ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನವೀನ್ ಗೆ ಸಿಕ್ಕಂತಹ ಅಮ್ಮ..’ – ದಿನೇಶ್ ಅಮೀನ್ ಮಟ್ಟು ಬರೆಯುತ್ತಾರೆ

ದಿನೇಶ್ ಅಮೀನ್ ಮಟ್ಟು

ನವೀನ್ ಸೂರಿಂಜೆ ಜೈಲು ಸೇರಿ ಇಂದು ಸಂಜೆಗೆ ಒಂದು ವಾರವಾಗುತ್ತದೆ. ಈತನ ಬಂಧನವಾದ ಎರಡು ದಿನಗಳ ನಂತರ ಯಾರಿಂದಲೋ ಮೊಬೈಲ್ ನಂಬರ್ ಪಡೆದು ನವೀನ್ ಅಮ್ಮನಿಗೆ ಪೋನ್ ಮಾಡಿದ್ದೆ. ವಯಸ್ಸಾಗಿರುವ ನವೀನ್ ತಂದೆತಾಯಿಗಳು ಮನೆಯಲ್ಲಿ ಈಗ ಇಬ್ಬರೇ ಇದ್ದಾರೆ. ಆಸರೆಗೆ ಇದ್ದ ಮಗ ಜೈಲಲ್ಲಿ ಇದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ತಂದೆ-ತಾಯಿಯ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಬಹುದು. ನಾನೂ ಅದನ್ನೇ ನಿರೀಕ್ಷಿಸಿದ್ದೆ. ಆದರೆ ನಾನು ಕಂಡ ಆ ಅಮ್ಮನ ಚಿತ್ರವೇ ಬೇರೆ. ಅವರು ಬಂಧನವಾದ ದಿನದ ಬೆಳವಣಿಗೆಗಳನ್ನು ಹೇಳುತ್ತಾ ಹೋದರು.

‘……ಸಾಮಾನ್ಯವಾಗಿ ರಾತ್ರಿ ಮನೆಗೆ ಬರುವುದು ಲೇಟ್ ಆದ ಕೂಡಲೇ ನಾನು ಪೋನ್ ಮಾಡ್ತೇನೆ… ಆ ದಿನವೂ ಪೋನ್ ಮಾಡಿದ್ದೆ…. ಗೆಳೆಯನ ಮನೆಯಲ್ಲಿರುವುದಾಗಿ ಹೇಳಿದ್ದ…ಮರುದಿನ ನನಗೆ ಗೊತ್ತಾದರೂ ಅವನ ತಂದೆಗೆ ಹೇಳಲಿಲ್ಲ..ಈಗ ಗೊತ್ತಾಗಿದೆ…ಅವನ ಅಣ್ಣಂದಿರೆಲ್ಲ ಬೇರೆ ಊರಿನಲ್ಲಿದ್ದಾರೆ…ನೀವೇ ಅವನಿಗೆ ಸಹಾಯ ಮಾಡಬೇಕು…’ ಎಂದು ಹೇಳುತ್ತಾ ಹೋದರು.

ಹತ್ತು ನಿಮಿಷಗಳ ನಮ್ಮ ಸಂಭಾಷಣೆಯಲ್ಲಿ ಆ ತಾಯಿ ಒಂದೇ ಒಂದು ಶಬ್ದ ನವೀನ್ ವಿರುದ್ಧ ಮಾತನಾಡಲಿಲ್ಲ. ‘…ಊರಿನ ಉಸಾಬರಿ ಇವನಿಗ್ಯಾಕೆ ಬೇಕು…ಈಗ ನಮ್ಮನ್ನು ನೋಡಿಕೊಳ್ಳುವವರು ಯಾರಿದ್ದಾರೆ?..ಎಲ್ಲರೂ ಹೀಗೆ, ಕಂಡವರ ಮಕ್ಕಳನ್ನು ಬಾವಿಗೆ ದೂಡಿ ಚಂದ ನೋಡ್ತಾರೆ..’ – ಇಂತಹ ಡೈಲಾಗ್ಗಳನ್ನು ನಿರೀಕ್ಷಿಸಿದ್ದ ನನಗೆ ಆ ತಾಯಿಯ ಮಾತು ಕೇಳಿ ಅಚ್ಚರಿಯಷ್ಟೇ ಅಲ್ಲ, ಕಾಲುಮುಟ್ಟಿ ನಮಸ್ಕರಿಸಬೇಕೆನಿಸುವಷ್ಟು ಗೌರವವೂ ಮೂಡಿತು.

ಇಂತಹ ಒಳ್ಳೆಯ ತಾಯಿಯ ಮಗ ನವೀನ್ ತಪ್ಪು ಕೆಲಸ ಮಾಡಲು ಸಾಧ್ಯವೇ? ನವೀನ್ ಸೂರಿಂಜೆಯನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಹೊರಟಿರುವ ಮಂಗಳೂರಿನ ಪೊಲೀಸರಿಗೆ ಕೂಡಾ ನವೀನ್ಗೆ ಸಿಕ್ಕಂತಹ ಒಳ್ಳೆಯ ಅಮ್ಮ ಸಿಕ್ಕಿಬಿಟ್ಟಿದ್ದಿದ್ದರೆ? ಇಲ್ಲದೆ ಇದ್ದರೆ ಅವರ ತಾಯಿಯ ಬುದ್ದಿ ಮಾತು ಕೇಳುವಷ್ಟು ಅವರು ಒಳ್ಳೆಯವರಾಗಿರುತ್ತಿದ್ದರೆ? ನಮ್ಮೆಲ್ಲರ ಪ್ರೀತಿಯ ನವೀನ್ ಬೆಳಕಿನ ಹಬ್ಬವನ್ನು ಕತ್ತಲೆಯಲ್ಲಿ ಕಳೆಯಬೇಕಾಗುತ್ತಿರಲಿಲ್ಲ. ನವೀನ್ಗೆ ಸಿಕ್ಕಂತಹ ಅಮ್ಮ ಎಲ್ಲರಿಗೂ ಸಿಗಲಿ.

‍ಲೇಖಕರು G

15 November, 2012

1 Comment

  1. akshatha

    ನವೀನ ಸೂರಿಂಜೆಯ ಅಮ್ಮನನ್ನು ನೀವು ಮಾತಾಡಿಸಿದ್ದು ಮತ್ತು ಅಮ್ಮನ ಇ ರೀತಿಯ ಪ್ರತಿಕ್ರಿಯೆ ಎರಡು ದೀಪಾವಳಿಯ ಹಣತೆ ಬೀರಿದ ಬೆಳಕಿನಂತೆ ಭಾಸವಾಯಿತು . ನಾವೆಲ್ಲಾ ಬಹುತೇಕ ನವೀನನ ಗೆಳೆಯರ ಗುಂಪು ಅವನ ಬಂಧನ ಕುರಿತೆ ಚಿಂತೆ ಮಾಡುತಿದ್ದೆವು ಆದರೆ ನಮಗೆ ಅವನ ಮನೆ ಮಂದಿಯ ಚಿಂತೆ, ದುಗುಡ ಕುರಿತು ಅಸ್ಟು ಕಾಡಿರಲಿಲ್ಲ . ನೀವು ಅವರನ್ನು ನೆನಪಿಸಿಕೊಂಡು ಫೋನ್ ಮಾಡಿ ವಿಚಾರಿಸಿದ್ದು ತುಂಬಾ ಒಳ್ಳೆಯ ಕೆಲಸ . ನವೀನ ಸೂರಿಂಜೆ ಮಾಡಿದ ಕೆಲಸಕ್ಕೆ ಸಿಗಬೇಕಾದ್ದು ಪ್ರಶಂಸೆ ಆದರೆ ಆಗಿದ್ದು ಬಂಧನ . ಇ ಬಂಧನ ಅವನ ಉತ್ಸಾಹವನ್ನು ಕುಗ್ಗಿಸದಿರಲಿ ಎಂದಸ್ಟೇ ಬೇಡುವೆ . —

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading