ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಅವ್ವ 'ಭೂಮಿ ಹುಣ್ಣಿಮೆ'

ಹರ್ಷಕುಮಾರ್ ಕುಗ್ವೆ

ಈಗ್ಗೆ ಮುವತ್ತೆರಡು ವರ್ಷಗಳ ಹಿಂದೆ ಬದುಕನ್ನು ದಲಿತ ಚಳುವಳಿಗೆ ಅರ್ಪಿಸಿದ ಉತ್ಸಾಹದಲ್ಲಿದ್ದ ಹೋರಾಟಗಾರನ ಹೆಂಡತಿಯಾಗಿ, ಚಳವಳಿ ಏಕೆಂದೂ ಅರಿಯದ ಮುಗ್ಧೆಯಾಗಿ ಸಂಸಾರದ ನೊಗವನ್ನು ತನ್ನೊಬ್ಬಳ ಹೆಗಲ ಮೇಲೇ ಹೊತ್ತುಕೊಂಡು ಹೊಲ ಗದ್ದೆ ಕೆಲಸ, ಮನೆ ಕೆಲಸ ಮಾಡಿಕೊಂಡು, ಮುವರು ಮಕ್ಕಳನ್ನು ಸಲುಹಿಕೊಂಡು ಜೀವನವಿಡೀ ಕಷ್ಟದಲ್ಲಿ ಕಳೆದಿದ್ದ ಅವ್ವ, ಪಿಯು ಸೇರಿದಾಗಿನಿಂದ ಈಗ್ಗೆ ನಾಲ್ಕೈದು ವರ್ಷಗಳ ಹಿಂದಿನ ವರೆಗೂ ಅಪ್ಪ ಅಂದು ಹಿಡಿದಿದ್ದ ದಾರಿಯನ್ನೇ ಹಿರಿಯ ಮಗನೂ ಹಿಡಿದು ಮನೆಗೆ ಬೆನ್ನು ತೋರಿಸಿದ್ದಾಗಲೂ ಧೈರ್ಯ ಕಳೆದುಕೊಳ್ಳದ ಅವ್ವ, ಅಪಾರ ನೋವಿನಲ್ಲೂ ನಗುವನ್ನು ಎಲ್ಲರಿಗೆ ಹಂಚುತ್ತಿದ್ದ ಅವ್ವ, ಕಳೆದ ಐದು ದಿನಗಳ ಹಿಂದೆ ಅನ್ನನಾಳ-ಯಕೃತಿನ (ಲಿವರ್) ಕ್ಯಾನ್ಸರ್ ಗೆ ತುತ್ತಾಗಿದ್ದು ತಿಳಿದಾಗ ಎದೆ ಒಡೆದಂತಾಗಿತ್ತು.

ಅದೂ ಕ್ಯಾನ್ಸರ್  ನ ನಾಲ್ಕನೇ ಹಂತದಲ್ಲೇ ನಮಗೆ ತಿಳಿದು ಬಂದಿದ್ದು. ಆದರೂ ಗಟ್ಟಿಗಿತ್ತಿಯಾದ ಅವ್ವ ಹೇಗಾದರೂ ಉಳಿಯಬಹುದು ಎಂಬ ಬೃಹದಾಸೆಯಿಂದ ನಡೆಸಿದ ಪ್ರಯತ್ನಗಳು ಫಲಿಸಲೇ ಇಲ್ಲ. ಕಂಡ ಕಲ್ಲಿಗೆಲ್ಲಾ ಕೈಮುಗಿದು ಹರಕೆ ಹೊರುತ್ತಿದ್ದ, ಉಪವಾಸವಿದ್ದು ಪೂಜೆ ನಡೆಸುತ್ತಿದ್ದ ಅವ್ವನನ್ನು ಆ ಒಂದು ದೇವರೂ ಉಳಿಸುವ ಮನಸ್ಸು ಮಾಡಲಿಲ್ಲ.
ಆಸ್ಪತ್ರೆಯಲ್ಲಿದ್ದಾಗ ವಿಪರೀತ ನೋವುಣ್ಣುತ್ತಿದ್ದ ಅವ್ವ ಒಂದು ದಿನವೂ ಸಪ್ಪೆ ಮುಖ ಮಾಡಿಕೊಳ್ಳಲಿಲ್ಲ. ಅವಳ ಕಣ್ಣುಗಳಲ್ಲಿ ಅವಳ ಬದುಕುವ ಆಸೆ ಹೊಳೆಯುತ್ತಿತ್ತು. ನೋವು ಕೊಂಚ ಕಡಿಮೆಯಾರೆ ಸಾಕು ಹತ್ತಾರು ಸೋಬಾನೆ ಹಾಡುಗಳನ್ನು ಗಂಟೆಗಟ್ಟಲೆ ಹಾಡಲು ತೊಡಗುತ್ತಿದ್ದ ನನ್ನ ನಿರಕ್ಷರಿ ಅವ್ವನ ನೆನಪಿನ ಶಕ್ತಿಯನ್ನು ಕಂಡು ನನ್ನ ಮನಸ್ಸು ಬೆರಗಾಗುತ್ತಿತ್ತು. ನಾವು ಚಿಕ್ಕವರಿದ್ದಾಗಿಂದಲೂ ದಿನವಿಡೀ ಹೊಲದ ಕೆಲಸ ಮಾಡಿ ರಾತ್ರಿ ಒಲೆಗೆ ಸೌದೆ ಒಟ್ಟಿ ಬೆಂಕಿ ಮಾಡುವಾಗ ಅವ್ವನ ಹಾಡುಗಳನ್ನು, ಕತೆಗಳನ್ನು ಆಲಿಸುತ್ತಿದ್ದ ನನಗೆ ಈಗ ಆಸ್ಪತ್ರೆಯಲ್ಲಿ ಅವ್ವನ ಪಕ್ಕದಲ್ಲಿ ಮಲಗಿಕೊಂಡು ಅದೇ, ಹಾಡುಗಳನ್ನು , ಕತೆಗಳನ್ನು ಕೇಳುವ ಅವಕಾಶ ಮತ್ತೆ ನನಗೆ ಸಿಕ್ಕಿದ್ದು ಅದೃಷ್ಟವೋ ನನ್ನ ದುರಾದೃಷ್ಟವೋ ತಿಳಿಯದೇ ಚಡಪಡಿಸುತ್ತಿದ್ದೆ.
ಎರಡು ತಿಂಗಳಿಂದೀಚೆಗೆ ಕ್ಯಾನ್ಸರ್ ಕೋಶಗಳು ವಿಪರೀತ ಬೆಳೆದು ಅವ್ವನ ನೋವು ಇಮ್ಮಡಿಗೊಂಡಿತ್ತು. ಅದರ ನಡುವೆ ತಮ್ಮನ ಮದುವೆಯ ಮೂರು ದಿನಗಳ ಕಾಲ ತನ್ನ ನೋವನ್ನೇ ಮರೆತುಬಿಟ್ಟಿದ್ದಳು. ಆದರೆ ಅತ್ಯಂತ ಕ್ರೂರಿ ಖಾಯಿಲೆ ಈ ಕ್ಯಾನ್ಸರ್ ಇಂಚಿಂಚಾಗಿ ಅವ್ವನನ್ನು ಆವರಿಸಿಕೊಳ್ಳುತ್ತಿತ್ತು. ಅವ್ವ ಮಗುವಾಗಿದ್ದಳು. ನಾನು ಅವ್ವನಾಗಿದ್ದೆ.
ಮೊನ್ನೆ ಜುಲೈ ೩೦ರಂದು ನನ್ನ ತೊಡೆಯ ಮೇಲೆ ಮಲಗಿ ತನ್ನ ಕಡೆಯ ಉಸಿರನ್ನು ಬಿಡುವವರೆಗೂ ಅವ್ವ ನಮಗೆಲ್ಲಾ ಅಳಬೇಡ್ರಿ ಎಂದು ಸಮಾಧಾನ ಮಾಡುತ್ತಲೇ ಇದ್ದಳು. ಹಿಂದಿನ ದಿನ ಹೆದರಬ್ಯಾಡ್ರಿ ಮಗಾ ನಾನು ನಿಮ್ಮ ಕಣ್ಣಾಗಿ ಇರ್ತೀನಿ. ಅಳಬ್ಯಾಡ್ರಿ ಎಂದು ಧೈರ್ಯ ನೀಡಿದ್ದ ಅವ್ವ ಬದುಕಿನುದ್ದಕ್ಕೂ ನಮ್ಮಿಂದ ಪಡೆಕೊಂಡಿದ್ದು ತೀರಾ ಕಡಿಮೆ.

ಅವ್ವನ ಬೇಕು ಬೇಡಗಳನ್ನು ಪೂರ್ತಿಯಾಗಿ ಈಡೇರಿಸುವ ಅದೃಷ್ಟ ನಮಗೆ ಇರಲಿಲ್ಲ. ಅವ್ವನಿಗೆ ೫೨ ವರ್ಷ ವಯಸ್ಸಾಗಿತ್ತು . ನೋವಿನಲ್ಲೂ ನಗುವ ಧೈರ್ಯ, ಕಷ್ಟಗಳನ್ನು ನೀರಿನಂತೆ ಕುಡಿದು ಬದುಕುವ ಕೆಚ್ಚು, ಸಂಕಟಗಳನ್ನೂ ಹಾಡಾಗಿಸುವ ಅವ್ವನ ಜೀವನ ಪ್ರೀತಿ, ಮನೆಗೆ ಬರುವ ನೆಂಟರಿಷ್ಟರು, ಅಪ್ಪನ, ಮಕ್ಕಳ ಸ್ನೇಹಿತರು, ಯಾರೇ ಇರಲಿ ಪ್ರೀತಿಯನ್ನಷ್ಟೇ ತೋರುತ್ತಿದ್ದ ಅವಳ ಕಕ್ಕುಲಾತಿ, ಒಳಗೊಂದು ಹೊರಗೊಂದು ನೀತಿಯನ್ನು ಎಂದೂ ಯಾರೆದುರೂ ತೋರದ ಅವ್ವನ ನೇರನಿಷ್ಟುರತೆ, ಎಷ್ಟು ದಕ್ಕಿಸಿಕೊಳ್ಳುವ ಶಕ್ತಿ ನನಗಿದೆಯೋ ಗೊತ್ತಿಲ್ಲ.
ಈ ನಡುವೆ ಅವ್ವ, ಅಪ್ಪ, ತಂಗಿ, ತಮ್ಮ ಹಾಗೂ ನನಗೆ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸ್ಥೈರ್ಯ ನೀಡಿದ್ದ, ನನ್ನ ಅನೇಕ ಗೆಳೆಯರು ತೋರಿದ ಪ್ರೀತಿಗೆ ನನ್ನ ಕಣ್ಣಾಲಿಗಳು ತೊಯ್ದಿವೆ. ಅವರೆಲ್ಲರಿಗೆ ಕೃತಜ್ಞತೆಗಳು.

‍ಲೇಖಕರು G

4 August, 2013

8 Comments

  1. D.Ravivarma

    ಅವ್ವನ ಬೇಕು ಬೇಡಗಳನ್ನು ಪೂರ್ತಿಯಾಗಿ ಈಡೇರಿಸುವ ಅದೃಷ್ಟ ನಮಗೆ ಇರಲಿಲ್ಲ. ಅವ್ವನಿಗೆ ೫೨ ವರ್ಷ ವಯಸ್ಸಾಗಿತ್ತು . ನೋವಿನಲ್ಲೂ ನಗುವ ಧೈರ್ಯ, ಕಷ್ಟಗಳನ್ನು ನೀರಿನಂತೆ ಕುಡಿದು ಬದುಕುವ ಕೆಚ್ಚು, ಸಂಕಟಗಳನ್ನೂ ಹಾಡಾಗಿಸುವ ಅವ್ವನ ಜೀವನ ಪ್ರೀತಿ, ಮನೆಗೆ ಬರುವ ನೆಂಟರಿಷ್ಟರು, ಅಪ್ಪನ, ಮಕ್ಕಳ ಸ್ನೇಹಿತರು, ಯಾರೇ ಇರಲಿ ಪ್ರೀತಿಯನ್ನಷ್ಟೇ ತೋರುತ್ತಿದ್ದ ಅವಳ ಕಕ್ಕುಲಾತಿ, ಒಳಗೊಂದು ಹೊರಗೊಂದು ನೀತಿಯನ್ನು ಎಂದೂ ಯಾರೆದುರೂ ತೋರದ ಅವ್ವನ ನೇರನಿಷ್ಟುರತೆ, ಎಷ್ಟು ದಕ್ಕಿಸಿಕೊಳ್ಳುವ ಶಕ್ತಿ ನನಗಿದೆಯೋ ಗೊತ್ತಿಲ್ಲ.
    ಈ ನಡುವೆ ಅವ್ವ, ಅಪ್ಪ, ತಂಗಿ, ತಮ್ಮ ಹಾಗೂ ನನಗೆ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸ್ಥೈರ್ಯ ನೀಡಿದ್ದ, ನನ್ನ ಅನೇಕ ಗೆಳೆಯರು ತೋರಿದ ಪ್ರೀತಿಗೆ ನನ್ನ ಕಣ್ಣಾಲಿಗಳು ತೊಯ್ದಿವೆ. ಅವರೆಲ್ಲರಿಗೆ ಕೃತಜ್ಞತೆಗಳು.
    naanu nimma dukhadalli baagiyaagiruve….

  2. Ramesh Aroli

    ಡಿಯರ್ ಹರ್ಷ,
    ಮಕ್ಕಳು ತಮ್ಮ ಮಕ್ಕಳಾಗಿ ಉಳಿಯಲಿಲ್ಲ ಅಂತ ಕೊರಗುವವರ ನಡುವೆ ನೀನು ಅವ್ವನಿಗೆ ಅವ್ವನಾಗಿದ್ದು ಅವ್ವ ನಿನಗೆ ಮಗುವಾಗಿದ್ದು ಭಾಗ್ಯ ಅನ್ಬೇಕೋ ಮತ್ತೇನು ಅನ್ಬೇಕೊ ತಿಳೀತಿಲ್ಲ. ಕೃತಕವಲ್ಲ ಎಂದಾದರೆ ಇಷ್ಟು ಹೇಳಬಹುದೇನೋ…
    ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು
    ಹೆತ್ತದ್ದಕ್ಕೆ, ಸಾಕಿದ್ದಕ್ಕೆ ಮಣ್ಣಲ್ಲಿ ಬದುಕಿ
    ಮನೆಯಿಂದ ಹೊಲಕ್ಕೆ ಹೋದಂತೆ
    ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ!!

  3. yash

    ಏನನ್ಬೇಕೊ ತಿಳೀತಿಲ್ಲ…

  4. ರೂಪ ಹಾಸನ

    ಕಣ್ಣು ತುಂಬಿ ಬಂತು. ನಿಮ್ಮ ಅವ್ವನ ದಿಟ್ಟತನ ಜೀವನೋತ್ಸಾಹ ಖಂಡಿತಾ ನಿಮ್ಮ ಜೊತೆಗೆ ಸದಾ ಇರುತ್ತದೆ ಎಂದು ಭಾವಿಸಿರುವೆ. ಹಾಗೇ ಅವರ ಹಾರೈಕೆಯೂ… ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲವಾದರೂ ನಿಮ್ಮ ನೆರವಿನ ಅವಶ್ಯಕತೆ ಇರುವ ಹಲವು ತಾಯಂದಿರು ಇದ್ದೇ ಇದ್ದಾರೆ. ನಿಮ್ಮ ಸಂಕಟ ಆರಿ ಸಮಾಧಾನ ದೊರೆಯಲೆಂದು ಹಾರೈಸುವೆ.

  5. ಅರುಣ್ ಜೋಳದಕೂಡ್ಲಿಗಿ

    ಪ್ರಿಯ ಹರ್ಷ
    ಗಟ್ಟಿಗಿತ್ತಿ ಅವ್ವನ ನೆನಪೂ ಕೂಡ ನಿಮಗೆ ಆತ್ಮವಿಶ್ವಾಸವನ್ನೂ, ದೈರ್ಯವನ್ನೂ ಕೊಡುತ್ತದೆ ಎಂದು ನಂಬುವೆ.
    ಅವ್ವನಿಗೊಂದು ನನ್ನ ನಮನ.

  6. Shivappa Nayak

    Sorry to hear that she died at a relatively young age of 52. Early diagnosis of cancer could have helped.

  7. Sharadhi

    Sorry to hear about the untimely demise of your Mother. May her soul rest in peace and may you keep up the good work -Sh

  8. Gururaj katriguppe

    ಈ ನಾಡಿನ ನಿಜವಾದ ಚಳುವಳಿಗಾರರು ನಮ್ಮೆಲ್ಲಾ ‘ಅವ್ವಂದಿರೇ’. ನಿಮ್ಮ ಅವ್ವನ ಗಟ್ಟಿತನ ಎಲ್ಲ ಮಹಿಳೆಯರಲ್ಲೂ ಮೂಡಲಿ ಎಂಬ ಆಶಯದೊಂದಿಗೆ ಅವರಿಗೆ ನನ್ನ ನಮನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading