ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮದಲ್ಲದ ವೃತ್ತಿಯಿಂದ ಕವಲೊಡೆದರೆ!

ಶುಭಾ ಗಿರಣಿಮನೆ

ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬನೂ ಒಂದಿಲ್ಲೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾನೆ. ನೌಕರಿ, ಕೃಷಿ, ಕೂಲಿ, ಅಡುಗೆ ಮನೆ, ಡಾಕ್ಟರ್, ಪೋಸ್ಟ್ ಮ್ಯಾನ್, ಪತ್ರಿಕೆ ಸಂಪಾದಕ, ಇಂಜಿನಿಯರ್ ಹೀಗೆ ಕೆಲಸ ಎನ್ನುವುದರ ವಿಸ್ತಾರ ಬಹಳ ದೊಡ್ಡದಿದೆ. ನಾವು ನಿತ್ಯ ದುಡಿಯುತ್ತೇವೆ. ಹೊಟ್ಟೆ ಬಟ್ಟೆಯ ಜೊತೆ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ದುಡಿಮೆಯನ್ನು ಅವಲಂಭಿಸಿರುತ್ತೇವೆ.

ಅಡುಗೆ ಮಾಡುವ ಹೆಣ್ಣು ಮಗಳೊಬ್ಬಳು ಗಂಡ ತಂದು ಹಾಕಿದ್ದರಲ್ಲಿಯೇ ಅಚ್ಚುಕಟ್ಟಾಗಿ ಶುಚಿ ರುಚಿ ಅಡುಗೆ ಮಾಡುವ ಕೆಲಸವೇನು ಸಣ್ಣದಲ್ಲ. ಸಿಕ್ಕಾಪಟ್ಟೆ ವಿದ್ಯೆ ಕಲಿತು ನಂತರ ಉದ್ಯೋಗ ಮಾಡುವುದು ದೊಡ್ಡದು ಅಂತಲೂ ಅಲ್ಲ. ಒಟ್ಟಿನಲ್ಲಿ ಮನುಷ್ಯ ಕೆಲಸದಲ್ಲಿ ಭಾಗಿಯಾಗಿರುತ್ತಾನೆ.

ದಿನವೂ ಒಂದೇ ಕೆಲಸ. ಮಾಡಿದ್ದನ್ನೇ ಮಾಡುವುದು. ಒಂದಿಷ್ಟು ಬಿಡುವು ಎನ್ನುವದು ಇರುವುದೇ ಇಲ್ಲ. ಆ ಕೆಲಸದ ಒತ್ತಡದಿಂದ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಹದಗೆಡುತ್ತದೆ. ಒಂದು ಹಂತದವರೆಗೆ ಕೆಲಸ ಕೆಲಸ ಎಂದು ಏಕವೃತ್ತಿಯಾಗಿ ದುಡಿಯುತ್ತ ಹೋಗಿ ಜೀವನ ಇಷ್ಟೆ ಎಂದಾಗಿಬಿಟ್ಟಾಗ ಅಲ್ಲಿಗೆ ಮನುಷ್ಯನ ಸೋಲು ಆರಂಭವಾಗುತ್ತದೆ.

ವೃತ್ತಿ ಬದುಕಿನ ಜೊತೆ ಬೇರೆ ಏನನ್ನಾದರೂ ರೂಢಿಸಿಕೊಂಡರೆ ಹೇಗಿರಬಹುದು! ಹೌದು ಅದೆಷ್ಟೋ ಜನರು ತಮ್ಮ ನಿತ್ಯದ ವೃತ್ತಿ ಬದುಕಿನ ಜೊತೆ ಒಂದು ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಈ ಹವ್ಯಾಸ ಅವರ ಜಂಜಾಟವನ್ನು ಮರೆಸುತ್ತದೆ. ಒಂದಿಷ್ಟು ಸುಖದ ಜೊತೆ ಸಂತೋಷವನ್ನು ನೀಡುತ್ತದೆ.

ಉತ್ತರ ಕರ್ನಾಟಕದ ಒಬ್ಬ ವ್ಯಕ್ತಿ ಸ್ಮಶಾನದಲ್ಲಿ ಗಿಡಗಳನ್ನು ಬೆಳೆಸುತ್ತಾರಂತೆ. ಅವರಿಗೆ ಈಗ ಸುಮಾರು ಅರವತ್ತರ ವಯಸ್ಸು. ದೇಹಕ್ಕೆ ಕ್ಯಾನ್ಸರ್ ಎನ್ನುವ ರೋಗ ಅಂಟಿಕೊಂಡಿದೆ. ದೇಹ ಸುಸ್ತಾಗುತ್ತದೆ. ಮನಸ್ಸು ಮುದುಡುತ್ತದೆ. ಆದರೆ ಇವರು ಚೈತನ್ಯದ ಚಿಲುಮೆಯಾಗಿದ್ದಾರೆ ಇಂದಿಗೂ ಸಹ.

ಒಂದು ಕಾಲದಲ್ಲಿ ಉದ್ಯೋಗಿಯಾದ್ದರು ಈ ಹಿರಿಯರು. ಚಿಕ್ಕಂದಿನಿಂದಲೂ ಅವಕಾಶ ಮತ್ತು ಸಮಯ ಸಿಕ್ಕಾಗ ಗಿಡವನ್ನು ನೆಡುವುದು ಹವ್ಯಾಸ. ನಂತರದಲ್ಲಿ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತು. ಆಗ ಸಂಪೂರ್ಣವಾಗಿ ತಾನು ಸಾಯುತ್ತೇನೆ ಎಂದು ಕುಸಿದು ಹೋದರು. ಆ ನೋವನ್ನು ಮರೆಯಲಿಕ್ಕೆ ಸಹಾಯಕ್ಕೆ ಬಂದಿದ್ದು ವೃತ್ತಿಯಲ್ಲ, ಮನೆಯ ವಾತಾವರಣವಲ್ಲ. ಅವರೂ ಹವ್ಯಾಸವಾಗಿ ಮಾಡಿಕೊಂಡು ಬಂದಿದ್ದ ಸಸಿ ನೆಡುವ ಕೆಲಸ.

ಸ್ಮಶಾನದಲ್ಲಿ ಸಸಿಯನ್ನು ನೆಟ್ಟು ಅದನ್ನು ಪೋಷಿಸುತ್ತಿದ್ದಾರೆ. ಹೀಗೆ ಸ್ಮಶಾನದಲ್ಲೆ ಸಸಿ ನೆಡುವುದು ಯಾತಕ್ಕೆ ಎಂದು ಕೇಳಿದರೆ ಸಾವು ಬಂದ ನಂತರವೂ ಶುದ್ಧ ಪರಿಸರದಲ್ಲಿ ದಫನ್ ಮಾಡಲಿ ಅಂತ ಎನ್ನುತ್ತಾರೆ.

ಕಷ್ಟಗಳು ಎದುರಾದಾಗ ಸಾಂತ್ವನ ಕೊಡುವುದು ಈ ಪುಟ್ಟಪುಟ್ಟ ಹವ್ಯಾಸಗಳೇ. ನಮ್ಮ ವೃತ್ತಿಯಿಂದ ದಿನಕ್ಕೆ ಅಥವಾ ವಾರಕ್ಕೋ ಅಥವಾ ತಿಂಗಳಿಗೋ ಬೇರೆ ಒಂದು ಹವ್ಯಾಸವನ್ನು ರೂಢಿಸಿಕೊಂಡಿದ್ದರೆ ಅವನಲ್ಲಿ ಆಗಾಗ ಉತ್ಸಾಹ ಎನ್ನುವದು ಚಿಗಿತುಕೊಳ್ಳುತ್ತದೆ. ಅಲ್ಲದೆ ಕೆಟ್ಟ ಆಲೋಚನೆಯನ್ನು ಮಾಡಲು ಇಷ್ಟವಾಗುವುದಿಲ್ಲ. ಸಣ್ಣ ಹವ್ಯಾಸ ದೊಡ್ಡ ಖುಷಿಯನ್ನು ಕೊಡುತ್ತದೆ. ಅದಕ್ಕಾಗಿಯೇ ಎಷ್ಟೋ ಜನ ಕೈಕಸುಬು, ಸಂಗೀತ, ಪೇಂಟಿಂಗ್, ಹೂವಿನ ಗಿಡಗಳನ್ನು ಬೆಳೆಸುವುದು, ಓದುವುದು ಹೀಗೆ ತಮಗಿಷ್ಟವಾದ ಅನೇಕ ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಹತ್ತನೇ ತರಗತಿ ಓದುವ ಹುಡುಗಿಯೊಬ್ಬಳು ತನ್ನ ಫಲಿತಾಂಶ ಕಂಡು ದಂಗಾಗಿ ಹೋದಳು. ತಾನು ಅನುತ್ತೀರ್ಣ ಎಂದು ತಿಳಿದು ಸಾಯಲು ಮುಂದಾದಳು. ಮನೆಯವರೆಲ್ಲ ಹೊರಗಿದ್ದಾರೆ. ತಾನು ಕೋಣೆಯ ಪ್ಯಾನಿಗೆ ನೇಣು ಹಾಕಿಕೊಂಡರೆ ಯಾರಿಗೂ ತಿಳಿಯುವುದಿಲ್ಲ. ಫೇಲಾದೆ ಎನ್ನುವ ಮುಜುಗರ ಎದುರಿಸುವುದು ತಪ್ಪುತ್ತದೆ ಎಂದುಕೊಂಡಿದ್ದಳು. ಆ ಯೋಚನೆ ಮಾಡುತ್ತಲೇ ತಾನು ಬಿಡಿಸಿದ್ದ ಚಿತ್ರವೊಂದು ಅವಳ ಕಣ್ಣಿಗೆ ಬಿತ್ತು. ಆ ಚಿತ್ರದಲ್ಲಿ ದೋಷ ಇರುವುದು ಕಾಣಿಸಿತು.

ಹಾಗೆಯೇ ಪೆನ್ಸಿಲ್ ಹಿಡಿದು ಚಿತ್ರದಲ್ಲಿಯ ದೋಷ ತಿದ್ದತೊಡಗಿದಳು. ಅವಳಿಗೆ ತಾನು ಸಾಯಬೇಕೆಂಬ ತೀರ್ಮಾನ ಬದಲಾಗಿರಲಿಲ್ಲ. ಆದರೆ ಅವಳು ಚಿತ್ರವನ್ನು ಸರಿಪಡಿಸುವಲ್ಲಿಗೆ ಅವಳ ತಾಯಿ ಆ ಕೋಣೆಗೆ ಬಂದಿದ್ದಳು. ಆ ನಂತರ ಅವಳಿಗೆ ನೇಣು ಹಾಕಿಕೊಳ್ಳುವ ಅವಕಾಶ ಸಿಗಲಿಲ್ಲ. ಮನೆ ಮಂದಿಗೆಲ್ಲ ಅವಳು ಫೇಲಾಗಿದ್ದಾಳೆ ಎನ್ನುವುದು ತಿಳಿಯಿತು. ಸಮಾಧಾನ ಮಾಡಿದರು. ಅವಳು ಅತ್ತು ಹಗುರಾದಳು. ಸಾವು ಎನ್ನುವುದು ಮರೆಯಾಗಿ ಹೋಗಿತ್ತು.

ಇದು ವಾಸ್ತವಕ್ಕೆ ದೂರ ಎನ್ನಿಸಬಹುದು. ಆದರೆ ಒಂದು ಹವ್ಯಾಸ ಇಂಥಹ ಅದೆಷ್ಟೋ ನೋವನ್ನು, ಕೆಟ್ಟ ನಿರ್ಧಾರಗಳನ್ನು ತಡೆಯುವ ಶಕ್ತಿಯನ್ನು ಸಹ ಪಡೆದಿದೆ. ಇನ್ನೊಬ್ಬರಲ್ಲಿ ಹಂಚಿಕೊಳ್ಳಲಾಗದ್ದನ್ನು ನಮ್ಮ ಹವ್ಯಾಸದ ಆ ಕಲೆಯ ಮೂಲಕ ಹೊರ ಹಾಕಬಹುದು. ನಿತ್ಯ ವೃತ್ತಿ ಬದುಕನ್ನು ಸವೆಸಿದರೆ ಸಾಲದು ಅದರ ಹೊರತಾಗಿ ಪುಟ್ಟ ಕವಲೊಂದನ್ನು ಮಾಡಿಕೊಂಡು ಹವ್ಯಾಸ ರೂಢಿಸಿಕೊಂಡರೆ ಬದುಕಿನ ಕೆಲವು ಕ್ಷಣಗಳು ಅದ್ಭುತವಾಗಿರುತ್ತದೆ.

‍ಲೇಖಕರು Avadhi

25 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading