ಧಾರವಾಡದಲ್ಲಿ ಜರುಗಲಿರುವ ಸಾಹಿತ್ಯ ಸಂಭ್ರಮಕ್ಕೆ ಸಂಬಂಧಿಸಿದಂತೆ ಎರಡು ಪತ್ರಿಕಾ ಹೇಳಿಕೆಗಳು ‘ಅವಧಿ’ಯನ್ನು ತಲುಪಿದೆ. ಉತ್ಸವವಾದ ಸಂಘಟಕರ ಪರವಾಗಿ ಗಿರಡ್ಡಿ ಗೋವಿಂದರಾಜ ಅವರ ಹೇಳಿಕೆಯನ್ನು ಮನೋಹರ ಗ್ರಂಥಮಾಲಾದ ಸಮೀರ್ ಜೋಷಿ ಅವರು ಕಳಿಸಿದ್ದಾರೆ
ಈ ಉತ್ಸವವನ್ನು ಪ್ರತಿಭಟಿಸುತ್ತಿದ್ದ ಸಂಘಟನೆಗಳ ಪರವಾಗಿ ಡಾ ಜಗದೀಶ ಕೊಪ್ಪ ಅವರು ಹೇಳಿಕೆಯನ್ನು ಕಳಿಸಿದ್ದಾರೆ
ಈ ಎರಡೂ ಹೇಳಿಕೆಗಳನ್ನು ಯಥಾವತ್ ನಿಮ್ಮ ಮುಂದಿಡುತ್ತಿದ್ದೇವೆ

ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಿಯಾಮಾವಳಿಗಳು ರದ್ದು
ಕನ್ನಡ ಸಾಹಿತ್ಯ ಲೋಕದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿ ವಿವಾದಕ್ಕೆ ಕಾರಣವಾದ ಧಾರವಾಡದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಎಲ್ಲಾ ನಿಯಾಮಾವಳಿಗಳು ರದ್ದಾಗಿವೆ.
ಸಾರ್ವಜನಿಕರಿಗೆ ನಿಷೇದ ಹೇರಲ್ಪಟ್ಟ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಪ್ರಶ್ನೆ ಕೇಳಬಾರದು, ಮೂರು ದಿನದ ಕಾರ್ಯಕ್ರಮಕ್ಕೆ ಒಂದೂವರೆ ಸಾವಿರ ಶುಲ್ಕ (ಇದರಲ್ಲಿ ವಸತಿ, ರಾತ್ರಿ ಊಟ ಇಲ್ಲ) ಮತ್ತು ನೊಂದಣಿ ಮಾಡಿಸಿಕೊಂಡವರಿಗೆ ಮಾತ್ರ ಪ್ರವೇಶ ಇಂತಹ ಅಮಾನವೀಯ ಮತ್ತು ಅಮಾನುಷ ನಿಯಾಮಾವಳಿಗಳ ವಿರುದ್ಧ ಧಾರವಾಡವೂ ಸೇರಿದಂತೆ ರಾಜ್ಯಾದ್ಯಂತ ಪ್ರಗತಿ ಪರ ಲೇಖಕರಿಂದ ತೀವ್ರ ವಿರೋದ ವ್ಯಕ್ತವಾಗಿತ್ತು.
ಧಾರವಾಡದಲ್ಲಿ ಸಮಾನ ಮನಸ್ಕ ಲೇಖಕರು ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಜನವರಿ 25 ಮತ್ತು 26 ರಂದು ಜನಪರ ಸಾಹಿತ್ಯ ಸಮ್ಮೇಳನ ಎಂಬ ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದ್ದರು.
ಶನಿವಾರ ಸಂಜೆ ಸಾಹಿತ್ಯ ಸಂಭ್ರಮದ ಗೌರವ ಅಧ್ಯಕ್ಷರಾದ ಡಾ.ಎಂ.ಎಂ. ಕಲ್ಬುರ್ಗಿ ಮತ್ತು ಕಾರ್ಯಾಧ್ಯಕ್ಷರಾದ ಢಾ. ಗಿರಡ್ಡಿ ಗೋವಿಂದರಾಜು ಮತ್ತು ಲೇಖಕರ ನಡುವೆ ನಡೆದ ಮಾತುಕತೆಯಲ್ಲಿ ನಿಯಾಮಾವಳಿಗಳನ್ನು ರದ್ದುಪಡಿಸಿ, ಪ್ರವೇಶ ಶುಲ್ಕವನ್ನು ಅರ್ಧದಷ್ಟು ಇಳಿಸುವುದಾಗಿ ಸಂಘಟಕರು ಭರವಸೆ ನೀಡಿದರು. ಈ ಬಗ್ಗೆ ಭಾನುವಾರ ಬೆಳಿಗ್ಗೆ ಧಾರವಾಡದಲ್ಲಿ ನಡೆಯುವ ಪತ್ರಿಕಾಗೋಷ್ಟಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಚರ್ಚೆಯಲ್ಲಿ ಬಸವರಾಜ ಸೂಳಿಬಾವಿ, ಜಗದೀಶ ಮಂಗಳೂರುಮಠ, ಡಾ. ಸಂಜೀವ ಕುಲಕರ್ಣಿ, ಡಾ. ಎಂ.ಡಿ. ವಕ್ಕುಂದ, ಡಾ.ಎನ್ ಜಗದೀಶ್ ಕೊಪ್ಪ ಪಾಲ್ಗೊಂಡಿದ್ದರು.
ಕಲ್ಬುರ್ಗಿಯವರ ನಿವಾಸದಲ್ಲಿ ನಡೆದ ಎರಡು ತಾಸುಗಳ ಬಿರುಸಿನ ಚರ್ಚೆ ವಾಗ್ವಾದಗಳ ನಡುವೆ ನಮ್ಮ ವಿರೋಧ ಕೇವಲ ತಾತ್ವಿಕವಾದುದು, ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ಮೇಲಲ್ಲ ಎಂಬುದನ್ನು ಸೃಷ್ಟಪಡಿಸಿದ ಲೇಖಕರು, ನಮಗೆ ನಮ್ಮ ನೆಲ ಸಂಸ್ಕೃತಿಯ ಚಂತನೆಗಳು ಮಾದರಿಯಾಗಬೇಕೆ ಹೊರತು, ಸಾಹಿತ್ಯವನ್ನು ಜನಸಾಮಾನ್ಯನಿಂದ ದೂರವಿರಿಸಿ, ಅದಕ್ಕೆ ವಾಣಿಜ್ಯದ ರೂಪಕೊಟ್ಟು, ಮಾರಾಟದ ಸರಕಿನಂತೆ ಲೇಖಕನನ್ನು ಮತ್ತು ಅವನ ಕೃತಿಯನ್ನು ಬಿಂಬಿಸುವ ಯಾವುದೋ ಜೈಪುರ ಅಥವಾ ದೆಹಲಿ ಮಾದರಿಯಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ನೀಡಿದ ಆಹ್ವಾನವನ್ನು ವಿನಯದಿಂದ ತಿರಸ್ಕರಿಸಿದ ಸಮಾನ ಮನಸ್ಕಿನ ಲೇಖಕರು, ಜೀವಪರವಾದ, ಜನಪರವಾದ ಚೀಂತನೆಗಳಿಲ್ಲದ ಕಾರ್ಯಕ್ರಮದ ವಿರುದ್ಧ ನಮ್ಮ ವಿರೋಧ ಮುಂದುವರಿಯುತ್ತಿರುವುದರಿಂದ ಭಾಗವಹಿಸಲು ಸಾಧ್ಯವಿಲ್ಲ ಎಂದು ನುಡಿದರು.
ಮಾರ್ಚ್ ಕೊನೆಯವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಧಾರವಾಡದಲ್ಲಿ ಎರಡು ದಿನಗಳ ಜನಪರ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವುದಾಗಿ ಮತ್ತು ಇದರಲ್ಲಿ ನಾಡಿನ ಎಲ್ಲಾ ಪ್ರಜ್ಞಾವಂತ ಲೇಖಕರು ಭಾಗವಹಿಸುತ್ತಿರುವುದಾಗಿ, ಇದಕ್ಕೆ ಸರ್ಕಾರದ ಬಿಡಿಗಾಸಿನ ನೆರವು ಕೋರುವುದಿಲ್ಲ ಎಂದು ಈ ಸಂದರ್ಭದಲ್ಲಿ ಪ್ರಕಟಿಸಿದರು.
ನೆಲದ ಸಂಸ್ಕೃತಿಯಿಂದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ದೂರ ಒಯ್ಯುತ್ತಿರುವ ಎಲ್ಲಾ ಮೂಲಭೂತವಾದಿ ಮನಸ್ಸುಗಳು ಬದಲಾಗುವವರೆಗೂ ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಸುವುದಾಗಿ ತಮ್ಮ ಅಭಿಪ್ರಾಯವನ್ನು ಡಾ. ಗಿರಡ್ಡಿ ಮತ್ತು ಡಾ. ಕಲ್ಬುರ್ಗಿಯವರಿಗೆ ನಾಡಿನ ಯುವ ಮತ್ತು ಪ್ರಜ್ಞಾವಂತ ಲೇಖಕರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಲೇಖಕರು ಮತ್ತೊಮ್ಮೆ ಸೃಷ್ಟಪಡಿಸಿದರು.
( ವರದಿ ಕಳಿಸಿದವರು: ಡಾ ಜಗದೀಶ್ ಕೊಪ್ಪ)

ಧಾರವಾಡ ಸಾಹಿತ್ಯ ಸಂಭ್ರಮ ಸಂಘಟಕರ ಹೇಳಿಕೆ
ಧಾರವಾಡ ಸಾಹಿತ್ಯ ಸಂಭ್ರಮದ ವಿಷಯವಾಗಿ ಸೃಷ್ಟಿಯಾಗಿದ್ದ ಗೊಂದಲ ಪರಸ್ಪರ ಚರ್ಚೆಯ ಮೂಲಕ ತಿಳಿಯಾಗಿದೆ. ಎಲ್ಲರ ಸಹಕಾರದಿಂದಾಗಿ ಇದು ಸುಗಮವಾಗಿ ನೆರವೇರಲಿದೆ. ಈ ಮೊದಲು ಪತ್ರಿಕೆ ಮೂಲಕ ತಿಳಿಸಿದಂತೆ ನಿಬಂಧನೆಗಳನ್ನು ರದ್ದುಪಡಿಸಲಾಗಿದೆಯೆಂದು ಇನ್ನೊಮ್ಮೆ ಸ್ಪಷ್ಟೀಕರಿಸುತ್ತೇವೆ. ಬೇರೆ ಬೇರೆ ಮೂಲಗಳಿಂದ ಈ ವಾರದಲ್ಲಿ ಸಂಭ್ರಮದ ಕೆಲಸಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಭರವಸೆ ಸಿಕ್ಕಿರುವುರಿಂದ ಪ್ರತಿನಿಧಿ ಶುಲ್ಕವನ್ನು ರೂ.500=00ಕ್ಕೆ ಇಳಿಸಲಾಗಿದೆ. ಈಗಾಗಲೇ ಪ್ರತಿನಿಧಿತ್ವವನ್ನು ನೋಂದಣಿ ಮಾಡಿದವರಿಗೆ ಸಂಭ್ರಮದ ಸಂದರ್ಭದಲ್ಲಿ ಅವರು ನೀಡಿದ ಹೆಚ್ಚುವರಿ ಹಣವನ್ನು ಮರಳಿ ನೀಡಲಾಗುವುದು. ಪ್ರತಿನಿಧಿಗಳಿಗೆ ಅಲ್ಲದೆ ಇತರ ಸಾಹಿತ್ಯಾಸಕ್ತರಿಗೂ ಶುಲ್ಕರಹಿತ ಪ್ರವೇಶ ಕಲ್ಪಿಸಲಾಗಿದೆ. ಗೋಷ್ಠಿಗಳಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮ ಸುಗಮವಾಗಿ ಸಾಗುವುದರಿಂದ ಎಲ್ಲ ಸಂಪನ್ಮೂಲ ವ್ಯಕ್ತಿಗಳು, ಪ್ರತಿನಿಧಿಗಳು ಮತ್ತು ಸಾಹಿತ್ಯಾಸಕ್ತರು ಆಗಮಿಸಿ ಸಂಭ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಾಹಿತ್ಯ ಸಂಭ್ರಮದ ಅಧ್ಯಕ್ಷರಾದ ಡಾ.ಗಿರಡ್ಡಿ ಗೋವಿಂದರಾಜ ಅವರು ಕೋರಿದ್ದಾರೆ.
(ವರದಿ ಕಳಿಸಿದವರು: ಸಮೀರ್ ಜೋಷಿ )





ಧಾರವಾಡದ `ಸಾಹಿತ್ಯ ಸಂಭ್ರಮ’ ಎಂಬ ಕಾರ್ಯಕ್ರಮದ ಬಗ್ಗೆ ಈಗಾಗಲೇ ಈ ವೇದಿಕೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅನೇಕ ಮಂದಿ ಕನ್ನಡಿಗರು ಇಂಥ ಪ್ರತ್ಯೇಕತೆಯ (exclusivity)ವಿರುದ್ಧ ದನಿಯೆತ್ತಿದ್ದಾರೆ. ಇಲ್ಲಿ ಇನ್ನು ಸೇರಿಸುವಂಥದು ಏನೂ ಇಲ್ಲ. ಆದರೂ ಗಿರಡ್ಡಿಯಂಥವರಿಗೆ ಒಂದು ಮಾತು ಹೇಳಬಯಸುತ್ತೇನೆ: ಆಧುನಿಕ ಸಾಹಿತ್ಯವಂದರೇ ಅದು ಸಮಾನತೆ, ಸ್ವಾತಂತ್ರ್ಯ, ಜನಪರತೆ ಮುಂತಾದ ಕೆಲವು ಮೌಲ್ಯಗಳ ಮೇಲೆ ನಿಂತುದು. ನೀವು ಸಾಹಿತ್ಯ್ದದಲ್ಲಿ ಇದನ್ನೆಲ್ಲ ಕೊಂಡಾಡುತ್ತೀರಿ; ಆದರೆ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ! ಬಡವರ ಬಗ್ಗೆ ಕತೆ ಬರೆಯುತ್ತೀರಿ; ಆದರೆ ಅವರಿಗೆ ಪ್ರವೇಶ ನಿರಾಕರಿಸುತ್ತೀರಿ. ದಲಿತರ, ಗ್ರಾಮೀಣರ ಬಗ್ಗೆ ನಾಟಕ ಬರೆಯುತ್ತೀರಿ. ಅಂಥ ನಾಟಕಗಳನ್ನು ಬೆಂಗಳೂರಿನಂಥ ಕೇಂದ್ರಗಳಲ್ಲಿ ದುಬಾರಿ ಪ್ರವೇಶ ಧನ ಇರಿಸಿ ಪ್ರದರ್ಶಿಸುತ್ತೀರಿ. ಅಲ್ಲಿಗೆ ಬರುವ ಮಂದಿ ಯಾರು? ನಿಮ್ಮಂಥವರೇ. ಬಡತನ, ಅನ್ಯಾಯ, ಅಸಮಾನತೆ ಮುಂತಾದುವು ನಿಮಗೆ ಕೇವಲ ಸಾಹಿತ್ಯ `ವಸ್ತು’ಗಳಾಗಿಬಿಟ್ಟಿವೆ! ಅವುಗಳನ್ನು ನಂತರ ಪ್ರದರ್ಶನಕ್ಕೆ ಇಡುತ್ತೀರಿ; ಅಥವಾ ಯುನಿವರ್ಸಿಟಿಗಳಲ್ಲಿ ಪಾಠ ಮಾಡುತ್ತೀರಿ. ಉದ್ಯೋಗವೂ ಆಯಿತು, ಪಾಪಪ್ರಜ್ಞೆಯೂ ತೊಳೆಯಿತು! ದೇವನೂರು ಮಹಾದೇವರ ಕೃತಿಗಳನ್ನೂ ನೀವು ಬಿಟ್ಟಿಲ್ಲ. ಈಗ ಅದೇ ಕೆಲಸವನ್ನು ಜೈಪುರ ಮಾಡೆಲಿನಲ್ಲಿ ಮಾಡಬಯಸುತ್ತೀರಿ. ಜನರನ್ನು ದೂರವಿಟ್ಟು ನಡೆಸುವ ನಿಮ್ಮ `ಸಾಹಿತ್ಯ ಸಂಭ್ರಮ’ ಎಂಥದು? ಇದು ಕ್ಲಬ್ಬುಗಳಲ್ಲಿ ಶ್ರೀಮಂತರು ಹೋಗಿ ಕುಣಿಯುವಂತೆ. ನಿಜವಾದ ಸಾಹಿತ್ಯ ಸಂಭ್ರಮ ಎಲ್ಲರನ್ನೂ ಒಳಗೊಳ್ಳಬೇಕು–ಯಾರು ಬೇಕೋ ಅವರು ಬಂದರೆ ಅಲ್ಲವೇ ಅದೊಂದು ಸಂಭ್ರಮ? ಅದಕ್ಕೇ ನನಗೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನವೇ ಇಷ್ಟವೆನಿಸುವುದು. ಅಲ್ಲಿ ದೊಡ್ಡ ಲೊಳಲೊಟ್ಟೆಗಳು (ಅರ್ಥಾತ್ ಸೈದ್ಧಾಂತಿಕ ಚರ್ಚೆಗಳು) ಸಂಭವಿಸದೆ ಇರಬಹುದು. ಆದರೆ ಜನಸಾಮಾನ್ಯರಿಗೆ ಪ್ರವೇಶವಿರುತ್ತದೆ. ಅವರೂ ಸಂಭ್ರಮದಲ್ಲಿ ಪಾಲುಗೊಳ್ಳುತ್ತಾರೆ. ನೀವು ಯಾರ ಕುರಿತು ಬರೆದು ಕವಿಗಳು, ಕತೆಗಾರರು, ನಾಟಕಗಾರರು ಆಗಿ ಸಾಹಿತಿಯೆಂದೂ ಚಿಂತಕರೆಂದೂ ಪ್ರಸಿದ್ಧಿ ಗಳಿಸಿದ್ದೀರೋ ಅವರೇ ಈ ಜನ. ಆದರ ನಿಮಗೆ ಕಣ್ಣು ಜ್ಞಾನಪೀಠ ಮತ್ತು ನೊಬೇಲ್ ಪ್ರಶಸ್ತಿಗಳ ಮೇಲೆ! ಬಾಯಲ್ಲಿ ದೇಸಿ, ಬಗಲಲ್ಲಿ ವಿದೇಶಿ.
ನಾನು ಕೆಲವು ಕಾಲ ಯೆಮೆನ್ ದೇಶದಲ್ಲಿ ಕಲಿಸುತ್ತಿದ್ದೆ. ಒಮ್ಮೊಮ್ಮೆ ಕ್ಲಾಸು ನಡೆಯುತ್ತಿದ್ದಾಗಲೇ ಕ್ಲಾಸಿನೊಳಕ್ಕೆ ಬಡಬಗ್ಗರು ಧನಸಹಾಯ ಕೋರಿ ಪ್ರವೇಶಿಸುತ್ತಿದ್ದರು. ಅವರನ್ನು ಯಾರೂ ಛೂ ಹೋಗಾಚೆ ಎಂದು ಗದರಿಸಿದ್ದಿಲ್ಲ. ವಿದ್ಯಾರ್ಥಿಗಳು, ಅಧ್ಯಾಪಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಇದು ನನಗೆ ಅಚ್ಚರಿ ಮೂಡಿಸಿದ್ದು ನಿಜ; ಆದರೆ ಜನಪ್ರೀತಿಯೆಂದರೆ ಇದುವೇ ಎಂದೆನಿಸಿತು. ನಮ್ಮ ದೇಶದ ಸಾಹಿತಿಗಳು ಬಾಯಲ್ಲಿ ಹೇಳುತ್ತಾರೆ; ಆದರೆ ಆಚರಣೆಯಲ್ಲಿ ತರುವುದಿಲ್ಲ.
ನೀವೇನೂ ನನ್ನನ್ನು ಈ ಸಂಭ್ರಮಕ್ಕೆ ಕರೆದಿಲ್ಲ. ಆದ್ದರಿಂದ ನನಗೆ ಮಾತಾಡುವ ಹಕ್ಕಿಲ್ಲ ಎಂದು ಹೇಳಬಹುದು. ಆದರೆ ನಾನು ಇಂಥ ಪ್ರತ್ಯೇಕವಾದಿ ಸೆಮಿನಾರುಗಳಿಗೆ ಹೋಗದೆ ವರ್ಷಗಳೇ ಕಳೆದಿವೆ–ಇನ್ನು ಹೋಗುವವನೂ ಅಲ್ಲ. ಕನ್ನಡ, ಕನ್ನಡಿಗರು ಎಂಬ ಭಾವನಾತ್ಮಕ ಸಂಬಂಧದಿಂದ ಮೇಲಿನ ಮಾತುಗಳನ್ನು ಹೇಳಿದ್ದೇನೆ.
ಇಂಥದೇ ಪ್ರತ್ಯೇಕತೆಯನ್ನು ನಾನು ಪುಸ್ತಕ ಪ್ರಕಾಶಕರಲ್ಲೂ ಕಂಡಿದ್ದೇನೆ. ಅಂಥದೊಂದು ಪ್ರಕಾಶನ ಸಂಸ್ಥೆಯೂ ಈ `ಸಂಭ್ರಮ’ದ ಹಿಂದೆ ಇದೆ. ಇನ್ನು ಜ್ಞಾನ ಪೀಠಿಗಳ ಬಗ್ಗೆ ನನ್ನಂಥ ಹುಲು ಮಾನವರು ಮಾತಾಡುವುದು ಒಳ್ಳೆಯದಲ್ಲ. ಇಂಥವರಿರುವ ಕಡೆ ಕಾಲಿರಿಸಲು ನಾನು ಭಯಪಡುತ್ತೇನೆ.
ಕೆ.ವಿ.ತಿರುಮಲೇಶ್
ಈ ಕೆ.ವಿ.ತಿರುಮಲೇಶ್ ಎಂಬ ಜೀವವನ್ನು ನಾನು ಇಷ್ಟ ಪಡುವದೇ ಇಂಥ ನೇರವೂ ಪ್ರಾಮಾಣಿಕವೂ ಆದ ನಿಲುವುಗಳಿಗಾಗಿ.ಕನ್ನಡದ ಕೆಲ ನಿರಂತರ ಗೋಸುಂಬೆಗಳೂ ಇಂಥವರಿಂದ ಬದಲಾದರೆ ಎಷ್ಟು ಚೆನ್ನ..!