ರವೀಂದ್ರ ಗಂಗಲ್
ಹಲವು ವರ್ಷಗಳಿಂದ ವಿಚಿತ್ರವಾದ ಅನುಭವದೊಂದಿಗೆ ಅಪೂರ್ಣವಾಗಿ ಅರ್ಥವಾಗುತ್ತಿದ್ದ ಈ ಹಾಡು ಇವತ್ತು ದಿವ್ಯ ಅನುಭೂತಿಯನ್ನು ನನಗೆ ಧಾರೆಯೆರೆಯುತ್ತಿದೆ. ವಿಶ್ವವೆಂಬ ವಿರಾಟ್ ವೀಣೆಗೆ ಬರಿ ನಾಕು ನಾಕೆ ತಂತಿ. ನಾನು, ನೀನು, ಆನು ಮತ್ತು ತಾನು. ನಾನು ಎಂದರೆ ಗಂಡು, ನೀನು ಎಂದರೆ ಹೆಣ್ಣು, ಆನು ಎಂದರೆ ಗಂಡುಹೆಣ್ಣಿನ ಮನೋದೈಹಿಕ ಮಿಲನದಿಂದ ಉದ್ವವಿಸಿರುವ ಮಗು ಮತ್ತು ತಾನು ಎಂದರೆ ಈ ಮೂರನ್ನು ಪೋಷಿಸುತ್ತಿರುವ ನಿಸರ್ಗ ಅಥವಾ ಸೃಷ್ಟಿಕರ್ತ. ಈ ನಾಕುತಂತಿಗಳನ್ನು ಬಿಟ್ಟರೆ ವಿಶ್ವವೆಂಬುದು ಜನ್ಮ ತಾಳುತ್ತಿರಲಿಲ್ಲ. ಈ ನಾಕುತಂತಿಗಳ ತುಡಿತವೇ ವಿಶ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟಿದೆ. ಈ ನಾಕುತಂತಿಗಳ ಮಿಡಿತವೇ ವಿಶ್ವ ಕೇಂದ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದೆ. ಈ ನಾಕುತಂತಿಗಳ ಕಲಹದಿಂದ ಸಂಭವಿಸಿರುವ ಹೋರಾಟವೇ ವಿಶ್ವದ ಇತಿಹಾಸವಾಗಿ ರೂಪಗೊಂಡಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ನಿಜವೆನ್ನಿಸುತ್ತದೆ. ತಾತ್ವಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ಸತ್ಯವೆನ್ನಿಸುತ್ತದೆ. ಈ ಮಹೋನ್ನತ ಕವಿತೆಯನ್ನು ಕರುಣಿಸಿದ ‘ಬೇಂದ್ರೆ’ ಎಂಬ ನಿಗೂಢ ದಾರ್ಶನಿಕನಿಗೆ ನನ್ನ ಕೋಟಿ ನಮನ.

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾ…
ನಾನು ನೀನಿನ
ಈ ನೀನಾನಿಗೆ
ಬೇನೆ ಏನೋ?
ಜಾಣಿನಾ…
ಚಿತ್ತೀಮಳಿ, ತತ್ತಿ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿಯೋ ಮಗನ
ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ, ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ
*ನಾಕುತಂತಿ-ಅಂಬಿಕಾತನಯದತ್ತ







Nice Sir Bendreeravar Kavanagalu Odidagaleella Yavagalu hOsa hosa arta needutade