ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ನಾಟಕ ವರ್ಷ 2025..

-ಕಿರಣ ಭಟ್‌

ಕಳೆದ ವರ್ಷ ʼಇಟ್ಫಾಕ್‌ʼ ಗೆ ಹೋಗದಿದ್ದುದರಿಂದ ನೋಡಿದ ನಾಟಕಗಳ ಸಂಖ್ಯೆ ಗಣನೀಯವಾಗಿ ಕಡಿಮೆ. ಆದರೂ ಒಂದು ವರ್ಷದ ಬೆಂಗಳೂರು ವಾಸ ನನಗೆ ಕೆಲವು ಒಳ್ಳೆಯ ನಾಟಕಗಳನ್ನು ನೋಡುವ ಅವಕಾಶ ಒದಗಿಸಿತು. ನಾನು ನೋಡಿದ್ದು ಹದಿನಾಲ್ಕು ನಾಟಕಗಳನ್ನು. ಆ ಎಲ್ಲ ನಾಟಕಗಳ ಕುರಿತೂ ನಾನು ಬರೆದಿದ್ದೇನೆ. ವರ್ಷದ ನೆನಪಿನ ದಾರಿ ಹಿಡಿದು ಹೋದಾಗ ಕಂಡವು ಇವು.

ಬಹುರೂಪಿ: ಹಲವು ವರ್ಷಗಳಿಂದ ರಂಗಾಯಣದ ʼಬಹುರೂಪಿʼ ಉತ್ಸವಕ್ಕೆ ಹೋಗಿರಲಾಗಲಿಲ್ಲ. ಈ ವರ್ಷ ಕೊನೆಯ ಎರಡು ದಿನ ಹೋಗಿದ್ದೆ. ಎರಡು ಒಳ್ಳೆಯ ನಾಟಕಗಳು ನೋಡುವದಕ್ಕೆ ಸಿಕ್ಕವು.

  1. ʼತಮಾಷಾʼ ನಿಜಕ್ಕೂ ಇದೊಂದು ಒಳ್ಳೆಯ ವರ್ಷಾರಂಭ.ಸಾದತ್‌ ಹಸನ್‌ ಮಾಂಟೋ ನ ಕಥೆಗಳನ್ನಾಧರಿಸಿದ, ನೀಲಂ ಮಾನಸಿಂಗ್‌ ನಿರ್ದೇಶಿಸಿದ ಈ ನಾಟಕ ಒಂದು ಅತ್ಯುತ್ತಮ ಕೊಲಾಜ್.‌ ನಾಟಕದ ಆಯ್ಕೆ, ಅತ್ಯುತ್ತಮ ನೇಯ್ಗೆ, ನಟರ ಕಸುವಿನಿಂದ ಗೆಲ್ಲುತ್ತದೆ.
  2. ಮೈ ಫ್ಯಾಮಿಲಿ: ಪ್ರಸ್ತುತ ನ್ಯೂಕ್ಲಿಯರ್‌ ಕುಟುಂಬಗಳ ಗೊಂದಲಗಳ ನಡುವೆ ಮಕ್ಕಳು ಅನುಭವಿಸುವ ನೋವು. ಒಂಟಿತನಗಳು, ಅವುಗಳಿಂದ ಹೊರಬರಲು ಕಂಡುಕೊಳ್ಳುವ ಅನಿಷ್ಟ ಗೇಮ್‌ ಗಳು. ಇವಕ್ಕೆಲ್ಲ ಉತ್ತರವೆಂಬಂತೆ ಮರಳಿ ಪರಿಸರಕ್ಕೆ ಮರಳುವ ಕತೆ ಹೊತ್ತ ನಾಟಕ. ಪಪೆಟ್‌ ಗಳು ನಾಟಕದ ಹೈಲೈಟ್.‌ ಈವುಗಳ ನಡುವೆಯೂ ಮಧ್ಯೆ ನುಸುಳುವ ಮಹಾಭಾರತದ ಉದ್ದನೆಯ ತುಣುಕಿನ ಭಾರ ಸ್ವಲ್ಪ ಜಾಸ್ತಿ ಆಯಿತೇನೋ ಎನಿಸುತ್ತದೆ. ನಿ: ಗಣೇಶ್‌ ಮಂದಾರ್ತಿ
    ಭಾರತ ರಂಗ ಮಹೋತ್ಸವ ಬೆಂಗಳೂರಲ್ಲಿ ಅದ್ದೂರಿಯಾಗಿ ಜರುಗಿದ ʼಭಾರಂಗಂʼ ನಲ್ಲಿ ಎರಡು ವಿಶಿಷ್ಟ ನಾಟಕಗಳಿದ್ದವು.
  3. ಫ್ರೆಂಡ್‌ ಬಿಯೋಂಡ್‌ ದ ಫೆನ್ಸ್: ಎರಡನೆಯ ಮಹಾಯದ್ಧದ ಕರಾಳ ಮುಖಗಳನ್ನು, ಮಕ್ಕಳ ಬದುಕಿನ ಕಣ್ಣಲ್ಲಿ ಕಾಣುವ ಪ್ರಯತ್ನ ಇದು.ಜಪಾನಿನ ಬಂಕಾರು ಬೊಂಬೆಗಳ ಮಾದರಿಯ ದೊಡ್ಡ ಆನೆಯೊಂದು ನಾಟಕದ ಆಕರ್ಷಣೆ. ಅವುಗಳನ್ನು ಆಡಿಸುವವರೂ ಕೂಡ. ನಿ: ಶ್ರವಣ್‌ ಹೆಗ್ಗೋಡು.
  4. ದ ಮ್ಯಾರೇಜ್‌ ಆಫ್‌ ಬಲ್ಜಿಮ್ನೋವ್:‌ ರಷ್ಯನ್‌ ನಾಟಕ ಇದು. ಒಂದಿಷ್ಟು ಹಾಡು, ನೃತ್ಯ ಗಳ ಚುರುಕಾದ ʼವಿದ್ಯಾರ್ಥಿ ಪ್ರಯೋಗʼ
  5. ʼಸಂಚಾರಿʼ ಯ ʼರೊಶೋಮನ್:‌ ಅಕಿರ ಕುರಾಸೋವ ನ ಅತ್ಯಂತ ಪ್ರಸಿದ್ಧವಾದ ಸಿನಿಮಾ ಇದು. ʼಸತ್ಯದ ಹಲವು ಮುಖʼ ಗಳ ಕುರಿತು ಚರ್ಚಿಸುವಂಥದ್ದು. ಕತ್ತಿ ವರಸೆ, ಚುರುಕಿನ ರಂಗ ಚಲನೆಗಳ ಈ ಪ್ರಯೋಗವನ್ನು ವಿಭಿನ್ನವಾಗಿ ಕಟ್ಟುತ್ತಾರೆ ನಿರ್ದೇಶಕಿ ಎನ್.‌ ಮಂಗಳಾ.
  6. ಕಲ್ಲರಳಿ ಹೆಣ್ಣಾಗಿ: ʼ ಕರ್ನಾಟಕ ಲೇಖಕಿಯರ ಸಮ್ಮೇಳನʼ ದಲ್ಲಿ ಪ್ರದರ್ಶಿತವಾದ ನಾಟಕವಿದು. ಕಲ್ಲಾಗಿದ್ದ ಅಹಲ್ಯೆಯಿಂದ ಕಲ್ಲಿನಲ್ಲರಳುವ ಹಸುರು ಚಿಗುರಿನ ತನಕ ಹೆಣ್ಣಿನ ತುಮುಲಗಳು, ವಿಮೋಚನೆಯ ಹಾದಿ ಇವುಗಳ ಕುರಿತ ನಾಟಕವಿದು. ಸಂಧ್ಯಾರಾಣಿ ರಚಿಸಿದ ಈ ನಾಟಕವನ್ನು ಚರ್ಚೆ, ಸಂಭಾಷಣೆ, ಸಂಕೇತಗಳ ಮೂಲಕ ಕಟ್ಟಲಾಗಿದೆ. ನಿ: ಜಯಲಕ್ಷ್ಮಿ ಪಾಟೀಲ್
  7. ಅಶ್ವತ್ಥಾಮ: ಮಂಗಳೂರು ʼಆಯನʼ ದ ನಾಟಕವಿದು ತಾನು ಅಶ್ವತ್ಥಾಮ ಎನ್ನುವ ವಿಚಿತ್ರ ಗುಂಗಿನಲ್ಲಿ ಬದುಕುವ ಜೀವಿಯೊಬ್ಬನ ಸುತ್ತ ಹೆಣೆದ ನಾಟಕ. ಮಾತಿನ ನಾಟಕವಿದು. ತಾಳಮದ್ದಳೆಯ ತಂತ್ರಗಾರಿಕೆಯ ಎಳೆಯಿದೆ. ನಾಟಕ ವಾಚಾಳಿ ಎನಿಸಿದರೂ ಪ್ರತಿಭಾನ್ವಿತ ನಟರು ಅಭಿನಯ, ಮಾತುಗಾರಿಕೆಯಿಂದ ಗೆಲ್ಲುತ್ತಾರೆ. ನಿ: ಮೋಹನಚಂದ್ರ.
  8. ಕುಹೂ ʼನಿರ್ದಿಗಂತʼ ದ ʼಕುಹೂʼ ೨೦೨೫ ರಲ್ಲಿ ವರ್ಷ ನಾನು ನೋಡಿದ ಶ್ರೇಷ್ಠ ನಾಟಕ. ಇದು ಹಳಿಗಳ ಮೇಲಿನ ಕಥಾನಕ. ಹಳಿಗಳನ್ನೂ ಬೋಗಿಗಳನ್ನೂ ರೂಪಕವಾಗಿಸಿಕೊಳ್ಳುತ್ತ ಇದು ಭಾರತದ ಇತಿಹಾಸವನ್ನೂ ವರ್ತಮಾನದ ತಲ್ಲಣಗಳನ್ನೂ ಕಟ್ಟಿಕೊಡುತ್ತ ಹೋಗುತ್ತದೆ. ಅದ್ಭುತವಾದ ವಿನ್ಯಾಸ ಮತ್ತು ನಿರ್ಮಾಣ. ನಟರಂತೂ ಗ್ರೇಟ್!‌ ನಿ: ಅರುಣಲಾಲ್‌ ಎ.ಎಸ್‌ ಮೂರ್ತಿಯವರು ಸ್ಥಾಪಿಸಿದ್ದ ʼಚಿತ್ರಾʼ ತಂಡದ ʼಚಿತ್ರಾ ೭೫ʼ ನಾಟಕೋತ್ಸವದಲ್ಲಿ ನೋಡಿದ ನಾಟಕಗಳು ಎರಡು.
  9. ʼಸಂಚಾರಿ ಥಿಯೇಟರ್, ನ ಮರವೇರಲಾಗದ ಗುಮ್ಮ. ʼಬಹುರೂಪಿʼ ಪ್ರಕಾಶನದ ಮಕ್ಕಳ ಚಿತ್ರಪುಸ್ತಕವನ್ನು ಆಧರಿಸಿದ ನಾಟಕ. ಪುಸ್ತಕದ ವಿಸ್ತರಣೆ ಚೆನ್ನಾಗಿದೆ. ಮಗುವಿನ ಸಿಟ್ಟು ಸೆಡಕುಗಳ ಜೊತೆಗಿನ ಅನುಸಂಧಾನವಿದು. ಪಪೆಟ್‌ ನ ಉಪಯೋಗವೂ ಉಪಯುಕ್ತವಾಗಿದೆ.
    ನಿ: ಧನುಷ್‌ ನಾಗ್‌
  10. ಬೆರಳ್ಗೆ ಕೊರಳ್; ಕುವೆಂಪು ರಚನೆಯ ಈ ನಾಟಕ ನಟರ ತಾದಾತ್ಮ್ಯತೆಯಿಂದ ಸ್ಪಷ್ಟ ಸಂಭಾಷಣೆಗಳಿಂದ ಹಿತವಾಗಿತ್ತು.
  11. ಕ್ರಾಂತಿಯುಗ ʼರಂಗಪಯಣʼ ದ ನಾಟಕೋತ್ಸವದ ಕೊನೆಯ ದಿನ ಅವರದ್ದೇ ಆದ ಈ ನಾಟಕ ನೋಡಿದೆ. ಇದೇ ತಂಡದ ʼಗುಲಾಬಿ ಗ್ಯಾಂಗ್‌ʼ ನಾಟಕದ ಮೂರನೆಯ ಆವೃತ್ತಿ ಇದು. ಅಕ್ಷರ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಗುಲಾಬಿ ಗ್ಯಾಂಗ್‌ ನಡೆಸಿದ ಹೋರಾಟದ ವಿವರಗಳಿವೆ. ಗುಂಪಿನ ನಿರ್ವಹಣೆ ಚಂದ.ನಯನ ಸೂಡ ಅಭಿನಯ ಹೆಸರಿಸುವಂಥದ್ದು. ಸಂಗೀತ ಜಾಸ್ತಿ ಅಬ್ಬರ. ನಿ: ರಾಜು ತಾಳಿಕೋಟೆ
    ಹೊನ್ನಾವರದಲ್ಲಿ ನೀನಾಸಮ್‌ ತಿರುಗಾಟದ ನಾಟಕಗಳನ್ನು ನೋಡಿದೆ.
  12. ʼಹೃದಯದ ತೀರ್ಪುʼ ಬೂಕರ್‌ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್‌ ರ ಕತೆಯನ್ನಾಧರಿಸಿದ ಈ ನಾಟಕ, ಯೂಸುಫ್‌ ಎನ್ನುವ ಮುಸ್ಲಿಂ ಹಣ್ಣು ವ್ಯಾಪಾರಿಯೊಬ್ಬನ ಸಂಸಾರದ ಕತೆ. ತಾಯಿಯ ಪ್ರೀತಿ ಮತ್ತು ಹೆಂಡತಿಯ ಹಟದ ಮಧ್ಯೆ ಸಿಲುಕಿಕೊಂಡ ಯೂಸುಫ್‌ ತನ್ನ ತಾಯಿಗೆ ಇನ್ನೊಂದು ಮದುವೆ ಮಾಡಿಸಹೊರಡುತ್ತಾನೆ. ಆಗ ಕುಟುಂಬದಲ್ಲಿ ನಡೆಯುವ ತಾಕಲಾಟದ ವಿವರಗಳಿಲ್ಲಿವೆ. ನಿ: ಎಂ ಗಣೇಶ್‌, ಹೆಗ್ಗೋಡು,=.
  13. ಅವತರಣಂ ಭ್ರಾಂತಾಲಯಂ; ಮೂಲ ಜಿ.ಶಂಕರ ಪಿಳ್ಳೈ. ಕನ್ನಡಕ್ಕೆ; ನಾ.ದಾಮೋದರ ಶೆಟ್ಟಿ. ಸಿದ್ಧ ನಾಟಕದ ಚೌಕಟ್ಟನ್ನು ಲೇವಡಿ ಮಾಡುತ್ತ ಹೋಗುವ ಇದು ʼನಾಟಕದೊಳಗೊಂದು ನಾಟಕʼ ಶಬ್ದಗಳ ರಾಜ್ಯದ ರಾಜನಿಗೆ ಜಗತ್ತಿನ ಅತಿ ದೊಡ್ಡ ಶಬ್ದವನ್ನು ಕೇಳಬೇಕಿದೆ. ಇದರ ತಯಾರಿ ಸಾಗುತ್ತ ಹೋದಂತೆ ನಾಟಕ ಚೌಕಟ್ಟನ್ನೂ ಮೀರುತ್ತ, ರಾಜನನ್ನು ಬೆತ್ತಲಾಗಿಸುತ್ತ ಹೋಗುತ್ತದೆ.
    ನಿ: ಶಂಕರ್‌ ವೆಂಕಟೇಶ್ವರನ್.‌
  14. ಲೈಟ್ಸ್‌ ಆಫ್ ʼಅನೇಕʼ ದ ಈ ನಾಟಕ ವರ್ಷದ ಕೊನೆಯಲ್ಲಿ ನೋಡಿದ ನಾಟಕ. ಸದಾ ಹೊಸತು ಕೊಡುವ ನಿರ್ದೇಶಕ ಸುರೇಶ ಆನಗಳ್ಳಿ ತಾಂತ್ರಿಕವಾಗಿ ವಿಶಿಷ್ಟ ಎನಿಸುವ ಈ ಕಾಮಿಡಿ ಯನ್ನು ಕೊಟ್ಟಿದ್ದಾರೆ. ಅವರೇ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿರುವ ಈ ನಾಟಕ ತಾಜಾ ತಾಜಾ ಎನಿಸುತ್ತದೆ.
    ಈ ವರ್ಷ ನಾನು ನೋಡಿದ ನಾಟಕಗಳಲ್ಲಿ ಕಂಡಿದ್ದು ನಟವರ್ಗದ ಪ್ರಬುದ್ಧವಾದ ಅಭಿನಯ ಮತ್ತು ತೊಡಗಿಕೊಳ್ಳುವಿಕೆ. ತಿರುಗಾಟ ದ ನಾಟಕಗಳಲ್ಲೇ ಆಗಲಿ, ಹವ್ಯಾಸೀ ನಾಟಕಗಳಲ್ಲೇ ಆಗಲಿ ನಟರು ನಾಟಕಗಳನ್ನು ಮುನ್ನಡೆಸಿದ್ದೇ ಜಾಸ್ತಿ. ಆಂಗಿಕ, ವಾಚಿಕಗಳಲ್ಲೆಲ್ಲ ನಟ ನಟಿಯರು ಸಾಕಷ್ಟು ಪಳಗಿದಂತೆ ಕಂಡು ಬಂತು.
    ಈ ವರ್ಷ ಮಕ್ಕಳ ನಾಟಕಗಳನ್ನು ಹೊಕ್ಕ ʼಪಪೆಟ್ರಿʼ ಮಕ್ಕಳ ನಾಟಕಗಳ ಚಹರೆಯನ್ನೇ ಬದಲಿಸಿತು. ಇಂಥ ಪ್ರಯೋಗಗಳು ನಮ್ಮ ಮಕ್ಕಳನ್ನು ತಲುಪುವದು ಖಂಡಿತವಾಗಿಯೂ ತುಂಬ ಮುಖ್ಯ. ಆದರೆ ತಾಂತ್ರಿಕವಾಗಿ ತುಂಬ ಸೌಲಭ್ಯ ಬೇಡುವ ಇಂಥ ನಾಟಕಗಳು ಹಳ್ಳಿಗಾಡ ಸಾಮಾನ್ಯ ಮಕ್ಕಳನ್ನು ತಲುಪುವದು ಹೇಗೆ ಎನ್ನುವ ಆತಂಕವೂ ಇದೆ.
    ಒಟ್ಟಾರೆ ಹೊಸ ಹೊಸ ಪ್ರಯೋಗಗಳೊಂದಿಗೆ, ಹೊಸ ರಂಗ ರಚನೆಗಳೊಂದಿಗೆ ಕಳೆದ ವರ್ಷ ಗಮನಾರ್ಹ ವರ್ಷ ಎನಿಸಿತು.

‍ಲೇಖಕರು Admin

29 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading