ಪ್ರವೀಣ್ ಹೆಗ್ಡೆ
ಫೋಟೋ: ಯಜ್ಞ, ಮಂಗಳೂರು
ಕದ್ರಿ ಎಂದೊಡನೆ ನನಗಂತೂ ಸ್ಯಾಕ್ಸೋಫೋನ್ ಗಿಂತ ಮೊದಲು ನೆನಪಾಗೋದು ಅವರದೊಂದು ವಿಭಿನ್ನ ಚಿತ್ರ. ಒಂದೆರಡು ತಾಸಿನ ಕಥೆಯದು. ಹನ್ನೆರಡು-ಹದಿಮೂರು ವರ್ಷಕ್ಕೆ ಮೊದಲಿನದು.
ಮೈಸೂರಿನ ಆಕಾಶವಾಣಿ ಸಮೀಪದ ಗಣೇಶೋತ್ಸವದಲ್ಲಿ ಕದ್ರಿ ಮತ್ತು ರೋಣು ಮಜುಂದಾರ್ ಜುಗಲ್ಬಂದಿ ಏರ್ಪಾಟಾಗಿತ್ತು. ಮತ್ತವರಿಬ್ಬರ ವಾಸ್ತವ್ಯ as usual ದಾಸ್ ಪ್ರಕಾಶ್ ಹೋಟೆಲ್ನಲ್ಲಿ. ಅರವಿಂದ ನಾವಡರು ಬಾರೋ ಹೋಗೋಣ ವಿಜಯಕರ್ನಾಟಕದ (ಎಂದೂ ಮರೆಯದ ಜೋಡಿನೋ ಮತ್ತೊಂದೋ ಹೆಸರು ಮರೆತಿದೆ) ಅಂಕಣವೊಂದಕ್ಕೆ ಅವರಿಬ್ಬರನ್ನೂ ಮಾತಾಡಿಸೋಣ ಎಂದಿದ್ದೆ ಸರಿ, ಜೀಕಿ ಹೊರಟಿದ್ದೆ.
ರೋಣುಗೆ ಇಷ್ಟವೆಂದು ನಾವಡರು ಮನೆಯಿಂದ ಉಪ್ಪಿನಕಾಯಿ ತಂದಿದ್ದರು. ಮಧ್ಯಾಹ್ನದ ಊಟದ ನಂತರ ಸರಿಸುಮಾರು ಮುಕ್ಕಾಲು ಗಂಟೆ ಪಟ್ಟಾಂಗ. ನಂತರ ಅವರಿಬ್ಬರೂ ಕಾರ್ಯಕ್ರಮಕ್ಕೆ ಹೊರಡುವರಿದ್ದರು. ಮಾತು ಮುಗಿದದ್ದೇ ಬಟ್ಟೆ ಬರೆ ತಯಾರಿ! ರೋಣು ಚಕಾಚಕ್ ತಯಾರಾದರು. ಕದ್ರಿಯವರೋ ದೊಡ್ಡದೊಂದು ಸೂಟಕೇಸ್ ತೆಗೆದು ಮೂರ್ನಾಲ್ಕು ಕುರ್ತಾ ತೆಗೆದು ಗೊಂದಲಕ್ಕೆ ಬಿದ್ದರು. ಅವರ ಮಣಿಸರಗಳ ಬೊಂತೆ, ತಲೆಗೂದಲ ಶೈಲಿ ಮತ್ತು ಬಿಳಿ ಬನಿಯನ್ನು, ಎರಡೂ ಕೈಗಳಲ್ಲಿ ಒಂದೊಂದು ಕನ್ನಡ ಬಣ್ಣಗಳ ಕುರ್ತಾಗಳ ನಡುವೆ ಅವರು ನಿಜಕ್ಕೂ ನಗೆಯುಕ್ಕಿಸುವಂತಿದ್ದರು. ಮತ್ತವರಿಗೆ ಗೊತ್ತಿದ್ದೂ ಹಾಗೇ ಇದ್ದರು!
ಅಲ್ಲೇ ಇದ್ದ ನನ್ನನ್ನು ‘ಯಾವಾದಾಗಬಹುದ್ರೀ ಇವತ್ತಿಗೆ’ ಅಂತ ಕೇಳಿದರು. ಕೆಂಪು ಮತ್ತು ಹಳದಿಯ ಎರಡು ಕುರ್ತಾದಲ್ಲಿ ನಾನು ಹಳದಿಯದ್ದೇ ಚೆನ್ನಾಗಿದೆ ಸಾರ್ ಎಂದೆ. ನನಗೋ ಮೋಜು. ‘ಒಹ್ ಹೌದಾ? ಅದೇ ಇರ್ಲಿ ಬಿಡಿ ಹಾಗಾದ್ರೆ’ ಎಂದವರೇ ಅದನ್ನು ಧರಿಸಿ ಘಮ್ಮತ್ತಾಗಿ ತಯಾರಾದರು. ‘ಇವತ್ತು ಕಾರ್ಯಕ್ರಮ ತಪ್ಪಿಸಬೇಡ್ರಿ, ತುಂಬಾ ಚೆನ್ನಾಗಾಗುತ್ತೆ ನೋಡಿ’ ಎಂದರು, ಮತ್ತವತ್ತಿನ ಜುಗಲ್ಬಂದಿ ನಿಜಕ್ಕೂ ದಿವ್ಯವಾಗಿತ್ತು.
ಕಳೆದ ಆ ಅರ್ಧ ದಿನ ಒಂದರ್ಥದಲ್ಲಿ ಕಳೆದ ದಿನವೇ ಹೌದು. ಬಹುಷಃ ನಾಗೇಶ್ ಪಾಣತ್ತಲೆಯವರು ತೆಗೆದ ಅಂದಿನ ನಮ್ಮೆಲ್ಲರ ಚಿತ್ರಗಳನ್ನು ಕಾಡಿ ಬೇಡಿಯೂ ನಾವಡರು ನನಗೆ ಕೊಟ್ಟಿಲ್ಲ ಎಂಬ ತಕರಾರು ಇದ್ದೆ ಇದೆ.
ನಮಸ್ಕಾರ ಕದ್ರಿಯವರೇ… ನೀವು ಸದಾ ಹೀಗೇಇರ್ತೀರಿ.







ಎಷ್ಟು ಚೆನ್ನಾಗಿ ನೆನಪಿಸಿಕೊಂಡಿದ್ದೀರಿ.