ನರಸಿಂಹಲು ವಡವಟಿ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೇನೇ ಅವರ ಪ್ರತಿಭೆ, ಸಾಧನೆ ಜಗತ್ತಿಗೆ ಕಾಣಿಸಲಿಲ್ಲವೇನೋ..

ಕುಮಾರ್ ಬುರಡೀಕಟ್ಟಿ

ಈ ಲೇಖನ ದಿ ಹಿಂದೂ ಪತ್ರಿಕೆಯ Friday Review ಪುರವಣಿಯಲ್ಲಿ
ಇಂಗ್ಲಿಷ್ ಲೇಖನವಾಗಿ ಪ್ರಕಟವಾಗಿತ್ತು 

ಭಾರತದ ಶಾಸ್ತ್ರೀಯ ಸಂಗೀತದಲ್ಲಿ ಯಾವುದಾದರೊಂದು ವಾದ್ಯವನ್ನು ನೆನಪಿಸಿಕೊಂಡರೆ ಆ ವಾದ್ಯದೊಂದಿಗೆ ಅದನ್ನು ನುಡಿಸುವ ಮಹಾವಾದಕನ ನೆನಪೂ ಬಂದುಬಿಡುತ್ತದೆ. ಶಹನಾಯ್ ಎಂದಾಕ್ಷಣ ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಿಟೀಲ್ ಎಂದಾಕ್ಷಣ ಪಂಡಿತ ಚೌಡಯ್ಯ, ಸಿತಾರ್ ಎಂದಾಕ್ಷಣ ಪಂಡಿತ ರವಿಶಂಕರ್, ಸಂತೂರ್ ಎಂದಾಕ್ಷಣ ಪಂಡಿತ ಶಿವಕುಮಾರ್ ಶರ್ಮ, ಕೊಳಲು ಎಂದಾಕ್ಷಣ ಹರಿಪ್ರಸಾದ್ ಚೌರಾಶಿಯ, ತಬಲಾ ಎಂದಾಕ್ಷಣ ಝಾಕಿರ್ ಹುಸೇನ್…
ಹೀಗೆ ಒಂದೊಂದು ವಾದ್ಯದೊಂದಿಗೆ ಒಬ್ಬೊಬ್ಬ ವಾದಕನ ಹೆಸರು ತಗಲು ಹಾಕಿಕೊಂಡುಬಿಟ್ಟಿದೆ. ಅದೇ ರೀತಿಯಲ್ಲಿ ಕ್ಲಾರಿಯನೆಟ್ ಎಂದಾಕ್ಷಣ ನಮ್ಮ ಮನಸ್ಸಿಗೆ ಹೊಳೆಯುವ ಮೊದಲ ಹೆಸರು ಪಂಡಿತ ನರಸಿಂಹಲು ವಡವಟಿ.
ಕ್ಲಾರಿಯನೆಟ್ ಮೂಲತಃ ಪಾಶ್ಚಿಮಾತ್ಯ ಪ್ರಪಂಚದ ವಾದ್ಯ. ಅದನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದ ಮೊಟ್ಟ ಮೊದಲು ಸಂಗೀತಗಾರ ಎಂದರೆ ವಡವಟಿಯವರೆ. ಮೂಲತಃ ರಾಯಚೂರಿನ ಪಕ್ಕದ ವಡವಟಿ ಹಳ್ಳಿಯವರಾದ ನರಸಿಂಹಲು ವಡವಟಿಯವರು ಅಮೋಘವಾಗಿ ಕ್ಲಾರಿಯನೆಟ್ ನುಡಿಸುವುದಲ್ಲದೇ, ಒಬ್ಬ ಕಲಾವಿದನಾಗಿ, ಸಂಗೀತ ಸಂಯೋಜಕನಾಗಿ, ನಿರ್ದೇಶಕನಾಗಿ ಮತ್ತು ಒಬ್ಬ ಶಿಕ್ಷಕನಾಗಿ ಅವರು ಬಹಳಷ್ಟು ಸಾಧನೆ ಮಾಡಿದ್ದಾರೆ.
 
ಪ್ರಾಯಶಃ ಅವರು ಇದೇ ಸಾಧನೆಯನ್ನು ಮೇಲ್ಜಾತಿಯಲ್ಲಿ ಹುಟ್ಟಿ ಮಾಡಿದ್ದರೆ ಇಷ್ಟೊತ್ತಿಗೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ಜನಮಾನಸದಲ್ಲಿ ಅಚ್ಚಳಿಯದಂತೆ ಬೇರೂರಿಬಿಟ್ಟಿರುತ್ತಿದ್ದರು ಅನ್ನಿಸುತ್ತದೆ. ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೇನೇ ಅವರ ಅದ್ಭುತ ಪ್ರತಿಭೆ, ಸಾಧನೆಗಳು ಜಗತ್ತಿಗೆ ಕಾಣಿಸಲಿಲ್ಲವೇನೋ ಎಂದು ನನಗೆ ಆಗಾಗ ಅನ್ನಿಸುವುದುಂಟು.
ಆದರೂ ಕೆಲವು ಸಂಘ ಸಂಸ್ಥೆಗಳು ಅವರ ಸಂಗೀತ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಅವರಿಗೆ ತಂದುಕೊಟ್ಟಿವೆ. ಇತ್ತೀಚೆಗೆ ಇಂಗ್ಲೆಂಡಿನ ಕೇಂಬ್ರಿಡ್ಜ್ ಮೂಲದ ಇಂಟರ್ ನ್ಯಾಷನಲ್ ಬೈಯೋಗ್ರಫಿಕಲ್ ಸೆಂಟರ್ ಸಂಸ್ಥೆಯು ವಿಶ್ವ ಸಂಗೀತ ಲೋಕದ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಕೊಡುವ ತನ್ನ ಬೃಹತ್ ಸಂಪುಟದಲ್ಲಿ ಪಂಡಿತ್ ವಡವಟಿಯವರ ಪರಿಚಯವನ್ನೂ ಸೇರಿಸಿದೆ.
ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಫಿಲಿಫ್ ಗೋರ್ಟೆ ನಿರ್ದೇಶನದ ಫ್ರೆಂಚ್ ಚಲನಚಿತ್ರ “ಹಾಥಿ”ಗೆ ಸಂಗೀತ ನಿರ್ದೇಶನ ಮಾಡಿದವರು ವಡವಟಿಯವರೇ. ಇವರ ಸಂಗೀತ ಸಾಧನೆಯನ್ನು ಗಮನಿಸಿ ಅಮೆರಿಕಾದ ಕ್ಯಾಲಿಫೋರ್ನಿಯ ಮೂಲದ ವರ್ಲ್ಡ್ ಮ್ಯೂಸಿಕ್ ಸೆಂಟರ್ ಎಂಬ ಸಂಸ್ಥೆಯು 1998ರಲ್ಲಿ ಇವರನ್ನು ಆರು ವರ್ಷಗಳ ಕಾಲ ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಿಸಿತ್ತು.
1942ರಲ್ಲಿ ರಾಯಚೂರಿನ ಸಮೀಪದ ವಡವಟಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ನರಸಿಂಹಲು ವಡವಟಿಯವರದ್ದು ಮೂಲತಃ ಸಂಗೀತಾಸಕ್ತ ಕುಟುಂಬ. ಅವರ ಅಜ್ಜ ಓಬಳಪ್ಪ ಶಹನಾಯಿ ವಾದಕರಾಗಿದ್ದರು. ಅಪ್ಪ ಬುಡ್ಡಪ್ಪ ತಬಲಾ ಮೇಷ್ಟ್ರು ಆಗಿದ್ದವರು. ತಾಯಿ ರಂಗಮ್ಮ ಭಕ್ತಿಗೀತೆ ಹಾಡುತ್ತಿದ್ದರು.

ತಂದೆ-ತಾಯಿಗಳ ಅಕಾಲಿಕ ಮರಣದ ನಂತರ, ವಡವಟಿಯವರು ತಮ್ಮ ಚಿಕ್ಕಮಗಳೂರಿನ ಸಂಬಂಧಿಯೊಬ್ಬರ ಮನೆಯಲ್ಲಿ ಬೆಳೆಯಬೇಕಾಯಿತು. ಅಲ್ಲಿ ಮನೆಚಾಕರಿ ಮಾಡುವ ಮತ್ತು ಕೌಟುಂಬಿಕ ವ್ಯವಹಾರದಲ್ಲಿ ಸಹಕರಿಸುವ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಲಾಗಿತ್ತು. ಒಳಗೆ ಪುಟಿಯುತ್ತಿರುವ ಸಂಗೀತಾಸಕ್ತಿಯು ಈ ರೀತಿ ಮನೆಚಾಕರಿ ಮಾಡುತ್ತಾ ಕಾಲದೂಡುವುದಕ್ಕೆ ಅವರಿಗೆ ಬಹಳ ದಿನ ಅವಕಾಶ ಕೊಡಲಿಲ್ಲ.
ನಾನಿನ್ನೂ ಸಣ್ಣವನಿದ್ದೆ. ಹಗಲು ರಾತ್ರಿಯೆಲ್ಲಾ ದುಡಿದರೂ ಹೊಟ್ಟೆ ತುಂಬುವಷ್ಟು ಊಟವೂ ಸಿಗುತ್ತಿರಲಿಲ್ಲ. ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವನು, ಚಿಮ್ಮುತ್ತಿರುವ ಸಂಗೀತಾಸಕ್ತಿಯನ್ನು ಒಳಗೆ ಅದುಮಿಟ್ಟುಕೊಂಡು ಹೊಟ್ಟೆಪಾಡಿಗೆ ಪರದಾಡಬೇಕೆ ಎಂಬ ಪ್ರಶ್ನೆ ನನ್ನನ್ನು ಬಹಳ ಕಾಡುತ್ತಿತ್ತು, ಎಂದು ವಡವಟಿಯವರು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ವಾಸ್ತವದಲ್ಲಿ ಈ ಸಂಗೀತ ತುಡಿತವೇ ವಡವಟಿಯವರನ್ನು ಚಿಕ್ಕಮಗಳೂರು ತೊರೆಯುವಂತೆ ಪ್ರೇರೇಪಿಸಿತು. ಸೀದಾ ರಾಯಚೂರಿಗೆ ಮರಳಿದ ಅವರು ತಮ್ಮ ಸಂಬಂಧಿಯೂ ಆದ ಶಹನಾಯಿ ವಾದಕ ಮಟಮಾರಿ ಈರಣ್ಣನವರನ್ನು ಭೇಟಿ ಮಾಡಿ ಅವರಲ್ಲಿ ಸಂಗೀತಾಭ್ಯಾಸ ಶುರು ಮಾಡಿದರು. ಕೊನೆಗೆ ಅವರ ಮಗಳು ಶಿವಮ್ಮ ಅವರನ್ನೇ ಮದುವೆಯಾಗಿ ಅವರ ಅಳಿಯನೂ ಆದರು.
ನಂತರ ರಾಯಚೂರಿನ ಬ್ಯಾಂಡ್ ಮಾಸ್ಟರ್ ಜಿ. ವೆಂಕಟಪ್ಪ ಅವರನ್ನು ಭೇಟಿಯಾಗಿ ಕಲಿಯುವುದಕ್ಕೆ ಅವಕಾಶ ಕೊಡುವಂತೆ ಕೋರಿಕೊಂಡರು. ಆರಂಭದಲ್ಲಿ ಆಸಕ್ತಿ ತೋರದ ವೆಂಕಟಪ್ಪ ಕೊನೆಗೆ ಒಪ್ಪಿಕೊಂಡು ಕ್ಲಾರಿಯನೆಟ್ ಕಲಿಸುವುದಕ್ಕೆ ಪ್ರಾರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ಹಿಂದಿ ಹಾಡುಗಳನ್ನು ಕ್ಲಾರಿಯನೆಟ್ ನಲ್ಲಿ ನುಡಿಸುವ ಕಲೆಯನ್ನು ಕರಗತ ಮಾಡಿಕೊಂಡ ವಡವಟಿಯವರು ಅಲ್ಪಾವಧಿಯಲ್ಲೇ ವೆಂಕಟಪ್ಪ ಅವರ ಮ್ಯೂಸಿಕ್ ಬ್ಯಾಂಡಿನ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾದರು.
ವೆಂಕಟಪ್ಪವರ ಗೈರು ಹಾಜರಿಯಲ್ಲಿ ಬ್ಯಾಂಡನ್ನು ಮುನ್ನಡೆಸುವ ಜವಾಬ್ದಾರಿ ವಡವಟಿಯವರದ್ದೇ ಆಗಿರುತ್ತಿತ್ತು. ಆದರೆ, ವಡವಟಿಯವರು ತೃಪ್ತರಾಗಿರಲಿಲ್ಲ. ಒಳಗೆ ಪುಟಿಯುತ್ತಿದ್ದ ಸಂಗೀತಾಸಕ್ತಿ ಅವರು ಇನ್ನಷ್ಟು ಮುಂದಕ್ಕೆ, ಮೇಲಕ್ಕೆ ಹೋಗುವುದಕ್ಕೆ ಪ್ರೇರೇಪಿಸುತ್ತಿತ್ತು. ಇದೇ ಸಮಯದಲ್ಲಿ ನಡೆದ ಒಂದು ಘಟನೆ ಅವರ ಬದುಕಿನಲ್ಲಿ ನಿರ್ಣಾಯಕವಾಗಿಬಿಟ್ಟಿತು.
ಒಂದು ದಿನ ದೇವಸ್ಥಾನವೊಂದರಲ್ಲಿ ಆಯೋಜನೆಗೊಂಡಿದ್ದ ಮದುವೆ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ವೆಂಕಟಪ್ಪನವರ ಬ್ಯಾಂಡನ್ನು ಆಹ್ವಾನಿಸಲಾಗಿತ್ತು. ಅದಕ್ಕೆ ವೆಂಕಟ್ಟಪ್ಪನವರು ಅನಿವಾರ್ಯ ಕಾರಣದಿಂದ ಹೋಗುವುದಕ್ಕೆ ಆಗಿರಲಿಲ್ಲವಾದ್ದರಿಂದ ವಡವಟಿಯವರೇ ಬ್ಯಾಂಡಿನ ನಾಯಕತ್ವ ವಹಿಸಿದ್ದರು. ಬಂದ ಜನರಿಗೆ, ಅತಿಥಿಗಳಿಗೆ ದೇವಸ್ಥಾನದ ಒಳಗೆ ಬಾಳೆಎಲೆ ಊಟದ ವ್ಯವಸ್ಥೆ ಮಾಡಿದ್ದರೆ ಸಂಗೀತ ಕಾರ್ಯಕ್ರಮ ನಡೆಸುವವರಿಗೆ ಹೊರಗಡೆ ಚಪ್ಪಲಿ ಬಿಡುವ ಜಾಗದಲ್ಲಿ ಕುಳಿತು ಉಣ್ಣುವುದಕ್ಕೆ ಹೇಳಲಾಯಿತು.
ಈ ತಾರತಮ್ಯವನ್ನು ಪ್ರತಿಭಟಿಸಿದ ವಡವಟಿಯವರು ಆ ಮ್ಯೂಸಿಕ್ ಬ್ಯಾಂಡಿನಿಂದಲೇ ಹೊರನಡೆದರು. ಬೇರೆ ಬೇರೆ ಸಂಗೀತ ಬ್ಯಾಂಡುಗಳಲ್ಲಿ ಕ್ಲಾರಿಯನೆಟ್ ನುಡಿಸುತ್ತಾ ಜನಮೆಚ್ಚುಗೆ ಪಡೆದ ವಡವಟಿಯವರು ಕರಿ ಕೊಳವಿ ಮೇಸ್ಟ್ರು ಎಂದೇ ಪ್ರಸಿದ್ಧರಾದರು.
 
ಆ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಬಹುಬಗೆಯ ಸಂಗೀತ ವಾದ್ಯಗಳಿಗೆ ಮನ್ನಣೆ ಸಿಕ್ಕಿರಲಿಲ್ಲ. ಬಾನ್ಸುರಿ ಮತ್ತು ಶಹನಾಯಿಗಳನ್ನು ಆಗತಾನೆ ಶಾಸ್ತ್ರೀಯ ಸಂಗೀತದಲ್ಲಿ ಏಕೀಭವಿಸಲಾಗಿತ್ತು. ಕ್ಲಾರಿಯನೆಟ್ ಇನ್ನೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರ ಹೊಸ್ತಿಲು ದಾಟಿರಲಿಲ್ಲ. ಅದು ಜಾನಪದ ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಮಾತ್ರ ಯೋಗ್ಯವಾದ ವಾದ್ಯ ಎಂದು ಗಾಢವಾಗಿ ನಂಬಲಾಗಿತ್ತು. ಆದರೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅದರಲ್ಲಿ ನುಡಿಸಬಹುದು ಎಂಬ ಅಚಲವಾದ ನಂಬಿಕೆ ಮತ್ತು ವಿಶ್ವಾಸ ವಡವಟಿಯವರಿಗಿತ್ತು. ಅದಕ್ಕಾಗಿಯೇ ಅವರು ಒಬ್ಬ ಉತ್ತಮ ಗುರುವಿಗಾಗಿ ಹುಡುಕಾಟ ನಡೆಸಿದ್ದರು.
ಗುರುವಿಗಾಗಿನ ಅವರ ಹುಡುಕಾಟ ಅವರನ್ನು ರಾಯಚೂರಿನ ಅದ್ಭುತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ ಸಿದ್ಧರಾಮ ಜಂಬಲದಿನ್ನಿವರ ಮನೆ ಎದುರು ತಂದು ನಿಲ್ಲಿಸಿತು. ಜಂಬಲದಿನ್ನಿಯವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ಮೇರು ಪ್ರತಿಭೆಗಳಾದ ಜೈಪುರ ಘರಾಣೆಯ ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಗ್ವಾಲಿಯರ್ ಘರಾಣೆಯ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಗರಡಿಯಲ್ಲಿ ಪಳಗಿದ ಪ್ರತಿಭೆ. ಈ ಎರಡೂ ಘರಾಣೆಗಳನ್ನು ಸಂಯೋಜನೆ ಮಾಡಿ ವಚನಗಳನ್ನು ಹಾಡುವಲ್ಲಿ ಅವರದ್ದು ಯಾವಾಗಲೂ ಎತ್ತಿದ ಕೈ.
ನಾನು ಜಂಬಲದಿನ್ನಿವರ ಬಳಿ ಸಂಗೀತ ಕಲಿಸಿಕೊಡಿ ಎಂದು ಕೇಳಲು ಹೋದಾಗ ಅವರೂ ಆಸಕ್ತಿ ತೋರಲಿಲ್ಲ. ಏಕೆಂದರೆ, ಕ್ಲಾರಿಯನೆಟ್ ಬಳಕೆ ಅವರಿಗೂ ಸರಿಯಾಗಿ ಗೊತ್ತಿರಲಿಲ್ಲ. ನಾನು ಮಾತ್ರ ಆ ವಾದ್ಯದೊಂದಿಗೆ ಆತ್ಮೀಯವಾಗಿ ಬೆಸೆದುಕೊಂಡುಬಿಟ್ಟಿದ್ದೆ. ವಾಸ್ತವದಲ್ಲಿ ನನಗೆ ಅನ್ನ ನೀಡಿದ ವಾದ್ಯ ಅದು. ಸಂಬಂಧಿಗಳೆಲ್ಲಾ ನನ್ನನ್ನು ತೊರೆದು ಏಕಾಂಗಿಯಾಗಿಸಿದಾಗ ನನಗೆ ಬದುಕು ಕೊಟ್ಟ ವಾದ್ಯವದು. ಅದನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಇಂಟಿಗ್ರೇಟ್ ಮಾಡಬೇಕು ಎಂಬುದು ನನ್ನ ಅದಮ್ಯ ಬಯಕೆಯಾಗಿತ್ತು. ಹಲವು ಸುತ್ತುಗಳ ಮನವೊಲಿಕೆಯ ನಂತರ ಜಂಬಲದಿನ್ನಿಯವರು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು, ಎಂದು ವಡವಟಿಯವರು ಆ ದಿನಗಳನ್ನು ಮೆಲಕು ಹಾಕುತ್ತಾರೆ. ಜಂಬಲದಿನ್ನಿಯವರಿಂದ ವಟವಟಿಯವರು ಕಲಿತ ಮೊದಲ ರಾಗ ಭಿಂಪ್ಲಸಿ.
ಕ್ಲಾರಿಯನೆಟ್ ಅನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ಅವರ ಮಹಾತ್ವಾಕಾಂಕ್ಷಿ ಪ್ರಯತ್ನಗಳಿಗೆ ಆರಂಭದಲ್ಲೇ ಅನೇಕ ಅಡ್ಡಿಗಳು ಎದುರಾದವು. ಅನೇಕ ಶಾಸ್ತ್ರೀಯ ಸಂಗೀತಗಾರರು, ಸಾಮಾನ್ಯರು ಅವರನ್ನು ನಿರುತ್ಸಾಹಗೊಳಿಸುವುದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದರು. ಅದರೆ ವಡವಟಿಯವರು ಮುನ್ನುಗ್ಗಿದರು. ವಡವಟಿಯವರಲ್ಲದೇ ಇನ್ನೂ ಕೆಲವರು ಈ ಪ್ರಯತ್ನ ಮಾಡಿದ್ದರಲ್ಲದೇ ಒಂದು ಮಟ್ಟಿನ ಯಶಸ್ಸನ್ನೂ ಗಳಿಸಿದ್ದರು.
“ಕಲ್ಕತ್ತಾದ ಪ್ರಸಿದ್ಧ ಕ್ಲಾರಿಯನೆಟ್ ವಾದಕ ದರ್ಶಮ್ ಸಿಂಗ್ ಅವರೂ ಕೂಡ ಕ್ಲಾರಿಯನೆಟ್ ಅನ್ನು ಹಿಂದೂಸ್ತಾನಿ ಸಂಗೀತದಲ್ಲಿ ಒಂದು ವಾದ್ಯವಾಗಿ ಬಳಸುತ್ತಿದ್ದರು. ಆದರೆ ನಾನು ಈ ವಾದ್ಯವನ್ನು ಹಿಂದೂಸ್ತಾನಿ ಗಾಯನ ಶೈಲಿಗೆ ಒಗ್ಗಿಸಿದೆ. ಏಕೆಂದರೆ, ನನಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸಿದ ಗುರು ಜಂಬಲದಿನ್ನಿವರು ಒಬ್ಬ ಗಾಯಕರಾಗಿದ್ದರು, ಎನ್ನುತ್ತಾರೆ ವಡವಟಿಯವರು.
ಕ್ಲಾರಿಯನೆಟ್ ವಾದನದಲ್ಲಿನ ವಡವಟಿಯವರ ಕೈ-ಸ್ವರ ಚಳಕಗಳನ್ನು ಗಮನಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರಾದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ ಮತ್ತು ಪಂಡಿತ್ ಭೀಮಸೇನ ಜೋಶಿಯವರು ಬಾಂಬೆಗೆಯಲ್ಲಿ ಆಯೋಜನೆಗೊಂಡಿದ್ದ ಹರಿದಾಸ ಸಂಗೀತ ಸಮ್ಮೇಳನದಲ್ಲಿ ಕ್ಲಾರಿಯನೆಟ್ ನುಡಿಸುವುದಕ್ಕೆ ವಡವಟಿಯವರನ್ನು ಕಳಿಸಿಕೊಟ್ಟಿದ್ದರು. ಆ ನಂತರದಲ್ಲಿ ಅವರಿಗೆ ಅನೇಕ ಆಹ್ವಾನಗಳು, ಗೌರವ-ಸನ್ಮಾನಗಳೂ ಬರಲಾರಂಭಿಸಿದವು.
ಕೊನೆಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪರಿಪೂರ್ಣವಾಗಿ ಕ್ಲಾರಿಯನೆಟ್‍ನಲ್ಲಿ ನುಡಿಸುವ ಕಲೆಯನ್ನು ಕರಗತ ಮಾಡಿಕೊಂಡ ವಡವಟಿಯವರು ತಮ್ಮನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದ ಎಲ್ಲರ ಬಾಯನ್ನೂ ಮುಚ್ಚಿಸಿದರು. ಈ ಕಲೆಯಲ್ಲಿ ಅವರು ಅದೆಷ್ಟು ಸಿದ್ಧಹಸ್ತರಾಗಿದ್ದರೆಂದರೆ ವಡವಟಿಯವರು ಕ್ಲಾರಿಯನೆಟ್ ಅನ್ನು ನುಡಿಸುವುದಿಲ್ಲ, ಅದನ್ನು ಹಾಡುತ್ತಾರೆ ಎಂದು ಜನ ಆಗಾಗ ಹೇಳುತ್ತಿದ್ದುದುಂಟು.

ಕಳೆದ ಒಂದು ದಶಕದಿಂದ ಅವರು ರಾಯಚೂರಿನಲ್ಲಿ ಸ್ವರ ಸಂಗಮ ಸಂಗೀತ ವಿದ್ಯಾಲಯ ಮತ್ತು ಬೆಂಗಳೂರಿನಲ್ಲಿ ಪಂಡಿತ ನರಸಿಂಹಲು ವಡವಟಿ ಸಂಗೀತ ಅಕಾಡೆಮಿ ಎಂಬ ಎರಡು ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ವಡವಟಿಯವರ ಗುರುವಾದ ಜಂಬಲದಿನ್ನಿಯವರೂ ಕೂಡ ಸಂಗೀತ ಕೇವಲ ಉಳ್ಳವರ, ಮೇಲ್ಜಾತಿಗಳ ಸೊತ್ತಾಗಬಾರದು, ಅದು ಎಲ್ಲಾ ವರ್ಗದವರಿಗೂ, ಅದರಲ್ಲೂ ವಿಶೇಷವಾಗಿ ದುಡಿಯುವ ಸಮುದಾಯಗಳಿಗೆ ದಕ್ಕುವಂತಾಗಬೇಕು ಎಂದು ಹಂಬಲಿಸಿದ್ದವರು. ಅದಕ್ಕಾಗಿಯೇ ಒಂದು ಸಂಗೀತ ಸಂಸ್ಥೆಯನ್ನು ಹುಟ್ಟುಹಾಕುವ ಕನಸನ್ನೂ ಕಂಡಿದ್ದರು.
ಆದರೆ, ಅದು ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರುಪ್ರತಿಭೆಯಾಗಿದ್ದರೂ ಸಣ್ಣ ಊರಿನಲ್ಲಿ ಹುಟ್ಟಿದ ಕಾರಣಕ್ಕೆ ಬೆಳಕಿಗೆ ಬಾರದಂತೆ ಸಂಗೀತಕ್ಕಾಗಿ ಜೀವತೇಯ್ದ ಮಹಾಯೋಗಿ ಅವರು.
ಪುಣೆಯಲ್ಲೋ, ಜೈಪುರದಲ್ಲೋ ಅಥವಾ ಸಂಗೀತ ಕ್ಷೇತ್ರಕ್ಕೆ ಹೆಸರುವಾಸಿಯಾದ ಪ್ರದೇಶದಲ್ಲಿ ಇದ್ದಿದ್ದರೆ ಹಿಂದೂಸ್ತಾನಿ ಸಂಗೀತ ಕ್ಷೇತ್ರ ಮೇರುಪ್ರತಿಭೆಯೆಂದು ಗುರುತಿಸಲ್ಪಡುವ ಸಾಧ್ಯತೆಯಿದ್ದ ಜಂಬಲದಿನ್ನಿಯವರಿಗೆ ಸಾಯುವ ತನಕವೂ ಹೊಟ್ಟೆ ಹೊರೆಯುವುದು ಒಂದು ನಿತ್ಯದ ಸವಾಲಾಗಿಯೇ ಇತ್ತು ಅವರಿಗೆ.
ಹೀಗಾಗಿ, ಸಂಗೀತ ಅಕಾಡೆಮಿ ತೆರೆಯಬೇಕು, ಬಡವರಿಗೆ ಸಂಗೀತ ಕಲಿಸಬೇಕು ಎಂಬ ಅವರ ಕನಸು ಕನಸಾಗಿಯೇ ಉಳಿದಿತ್ತು. ಅದನ್ನೀಗ ಅವರ ಶಿಷ್ಯ ವಡವಟಿಯವರು ಮಾಡುತ್ತಿದ್ದಾರೆ. ಗುರು ಜಂಬಲದಿನ್ನಿವಯರ ಜನ್ಮದಿನವನ್ನು ಪ್ರತಿ ವರ್ಷ ಒಂದು ಸಂಗೀತೋತ್ಸವವಾಗಿ ಆಚರಿಸುವ ವಡವಟಿಯವರು ಬೇರೆ-ಬೇರೆ ರಾಜ್ಯಗಳಿಂದ ಸುಪ್ರಸಿದ್ಧ ಕಲಾವಿದರನ್ನು ರಾಯಚೂರಿಗೆ ಕರೆಸಿ ರಾತ್ರಿಯಿಡೀ ಸಂಗೀತಗೋಷ್ಠಿ ನಡೆಸುತ್ತಾರೆ.
ವಡವಟಿಯವರು 78ರ ಇಳಿ ವಯಸ್ಸಿನಲ್ಲೂ 18ರ ಉತ್ಸಾಹದಲ್ಲಿ ದೇಶ-ವಿದೇಶಗಳನ್ನು ಸುತ್ತುತ್ತಾ ಕ್ಲಾರಿಯನೆಟ್ ನುಡಿಸುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ಗಳಲ್ಲಿ ತಮ್ಮ ಅಮೋಘ ಕ್ಲಾರಿಯನೆಟ್ ವಾದನದ ಮೂಲಕ ಜನಮನಗೆದ್ದಿದ್ದಾರೆ. ಸಂಗೀತದ ಹುಚ್ಚು ಹಿಡಿಸಿಕೊಂಡು ತಾನು ಅನುಭವಿಸಿದ ಕಷ್ಟಕಾರ್ಪಣ್ಯಗಳು ತಮ್ಮ ಮಕ್ಕಳಿಗೆ ಬಾರದಿರಲಿ ಎಂದು ಜಂಬಲದಿನ್ನಿಯವರು ತಮ್ಮ ಯಾವ ಮಕ್ಕಳಿಗೂ ಸಂಗೀತದ ಸೋಂಕು ತಾಕದಂತೆ ನೋಡಿಕೊಂಡರೆ ಅವರ ಶಿಷ್ಯ ವಡವಟಿಯವರು ತಮ್ಮ ಮಕ್ಕಳನ್ನೂ ಸಂಗೀತಗಾರರನ್ನಾಗಿ ಮಾಡಿದ್ದಾರೆ. ಮಗಳು ಶಾರದ ಆಕಾಶವಾಣಿಯಲ್ಲಿ ಎ-ಗ್ರೇಡ್ ಗಾಯಕಿಯಾದರೆ ಮಗ ವೆಂಕಟೇಶ್ ಕೂಡ ಎ-ಗ್ರೇಡ್ ಕ್ಲಾರಿಯನೆಟ್ ವಾದಕರಾಗಿದ್ದಾರೆ.

ಪಂಡಿತ ವಡವಟಿಯವರ ಬಗ್ಗೆ ನಾನು ಬರೆದ ಲೇಖನವನ್ನು ದಿ ಹಿಂದೂ ಪತ್ರಿಕೆಯ ಫ್ರೈಡೇ ರಿವ್ಯೂನಲ್ಲಿ ಮುಖಪುಟ ವಿಶೇಷ ಸುದ್ದಿಯಾಗಿ ಪ್ರಕಟಿಸಲಾಗಿದೆ. (25.10.2019) ಆಸಕ್ತರು ಓದಿ.
ಮಾಹಿತಿ ನೀಡುವ ಮೂಲಕ ಈ ಲೇಖನ ಸಿದ್ಧಪಡಿಸಲು ನೆರವಾದ ಪಂಡಿತ ನರಸಿಂಹಲು ವಡವಟಿಯವರಿಗೂ ಹಾಗೂ ಪತ್ರಕರ್ತ ಸ್ನೇಹಿತ ಕೆ.ಎನ್. ರೆಡ್ಡಿಯವರಿಗೂ ನಾನು ಅಭಾರಿ.

‍ಲೇಖಕರು avadhi

November 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: