ಸಂಕೇತ್ ಗುರುದತ್ತ
ಕನ್ನಡ ವ್ಯಂಗ್ಯಚಿತ್ರ ಲೋಕದಲ್ಲಿ `ಕಾರ್ಟೂನ್ ಪ್ರಸನ್ನ’ ಎಂದೇ ಖ್ಯಾತರಾಗಿದ್ದ ತುಮಕೂರಿನವರಾದ ಪ್ರಸನ್ನ ಅವರು ಇನ್ನಿಲ್ಲ.
ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿ ವಿ ರಾಮಮೂರ್ತಿ ಹಾಗೂ ನಾಡಿಗ್ ಅವರ ಸಮಕಾಲೀನರಾಗಿದ್ದ ಪ್ರಸನ್ನ ಅವರು ವ್ಯಂಗ್ಯಚಿತ್ರ ರಚನೆಯನ್ನು ಪ್ರವೃತ್ತಿಯಾಗಷ್ಟೇ ರೂಢಿಸಿಕೊಂಡಿದ್ದರು. ಹಾಗಲ್ಲದೇ ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಲ್ಲಿ ಇವರ ಹೆಸರು ಈಗಿನ ತಲೆಮಾರಿನವರಿಗೂ ತಿಳಿದಿರುತ್ತಿತ್ತು ಎನ್ನುವುದು ಖಚಿತ.
ಆ ಕಾಲದ ಪ್ರಜಾವಾಣಿ, ಮಯೂರ, ತುಷಾರ, ಉದಯವಾಣಿ, ಹಾಗೂ ಹಲವರು ಕುಟುಂಬ ವಾರಪತ್ರಿಕೆಗಳಲ್ಲಿ ಇವರ ಚುರುಕಾದ ಸಂಭಾಷಣೆಯ ಕಾರ್ಟೂನ್ಗಳು ಪ್ರಕಟವಾಗುತ್ತಿತ್ತು. 1960-70ರಲ್ಲಿ ಅವರ ಕಾರ್ಟೂನ್ಗಳ ಆಕರ್ಷಣೆ ಹೆಚ್ಚಾಗಿತ್ತು. ಮೂಲತಃ ತುಮಕೂರಿನವರಾದ ಪ್ರಸನ್ನ ಅವರು ಅಲ್ಲಿನ ಸ್ಥಳೀಯ ಪತ್ರಿಕೆಗಳಿಗೂ ಆಗಾಗ ವ್ಯಂಗ್ಯಚಿತ್ರಗಳನ್ನು ರಚಿಸಿಕೊಡುತ್ತಿದ್ದರು.
ಬಹುಶಃ ತುಮಕೂರಿನಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಕಾಲಿಟ್ಟವರು ಪ್ರಸನ್ನ ಅವರೇ ಇರಬೇಕು. ಆನಂತರದಲ್ಲಿ ಟಿ ಎನ್ ಗುರುದತ್, ಈಗ ನಾಡಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಖ್ಯಾತರಾಗಿರುವ ಗುಜ್ಜಾರ್ ಹಾಗೂ ಮತ್ತಿತರರು ಬಂದರು, ಬರುತ್ತಿದ್ದಾರೆ. ಆದರೆ ಆ ಕಾಲದಲ್ಲಿಯೇ ತುಮಕೂರಿನಲ್ಲೇ ಕೂತು ತಮ್ಮ ನಿಷ್ಠೂರ ಹಾಗೂ ನೇರ ಟೀಕೆಗಳಿಂದ ಚುರುಕಾದ ಕಾರ್ಟೂನ್ಗಳನ್ನು ರಚಿಸುತ್ತಾ ಬಂದರು. ಅವರ ಆಕಾಲದ ಕಾರ್ಟೂನ್ಗಳು ಈಗಲೂ ಪ್ರಸ್ತುತ ಎನಿಸುತ್ತಿದೆ. ವ್ಯಂಗ್ಯಚಿತ್ರಕಾರನಲ್ಲಿ ಇರಬೇಕಾದ ಸಾರ್ವಕಾಲಿಕ ಆಲೋಚನೆಯನ್ನು ಈ ಪ್ರಸನ್ನ ಅವರು ಹೊಂದಿದ್ದರಲ್ಲದೇ ಈ ದಿನಮಾನದ ವ್ಯಂಗ್ಯಚಿತ್ರಕಾರರಿಗೆ ಮಾದರಿಯಾಗಿದ್ದಾರೆ. ಅವರು ಭೌತಿಕವಾಗಿಲ್ಲದಿದ್ದರೂ ಅವರ ಕಾರ್ಟೂನ್ಗಳು ಈಗಲೂ ನಗಿಸಿ ಅವರಿಲ್ಲದ ನೋವನ್ನು ಮರೆಸುವ ಗುಣವನ್ನು ಹೊಂದಿವೆ.
ತುಮಕೂರಿನ ಹೊರಗಿನ ಅಭಿಮಾನಿಗಳಿಗೆ `ತುಂಕೂರು ಪ್ರಸನ್ನ’ ಎಂದೂ ಅವರ ಆತ್ಮೀಯ ಬಳಗದಲ್ಲಿ `ಮೇಷ್ಟ್ರು’ ಎಂದೂ ಪರಿಚಿತರಾಗಿದ್ದರು. ಕನ್ನಡದ ಖ್ಯಾತ ನಟ ಹಾಗೂ ನಾಟಕಕಾರ ಟಿ ಎಸ್ ಲೋಹಿತಾಶ್ವ ಅವರ ಸಹಪಾಠಿ ಹಾಗೂ`ಜಿಗ್ರಿ ದೋಸ್ತ್’ ಆಗಿದ್ದ ಪ್ರಸನ್ನ ಅವರು ಮಾತಿನ ಮಲ್ಲರೂ ಆಗಿದ್ದು ನಿರಂತರ ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು.
ಹಲವು ವರ್ಷಗಳು ಕಾರ್ಟೂನ್ ಬರೆಯುವುದನ್ನೇ ನಿಲ್ಲಿಸಿದ್ದ ಪ್ರಸನ್ನ ಅವರು ಮತ್ತೆ 1999ರಲ್ಲಿ ತುಮಕೂರು ವಾರ್ತೆ ಸಂಸ್ಥೆಯ ಹೆಚ್ ಎಸ್ ರಾಮಣ್ಣ ಅವರ ನೇತೃತ್ವದಲ್ಲಿ ಆರಂಭವಾದ `ನಗೆಮುಗುಳು’ ಪತ್ರಿಕೆಗೆ ರಾಮಣ್ಣ ಹಾಗೂ ಆತ್ಮೀಯ ಬಳಗದ ಒತ್ತಾಯ ಮಣಿದು ಮತ್ತೆ ಕಾರ್ಟೂನ್ ಬರೆಯಲು ಆರಂಭಿಸಿದರು. ಆನಂತರದಲ್ಲಿ `ಹಾಸ್ಯಲೋಕ’ ಪತ್ರಿಕೆಗೂ ವ್ಯಂಗ್ಯಚಿತ್ರಗಳನ್ನು ಬರೆಯ ತೊಡಗಿದರು. ನಾಡಿನ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಪ್ರಕಾಶ್ ಶೆಟ್ಟಿ ಅವರು ಆರಂಭಿಸಿದ ವಾರೆ-ಕೋರೆಯಲ್ಲೂ ಪ್ರಸನ್ನ ಅವರ ವ್ಯಂಗ್ಯಚಿತ್ರಗಳನ್ನು ಕಾಣಬಹುದಾಗಿತ್ತು.
ಇವರ ನಿಕಟವರ್ತಿಗಳಾಗಿದ್ದ ಶಿಲ್ಪ ಸ್ಟುಡಿಯೋ ಸೂರಿ ಹಾಗೂ ಪಮ್ಮಿ ಇವರನ್ನು ದಿನವೂ ಹುರಿದುಂಬಿಸಿ ಕಾರ್ಟೂನ್ ಬರೆಸಿದ ಕ್ಷಣಗಳೂ ಇವೆ. ತಮ್ಮಲ್ಲಿ ಅಗಾಧವಾದ ಪ್ರತಿಭೆ ಇದ್ದರೂ ಅದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮ್ಮದೇ ಆದ ವೃತ್ತಿಯಲ್ಲಿ ತೊಡಗಿಕೊಳ್ಳಲು ಹಾತೊರೆಯುತ್ತಿದ್ದರು ಎನ್ನುವುದು ಅವರ ಸ್ಥಳೀಯ ಅಭಿಮಾನಿಗಳಿಗೆ ತಿಳಿದದ್ದೆ.
ಆದರೆ ವ್ಯಂಗ್ಯಚಿತ್ರಗಳನ್ನು ಹೇಗೆ ಬರೆಯಬೇಕು, ಹೇಗೆಲ್ಲ ಪಂಚ್ ಕೊಡಬೇಕು, ಯಾವ ವಿಷಯ ಬೇಗ ಜನರನ್ನು ತಲುಪುತ್ತದೆ ಎಂಬೆಲ್ಲ ವಿಷಯಗಳನ್ನು ಸರಳವಾಗಿ ಹೊಸದಾಗಿ ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಕಾಲಿಟ್ಟವರಿಗೆ ಕಲಿಸಿಕೊಡುತ್ತಿದ್ದರು. ಈಗ ಇಲ್ಲಿ ಪ್ರಕಟವಾಗಿರುವ ಕಾರ್ಟೂನ್ಗಳು ಈಗಿನ ಹಾಗೂ ಮುಂದಿನ ವ್ಯಂಗ್ಯಚಿತ್ರಕಾರರಿಗೆ ಮಾದರಿಯಾಗಬಹುದು.
ಅ ರಾ ಮಿತ್ರ ಅವರ ಆತ್ಮೀಯ ನುಡಿ
ಗೆಳೆಯ ಪ್ರಸನ್ನ ಚಿರಕಾಲದಿಂದ ನನಗೆ ಪರಿಚಿತರು. ಅವರ ಸೂಕ್ಷ್ಮ ನಿರೀಕ್ಷಣ ಶಕ್ತಿಯನ್ನೂ, ಲಾಸ್ಯವನ್ನೂ, ಸಾಮಾಜಿಕ ಕಾಳಜಿಯನ್ನೂ ನಾನು ಅವರ ವ್ಯಂಗ್ಯಚಿತ್ರಗಳಲ್ಲಿ ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. `ವ್ಯಂಗ್ಯ’ ಎಂಬ ಮಾತಿಗೆ ಕನ್ನಡದಲ್ಲಿ ಕುಹಕ, ಲೇವಡಿ, ಮೊದಲಾದ ಅರ್ಥಗಳಿರುವಂತೆ ತುಂಬಾ `ಧ್ವನಿಪೂರ್ಣವಾದದ್ದೂ’ ಎಂಬ ವಿಶೇಷಾರ್ಥವೂ ಇದೆ. ಪ್ರಸನ್ನ ಅವರ ವ್ಯಂಗ್ಯಚಿತ್ರಗಳು ಈ ಎರಡೂ ಅರ್ಥಗಳನ್ನು ಸಾಧಿಸುವ ದಿಕ್ಕಿನಲ್ಲಿ ಸಮರ್ಥವಾಗಿ ದುಡಿದಿದೆ. ಚಿತ್ರಲೋಕ, ವ್ಯಾಖ್ಯಾನ ಲೋಕ ಎರಡನ್ನೂ ಪ್ರಸನ್ನರು ಒಂದಕ್ಕೊಂದು ಪೂರಕವಾಗುವಂತೆ, ಒಂದರಿಂದ ಒಂದು ಸತ್ವದ ಸಾಣೆ ಹಿಡಿಸಿಕೊಳ್ಳುವಂತೆ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಗೆರೆಗಳು ತುಂಬಾ ಜೀವಂತಿಕೆಯಿಂದ ಪುಟಿದು ಅರ್ಥಲೋಕಕ್ಕೆ ದಾಳಿ ಇಟ್ಟು ಸಾರ್ಥಕವನ್ನಿಸಿದೆ.
(ಅ ರಾ ಮಿತ್ರ ಅವರು ಪೂರ್ಣಿಮಾ ಸಾಹಿತ್ಯ ಮಂದಿರ ಪ್ರಕಾಶನದ ಪ್ರಸನ್ನ ಅವರ `ನಕ್ಕು ಪ್ರಸನ್ನರಾಗಿ’ ನೂರು ನಗೆಚಿತ್ರಗಳ ಪುಸ್ತಕಕ್ಕೆ ಬರೆದು ಕೊಟ್ಟ `ಗೀಚುವಾಣಿ’ ಯಲ್ಲಿ ಈ ಮೇಲ್ಕಂಡಂತೆ ಪ್ರಸ್ತಾಪಿಸಿದ್ದಾರೆ)







ನಮ್ಮ ತುಮಕೂರಿನ ಅಪರೂಪದ ಕಲಾವಿದ ಪ್ರಸನ್ನ ಅವರಿಗೆ ಅವರಲ್ಲಿದ್ದ ಅಪರೂಪ ಪ್ರತಿಭೆಯ ಬಗ್ಗೆ ಕಿಂಚಿತ್ತೂ ಬಿಗುಮಾನವಿರಲಿಲ್ಲ. ಅದೊಂದು ರತ್ನ!
ತುಮಕೂರು ಜಿಲ್ಲೆಯ ಜನಪದಕ್ಕೂ ಈ ಕಲಾವಿದನ ಅಗಾಧ ಪ್ರತಿಭೆಯ ಬಗ್ಗೆ ಇರಬೇಕಾದಷ್ಟು ಮಾಹಿತಿ ಇರಲಿಲ್ಲ. ಮೇರುಗಿರಿಯೊಂದು ತನ್ನ ಮೇರುತ್ವದ ಬೆಲೆಯನ್ನೆ ಅರಿಯದೆ ಇದ್ದು ಬಿಟ್ಟ ಹಾಗೆ ಪ್ರಸನ್ನ ಇದ್ದರು. ಅವರ ಗೆರೆಗಳ ಚುರುಕು, ನಿಖರತೆ, ಇಟ್ಟ ಗುರಿಗೆ ತಟ್ಟನೆ ತಾಗುವ ಚೂಪು, ಅವರ ಅಡಿಬರಹಗಳಲ್ಲಿರುತ್ತಿದ್ದ ಚುರುಕು ಒಂದೊಂದೂ ಅದ್ಭುತ!!
ನನ್ನ ನಗೆಲೇಖನ ಸಂಗ್ರಹವೊಂದಕ್ಕೆ ಮುಖಪುಟ ರಚಿಸಿಕೊಡಿ ಎಂದು ಅವರನ್ನು ಕೋರಿದಾಗ ಅನಾಮಧೇಯಳ ಪುಸ್ತಕವೆಂಬ ಯಾವ ಉದಾಸೀನವನ್ನೂ ತೋರದೆ ಚಿತ್ರ ರಚಿಸಿ , ಅದರ ಬ್ಲಾಕ್ ತಯಾರಿಕೆ , ಮುಖಪುಟದ ಪ್ರಿಂಟಿನವರೆಗೂ ಅವರು ತೋರಿಸಿದ ಆಸಕ್ತಿಗೆ ನಾನು ಲಕ್ಷ ಸಲ ಕೃತಜ್ಞತೆ ಎಂದರೂ ಕಡಿಮೆ. ಆ ಮುಖಪುಟ ನನ್ನ ಎಲ್ಲಾ ಪುಸ್ತಕಗಳ ಮುಖಪುಟದ ಮುಂದೆ ಒಂದು ಮಿಂಚಿನ ಹಾಗಿದೆ.
ಪ್ರಸನ್ನ ಅವರಿಗೆ ಸಲ್ಲಬೇಕಾದ ಅನೇಕ ಸಮ್ಮಾನಗಳು ಸಲ್ಲಲೆ ಇಲ್ಲ. ವ್ಯಂಗ್ಯಚಿತ್ರಕಾರ ಹೊರತಾಗಿ ಅವರೊಬ್ಬ ಪ್ರಬುದ್ದ ಚಿಂತಕ. ಲಿಂಗಾಯತ /ವೀರಶೈವದ ಬಗ್ಗೆ ಅವರಿಗಿದ್ದ ಖಾಚಿತ್ಯ,, ವಚನಸಾಹಿತ್ಯದ ಕುರಿತಾದ ಚಿಕಿತ್ಸಕ ನೋಟ ಎಷ್ಟೋ ವೇಳೆ ಸಮಕಾಲೀನರಿಗಿಂತ ನೂರು ಮೈಲಿ ಮುಂದಿರುತ್ತಿತ್ತು. ಇಡೀ ಕನ್ನಡ ಸಾಹಿತ್ಯದ ಬಗ್ಗೆ ಅವರು ಗಟ್ಟಿ ದನಿಯಲ್ಲಿ ಅಭಿಪ್ರಾಯಗಳನ್ನು ಬಾಣ ಎಸೆದಂತೆ ಎಸೆಯುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಆ ಮಾತುಗಳಲ್ಲಿ ಅವರು ಅನಪೇಕ್ಷಿತವಾಗಿ ತುಂಬುತ್ತಿದ್ದ ಉಢಾಫೆ ಅದರ ಘನತೆಯನ್ನು ಕ್ಷೀಣಗೊಳಿಸುತ್ತಿತ್ತು ಎಂದೂ ನನಗನಿಸಿದೆ.
ನಮ್ಮ ನಡುವಿನ ಅಪರೂಪದ ಕಲಾವಿದ ,ಚಿಂತಕ ದೂರಾಗಿದ್ದಾರೆ. ತುಮಕೂರಿನ ಮತ್ತು ಕರ್ನಾಟಕದ ಜನತೆಗೆ ಈ ಸಾವು ಗೊತ್ತೇ ಆಗಿಲ್ಲ ಎನ್ನುವುದು ನೋವು.
ಹಮ್ಮು ಬೀಮ್ಮೀಲ್ಲದ ಸರಳ ಸಜ್ಜನಿಕೇಯ ಸ್ಮೇಹ ಜೀವಿ ವಾಚಾಳಿ ರಾಜಕೀಯ ತಾಂತ್ರಿಕ ಅಗ್ನಾತ ಮೇಧಾವಿ ಬಡುಕಲ್ಲೇ ಹಾಸ್ಯ ಕಂಡ ಅದನ್ನೇ ಉಸಿರಾಗಿಸಿಕೋಂಡ ನಮೂರ ಪ್ರಸನ್ನ ಇನ್ನಿಲ್ಲ ಅನಿಸುವುದೇ ಇಲ್ಲಾ ತಿಳಿ ಹಾಸ್ಯದಲ್ಲಿ ನಮ್ಮೊಳಗೇ ಈಗಲೂ ಇದ್ದಾರೇ.