ನಳಿನ
ಈ ಕತೆ ಬರೆಯದಿದ್ದರೆ ಸತ್ತೇ ಹೋಗುತ್ತೇನೆ. ಸುಮ್ಮನೇ ಕೇಳಿ…
ನನಗೆ ಬುದ್ಧಿ ಬಂದಂದಿನಿಂದಲೂ ನಾನು ಹೀಗೇಯೇ ಇದ್ದೇನೆ, ಸಾಮಾನ್ಯವಾಗಿ ನಾವು ತಿನ್ನದಿರುವ ಮಾಂಸಾಹಾರದ ಬಗ್ಗೆ ಗೊತ್ತಿಲ್ಲದಿದ್ದರೂ, ತಿನ್ನುವ ಸಿಹಿತಿನಿಸುಗಳನ್ನೆಲ್ಲಾ ಸ್ವಲ್ಪ ಹೆಚ್ಚಾಗಿ ತಿನ್ನುವ ನನಗೆ ಮೈಕಟ್ಟು ಗುಂಡಾಗಿಯೇ ಇದೆ. ನನ್ನ ಲೋಕದಲ್ಲಿ ನನ್ನ ಅಕ್ಕ ತಂಗಿಯರು ಅಮ್ಮ ಅಪ್ಪ, ಕ್ಷಮಿಸಿ, ಆಪ್ಪ ಮನೋಮಂದಿರದಲ್ಲಿ ಮಾತ್ರ, ಏಕೆಂದರೆ ಅಪ್ಪ ಈ ಲೋಕವನ್ನು ಬಿಟ್ಟು ನಾಕಾರು ವರ್ಷಗಳೇ ಆಗಿವೆ. ನಮ್ಮದು ಪ್ರಾಣಿಗಳನ್ನು ಹಿಂಸಿಸದ ಜಾತಿ, ಮತ್ತೊಬ್ಬರಿಗೆ ಹಿಂಸೆ ನೀಡದಂತೆಯೇ ನಾನೂ ಸಹ ಸದಾ ಜಾಗರೂಕಳು, ಅಡುಗೆ ಮನೆಯ ಸುತ್ತಲೂ ಅಮ್ಮ ಮಾಡಿದ ಅಡುಗೆ ಘಮ ಭರಿಸುವ ನನ್ನ ಮೂಗು, ಬಡಿಸುವ ಅಮ್ಮನಿಗೆ ಕಾಯದೆ ಸಿಕ್ಕಿದ್ದೆಲ್ಲಾ ತಿನ್ನುವ ಹುಚ್ಚು ಹೊಟ್ಟೆಬಾಕ ಮನಸ್ಸು. ನನಗೇ ಯಾರಲ್ಲಿಯೂ ಧ್ವೇಷವೂ ಇಲ್ಲ, ಹಾಗೆಯೇ ಮುನಿಸೂ ಬಾರದು. ನನ್ನಪ್ಪ ಕಟ್ಟಿಸಿ ಬಿಟ್ಟು ಹೋದ ಮನೆ ಬಾಡಿಗೆಯಿಂದ ನನ್ನ ಅಮ್ಮ ಮತ್ತು ಇಬ್ಬರು ತಂಗಿಯರ ಜೀವನ ನಿರ್ವಹಣೆಗೇನೂ ಚಿಂತೆಯಿಲ್ಲ.
ನಾನು ಬೆಳೆದದ್ದು, ಉಂಡದ್ದು ತಿಂದದ್ದು, ಅಹೋರಾತ್ರಿ ಹೊಟ್ಟೆ ನೋವೆಂದು ನರಳಿ ಬೆಳಗ್ಗೆ ದೊಡ್ಡವಳಾಗಿದ್ದೇನೆಂದು ಹೇಳಿದಾಗ ತೊಡೆಯ ಸಂದಿಯಲಿ ಒಸರುತ್ತಿದ್ದ ರಕ್ತದಲ್ಲಿ ಒದ್ದೆಯಾದ ಬಟ್ಟೆಗಳನ್ನು ನೋಡಿ ಕಿರಿಚಿಕೊಂಡು ಅಮ್ಮನಿಗೆ ಇದೆಲ್ಲಾ ನನಗೆ ಬೇಡಾ, ನಿಲ್ಲಿಸುವಂತೆ ಮಾಡು ಎಂದು ದಂಬಾಲು ಬಿದ್ದು ಪೀಡಿಸಿದ್ದು ನಾನು ಮರೆಯಲಾರದ ಘಟನೆ. ಎಲ್ಲರಿಗೂ ಇರುವಂತೆ ಇದೆಲ್ಲಾ ಹೆಣ್ಮಕ್ಕಳ ದೇಹ ಪ್ರಕೃತಿ, ದೇವರ ನಿಯಮ ಅಂತೆಲ್ಲಾ ಪುಸಗಟ್ಟೆ ವಕಾಲತ್ತು ಹೇಳುತ್ತಿದ್ದ ಅಜ್ಜಿಯ ಮಾತಿಗೆ ಬೆಲೆ ಕೊಡದೇ ಇದ್ದರೂ, ತಿಂಗಳಾಗುತ್ತಿದ್ದಂತೆ ಅದೊಂದು ಮಾಮೂಲು ಅನ್ನಿಸಿ ಸುಮ್ಮನೆ ಹೊಂದಿಕೊಂಡಿದ್ದೆ. ಆಗ ನಾನು ಕಲಿತದ್ದು ಎಂಟನೇ ಕ್ಲಾಸ್, ಆಮೇಲೆ ಮುಜುಗರಕ್ಕೆ ಬಿದ್ದು ಶಾಲೆಯ ಮೆಟ್ಟಿಲಿಗೆ ಕಾಲಿಡಲಿಲ್ಲ. ಕಲಿಯಲು ಶಾಲೆಗೇ ಹೋಗಬೇಕೇ? ಶಾಲೆಯ ಹೊರಗೆ ಕಲಿಯಲು ಎಷ್ಟೋಂದು ಇದೆಯಲ್ಲಾ, ಅದನ್ನೇ ಕಲೀತೀನಿ ಅಂತ ಕೇಳಿದವರಿಗೆಲ್ಲಾ ಸವಾಲು ಹಾಕುತ್ತಿದ್ದೆ. ಮನೆಯಲ್ಲಿ ಅಮ್ಮ ಹೇಳಿದ ಚಾಕರಿ ಬಿಟ್ಟರೆ, ಐರನ್ ಗೆ ಬಟ್ಟೆ ಕೊಟ್ಟು ಬರೋದು, ಬೆಳಿಗ್ಗೆ ಎದ್ದು ಶುಚಿಗೊಂಡು ದೇವರಿಗೆ ಹೂವ ಕೊಂಡು ತರೋದು, ಬೀದಿಯ ಮೂಲೆಯಲ್ಲಿ ಮಾರುವ ಡೈರಿ ಹಾಲು ಮೊಸರು ತಗೊಂಡು ಬರೋದು, ಮನೆಯ ಕಸ ತೆಗೆದು ಆರಕ್ಕೆ ವಿಶಲ್ ಹೊಡೆಯುವ ಕಾರ್ಪೊರೇಷನ್ ಕಸದ ಗಾಡಿಗೆ ಎಸೆಯುವುದು, ಮನೆ ಕಸ ಗುಡಿಸಿ ಅಂಗಳಕ್ಕೆ ಶೋಭಿಸುವ ರಂಗೋಲೆ ಬಿಡಿಸುವುದು, ಅದಕ್ಕಾಗಿ ನಡುವೆ ಅಂದ ಹೆಚ್ಚಿಸುವ ಕೆಂಪು ರಂಗೋಲೆಯನ್ನು ನಾನು ಮಲ್ಲೇಶ್ವರದ ಎಂಟನೇ ಕ್ರಾಸ್ ನಿಂದ ಆಗಾಗ್ಗೆ ತರುವುದು ಮರೆಯದ ಕೆಲಸ.
ಎಲ್ಲರೂ ಶಾಲೆಗೆ ಹೋದ ಮೇಲೆ, ಅಮ್ಮನಿಗೆ ಅಡುಗೆಗಾಗಿ ತರಕಾರಿ ಹೆಚ್ಚಿಕೊಡೋದು, ಅಕ್ಕಿ ಆರಿಸಿಬಿಡುವುದು, ಅನ್ನಕ್ಕೆ ಇಟ್ಟ ವಿಶಲ್ ಕೋಗಿದ ನಂತರ ಕುಕ್ಕರ್ ಆಫ್ ಮಾಡುವುದು, ಅಮ್ಮನಿಗೆ ಬೆನ್ನು ಉಜ್ಜುವುದು, ಆಗಾಗ್ಗೆ ಬರುವ ನಂಟರಿಗೆ ಮನೆಯಲ್ಲಿ ಇಳಿದುಕೊಳ್ಳುವಾಗ ಅನುಕೂಲ ಒದಗಿಸುವುದು, ಮನೆ ಗುಡಿಸುವುದು, ಒರೆಸುವುದು, ಆಗಾಗ್ಗೆ ಉಲ್ಲನ್ ಎಂಬ್ರಾಯಿಡರಿ, ಕಸೂತಿ ಅಂತ ಹೊಲೆದುಕೊಂಡು ಸಂಜೆ ವೇಳೆ ಕಳೆಯುವುದು. ಪ್ರತಿ ತಿಂಗಳಿಗೊಮ್ಮೆ ನಾವೆಲ್ಲರೂ ಸೇರಿ ಬಸವನ ಗುಡಿಯ ಅಜ್ಜನ ಮನೆಗೆ ಬೇಟಿ ಮಾಡೋದು. ಇವಿಷ್ಟು ನನ್ನ ಜೀವನದ ಸಣ್ಣ ಪರಿಚಯ. ವರ್ಷಕ್ಕೊಮ್ಮೆ ನಾನು ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಮಾಡುವುದನ್ನು ಎಲ್ಲರೂ ಈಗ ಅಮ್ಮನ ಮನೆಯಲ್ಲಿ ನೆನೆಸಿಕೊಂಡಿರುತ್ತಾರೆ. ಈಗ ಅಲ್ಲಿ ಅಂತ ಏಕೆ ಹೇಳಿದೆ ಎಂದರೆ, ಆ ಊರು ಕೇರಿ ಬಿಟ್ಟು ಬಂದು ಇಂದಿಗೆ ಮೂರು ತಿಂಗಳಾದವು.
* * *
ಅಜ್ಜನ ಕಡೆಯವರು ನನಗೊಂದು ರಾಜಸ್ತಾನಿ ಸಂಬಂಧ ಹುಡುಕಿ ಮಧುವೆ ನಿಶ್ಚಯ ಮಾಡಿ, ಇಲ್ಲಿಗೆ ಅದ್ದೂರಿಯಾಗಿ ಕಳಿಸಿಕೊಟ್ಟರು. ಬಂದ ಮೇಲೆ ನಾನು ಕಂಡದ್ದು ಬೆಂಗಳೂರಿನ ಪ್ರಪಂಚವಲ್ಲಾ? ಇದು ರಾಜಸ್ತಾನಿ ದುನಿಯಾ! ಇಲ್ಲಿನವರಿಗೆ ನಾನು ದಡೂತಿ ಎನ್ನುವ ಅನಿಸಿಕೆಯೇ? ಹಾಗಿದ್ದರೆ ನನ್ನನ್ನೇಕೆ ಮಧುವೆ ಮಾಡಿಕೊಂಡಿರಿ? ನನ್ನ ಅಮ್ಮನಿಗೆ ನಾನೆಂದು ಬಾರವಾಗಿರಲಿಲ್ಲ. ಸುಮ್ಮನೇ ಈ ರೀತಿ ನನಗೆ ಮಾನಸಿಕವಾಗಿ ಹಿಂಸೆ ಕೊಡಬೇಡಿ ಎಂದು ಪ್ರತಿಭಟಿಸಿದೆ. ನನ್ನ ಗಂಡನೂ ಊಃಹಾಃ ಅಂತಿದ್ದ. ಬರಬರುತ್ತಾ, ಆ ಬಂಗಲೆಯ ಅಡುಗೆ ಮನೆ ಒಳಗೆ ನನಗೆ ಪ್ರವೇಶ ನಿರಾಕರಿಸಲಾಯ್ತು, ಹೊಟ್ಟೆಕಟ್ಟಿರದ ಅನುಭವವೇ ಇಲ್ಲದೇ ಇದ್ದರೂ ಹಟವಾದಿ ಅವರು ಹೇಳಿದ ಕೆಲಸವನ್ನೆಲ್ಲಾ ಮಾಡತೊಡಗಿದೆ, ಏನೇ ಆಗಲಿ ಮೈಕರಗಿಸಿಕೊಳ್ಳಬೇಕು, ಇವರಿಗೆಲ್ಲಾ ಪಾಠ ಕಲಿಸಬೇಕೆಂದು ಪಣ ತೊಟ್ಟಿದ್ದೆ. ನನ್ನ ಗಂಡನೂ ನನ್ನ ಅಂಗಾಂಗಗಳ ಕುರಿತು ಅಣಕವಾಡಿದಾಗ ಹೀಗೆಂದುಕೊಳ್ಳದೇ ಇನ್ನೇನು ಮಾಡಲಿ. ಬೆಳಗ್ಗೆ ನಾಲ್ಕರ ಜಾವಕ್ಕೆ ಎದ್ದರೆ ಆ ಮಹಾಮನೆಯ ಪಡಸಾಲೆ, ದೇವರ ಮನೆ, ಹೀಗೆ ಗುಡಿಸಿ ಒರೆಸಿಡುವುದರೊಳಗೆ ಹೊಟ್ಟೆ ಕರುಳು ಬಾಯಿಗೆ ಬರುತ್ತಿತ್ತು, ಎಲ್ಲರೂ ಎದ್ದು ಕಾಫಿ ಕುಡಿಯುವಾಗಲಾದರೂ ನನಗಿಷ್ಟು ಕಾಫಿ ಸಿಗುತ್ತದಾ? ನನ್ನ ಭಾಗ್ಯವೇ ಅಂಥದ್ದು.
* * *
ರಾತ್ರಿ ಒಂಬತ್ತು ಗಂಟೆಯ ಸಮಯ, ಮನೆಯ ಕೆಲಸವಳು ನಾನು ವಿವಾಹವಾಗಿ ಬಂದ ದಿನವೇ ಖಾಯಂ ಆಗಿ ಮನೆ ಬಿಡಿಸಿ ಕಳಿಸಿದ್ದಾರಂತೆ. ನೆನ್ನೆ ಪೇಟೆ ಬೀದಿಯಲ್ಲಿ ಸಿಕ್ಕಾಗ ಗುಟ್ಟಿನಲ್ಲಿ ಹೇಳಿ ಹೋದಳು. ಆ ಮನೆಯವರು ಒಳ್ಳೆಯವರಿಲ್ಲ, ಯಾವುದಕ್ಕೂ ನೀನು ಊರಿಗೆ ಹೋಗಿ ನಿನ್ನವರನ್ನೆಲ್ಲಾ ಪಂಚಾಯತಿಗೆ ಕರೆತಾ… ಎಂದಿದ್ದಳಾಕೆ. ಆದರೆ ನಾನು ಹೀಗೆ ಮಾಡುವುದರಿಂದ ನನ್ನ ಇಬ್ಬರು ತಂಗಿಯರ ಭವಿಷ್ಯಕ್ಕೆ ನಾನೇ ಕಲ್ಲು ಹಾಕಿದಂತೆ ಆಗಿಬಿಟ್ಟರೆ,.. ಎಂದಿಗೂ ಯಾರಿಗೂ ಕೇಡು ಬಗೆಯದ ನಾನು ನನ್ನ ತಂಗಿಯರ ಬಾಳಿಗೆ ಮುಳ್ಳಾಗುವ ಕೆಲಸ ಮಾಡುವುದಾ? ಕನಸಿನಲ್ಲಿಯೂ ಸಾಧ್ಯವಿಲ್ಲ. ನನ್ನ ಗಂಡನನ್ನು ಒಲಿಸಿಕೊಳ್ಳುತ್ತೇನೆ, ಈ ಅರಮನೆಗಿಂತ, ನಮ್ಮ ಊರಲ್ಲೇ ಯಾವುದಾದರೂ ಕೆಲಸ ಹಿಡಿದು ಅಲ್ಲೇ ಬದುಕೋಣಾ ಎಂದು ಮನವೊಲಿಸುತ್ತೇನೆ.
ಅವರು ಬಂದರು, ನನ್ನನ್ನು ಉಂಡೆಯಾ? ಬಿಟ್ಟೆಯಾ? ಅನ್ನದೇ ತನ್ನವರೊಂದಿಗೆ ಒಂದು ಘಂಟೆಯ ಭಾರಿ ಭೋಜನಕ್ಕೆ ಹೋಗಿ ಕೂತರು, ನಾನು ನಮ್ಮಿಬ್ಬರಿಗಾಗಿ ಬಿಟ್ಟುಕೊಟ್ಟಿದ್ದ ಕೋಣೆಯಲ್ಲಿ ಸೆರಗು ಹೊದ್ದು ಆತನಿಗಾಗಿ ಕಾಯುತ್ತಲೇ ಕೂತೆ. ಆಗಾಗ ಕಿಲ ಕಿಲ ನಗು, ಹಾಸ್ಯ ಚಟಾಕಿಗಳು, ನಿದಾನ ಸಂಭಾಷಣೆ, ಎಲ್ಲವೂ ಸರಾಗವಾಗಿ ಕೇಳಿಬರುತ್ತಲೇ ಇದೆ.
ನನ್ನ ಹೊಟ್ಟೆಯಲ್ಲಿ ಪ್ರಾಣ ಸಂಕಟ, ಬೆಳಗ್ಗಿನಿಂದ ಏನನ್ನೂ ಕೊಟ್ಟಿಲ್ಲ ರಾಶಿ ಕೆಲಸಲ್ಲಿ ಮೈ ಕರಗಿಸು ಎಂತಲೇ ಮನೆಯ ಹಿರಿ ಕಿರಿಯಲು ಮೂದಲಿಸುತ್ತಲೇ ಇರುತ್ತಾರೆ. ನನ್ನ ದೇಹದಲ್ಲಿ ನಿಶ್ಯಕ್ತಿ ಕಾಣುತ್ತಿದೆ. ಮುಖದ ಕಳೆ ಕುಂದುತ್ತಿದೆ, ಮದುವೆಗಾಗಿ ಹೊಲೆಸಿದ್ದ ನನ್ನ ಕುಪ್ಪಸಗಳೂ ಸಡಿಲವಾಗಿವೆ. ಅದಕ್ಕಾಗಿ ಸ್ವಲ್ಪ ನನ್ನ ಮೇಲೆ ಪ್ರೀತಿಯಾದರೂ ತೋರುತ್ತಾರಾ ಎಂದು ನೋಡುತ್ತಿದ್ದೇನೆ. ಒಮ್ಮೊಮ್ಮೆ ನನಗೆ ಇವರೆಲ್ಲಾ ಧ್ವೇಷಿಸುತ್ತಿರುವುದು ನನ್ನ ದೇಹವನ್ನಲ್ಲ, ನನ್ನ ಇಡೀ ಸ್ವರೂಪವನ್ನು ಎನಿಸಿದೆ. ದಪ್ಪ ಸಣ್ಣ ನಮ್ಮ ಕೈಲಿ ಯಾವಾಗ ಸಾಧ್ಯ, ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಾಗ ಸಾಧ್ಯವಾಗುತ್ತದೆ. ಜೊತೆಗೆ ಪ್ರೀತಿಯಿಂದ ಅವರು ನನ್ನೊಂದಿಗೆ ಇದ್ದರೆ ನಾನಿನ್ನು ಉತ್ಸಾಹದಿಂದ ಎಲ್ಲಾ ಕೆಲಸಗಳನ್ನೂ ಮಾಡಬಲ್ಲೆ, ಇವರೇನು ಅಂದುಕೊಂದು ನನ್ನನ್ನು ವಿವಾಹವಾದರು? ಎಲ್ಲಾ ಜನರೂ ವಾಕಿಂಗ್, ಜಿಮ್ ಅಂತ ಸಣ್ಣ ಆಗಿ ಅಂದರೆ ಕತ್ತೆ ಚಾಕರಿ ಮಾಡು ಊಟ ತಿಂಡಿ ತಿನ್ನಲೇಬೇಡ ಅಂತ ಉಪವಾಸ ಹಾಕುತ್ತಾರಲ್ಲಾ. ಆ ದೇವರು ಇವರಿಗೆ ಒಂದಿಷ್ಟು ಮಾನವಿಯತೆ ಕೊಟ್ಟೇ ಕೊಡುತ್ತಾನೆ. ನನ್ನ ಹೊಟ್ಟೆಯಲ್ಲೊಂದು ಜೀವ ಅರಳಲು ಶುರುವಿಟ್ಟರೆ, ಮನೆಮಂದಿಗೆಲ್ಲಾ ವಂಶೋದ್ಧಾರ ಮಾಡುವ ಮೊಮ್ಮಕ್ಕಳು ಹುಟ್ಟಿಬರುತ್ತಾರೆಂದು ಎಲ್ಲರೂ ಬದಲಾಗುತ್ತಾರೆ. ಆಗ ನನಗಾಗಿ ಸ್ವಾಧಿಷ್ಟ ಹಲ್ವಾವನ್ನು ನನ್ನವರೇ ತಂದು ಕೊಡುತ್ತಾರೆ. ಅಂದು ಮಧುವೆಯ ದಿನ ಅಮ್ಮನ ಮನೆಯ ಬೂರಿ ಬೋಜನದಲ್ಲಿ ನನ್ನ ಬಾಯಿಗೆ ತುಸು ಹೆಚ್ಚು ಮುಗುಳ್ನಗುತ್ತಾ ತಿನ್ನಿಸಿದ ಹಾಗೆಯೇ ತಿನ್ನಿಸುತ್ತಾರೆ ಪ್ರತಿದಿನ. ಎಲ್ಲಕ್ಕೂ ಕಾಲ ಕೂಡಿಬರಬೇಕಲ್ಲಾ…
* * *
ಅವರು ನನ್ನನ್ನು ಬೇಗನೇ ಎದ್ದು ಹತ್ತಿರಕ್ಕೆ ಬಾ ಎಂದಾಗ. ಕೈಲಾಗದ ನಾನು ಏನು ಮಾಡಲಿ, ಅವರ ಸ್ಪರ್ಶಗಳಿಗೆ ಸೋಲಲಾಗದೆ ಉಳಿಯುವುದುಂಟೇ, ’ನನಗೆ ನಿಶ್ಯಕ್ತಿ, ಊಟ ತಂದುಕೊಡಿ’ ಬೇರೆಯೇ ಲೋಕದಲ್ಲಿ ವಿಹರಿಸುತ್ತಿದ್ದ ಅವರ ಕಿವಿಯಲ್ಲಿ ಉಸುರಿದೆ, ಯಾಕೋ ತುಸು ವಿಚಲಿತನಾದಂತೆ, ಮೇಲೆದ್ದು ಮೈತುಂಬಾ ಬಟ್ಟೆ ಧರಿಸಿ ಅಡುಗೆ ಮನೆಗೆ ಹೋದವ ಬರುವಾಗ ದೊಡ್ಡ ತಟ್ಟೆಯ ತುಂಬಾ ಬಗೆಬಗೆಯ ಸಿಹಿ ಖಾದ್ಯಗಳ ಜೊತೆಗೆ ಪರಾಟೆ ಪಾಲಾಕ್ ಪನೀರ್ ತಂದಿದ್ದರು. ಹತ್ತೇ ನಿಮಿಶದಲ್ಲಿ ನಾನು ತಿಂದು ಮುಗಿಸುವುದರೊಳಗೆ ಅವರು ನಿದ್ದೆಯಲ್ಲಿ ಮುಗುಳಿದ್ದರು. ಹಸಿವಿನ ಭರ ಇಂಗಿದ ಮೇಲೆ ಏನಿದ್ದರೇನು? ಇಲ್ಲದಿದ್ದರೇನು? ಆ ಹಸಿವಿನ ಭರ ಪಾತಾಳದ ಪಿಶಾಚಿ ಹೊಟ್ಟೆ ಹಿಡಿದಂತೆ. ಅದನ್ನು ತೀರಿಸಲು ಇವರು ರಾತ್ರಿ ಬರುವ ತನಕ ಕಾಯಬೇಕು, ಇಲ್ಲದಿದ್ದರೆ ಏನೂ ಇಲ್ಲ.
* * *
ಇತ್ತೀಚೆಗೆ ಏನೇನೂ ಸರಿಯಿಲ್ಲ, ನನ್ನ ಮೈಯಲ್ಲಿ ಆರಾಮವೇ ಇಲ್ಲ. ಕೆಲಸದ ಮೇಲೆ ಕೆಲಸ, ಕತ್ತೆ ಚಾಕರಿ ಮಾಡುವ ಕತ್ತೆಗಾದರೂ ಅಗಸ ಪ್ರೀತಿಯಿಂದ ಮಾತನಾಡಿಸುತ್ತಾನೆ ಅಂದುಕೊಳ್ಳುವೆ, ಆದರೆ ಇಲ್ಲಿ. ನನ್ನ ಕೈಕಾಲುಗಳು ಬಿಗಿಯುತ್ತಿವೆ, ವಿಚಿತ್ರ ಹಿಂಸೆ ದೇಹದ ನರ ನಾಡಿಗಳನ್ನೆಲ್ಲಾ ಎಳೆದು ತಿನ್ನುವ ಅನುಭವ. ಇಂದಿಗೆ ವಿವಾಹವಾಗಿ ಆರನೇ ತಿಂಗಳು ಕಳೆದಿದೆ. ನನ್ನ ಏಕೈಕ ಆಸ್ಥಿ, ಆಸೆ, ಪತಿಯು ನನ್ನ ಮೇಲೆ ಯಾವುದೇ ಕನಿಕರವನ್ನೂ ತೋರಿಸದಿರುವುದು ನನ್ನ ನರಕದ ಬಾಗಿಲನ್ನು ಇನ್ನಷ್ಟು ವಿಸ್ತರಿಸಿದೆ. ನೆನ್ನೆ ರಾತ್ರಿ ನಾನು ಹೀಗೆಯೇ ಲೆಕ್ಕಾಚಾರ ಹಾಕುತ್ತಿರುವಾಗ ಕನಸಿನ ಕಲ್ಪನೆಯ ಲೋಕದಿಂದ ಕೆಳಗೆ ಬಿದ್ದದ್ದು, ಯಾರೋ ನನ್ನ ಹಿಂಭಾಗಕ್ಕೆ ಜಾಡಿಸಿ ಒದ್ದಾಗ, ಅದು ನನ್ನ ಗಂಡನೆಂಬ ಧೈತ್ಯನೇ ಅಂತ ಗೊತ್ತಾದದ್ದು ನನ್ನ ನಿಶ್ಯಕ್ತ ದೇಹ ಸಾವರಿಸಿಕೊಂಡು ಎದ್ದು ಕೂತಾಗ. ಆತ ನನ್ನನ್ನು ರಾತ್ರಿಯ ಬೋಜನದ ನಂತರದ ಕಾರ್ಯಕ್ಕೆ ತೆರೆದುಕೊಳ್ಳಲು ಕೂಗಿರಬಹುದು, ಮಂಚಕ್ಕೆ ಒರಗಿದ್ದ ನಾನು ಹಾಗೆಯೇ ನಿದ್ದೆ ಹೋಗಿದ್ದೆ. ನನ್ನ ಕಣ್ಣಿನ ತುಂಬಾ ನೋವಿನ ನೀರು, ನೀನು ಇದಕ್ಕೂ ಲಾಯಕ್ಕಿಲ್ಲ, ಹೋಗು ನನ್ನ ಚಿನ್ನದ ಅಂಗಡಿಯ ರಿಜಿಸ್ಟ್ರಾರ್ ತೆಗೆದುಕೊಂಡು ಬಂದು ಇಲ್ಲಿಡು, ನಾಳೆಯಿಂದ ನಿನಗಾಗಿ ಬೇರೆ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದಾರೆ ಹಿರಿಯರು, ಅಂದಾಗ, ಕಾಲ ಕೆಳಗಿನ ಭೂಮಿ ಬಿರಿದು ನನ್ನ ಒಳಗೆ ಸೆಳೆಯಬಾರದೆ ಎನಿಸಿತು, ಆ ಸೌಭಾಗ್ಯವೆಲ್ಲಾ ಸೀತಾಮಾತೆಯದು. ಆಕೆ ಪರಮಳು, ಮೇಲಾಗಿ ಭೂಮಿಯ ಮಗಳು. ಆಕೆಗೇನು ರಾಮನಿಂದ ಸುಖ ಸಿಕ್ಕಿತೇ? ಯಾರು ಎಷ್ಟು ಪಡೆದು ಬಂದಿರುತ್ತಾರೋ ಅದನ್ನು ಇನ್ಯಾರಿಗೋ ಕೊಟ್ಟು ಹೋಗಲು ಸಾಧ್ಯವೇ? ನನ್ನ ಪ್ರತಿಭಟನೆಯ ಕೂಗಿಗೆ ನನ್ನವರೇ ಇತಿಶ್ರೀ ಹಾಕುವಾಗ,
ಇನ್ಯಾರಿಗೆ ದೂರು ಹೇಳಲಿ. ನಾನಿಷ್ಟೇಲ್ಲಾ ಸಹಿಸಿದ್ದು ಇವರಿಗಾಗಿ, ಇವರು ನನ್ನೋರು, ನನ್ನ ಗಂಡ, ನನ್ನ ಬದುಕಿನ ಏಕೈಕ ಸಂಗಾತಿ. ಯಾರೇನೇ ಹಿಂಸೆ ನೀಡಿದರೂ ಮೂಗ ಹಸುವಿನಂತೆ ಅನುಭವಿಸಿದ್ದು ಇವರಿಗೋಸ್ಕರ, ಇವರ ದೊಡ್ಡ ಬಂಗಲೆಯ ಗೌರವಕ್ಕಾಗಿ. ಇನ್ಯಾವ ಗೌರವ.
* * *
ನೋಡಿ, ನಾನಿನ್ನು ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರಲು ಬಂದಿಲ್ಲಾ, ನಿಮ್ಮ ಜೊತೆಗೆ ಬಾಳಬೇಕೆಂದು ನನ್ನ ಕಡೆಯವರು ಹರಸಿ ಕಳಿಸಿದ್ದಾರೆ. ನಾನು ಮನಸ್ಸು ಮಾಡಿದರೆ ಕರ್ನಾಟಕ ಪೋಲೀಸ್ ಗೆ ಈಗಲೇ ರಾಜಸ್ತಾನಕ್ಕೆ ಬರುವಂತೆ ಮಾಡಬಲ್ಲೆ, ಆದರೆ ನನ್ನ ತಾಯಿ ಮತ್ತು ತಂಗಿಯರ ಆತ್ಮಗೌರವಕ್ಕಾಗಿ ತಾಳ್ಮೆಯಿಂದ ಇದ್ದೇನೆ. ನೀವೆಲ್ಲಾ ಹೀಗೆ ಪ್ರಾಣಿಯಂತೆ ದುಡಿಸಿಕೊಳ್ಳೋದು ತುಂಭಾ ಅನ್ಯಾಯ, ಯಾರು ಏನು ಬೇಕಾದರೆ ಮಾಡಲಿ, ನಿಮಗಾದರೂ ಕರುಣೆ ಬೇಡವೇ? ನನ್ನ ಕರುಳಲ್ಲಿ ನಿಮ್ಮ ಕೂಸು ಬೆಳೆದ ಮೇಲಾದರೂ ನೀವು ಬದಲಾಗುತ್ತೀರಾ ಎಂದು ಕಾಯುತ್ತಿದ್ದೇನೆ, ಅದಕ್ಕೂ ಅವಕಾಶ ಕೊಡುತ್ತಿಲ್ಲ ನೀವು. ನಿಮಗೆ ಏನಾಗಿದೆ, ನೀವು ತಾಳಿ ಕಟ್ಟದೆ, ನಿಮ್ಮವರು ಕೇಳಿದ್ದನ್ನೆಲ್ಲಾ ತಗೊಂಡು ಬರದೆ ನಾನು ಇಲ್ಲಿಯತನಕ ವಿವಾಹವಾಗದೆ ಬಂದಿದ್ದೇನಾ? ನಿಶ್ಯಕ್ತಿಯಿಂದ ಬಲಹೀನಳಾಗಿ ಕೆಳಗೆ ಬಿದ್ದೆ. ಅವರೇನೂ ಮಾತನಾಡಿದಂತೆ ತೋರಲಿಲ್ಲ. ಕಣ್ಮುಚ್ಚಿ ತೋರುವುದರೊಳಗೆ ನನ್ನ ಮೈತುಂಬಾ ಬೆಲ್ಟ್ ನ ಹೊಡೆತಳು, ಕುತ್ತಿಗೆ ಬಿಗಿದದ್ದು ಯಾರೋ ಗೊತ್ತಿಲ್ಲ, ನಾನಿನ್ನು ಸತ್ತೆ ಎಂದು ಬೊಬ್ಬಿಟ್ಟರು ಬಾಯಿ ಬರುತ್ತಿಲ್ಲ.. ದೇವರೇ.. ನಾನೇನು ಮಾತನಾಡಿದೆ, ಇವರೇ ನನ್ನನ್ನು ಕ್ಷಮಿಸಿ, ಹೊಡೆಯಬೇಡಿ.. ನಾನೇನು ಯಾರಿಗೂ ಹೇಳೋದಿಲ್ಲ,. ಸಾಯುವ ತನಕ ನಿಮ್ಮೊಂದಿಗೆ ಬದುಕುವ ಅವಕಾಶವನ್ನು ಮಾತ್ರ ಕೊಡಿ…. ಆ ಆ…. ಅಮ್ಮನಿಗೇನೂ ಹೇಳಬೇಡಿ… ಆ ಆ… ಅಮ್ಮ ಸತ್ತೇ ಹೋಗಿಬಿಡ್ತಾಳೆ… ನನ್ನಪ್ಪ ಬದುಕಿದ್ದರೆ…. ಆ ಆ… (ಅನಿಶ್ಚಿತ ಮೌನ! )
***
ನನ್ನನ್ನು ನನ್ನ ಗಂಡನ ಅತ್ತಿಗೆ ಅಣ್ಣ ಮೈದುನರು ಹೊತ್ತು ಇನ್ನೊಂದು ಕೋಣೆಗೆ ಸಾಗಿಸುತ್ತಿದ್ದರು, ಅವರ ಬಾಯಿತುಂಬಾ ನನ್ನ ಬಗ್ಗೆ ಹೀನ ಬೈಗುಳಗಳು. ಅವರೆಲ್ಲರನ್ನು ನೋಡುತ್ತಾ ನನ್ನ ಕಣ್ಣೀರು ಸುರಿಯುತ್ತಲೇ ಇತ್ತು. ಅಮ್ಮ.. ಅಮ್ಮ.. ಅಮ್ಮ… ನನ್ನ ಬಾಯಿಂದ ಸದಾ ಮೆಲ್ಲಗೆ ಉಸುರುತ್ತಲೇ ಇದ್ದೆ. ಎರಡು ದಿನದಿಂದ ನನ್ನ ಕೋಣೆಗೆ ಯಾರೂ ಬಂದಿರಲಿಲ್ಲ. ಮೂರನೆಯ ದಿನ ನನ್ನ ಕೋಣೆಯ ಬಾಗಿಲು ತೆಗೆದದ್ದು ನನ್ನ ಗಂಡ, ನನ್ನ ಕಣ್ಣುಗಳು ಎವೆಯಿಕ್ಕದೇ ಆತನ ಮುಖವನ್ನೇ ಗಮನಿಸುತ್ತಿತ್ತು. ಆತನ ಹಿಂದೆ ಅವನ ದಡೋತಿ ಅಣ್ಣಂದಿರು, ಅತ್ತಿಗೆಯರು ಬಂದರು. ಏನೇನೋ ಗುನುಗುತ್ತಿದ್ದರು, ಏನೊಂದೂ ನನಗೆ ಕೇಳುತ್ತಿಲ್ಲ… ನನಗೇನಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಹಾಸಿಗೆ ಬಿಟ್ಟು ಏಳಲು ಶತಪ್ರಯತ್ನ ಹಾಕಿದರೂ ಏನೇನೂ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಗಂಡನನ್ನು ಕೂಗಲು ಯತ್ನಿಸಿದರೂ ದನಿ ಬರುತ್ತಿಲ್ಲ. ಮಧ್ಯಾಹ್ನದ ವೇಳೆಗೆ ನನ್ನ ದೇಹವನ್ನು ಹೊತ್ತೊಯ್ಯಲು ಬಿಳಿ ವಸ್ತ್ರದ ಅಂಬ್ಯುಲೆನ್ಸ್ ನೌಕರರು ಬಂದರು, ದೊಡ್ಡ ಮನೆಯ ಮಧ್ಯದ ಸೊಸೆಗೇನೋ ಆಗಿದೆಯಂತೆ! ಹೌದಾ! ನಿಮಗೊತ್ತಿಲ್ವಾ? ಏನಾಯ್ತಂತೆ? ಕಿರುಬೆರಳನ್ನು ಚಲಿಸಲಾಗದ ನಾನು ನನ್ನೂರಿಗೆ, ನನ್ನಮ್ಮನ ಮನೆಗೆ ಹೇಗೆ ಹೋಗುವುದು ಎಂದೇ ಈ ಎರಡು ದಿನಗಳು ಲೆಕ್ಕ ಹಾಕಿದ್ದೆ, ದೇವರು ದೊಡ್ಡವನು ಬೀದಿಯಲ್ಲಿ ನಿಂತಿದ್ದ ಆಂಬುಲೆನ್ಸ್ ನನ್ನನ್ನು ಹೊತ್ತು ರಾಜಾಸ್ತಾನದಿಂದ ಬೆಂಗಳೂರಿಗೆ ಚಲಿಸುವ ರೈಲಿಗೆ ತಂದು ಮಲಗಿಸಿತು. ಜೊತೆಯಲ್ಲಿ ಯಾರೂ ಇಲ್ಲ, ಅವನೊಬ್ಬನೇ.. ನನ್ನ ಸರ್ವಸ್ವ ಎಂದು ಬಗೆದು ನಾನು ನಂಬಿ ತಾಳಿಕಟ್ಟಿಸಿಕೊಂಡಿದ್ದ ದುರ್ಧೈವ. ಅವನಲ್ಲಿ ಇಂಥಾ ಕ್ರೌರ್ಯವಿದ್ದರೂ ನಾನೇನು ಮಾಡಲಾಗುತ್ತಿಲ್ಲವಲ್ಲ. ನಿದ್ದೆಯ ಜಂಪು ಹತ್ತಿತು.
* * *
ಐಶಾರಾಮಿ ಆಸ್ಪತ್ರೆಯ ಒಂದು ಸುಸಜ್ಜಿತ ಐಸಿಯುನಲ್ಲಿ ನಾನಿದ್ದೇನೆ, ಕತ್ತಲೆಯ ಕೋಣೆಯಿಂದ ಹೊರಬಂದಾಗಿನ ಹೊಸ ಬೆಳಕೇನೆಂದು ಇಲ್ಲಿ ಕಣ್ಬಿಟ್ಟು ಅನುಭವಿಸುತ್ತಿದ್ದೇನೆ. ಓ ಬೆಳಕೇ ಬಾ, ನನ್ನ ದೇಹದ ನೋವುಗಳೆಲ್ಲವನ್ನು ಒಸಕಿ ಹಾಕು, ತೀಡು ನನ್ನಾತ್ಮವಾ… ನಾನಿನ್ನು ಹೊರಡಬೇಕಿದೆ, ನನ್ನೂರಿನ ಕಡೆಗೆ… ಬಾ ಇಲ್ಲಿ ಹೊಸ ಅನಿಸಿಕೆಯ ಹೊಸದಾಗಿ ಬಿತ್ತಿ ಬೆಳೆ, ಅಂಬರದ ಬುಂಭನಕೆ ಎಡೆ ಎತ್ತುತ್ತಿದೆ ಆತ್ಮ.. ಬಾ ಬೆಳಕೇ ಬಾ..
* * *
ತಂಗಿಯರು, ಅಮ್ಮ, ನಂಟರು ಇಷ್ಟೇತರರು ಎಲ್ಲರೂ ನನ್ನ ಸುತ್ತಾ ನೆರೆದಿದ್ದಾರೆ. ವೈದ್ಯರು ಇಲ್ಲಿಗೇಕೆ ಕರೆತರಲು ಹೋದಿರಿ, ಇವರಿನ್ನು ಉಳಿಯುವುದಿಲ್ಲ. ಎಲ್ಲಾ ದೇವರ ಕೈಲಿದೆ. ನಾವು ಮಾಡುವ ಪ್ರಯತ್ನ ಮಾಡುತ್ತಲೇ ಇದ್ದೇವೆ. ಎಂದು ಹೇಳಿ ಹೊರಟು ಹೋದರು. ಅಮ್ಮ ನನ್ನ ಕಾಲ ಬಳಿ ಕಲ್ಲಾಗಿ ಕೂತರು, ಎಲ್ಲರೂ ಹೋದರೂ ಹೋಗಲಿಲ್ಲ. ಯಾರೂ ಇಲ್ಲದ್ದಾಗ ನನ್ನ ಕೈಗಳೆರಡನ್ನು ನೇವರಿಸುತ್ತಾ, ಎರಡು ಕೈಗಳನ್ನು ಕಣ್ಣಿಗೊತ್ತಿಕೊಂಡು ಕಣ್ಣೀರಿಟ್ಟರು, ಗಲ್ಲ ಅಲ್ಲಾಡಿಸಿದರು, ಎದೆಯ ಮೇಲೆ ತಲೆಯಿಟ್ಟು ಅತ್ತರು, ನಾನು ಅವಳನ್ನು ನೋಡದೇ ಹೋದರು, ನನ್ನಾತ್ಮಕ್ಕೆ ಸಂವೇದನೆ ಅರಿವಾಗುತ್ತಿದೆ, ಅವಳಿಗೆ ಹೇಳಬೇಕಾಗಿತ್ತು, ಎಲ್ಲೆಲ್ಲಿ ಹೇಗೇಗೆ ನನ್ನ ನಿರ್ನಾಮವಾಯಿತು ಅಂತ ಈಗ ಅನ್ನಿಸುತ್ತಿದ್ದರೂ ಪ್ರಯೋಜನವಿಲ್ಲ, ನನ್ನ ಸ್ವರ ಹಿಡಿತಕ್ಕೆ ಸಿಗುತ್ತಿಲ್ಲ. ನಾನು ನನ್ನ ದೇಹದಿಂದ ಹೊರಗೆ ನಿಂತು ನನ್ನನ್ನು ನಾನೇ ನೋಡುತ್ತಿದ್ದೇನೆ, ಎಂಥಾ ದುರ್ವಿಧಿ, ನನ್ನ ಬದುಕೇಗೆ ಹೀಗಾಯಿತು, ಎಷ್ಟೋಂದು ಸುಂದರ, ಸುಲಲಿತ ಜೀವನದಲ್ಲಿ ಕಲ್ಯಾಣವಾಗಲೇಬೇಕಿತ್ತೇ? ಅಮ್ಮನ ಹೊರತು ಯಾರೂ ಅಲ್ಲಿಲ್ಲ. ಆದರೂ ಅಮ್ಮನೆದುರು ನನ್ನ ಮೌನಕ್ಕೆ ಆತ್ಮಸಂವೇದನೆಯೇ ಸಾಕ್ಷಿ. ಅಮ್ಮ ಹೋಗಿ ಬರುತ್ತೇನೆ… ನೀನೆಂದು ನನಗಾಗಿ ಕಣ್ಣೀರಿಡಬೇಡ, ನನ್ನ ಕರುಳಿನಲ್ಲೊಂದು ಕುಸುವುವಿದ್ದಿದ್ದರೆ ಆ ಮಗುವು ಸಹ ಆ ಮನೆಯಲ್ಲಿ ಅರಳಲಾಗುತ್ತಿರಲಿಲ್ಲ, ನನ್ನ ಹಾಗೆಯೇ ಸೀದು ಹೋಗುತ್ತಿತ್ತೇನೋ? ದೇವರು ದೊಡ್ಡವನು! ನನ್ನೊಂದಿಗೆ ಅಂತಿಮವಾಯಿತು ರಕ್ತ ಸಿಕ್ತ ಹಿಂಸೆಯ ಮೊಲೆಗಂಡನ ಪಾಶಕೃತ್ಯಗಳು.
* * *
ಬೆಳಿಗ್ಗಿನ ಜಾವ ಎರಡು ಗಂಟೆಯೇ ಇರಬೇಕು, ಯಾವುದೋ ಅಸ್ಥಿರ ಆನಂದದ ಮುಖಭಾವ, ಅಮ್ಮ ನನ್ನ ಕಾಲಿನ ಬಳಿ ಕೂತೇ ಇದ್ದಾಳೆ. ನನ್ನೊಳಗಿನ ಶಕ್ತಿಯೆಲ್ಲಾ ಸೇರಿ ನಾನು ಕೂಗಲು ಯತ್ನಿಸಿದೆ, ಕೆಮ್ಮು ಬರತೊಡಗಿತು, ಜೋರಾಗಿ ಅಮ್ಮ ಅಂದಿರಬಹುದು, ದೇಹ ನಿಶ್ಚಲವಾಯಿತು, ಡ್ಯೂಟಿ ಡಾಕ್ಟರ್ ಬಂದು ನಾಡಿ ಮಿಡಿತ ನೋಡಿದರು, ಸ್ಕೇತಾಸ್ಕೋಪ್ ಎದೆಗೆ ಒತ್ತಿ, ಕ್ಷಮಿಸಿ ನಿಮ್ಮ ಮಗಳು ದೇವರ ಬಳಿ ಹೋಗಿದ್ದಾರೆ ಅಂದರು. ಅಮ್ಮ ಕಲ್ಲಾಗುತ್ತಾ ಹೋದಳು… ನಾನು ಮೇಲಕ್ಕೆ ಹಾರಿ ಫ್ಯಾನ್ ಮೇಲೆ ಕೂತು ಎಲ್ಲಾ ನೋಡತೊಡಗಿದೆ. ಆಂಬುಲೆನ್ಸ್ ನ ಬೆಳ್ಳಗಿನ ಬಟ್ಟೆಯ ನೌಕರರು ಮತ್ತೆ ಬಂದು ನನ್ನನ್ನು ಎತ್ತಿ ನನ್ನ ಅಮ್ಮನ ಮನೆಯ ಬೀದಿಯೆಡೆಗೆ ಸಾಗಿಸಿದರು. ನನ್ನ ಮನೆಗೆ ನಾನು ಹೀಗೆ ಬರುತ್ತೇನೆಂದು ಯಾರೂ ಅಂದುಕೊಂಡಿರಲಿಲ್ಲ. ಕಡೆಗೂ ನಾನು ಬಂದು ಸೇರಿದೆ. ನನ್ನಮ್ಮನ ಮನೆಗೆ, ಅದೇ ಬೀದಿ ಮನೆಗಳು, ನನ್ನ ದಿನನಿತ್ಯದ ರೂಟಿನ್ ಗೆ ಸಾಗಲು ನಾನಿದ್ದೇನೆ, ಆದರೆ ನನ್ನ ದೇಹವಿಲ್ಲ…. ಎಲ್ಲರ ಯಾತನೆ ಗಮನಿಸಿದರೆ, ಆತ್ಮಕ್ಕೆ ವೇದನೆಯಾಗುತ್ತಲೇ ಹೋಗುತ್ತಿದೆ…
“ಓ.. ಆ ಹುಡುಗಿನಾ.. ಅದೇ ಗುಂಡಗೆ ಬೆಳ್ಳಗೆ.. ಸಂಜೆ ಬೆಳಿಗ್ಗೆ ಹಾಲು ತರಕಾರಿ ತರಕ್ಕೆ ಓಡಾಡುತ್ತಿದ್ದಳಲ್ಲಾ ಆ ಹುಡುಗಿ, ಎಷ್ಟು ಲಕ್ಷಣವಾಗಿ ಮುದ್ದಾಗಿ, ಬೆಳ್ಳಗೆ ಚೆನ್ನಾಗಿದ್ದಳು ಬಿಡಿ, ಎಷ್ಟು ಒಳ್ಳೇ ಹುಡುಗಿ ಅಂತ. ಎಲ್ಲರ ಹತ್ತಿರ ನಗಾಡಿಕೊಂಡು ಸುಖವಾಗಿ ಬೆಳೆದಿದ್ದ ಹುಡುಗಿಗೆ ಇತ್ತೀಚೆಗೆ ಮಧುವೆಯಾಗಿತ್ತಂತೆ…
ಏನಾಗಿತ್ತು ಅಂತ ಯಾರಿಗೂ ಗೊತ್ತಿಲ್ಲ…
ಏ.. ಗಂಡನೂ ಜೊತೆಗೆ ಕರ್ಕೊಂಡು ಬಂದಿದ್ದಾನಲ್ಲಾ ಇನ್ನೇನು ಅಂತ್ಕೊಳ್ಳೋದು.. ಹೋದೋಳು ಹೋದಳು ಬಿಡಿ, ನಮಗ್ಯಾಕೆ ಆ ವಿಷ್ಯ..”







Very touching. I hope this is not your story. Take little care about the language errors.
inneshtu hennu makkala dehakke jaaga maadikottideyo ee nela….. story chennagide.yaaraddu aagadirali andaru yaaraddo prati kshana aaguttale irutte .gottu
ಅಬ್ಬ ಮುದ್ಧು ಹುಡುಗಿ ಕಾಡುತ್ತಲೇ ಇರುತ್ತಾಳೆ, ಹೆಣ್ಣೊಬ್ಬಳ ಭಾವನೆಗಳ ಮೇಲ್ಚಾವಣಿ ಹಾರಿ ಒಳಗೆ ಉಳಿದ ಗಟ್ಟಿ ಭಾವಗಳಿಗೆ ಪದಗಳ ಸಹಾಯ ಸಿಕ್ಕಾಗ ಅರಳಿದ ಲಹರಿ ಈ ಕಥೆ,,,, ಇದು ಬರಿ ಕಥೆಯಲ್ಲ,,,,
— ಜೀ ಕೇ ನ
haudu, idu katheyalla, aadare, dina kaduthale ithu, bareda melu ninthilla…. madhuveyada hennina savage ondu sakshi idu.
kathe heluvudu kashtada vichara, pathradondige berethare abhavave bhavavagabahudu.