ಮಾತ-ಬೆಳ್ಳಿ, ಮೌನ-ಮಾರಣಹೋಮ!
ಎಚ್ ಎನ್ ಆರತಿ
ಗೆಳತಿಯರೊಂದಿಗೆ ಮದುವೆಗೆ ಲಕಲಕ ಅಲಂಕರಿಸಿಕೊಂಡು ಹೋದವಳು, ಉತ್ಹಾಹವೇ ಮೈತೊಟ್ಟು ಬಂದಂತೆ ಮನೆಗೆ ವಾಪಸು ಬಂದಳು.
ಆಫೀಸಿನಿಂದ ಆಗಲೇ ಬಂದಿದ್ದ ಗಂಡ ಟಿವಿ ನೋಡುತ್ತಾ ಕುಳಿತಿದ್ದ. ಅವನನ್ನು ನೋಡಿದ ತಕ್ಷಣ ಖುಷಿಯಿಂದ “ಏಯ್, ಯಾವಾಗ ಬಂದೆ? ಕಾಫಿ ಆಯ್ತಾ?” ಎಂದವಳ ಕಣ್ಣಿಗೆ ಅವನ ಪಕ್ಕ ಇದ್ದ ಕಿಟಕಿಯ ಕಟ್ಟೆಯ ಮೇಲೆ ಮಟ್ಟಸವಾಗಿ ವಿರಾಜಮಾನವಾಗಿದ್ದ ಕಾಫಿಯ ಕಪ್, ಆಗಿದೆ ಎಂದು ಕೂಗಿ ಹೇಳಿತು.
ಮುಗುಳ್ನಕ್ಕವಳು, ಮದುವೆ ಮನೇಲಿ ಇವತ್ತು ಯಾರು ಸಿಕ್ಕಿದ್ರು ಗೊತ್ತಾ? ಎಂದು ಕಣ್ಣರಳಿಸಿದಳು. ಅವನು ಉತ್ತರಿಸಲಿಲ್ಲ. ಸುಮ್ಮನೇ ಏನೂ ಕೇಳದವನಂತೆ ದಿವ್ಯ ನಿರ್ಲಕ್ಷ್ಯದಿಂದ ಟಿವಿ ನೋಡುತ್ತಿದ್ದ…
ಆ ಮನೆಯಲ್ಲಿ ಆ ಘಳಿಗೆ ಅನೇಕ ಕೊಲೆಗಳಾದವು!
ಮಾಂಸದಂಗಡಿಯಲ್ಲಿ ಕಚಕ್ಕನೆ ತಲೆ ಕತ್ತರಿಸಿಕೊಂಡು ವಿಲವಿಲವೆನ್ನುವ ಪ್ರಾಣಿಗಳ ಹಾಗೆ ಅವಳ ಕಣ್ಣೆದುರೇ ಒಂದು ಮಾರಣಹೋಮ ನಡೆಯಿತು!
ಅರಸಿ ಬಯಸಿದ್ದ ಅವಳ ಅಂದದ ಅಲಂಕಾರದ ಬಗೆಗಿನ ಮೆಚ್ಚುಗೆಯ ನೋಟದ ಕೊಲೆ,
ಹೇಳಬೇಕೆಂದು ಹೊತ್ತುತಂದಿದ್ದ ರಂಜನೆಯ ಕತೆಯ ಕೊಲೆ,
ಅವಳ ಅಪರಿಮಿತ ಅಗಾಧ ಉತ್ಸಾಹದ ಕೊಲೆ,
ಅವಳ ನಾಲಿಗೆಯ ಮೇಲೆ ನರ್ತಿಸುತ್ತಿದ್ದ ಅಸಂಖ್ಯ ಮಾತುಗಳ ಕೊಲೆ,
ಬೆಳಗಿನಿಂದ ಅನುಭವಿಸಿದ ಇಡೀ ದಿನದ ಸಡಗರದ ಕೊಲೆ…
ಗಾಢ ವಿಷಾದ ಅವಳ ಕಣಕಣಕ್ಕೂ ವಿಷದಂತೆ ಇಳಿಯುತ್ತಿದ್ದ ಹಾಗೇ, ಆ ಉಸಿರಲ್ಲೇ ಏನಾಗುತ್ತಿದೆ ಎಂದು ತಿಳಿಯಬಲ್ಲವನ ಕಣ್ಣುಗಳಲ್ಲಿ, ಅವಳದೆಲ್ಲವನ್ನೂ ಸದೆಬಡಿದ ಸಂಭ್ರಮ!
ಆ ಕ್ರೂರ ಬೆಳಕಲ್ಲಿ ಕಣ್ಣು ಕಾಣದ ಕುರುಡಿಯಂತೆ ಇವಳು ಹೆಣಭಾರದ ಕಾಲು ಎಳೆದು ಹಾಕುತ್ತಾ ತಟ್ಟಾಡುತ್ತಾ, ಎಂದಿನಂತೆ ಕೋಣೆ ಸೇರಿದಳು…!
ಮಾತು ಬೆಳ್ಳಿ, ಮೌನ ಮಾರಣಹೋಮ!!!





ಚೆನ್ನಾಗಿದೆ…ದಿನನಿತ್ಯ ನಡೆಯುವ. ಕೊಲೆಗಳು …
Super ! ಒಂದು ಮೌನ ! ಎಲ್ಲದಕ್ಕೂ ಸಾಧನ….!
maatu beLLI, mauna maaraNahOma! chennagide.
ಮಾತು ಬೆಳ್ಳಿ, ಮೌನ ಮಾರಣಹೋಮ!!!
ಎಂಥ ಮಾತು !!!! My god am speechless
ಯಾವ ಕೊಲೆ ಅಂತ ಕುತೂಹಲವಿತ್ತು. ನಡೆದ ಕೊಲೆಗಳ ಬಗ್ಗೆ ತಿಳಿದು, ನಿಜ ಅನ್ನಿಸಿತು. ನಿತ್ಯ ಜೀವನದಲ್ಲಿ ಇಂತಹ ಕೊಲೆಗಳು ಸದ್ದಿಲ್ಲದೆ ನಡೆಯುತ್ತಲೇ ಇರುತ್ತವೆ…