ಅಕ್ಷಯ ಆರ್ ಶೆಟ್ಟಿ
ನಿರೂಪಣೆ – 1
ಮನದೊಳಗೇ ಭಯ… ಜೊತೆ ಜೊತೆಗೇ ಸಂಭ್ರಮ… ಒಂಥರಾ ಕಸಿವಿಸಿ… ಸ್ಕ್ಯಾನಿಂಗ್ ಆವರಣದೊಳಗೆ ಕಂಪ್ಯೂಟರ್ ಸ್ಕ್ರೀನಿನ ಮೇಲೆ ನನ್ನೊಳಗೊಂದು ಜೀವ ಉಸುರುತ್ತಿರುವ ಪಿಸು ಧ್ವನಿ… ವ್ಹಾವ್… ಜೀವನದ ಮದುರಕ್ಷಣ! ಬದುಕಿನ ಸಾರ್ಥಕದ ಕ್ಷಣ ಎನ್ನುವುದು ಅತಿಶಯವಾದರೂ ಒಂದು ಬಗೆಯ ತೃಪ್ತಭಾವ ಇದ್ದದ್ದಂತು ನಿಜ…

ಹೊಸದಿಕ್ಕಿಗೆ ತೆರೆದುಕೊಂಡಿದೆ ಬದುಕು… ಹೊಸತಿರುವಿನಲಿ ಹೆಜ್ಜೆ ಇರಿಸಿದೆ. ಎಲ್ಲೆಂದರಲ್ಲಿ ಓಡಾಡುತ್ತಿದ್ದ ಕಾಲುಗಳು ತಮ್ಮ ಗತಿಯನ್ನು ನಿದಾನಿಸಿವೆ… ಜೊತೆಗೇ ಕಂಪನ… ಆ ಕೊನೆಯ ಕ್ಷಣದ ಭಯ; ಆದರೂ ಗೆದ್ದೇ ಗೆಲ್ಲುವೆನೆಂಬ ದೃಢತೆ…
…ಲೇಬರ್ ಥಿಯೇಟರ್ ನ ಒಳಗೆ, ಆ ನೋವಿನ ಕ್ಷಣಗಳ ಕೊನೆಗೆ ಜಗತ್ತನ್ನೇ ಗೆದ್ದೆನೆಂಬ ಅಹಮ್ಮಿಕೆ… ಮೌಂಟ್ ಎವರೆಸ್ಟ್ ಏರಿಯೇ ಬಿಟ್ಟೆನೆನ್ನುವಷ್ಟು ಸಡಗರ… ನನ್ನದೆನ್ನುವ ಆ ‘ಮುದ್ದು’ ಇಡಿಯ ಜಗತ್ತನ್ನೇ ಮರೆಸಿದೆ… ನೋವನ್ನೂ ಕೂಡಾ..!
ನಿರೂಪಣೆ-2
ಪುಟಾಣಿ ಗೆಜ್ಜೆಗಳ ಕಲರವ, ಮನೆ ಮನದ ತುಂಬ ತುಂಬಿಕೊಂಡಿರುವ ಓಕುಳಿ… ಪುಟ್ಟ ಪುಟ್ಟ ಪ್ರಶ್ನೆಗಳು… ನೂರಾರು ಕುತೂಹಲಗಳು, ಧಾವಂತದ ಬದುಕಿಗೆ ರಿಲೀಫ್ ನೀಡುವಂತಹ ಆ ಮುಗ್ಧ ಸಂಭಾಷಣೆಗಳು. ಆ ಪುಟಾಣಿಗಳ ಆಟ, ಊಟ, ಸ್ನಾನ, ನಿದ್ದೆ- ಇವುಗಳಿಗೆ ಮುಖಮುಖಿಯಾಗುವ ಬದುಕು ಸುಖದಲ್ಲದ್ದೆ, ಮತ್ತೇನು?
ಅಪ್ಪ-ಅಮ್ಮನ ನೆರಳಿನಲ್ಲಿ ಜವಾಬ್ದಾರಿಯೇನೆಂದೇ ಅರಿಯದೆ ಮುಚ್ಚಟೆಯಾಗಿ ಬೆಳೆದವಳಿಗೆ, ಬರಿಯ ಓದಿಗಷ್ಟೇ ಸೀಮಿತಳಾದವಳಿಗೆ ಬದುಕಿನ ಅನಿರೀಕ್ಷಿತ ಪಲ್ಲಟ; ಮತ್ತದರಲ್ಲಿ ಯಶಸ್ವಿಯಾದ ಗರಿಮೆ… ಜವಾಬ್ದಾರಿಯನ್ನು ಹೊರುವ ತಾಕತ್ತು, ಬಹುಃಶ ನನ್ನೊಳಗೇ ಇತ್ತೇನೋ!

ನಿರೂಪಣೆ – 3
ಮೊನ್ನೆ ಮೊನ್ನೆ ದಾರಿಯಲ್ಲಿ ನಡೆಯುತ್ತಿರುವಾಗ ತೊಡರಿದ ಕಲ್ಲು, ಕಾಲಿಗೆ ಐದು ವಾರದ ವಿರಾಮವನ್ನು ಘೋಷಿಸಿತ್ತು. ಮೊದಲ ಬಾರಿಗೆ ಡಿಪೆಂಡೆಂಟ್ ಆಗುವುದರ ನೋವು ಕುಟುಕಿತು… ವಿಕಲಚೇತನರ ಬದುಕು ಪ್ರಶ್ನೆಯಾಗಿ ಕಾಡಿತು. ಜೊತೆಗೇ ನನ್ನ ಪುಟ್ಟ ಮಕ್ಕಳ ಹಸಿವಿನ ಚಿಂತೆ, ಎಷ್ಟೊಂದು ಅವಲಂಬಿತರು ಅವರು… ಜವಬ್ದಾರಿಗಳ ಮೂಟೆಯೊಡನೆ ಎಷ್ಟೊಂದು ಎಚ್ಚರದಿಂದ ಹೆಜ್ಜೆಯಿಡಬೇಕಿತ್ತು, ನಾನು!
ಹೀಗೆ ಚಿಂತನೆಯಲೇ ಕಳೆದ ವಿರಾಮದ ದಿನಗಳು ‘ನಾನು’, ‘ನನ್ನತನ’ ಇನ್ನೂ ಜೀವಂತವಿದೆ ಎನ್ನುವ ಸ್ಪಷ್ಟತೆಯನ್ನು ನೀಡಿದೆ. ಅರಿವಿನ ಸೀಮಿತತೆಯೊಳಗೇನೇ ಪಥ್ಯಕೆ ಸರಿದಿದ್ದ ವ್ಯಕ್ತಿತ್ವದೊಳಗಿನ ‘ವ್ಯಕ್ತಿ’ ಮತ್ತೆ ಸಿಕ್ಕಿದ್ದಾನೆ…
ಒಂದೂವರೆ ತಿಂಗಳ ಅಮ್ಮನ ಮತ್ತು ಅತ್ತೆಯ ಸಹಕಾರ ಮತ್ತೆ ನನ್ನ ಕಾಲಿನ ಮೇಲೆ ಎದ್ದುನಿಲ್ಲುವಂತೆ ಮಾಡಿದೆ.






0 Comments