’ಗತಿ’ ಎನ್ನುವ ನಾಟಕ ನೋಡಿದ ಮೇಲೆ…
ಹೇಮಲತಾ
ಅದು ಬದುಕಿನ ಮುಸ್ಸಂಜೆಯಲ್ಲಿ ಅಸಂಖ್ಯ ಅನುಭವಗಳೊಳಗೆ ಕಾಲು ಇಳಿಬಿಟ್ಟು ಕೂತ ಇಳಿವಯಸ್ಸು. ನೆನಪುಗಳು ಸಾಕ್ಷಿಗಳಾಗಿ, ಸಾಕ್ಷಿಗಳು ಪ್ರಜ್ಞೆಯಾಗಿ ,ಪ್ರಜ್ಞೆ ಜಿಜ್ಞಾಸೆಯಾಗಿ ಅಳಿಯದ ಅಹಂಕಾರ ತಗ್ಗಿದರೂ, ಅರಳಿ ನಿಂತ ಸ್ವಾಭಿಮಾನ ಮುದುಡದೆ ಅಸಹಾಯಕತೆಯೊಂದಿಗೆ ಆತ್ಮಗೌರವ ಬದುಕಿನ ರಣಭೂಮಿಯಲ್ಲಿ ಮುಖಮುಖಿಯಾಗುವ ಕಾಲಘಟ್ಟ.ನಾಡಿ ಮಿಡಿಯುತ್ತಿದೆ, ಹೃದಯ ಬಡಿಯುತ್ತಿದೆ,ದೇಹ ಉಸಿರಾಡುತ್ತಿದೆ ಆದ್ದರಿಂದ ಮನುಷ್ಯ ಇನ್ನು ಸತ್ತಿಲ್ಲ, ಬದುಕ್ಕಿದ್ದಾನೆ .ತನ್ನೆಲ್ಲ ಸ್ಥಿತ ಪ್ರಜ್ಞೆಗಳನ್ನು ಕಳೆದುಕೊಂಡರು ಬಯಾಲಜಿಕಲ್ ಸೈಕಲ್ ಕೆಲಸ ನಿರ್ವಹಿಸುತ್ತಿದೆ ಆದ್ದರಿಂದ ಇನ್ನು ಬದುಕ್ಕಿದ್ದಾನೆ ಎನ್ನುತ್ತಾ ಸತ್ತಂತಿರುವ ಪ್ರಜ್ಞೆ,ಮತ್ತು ಜೀವಂತವಿರುವ ದೇಹದ ಕುರಿತಾಗಿ ವ್ಯಂಗ್ಯದ ಕಿಚ್ಚು ಹೊತ್ತಿಸುತ್ತ ತಾತನ ಪಾತ್ರ ಶುರುವಾಗುತ್ತದೆ .
ಮೂರು ಮೂರು ಮಕ್ಕಳ್ಳಿದ್ದರು ನಿನ್ನದೇ ಪ್ರಪಂಚ ಕಟ್ಟಿಕೊಂಡು ಈ ಕಡೆಗಾಲದಲ್ಲಿ ಒಂಟಿ ಬಾಳು ಆರಿಸಿಕೊಂಡು ಸ್ವತಂತ್ರ ಬದುಕು ಬದುಕಬಲ್ಲೆ ಎನ್ನುವ ಅಹಂಕಾರ ನಿನ್ನದು ಎಂದು ಚೇಡಿಸುತ್ತಾ ಚೇಧಿಸುತ್ತಾ ಮಮ್ಮುಲ ಮರಗುತ್ತಲೇ ತಾತನಿಗೆ ಊಟ ಹೊತ್ತುತರುವುದರಿಂದ ಮೊಮ್ಮೊಗಳ ಪಾತ್ರ ಶುರುವಾಗುತ್ತದೆ .
ಸೇವೆ ಎನ್ನುವ ಹೆಸರಲ್ಲಿ ಮರಣ ಶಯ್ಯೆಯಲ್ಲಿ ಮಲಗಿದವರ ಸಾವನ್ನು ಅಪ್ರಜ್ಞಪೂರ್ವಕವಾಗಿಯೋ ಪ್ರಜ್ಞಾಪೂರ್ವಕವಾಗಿಯೋ ಕಾಯುತ್ತಾ ನಿಲ್ಲುವ ಮಕ್ಕಳು, ಸಂಭಂದಿಕರುಗಳ ತಣ್ಣನೆಯ ಕ್ರೌರ್ಯದ ಕಟುಸತ್ಯದ ಬಿಸಿಗೆ ಸುಟ್ಟುಕೊಳ್ಳಬಯಸದ ತಾತ ತನ್ನಂತೆ ಅವಿರತ ಭಯ ,ತಲ್ಲಣ,ಜಿಗುಪ್ಸೆಗಳಲ್ಲಿ ತೊಳಲಾಡುವ ಸಮಾಜದ ಅಂತ ಎಷ್ಟೋ ಹಿರಿಜೀವಗಳ ಪ್ರತಿನಿಧಿಯಾಗಿ ನಿಲ್ಲುತ್ತಾರೆ .
ರೂಪ,ಆಕಾರ, ಆಕರ್ಷಣೆಗಳ ಬಲುವಳಿಯನ್ನು ಹುಟ್ಟಿನಿಂದ ಹೊತ್ತು ತಂದಿರದ ಕಾರಣಕ್ಕೆ ಅತ್ತ ಕೆಲಸವೂ ಸಿಗದೇ , ಇತ್ತ ಮದುವೆಗೆ ಹುಡುಗನೂ ಸಿಗದಂತಾಗಿ ಐಡೆಂಟಿಟಿ crisis ನಲ್ಲಿ ಬಳಲುತ್ತಾ, ಏರುತ್ತಿರುವ ವಯಸಿನೆದುರು ಹತಾಶಳಾಗುತ್ತ , ಪುರುಷ ಅಹಂಕಾರದ ಕರಿನೆರಳಲ್ಲಿ ನರುಳುತ್ತ ಉಳಿದ ಮೊಮ್ಮಗಳು ವಯಸು ಮೀರಿದರೂ ಮದುವೆಯಾಗದೆ ಉಳಿದ ಹೆಣ್ಣುಮಕ್ಕಳ ತವಕ, ತಾಕಲಾಟಗಳ ಪ್ರತಿನಿಧಿಯಾಗಿ ನಿಲ್ಲುತ್ತಾಳೆ .ಬದುಕಲು ತನಗೂ ಒಂದು ಸ್ವಂತದ ಬದುಕು,ಪ್ರೀತಿಸಲು ಒಲುಮೆಯ ಗಂಡ, ಹಡೆಯಲು ಮುದ್ದಾದ ಮಕ್ಕಳು,ನಡೆಸಲು ಚೆಂದದ ಸಂಸಾರಬೇಕು ಎಂದು ಹಂಬಲಿಸುತ್ತಾಳೆ ,ಕನವರಿಸುತ್ತಾಳೆ.

ಪ್ರಾಣಿ ಪಕ್ಷಿಗಳು ಸೃಷ್ಟಿಗಾಗಿ ಯೋಗ್ಯವಾದುದನ್ನು ಆರಿಸಿಕೊಂಡರೆ ,ಪುರುಷ ಮಾತ್ರ ಸುಖಕ್ಕಾಗಿಯೇ ಯೋಗ್ಯವಾದುದನ್ನು ಕೇಳುತ್ತಾನೆ ಎನ್ನುವ ಇನ್ನಿಲ್ಲದಂತ ಕೋಪ, ಸಿಟ್ಟು,ಅಕ್ರೋಶ ಅವಳದ್ದು . ತನ್ನ ಯೋಗ್ಯತೆಯ ಪರಾಮರ್ಶೆಯ ಅಗತ್ಯವನ್ನು ಎಂದೂ ಅರಿವುಮಾಡಿಕೊಳ್ಳದ ಗಂಡಸಿಗೆ ಹೊಂದಲು ಅನುಭವಿಸಲು ಕುರುಡಿ, ಕುಂಟಿ , ಮುದುಕಿ ಯಾರಾದರು ಆದೀತು , ಆದರೆ ಮದುವೆಗೆ ಮಾತ್ರ ಸುಂದರವಾದ ಹುಡುಗಿಯೇ ಬೇಕು ಎಂದು ಗುಡುಗುತ್ತಾ ,ಜಿಗುಪ್ಸೆಪಟ್ಟುಕೊಳ್ಳುತ್ತಲೇ ವ್ಯವಸ್ತೆಯನ್ನು ಮೊಮ್ಮಗಳು ಜಾಲಾಡುವಾಗ, ತಾತ ತನ್ನ ಬದುಕ ಹರಿವಾಣ ಬಿಚ್ಚುತ್ತಾ ತೆರೆದುಕೊಳ್ಳುತ್ತಾನೆ.
ಇಬ್ಬರ ನಡುವಿನ ಮಾತುಕತೆಯಲ್ಲಿ ಸಂಸಾರದ ಗುಟ್ಟುಗಳು, ಸಂಬಂಧಗಳ ಟೊಳ್ಳುಗಳು, ಕ್ರೌರ್ಯದ ಮುಖವಾಡಗಳು, ಬದುಕಿನ ಹೂರಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವರವರದೇ ಬದುಕಿನ ಅಸಹಾಯಕತೆಗಳಿಗೆ, ನೋವುಗಳಿಗೆ ಧ್ವನಿ ಬಂದಂತೆ ಸಂಭಾಷಣೆಗಳು ಬಿರುಸಾಗಿ, ಕದಡದಷ್ಟು ಓಘ ಪಡೆದುಕೊಂಡು, ಉಸಿರು ಬಿಗಿಹಿಡಿಯುವಷ್ಟು ತೀಕ್ಷ್ಣವಾಗಿ ಹಲವು ವಿಷಯಗಳ ಹೊತ್ತ ಕತೆ ದಿಬ್ಬಣ ಹೊರಡುತ್ತದೆ .
ಸಂಸಾರಕ್ಕೆ ಗಂಡ ಹಣ ಒದಗಿಸಬೇಕು, ಹೆಂಡತಿ ಬೇಯಿಸಿ ಹಾಕಬೇಕು ಎನ್ನುವ ತಾತನ ಅಪ್ಪನ ಕಾಲದಿಂದ ಹಿಡಿದು , ಗಂಡ ಹೆಂಡತಿ ಇಬ್ಬರು ಉನ್ನತ್ತ ಹುದ್ದೆಯಲ್ಲಿರುವ ತಾತನ ಮಗನ ಕಾಲದವರೆಗೂ,ಮೊಮ್ಮೊಗಳನ್ನು ಸೇರಿಸಿ ನಾಲ್ಕು ಜನರೇಶನ್ಗಳೇ ಸರಿದು ಹೋದರು ಬದಲಾಗದ ಅಪೇಕ್ಷೆ , ಮನಸ್ತಿತಿಗಳನ್ನು ವಿಶ್ಲೇಷಿಸುತ್ತದೆ .
ನನ್ನ ಸಮ ನೀನಿಲ್ಲ ಎನ್ನುವ ಗಂಡಸಿನ ಅಹಂಕಾರ ಆ ಕಾಲದ್ದಾದರೆ , ನನ್ನ ಸಮ ಅಥವ ಹೆಚ್ಚು ಓದ್ದಿದ್ದೀಯ ಎನ್ನುವ ಗಂಡಸಿನ ಅಸೂಯೆ ಈ ಕಾಲದ್ದು .ಜವಾಬ್ದಾರಿಗಳಿಂದ ನುನುಚಿಕೊಂಡು ಓಡಿ ಹೋಗುವ ಗಂಡ ಎಲ್ಲಾ ಕಾಲಕ್ಕೂ ಇದ್ದೆ ಇದ್ದಾನೆ .ನೀನು ದುಡಿಯುತ್ತೀಯ ಜವಾಬ್ದಾರಿಯನ್ನು ನೀನೂ ಹೊರಬಹುದು ಮತ್ತು ನೀನೆ ಹೊತ್ತುಬಿಡು ಎನ್ನುವ ವರ್ಗಾವಣೆಯಿಂದ ಹಿಡಿದು , ನೆಲದ ಗುಣದಷ್ಟೇ ಬೀಜದ ತಳಿಯೂ ಮುಖ್ಯವಾದರು ಹೆಗ್ಗಣ ಹೆತ್ತಿದ್ದೀಯ ಎಂದು ಹೆಣ್ಣನ್ನೇ ಆರೋಪಿಸುವ ಪುರುಷ ಪ್ರಧಾನ ಇಲ್ಲೂ ಇದ್ದಾನೆ . .
ಭಾರತೀಯ ಕೌಟಮ್ಬಿಕ ವ್ಯವಸ್ತೆಯಲ್ಲಿ ಇಲ್ಲವೇ ಇಲ್ಲ ಎನ್ನಿಸುವಷ್ಟು ತೆಳುವು ಸಾಂಗತ್ಯದ ಪರಿಕಲ್ಪನೆ.ಇಬ್ಬರು ಶಿಕ್ಷಿತರಾದರು ಸಾಂಗತ್ಯವಿಲ್ಲದೆ ಒಬ್ಬನೇ ನಡುಮನೆಯಲ್ಲಿ ಕೂತು ಟೀವಿ ರಿಮೋಟ್ ಬದಲಿಸುವ , ಬಾಲ್ಕನಿಯಲ್ಲಿ ಬಾಟಲು ಹಿಡಿದು ಒಂಟಿ ಕೂರುವ ಗಂಡ ,ಅಡುಗೆ ಮನೆಯ ಕೆಲಸದಲ್ಲಿ,ಉದ್ಯೋಗದ ಒತ್ತಡದಲ್ಲಿ ,ಮಕ್ಕಳ ಮುತುವರ್ಜಿಯಲ್ಲಿ ಒಂಟಿಯಾದ ಹೆಂಡತಿ ಕಾಣಲು ಸಿಗುತ್ತಾರೆ . ನಾಳಿನ ಭವಿಷ್ಯಕ್ಕೆ ಇಂದು ಬದುಕುವುದ ಬಿಟ್ಟು ದುಡ್ಡು ವಸ್ತುಗಳನ್ನು ಶೇಖರಿಸುವಲ್ಲಿ ಪ್ರತ್ಯೇಕವಾಗಿ ಮಗ್ನರಾದ ಅದನ್ನೇ ಸಂಸಾರದ ಸಾರ, ಬದುಕಿನ ಸಾರ ಮಾಡಿಕೊಂಡ ಆಸೆಬುರುಕ ಮನುಷ್ಯರ ವಿಡಂಬನೆ ಇಲ್ಲಿದೆ .
ತಾತ ತನ್ನ ಬಾಲ್ಯಕ್ಕೆ ಮರಳುತ್ತಾನೆ.ಕೋಪ , ಕ್ರೌರ್ಯ , ಹಿಂಸೆಗಳೇ ಮೈದಳೆದಂತ ಅಪ್ಪ ಬಡತನದ ಮನೋರಂಜನೆಗೆ ಮಗನನ್ನೇ ಹಿಡಿದು ಹೊಡೆಯುತ್ತ ಕಸಿದುಕೊಂಡ ಬಾಲ್ಯ, ತನ್ನ ವ್ಯಕ್ತಿತ್ವದಲ್ಲಿ ಬಿತ್ತಿದ ಅಂಜಿಕೆ,ಬದುಕಲ್ಲಿ ಸೇರಿಸಿದ ಅಸಹಾಯಕತೆ ಮಕ್ಕಳ ಮೇಲಿನ ಕಿರುಕುಳದ ಬಗ್ಗೆ ಹೇಳುತ್ತದೆ . ಇಂತ ಭಯಗ್ರಸ್ತ ವಾತಾವರಣದಲ್ಲಿ, ಹೆಣ್ಣಾದ ತಾಯಿಯು ತನ್ನ ಭಾವಾಸಮಾಪ್ತಿಯನ್ನು ಮಗುವಿಗೆ ಹಾಲೂಡಿಸುತ್ತ ಕಂಡುಕೊಂಡು ಮಗನನ್ನು ಬೆಳೆಸುವಲ್ಲಿ ಹೇಗೆ ಮೃದುವಾಗುತ್ತಾಳೆ ಎನ್ನುವ ಸೂಕ್ಷ್ಮ ಒಳನೋಟವಿದೆ .
ಅಷ್ಟರಲ್ಲಿ ಮೊಮ್ಮಗಳು ವಯಸಿಗೆ ಬಂದಾಗಿನಿಂದ ತನ್ನ ತಂದೆಯ ತಮ್ಮನೆನಿಸಿಕೊಂಡ ಚಿಕ್ಕಪ್ಪನಿಂದಲೇ ದೈಹಿಕ ಅತ್ಯಾಚಾರಕ್ಕೆ ಬಲಿಯಾಗಿರುವ ದಾರುಣ ಸತ್ಯ ಬಯಲಾಗುತ್ತದೆ . ತೃಷೆಗೆ ಹೆಣ್ಣನ್ನು ಭೋಗದ ವಸ್ತು ಮಾಡಿಕೊಳ್ಳಲು ಎಲ್ಲ ಕಡೆಗೂ ಹವಣಿಸುವ ಗಂಡಸರು ಶಾಲೆಯ ಮಾಸ್ತರರಲ್ಲಿಯು ಇಣುಕ್ಕುತ್ತಾರೆ .
ನಡೆಯುತ್ತಿರುವ ಅವಘಡವನ್ನು ಮನೆಯವರಿಗೆ ಮನದಟ್ಟು ಮಾಡಿಸಲಾಗದೆ, ಯಾರನ್ನು ನಂಬಿಸಲಾರದೆ ಸತತ 15 ವರ್ಷಗಳ ಕಾಲ ನಿರಂತರ ಅತ್ಯಾಚಾರಕ್ಕೊಳಗಾಗುತ್ತ ,ಮೈಮನಸುಗಳು ಮೈಲಿಗೆಯಾದಂತೆ ಪ್ರತಿಕ್ಷಣ ತೊಳಲಾಡುವ, ನರಳಾಡುವ ಮೊಮ್ಮಗಳ ಸ್ಥಿತಿಗೆ ನೆರವಾಗದೇ ತಟಸ್ತ ನಿಲ್ಲುವ ತಾತನ ಮೌನ ಅಸಹಾಯಕತೆಯ ದ್ಯೋತಕವಷ್ಟೇ ಅಲ್ಲ ಅಹಂಕಾರದ ಧ್ಯೋತಕವೂ ಇರಬಹುದ ಎನಿಸಿ ತೊಡಗುತ್ತದೆ .
ನಾಟಕ ಪೂರ್ತಿ ಪುರುಷಹಂಕಾರದ ವಿಜೃಂಭಣೆಯಾಯಿತೇನೋ ಎನಿಸುತ್ತಿರುವಾಗಲೆ ಸ್ನೇಹಿತನೊಂದಿಗಿನ ಅಕ್ರಮ ಸಂಭಂದಕ್ಕೆ ತಾತನ ಹೆಂಡತಿ ಪಡೆದ ಅಕ್ರಮ ಸಂತಾನ ಆ ಚಿಕ್ಕಪ್ಪ ಎನ್ನುವ ರಹಸ್ಯವನ್ನು ತಾತ ಬಿಚ್ಚಿಟ್ಟಾಗ ಸಂಭಂದಗಳಲ್ಲಿನ ಮೋಸಕ್ಕೆ, ಕ್ರೌರ್ಯಕ್ಕೆ ಯಾರು ಬೇಕಾದರೂ ತುತ್ತಾಗಬಹುದು ಇದು ಯಾರೊಬ್ಬರ ಪರವಾದ ಕತೆಯು ಅಲ್ಲ ಎನಿಸುತ್ತದೆ .
ಜೊತೆನಿಂತು ಆಗುತ್ತಿರುವ ದುರಂತಗಳಿಂದ ಪಾರುಮಾಡು ಎಂದು ಮೊಮ್ಮಗಳು ಎಷ್ಟೇ ಅಂಗಾಲಾಚಿ ಬೇಡಿಕೊಂಡರು ,ಪರಿಪರಿಯಾಗಿ ಗೋಳಾಡಿದರು ಸಹ ಸಂಸಾರದ ಗುಟ್ಟುಗಳನ್ನು, ಸಂಬಂಧಗಳ ಸ್ವಾರ್ಥವನ್ನು ಹೊಟ್ಟೆಯಲ್ಲಿ ಅಡಗಿಸಿಕೊಂಡು, ಅರಗಿಸಿಕೊಂಡು ಅಸಹಾಯಕತೆಗೆ ಕೈ ಚೆಲ್ಲಿ ಇಲ್ಲಿನವರೆಗೂ ಮರ್ಯಾದೆಯಿಂದ ಬದುಕ್ಕಿದ್ದೇನೆ , ಮರ್ಯಾದೆಯಿಂದಲೇ ಸಾಯಲುಬಿಡು ಎನ್ನುತ್ತ ತಾತ ನಿರುಪಾಯನಾಗುತ್ತಾನೆ. ಅಲ್ಲಿಗೆ ಅದು ವ್ಯವಸ್ತೆಯೊಳಗಿನ ಕ್ರೌರ್ಯವನ್ನು ಬೆಳಕಿಗೊಡ್ಡುತ್ತದೆ. ಯಾರದೋ ತಪ್ಪುಗಳು, ಯಾರದೋ ಅಹಂಕಾರ, ಮತ್ಯಾರದೋ ಕ್ರೌರ್ಯ,ಇನ್ಯಾರದೋ ಹಿಂಜರಿಕೆ ದೌರ್ಬಲ್ಯಗಳು ಒಬ್ಬೊಬ್ಬರ ಬದುಕಲ್ಲೂ ಸಮಸ್ಯೆಗಳನ್ನು ಸೃಷ್ಟಿಸಿ ಒಂದಕ್ಕೊಂದು ಕಗ್ಗಂಟಾಗಿ ಬಿಡಿಸಲಾಗದಷ್ಟು ಕ್ಲಿಷ್ಟವಾಗಿ ಬದುಕನ್ನು ಸತಾಯಿಸಲು , ನಿಯಂತ್ರಿಸಲು ತೊಡಗುವ ಸಾಂಸಾರಿಕ ವ್ಯವಸ್ತೆಯ ಚಿತ್ರಣವಿದೆ.
ಮನೆ, ಮಾನ ಮರ್ಯಾದೆ ಎನ್ನುವ ಜಿಜ್ಞಾಸೆಗಳು ದುರಂತಗಳ ಕೆಂಡಕ್ಕೆ ಮುಚ್ಚಿದ ಬೂದಿಯಾಗಿ , ನಾಗರೀಕ ಸಮಾಜದ standard ಗಳು ನಿರ್ಮಿಸುವ ಭಯ, ಮಿತಿಯಲ್ಲಿ ಮನುಷ್ಯತ್ವವನ್ನು ಪ್ರಪಾತಕ್ಕೆ ದೂಡುತ್ತದೆ. ಒಳಗೊಳಗೇ ಮನಸುಗಳು ಬೇಯುತ್ತವೆ .
ಮನೆ ಹೊರಗಡೆ ನಡೆದ ಶೋಷಣೆಗಳನ್ನು, ಹೊರಗಡೆಯವರು ನಡೆಸಿದ್ದು ಎಂದು ಅಸಹ್ಯಿಸಿ ಮರೆಯಬಹುದು , ಆದರೆ ರಕ್ತಸಂಬಂಧ- ಒಳಸಂಬಂಧಗಳಲ್ಲೇ ಬಿಡಿಸಿಕೊಳ್ಳಲಾಗದ, ಉತ್ತರವಿಲ್ಲದ ಇಕ್ಕೆಲಗಳು ಹಿಡಿಚಾಚಿ ರಕ್ತ ಹೀರುವುದು ಎನ್ನುವ ಇಕ್ಕಟಿಗೆ ವಿಷಯ ತಿಳಿದ ಮೇಲೆ ಮೊಮ್ಮಗಳು ತನಗಾಗಿ ತಾನೇ ಎದ್ದು ನಿಲ್ಲುತ್ತಾಳೆ . .ಚಿಕ್ಕಪ್ಪನ ಅಸ್ತಿತ್ವವನ್ನು ಅಕ್ರಮ ಎಂದು ಘೋಷಿಸುತ್ತ ಪುರುಷಹಂಕಾರವನ್ನು ಕೊಲ್ಲುವ ನಿರ್ಣಯಮಾಡುತ್ತಾಳೆ . ವಿರೋಧದ ನಂತರವೂ ಮುಗಿಯದ್ದಿದ್ದ ಅಸಹ್ಯಕ್ಕೆ , ಒಂದು ಹಂತದಲ್ಲಿ ಒಗ್ಗಿ ಹೋದ ,ಶಾಮೀಲಾದ ಪಾಪಪ್ರಜ್ಞೆಗೆ,ಚಿಕ್ಕಪ್ಪ ಹೊರಗಡೆಯವನು ಎಂದು ನಂಬಿಸಿಕೊಳ್ಳುವ ಮೂಲಕ ಮೈಲಿಗೆಗಳಿಂದ ತನ್ನನ್ನೇ ಬಿಡುಗಡೆಗೊಳಿಸಿಕೊಳ್ಳುತ್ತಾಳೆ .
ಇತ್ತ ತಾತ ತನ್ನ ನಿರ್ಲಕ್ಷ್ಯದಿಂದ ಸತ್ತ ಅಸಹಾಯಕ ತಾಯಿಯನ್ನು ಮೊಮ್ಮಗಳಲ್ಲಿ ನೋಡಿ ಪಶ್ಚಾತಾಪ ಪಟ್ಟುಕೊಳ್ಳುತ್ತ , ಬೌಧಿಕ ವ್ಯಾಪಾರ ಮುಗಿಸುವಲ್ಲಿಗೆ ನಾಟಕಕ್ಕೆ ತೆರೆಬೀಳುತ್ತದೆ .
ಅತಿ ಸೂಕ್ಷ್ಮ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮನ ಮಿಡಿಯುವಂತೆ ಬಿಂಬಿಸುವಲ್ಲಿ ಸಂಪೂರ್ಣ ಯಶಸ್ವಿಯಾಗುವ ನಾಟಕ, ಹಿಂದಿನ ಘಟನೆಗಳ ತರ್ಕದಿಂದಷ್ಟೇ ಅದರಷ್ಟಿಗೆ ಅದು ವಿಧಿವತ್ತಾದ ಪರಿಹಾರದ ಮಾರ್ಗವನ್ನು ಬಿಟ್ಟು , ಪಾತ್ರಗಳ ಮಿತಿಯನ್ನು ಮೀರಿಸಿ ಪರಿಹಾರ ಸೂಚಿಸುವಲ್ಲಿ ತೆರೆದುಕೊಂಡಿದ್ದಿದ್ದರೆ ಸಕಾರಾತ್ಮಕ ಮತ್ತು ನೈತಿಕ ಪರಿಣಾಮ ಬೀರುವಲ್ಲಿ ಮತ್ತಷ್ಟು ಯಶಸ್ವೀಯಾಗಬಹುದಾದ ಸಾಧ್ಯತೆ ಇತ್ತು ಎನಿಸುತ್ತದೆ .ಅಮ್ಮನ ನೋವು ಗೊತ್ತೇ ಆಗಲ್ಲ, ಹೆಂಡತಿ ನೋವು ಗೊತ್ತಾಗುತ್ತೆ ಆದರೆ ಅಹಂಕಾರದಲ್ಲಿ ಅರ್ಥ ಮಾಡಿಕೊಳ್ಳೋದಿಲ್ಲ, ಮಕ್ಕಳ ನೋವು ಅರ್ಥವಾಗುತ್ತೆ ಆದರೆ ತೋರಿಸಿಕೊಳ್ಳೋದಕ್ಕೇ ಹೋಗೋದಿಲ್ಲ, ಆದರೆ ಮೊಮ್ಮಕ್ಕಳ ನೋವು ಹಾಗಲ್ಲ, ಅದು ನಮ್ಮದೇ ನೋವು ಅಂತೆನ್ನುವ ತಾತ ಮೊಮ್ಮೊಗಳ ಸಮಸ್ಯೆಗೆ ಪ್ರತಿಕ್ರಿಯಿಸಬೇಕಾಗಿ ಬಂದಾಗ ವಹಿಸುವ ಮೌನ ನಿರಾಸೆ ಮೂಡಿಸುತ್ತದೆ.ಬದುಕು ಹುಳು ಹತ್ತಿದರೆ ಪರವಾಗಿಲ್ಲ ಸತ್ತ ಮೇಲೆ ಹುಳು ಹತ್ತಬಾರದು ಎನ್ನುವ ವಿಡಂಬನೆಯ ತಾತನ ಪ್ರಜ್ಞೆ ಮೊಮ್ಮಗಳ ವಿಷಯಕ್ಕೆ ಎಚ್ಚೆತ್ತುಕೊಂಡು ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದಿದ್ದರೆ ಮತ್ತಷ್ಟು ಸಶಕ್ತವಾದ ಅಂತ್ಯ ಸಂಭವವಾಗಿರಬಹುದಿತ್ತೇನೋ ಎನಿಸುತ್ತದೆ .
ಖಾಸಗಿ ಕಂಪನಿಯಲ್ಲಿ ಕೆಲಸಗಿಟ್ಟಿಸಲು ಹೆಣ್ನಿಗಿರಬೇಕಾದ ಪ್ರಮುಖ ಮತ್ತು ಏಕೈಕ ಅರ್ಹತೆ ಸೌಂದರ್ಯ , ಐಎಎಸ್ ಅಧಿಕಾರಿಯಾದ ಗಂಡ ಹೆಂಡತಿ ಹೆಚ್ಚಿಗೆ ಓದಿದವಳೆಂದು ಪಡುವ ಅಸೂಯೆ , ಅಂತ ಗಟ್ಟಿ ಹಿನ್ನಲೆಯಲ್ಲಿದ್ದು ಮಗಳಿಗೆ ಗಂಡು ಸಿಗದೇ ಉಳಿದಿದ್ದು, ಬಾಯಿ ಕಳೆದು ವಿವರಿಸಿದಾಗಲು doctor ಸೇರಿದಂತೆ ಯಾರೊಬ್ಬರು ಅತ್ಯಾಚಾರದಂತ ಗಹನ ವಿಷಯವನ್ನು ಪರಿಗಣಿಸದೆ ಹೋದಂತಹ ಸಂಪೂರ್ಣ ಒಪ್ಪಲಾರದ ಸಣ್ಣಪುಟ್ಟ ಅಂಶಗಳು , ತಾತನ ರಕ್ತವಲ್ಲದ್ದಿದ್ದರು ಅಜ್ಜಿಯಲ್ಲಿ ಹುಟ್ಟಿದ ಮಗ ಚಿಕ್ಕಪನೆ ಆಗಬಹುದ ಎನ್ನುವ ಸಾಧ್ಯತೆ , ಹೆಣ್ಣನ್ನು ನೋಡುವ ಪ್ರತಿ ಗಂಡಸಿನ ಕಣ್ಣಲ್ಲೂ ಕಾಮ ಕೆರಳುತ್ತದೆ ಎನಿಸುವಂತಹ ಪರಿಣಾಮಗಳನ್ನು, ಎಲ್ಲರ ಮನೆಗಳಲ್ಲಿ ,ಎಲ್ಲರ ಮನಸಲ್ಲಿ ನಾಜೂಕಾಗಿ ಇರಬಹುದಾದ ಎಷ್ಟೋ ಸಮಸ್ಯೆಗಳನ್ನೂ ಒಂದೇ ಮನೆಯ ಕತೆ ಮಾಡಿ ಅಳವಡಿಸುವ ಶ್ಲಾಘನೀಯ ಪ್ರಯತ್ನದ ಭಾಗವಾಗಿ ಸುಲಭವಾಗಿ ನಿರ್ಲಕ್ಷಿಸಬಹುದು.
ಇಡಿ ನಾಟಕದ ಜೀವಾಳ ಮತ್ತು ಬಂಡವಾಳ ಸಂಭಾಷಣೆ ಮತ್ತು ಪಾತ್ರಧಾರಿಗಳ ರೋಮಾಂಚಕ ಅಭಿನಯ .
ಪುಸ್ತಕವೊಂದನ್ನು ಓದುವಾಗ ಮನದಲ್ಲಿ ಮೂಡುತ್ತಾ ಹೋಗುವ ಚಿತ್ರಣದಂತೆ , ಕೇವಲ ಎರಡು ಪಾತ್ರದಾರಿಗಳ ಮಾತುಗಳು flashback ಕತೆಗಳನ್ನು ಅತ್ಯಂತ ಮನೋಹರವಾಗಿ ನೋಡುಗನ ಮನದಲ್ಲಿ ಮೂಡಿಸುತ್ತ ಹೋಗುತ್ತದೆ . ನಾಟಕದ ರಚನೆಕಾರ ಮತ್ತು ಪಾತ್ರಧಾರಿಯಾದ ಸೇತುರಾಂ ಮತ್ತು ದೀಪರ ಮೇರು ನಟನೆ ಪ್ರತಿ ಕ್ಷಣವೂ ಪ್ರೇಕ್ಷಕ ಸೀಟಿನ ತುದಿಗೆ ಗಟ್ಟಿಕೂರುವಷ್ಟು , ಒಂದು ಮಾತನ್ನು ನಿರ್ಲಕ್ಷಿಸದಷ್ಟು ಮನೋಜ್ಞವಾಗಿ ಮೂಡಿಬಂದಿದೆ . ., ಪಾತ್ರಧಾರಿಯೇ ಪಾತ್ರವಾದಷ್ಟು ತನ್ಮಯತೆಯ ಸಹಜ ಭಾವಾಭಿನಯ,ಧ್ವನಿಯ ಏರಿಳಿತ, ಒಂದು ಪಾತ್ರಧಾರಿ ಪ್ರತಿಕ್ರಿಯಿಸುವಾಗ ಮತ್ತೊಂದು ವಹಿಸುವ ಮೌನ ಕೂಡ ಕಣ್ಣುಗಳಲ್ಲೇ ಮಾತಾಗಿ ಎಷ್ಟು ಜೋರಾಗಿ ಪ್ರತಿಧ್ವನಿಸುತ್ತದೆ ಎಂದರೆ ಅಂತಹ ಅನೂಹ್ಯ ಅನುಭವವನ್ನು ಅಸ್ವಾಧಿಸಿಯೇ ಪಡೆಯಬೇಕು . ಒಂದೇ ಅಂಕದ ಪರದೆ , ಕೆಲವೇ ಕೆಲವು ಪರಿಕರಗಳ ಮಧ್ಯೆ,ಎರಡು ಪಾತ್ರಗಳು ಸೃಷ್ಟಿಸುವ ಕತಾಲೋಕ ರೋಚಕ ಯಶಸನ್ನು ಪಡೆದ ವಿನೂತನ ಪ್ರಯೋಗ.ನಾಟಕದ ಮಧ್ಯೆಯೂ ,ನಾಟಕದ ನಂತರವೂ ಕಾಡುವ ಗಾಢ ಮೌನ ,ಅಂತರಂಗವನ್ನು ಕಲಕುವ ಪ್ರಶ್ನೆಗಳ ಅನುಭಾವಕೆ ರಂಗಾಸಕ್ತರೆಲ್ಲರು ಒಮ್ಮೆ ಯಾದರು ನೋಡಲೇಬೇಕಾದ ನಾಟಕ ಎಂದು ನಿಸಂಕೋಚವಾಗಿ ಹೇಳಬಹುದು.






ಚೆನ್ನಾಗಿದೆ. ಆದರೆ ಯಾವ ನಾಟಕ,ರಚನೆ ಯಾರದು ಮುಂತಾದ ವಿವರಗಳು ಕಾಣಲಿಲ್ಲ.
Chalam, ella keli seethe ramanige yenaga beku? endu kelida hagaytallaari!!
ಕಿರುತೆರೆ ನಿರ್ದೇಶಕ ಎಸ್.ಎನ್.ಸೇತೂರಾಂ ಅವರು ರಚಿಸಿ, ನಿರ್ದೇಶಿಸಿರುವ ಗತಿ ನಾಟಕ-ಸ್ವಾತಂತ್ರ್ಯ ನಂತರದ 60 ವರ್ಷಗಳ ಆಗುಹೋಗುಗಳ ಮತ್ತು ಒಂದು ನಗರದ ಮಧ್ಯಮ ವರ್ಗದ ಕುಟುಂಬದ ಮೇಲೆ ಅದರ ಪರಿಣಾಮ… ಇದರ ಸೂಕ್ಷ್ಮಗಳಣ್ನು ಹಿಡಿಯುವ ಪ್ರಯತ್ನವೇ ಗತಿ ನಾಟಕವಾಗಿದೆ. 90ನಿಮಿಷಗಳ ನಾಟಕದಲ್ಲಿ ಬರುವ ಪಾತ್ರಗಳು ಎರಡು-80 ವರ್ಷದ ಮುದುಕ ಮತ್ತವನ ಮದುವೆ ಆಗದ, ನಿರುದ್ಯೋಗಿ, ಸುಶಿಕ್ಷಿತ ಮೊಮ್ಮಗಳೂ, ಪರಸ್ಪರ ದೋಷಾರೋಪಣೆ ಮೂಲಕ ಎರಡು ಪಾತ್ರಗಳೂ 60ವರ್ಷದ ಹಿಂದಿನ ಸಂಭ್ರಮವನ್ನು ಮೆಲುಕು ಹಾಕುತ್ತಲೇ ಸದ್ಯದ ಹತಾಶೆ ಸ್ಥಿತಿಯನ್ನು ಬಿಚ್ಚಿಡುತ್ತದೆ.
Good write up Hema! Keep it up!!
ಚಂದದ ಬರಹ. ಬಹುಶಃ ಈ ಪ್ರಶ್ನೆಗಳಿಗೆ ಪ್ರೇಕ್ಷಕರು ತಮ್ಮದೇ ಆದ ಉತ್ತರವನ್ನು ಕಂಡುಕೊಳ್ಳಲಿ
ಎಂಬುದು ನಾಟಕಕಾರರ ಆಶಯವಾಗಿರಿಬಹುದು.
ನಾಟಕದ ಬಗ್ಗೆ ಎರಡು ಮಾತಿಲ್ಲ. ಹೇಳಲಿಕ್ಕಿರುದು ಕೆಲವು ವೀಕ್ಷರ ಪ್ರಜ್ಞೆಯ ಬಗ್ಗೆ. ಕೆಲವು ತಿಂಗಳ ಹಿಂದೆ ರಂಗಶಂಕರದಲ್ಲಿ ನೋಡಿದ್ದೆ. ಆರಂಭದಲ್ಲಿ ತಾತ ನೋವಿನಲ್ಲಿ ವ್ಯಂಗ್ಯದ ಮಾತುಗಳನ್ನಾಡುತ್ತಿರುವಾಗ (Biological cycle) ವೀಕ್ಷರಲ್ಲಿ ಹಲವರು ತಮಾಷೆ ನೋಡಿದಂತೆ ಗೊಳ್ಳೆಂದು ನಕ್ಕರು 🙁 ಹೀಗೆ ನಗು ಕೆಲಬಾರಿ ಪುನರಾವರ್ತಿಸುತ್ತಿದ್ದಂತೆ ಉಳಿದವರಿಗೆ ರಸಭಂಗ. ಇದೊಂದೇ ನಾಟಕವಲ್ಲ, ಹಲವು ಬಾರಿ ನಾನು ಇಂತಹದ್ದಕ್ಕೆ ಸಾಕ್ಷಿಯಾಗಿದ್ದೇನೆ. ಗಂಭೀರ ವ್ಯಂಗ್ಯದ ರಸ ಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ ಇಲ್ಲವಾಯಿತೇ?
Very nice analysis. will see the play this time.
ಎಸ್. ಏನ್ .ಸೇತುರಾಂ ಅವರ ನಿರ್ದೇಶನದ ನಾಟಕ `ಗತಿ` ..
ಮುಂದಿನ ಪ್ರದರ್ಶನ ಅಕ್ಟೋಬರ್ 5 ರಂದು ಮಲ್ಲೇಶ್ವರದ
ಸೇವಾಸದನದಲ್ಲಿ..ಸಾಯಂಕಾಲ 4 ಘಂಟೆ ಹಾಗೂ 7 ಘಂಟೆಗೆ
ಎರಡು ಪ್ರದಶನಗಳು
Thanks all…