
ನಂದಿನಿ ಹೆದ್ದುರ್ಗ
ಅವಧಿಯಲ್ಲಿ ಮೌನೇಶ್ ಬಡಿಗೇರ್ ಅವರ ‘ಪ್ರೇಮವೆಂಬ ಅವರ್ಗೀಯ ವ್ಯಂಜನ’ ಅನ್ನುವ ಕವಿತೆಗಳ ಸಂಕಲನದ ಪರಿಚಯ ಬರಹ ಓದಿ ಮೌನೇಶ್ ನಂಬರನ್ನು ಗ್ರೂಪುಗಳಲ್ಲಿ ಕೇಳಿದಾಗ ಸಾಕಷ್ಟು ಮಂದಿ ಕಾಲೆಳಿದಿದ್ದರು. ಸದಾ ಧ್ಯಾನಿಸುವ ನಿನಗೆ ಮೌನೇಶರೊಡನೆ ಎಂಥ ಮಾತು ಅಂತ.. ಅದೆಂತಾದರೂ ಆಗಲಿ ಅಂತ ಅವರ ನಂಬರ್ ಸಿಕ್ಕ ಮೇಲೆ ಅವರಿಗೆ ಟೆಕ್ಸ್ಟ್ ಮಾಡಿ ವ್ಯಂಜನದ ಕುರಿತು ಕೇಳಿದೆ (ಪುಸ್ತಕ ಎಲ್ಲಿ ದೊರೆಯುತ್ತದೆ ಎನ್ನುವ ವಿವರ ಪರಿಚಯ ಬರಹದಲ್ಲಿ ಇರಲಿಲ್ಲ.)
ಮೌನೇಶ್ ನಾನೇ ಕಳಿಸ್ತೀನಿ ಅಂತ ಅವರ್ಗೀಯ ವ್ಯಂಜನದ ಜೊತೆಗೆ ಒಂಚೂರು ಕೋಲಾಹಲವಾಗಲಿ ಅಂತ ಅವರ ಛಂದ ಪುಸ್ತಕ ಬಹುಮಾನ ಪುರಸ್ಕೃತ ‘ಮಾಯಾ ಕೋಲಾಹಲ’ವನ್ನೂ ಜೊತೆಗಿಟ್ಟು ಕಳಿಸಿಕೊಟ್ಟರು.
ಅವರ್ಗೀಯ ವ್ಯಂಜನ ಪ್ರೇಮ ತುಯ್ಯುವ ಸಂಭಾವ್ಯ ಸಂಭಾಷಣೆಯಂತ ರಚನೆಗಳು. ಕವಿಯೇ ಹೇಳಿರುವಂತೆ ಒಂದಿಷ್ಟು ಪ್ರೇಮದ ಕೊರೆತಗಳು. ತೀವ್ರವಾದ ಸಾಲುಗಳು ಅಲ್ಲಲ್ಲಿ ಮಿಂಚಿ ಓದಿಗೊಂದು ಹದನೋವು ಕೊಡುವಂತ ರಚನೆಗಳು. ‘ಪ್ರೇಮಿಯನ್ನು ವಂಚಿಸುವುದು ಕೂಡ ಪ್ರೇಮದ ಒಂದು ಭಾಗ’ ಎನ್ನುವಂತ ತಾಜಾಸಾಲುಗಳು ಇಲ್ಲಿವೆ ‘ಪ್ರೇಮದಲ್ಲಿ ನಟನೆಯೂ ಕೂಡ ಒಂದು ಅಧ್ಯಾಯ’ ಎನ್ನುವ ಸಾಲು ಹೊಮ್ಮಿಸುವ ವಿದ್ಯುತ್ ಸಣ್ಣಗೆ ಶಾಕ್ ಕೊಡುವುದಂತೂ ಸತ್ಯ.
ಅವರ್ಗೀಯ ವ್ಯಂಜನ ವನ್ನು ಮುಕ್ಕಾಲು ಓದುವಲ್ಲಿ ಇವರ ಕಥೆಗಳಲ್ಲೂ ಕವಿತೆಗಳಿರಬಹುದು ಎನಿಸಿ ಮಾಯಾ ಕೋಲಾಹಲವನ್ನು ಅಲ್ಲಲ್ಲಿ ತಿರುಗಿಸಿ ನೋಡಿದೆ. ಯಾವತ್ತೂ ಮುನ್ನುಡಿಯನ್ನು ಓದದೇ ಕೃತಿಯೊಳಗೆ ಹೊಕ್ಕುವವಳು ನಾನು.ಇಲ್ಲಿಯೂ ಹಾಗೇ ಮಾಡಿದೆ. ಮೊದಲ ಕಥೆ ಕ್ರೈಮ್ ಡೈರಿ.. ಟಿವಿಯಲ್ಲಿ ಬರುವ ಕ್ರೈಮ್ ಡೈರಿಯನ್ನು ಒಂದು ರೂಪಕವಾಗಿ ಬಳಸಿಕೊಂಡ ಕಥೆ. ಕಥಾನಾಯಕ ನಿತ್ಯ ಕ್ರೈಮ್ ಡೈರಿ ನೋಡಿಯೇ ಮಲಗುವವನು. ತೀರ ಕೆಳ ಮದ್ಯಮ ವರ್ಗದ ಬದುಕಿನ ನೀರಸ ದಾಂಪತ್ಯದಲ್ಲಿ ಹೇಗೆ ಸಹಜವಾಗಿರುವುದೇ ಕ್ರೈಮ್ ಆಗುತ್ತದೆ ಎನ್ನುವುದನ್ನು ಕಥೆ ಹೇಳುತ್ತಾ ಹೋಗ್ತದೆ.

ಹೆಂಡತಿಯೊಡನೆ ಎಂದೂ ಪ್ರೇಮದಿಂದ ಮಾತೇ ಆಡದ ಒಬ್ಬ ವ್ಯಕ್ತಿ ಸಹೋದ್ಯೋಗಿ ಯೊಬ್ಬನ ಶೃಂಗಾರದ ಸಾಹಸದಿಂದಾಗಿ ಹೆಂಡತಿಗೂ ಭಾವಗಳಿರಬಹುದು ಅಂತನ್ನಿಸಿ ಅವಳೊಡನೆ ಸಹಜವಾಗಲು ಯತ್ನಿಸುವ ಕಥೆ. ಆರ್ಥಿಕಶೋಷಣೆ ಸಮಾಜದ ಒಂದು ವರ್ಗವನ್ನು ಸಹಜವಾಗಿಯೇ ಅಪರಾಧಿಗಳನ್ನಾಗಿಸುತ್ತಿರುವ ಮಾಯೆ ಯನ್ನು ಹೇಳುವ ಕಥೆ.
ಶಫಿ ಎಲೆಕ್ಟ್ರಿಕಲ್ಸ್ ಮತ್ತದೇ ಕೆಳ ಮಧ್ಯಮ ವರ್ಗದಲ್ಲಿ ಟಿವಿಯೊಂದು ಪ್ರಮುಖ ಪಾತ್ರವಾಗುವ ಸಂಗತಿಯನ್ನು ಹೇಳುವ ಕಥೆ. ಕಥೆ ಹೇಳುತ್ತಲೇ ಆ ಟಿವಿ ಕೆಟ್ಟಾಗ ಜರುಗುವ ಒಂದಿಷ್ಟು ಅಸಂಗತ ಸಂಗತಿಗಳು ಕಥೆಯಾಗಿ ಮಾಮೂಲು ರಿಪೇರಿಯವನೊಬ್ಬ ಭಯೋತ್ಪಾದಕ ನಾಗುವ ರಾಜಕಾರಣದ ವಿಚಾರಗಳು ಇಲ್ಲಿ ಸದ್ಯದ ಸಮಾಜಕ್ಕೆ ಮುಖಾಮುಖಿಯಾದಂತಿವೆ.
ಶ್ರದ್ಧಾಂಜಲಿ ಇಲ್ಲಿನ ವಿಪರೀತ ಕಾಡುವ ಕಥೆ.ತನ್ನ ಮಗನನ್ನು ಮಹಾನಾಯಕನ ಪ್ರತಿರೂಪವಾಗಿ ಕಂಡ ಸೌಮ್ಯ ಸ್ವಭಾವದ ಒಬ್ಬ ತಂದೆಗೆ ಅವನ ಅಸಹಜ ಸಾವು ತಂದುಕೊಟ್ಟ ಧಾರುಣ ಸ್ಥಿತಿಯ ಕಥೆಯೇ ಶ್ರದ್ಧಾಂಜಲಿ. ನಾಯಕ ನಂಥ ತನ್ನ ಮಗನ ಮದುವೆ ನಾಳೆ ಎನ್ನುವಾಗ ಸಂಭವಿಸಿದ ದುರಂತ ಆ ತಂದೆಯನ್ನು ಸಿಕ್ಕಸಿಕ್ಕವರ ಫೋಟೊಗಳನ್ನೆಲ್ಲ ಸಂಗ್ರಹಿಸಿ ಪತ್ರಿಕೆಗೆ ಕಳುಹಿಸಿ ಶ್ರದ್ಧಾಂಜಲಿ ಅರ್ಪಿಸುವ ಹಠಕ್ಕೆ ತಳ್ಳುತ್ತದೆ. ಅದ್ಭುತ ಪಾತ್ರ ಪರಿಚಯ ಹೇಳುತ್ತಲೇ ದುರಂತ ತಂದು ಅಲ್ಲಿಂದ ಮುಂದಕ್ಕೆ ಸಣ್ಣಗೆ ಹಾಸ್ಯ ಹೇಳುತ್ತಾ ನೋವಿನ ಭಾವತಿರೇಕಕ್ಕೆ ಕೊಂಡೊಯ್ಯುವ ಕಥೆ ಇದು.

ಈ ಕಥೆ ಓದಿದ ಮೇಲೆ ವಿಚಿತ್ರವಾದ ಮೌನ ವ್ಯಾಪಿಸಿಕೊಳ್ಳುವುದು ಈ ಕಥೆಯ ಶಕ್ತಿ.ಚಿಟ್ಟೆ ಮತ್ತು ಸೆಲ್ವಿ ಕೂಡ ಇಲ್ಲಿನ ಅತ್ಯಂತ ಯಶಸ್ವಿ ಕಥೆಗಳಲ್ಲಿ ಒಂದು. ಹುತ್ತವಿರುವ ಜಾಗದಲ್ಲಿ ಕಟ್ಟಡ ಕಟ್ಟುವ ಮಾಲೀಕನಿಗೆ ಸಹಾಯಕನಾದ ಸೆಲ್ವಿ ಮತ್ತು ಅತನ ಹೆಂಡತಿ ಚಿಟ್ಟೆ.. ಇಡೀ ಕಟ್ಟಡ ಪೂರ್ಣ ಆಗುವವರೆಗೂ ಜೀವ ಒತ್ತೆಯಿಟ್ಟು ದುಡಿದು ಮನೆಯ ಒಕ್ಕಲಿನ ದಿವಸ ಸೆಲ್ವಿಯ ಸಾವಿನೊಂದಿಗೆ ಕೊನೆಯಾಗುವ ವಾಸ್ತವ ತೋರಿಕೆಗಳನ್ನು ಹೇಳುವ ಕಥೆ. ಒಟ್ಟಿನಲ್ಲಿ ಈ ಸಂಕಲನ ಬಂದು ಎಂಟು ವರ್ಷಗಳ ನಂತರ ಓದಿದ ಬೇಸರ ಆದರೂ ಕಥೆಯ ತಾಜಾತನದ ಬಗ್ಗೆ ಬೆಚ್ಚಗೆ ಅಸೂಯೆ ಆಗುತ್ತದೆ.
ಸಂಕಲನದಲ್ಲಿ ಅಲ್ಲಲ್ಲಿ pause ತಗೊಂಡು ಓದಿಸಿಕೊಳ್ಳುವ ಸಶಕ್ತ ಕಥೆಗಳಿವೆ. ಎಲ್ಲವೂ ಬಹುತೇಕ ಮಧ್ಯಮ ಮತ್ತು ಕೆಳವರ್ಗದ ಬದುಕನ್ನು ಬಿಂಬಿಸುತ್ತಿವೆ . ಕಥಾಸಕ್ತರು ಓದಲೇಬೇಕಾದ ಸಂಕಲನ ಇದು. ಆಲ್ ದಿ ಬೆಸ್ಟ್ ಮೌನೇಶ್.






0 Comments