ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ನಾರಾಯಣ ಭಟ್ ಮೇಷ್ಟ್ರು…

ಪ್ರಕಾಶ್ ಶೆಟ್ಟಿ

ಇವತ್ತು ನಮಗೆ ಪಾಠ ಕಲಿಸಿದ ಗುರುಗಳನ್ನು ನೆನಪಿಸುವ ದಿನ. ಪಾಠ ಅಂದರೆ ಏನು? ಸಮಾಜ, ಗಣಿತ, ವಿಜ್ಞಾನ ಕನ್ನಡ, ಇಂಗ್ಲಿಷ್ ಇತ್ಯಾದಿ ಇತ್ಯಾದಿಗಳನ್ನು ಮಕ್ಕಳ ತಲೆಗೆ ತುರುಕಿಸುವುದಷ್ಟೇ ಶಿಕ್ಷಣ ಅಲ್ಲ. ಇದಕ್ಕೆ ನಾನೇ ಸಾಕ್ಷಿ. ನನ್ನ ಅನೇಕ ಗುರುಗಳು ಕೂಡಾ ಸಾಕ್ಷಿ.

ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾನು ವ್ಯಂಗ್ಯಚಿತ್ರ ರಚನೆಯ ಎಬಿಸಿಡಿ ಕಲಿತದ್ದೇ ಜಾಸ್ತಿ. ಅದೊಂದು ಚಟವಾಗಿ ಬೆಳೆಯಲು ನನ್ನ ಹೈಸ್ಕೂಲ್ ಶಿಕ್ಷಕರೊಬ್ಬರು ಕಾರಣ. ನಾನು ಕಲಿತದ್ದು ಮಂಗಳೂರಿನ ಪದ್ವಾ ಹೈಸ್ಕೂಲ್ ನಲ್ಲಿ. ನಾರಾಯಣ ಭಟ್ ಮೇಷ್ಟ್ರು ಅಂದರೆ ಇಡೀ ಶಾಲೆಯಲ್ಲಿ ಅವರೇ ಅತ್ಯಂತ ಸೀರಿಯಸ್. ಅವರ ಮುಖದಲ್ಲಿ ನಗು ನೋಡಿದವರಿಲ್ಲ. ಗಣಿತದಂತಹ ಕಬ್ಬಿಣ ಕಡಲೆ ಮತ್ತು ವಿಜ್ಞಾನದಂತಹ ಆಜೀರ್ಣವಾಗುವಂತಹ ಪಾಠಗಳನ್ನು ಬೇರೆ ಕಲಿಸುತ್ತಿದ್ದರು.

ಒಮ್ಮೆ ನಾರಾಯಣ ಭಟ್ ಮೇಷ್ಟ್ರು ಪಾಠ ಮುಗಿಸಿ ನನ್ನನ್ನು ಸ್ಟಾಫ್ ರೂಮಿಗೆ ಕರೆದುಕೊಂಡು ಹೋದರು. ನಾನು ಚಿತ್ರ ಕಲೆಯ ಬಲೆಯಲ್ಲಿ ನೇತಾಡುವವನು ಎಂದು ಅವರಿಗೆ ಗೊತ್ತಿತ್ತು. ಒಂದು ದೊಡ್ಡ ಪುಸ್ತಕ ಕೈಗಿಟ್ಟರು. ಅದೊಂದು ಕಾರ್ಟೂನ್ ಸಂಗ್ರಹದ ಅದ್ಭುತ ಪುಸ್ತಕವಾಗಿತ್ತು! ಸ್ಟ್ಯಾಂಪ್ ಸಂಗ್ರಹದ ಹವ್ಯಾಸ ಇರುವವರು ಇರುತ್ತಾರೆ ಎಂದು ಗೊತ್ತಿತ್ತು. ಆದರೆ ಕಾರ್ಟೂನ್ ಸಂಗ್ರಹ?! ಅದರಲ್ಲೂ ಗಂಭಿರವದನನಂತಿರುವ ಈ ಮೇಷ್ಟ್ರುಅದನ್ನು ಮಾಡುತ್ತಾರೆ ಅಂದರೆ ಅಚ್ಚರಿಯಾಗುವುದಿಲ್ಲವೇ! ಆ ಸಂಕಲನದೊಳಗಿದ್ದ ಕನ್ನಡದ ಬಹುಪಾಲು ವ್ಯಂಗ್ಯಚಿತ್ರಕಾರರು ನನ್ನನ್ನು ಸುತ್ತುವರಿದಂತೆ ರೋಮಾಂಚಗೊಂಡೆ. ಸರ್ ಗೆ ಅರ್ಥವಾಯಿತು. ಅದನ್ನು ಯಾವ ನಂಬಿಕೆಯಿಂದ ನನಗೆ ಮನೆಗೆ ಕೊಂಡು ಹೋಗಲು ಕೊಟ್ಟರೋ! ಮೇಷ್ಟ್ರು ವಿವಿಧ ಪತ್ರಿಕೆಗಳಿಂದ ಆ ವ್ಯಂಗ್ಯ ಚಿತ್ರಗಳನ್ನು ಸಂಗ್ರಹಿಸಿ, ನಂತರ ‘ಕಟ್ ಎಂಡ್ ಪೇಸ್ಟ್ ‘ ಮಾಡಿ (you know..pre computer days!) ಒಂದು ಸುಂದರ ಪುಸ್ತಕ ಮಾಡುವುದಕ್ಕೆ ಎಷ್ಟು ಸಮಯ ಮತ್ತು ಶ್ರಮ ತೆಗೆದುಕೊಂಡಿರಬಹುದೆಂದು ನನಗೆ ಗೊತ್ತಿತ್ತು.
ಆ ‘ವ್ಯಂಗ್ಯಚಿತ್ರಲೋಕ’ ಸುಮಾರು ದಿನಗಳು ನನ್ನ ಸಂಗಾತಿಯಾಗಿತ್ತು. ವ್ಯಂಗ್ಯ ಚಿತ್ರಗಳ ಹಾಸ್ಯ, ಅದರಲ್ಲಿರುವ ಚಿಂತನೆ, ರೇಖೆಗಳಾಟ ಶಾಲೆಯಿಂದ ಮರಳಿದ ತಕ್ಷಣ ಅನುಭವಿಸತೊಡಗಿದೆ. ಅದೇ ನನ್ನ ಹೋಮ್ ವರ್ಕ್. ನಾನು ಆವತ್ತು ಮುಖ್ಯವಾಗಿ ಗಮನಿಸಿದ್ದು ರೇಖಾ ಶೈಲಿಗಳನ್ನು. ಪ್ರತಿಯೊಬ್ಬರದ್ದೂ ಒಂದೊಂದು ಶೈಲಿ. ಅಂದರೆ ನಾನು ನನ್ನದೇ ಶೈಲಿ ಬೆಳೆಸಿಕೊಳ್ಳಬೇಕು ಎಂಬ ಮುಖ್ಯ ಪಾಠ ಅದರಲ್ಲಿತ್ತು.

ಆ ಅದ್ಭುತ ಸಂಕಲನ ವಾಪಸ್ ಸರ್ ಗೆ ಕೊಡುವಾಗ ಮನಸ್ಸು ಭಾರವಾಗಿತ್ತು. ‘ಅದನಿಟ್ಟುಕೋ ‘ಎಂದು ಅವರು ಹೇಳಲಿಕ್ಕಿಲ್ಲ ಎಂದು ಗೊತ್ತಿದ್ದರೂ ಮನಸ್ಸಿನೊಳಗೆ ಎಲ್ಲೋ ಒಂದು ಕಡೆ ಹಾಗೇ ಹೇಳಲಿ ಎಂಬ ಹುಚ್ಚು ಆಸೆ ಇತ್ತು. ನಾರಾಯಣ ಭಟ್ ಮೇಷ್ಟ್ರು ಮುಂದೆ ನಾನು ಬೆಳೆದಂತೆ ನನ್ನ ವೃತ್ತಿ ಜೀವನದ ಮರೆಯದ ವ್ಯಕ್ತಿಯಾದರು. ಈ ರಂಗದಲ್ಲಿ ಎಷ್ಟೋ ಸಾಧನೆಗಳನ್ನು ಮಾಡುವುದಕ್ಕಿದೆ ಎಂಬ ಕೀಳರಿಮೆಯಿಂದಲೋ ಏನೋ ನಡುವೆ ಅವರನ್ನು ಭೇಟಿಯಾಗಲಿಲ್ಲ. ಮುಂದೆ ಅವರು ತೀರಿಕೊಂಡರೆಂದು ಕೇಳಿದೆ. ನನಗೆ ವ್ಯಂಗ್ಯ ಚಿತ್ರಗಳ ಆರಂಭದ ‘ಪಠ್ಯ ‘ಪುಸ್ತಕ ಕೊಟ್ಟ ನಾರಾಯಣ ಭಟ್ ಮೇಷ್ಟರಿಗೆ ಅಡ್ಡ ಬಿದ್ದೆ.

‍ಲೇಖಕರು Admin

5 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading