ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಂದಾ' : ಆರದ ನೆನಪಿನ ನಂದಾದೀಪ

ಗೋಪಾಲ ವಾಜಪೇಯಿ

ಅರವತ್ತು ಎಪ್ಪತ್ತರ ದಶಕದ ಚಿತ್ರ ರಸಿಕರ ಮನಮೋಹಿನಿ ನಂದಾ ಮಾರ್ಚ್ 25ರಂದು ಮಂಗಳವಾರ ಬೆಳಗಿನ ಜಾವ ತನ್ನ ಇಹಲೋಕ ಯಾತ್ರೆ ಮುಗಿಸಿದ್ದಾಳೆ. ನಾವೆಲ್ಲ ನೆನಪಿನ ಪುಟಗಳನ್ನು ತಿರುವಿ ಹಾಕುವಂತೆ ಮಾಡಿದ್ದಾಳೆ.

ಮರಾಠಿಯ ನಟ ಮಾಸ್ಟರ್ ವಿನಾಯಕ ಅವರ ಮಗಳು ಈ ನಂದಾ. (ಜನನ : ಜನವರಿ 8, 1939.) ವಿನಾಯಕ ದಾಮೋದರ ಕರ್ನಾಟಕಿ ಎಂಬುದು ಅಪ್ಪನ ಪೂರ್ಣ ಹೆಸರು. ಆಕೆಯ ತಾಯಿ ಮೀನಾಕ್ಷಿ ಹಿಂದಿಯ ಚಿತ್ರಬ್ರಹ್ಮ ವಿ. ಶಾಂತಾರಾಮ್ ಗೆ ಸಂಬಂಧಿ. ಚಿಕ್ಕಂದಿನಿಂದಲೇ ಕಲಾಜಗತ್ತಿನ ಸಂಪರ್ಕಕ್ಕೆ ಬಂದ ನಂದಾ ಎಂಟು ವರ್ಷದವಳಿದ್ದಾಗಲೇ ದುರಾದೃಷ್ಟವಶಾತ್ ಅಪ್ಪ ಮಾಸ್ಟರ್ ವಿನಾಯಕ್ ಕಣ್ಣು ಮುಚ್ಚಿದರು. ಮನೆ ನಡೆಯಬೇಕೆಂದರೆ ಅಪ್ಪನ ಅಚ್ಚುಮೆಚ್ಚಿನ ಈ ‘ಬೇಬಿ’ಯೇ ದುಡಿತಕ್ಕೆ ನಿಲ್ಲಬೇಕಾದ ಪ್ರಸಂಗ ಒದಗಿತು. ಹೀಗಾಗಿ ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ಬೇಬಿ ನಂದಾ ಎಂಬ ಬಾಲ ಪ್ರತಿಭೆ ತನ್ನದೇ ಆದ ಸ್ಥಾನವನ್ನು ಸ್ಥಾಪಿಸಿಕೊಳ್ಳುವಂತಾಯಿತು. ಆಕೆಯನ್ನು ತೆರೆಗೆ ಪರಿಚಯಿಸಿದವರು ವಿ. ಶಾಂತಾರಾಮ್. ಅವರ ‘ತೂಫಾನ್ ಔರ್ ದಿಯಾ’ ಆಕೆಯ ಮೊದಲ ಚಿತ್ರ (1956). ಮುಂದೆ ಪುಟ್ಟ ತಂಗಿ, ಮುದ್ದಿನ ಮಗಳು ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳ ತೊಡಗಿದ ಮಿಂಚುಗಣ್ಣಿನ ಈ ಚೆಲುವೆ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಳು. ಬೇಬಿ ನಂದಾಳ ಆಗಿನ ಹೆಸರಾಂತ ಚಿತ್ರಗಳೆಂದರೆ ‘ಭಾಭಿ’, ‘ಛೋಟಿ ಬಹೆನ್’ ಇತ್ಯಾದಿ.
ನಂದಾ ಪೂರ್ಣ ಪ್ರಮಾಣದ ನಾಯಕಿಯಾಗಲು 1961ರವರೆಗೆ ಕಾಯಬೇಕಾಯಿತು. ‘ಹಮ್ ದೋನೋ’ದಲ್ಲಿಯ ಆಕೆಯ ಅಭಿನಯ ನಂದಾಳಿಗೆ ಇನ್ನಷ್ಟು ಮತ್ತಷ್ಟು ಅವಕಾಶಗಳನ್ನು ತಂದಿತ್ತಿತು. ಮುಖ್ಯವಾಗಿ ಮನೋಜ್ ಕುಮಾರ್ ಅವರ ನಾಯಕಿ ಆಕೆ. 1972ರಲ್ಲಿ ತೆರೆಗೆ ಬಂದ ‘ಶೋರ್’ ಮನೋಜ್ ಕುಮಾರ್ ಜತೆಗಿನ ಆಕೆಯ ಕೊನೆಯ ಚಿತ್ರ.
‘ಜಬ್ ಜಬ್ ಫೂಲ್ ಖಿಲೇ’, ‘ಮಂದಿರ್’, ‘ಅಂಗಾರೇ’, ‘ರಾಮ್ ಲಕ್ಷ್ಮಣ್”, ‘ಬಂದಿ’, ‘ಪ್ರಾಯಶ್ಚಿತ್’,’ ‘ತೀನ್ ದೇವಿಯಾ’, ‘ಗುಮ್ ನಾಮ್’ ಆಕೆಯ ಮಹತ್ವದ ಚಿತ್ರಗಳು.
ಹಿಂದಿ ಚಿತ್ರರಂಗದ ಆಗಿನ ನಾಯಕ ನಟರುಗಳಾದ ಶಶಿ ಕಪೂರ್, ರಾಜೇಂದ್ರ ಕುಮಾರ್, ದೇವ್ ಆನಂದ್, ಸಂಜೀವ್ ಕುಮಾರ್ ಹಾಗೂ ಜಿತೇಂದ್ರ ಅವರೊಂದಿಗೆ ನಾಯಕಿಯಾಗಿ ಆಕೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರೂ ಗಲ್ಲಾ ಪೆಟ್ಟಿಗೆಯ ದಾಖಲೆ ಮುರಿದದ್ದು ಮಾತ್ರ ರಾಜೇಶ್ ಖನ್ನಾ ಜೊತೆಗಿನ ‘ಇತ್ತೆಫಾಕ್’ ಮತ್ತು ‘ದಿ ಟ್ರೇನ್’ ಮತ್ತು ‘ಜೋರು ಕಾ ಗುಲಾಂ’ ಚಿತ್ರಗಳು. ಆದರೂ ಆಕೆಗೆ ಹೆಚ್ಚು ಕಾಲ ಅವಕಾಶಗಳು ಬರಲೇ ಇಲ್ಲ.

ಮುಂದೆ ಕೆಲವು ಕಾಲ ಕ್ಯಾಮರಾದಿಂದ ದೂರವಿದ್ದ ನಂದಾ ಅಮ್ಮನ ಪಾತ್ರಕ್ಕೆ ಲಾಯಕ್ಕು ಎನಿಸಿದ್ದು 1983ರ ಸುಮಾರಿಗೆ. ಆಗ ಆಕೆಯ ‘ಪ್ರೇಂ ರೋಗ್’, ‘ಆಹಿಸ್ತಾ ಆಹಿಸ್ತಾ’ ಮತ್ತು ‘ಮಝದೂರ್’ ಎಂಬ ಮೂರು ಚಿತ್ರಗಳು ತೆರೆಗೆ ಬಂದವು. ಆ ಮೂರರಲ್ಲೂ ಆಕೆ ಪದ್ಮಿನಿ ಕೋಲ್ಹಾಪುರೆಯ ತಾಯಿಯಾಗಿ ಕಾಣಿಸಿಕೊಂಡಳು.
ಆ ನಂತರದಲ್ಲಿ ನಂದಾ ತೆರೆಯಿಂದ ಮರೆಯಾದಳು. ಮದುವೆಯ ಪ್ರಯತ್ನ ಯಶಸ್ವಿಯಾಗದ್ದರಿಂದ ಖಿನ್ನಳಾದಳು. ಮುಂಬಯಿಯ ವರ್ಸೋವಾದಲ್ಲಿ ಸಮುದ್ರಸಮ್ಮುಖದ ಬಂಗಲೆಯಲ್ಲಿ ತನ್ನನ್ನೇ ತಾನು ಬಂದಿಯಾಗಿಸಿಕೊಂಡಳು.
ಈಗಲೂ ಆಕಾಶವಾಣಿಯಲ್ಲಿ ‘ಗುಲಾಬಿ ಆಂಖೆ…’ ಹಾಡು ಕೇಳಿಬರುತ್ತಲೇ ನಂದಾಳ ಆ ಮುದ್ದು ಮುಖ ಕಣ್ಣೆದುರು ನಗತೊಡಗುತ್ತದೆ.
 

‍ಲೇಖಕರು G

26 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading