ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಕಂಡಂತೆ ‘ಕಥೆ ಕಥಾನಕ ಪ್ರಸಂಗ’

ನಂದಿನಿ ಹೆದ್ದುರ್ಗ

ವರ್ತಮಾನ ಎದುರಿಸುತ್ತಿರುವ ತಲ್ಲಣಗಳನ್ನು ಸಮರ್ಥವಾಗಿ ಕತೆಯ ಕಸುಬಿನೊಳಗೆ ಇಳಿಸಿ ಅವರಿವರ ವಿಚಾರಗಳೆಲ್ಲವೂ ನಮ್ಮದೂ ಆಗಬಹುದಾದಂತೆ ಭಾವಗಳನ್ನು ಪೋಣಿಸುವುದರಲ್ಲಿ ನಮ್ಮ ನಡುವಿನ ಹಿರಿಯ ಕವಿ ಕೆ ಸತ್ಯನಾರಾಯಣ ಸರ್ ಪ್ರಮುಖರು. ಇಲ್ಲೀವರೆಗೆ ಬಿಡಿಬಿಡಿಯಾಗಿ ಓದುತ್ತಿದ್ದ ಅವರ ಕಥೆ ಮತ್ತು ಲೇಖನಗಳಲ್ಲಿ ಅವರ ಬರವಣಿಗೆಯ ಒಟ್ಟಂದವನ್ನು ಕಾಣುವಲ್ಲಿ ತಡವರಿಸುತ್ತಿದ್ದೆ. ಈಚೆಗೆ ಅವರು ಕಳುಹಿಸಿದ ಕಥಾಸಂಕಲನ ‘ಕಥೆ ಕಥಾನಕ ಪ್ರಸಂಗ’ವನ್ನು ಓದಿದ ಮೇಲೆ ನಾಕಾರು ದಿನ ಆ ಕಥೆಗಳ ಆವರಣದಲ್ಲೇ ಹೊಯ್ದಾಡಬೇಕೆಂಬ ಬಯಕೆಗೆ ಬೇರೆ ಓದನ್ನು ನಿಲ್ಲಿಸಿದ್ದೆ .

ಇಡೀ ಸಂಕಲನದ ಕಥೆಗಳ ಹೃದಯ ಮನುಷ್ಯನ ಅಂತರಂಗದ ಒಳಗೆ ಅಂತಸ್ಥವಾಗಿರುವ ಭ್ರಮೆ, ಮೋಹ, ದಾಹ, ಶೋಷಣೆ, ಮೇಲು, ಕೀಳು ನಂತಹ ವಿಚಾರಗಳು. ಮೀಸಲಾತಿ, ದಲಿತ ವಿಚಾರಗಳನ್ನು ಬೆಣ್ಣೆಯೊಳಗೆ ಕೂದಲೆಳೆದಂತೆ ಹೇಳುವ ಸತ್ಯನಾರಾಯಣ ಸರ್  ಹೀಗಲ್ಲ ಹೀಗೇ ಎನ್ನುವ ಯಾವ ಜಡ್ಜಮೆಂಟಲ್ ತತ್ವವನ್ನೂ ಹೇಳದೆ ಕಥೆಯ ನಂತರದ ಕಥೆಗಾಗಿ ಮನಸ್ಸು ಹಪಹಪಿಸುವಂತೆ ಮಾಡುತ್ತಾರೆ.

ಹೆಜ್ಜೆಹೆಜ್ಜೆಗೂ ಸಮಾಜ ದೊಳಗೆ ಗಾಳಿಯ ಗಂಧದಂತೆ ವಿಲೀನವಾಗಿರುವ ಜಾತಿಯ ನೋವನ್ನೂ, ಶೋಷಿಸುವ ಶೋಷಣೆಗೊಳಗಾಗುತ್ತಿರುವ ವಿಚಾರಗಳನ್ನೂ ಹೇಳುವಾಗ ಅವರ ಅನುಭವ ಕಥನಗಳಂತೆ ಅನಿಸುವ ಕಥೆಗಳು ತೀವ್ರವಾಗಿ ಸೆಳೆಯುತ್ತವೆ. ಹಾಗಂತ ಇಲ್ಲಿನ ಯಾವ ಕಥೆಗಳೂ ವಿಷಾದವನ್ನು ಬಿಂಬಿಸದೆ ವಿಕಾಸದ ಹಾದಿಯಲ್ಲಿ ನಡೆಯಬೇಕಾದ ಬಗೆಯನ್ನು ಹೇಳುತ್ತವೆ. ಇಲ್ಲಿನ ಅನೇಕ ಪಾತ್ರಗಳು ಬದುಕಿನ ಆಟದಲ್ಲಿ ಸೋತಂತೆ ಕಂಡರುಯ ದಿಟ್ಟಧ್ವನಿಯಲ್ಲಿ ಸ್ವಾಭಿಮಾನದಿಂದ ಬದುಕಿಗೆ ಮುಖಾಮುಖಿಯಾಗಿವೆ.

‘ನಿಡಿಕವಲು’ ಕತೆಯ ಕಂಡಕ್ಟರ್ ರಾಜಮ್ಮನ ಪಾತ್ರ ಪರಿಚಯವನ್ನು ಹೇಳುತ್ತಲೇ ಅವಳೊಳಗೆ ಏನೋ ಸುಖವಿಲ್ಲದ್ದು ಘಟಿಸುತ್ತಿದೆ ಎನ್ನುವುದನ್ನು ಹೇಳುವುದು ಸೊಗಸು. ಕೊನೆಗೂ ರಾಜಮ್ಮನ ಒಳ ಮನಸ್ಸನ್ನು ಹೊರಗೆಳೆಯಲು ನಾಯಕ ಯಶಸ್ವಿಯಾಗಿ ಅವಳು ತನ್ನ ಇಡೀ ದುಡಿತಕ್ಕೆ ತನ್ನ ಕುಟುಂಬದಲ್ಲಿ ಒಂದು ಅಸ್ಮಿತೆ ಇಲ್ಲದಿರುವುದನ್ನು ಹೇಳುವಾಗಿನ ಧ್ವನಿ  ಸ್ತ್ರೀಲೋಕದ ದುಡಿವ‌ ಹೆಣ್ಣುಗಳ ಮನೆಮನೆಯ ಕಥೆ.

ಮೊದಲ ಕಥೆ ‘ಡಾಕ್ಟರನ ಹುಚ್ಚು ಮಗ’ ಅತ್ಯಂತ ಯಶಸ್ವಿ ಕಥೆ. ಬಯೋಪಿಕ್ ನಂತೆ ಅನಿಸುತ್ತದೆ. ಮಾನಸಿಕ ಅಸ್ವಸ್ಥ ಮಗನನ್ನು ಹೆತ್ತ ಅಪ್ಪ ಅಮ್ಮಂದಿರ ನೋವು, ಸಮಾಜದ ಕ್ರೂರ ನಡೆ, ಬಂಧುಗಳ ವ್ಯಂಗ್ಯದ ಅನುಕಂಪ ಎಲ್ಲವನ್ನೂ ಹೇಳುತ್ತಾ ಕೊನೆಗೂ ಅವನನ್ನು ಬಿಟ್ಟು ಬಂದಿದ್ದ ಸ್ಥಳದಿಂದ ಕರೆದುಕೊಂಡು ಬಂದು ಯಾತನೆಗೆ ಜೀವ ಕೊಟ್ಟುಕೊಳ್ಳುವುದನ್ನು ಹೇಳುವ ಕಥೆ.

‘ಇತಿಹಾಸ, ಕತೆ ಇನ್ನು ಸಾಕು.ನಾಳೆಯಿಂದಲಾದರೂ ಪ್ರೀತಿಸಬೇಕು’

ಇದು ಕತೆಯ ಕೊನೆಯ ಸಾಲು .

‘ಬರೆದನು ಕಥೆಯ ಯಾಕೂಬ್ ನೆಲಗೊಂಡ’ ಮತ್ತೆಮತ್ತೆ ಓದಿಸಿಕೊಳ್ಳುವ ಕಥೆ. ಅಲ್ಪಸಂಖ್ಯಾತರ ಸಂಕಟಗಳನ್ನು ಬಿಚ್ಚಿಡುವ ಕತೆ. ಅವರನ್ನೂ ತನ್ನವರನ್ನೂ ಒಳಗೊಳ್ಳಬಯಸುವ ಯಾಕೂಬನ ಮನಸ್ಸು ಅವರ ಜೊತೆ ತಿರುಗಾಡುವಾಗೆಲ್ಲ ತನ್ನ ಸಮುದಾಯದ ಕುರಿತು ಹೇಳಬೇಕೆಂದರೂ ದ್ವನಿ‌ಕಳೆದುಕೊಂಡು ತೊಳಲಾಡುವ ಕತೆ. ವಿಶಿಷ್ಟ ನಿರೂಪಣೆಯಿಂದ ಸೆರೆಹಿಡಿಯುತ್ತದೆ.

ವೈಶಾಂಪಾಯನದಲ್ಲಿ ಪಾಲು ಕಥೆಯು ಆರಂಭದಲ್ಲಿ ದೆವ್ವಗಳ ಕಥೆ ಎನಿಸಿದ್ರೂ ಅಂಗವಿಕಲ(ರಂಗ)ನೊಬ್ಬ ಮಾನಸಿಕವಾಗಿಯೂ ಸ್ವಸ್ಥ ಇಲ್ಲದ ವಿವರಣೆಯೊಂದಿಗೆ ಆರಂಭವಾಗಿ ಒಂದು ಬಗೆಯ ಅನುಕಂಪವನ್ನು ಸೃಷ್ಟಿಸುತ್ತಲೇ ಬದುಕಿನ ಪ್ರತಿಹಂತದಲ್ಲೂ ತನ್ನ ಹಠದಿಂದ ಎಲ್ಲವನ್ನೂ ಪಡೆಯುವುದರ ವಿವರ‌‌ ಸೊಗಸಾಗಿದೆ. ಅಲ್ಲಿನ ಒಂದು ದೃಶ್ಯ.. ‘ನಾಗನಿಗೆಮದುವೆಯಾದಾಗ ರಂಗ ಧಾರೆ‌ ಮಂಟಪದಲ್ಲೇನೂ ಗಲಾಟೆ ಮಾಡಲಿಲ್ಲ. ಬದಲಿಗೆ ಶೋಭನದ ಕೋಣೆಯೊಳಗೆ ಹೋಗಿ ತಾನೇ ಮೊದಲು ಮಂಚವೇರಿ ಕುಳಿತುಬಿಟ್ಟ. ಮನೆದೇವರಾಣೆ ವರ್ಷದೊಳಗೆ ರಂಗನಿಗೆ ಮದುವೆ ಮಾಡಿಸುವುದಾಗಿ ಮಾತು ಕೊಟ್ಟಮೇಲೆ ಆಚೆ ಹೋಗಿದ್ದು’

ಎಲ್ಲದನ್ನೂ ಹಠದಿಂದಲೆ ಪಡೆದವನಿಗೆ ಕೊನೆಯಲ್ಲಿ ಪಾಲು ಸಿಕ್ಕಿದ್ದು ನ್ಯಾಯವೆನಿಸದೆ ವೈಶಾಂಪಾಯನದಲ್ಲಿ ಮೊದಲಿಂದ ಇದ್ದ ದೆವ್ವಗಳ ಜೊತೆಗೆ ತಾನೂ ದೆವ್ವವಾಗಿ ಆರಾಧಿಸಿಕೊಳ್ಳುವ‌ ವಿಚಿತ್ರ ಕಥಾವಸ್ತು… ನಾಯಿ ಮತ್ತು ಸ್ವಾಮಿ ಕಥೆಯಲ್ಲಿ ಸ್ವಾಮಿಗಳ ಪಾತ್ರವನ್ನು ವಿವರಿಸುತ್ತಲೇ ನಾಯಿಯೊಂದು ಅಚಾನಕ್ಕು ಅವರನ್ನು ‌ಕಚ್ಚುವ ಆನಂತರದಲ್ಲಿ ಆ ನಾಯಿ ಸ್ವಾಮಿಗಳಿಗೆ ವಿಪರೀತ ಹತ್ತಿರವಾಗುವ, ಆ ನಾಯಿಯ ಬಾಂಧವ್ಯದಿಂದಾಗಿ ಸ್ವಾಮಿಗಳಿಗೆ ಅದು ಅವರು ಬಹಳವಾಗಿ ಹಚ್ಚಿಕೊಂಡಿದ್ದ ಅವರ ತಮ್ಮನ ಆತ್ಮ ಎಂಬ‌ ದರ್ಶನವಾಗುವುದು.

‘ಅವೊತ್ತು ‌ನಾಯಿ‌ ಕಚ್ಚಿದಾಗ ಕೂಡ ನೋವಾಗುವ ಬದಲು ಏನೋ ಬಂದು ಒಳಸೇರಿದಂತಾಯ್ತು’

ಈ ಸಾಲು ಕಥೆಯ ಒಟ್ಟು ವಿವರವನ್ನು ಹೇಳುವಂತಿದೆ. ಕೊನೆಯಲ್ಲಿ ಸ್ವಾಮಿಗಳು ನಾಯಿಯ ಜೊತೆಯಲ್ಲಿ ‌ಮಠವನ್ನು ತ್ಯಜಿಸಿ ಪಕ್ಕದಲ್ಲಿರುವ ಗುಡ್ಡ ಹತ್ತಿಳಿಯುತ್ತಿದ್ದರು ಎನ್ನುವ ಚಿತ್ರಣದೊಂದಿಗೆ ಕಥೆ ಕೊನೆಯಾಗುತ್ತದೆ. ದಾಟದ ಮೂರು… ಅತ್ಯಂತ ಸೆಳೆಯುವ ಕಥೆ.ಬಾಲ್ಯದ ಬಡತನದಿಂದಾಗಿ ಅಚಾನಕ್ಕು ಒಂದು ದಿನ ಆ ಮನೆಯಲ್ಲಿ ದೋಸೆಯನ್ನು ಮೂರಕ್ಕೆ ಸೀಮಿತಗೊಳಿಸಲಾಗ್ತದೆ. ಮೂರರ ಮೇಲೆ ದೋಸೆಯನ್ನೂ ಚಪಾತಿಯನ್ನೂ ರೊಟ್ಟಿಯನ್ನೂ ಕೊಡುವುದಿಲ್ಲವೆಂದು ಠರಾವು ಬಂದ ಮೇಲೆ ಮೂರು ಸಂಖ್ಯೆಯ ಕುರಿತು ಆಗುವ ಭಯ.. ನಾಕರ ಕುರಿತು ಅತೀವ ಬಯಕೆ, ಕೇಳಿದರೆ ಖಡಾಖಂಡಿತವಾಗಿ ಇಲ್ಲ ಎನ್ನುತ್ತಿದ್ದ ಅಮ್ಮ.

ಒಂದು ದಿನ ನಾಕನೆದು ಬೇಕೇಬೇಕು ಎನ್ನುವ ಹಠಕ್ಕೆ ಮಗುಚಗೈ ಕಾಯಿಸಿ ತಗೋ ನಾಕನೆದು ಅಂತ ಬೆರೆಸಾಡಿದ ಅಮ್ಮ;

ಈ ಕಥೆಯನ್ನು ಒಂದು ಮಮತೆಯಿಂದಲೂ ಅತೀವ ನೋವಿನಿಂದಲೂ ಓದುವಂತೆ ಮಾಡುತ್ತದೆ.

ಕೊನೆಗೆ ಕಥಾ ನಾಯಕನಿಗೆ ಈ ನಾಲ್ಕನೇ ಸಂಖ್ಯೆ ಬದುಕಿನುದ್ದಕ್ಕೂ ಕಾಡುತ್ತದೆ. ಇದು ಸುದೀರ್ಘ ಕಥೆ ಇರಬಹುದು ಎನ್ನುವ ಎಲ್ಲಾ ನಿರೀಕ್ಷೆಯನ್ನೂ ಬುಡಮೇಲು ಮಾಡುವ ಕತೆಗಾರರು ಕೊನೆಯಲ್ಲಿ ಇಟ್ಟಿರುವ ನಾಟಕೀಯತೆಯ ಕುರಿತು ತಿಳಿಯಲು ಕಥೆಯನ್ನೇ ಓದಬೇಕು.

ಅಮೆರಿಕನ್ ಮನೆ ಸಂಕಲನದ ದೀರ್ಘ ಕಥೆ. ದೀರ್ಘವಿದ್ದರೂ ಎಲ್ಲೂ ಇಷ್ಟೂ ತಡೆಯಿಲ್ಲದೆ ಸರಾಗವಾಗಿ ಓದಿಸಿಕೊಳ್ಳುವಂತ ಹಂದರ. ಭಾರತೀಯ ಮನಸ್ಸಿನ ಅಮೆರಿಕೆ ಬಯಕೆ ಕಥಾವಸ್ತು. ಆದರೆ ಅದು ಇಷ್ಟು ಸಲೀಸಾಗಿ ಕಥೆಯಾಗದೆ ಲೇಖಕರ ಬಾಲ್ಯದಲ್ಲಿ ಕಂಡ ಮಂಡ್ಯದ ಬ್ರಾಹ್ಮಣ ಬೀದಿಗಳ ಕೆಲವು ಅಮೆರಿಕನ್ ಸಂಪ್ರದಾಯದ ಪರಿಚಯದೊಂದಿಗೆ ತಾವು ಅಮರಿಕೆಗೆ ಹೋಗಲಾಗದಿದ್ದದ್ದಕ್ಕೆ ಇದ್ದ ಕೀಳರಿಮೆ ಯನ್ನು ವೇದತ್ತೆಯ ವಿಚಾರಗಳೊಂದಿಗೆ ನಿರೂಪಿಸುತ್ತಾ ಹೋಗಿರುವುದು ಕಥೆಯ ಸೊಗಸು. ಪ್ರತಿಭಾನ್ವಿತೆ ವೇದತ್ತೆ ತನ್ನ ಅಪಾತ್ರ ಪೋಷಕರ ಕಾರಣದಿಂದಾಗಿ ಅನುಭವಿಸಿದ ಅವಮಾನ(?) ಅವರನ್ನು ಅಮೇರಿಕ ಗಂಡಿಗಾಗಿ ಹಠ ಹಿಡಿದು ಮದುವೆಯಾಗುವಂತೆ ಮಾಡುತ್ತದೆ. ಆದರೆ ಅಲ್ಲಿ ಹೋಗಿ ಮಾಡಿದ್ದೂ ಹಪ್ಪಳ ನಿಪ್ಪಟ್ಟು ಚಕ್ಕುಲಿ ಚಟ್ನಿಪುಡಿಯೇ..

ಇಲ್ಲಿಯದೇ ಮಿಡಲ್ ಕ್ಲಾಸ್ ಬದುಕಾದರೂ ಅಮೆರಿಕ ಪೌರತ್ವ ಪಡೆದ ಸಾರ್ಥಕತೆ.. ಮತ್ತೊಂದು ಕುಟುಂಬ ಚಂದ್ರಶೇಖರ ಮತ್ತು ಗಾಯತ್ರಿ ಅವರದ್ದು. ಹೈ ಪ್ರೊಫೈಲ್ ಜನಗಳು.. ಇದೆಲ್ಲವನ್ನೂ ಹೇಳುತ್ತಲೇ ಪರಿಚಯವಾದ ಮೆಕ್ಸಿಕನ್ ಮತ್ತು ಬೇಸ್ಮೆಂಟಿನ ವಿವರ ಟೈಟಾನಿಕ್ ಸಿನಿಮಾದ ನೆನಪು ತರಿಸಿದರೆ ಅತಿಶಯವಲ್ಲ.ಕಥೆಯ ಕೊನೆಯಲ್ಲಿ ಎಲ್ಲವೂ ಹಾಡಾಗುವ ಬೆಳದಿಂಗಳಾಗುವ ಬಯಲಾಗುವ ಚಿತ್ರಣ ಸೊಗಸಾಗಿದೆ.

ವಿಷಣ್ಣ ಶೋಧ… ಅತ್ಯಂತ ದೀರ್ಘ ಕಥೆ..

ಆರಂಭ ಹೀಗಿದೆ. ‘ಏಕೆಂದರೆ ನೋಡುತ್ತಾ ಇರುವುದಕ್ಕೆ ಒಂದು ಮಿತಿಯಿದೆ. ಆಳವಾಗಿ ವಿವರವಾಗಿ ನೋಡಿಸಿಕೊಂಡ ಲೋಕ ಪ್ರೀತಿಯಲ್ಲಿ ಫಲಿಸಬಯಸುತ್ತದೆ..

ರೈನರ್ ಮಾರಿಯಾ ಮಿಲ್ಕ್’

ಈ ಸಾಲುಗಳೇ ಸುದೀರ್ಘ ಗೊಂಡು ಕಥೆಯಾದಂತೆ ಅನಿಸಿದೆ.

ತನ್ನ ಆತ್ಮವಂಚನೆಯ ಅರಿವಾದ ಶಾಂತಿ ಕೇಂದ್ರದ ಸ್ವಾಮಿಜಿ ಪೂರ್ಣಾನಂದರು ಸ್ಟೇಷನ್ನಿಗೆ ಬಂದು ತನ್ನನ್ನು ದಸ್ತಗಿರಿ ಮಾಡಿರೆಂದು ಒತ್ತಾಯಿಸುತ್ತಾರೆ.. ಇಡೀ ಸಿಬ್ಬಂದಿ ಅಧಿಕಾರ ವರ್ಗ, ರಾಜಕೀಯ ಮುಖಂಡರು ಎಷ್ಟೇ ಬೇಡವೆಂದು ಒತ್ತಾಯಿಸಿದರೂ ಅವರು ತಾವು ಸ್ಟೇಷನ್ನಿನಲ್ಲೇ ಇರಬಯಸುವುದಾಗಿ‌ ಹೇಳುತ್ತಾರೆ.. ಅಲ್ಲಿಂದ  ಕಥೆ ಪಡೆಯುವ ವಿಚಿತ್ರ ತಿರುವು, ಧ್ಯಾನ, ಯೋಗ, ಪ್ರಾಣಾಯಾಮದ ವಿಶೇಷ ಅರಿವು, ಕೊನೆಯಲ್ಲಿ ಇದೆಲ್ಲವೂ ಏನೂ ಅಲ್ಲ ಎನ್ನಿಸಿ‌ ಮತ್ತೆ ಲೌಕಿಕಕ್ಕೆ ಮುಳುಗುವುದು… ಹೀಗೆ ಸಾಗುವ ಕಥೆಯಲ್ಲಿ ಪಾತ್ರ ದಾರಿಯಾಗಿ ಬರುವ ನಟಿ ಶರ್ಮಿಳಾ ಪಾತ್ರಕ್ಕೆ ವಿಭಿನ್ನ ನಿಲುವು ಇದೆ.

ಇಲ್ಲಿ ಕನಸು, ವಾಸ್ತವ, ಒಳ್ಳೆಯದು, ಪ್ರಾಮಾಣಿಕತೆ ಇವೆಲ್ಲವನ್ನೂ ಒರೆಗೆ ಹಚ್ಚುತ್ತಾ ಹಚ್ಚುತ್ತಾ ಸಾದಾ ಲೌಕಿಕದಲ್ಲಿ ಕೊನೆಯಾಗುವ ಹಾಗೆ ನಿರೂಪಿಸಿರುವ ಕ್ರಮ ಅತ್ಯಂತ ಸೊಗಸಾಗಿದೆ. ಕಥಸಂಕಲನವೊಂದು ಇಷ್ಟೊಂದು ವೈವಿಧ್ಯಮಯವಾಗಬಲ್ಲದೇ? ವಿಲೋಮವೋ ಅನುಲೋಮವೋ ಕಥೆಯ ಶೀರ್ಷಿಕೆ ನೋಡಿ ಕತೆಗಾರರಿಗೆ ಯೋಗದಲ್ಲಿ ಆಸಕ್ತಿ ಇರಬಹುದು, ಹಾಗಾಗಿ ಮತ್ತೊಂದು ಕಥೆ ಯೋಗದ ಕುರಿತಾಗೇ ಇದೆ ಎಂದುಕೊಂಡೆ.

ಆದರೆ..ಅದು ಧ್ಯಾನವನ್ನು ಹೇಳುತ್ತಲೇ ಒಬ್ಬ ಮೇಲುಜಾತಿಯವ ಹೇಗೆ ತಾನು ಮೇಲಧಿಕಾರಿಯಾಗಿದ್ದ ಕಡೆ ಕೇವಲ ನೋಟ ಮಾತ್ರದಿಂದಲೇ ನೀವೆಲ್ಲರೂ ಹೀನಕುಲದವರು ಎನ್ನುವುದನ್ನು ಬದುಕಿನುದ್ದಕ್ಕೂ ಪೋಷಿಸಿಕೊಂಡು ಬಂದ ಎನ್ನುವುದನ್ನು ಹೇಳುವ ಕಥೆ.ಕಥೆಯ ಕೊನೆಯ ಭಾಗಕ್ಕೆ ಬಂದಾಗ ಒಂದು ಸಾಲು ಹೀಗಿದೆ

‘ಸರ್.. ನೀವು ಸಹ ಎಲ್ಲರಂತೆ ನೇತ್ರ ದಾನ ಮಾಡಿದಿರಿ..

ಆದರೆ ವರ್ಷಾನುಗಟ್ಟಲೆ ಒಂದೇ ರೀತಿ ಉಳಿದಿರುವ ಕಣ್ಣುಗಳನ್ನು, ಅವು ನೋಡುವ ರೀತಿಯನ್ನು ನೀವು ದಾನ ಮಾಡಲೇ ಬಾರದಿತ್ತು ಎಂಬುದು ನನ್ನ ಖಚಿತ ಅಭಿಪ್ರಾಯ’

ಹೀಗೆಂದವ ‘ಧ್ಯಾನದ ತುದಿಯಲ್ಲಿ ಕಾಣುವ ಲೋಕದಲ್ಲಿ ಮತ್ತೆ ನಿಮ್ಮ ಕಣ್ಣುಗಳೇ ಎದುರಾಗಿಬಿಟ್ಟರೆ’

ಎಂದು ಹೇವರಿಸಿಕೊಳ್ಳುವಲ್ಲಿಗೆ 

ಓದಿದವರಿಗೂ ಬ್ರಾಹ್ಮಣ್ಯದ ಸೋಂಕು ತಾಗಿದಂತಾಗಿ ಕಸಿವಿಸಿ ಆಗುತ್ತದೆ.

ಅಜ್ಜಿ ಮತ್ತು ಧೂಳು.. ಅತೀ ಸಣ್ಣ ಕಥೆ. ಮಾಮೂಲು ಸಂಸಾರದ ಜಗಳ, ಅಮ್ಮನಿಗೆ ಹತ್ತಿಸಿಕೊಡುವ ಅಣ್ಣತಮ್ಮರು.. ಇಲ್ಲಿ ಅಪ್ಪನ ತಿಥಿ ಮಾಡಲಿಕ್ಕೆ ತನ್ನ ಇಬ್ಬರು ಗಂಡ ಮಕ್ಕಳು ಖರ್ಚು ಕೊಡಬೇಕೆನ್ನುವ ತಾಯಿ. ಬಿಲ್ಕುಲ್ ಆಗುವುದೂ ಇಲ್ಲ ಬರುವುದೂ ಇಲ್ಲ ವೆನ್ನುವ ಕೊನೆಯ ಮಗ.

ಇಲ್ಲಿಂದ ಪ್ರಾರಂಭವಾಗುವ ಕಥೆ, ತನ್ನ ‌ಮಗ‌ ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದ ಕಾಯುವ ತಾಯಿ ಕೊನೆಯಲ್ಲಿ ತಿಥಿಯ ಇಡೀ ದಿನ ಕಾಯ್ದು ಬಾರದ ಮಗನಿಗಾಗಿ ಪದೇಪದೇ ಬಸ್ ನಿಲ್ದಾಣಕ್ಕೆ ಹೋಗಿ ಕೊನೆಗೂ ಬಾರದ ಮಗನಿಗಾಗಿ ಬಸ್ ಹೋದ ಧೂಳಿನೊಳಗೆ ನಿಂತು ಅರಚುತ್ತಾ ಭ್ರಮಿತಳಾಗುವುದರೊಂದಿಗೆ., ಆ ಭ್ರಮೆ ಉಳಿದೇ ಹೋಗುತ್ತದೆನ್ನುವ ಸಂಕೇತದೊಂದಿಗೆ ಮುಗಿಯುತ್ತದೆ ಅಥವಾ ಬೆಳೆಯುತ್ತದೆ. ಅತ್ಯಂತ ಚಿಕ್ಕ ಕಥೆಯಾದರೂ ಕತೆಯಾಗುವ ವಿಚಾರಗಳು ಏನೆಲ್ಲಾ ಇರುತ್ತವೆ ಎನ್ನುವುದಕ್ಕೆ ಕತೆಗಾರರು ಓದಲೇಬೇಕಾದ ಕಥೆ.

ಚರಿತ್ರೆಗೊಂದು ಪ್ರಣಾಳಿಕೆ ಮತ್ತು ದಲಿತರ ಸೌಮ್ಯೋಪಖ್ಯಾನ ಕಥೆಗಳು ವರ್ಗ ವರ್ಣ ಮೀಸಲಾತಿ ದಲಿತ ವಿಚಾರಗಳ ನಡುವೆಯೇ ಹೆಣೆದುಕೊಂಡಿದ್ದರೂ ಕತೆಯಾಗುವಲ್ಲಿ ಅದ್ಭುತ ವೆನಿಸಿವೆ. ಹಿಂದುಳಿದವರ ಮೀಸಲಾತಿಯನ್ನು ಪ್ರೋತ್ಸಹಿಸುವುದು‌ ಕೂಡ ಒಂದು ಬಗೆಯಲ್ಲಿ ನಮ್ಮ ಮೇಲುತನವನ್ನು ಹೇಳಿಕೊಳ್ಳುವುದು ಎನಿಸುವಂತ ಕತೆಗಳು.

ದಲಿತರ ಬರವಣಿಗೆ ಯಾವತ್ತೂ ಕೇವಲ ಬಾಲ್ಯದ ಹಸಿವು ಅವಮಾನವನ್ನೇ ಬಿಂಬಿಸುವುದರಿಂದ ಈ ಬರವಣಿಗೆಗಳು ಎಂದಿಗೂ‌ ಸಮಗ್ರವಲ್ಲ ಎನ್ನುವ ಮೇಲುಜಾತಿಯವರ ಹೇಳಿಕೆಯ ಕುರಿತು ಉತ್ತರಿಸುವ‌ ಕತೆಯಲ್ಲಿ‌ ನಮ್ಮನ್ನು ನಾವು ಬಗೆದು ನೋಡಿಕೊಳ್ಳಬೇಕಾದ ಪ್ರಶ್ನೆಗಳಿವೆ. ‘ದಲಿತರ ಹಿಂದುಳಿದವರ ಪ್ರಾತಿನಿಧ್ಯವನ್ನು ನಾವು ಒಪ್ಪುತ್ತೇವೆ ಆದರೆ ಭಾಗವಹಿಸುವಿಕೆಯನ್ನಲ್ಲ, ಉತ್ತರದಾಯಿತ್ವವನ್ನಲ್ಲ’

‘ಕೊಂಚ ಒಳಗೆ ನೋಡಿಕೊಳ್ಳಿ, ನೋಡಿಕೊಳ್ಳುವುದನ್ನು ಇನ್ನೂ ಕೊಂಚ ಗಮನಿಸಿ’ ಈ ಸಾಲುಗಳ ಸಾರ್ವತ್ರಿಕತೆಯೂ ಸಾರ್ಥಕತೆಯೂ ಈ ಕತೆಯಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿನ ಅಷ್ಟೂ ಕತೆಗಳೂ ದಲಿತ, ಸ್ತ್ರೀ ಮತ್ತು ಮುಸ್ಲಿಂ ಸಂವೇದನೆಗಳುಳ್ಳ ಕತೆಗಳು. ಮತ್ತೊಂದು ವೈಶಿಷ್ಟ್ಯವೆಂದರೆ ಇಲ್ಲಿನ ಎಲ್ಲಾ ಕಥೆಗಳು ಕತೆಗಾರನ ಸ್ವಾನುಭವದ ಕಥೆಗಳಂತೆ ನಿರೂಪಿತವಾಗಿರುವುದು. ಮತ್ತು ಕಥಾನಾಯಕನಾಗಿ ಕತೆಗಾರನೇ ನಿಲ್ಲುವುದು. ಹಾಗೇ ಕತೆಯಾಗುವುದಕ್ಕೆ ಆಯ್ಕೆ ಮಾಡಿಕೊಂಡ ಮಾರ್ಗಗಳು ಗಮನ ಸೆಳೆಯುತ್ತವೆ.

ಬಹುತೇಕ ನಾವೆಲ್ಲರೂ ನಮ್ಮನ್ನು ನಾವು ಸೆಕ್ಯುಲರ್ ಎಂದುಕೊಳ್ಳುತ್ತಲೆ ಜಾತಿ ಶ್ರೇಷ್ಠತೆಯನ್ನು, ಜಾತಿ ಕನಿಷ್ಠತೆಯನ್ನೂ, ಅಥವಾ ನಮ್ಮದೇ ಮಿಗಿಲು ಎನ್ನುವುದನ್ನೂ ಹೇಳಹೊರಡುತ್ತೇವೆ. ಆಧುನಿಕರು ಎನಿಸಿಕೊಳ್ಳುತ್ತಲೇ ಡಾಂಭಿಕತನದ ಪ್ರದರ್ಶನ ಮಾಡುತ್ತೇವೆ. ನಾವು ಲಿಬರಲ್ ಎನ್ನುತ್ತಲೇ ಹೇಗೆ ಎಲ್ಲಿ ಚಿವುಟ್ಟಿದ್ದೆವೆ ಎನ್ನುವ ಅರಿವೇ ಆಗದಂತೆ ಕಲೆ ಮಾಡಿ‌, ಗಾಯ ಮಾಯದಂತೆ ನೋಡಿಕೊಳ್ಳುವ ಜವಬ್ದಾರಿ ಯನ್ನೂ ಹೊತ್ತಿದ್ದೆವೆ.

ಆತ್ಮನಿರೀಕ್ಷಣೆ ಎನ್ನುವ ದುಬಾರಿ ಪದವನ್ನು ಹೇಗೆ ಅವ್ಯಾಹತ ಶೋಷಿಸುತ್ತಾ ನಾವೂ ಆ ದಾರಿಯಲ್ಲೇ ಇದ್ದೇವೆ ಎನ್ನುವುದನ್ನು ಹೇಳುವ ಈ ಕಥೆಗಳನ್ನು ಓದಿದ ಮೇಲೆ; ನನ್ನನ್ನು ನಾನು ಸಾಕಷ್ಟು ಪೂರ್ವನಿರ್ಧರಿತ ಚಿಂತನೆಗಳಿಂದ ಹೇಗೆ ಜಾಲಿಸಿಕೊಳ್ಳಬೇಕೆನ್ನುವ ವಿಚಾರ ಮಾಡಿಸುತ್ತಿವೆ. ಅತ್ಯಂತ ನಿಧಾನ ಗತಿಯ ಓದಿನವಳಾದ ನನಗೆ ಈ ಕಥೆಗಳನ್ನು ಓದಿದ ನಂತರ ಆವರಿಸಿದ ವಿಷಣ್ಣತೆ ಇಳಿಯುವುದು ಕೂಡ ಅಷ್ಟೇ ನಿಧಾನವಾಯಿತು.

ಒಳ್ಳೆಯ ಸಂಕಲನಕ್ಕಾಗಿ ಸತ್ಯನಾರಾಯಣ ಸರ್ ಗೆ ಅಭಿನಂದನೆಗಳು.

ಈ ಪುಸ್ತಕ ಬೆಂಗಳೂರಿನ ಗೀತಾಂಜಲಿ ಪಬ್ಲಿಕೇಶನ್ ನಿಂದ ಪ್ರಕಟವಾಗಿದೆ. ಖ್ಯಾತ ವಿಮರ್ಶಕಿ ತಾರಿಣಿ ಶುಭದಾಯಿನಿಯವರ ಮುನ್ನುಡಿ ಕಥಾಸಂಕಲನಕ್ಕಿದೆ.

‍ಲೇಖಕರು Avadhi

15 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading