ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಹೃದಯ ಇರುವುದು ನನ್ನ ಹೆಂಡತಿಯ ಬಳಿ!

ಪಾಲಹಳ್ಳಿ ವಿಶ್ವನಾಥ್
ನನ್ನಂಥವರು ಅವರಂಥವರಿಂದ ಯಾವಾಗಲೂ ದೂರವಿರಬೇಕು. ದೂರವೂ ಇರುತ್ತಿದ್ದೆವು.  ಒಂದು ಬೆಳಿಗ್ಗೆ ಅವರು ನನ್ನನ್ನು ವಿಶಾಲವಾದ ನಗೆಯಿಂದ ಸ್ವಾಗತಿಸಿದಾಗ ನನಗೆ ತುಂಬಾ ಆಶ್ಚರ್ಯವಾಯಿತು
” ನಮಸ್ಕಾರ ಗೆಳೆಯ ! ಹೇಗಿದ್ದಿಯಾ ?”
ಅವರು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆಂದು ನನಗೆ ಗೊತ್ತಾಗಲಿಲ್ಲ. ನಾನು ಸುತ್ತಲೂ ನೋಡಿದೆ. ಆದರೆ ಬೇರೆ ಯಾರೂ ಇರಲಿಲ್ಲ. ಹೌದು, ಅವರು ನನ್ನನ್ನೇ ಉದ್ದೇಶಿಸಿ ಮಾತನಾಡುತ್ತಿದ್ದರು! ಸ್ವಲ್ಪ ಜಾಗರೂಕತೆಯಿಂದಲೆ ಉತ್ತರ ಕೊಟ್ಟೆ.
“ಚೆನ್ನಾಗಿದೀನಿ! ನೀವು ಹೇಗಿದ್ದೀರಾ… ಸಾಹೇಬರೇ?”
ನಾನು ಕೊನೆಯ ಕ್ಷಣದಲ್ಲಿ ಸಾಹೇಬರೇ ಎಂದು ಸೇರಿಸಿದೆ. ಬಹಳ ದೊಡ್ಡವರಲ್ಲವೇ!.
“ನಾನು ಚೆನ್ನಾಗಿದ್ದೇನೆ, ಆದರೆ ನೀನು ನನ್ನನ್ನು ಸಾಹೇಬರೇ ಎಂದೆಲ್ಲ ಏಕೆ ಕರೆಯತ್ತೀಯಾ ? ಅದೆಲ್ಲ ಬೇಕಿಲ್ಲ . ಕಳೆದ ಕೆಲವು ವಾರಗಳಿಂದ ನಾನು ನಿನ್ನನ್ನು ನೋಡುತ್ತಿದ್ದೇನೆ. ಸ್ನೇಹ ಬೆಳೆಸೋಣ ಅಂತ ಕಾಯ್ತಾ ಇದ್ದೀನಿ ”
ಧ್ವನಿಯೇನೋ ಸ್ನೇಹಮಯವಾಗಿದೆ ಆದರೆ ಅವರು ನಿಜವಾಗಿಯೂ ಹೇಗೋ?
“ಸಾಹೇಬರೇ, ನಾನು ನಿಮ್ಮನ್ನು ಮೊದಲು ನೋಡಿಲ್ಲ.” (ನೋಡಿದ್ದರೂ ಗೊತ್ತಾಗ್ತಿತ್ತೇ?)
“ಹೌದು, ನನ್ನ ಗೆಳೆಯ! ನೀನು ತುಂಬಾ ಗಮನಿಸುತ್ತೀಯ ಅಂತ ಕಾಣಿಸುತ್ತೆ. ! ನಾವು ಕೇವಲ ಎರಡು ವಾರಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ . ನಾನು ನಿನ್ನೊಂದಿಗೆ ಸ್ನೇಹ ಬೆಳೆಸಬೇಕೂಂತ ಆಸೆ”
” ತುಂಬಾ ಒಳ್ಳೆಯದು ಸಾಹೇಬರೇ”
“ಗೆಳೆಯ! ನೀನು ಮತ್ತೆ ನನ್ನನ್ನು ಸಾಹೇಬ ಮಾಡ್ತಿದೀರಲ್ಲ?”
“ಕ್ಷಮಿಸಿ! ಅದು ಅಭ್ಯಾಸ ! ನಿಮ್ಮಂತವರನ್ನು ನಾನು ಹಾಗೇ ಕರೆದರೆ ತಪ್ಪಾಗುತ್ತದೆ. “
“ ಸರಿ, ಗೆಳೆಯ ! ನಿನ್ನಿಷ್ಟ!”

“ ಏನಾದರೂ ಬೇಕಿತ್ತೇ ಸಾಹೆಬರೆ?”
“ನೋಡಯ್ಯ, ನಿಜವಾದ ಸ್ನೇಹಿತರು ಸ್ನೇಹಿತರಿಂದ ಏನನ್ನೂ ನಿರೀಕ್ಷಿಸುವುದಿಲ್ಲ … ನೀನು ಆಗಲೇ ನನಗೆ ನಿನ್ನ ಸ್ನೇಹ ಕೊಟ್ಟಿದ್ದೀಯ ! ಸಾಕು “
ಅಂತೂ ಹೀಗೆ ಸಮಯವಾಗುತ್ತಾ ನಮ್ಮ ನಡುವಿನ ಅಂತರವು ಕಡಿಮೆಯಾಯಿತು ಅಂತ ಕಾಣುತ್ತೆ. ದಿನಾ ಬೆಳಿಗ್ಗೆ ಬರ್ತಾ ಇದ್ದರು . ಅವರದ್ದೆ ಹೆಚ್ಚು ಮಾತು! ಅವರ ಪೂರ್ವಜರ ಬಗ್ಗೆ ಅವರಿಗೆ ಬಹಳ ಜಂಬ! ತನ್ನ ಮುತ್ತಜ್ಜ ಇಡೀ ವಿಶ್ವದ ಚಕ್ರವರ್ತಿ ಎಂದು ಯಾರಾದರೂ ಹೇಳಿದರೆ ಇಲ್ಲ ಎಂದು ಹೇಳಲು ನಾನು ಯಾರು? ತನ್ನ ಪೂರ್ವಜರಿಗೆ ಪ್ರಕೃತಿಯ ಬಗ್ಗೆ ಎಲ್ಲವೂ ತಿಳಿದಿತ್ತು ಎಂದು ಅವರು ನಂಬಿದರೆ ಇಲ್ಲ ಎಂದು ಹೇಳಲು ನಾನು ಯಾರು? ಎಲ್ಲೆಲ್ಲೋ ಇದ್ದರಂತೆ,ಯಾವು ಯಾವುದೋ ಊರುಗಳ ಹೆಸರು ಹೇಳಿದರು. ಆದರೆ ವ್ಯಕ್ತಿ ಮಹಾ ಬೋರು ! ಏನು ಮಾಡೋದು ತಡಕೋತಾ ಇದ್ದೆ.
ಒಂದೆರಡು ವಾರಗಳಾದಮೇಲೆ ನನ್ನನ್ನು ಅವರ ಮನೇಗೆ ಕರೆಯಲು ಪ್ರಾರಂಭ ಮಾಡಿದರು
“ನಿನ್ನನ್ನು ನನ್ನ ಹೆಂಡತಿ ಭೇಟಿ ಮಾಡಬೇಕಂತೆ’ ಎಂದು ದಿನಾ ಹೇಳಲು ಶುರುಮಾಡಿದರು.
“ ಅವರೇ ಇಲ್ಲಿ ಬರಬಹುದಲ್ಲ ಸಾಹೇಬರೇ” ಎಂದಿದ್ದಕ್ಕೆ
“ ಅವಳಿಗೆ ಸ್ವಲ್ಪ ಮೈ ಸರಿಯಾಗಿಲ್ಲ “ ಅಂದರು. ನನಗೇನೂ ಅವರನ್ನು ನೋಡುವ ಆಸಕ್ತಿ ಇರಲಿಲ್ಲ.
“ ಬೇರೆಯವರ ಹೆಂಡತೀರನ್ನ ನಾನು ನೋಡೋದು ನನ್ನ ಹೆಂಡತೀಗೆ ಇಷ್ಥವಿಲ್ಲ “ ಅಂತ ಹೇಳಿದೆ.
“ ಹ,ಹ.ಹ “ ಎಂದು ನಕ್ಕು ಬಿಟ್ಟರು.
“ಇಲ್ಲ, ಸಾಹೇಬರೇ, ಅದು ನಿಜ” ಎಂದು ನಾನು ಹೇಳಿದಾಗ
‘ಬಿಡಿ, ನಿಮ್ಮ ಮನೆವರಿಗೆ ಹೇಳಿ ಯೋಚನೆಮಾಡೋದಕ್ಕೆ ಎನೂ ಇಲ್ಲ, ನಾವಿಬ್ಬರೂ ವಯಸ್ಸಾದವರು “ ಎಂದರು.
ನಾನೇನೆ ”ನನಗೆ ಬೇರೆ ಹೆಂಗಸರ ಹತ್ತಿರ ಸಂಕೋಚ “ ಎಂದು ಹೇಳುತ್ತ ನಯವಾಗಿ ನಿರಾಕರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಅವರು ಹೆಚ್ಚು ಹೆಚ್ಚು ಒತ್ತಾಯಿಸಲು ಶುರುಮಾಡಿದರು. . ಅವರು ಕಣ್ಣೀರು ಸುರಿಸಲಾರಂಭಿಸಿದಾಗ ನನಗೆ ಕಷ್ಟವಾಯಿತು. ವಿಚಿತ್ರ! ನಾನು ಅವರ ಮನೆಗೆ ಹೋಗದ ಕಾರಣ ಅಳಬೇಕೇ! ಆ ಅಳು ನಿಲ್ಲದಾಗ ಕೊನೆಗೂ ನಾನು ಒಪ್ಪಿದೆ. ! ಒಂದು ವಾರದ ನಂತರ ನೋಡೋಣ ಎಂದೆ. ಮತ್ತೆ ಸಾಹೇಬರು ಕಣ್ಣೀರಿಟ್ಟರು. ಸರಿ, ಅಂತಿಮವಾಗಿ ನಾವು ನನ್ನ ಭೇಟಿಗೆ ಒಂದು ದಿನ ನಿರ್ಧರಿಸಿದೆವು. .
ಆ ದಿನ ಮುಂಜಾನೆ ನಾವು ಅವರ ಮನೆಗೆ ಹೊರಟೆವು.
“ನೀನು ನಮಗೆ ಅನೇಕ ಮಾವಿನಹಣ್ಣುಗಳನ್ನು ಕೊಟ್ಟಿದ್ದೀಯ! ನನ್ನ ಹೆಂಡತಿ ಮತ್ತು ನಾನು ಈ ಹಣ್ಣುಗಳನ್ನು ಚಪ್ಪರಿಸಿಕೊಂಡು ತಿಂದೆವು ”
“ನೀವು ಹಣ್ಣುಗಳನ್ನು ತಿನ್ನುತ್ತೀರಾ?”
“ಏಕೆ ಗೆಳೆಯ ಕೇಳುತ್ತಿದ್ದೀಯ?”
“ಏನಿಲ್ಲ! ನೀವು ತುಂಬಾ ದೊಡ್ಡವರು ಮತ್ತು ಮಾವಿನಹಣ್ಣು ತುಂಬಾ ಚಿಕ್ಕದಾಗಿರುತ್ತೆ..”
“ಆದರೆ ಅವು ತುಂಬಾ ರುಚಿಯಾಗಿರುತ್ತವೆ! ನಮ್ಮ ಹೊಟ್ಟೆಯನ್ನು ತುಂಬಲು ನಾವು ಎಲ್ಲಾ ರೀತಿಯ ವಸ್ತುಗಳನ್ನು ತಿನ್ನುತ್ತೇವೆ. ಆದರೆ ರುಚಿಗೆ! ನಿಮ್ಮ ಮರದ ಮಾವಿನಹಣ್ಣನ್ನು ಸೋಲಿಸಲು ಏನೂ ಇಲ್ಲ”
ಉಡಾಫೆ ಎನ್ನಿಸಿತು. ಇವರು ಬಾದಾಮಿ ಮತ್ತು ಅಲ್ಫೊನ್ಸೊ ಮಾವಿನಹಣ್ಣುಗಳನ್ನು ಬೇರೆ ಬೇರೆ ಅಂತ ಗುರುತಿಸಬಲ್ಲರೆ? ನಮಗೇ ಕಷ್ಟ, !
“ ನನ್ನ ಹೆಂಡತಿಗೆ ಈ ಹಣ್ಣುಗಳು ಬಹಳ ಇಷ್ಟ” ಎಂದರು
“ ಸಂತೋಷ” ಎಂದೆ
“ನನ್ನ ಹೆಂಡತಿ ಈ ಹಣ್ಣುಗಳನ್ನು ಪ್ರೀತಿಸುತ್ತಾಳೆ! ಈ ಮಾವಿನಹಣ್ಣನ್ನು ಯಾವಾಗಲೂ ತಿನ್ನುವವನು ತುಂಬಾ ಸಿಹಿ ಹೃದಯವನ್ನು ಹೊಂದಿರಬೇಕು ಎಂದು ಅವಳು ಹೇಳುತ್ತಿರುತ್ತಾಳೆ”
” ಏನು ?”
“ಹೌದು, ನನ್ನ ಗೆಳೆಯ! ಅದನ್ನೇ ನನ್ನ ಹೆಂಡತಿ ಹೇಳುತ್ತಾಳೆ. ಅದಕ್ಕಾಗಿಯೇ ನಾನು ನಿನ್ನನ್ನು ಅವಳ ಹತ್ತಿರ, ನಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದೇನೆ”. ನನಗೆ ನಂಬಲಾಗಲಿಲ್ಲ.
“ಆಕೆ ನನ್ನನ್ನು ತಿನ್ನಲು ಬಯಸುತ್ತಾರಾ?” ಎಂದು ಭಯದಿಂದ ಕೇಳಿದೆ
“ ಗೆಳೆಯಾ, ನಿನ್ನನ್ನಲ್ಲಾ ! ನಿನ್ನ ಹೃದಯವನ್ನು !”
ಇದು ಯಾವ ರೀತಿಯ ಸ್ನೇಹಿತ! ದೇವರೇ! ನಾನೇನು ಮಾಡಲಿ ? ನಾನು ಈ ವಿಶ್ವಾಸಘಾತುಕ ಪ್ರಾಣಿಯ ಮೇಲೆ ಕುಳಿತಿದ್ದೇನೆ. ನನಗೆ ಈಜುವುದು ಗೊತ್ತಿಲ್ಲ. ಈಜಲು ಹೋದರೂ ಈ ಭಯಾನಕ ವ್ಯಕ್ತಿ ಕ್ಷಣದಲ್ಲಿ ನನ್ನನ್ನು ಹಿಡಿಯುತ್ತಾನೆ. ನಾನು ವೇಗವಾಗಿ ಯೋಚಿಸಬೇಕು. ಆಗ ನನಗೆ ಒಂದು ಉಪಾಯ ಹೊಳೆಯಿತು.
“ಓ ಸಾಹೇಬರೇ ! ನಾವು ದಡದಿಂದ ಹೊರಡುವ ಮೊದಲೇ  ನೀವು ಹೀಗೆ ಅಂತ ನನಗೆ ಹೇಳಿದ್ರೆ?”
“ಏಕೆ? ವ್ಯತ್ಯಾಸವೇನು?”
“ನೀವು ನನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೀರಿ. ನಿಮ್ಮ ಹೆಂಡತಿ ನನ್ನನ್ನು ತುಂಡುಗಳಾಗಿ ಹರಿದು ತಿನ್ನುತ್ತಾರೆ. ಆದರೆ ಅದು ಕೇವಲ ಮೂರ್ಖ ಕೋತಿ ಮಾಂಸ ಮತ್ತು ಅದು ಸಿಹಿ ಅಲ್ಲ ಎಂದು ಅವಳಿಗೆ ಗೊತ್ತಾಗಿಬಿಡುತ್ತೆ.”
“ಏಕೆ?”
“ಏಕೆಂದರೆ ಈ ಸಮಯದಲ್ಲಿ ನನ್ನ ಹೃದಯ ನನ್ನ ಜೊತೆಯಲ್ಲಿಲ್ಲ. ನನ್ನ ಹೃದಯವನ್ನು ನನ್ನ ಹೆಂಡತಿ ಇಟ್ಟುಕೊಂಡಿದ್ದಾಳೆ. ಅದು ಅವಳ ಹತ್ತಿರವೇ ಇರುತ್ತೆ . ಅವಳು ನನ್ನ ಹೃದಯವನ್ನು ಕಾಪಾಡಿಕೊಳ್ಳುವವಳು ನೀವು ಹೀಗೆ ಅಂತ ಹೇಳಿದ್ದರೆ . ಈಗ ಈ ಪ್ರಯಾಣವೆಲ್ಲಾ ವ್ಯರ್ಥವಾಯಿತಲ್ಲಾ?”
“ಅವಳು ಅದನ್ನು ಏನು ಮಾಡುತ್ತಾಳೆ”?
“ಸರಿ, ಅವಳು ಅದರೊಂದಿಗೆ ಆಡುತ್ತಾಳೆ” ”
” ಏನು ನಿನ್ನ ಮಾತಿನ ಅರ್ಥ”?
” ನೋಡಿ, ಸಾಹೇಬರೆ, ನೀವು ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ನಾವು ತೀರದಿಂದ ತುಂಬಾ ದೂರ ಹೋಗುತ್ತಿದ್ದೇವೆ .. ನಿಮಗೆ ನನ್ನ ಹೃದಯ ಬೇಡವೇ ಅಥವಾ ಇಲ್ಲವೇ?”
” ಖಂಡಿತವಾಗಿ ಬೇಕು. ಅದಿಲ್ಲದಿದ್ದರ ನನ್ನ ಹೆಂಡತಿ ಮನೆಗೆ ಸೇರಿಸುವುದಿಲ್ಲ  ”
“ಹಾಗಾದರೆ ನನ್ನನ್ನು ಮತ್ತೆ ದಡಕ್ಕೆ ಕರೆದೊಯ್ಯಿರಿ. ನಾನು ಮರದ ಮೇಲೆ ಹೋಗಿ ನನ್ನ ಹೃದಯವನ್ನು ನನ್ನ ಹೆಂಡತಿಯಿಂದ ಪಡೆಯುತ್ತೇನೆ”
“ಅವಳು ಅದನ್ನು ನಿನಗೆ ಕೊಡುತ್ತಾಳಾ”?
“ಹೌದು, ಸಾಮಾನ್ಯವಾಗಿ ಕೊಡೋಲ್ಲ! ಬೇರೆ ಹೆಂಗಸರಿಗೆ ಕೊಟ್ಟು ಬಿಡ್ತೀನಿಅಂತ ಅವಳಿಗೆ ಹೆದರಿಕೆ “
“ ಹಾಗಾದರೆ?”
“ ಸ್ವಲ್ಲ ಪುಸಲಾಯಿಸಬೇಕಾಗುತ್ತೆ. “
ಸರಿ, ನಾವು ಮತ್ತೆ ಹಿಂದಿರುಗಿ ದಡಕ್ಕೆ ಹೊರಟೆವು. ಇಂಥವರ ಜೊತೆ ಸ್ನೇಹ ಮಾಡಿದೆನಲ್ಲಾ ನಾನು ! ನಾನೊಬ್ಬ ಮಹಾ ಮೂರ್ಖ ಎಂದು ಬೈದುಕೊಂಡೆ. ನೆಲವನ್ನು ಮುಟ್ಟಿದ ತಕ್ಷಣ, ನಾನು ಅವರ ಬೆನ್ನಿನಿಂದ ಹೊರಗೆ ಹಾರಿ ಮರದ ಮೇಲೆ ವೇಗವಾಗಿ ಮತ್ತು ಸಾಧ್ಯವಾದಷ್ಟು ಎತ್ತರಕ್ಕೆ ಏರಿದೆ. ಸಾಹೇಬರು ನನ್ನನ್ನು ಕರೆಯುತ್ತಲೆ ಇದ್ದರು  “ಗೆಳೆಯಾ, ನಿನ್ನ ಹೃದಯ ತೊಗೊಂಡು ಕೆಳಗೆ ಬಾ . ನನ್ನ ಹೆಂಡತಿ ಕಾಯ್ತಾ ಇರ್ತಾಳೆ , ತಡ ಆದ್ರೆ ಬೈತಾಳೆ“ .
“ ಇವಳು ಕೊಡ್ತಾ ಇಲ್ಲ ಸಾಹೇಬರೆ “ ಎಂದು ನಗುತ್ತ ಉತ್ತರಿಸಿದೆ. ನನ್ನ ಹೆಂಡತಿಯೂ , ನಾನು ನಕ್ಕಿದ್ದೂ ನಕ್ಕಿದ್ದೇ ! ಸಾಹೇಬರು ಸಂಜೆಯ ತನಕ ಕಾಯುತ್ತಲೇ ಇದ್ದು . “ ಗೆಳೆಯಾ,ನಾಳೆ ಬರ್ತೀನಿ, ಹೃದಯ ಇಸ್ಕೊಂಡು ಇಟ್ಟುಕೊಂಡಿರು” ಅಂತ ಹೊರಟು ಹೋದರು. ನನ್ನ ಹೆಂಡತಿ ಮತ್ತು ನಾನು ಮಧ್ಯರಾತ್ರಿಯಲ್ಲಿ ದೂರದ ಬೇರೆ ಮರಕ್ಕೆ ಸ್ಥಳಾಂತರಗೊಂಡೆವು.
(ಮೂಲ – ಪಂಚತಂತ್ರ)
 

‍ಲೇಖಕರು avadhi

21 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading