೆಣ್ಣುಮಕ್ಕಳ, ಬಡಮಕ್ಕಳಿಗೆ ಶಿಕ್ಷಣವನ್ನು ನೀಡುವ ಅದ್ವಿತಿಯ ಕಾರ್ಯ ಮಾಡಿದರು. ೧೮೫೪ರಲ್ಲಿ ‘ಕಾವ್ಯಫುಲೆ’ ಎಂಬ ಕವನ ಸಂಕಲನವನ್ನೂ ಪ್ರಕಟಿಸಿದರು. ಅವರಿಗೆ ಬೆನ್ನೆಲುಬಾಗಿ ನಿಂತವರು ಜ್ಯೋತಿಬಾಫುಲೆಯವರು. ದಂಪತಿಗಳಿಬ್ಬರೂ ಸತ್ಯಶೋಧಕ ಸಮಾಜದ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರು. ರೈತರಿಗೆ , ಮಹಿಳೆಯರಿಗೆ ರಾತ್ರಿ ಶಾಲೆಗಳನ್ನೂ ಸ್ಥಾಪಿಸಿದರು. ಪ್ಲೇಗ್ ರೋಗಿಗಳ ಸೇವೆಗೂ ಮುಂದಾದ ಸಂದರ್ಭದಲ್ಲಿ , ವಿಶ್ರಾಂತಿಯಿಲ್ಲದ ಕಾರ್ಯದ ನಡುವೆ ಪ್ಲೇಗ್ ಸೋಂಕಿಗೂ ತುತ್ತಾದರು.

ಹೀಗೆ ಅವಿಸ್ಮರಣೀಯ ಘಟನೆಗಳನ್ನು ಮಕ್ಕಳ ಓದಿಗೆ ಜ್ಞಾನಕ್ಕೆ ನಿಲುಕುವಂತೆ ಸೂಕ್ತ ತಲೆಬರಹಗಳೊಂದಿಗೆ ರಚಿಸಿದ್ದಾರೆ. ಪ್ರತಿಯೊಬ್ಬರೂ ಓದಿ ಸ್ಫೂರ್ತಿ ಪಡೆದರೆ ಲೇಖಕರ ಶ್ರಮ ಸಾರ್ಥಕವಾಗುತ್ತದೆ. ಸುಂದರ ಮುಖಪುಟ ಮತ್ತು ಗುಣಮಟ್ಟದ ಮುದ್ರಣದಿಂದ ಕೃತಿ ಆಕರ್ಷಕವಾಗಿದೆ.

‍ಲೇಖಕರು Admin

17 August, 2022

1 Comment

  1. tulasi.na.c@gmail.com

    ತುಂಬಾ ಉತ್ತಮವಾದ ಕೃತಿ ಪರಿಚಯ.. ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading