ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಂಗೂ ಇನ್ನೂರು ತೆಂಗಿನ ಗಿಡ ಇದಾವೆ. ನೀರಿಲ್ಲ ಸಾ…’

ರೈತರು ಕಲಿಸಿದ ಪಾಠಗಳು

– ಟಿ.ತಿಮ್ಮಪ್ಪ

ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಾಗಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತಿದ್ದ ಮಧುಸೂದನ ಹಳ್ಳಿಯಲ್ಲಿಯೇ ಹುಟ್ಟಿದವನಾದರೂ ಬೆಳೆದದ್ದೆಲ್ಲಾ ನಗರ ಪ್ರದೇಶಗಳಲ್ಲಿಯೇ. ಅವನ ತಂದೆ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಮ್ಮ ಪಾಲಿಗೆ ಬಂದ ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಂಡು ಸ್ವಂತ ಹಳ್ಳಿಯಲ್ಲಿಯೇ ಒಂದು ಸಣ್ಣ ಮನೆ ಕಟ್ಟಿಸಿಕೊಂಡು ಅವನ ತಾಯಿಯೊಂದಿಗೆ ನೆಲೆಸಿದ್ದರು. ಹಳ್ಳಿಯಲ್ಲಿ ಮನೆಯಿಂದ ಜಮೀನಿಗೆ ತಿರುಗಾಡಲು ಒಂದು ಟಿವಿಎಸ್ ಮೊಪೆಡ್ ಉಪಯೋಗಿಸುತಿದ್ದರು. ಅದು ಹಳೆಯದಾಗಿ ಪದೇ ಪದೇ ರಿಪೇರಿಗೆ ಬರುತಿದ್ದುದರಿಂದ ಅದನ್ನು ಮಾರಿಬಿಟ್ಟಿದ್ದರು. ನಗರದಲ್ಲಿದ್ದ ಮಗನಿಗೆ ಹೊಸದೊಂದು ಟಿವಿಎಸ್ ಮೊಪೆಡ್ ಕೊಡಿಸುವಂತೆ ತಿಳಿಸಿ ಪೂರ್ತಿ ಹಣವನ್ನು ತಂದಿದ್ದರು. ಮಧುಸೂದನ ತಂದೆಯವರನ್ನು ಡೀಲರ್ ಬಳಿಗೆ ಕರೆದೊಯ್ದು ಅವರಿಂದಲೇ ಟಿವಿಎಸ್ ಮೊಪೆಡ್ ಒಂದನ್ನು ಆಯ್ಕೆ ಮಾಡಿಸಿ ರಿಜಿಸ್ಟ್ರೇಷನ್ ಆದ ಮೇಲೆ ನಾನೇ ಮೊಪೆಡನ್ನು ಊರಿಗೆ ತರುತ್ತೇನೆ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಿದ್ದ.

ಮಾರನೇ ದಿನ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಗಿದ ಮೇಲೆ ಸಂಜೆ ಮೊಪೆಡನ್ನು ತಂದು ಮನೆಯಲ್ಲಿ ನಿಲ್ಲಿಸಿದ. ಅದಾದ ಮರುದಿನ ಕಾರ್ಖಾನೆಯಿಂದ ತಮ್ಮ ವಕ್ರ್ಸ ಮ್ಯಾನೇಜರರ ಅನುಮತಿ ಪಡೆದು ಬೇಗ ಕೆಲಸ ಮುಗಿಸಿಕೊಂಡು ಬಂದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಅವನು ವಾಸಿಸುತಿದ್ದ ನಗರ ಪ್ರದೇಶದಿಂದ ಅವರ ಹಳ್ಳಿ ಸುಮಾರು ನಲವತ್ತು ಕಿಲೊಮೀಟರ್ ದೂರದಲ್ಲಿತ್ತು. ನಿಧಾನವಾಗಿ ಹೋದರೂ ಆರು ಗಂಟೆಯ ಹೊತ್ತಿಗೆ ಊರು ತಲುಪಿ ಮತ್ತೆ ಕೊನೆಯ ಬಸ್ಸಿಗೆ ವಾಪಾಸು ಬರಬಹುದೆಂದು ಅಂದಾಜು ಮಾಡಿಕೊಂಡು ‘ಮೊಪೆಡನ್ನು ಊರಿಗೆ ಬಿಟ್ಟು ಬರುತ್ತೇನೆ’ ಎಂದು ಹೆಂಡತಿಗೆ ತಿಳಿಸಿ ಹೊರಟ.

ರಸ್ತೆಯಲ್ಲಿ ಸಿಕ್ಕಿದ ಪೆಟ್ರೋಲ್ ಬಂಕೊಂದರಿಂದ ಟ್ಯಾಂಕ್ ತುಂಬಾ ಆಯಿಲ್ ಮಿಶ್ರಿತ ಪೆಟ್ರೋಲ್ ಹಾಕಿಸಿಕೊಂಡ. ಮೊಪೆಡ್ ಸರ್ರ್… ಎಂದು ಸದ್ದು ಮಾಡುತ್ತಾ ಸರಾಗವಾಗಿ ಚಲಿಸುತಿತ್ತು. ಹೊಸ ಗಾಡಿಯಾಗಿದ್ದರಿಂದ ನಿಧಾನವಾಗಿ ಸ್ಪೀಡೋಮೀಟರಿನ ಹಸಿರು ವಲಯದ ವೇಗದಲ್ಲೇ ನಡೆಸುತಿದ್ದ. ನಗರದಿಂದ ಸುಮಾರು ಹದಿನೈದು ಕಿಲೋಮೀಟರ್ ಚಲಿಸಿದ ನಂತರ ಮೊಪೆಡ್ನ ಸದ್ದು ಬದಲಾಗಿ ಎಷ್ಟೇ ಆಕ್ಸಿಲರೇಟರ್ ಕೊಟ್ಟರೂ ಬುರ್.. ಬುರ್.. ಎಂದು ಸದ್ದು ಮಾಡುತ್ತಾ ನಿಂತುಹೋಯಿತು. ಇದೇನಾಯಿತು ಎಂದುಕೊಂಡವನೇ ಮತ್ತೊಮ್ಮೆ ಸ್ಟಾರ್ಟ ಮಾಡಿ ಮುಂದಕ್ಕೆ ನಡೆಸಿದ. ಸ್ವಲ್ಪ ದೂರ ಚಲಿಸಿದ ನಂತರ ಮೊಪೆಡ್ ಮತ್ತೆ ಬುರ್.. ಬುರ್.. ಅಂತ ಸದ್ದು ಮಾಡುತ್ತಾ ನಿಂತುಹೋಯಿತು. ಇದೇ ರೀತಿ ಮತ್ತೆ ಎರಡು ಬಾರಿ ಆದಾಗ ಒಳ್ಳೇ ಗ್ರಹಚಾರಕ್ಕೆ ಬಂದಿತಲ್ಲ ಎಂದುಕೊಂಡು ರಸ್ತೆಯ ಬದಿಗೆ ಮೊಪೆಡ್ ನಿಲ್ಲಿಸಿ ಸ್ಟಾಂಡು ಹಾಕಿ ಹಿಂದಿನ ಚಕ್ರವನ್ನು ತಿರುಗಿಸಲು ಪ್ರಯತ್ನಿಸಿದ. ಚಕ್ರ ಬಿಗಿಯಾದಂತೆ ಅನಿಸಿತು. ಅವನ ತಾಂತ್ರಿಕ ತಲೆಗೆ ತಕ್ಷಣವೇ ಕಾರಣ ಹೊಳೆಯಿತು.

ಚಕ್ರವನ್ನು ಸರಿಯಾಗಿ ಜೋಡಿಸದೇ ಅದು ಅಲೈನ್ಮೆಂಟ್ ಕಳೆದುಕೊಂಡು ಅದಕ್ಕೆ ತಿರುಗಲು ತ್ರಾಸದಾಯಕವಾಗಿದೆ. ಏನು ಮಾಡುವುದೆಂದು ತೋಚದೆ ಅವನ ಆತಂಕ ಉದ್ವೇಗಗಳು ಹೆಚ್ಚಾದವು. ಸ್ಟಾಕ್ ಇಲ್ಲವೆಂದು ಮೊಪೆಡ್ ತರುವಾಗ ಟೂಲ್ಕಿಟ್ ಕೊಟ್ಟಿರಲಿಲ್ಲ. ಒಡನೆಯೇ ಡೀಲರನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದು ಮನಸ್ಸಿನಲ್ಲಿಯೇ ತನಗೆ ತಿಳಿದಿದ್ದ ಬೈಗುಳಗಳೆಲ್ಲವನ್ನೂ ಬೈದು ಮೊಬೈಲ್ ತೆಗೆದು ಡೆಲಿವೆರಿ ನೋಟ್ ಮೇಲಿದ್ದ ನಂಬರಿಗೆ ಫೋನು ಮಾಡಿದಾಗ ಅತ್ತ ಕಡೆಯಿಂದ ಹೆಣ್ಣು ಧ್ವನಿಯೊಂದು ‘ಹೆಲೋ..’ ಎಂದು ಉಲಿಯಿತು. ತಾಳ್ಮೆ ಕಳೆದುಕೊಂಡವನು ‘ಅಷ್ಟೊಂದು ಹಣ ತೆಗೆದುಕೊಳ್ಳುತ್ತೀರಿ.. ಸರಿಯಾಗಿ ಪರೀಕ್ಷಿಸಿ ಗಾಡಿಯನ್ನು ಡೆಲಿವೆರಿ ನೀಡಲು ಆಗುವುದಿಲ್ಲವಾ..’ ಎಂದು ಉರಿದುಬಿದ್ದು ಹಾಗೆ ಮಾಡುತ್ತೇನೆ.. ಹೀಗೆ ಮಾಡುತ್ತೇನೆ.. ಕನ್ಸ್ಯೂಮರ್ ಕೋರ್ಟಿಗೆ ಹಾಕುತ್ತೇನೆ ಎಂದು ಫೋನಿನಲ್ಲಿಯೇ ಎಗರಾಡಿದ. ಎಲ್ಲವನ್ನೂ ಸಮಾಧಾನವಾಗಿ ಕೇಳಿಸಿಕೊಂಡು ಅತ್ತಲಿಂದ ‘ಏನಾದರೂ ಮಾಡಿಕೊಳ್ಳಿ.. ಗಾಡಿಯನ್ನು ಇಲ್ಲಿಗೆ ತಂದರೆ ಸರಿಪಡಿಸಿಕೊಡುತ್ತೇವೆ..’ ಎಂದು ತಣ್ಣಗೆ ನುಡಿದ ಫೋನು ಸ್ಥಗಿತಗೊಂಡಿತು.

ವಾಪಾಸು ಯಾವುದಾದಾದರೂ ಟೆಂಪೋದಲ್ಲಿಯೋ, ಲಾರಿಯಲ್ಲಿಯೋ ಮೊಪೆಡನ್ನು ತೆಗೆದುಕೊಂಡು ಹೋಗುವುದೋ ಎಂಬ ಯೋಚನೆಯೊಂದು ಬಂದು ಸರಿ ನೋಡೊಣವೆಂದು ಯಾವುದಾದರೂ ವಾಹನಗಳು ಬರುತ್ತವೆಯೇನೋ ಎಂದು ಕಾಯ್ದ. ಒಂದೆರಡು ವಾಹನಗಳಿಗೆ ಕೈ ಅಡ್ಡ ಹಿಡಿದರೂ ಯಾರೂ ನಿಲ್ಲಿಸಲಿಲ್ಲ. ಆತಂಕ ಹೆಚ್ಚಾಗಿ ಏನಾದರೂ ಮಾಡಬಹದೇನೋ ನೋಡೋಣ ಎಂದು ಮತ್ತೆ ಮೊಪೆಡ್ ಸ್ಟಾರ್ಟ ಮಾಡಿದ. ಸ್ವಲ್ಪ ದೂರ ಮುಂದಕ್ಕೆ ಚಲಿಸಿ ಮತ್ತೆ ಬುರ್.. ಬುರ್.. ಎಂದು ಸದ್ದು ಮಾಡುತ್ತಾ ನಿಂತುಹೋಯಿತು. ಅಲ್ಲಿಯೇ ಕುಳಿತು ಚಕ್ರವನ್ನು ಹಿಂದೆ ಮುಂದೆ ತಿರುಗಿಸತೊಡಗಿದ. ರಸ್ತೆಯಲ್ಲಿ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಮತ್ತು ಕಾರುಗಳಲ್ಲಿ ಹೋಗುತ್ತಿದ್ದವರು ಸುಮ್ಮನೆ ಇವನ ಕಡೆ ನೋಡುತ್ತಿದ್ದರೇ ಹೊರತು ಒಬ್ಬರೂ ಸಹಾಯಕ್ಕೆ ಬರಲಿಲ್ಲ. ಇಂತಹ ಯಾತನೆ ಯಾರಿಗೂ ಬೇಡ ಎನಿಸಿ ಮನಸ್ಸಿಗೆ ತೀವ್ರ ಬೇಸರವಾಗಿ ಒಂದು ಕ್ಷಣ ಸುಮ್ಮನೆ ನಿಂತುಕೊಂಡ.

ಅಷ್ಟರಲ್ಲಿ ಹಳ್ಳಿಯವನೊಬ್ಬ ಮಚ್ಚು ಒಂದನ್ನು ಕೈಯ್ಯಲ್ಲಿ ಹಿಡಿದುಕೊಂಡು ಅತ್ತ ಹೋಗುತ್ತಿದ್ದವನು ‘ಏನಾಯ್ತು ಸಾ..’ ಅಂದ. ಮಧುಸೂದನನಿಗೆ ಅವನೊಂದಿಗೆ ಮಾತನಾಡುವ ತಾಳ್ಮೆ ಇರಲಿಲ್ಲ. ಸುಮ್ಮನೆ ಉದಾಸೀನದಿಂದ ಅವನತ್ತ ನೋಡಿದ. ಮಧ್ಯವಯಸ್ಸು, ನೀಳ ಸಪೂರ ದೇಹ, ತಲೆ ಕಪ್ಪಾಗಿದ್ದರೂ ತುಸು ಬೆಳ್ಳಗಿದ್ದ ಮೀಸೆ, ಕುರುಚಲು ಗಡ್ಡ, ಕಾಲರ್ ಹರಿದುಹೋಗಿದ್ದ ಮಾಸಿದ ಬಿಳಿ ಶರಟು, ಖಾಕಿ ಚಡ್ಡಿ. ಅವನನ್ನು ಒಮ್ಮೆ ನೋಡಿ ‘ಗಾಡಿ ಮುಂದಕ್ಕೆ ಹೋಗ್ತಾ ಇಲ್ಲ.. ನಿಂತು ಹೋಗ್ತಾ ಇದೆ..’ ಎಂದು ಅನ್ಯಮನಸ್ಕನಾಗಿ ನುಡಿದ. ಹಳ್ಳಿಯವನು ‘ಹೊಸಗಾಡಿ ಅಲ್ವಾ.. ಸಾ..’ ಅಂದ. ಹೊಸಗಾಡಿಯೆನ್ನುವುದು ಇವನ ಕಣ್ಣಿಗೆ ಕಾಣಿಸುತ್ತಿಲ್ಲವಾ ಅಂತ ಮನಸ್ಸಿನಲ್ಲಿಯೇ ಬೈದುಕೊಂಡು ‘ಹೂಂ.. ಇವತ್ತೇ ತರ್ತಾ ಇರೋದು.. ಚಕ್ರ ಸರಿಯಾಗಿ ಫಿಟ್ ಮಾಡ್ಕೊಟ್ಟಿಲ್ಲ..’ಎಂದು ಉತ್ತರಿಸಿದ. ಅವನು ಗಾಡಿಯ ಹತ್ತಿರ ಬಂದು ‘ಚಕ್ರ ಅಂಗೇನೂ ಆಗಾಕಿಲ್ಲ ಸಾ..’ ಎಂದು ಹೇಳಿ ಗಾಡಿಯನ್ನೇ ನೋಡತೊಡಗಿದಾಗ ಇವನಿಗೆ ಮೈ ಉರಿದುಹೋಯಿತು. ನಾನೇ ಎಂಜಿನಿಯರ್ರು.. ನನಗೆ ಪಾಠ ಮಾಡೋದಿಕ್ಕೆ ಬಂದಿದಾನೆ ಎನ್ನಿಸಿ ಸುಮ್ಮನೆ ನಿಂತ.

ಹಳ್ಳಿಯವನು ಮೊಪೆಡ್ಡಿನ ಎಂಜಿನ್ ಮುಟ್ಟಿ ‘ಸಾ ಮಿಷಿನ್ ಇಪರೀತ ಹೀಟಾಗದೆ ಸಾ.. ಆಯಿಲ್ ಹಾಕಿಸಿದ್ರಾ ..’ ಎಂದಾಗ ಇವನ ತಾಳ್ಮೆ ಮೀರಿ ‘ಹೂನಪ್ಪಾ..’ ಎಂದು ನಿರುತ್ಸಾಹದಿಂದ ಹೇಳಿದ. ‘ಏನೂ ಆಗಿಲ್ಲ ಸಾ .. ಹೊಸ ಗಾಡಿ.. ಮಿಷಿನ್ ಹಿಡೀತಾ ಇದೆ.. ಇನ್ನೊಂದು ಸಲ್ಪ ಆಯಿಲ್ ಹಾಕ್ಸಿ ಸಾ ಸರಿಯಾಯ್ತದೆ..’ ಎಂದಾಗ ಇವನಿಗೆ ಇರಿಸುಮುರಿಸಾಯಿತು. ಪೆಟ್ರೋಲ್ ಎಂಜಿನ್ನು, ಡೀಸೆಲ್ ಎಂಜಿನ್ನು ಎಂದು ಓದಿಕೊಂಡು ಎಂಜನಿಯರಿಂಗ್ ಪದವಿಯಲ್ಲಿ ಡಿಸ್ಟಿಂಕ್ಷನ್ ತೆಗೆದುಕೊಂಡು ಪಾಸಾದವನು ನಾನು.. ನನಗೇ ಹೇಳಿಕೊಡುತಿದ್ದಾನಲ್ಲ.. ಎಂದುಕೊಂಡು ‘ಅದೇನೂ ಇಲ್ಲಪ್ಪಾ.. ಚಕ್ರ ಬಿಗಿಯಾಗ್ತಾ ಇದೆ ಸರಿಯಾಗಿ ಫಿಟ್ ಮಾಡಿಲ್ಲ..’ ಅಂತ ಮತ್ತೆ ಹೇಳಿದ. ‘ಚಕ್ರ ಬಿಗಿಯಾದ್ರೆ ಮಿಷಿನ್ ಇಷ್ಟೊಂದು ಯಾಕೆ ಹೀಟ್ ಆಗ್ತದೆ ಸಾ.. ಮಿಷಿನ್ ಒಳಗೆ ಹಿಡೀತಾದೆ ಸಾ.. ಅದುಕ್ಕೇ ಚಕ್ರ ಬಿಗಿಯಾಗದೇ..’ ಅಂದಾಗ ಇವನ ತಲೆಗೆ ಅವನು ಹೇಳುತ್ತಿರುವುದು ಸರಿಯಿರಬಹುದು ಎನ್ನುವುದು ಮೊದಲ ಬಾರಿಗೆ ಹೊಳೆಯಿತು. ಹೊಸ ಎಂಜಿನ್ನಿನ ಒಳಗಿರುವ ಪಿಸ್ಟನ್ ಪೆಟ್ರೋಲ್ನಲ್ಲಿ ಮಿಶ್ರಿತವಾಗಿರುವ ಆಯಿಲ್ ಸಾಕಾಗದೆ ಆಗಾಗ ಸಿಲಿಂಡರಿನಲ್ಲಿ ಸಿಕ್ಕಿಕೊಂಡು ಸರಿಯಾಗಿ ಚಲಿಸುತ್ತಿಲ್ಲ.. ಎಂಜಿನ್ನಿನಿಂದ ನೇರವಾಗಿ ಚಾಲನೆಗೊಳಪಡುತ್ತಿರುವ ಚಕ್ರವೂ ಬಿಗಿಯಾಗುತ್ತಿದೆ ಎಂಬ ಆಲೋಚನೆ ಮೂಡಿತು.

ಅದನ್ನೇ ಯೋಚಿಸುತ್ತಿದ್ದವನಿಗೆ ಹಳ್ಳಿಯವನು ‘ನಡೀರಿ ಸಾ..ಇಲ್ಲೇ ಒಂದರ್ಧ ಮೈಲಿ ದೂರುದಲ್ಲಿ ಪೆಟ್ರೋಲ್ ಬಂಕ್ ಅದೆ.. ಒಂದು ಅರವತ್ತು ಎಮ್ಮೆಲ್ಲು ಆಯಿಲ್ ಹಾಕ್ಸಿ..’ ಅಂದ. ಸರಿ ಅಂತ ಮೊಪೆಡ್ ತಳ್ಳಿಕೊಂಡು ಹೊರಟಾಗ ‘ನಾನೂ ಅತ್ಲಾಗೇ ಹೋಗ್ತಾ ಇದೀನಿ, ನಾನೇ ತಳ್ಳಿಕೊಂಡು ಬತ್ತೀನಿ ಕೊಡಿ ಸಾ..’ಅಂದ ಹಳ್ಳಿಯವನ ಮಾತಿನಿಂದ ಇವನಿಗ್ಯಾಕೋ ಅನುಮಾನ ಮೂಡಿತು. ಕೈಯ್ಯಲ್ಲಿ ಮಚ್ಚು ಬೇರೆ ಹಿಡಿದಿದ್ದಾನೆ ಹೊಸ ಗಾಡಿ ಕಿತ್ತುಕೊಂಡು ಹೋದರೆ ಏನು ಮಾಡುವುದು ಎಂದು ಹೆದರಿಕೆಯಾಯಿತು. ತಕ್ಷಣವೇ ಆತ ಇದನ್ನು ಹಿಡ್ಕಳಿ ಸಾ ಅಂತ ಮಚ್ಚು ಇವನ ಕೈಗೆ ಕೊಟ್ಟಿದ್ದರಿಂದ ಧೈರ್ಯ ಬಂದು ಗಾಡಿಯನ್ನು ತಳ್ಳಲು ಅವನಿಗೆ ಕೊಟ್ಟ. ದಾರಿಯಲ್ಲಿ ಹೋಗುವಾಗ ತನ್ನ ಪರಿಚಯ ಮಾಡಿಕೊಂಡು ಗಾಡಿಯನ್ನು ತಮ್ಮ ತಂದೆಯವರಿಗಾಗಿ ಹಳ್ಳಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ. ಹಳ್ಳಿಯವನನ್ನು ‘ನಿಮ್ಮ ಹೆಸರೇನು..’ ಎಂದು ಕೇಳಿದಾಗ ‘ನನ್ನೆಸ್ರು ಮರಿಯಪ್ಪ ಅಂತ ಸಾ.. ಇಲ್ಲೇ ಪಕ್ಕುದಲ್ಲೇ ನಮ್ಮೂರು..’ ಎಂದು ಗಾಡಿಯನ್ನು ತಳ್ಳುತ್ತಲೇ ಹೇಳಿದ.

ಮರಿಯಪ್ಪ ಹೇಳಿದಂತೆ ಆಯಿಲ್ ಹಾಕಿಸಿ ಗಾಡಿ ಸ್ಟಾರ್ಟ ಮಾಡಿದ ಮೇಲೆ ಅದು ಮೊದಲಿನಂತೆ ಸರ್ರ್… ಎಂದು ಸದ್ದು ಮಾಡಿದ್ದು ಕಂಡು ಇವನಿಗೆ ಖುಷಿಯಾಯಿತು. ‘ಇನ್ನೇನೂ ಪ್ರಾಬ್ಲಮ್ ಆಗಲ್ಲ ನಡೀರಿ..’ ಎಂದ ಮರಿಯಪ್ಪನನ್ನು ‘ಕೂತ್ಕಳಿ.. ಅಲ್ಲೀವರಗೆ ಬಿಡ್ತೀನಿ.’ ಅಂತ ಹತ್ತಿಸಿಕೊಂಡು ಹೊರಟ. ಗಾಡಿ ಸರಾಗವಾಗಿ ಚಲಿಸತೊಡಗಿದ್ದು ಕಂಡು ಮನಸ್ಸಿನಲ್ಲಿಯೇ ಪುಸ್ತಕದ ಬದನೆಕಾಯಿಗಿಂತ ಸಾಮಾನ್ಯ ವಿವೇಚನೆ ಹೆಚ್ಚಿನದು ಎನಿಸಿತು. ಸ್ವಲ್ಪ ದೂರ ಬಂದ ಮೇಲೆ ರಸ್ತೆಯ ಬದಿಯಲ್ಲಿ ಒಂದು ಸಣ್ಣ ಹಳ್ಳಿ ಸಿಕ್ಕಿತು. ‘ಇಲ್ಲೆ ನಿಲ್ಸಿ ಸಾ..’ ಎಂದ ಮರಿಯಪ್ಪ ‘ಬನ್ನಿ ಸಾ.. ಇಲ್ಲೆ ಹೋಟ್ಲಲ್ಲಿ ಟೀ ಕುಡಿದು ಹೋಗುವಿರಂತೆ..’ ಅಂದಾಗ ‘ಪಾಪ! ಇಷ್ಟು ಸಹಾಯ ಮಾಡಿದ್ದಾನೆ.. ಅವನಿಗೊಂದು ಟೀ ಕುಡಿಸಿ ಹೋಗೋಣ..’ ಎಂದುಕೊಂಡ. ಹೋಟೆಲಿನಲ್ಲಿ ಕಾಲಿಟ್ಟ ಮರಿಯಪ್ಪ ಸರ್ವ್ ಮಾಡುತಿದ್ದ ಹುಡುಗನಿಗೆ ‘ಮರೀ.. ಮೊದ್ಲು ಒಂದು ಪ್ಲೇಟು ವಡೆ ಕೊಡು.. ಅಂಗೇ ಎರ್ಡು ಟೀ ಕೊಡು’ ಅಂದ.

ವಡೆಯನ್ನೂ ತೆಗೆದುಕೊಳ್ಳಲಿ ಪರವಾಗಿಲ್ಲ ಅಂತ ಇವನಿಗೆ ಅನ್ನಿಸಿತು. ತಣ್ಣಗಿದ್ದ ವಡೆ ತಿನ್ನಲು ಮನಸಿಲ್ಲದಿದ್ದರೂ ಬೇಡವೆನ್ನಲಾಗದೆ ವಡೆ ತಿಂದು ಟೀ ಕುಡಿದು ಹೊರಗೆ ಬರುವಾಗ ಜೇಬಿನಿಂದ ಪರ್ಸು ತೆಗೆದು ಐವತ್ತರ ನೋಟು ಹೊರಗೆಳೆದದ್ದನ್ನು ಕಂಡು ಮರಿಯಪ್ಪ ಸಣ್ಣಗೆ ನಕ್ಕ. ‘ಇದು ನಮ್ಮೂರು.. ನೀವು ಕೊಟ್ಟರೆ ಅವ್ರು ಇಸ್ಕಳಲ್ಲ.’ ಎನ್ನತ್ತಾ ಚಡ್ಡಿಯ ಜೇಬಿಗೆ ಕೈ ಹಾಕಿ ನೋಟುಗಳನ್ನು ಹೊರತೆಗೆದ. ಐನೂರು ರೂಪಾಯಿಗಳ ನೋಟುಗಳ ಜೊತೆ ಮಡಿಸಿಟ್ಟಿದ್ದ ಹತ್ತು ರೂಪಾಯಿಗಳ ಎರಡು ನೋಟು ತೆಗದು ಕೊಟ್ಟು ‘ನಮ್ಮನೆ ಇಲ್ಲೇ ಒಂದು ಫರ್ಲಾಂಗು ಸಾ.. ಮನೇಗೇ ಕರ್ಕೊಂಡೋಗಿ ಟೀ ಕುಡ್ಸಿ ಕಳುಸ್ಬೇಕಾಗಿತ್ತು.. ಬೇಜಾರು ಮಾಡ್ಕ ಬ್ಯಾಡಿ.. ಹೊತ್ತಾಗದೆ ನೀವು ಬೇಗ ಊರು ಸೇರ್ಕಳ್ಳಿ ಅಂತ ಇಲ್ಲಿಗೆ ಕರ್ಕಂಡು ಬಂದೆ..’ ಅಂದಾಗ ಮಧುಸೂದನನಿಗೆ ತನ್ನ ಸಣ್ಣತನವನ್ನು ನೆನೆದು ನಾಚಿಕೆಯಾಯಿತು.

ಹೊರಡುವ ಮುನ್ನ ‘ನೀವು ಏನು ಕೆಲ್ಸ ಮಾಡ್ತಾ ಇದೀರಿ..’ ಎಂದು ವಿಚಾರಿಸಿದ. ‘ನಾವು ಹಳ್ಳಿಯವ್ರು ಇನ್ನೇನು ಕೆಲ್ಸ ಮಾಡಕ್ಕಾಯ್ತದೆ.. ನಾನೂ ಒಬ್ಬ ರೈತ.. ನಂಗೂ ಇನ್ನೂರು ತೆಂಗಿನ ಗಿಡ ಇದಾವೆ. ನೀರಿಲ್ಲ ಸಾ.. ಇದ್ದುದು ಎರ್ಡು ಬೋರು ಒಣಗೋದೋ.. ಮತ್ತೆ ನಾಕು ಬೋರು ಹಾಕುಸ್ದೆ.. ಎಲ್ಲಾ ಫೇಲಾದೋ.. ಮೊದ್ಲು ನಂತಾವೂ ಇದೇ ಗಾಡಿ ಇತ್ತು.. ಒಂದು ಟ್ರಾಕ್ಟರೂ ಇತ್ತು.. ಮೇಂಟೇನ್ ಮಾಡಕ್ಕಾಗ್ದೆ ಎಲ್ಲಾ ಮಾರ್ಬುಟ್ಟೆ.. ನೀರೊಂದಿದ್ದಿದ್ರೆ ನಾನೂ ರಾಜನಂಗಿರ್ತಿದ್ದೆ..’ ಅಂದ ಮರಿಯಪ್ಪನಿಗೆ ‘ಬರ್ತೀನಿ.. ನಿಮ್ಮುಪಕಾರ ಮರೆಯಲ್ಲ.. ನಮಸ್ಕಾರ..’ ಅಂತ ಹೇಳಿ ವಂದಿಸಿ ಹೊರಟ ಮಧುಸೂದನ. ‘ಅದೇನು ದೊಡ್ಡ ಉಪಕಾರ ನಡೀರಿ.. ನಮ್ಮಂತೋರು ಇಷ್ಟೂ ಮಾಡಕ್ಕಾಗ್ದೇ ಇದ್ರೆ ಇನ್ನೇನು ಮಾಡಕ್ಕಾಯ್ತದೆ..’ ಎಂದು ನಕ್ಕ ಮರಿಯಪ್ಪನನ್ನು ಕಂಡು ಕೊಳಕು ಬಟ್ಟೆಯನ್ನು ಇಸ್ತ್ರಿ ಮಾಡಿದಂತಹ ಮನಸ್ಸಿನ ನಾನು ಮತ್ತು ಹರಿದ ಬಟ್ಟೆಯನ್ನೇ ಹೊಲಿದು ಶುಭ್ರವಾಗಿಸಿದಂತಹ ಮನಸ್ಸಿನ ಅವನಿಗೂ ಎಷೊಂದು ವ್ಯತಾಸ ಇದೆ ಎನ್ನಿಸಿತು. ಮೊಪೆಡ್ ಎಲ್ಲೂ ನಿಲ್ಲದೇ ಸರಾಗವಾಗಿ ಚಲಿಸಿ ಊರು ಸೇರಿದಾಗ ಮನಸ್ಸಿನ ಪರದೆಯಲ್ಲಿ ಮರಿಯಪ್ಪನ ಚಿತ್ರವೇ ಕಾಣಿಸುತಿತ್ತು.

 

‍ಲೇಖಕರು avadhi

27 May, 2013

2 Comments

  1. Satyanarayana BR

    “ನಂಗೂ ಇನ್ನೂರು ತೆಂಗಿನ ಗಿಡ ಇದಾವೆ. ನೀರಿಲ್ಲ ಸಾ.. ಇದ್ದುದು ಎರ್ಡು ಬೋರು ಒಣಗೋದೋ.. ಮತ್ತೆ ನಾಕು ಬೋರು ಹಾಕುಸ್ದೆ.. ಎಲ್ಲಾ ಫೇಲಾದೋ.. ”
    ಈ ಸಾಲುಗಳು ನನ್ನವೂ ಕೂಡಾ!

    • Anonymous

      THUMBA CHANDA IDE SA

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading