ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಜೋಗನ್ ಶಂಕರ್ ಅವರು ಆಡಿದ ಮಾತು ಪತ್ರಿಕೆಗಳಲ್ಲಿ ವರದಿಯಾಗಿದೆ. ಅದು ಇಲ್ಲಿದೆ. ಅದಕ್ಕೆ ಕುವೆಂಪು ವಿಶ್ವವಿದ್ಯಾಲಯದಲ್ಲಿಯೇ ಓದಿದ ಅನ್ ಷಾದ್ ಪಾಳ್ಯ ಪ್ರತಿಕ್ರಿಯಿಸಿದ್ದಾರೆ.
ಜೋಗನ್ ಶಂಕರ್ ಮಾತು ಹಾಗೂ ಈ ಪ್ರತಿಕ್ರಿಯೆ ಎರಡನ್ನೂ ಚರ್ಚೆಗೆ ಮುಕ್ತಗೊಳಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಕಳಿಸಿ

ಅನ್ ಷಾದ್ ಪಾಳ್ಯ
ನನ್ನ ಪ್ರೀತಿಯ ಜೋಗನ್ ಶಂಕರ್ ಸರ್..
ಕಡಲ ಕಿನಾರೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅನೇಕ ವರ್ಷಗಳ ಉಪನ್ಯಾಸ ವೃತ್ತಿಯನ್ನು ಮಾಡಿ ಸಾಮಾಜಿಕ ಮೌಲ್ಯಗಳ, ಸಾಮಾಜಿಕ ಸ್ಥರ ವಿನ್ಯಾಸಗಳ ಉಪನ್ಯಾಸಗಳನ್ನು ಮತ್ತು ಸಮಾಜದ ತುಳಿತಕ್ಕೊಳಗಾದ ದಲಿತ ಸಮುದಾಯಗಳ ಕುರಿತಾಗಿ ಪ್ರಬಂಧ, ಸಂಶೋಧನೆಗಳ ಮೂಲಕ ಅವರ ಏಳ್ಗೆಯ ಕಡೆ ಬೆಳಕು ಚೆಲ್ಲಿದ್ದೀರಿ.
ಮನುವಾದದ ಸಾಮಾಜಿಕ ವಿಭಜನೆಯ ಏಣಿ ಶ್ರೇಣಿ ವ್ಯವಸ್ಥೆಯ ಭಾಗವಾಗಿ ಅದನ್ನು ಪ್ರತಿಪಾಧಿಸುವ ಮನುವಾಧೀ ಸಂಘಟನೆಗಳ ಪುಷ್ಟೀಕರಣದಿಂದಾಗಿ ಇವತ್ತಿಗೂ ದಲಿತರ ಪರಿಸ್ಥಿತಿಗಳು ಅತ್ಯಂತ ಅಮಾನವೀಯವಾಗಿದೆ ಎಂಬುದೂ ತಮಗೆ ತಿಳಿದ ವಿಚಾರವೇ ಆಗಿದೆ.
ಒಂದು ಕಡೆ ಮಡೆ ಮಡೆ ಸ್ನಾನದಂತಹ ನೀಚ ಸಂಸ್ಕೃತಿಗಳು ಇದೇ ಮೂಲಭೂತವಾದಿಗಳ ನೆರಳಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವಾಗ ಸಮಾಜದಲ್ಲಿ ಮಹಿಳೆ ಕೇವಲ ಮನೆಗೆ ಸೀಮಿತ ಎಂದು ಮಹಿಳೆಯರನ್ನು ಮತ್ತಷ್ಟು ಮನುವಾದದ ಅಡಿಯಲ್ಲಿ ತರುವ ಭಾಷಣವನ್ನುಮೋಹನ್ ಭಾಗವತರು ಇತ್ತೀಚೆಗಷ್ಟೇ ಮಾಡಿದ್ದರು. ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅದನ್ನೂ ಗಮನಿಸಿರುತ್ತೀರಿ.
ಇತ್ತೀಚೆಗಷ್ಟೇ ದಾದ್ರಿ ಘಟನೆ ನಡೆದಿದೆ. ದಲಿತರ ಜೀವಂತ ಹೆಣವಾಗಿಸುವ ಪ್ರಯತ್ನಗಳೂ ನಡೆದಿದೆ. ಇದಕ್ಕೆಲ್ಲಾ ಮೂಲಭೂತವಾಧಿ ಮನಸುಗಳು ಮತ್ತು ಅಂತಹದ್ದನ್ನು ಪೋಷಿಸುತ್ತಿರುವ ಸಂಘಟನೆಗಳು ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಇಷ್ಟೆಲ್ಲದರ ನಡುವೆ ಶಿವಮೊಗ್ಗದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಂಘವನ್ನು ಸಮರ್ಥಿಸುವ ಗೋಜಿನಲ್ಲಿ ಅಂಬೇಡ್ಕರ್ ರ ನಿಲುವನ್ನು ತಿಳಿಸಿರುತ್ತೀರಿ. ಅಂಬೇಡ್ಕರ್ ರಿಗೆ ಸಂಘದ ಸಂಪೂರ್ಣ ಹಿಡನ್ ಅಜೆಂಡಾ ಗೊತ್ತಿಲ್ಲದ ಕಾಲಘಟ್ಟದಲ್ಲಿ ಅವರು ಸಂಘದ ಕಚೇರಿಗೆ ಬೇಟಿ ನೀಡಿ ರಾಷ್ಟ್ರ ಪ್ರೇಮದ ನಾಟಕದ ಅರಿವಿಲ್ಲದನ್ನು ಗಮನಿಸಿ ಒಳ್ಳೆಯ ಅಭಿಪ್ರಾಯವನ್ನು ಹೇಳಿದ್ದರು.
ಅದರೆ ಅಂಬೇಡ್ಕರ್ ಮರಣದ ಸಮಯದಲ್ಲಿ ಹಿಂದೂವಾಗಿ ಮರಣ ಹೊಂದದೆ ನಿಜವಾದ ಮಾನವೀಯ ಸಂಘಂ ಶರಂಣಂ ಗಚ್ಚಾಮಿ ಎನ್ನುವ ಬುದ್ಧನ ಕಡೆ ನೋಟವನ್ನು ಚೆಲ್ಲಿದ್ದರು. ಒಂದೊಮ್ಮೆ ಆರ್ ಎಸ್ ಎಸ್ ಕಡೆಗೆ ಹೆಚ್ಚು ಒಲವಿದ್ದಿದ್ದರೆ ಅವರು ಹಿಂದೂ ಧರ್ಮದಲ್ಲೇ ಮರಣ ಹೊಂದುತ್ತಿದ್ದರು. ಮುಂದುವರೆದು ಆರ್ ಎಸ್ ಎಸ್ ನಂತಹ ಸಂಘದ ಅವಶ್ಯಕತೆ ಇವತ್ತು ನಮಗೆ ಆವಶ್ಯಕತೆ ಇದೆ ಎಂಬ ಮಾತನ್ನು ಹೆಳಿದ್ದೀರಿ ಅದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಸದಾ ಪ್ರಗತಿಪರವಾಗಿ ಆಲೋಚಿಸುವ ನಿಮ್ಮಂತ ಹಿರಿಯ ಗುರುಗಳು ಈ ರೀತಿಯ ಕರೆಯನ್ನು ಬಹಿರಂಗವಾಗಿ ನೀಡಿದರೆ ಪ್ರಗತಿಪರತೆಯ ಮಾತುಗಳು ಮತ್ತು ತಳ ಸಮುದಾಯಗಳ ಜೀವಪರತೆಯ ನಿಲುವುಗಳು ಪ್ರಶ್ನಾರ್ಹವಾಗಿ ಕಾಣುತ್ತಿದೆ. ಅಥವಾ ತಮ್ಮ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿರಲೂ ಬಹುದು.
ಆದರೆ ಕೇವಲ ಒಂದು ಸಿದ್ಧಾಂತದಡಿ ಮನುವಾದವನನ್ನು ಬಹಳ ನಾಜೂಕಿನಿಂದ ಜನರ ಮನಸಿನೊಳಗೆ ತೂರಿಸುವ ಹಿಂದೂ ರಾಷ್ಟ್ರ ಎನ್ನುವ ಹಳದಿ ಅಂಗಿಯ ಕಡೆ ಮುಖ ಮಾಡುವ ಇಂತಹ ಸಂಘದ ಕಾರ್ಯಕ್ರಮದಲ್ಲಿ ಈ ರೀತಿಯ ಘೋಷ ವಾಕ್ಯಗಳು ಅದೆಷ್ಟು ಸರಿ? ವೈಜ್ಞಾನಿಕ ತಳಹದಿಯ ಮೇಲೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಘದ ಆವಶ್ಯಕತೆ ನಮಗೆ ಜರೂರಿಯಿದೆ ಅದಲ್ಲದೇ ಒಂದು ಧರ್ಮದ ಆದಾರದ ಪ್ಯಾಸಿಸ್ಟ್ ಮನೋಭಾವದ ಸಂಘಗಳು ಭಾರತದಂತಹ ಸುಂದರ ಸಮಾಜದೊಳಗೆ ನಮಗೆ ಬೇಕಾಗಿದೆಯೇ? ಸಂವಿಧಾನದ ನೆಲೆಗಳು,ಸಂವಿಧಾನದ ಆದರ್ಷ, ಜಾತ್ಯಾತೀತ ಮೌಲ್ಯಗಳಲ್ಲವೇ ಇವತ್ತಿನ ಜರೂರಿ..
ಜೋಗನ್ ಶಂಕರ್ ಕ್ಯಾರಿಕೇಚರ್ : ಪ್ರಕಾಶ್ ಶೆಟ್ಟಿ





The related articles are not related to Jogan Shankar