ಮಹಂತೇಶ್ ನವಲ್ಕಲ್
ನಾನು ಹಾಗೇ ಕುಳಿತಿದ್ದೆ. ರಾತ್ರಿ ಚಂದಿರ ಬಾನಂಚಿನಿಂದ ನಭೋಮಂಡದ ಸುತ್ತ ಬೆಳಕು ಚೆಲ್ಲಿದ್ದ… ಅಕ್ಕಪಕ್ಕ ಸಣ್ಣ ನದಿಗಳು ಗುಪ್ತಗಾಮನಿ ಕೊಳ್ಳಗಳೆಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಲಿದ್ದವು. ಏಲಕ್ಕಿಯ ಘಮ ಘಮ ಅಡಿಕೆಯ ಒಗರು ನನ್ನನ್ನು ಖಿನ್ನತೆಯ ಗಡಿಯಿಂದ ಪಾರು ಮಾಡಲು ಯತ್ನಿಸಿ ವಿಫಲಗೊಂಡು ಮೌನವಾಗಿದ್ದವು. ಕೊಟ್ಟಾಯಂ ನಗರವೇ ತುಂಬು ಹೊದ್ದುಕೊಂಡು ಮಲಗಿದ್ದರೆ ಅದರ ನೆಲದ ಹಾಸಿಗೆಯ ಮೇಲೆ ನನ್ನ ಓಡಾಟ ನಡೆದಿತ್ತು. ನನ್ನ ಕಣ್ಣುಗಳೆಲ್ಲ ಕೆಂಪಾಗಿ ಕೆಂಡದುಂಡೆಗಳಾಗಿದ್ದವು. ನನ್ನ ಜೀವನದಲ್ಲಿ ದುಃಖ ಪರಾಕಾಷ್ಠೆ ಅನುಭವಿಸಿದ್ದು ನಾನು ಅಂದೇ ಮೊದಲ ಸಲ, ನನ್ನ ಪ್ರೀತಿಯ ಸಂಧ್ಯಾ ನದಿಯಲ್ಲಿ ಕುಳಿತು ಕಾಲುಗಳ ಅಂಚುಗಳಿಂದ ನೀರನ್ನು ಚಿಮ್ಮಿ ಚಿಮ್ಮಿ ಒದ್ದದ್ದು ನಾನು ಅಂದೇ, ಈ ನದಿಯ ದಡದಲ್ಲಿ ಸಾವಿರಾರು ಜನರು ಪ್ರಾತಃಕ್ರಿಯೆಗಳಿಗಾಗಿ ಸೇರುತ್ತಾರೆ. ಘನೀಕೃತ ಸ್ಪಟಿಕದ ಪಾರದರ್ಶಕದಂತೆ ಹೊಳೆಯುವ ಸಂಧ್ಯಾನದಿ ಎಷ್ಟೋಸಲ ನನ್ನ ಕಷ್ಟ ಸುಖ ದುಃಖ ಹಂಚಿಕೊಂಡಿದೆಯಾದರೂ ಈ ದಿನ ತನ್ನ ವಿಚಿತ್ರ ವಿಕಟ ಅಟ್ಟಹಾಸದಿಂದ ನನ್ನನ್ನು ಹೀಯಾಳಿಸಿತ್ತು. ಮಧ್ಯಹ್ನ ನಾಯರ್ ಅವರ ತೆಂಗುತೋಟದತ್ತ ಗುಳೆಕಿತ್ತೆ .ಬಯಲು ಸೀಮೆಯ ಬಿಸಿಲು ಬಿಳಿ ಮೋಡಗಳಿಂದ ಬಂದ ನನಗೆ ನಾಯರ್ ಅವರ ತೋಟ ನನ್ನ ಬೆಳೆಸಿ ಹರಿಸಿ ನನ್ನ ಎದೆಯಲ್ಲಿ ಭಾವಗಳ ಅಚ್ಚೊತ್ತಿಸಿತ್ತು. ಭವ್ಯವಾದ ಎರಡಣದಿನ್ನೆಗಳಿಂದ ಆವರಿಸಿದ ಗುಡ್ಡಪ್ರದೇಶ ಹತ್ತುತ್ತ ಹತ್ತುತ್ತ ನಾಯರ್ ಅವರ ಮನೆಯನ್ನು ತಲುಪಿದ್ದೆ.
‘ಆಂಟಿ ಅಂಕಲ್ ಮನೆಯಲ್ಲಿ ಇಲ್ವಾ?’
‘ಬರುತ್ತಾರೆ ಬಾ ಗಿರಿ’ ಎನ್ನುವ ಕೃಷ್ಣಾ ಆಂಟಿಯ ಒತ್ತಾಯ ನನ್ನನ್ನು ಕೂಡುವಂತೆ ಮಾಡಿತ್ತು. ಕೊಬ್ಬರಿ ಅಂಟಿನ ಉಂಡೆಗಳನ್ನು ತಿನ್ನುತ್ತಿದ್ದಾಗಲೇ ನಾಯರ್ ಅಂಕಲ್ ಒಳಗೆ ಬಂದದ್ದು.
‘ಓಹೋ ಗಿರಿ ಈಗ ಬಂದೆಯ?’ ಹೇಗಿದ್ದಾನೆ ಮುಟ್ಟಾಳ ಇಬ್ಬಿ?’
‘ಅಬ್ಬಾಜಾನ್ ಆರಾಮವಾಗಿದ್ದಾರೆ ಅಂಕಲ್’ ಎನ್ನುವ ನನ್ನ ಮಾತು ಅಬ್ಬಾಜಾನ್ ಎನ್ನುವ ನನ್ನ ಹೃದಯಾಂತರಾಳದಲಲಿ ಹುಟ್ಟಿದ ಶಬ್ದಗಳು ನನ್ನನ್ನು ಮತ್ತೆ ಈಟಿಯಿಂದ ಇರಿಯುತ್ತಿದ್ದವು.
‘ಅವನಿಗೆ ಮುಂಜಾನೆಯಿಂದ ಸಂಜೆವರೆಗೂ ಕೋಳಿಕಾಲು ಚೀಪುವುದರಲ್ಲೇ ಆಸಕ್ತಿ, ಅವನಿಗೆ ಹೇಳು ಪ್ರತಿಶತ ತೊಂಬತ್ತು ರೋಗಗಳು ಮಾಂಸಾಹಾರದಿಂದ ಬರುತ್ತವೆ’ ಎಂದು ನಾಯರ್ ಅಂಕಲ್ ಆಬ್ಬಾಜಾನ್ ಮಧ್ಯೆ ನಡೆಯುವ ಹುಸಿ ಜಗಳದ ಸ್ಯಾಂಪಲ್ ಮಾತ್ರ ಇದು ಎಂದುಕೊಂಡು
‘ಅಂಕಲ್ ನಾನು ಬಂದಿದ್ದು’ ಅಂದ ಕೂಡಲೇ
‘ದುಡ್ಡಿನ ಪ್ರಾಬ್ಲಂ ಇದೇಯಾ?’
ನಿಮ್ಮನೇತಕ್ಕೆ ದುಡ್ಡು ಕೇಳ್ಲಿ, ಅಬ್ಬಾಜಾನ್ ಇಲ್ಲವಾ ಕೊಡಲಿಕ್ಕೆ, ನಾನು ನನ್ನ ಊರಿಗೆ ಹೋಗುತ್ತೇನೆ’
‘ಎಂದು ಬರುತ್ತೀಯ ಮತ್ತೆ?’
‘ಇಲ್ಲ ಅಂಕಲ್ ಡಿಪ್ಲೋಮಾ ಡಿಸ್ಕಂಟಿನ್ಯೂ ಮಾಡ್ತಾ ಇದ್ದೀನಿ. ನನ್ನ ಮಾತಿನಿಂದ ಕಂಗಾಲಾದಂತೆ ಕಂಡ ಅಂಕಲ್ ‘ಇನ್ನೂ ನೀನು ಡಿಪ್ಲೋಮಾ ಎರಡನೇ ವರ್ಷದಲ್ಲಿ ಓದುತ್ತೀಯ ಏಕೆ ಹೋಗುವಿ’ ಎಂದಿದ್ದರು.
ಅಬ್ಬಾಜಾನ್ನ ದೆಸೆಯಿಂದಲೋ ಸಜೀದಾಳ ಕಾರಣದಿಂದಲೋ, ಸಂದ್ಯಾನದಿಯ ವಿಕೃತ ಕಲರವದಿಂದಲೋ ಏನೋ ಹೇಳಿದ್ದೇ?
‘ಇಲ್ಲ ಅಂಕಲ್ ಹೆಲ್ತ ಪ್ರಾಬ್ಲಂ’
‘ಇಲ್ಲೇ ಡಾ.ಕಲವಿಕರಣನತ್ರ ತೋರಿಸಿದರಾಯಿತು’ ಎನ್ನುವ ಅಂಕಲ್ನ ಪ್ರೀತಿಗೆ ನಾನು ಬಂಧಿತವಾಗುತ್ತಿದ್ದೇನೆಯೋ? ಇಲ್ಲ ನನ್ನ ತೀರ್ಮಾನ ಗಟ್ಟಿ ಈ ದಿನ ದಿನಾಂಕ 20, 26ನೇ ತಾರೀಖು ನಾನು ಇಲ್ಲಿರುವುದಿಲ್ಲ. ನನ್ನ ಲಗೇಜು ಇರುವುದಿಲ್ಲ. ಎಂದು ಯೋಚಿಸುತ್ತಿರುವಾಗಲೇ ನಾಳೆ ಬಂದು ಇಬ್ಬಿಯ ಜೊತೆ ಮಾತಾಡುತ್ತೇನೆ ಎನ್ನುವ ನಾಯರ್ ಅಂಕಲ್ರ ವಂದನಾರ್ಪಣೆ ಮಾತು ನನ್ನನ್ನು ಅಲ್ಲಿಂದ ಕದಲಿಸಿದ್ದವು. ಆಗಲೇ ನಾನು ಕುಮಾರಗಂನ ತುಂಬು ಸರೋವರದ ದಂಡೆಗೆ ಹೋದೆ. ದಟ್ಟವಾದ ಫರ್ನ ಟ್ರೀಗಳ ನೀಲಗಿರಿ ಮರಗಳ ಮಧ್ಯೆ ಕುಳಿತೆ ಅಲ್ಲದೆ ಸರೋವರದ ನೀರು ಕುಡಿದೆ. ಚಂದಿರನ ಬೆಲ್ದಿಂಗಳ ಮಧ್ಯೆ ನೋವಿನ ಹಾಸಿಗೆ ಹಾಸಿ ಮಲಗಿದೆ. ಸಮಾಧಾನವೇ ಇಲ್ಲ.
ಅಬ್ಬಾಜಾನ್ ನಾನು ನಿಮಗೆ ದ್ರೋಹ ಬಗೆದನೇ?
ನಿಮ್ಮ ಮನೆಯ ಜಂತಿ ಎಣಿಸಿದನೆ?
ಉಂಡ ನೀರನ್ನು ಅಲ್ಲೇ ಉಗುಳಿದನೇ?
ಒಂದು ಕ್ಷಣ ಋಣಾತ್ಮಕವಾಗಿ ಇನ್ನೊಂದು ಮಗ್ಗುಲಲ್ಲಿ ಧನಾತ್ಮಕವಾಗಿ ಯೋಚನೆ ಮಾಡಿದೆ. ಮನಸ್ಸು ಒಂದೇ ಒಂದು ಕ್ಷಣದಲ್ಲಿ ನನ್ನ ಪರವಾಗಿ ವಾದಿಸಹತ್ತಿದರೆ ಇನ್ನೊಂದು ಕ್ಷಣದಲ್ಲಿ ನಾನು ಮಾಡಿರಬಹುದಾದ ತಪ್ಪಿನ ಬಗ್ಗೆ ಧ್ಯಾನಿಸಹತ್ತಿತ್ತು. ನಾನು ತಪ್ಪು ಮಾಡಿಲ್ಲ. ಅಬ್ಬಾಜಾನ್ ತಪ್ಪು ಮಾಡಿಲ್ಲ. ನೀವು ನನ್ನ ತಂದೆಯಂತೆ ಸಲುಹಿದಿರಿ. ಅರುಹಿದಿರಿ. ನನಗೆ ಮಾರ್ಗದರ್ಶಕರಾದಿರಿ. ಕೇರಳದಂತಹ ವಿಚಿತ್ರ ಪ್ರದೇಶದಲ್ಲಿ ಮೂಕನಾಗಿದ್ದ ನನಗೆ ಮಾತು ಕಲಿಸಿದಿರಿ. ಮನೆಯ ಮೇಲೆ ರೂಮು ಕೊಟ್ಟು ಎರಡು ವರ್ಷ ಕಾಲ ಊಟ ಹಾಕಿದಿರಿ. ಹಾಗಾದರೆ ನಾನು ಎಲ್ಲಿ ತಪ್ಪಿದೆ? ತಪ್ಪುವುದು ದುಷ್ಟತನದ ಪರಮಾವಧಿ ಒಂದೇ ಕ್ಷಣದಲ್ಲಿ ನಾಲ್ಕು ಪ್ರೀತಿ ಮಾಡಿ ಐವತ್ತು ವರ್ಷಗಳ ನಂತರ ಸಿಕ್ಕರೂ ಸಹ ಕೃತಜ್ಷತೆಯ ಬಂಧನದಲ್ಲಿ ಸಿಲುಕಿ ಯಾವಾಗಲೂ ಋಣಿಯಾಗುವ ನಾನು ಪ್ರೀತಿಯ ನದಿಯಲ್ಲಿ ರಕ್ಷಣೆಯ ಮಡಿಲಲ್ಲಿ ರಕ್ಷಿಸಿದ. ನಿಮಗೆ ದ್ರೋಹ ಬಗೆಯುತ್ತೇನೆಯೇ? ನನಗೆ ನನ್ನ ಉತ್ತರ ಸಿಗುವ ಕಾಲ ಕಳದೇಹೋಯಿತು.
ಏಕೆಂದರೆ ಉತ್ತರವಿಲ್ಲದ ಅಸ್ಪಷ್ಟ ಅಪನಂಬಿಕೆಯ ಮನಸ್ಸು ಅಬ್ಬಾಜಾನ್ದು. ಎರಡು ವರ್ಷಗಳ ಕಾಲ ನಾನು ನಾನೇ ಆಗಿ ಈ ಮನೆಯ ಸದಸ್ಯನಾಗಿ ಅಬ್ಬಾಜಾನ್ನ ಮಾನಸಪುತ್ರನಾಗಿ ಬದುಕಿದ್ದು ಶೂನ್ಯವೇ? ಹೌದು ಶೂನ್ಯ ಅವರು ವಿಚಾರ ಮಾಡಬಹುದಿತ್ತು. ಮಾಡಲಿಲ್ಲ. ದುಡುಕಿದರು. ಯಾರೊಬ್ಬ ಇವರ ಸಂಬಂಧಿಕರು ಈ ಹುಡುಗನಾರು? ನಿಮ್ಮ ಮನೆಯಲ್ಲೇನು ಕೆಲಸ. ಇಬ್ರಾಹಿಂ ನಿಮ್ಮ ಮೂರ್ಖತನಕ್ಕೆ ನಾನು ಏನು ಹೇಳಲಿ ಎಂದು ಕೆಣಕಿದಾಗ ಅವರ ಜನ್ಮವನ್ನೇ ಜಾಲಾಡಿ ಹೊರಗೆ ದಬ್ಬಿದ ಅಬ್ಬಾಜಾನ್ ಇಂದು ಅಗಸರವನ ಮಾತಿಗೆ ಮರುಳಾದ ರಾಮನಂತೆ ಸಂಶಯಿಸುವುದೇ?
ಅಮ್ಮು ಆಸೀಫ್ ಎಲ್ಲರೂ ನೆನಪಾದರು. ಅಮ್ಮು ದೇವತೆಯ ತರಹ. ಅವಳು ಅಬ್ಬಾನಿಗೆ ಒಂದು ಮಾತು ಹೇಳಬಹುದಿತ್ತೇನೋ ಹೇಳಬಹುದಿತ್ತು. ಆದರೆ ಅಬ್ಬಾಜಾನ್ನ ಮುಂದೆ ಮಾತಾಡುವವರಾರು? ಅವರದೇ ಅಂತಿಮ. ನಾನು ಲೇಟಾಗಿ ಮನೆಗೆ ಬಂದರೂ ನನಗೆ ಊಟ ತಗೆದಿಟ್ಟು ಮಲಗುವ ಅಮ್ಮು, ಆಸೀಫಗಿಂತಲೂ ಸಜ್ಜುಗಿಂತಲೂ ನನ್ನನ್ನು ಪ್ರೀತಿಸಿದರು. ಮಾಂಸಾಹಾರ ನಾನು ತಿನ್ನುವುದಿಲ್ಲ. ಎಂದು ಗೊತ್ತಾದ ಕೂಡಲೇ ನನಗಾಗಿಯೇ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ತರತರದ ಭಕ್ಷಗಳನ್ನು ತಯಾರಿಸಿ ಹಾಗೆಯೇ ಇಟ್ಟು ದಿನಾಲು ತಿನ್ನಲಿಕ್ಕೆ ಕೊಡುವ ಅಮ್ಮುಗೆ ನಾನು ಏನು ಅನ್ನಲಾರೆ ಇರುವುದೆಲ್ಲಾ ಅಬ್ಬಾಜಾನ್ದೇ ತಪ್ಪು ಅಬ್ಬಾಜಾನ್ ವಿಚಾರ ಮಾಡಿ ಮಾತಾಡಬಹುದಿತ್ತು. ನನ್ನ ಗಿರಿ ಎಂದು ಸಂಬೋಧಿಸುತ್ತಾ ಪ್ರೀತಿಯಿಂದ ಸಲುಗೆಯಿಂದ ಮಗ ಎಂದು ಬೆನ್ನು ತಟ್ಟುತ್ತಿದ್ದ ತನ್ನ ಆಂತರ್ಯದ ಮಮತೆಯನ್ನು ನನಗೆ ಧಾರೆ ಎರೆದ ಅಬ್ಬಾಜಾನ್ಗೆ ನಾನು ಇಂದು ದ್ರೋಹಿ ಆದೆ. ನೀನು ನಂಬಿಕೆಗೆ ಅನರ್ಹ ಹುಡುಗ ಎಂದೆನಿಸಿಕೊಂಡೆ. ಮುಖ ತೋರಿಸಬೇಡ. ನಾಳೆ ನೀನಿಲ್ಲಿರಕೂಡದು ಎಂದು ಬೈಸಿಕೊಂಡೆ. ಎರಡು ವರ್ಷದಲ್ಲಿ ನಿರಂತರವಾಗಿ ಹರಿದ ಪ್ರೀತಿಗೆ ಆಣೆಕಟ್ಟು ಕಟ್ಟಿದ ಹಾಗ ಅಬ್ಬಾಜಾನ್ನನ ಮನವನ್ನು ಮರಭೂಮಿಯಾಗಿಸಿದ್ದರು.
ಈಗ ಇದೇ ಅಬ್ಬಾಜಾನ್ ಹೀಗೇಕೆ ಮತಾಡಿದರು. ಇದೆಲ್ಲದಕ್ಕೂ ಸಜೀದಾಳೇ ಕಾರಣ. ಸಜೀದಾ ತಾಂತ್ರಿಕ ಕಾರಣಗಳಿಂದ ಮಾತ್ರ ಇದಕ್ಕೆ ಹೊಣೆ ಇರಬಹುದು. ಉಳಿದದ್ದು ಅವಳದೇನು ತಪ್ಪು?
ನಾನು ಇದೇ ಗಾಂಧೀ ಯೂನಿವರ್ಸಿಟಿಯಲ್ಲಿ ನಾಟಕಶಾಸ್ತ್ರ ಅಭ್ಯಾಸ ಮಾಡಲು ಬಂದ ಆರಂಭವಿರಬಹುದು. ಕ್ಯಾಂಟಿನ್ನಲ್ಲಿ ನನ್ನದಲ್ಲದ ಯಾವುದೋ ಹೊಸ ಪ್ರಪಂಚದಲ್ಲಿ ಕುಳಿತು ಚಹಾ ಕುಡಿಯುತ್ತಾ ಆಫ್ರಿಕಾದಿಂದ ಬಂದ ವಿಲಕ್ಷಣ ಜಡೆಗಳನ್ನು ಹಾಕಿಕೊಂಡು ಓಡಾಡುತ್ತಾ ಅತ್ತ ಇತ್ತ ತಿರುಗುತ್ತಿದ್ದ ಹುಡುಗಿಯರನ್ನು ನೋಡಿ ಮಲಯಾಳಂನ ವಿಚಿತ್ರ ಉಚ್ಛಾರಣೆ ಕೆಳಿ ದಂಗಾಗಿದ್ದೆ. ನಾನು ಜೀವನದಲ್ಲಿ ಈ ಭಾಷೆಯನ್ನು ಕಲಿಯಬಹುದೇ? ಎಂದು ಚಿಂತಿಸಿ ನಿಜವಾಗಿಯೂ ಅಳು ಬಂದಿತ್ತು. ನಾನು ಕಣ್ಣಲ್ಲಿ ನೀರು ತೆಗೆದುಕೊಂಡು ಕುಳಿತಾಗಲೇ ಈ ಸಜೀದಾ ತನ್ನ ಗೆಳತಿಯರೊಂದಿಗೆ ಬಂದು ನೀರೊರೆಸಿ
‘ಆಪ್ ಕೌನ್ ಹೈ ಕ್ಯೂ ರೋತಾ?’ ಎಂದು ಅಸ್ಪಷ್ಟವಾದ ಹಿಂದಿಯಲ್ಲಿ ಮಾತಾಡಿದ್ದು ನನಗಿನ್ನು ನೆನಪಿದೆ. ನಾನಿನ್ನೂ ಅಳಹತ್ತಿದೆ. ಅಳುತ್ತ ಅಳುತ್ತ ಏನು ಹೇಳದಾದೆ. ಎಂದು ತಮ್ಮ ಜೊತೆಗೆ ಕುಳ್ಳಿರಿಸಿಕೊಂಡು ಚಹಾ ಕುಡಿಯುತ್ತಾ ಎಲ್ಲಾ ಕೇಳಿದ್ದಳು. ಹೆಚ್ಚಿ ಕಡಿಮೆ ನನ್ನ ವಯಸ್ಸಿನವಳಾದ ಸಜೀದಾ ಅಂದೇ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಳು. ಸಜೀದಾಳ ಜೊತೆ ನನ್ನನ್ನು ನೊಡಿದ ಅಬ್ಬಾ ಅಮ್ಮು ಆಸೀಫ್ ಇವನಾರೆಂದು ಕೇಳಿದೊಡನೆಯೇ ನನಗರ್ಥವಾಗದ ಯಾವದೋ ಭಾಷೆಯಲ್ಲಿ ಹತ್ತು ನಿಮಿಷಗಳವರೆಗೂ ಅವರ ಮುಂದೆ ಏನೋ ಮಾತಾಡಿದ ಮೇಲೆ ಎಲ್ಲರೂ ಹಲ್ಲಿ ಲೋಚಗುಟ್ಟುವಂತೆ ಗುಟ್ಟಿ ಏನೋ ತೀಮರ್ಾನಿಸಿ. ನನಗೆ ಮೇಲೆ ರೂಮು ತೋರಿಸಿದ್ದರು. ಅಂದೇ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು. ಮೇಲಿನ ರೂಮಿನಲ್ಲಿ ನನ್ನ ವಾಸವಾದರೂ ನಾನು ಅಲ್ಲಿಗೆ ಹೋಗುತ್ತಿದ್ದುದು ಮಲಗಲು ಮಾತ್ರ ಸಜೀದಾ ತನ್ನ ತಂದೆಗೆ ಅಬ್ಬಾಜಾನ್ ಎಂದು ಕರೆಯುತ್ತಿದ್ದರಿಂದ ನಾನು ಅಬ್ಬಾಜಾನ್ ಆದೆ. ಆಸೀಫ್ ಗಿರಿ ಎಂದು ಕರೆಯಲೇ ಇಲ್ಲ. ಅವನಿಗೆ ನಾನು ಅಣ್ಣನಾದೆ. ಒಟ್ಟಾರೆ ಕೊಟ್ಟಾಯಂನ ಒಂದು ಸಂಪ್ರದಾಯಸ್ಥ ಮುಸ್ಲಿಂ ಮನೆತನದಲ್ಲಿ ಜಾಗ ಪಡೆದು ಆ ಮನೆಯ ಸದಸ್ಯನಾದೆ. ಸಜ್ಜುಳನ್ನು ಮುಂಜಾನೆ ನನ್ನ ಗಾಡಿಯ ಮೇಲೆ ಕೋಡ್ರಿಸಿಕೊಂಡು ಮತ್ತೆ ಮನೆಗೆ ಬರುತ್ತಿದ್ದುದು ಸಂಜೆ ಐದಕ್ಕೆ. ನನ್ನ ರಂಗಾಯಣದ ತರಗತಿಗಳು ಅವಳ ಕೆಮಿಸ್ಟ್ರಿ ಕ್ಲಾಸುಗಳು ಒಂದೊಂದು ಸಲ ಹೊಂದಿಕೆಯಾಗದಿದ್ದರೂ ನಾನು ಅವಳಿಗಾಗಿ ಅವಳು ನನಗಾಗಿ ಕಾಯುತ್ತಿದ್ದುದು ಸಾಮಾನ್ಯವೇ ಆಗಿತ್ತು.
ಸಜೀದಾ ನನ್ನ ಬಿಟ್ಟು ಒಂದು ಕ್ಷಣ ನಾನು ಅವಳ ಬಿಟ್ಟು ಅರೆಕ್ಷಣ ಇರದಾದೆವು. ಕ್ಷಣ ಕ್ಷಣಕ್ಕೂ ಕಮ್ಯೂನಿಷ್ಟ ಐಡಿಯಾಲಜಿಗಳ ಬಗ್ಗೆ ಲಕ್ಚರ್ ಕೊಡುತ್ತಿದ್ದ ಸಜೀದಾಳ ಬೋರಿಂಗ್ ನುಡಿಗಳಿಗೆ ನಾನೆಂದೂ ನಿರಾಸೆಯ ಎರಕ ಹೋಯ್ದಿದ್ದಿಲ. ಎರಡು ವರ್ಷ ಅವಧಿಯ ಕೊನೆಗೆ ನೂಲು ಹುಣ್ಣಿಮೆಯ ದಿನ ನನ್ನ ಕೈಗೆ ರಾಖಿ ಕಟ್ಟಿ ಅಬ್ಬಾಜಾನ್ ಅಮ್ಮುವನ್ನು ಕರೆದು ಸ್ವೀಟ್ ತಿನ್ನಿಸಿ ಹಬ್ಬ ಆಚರಿಸಿ ಅಬ್ಬಾ ಇವನಿಗೆ ಜಗದ ಚಿಂತೆಯೇ ಇಲ್ಲ ಬರೀ ಪಾರಮಾರ್ಥ ಚಿಂತಿಸುವವನು ನನ್ನನೇನು ರಕ್ಷಿಸುತ್ತಾನೆ? ಎಂದಾಗ ಎಲ್ಲರೂ ನಕ್ಕಿದ್ದರು. ನಾನು ಅಂದೆ ಮತ್ತೆ ಮೌನವಾಗಿ ಖಿನ್ನನಾಗಿದ್ದೆ. ಸಜ್ಜುಳನ್ನು ರೂಮಿನಲ್ಲಿ ಕೂಡ್ರಿಸಿಕೊಂಡು ಮೌನವಾಗೇ ಹೇಳಿದ್ದೆ. ನನಗೆ ಪಾರಮಾರ್ಥ ಚಿಂತೆ ಇರಬಹುದು. ಜಗದ ದ್ವಂದ್ವದಿಂದ ದೂರವಿರಬಹುದು. ಆದರೆ ಇದೆಲ್ಲದರ ಹೊರಗೆ ನನ್ನ ಸಜೀದಾ ಇರುತ್ತಾಳೆ. ಜ್ಞಾಪಕದಲ್ಲಿಟ್ಟುಕೋ. ನಿನಗೆ ಜಾನ್ ಅಸಬ್ಯವಾಗಿ ವರ್ತನೆ ಮಾಡಿದಕ್ಕಾಗಿಯೆ ಅಲ್ಲವೆ ನನ್ನ ಬಾಯಲ್ಲಿ ರಕ್ತ ಬರುವ ಹಾಗೆ ಜಗಳ ಕಾಯ್ದಿದ್ದು.
ರಘು ನನ್ನ ಗೆಳೆಯನಾದರೂ ಅವನ ಜೊತೆ ನಾನಿನ್ನು ಮಾತಾಡುವುದಿಲ್ಲ. ಅದು ಇನ್ನೂ ತಿಳಿದೇ ಇದೆ. ಇದೆಲ್ಲವೂ ನಿನ್ನ ರಕ್ಷಣೆಗಾಗಿಯೇ . ಸಜ್ಜು ಒಂದು ಚೆನ್ನಾಗಿ ತಿಳಿದುಕೋ ಅಮ್ಮ ನನಗೆ ಊಟ ಹಾಕುತ್ತಾಳೆ. ಅಬ್ಬ ನನ್ನನ್ನು ಆಸೀಫಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಮ್ಮನ ಊಟ ತಿಂದ ನಾನು ನಿನಗೆ ರಕ್ಷಣೆ ಕೊಡದಿದ್ದರೆ…. ನಾನು ಹೇಳಲು ಹೋಗಿ ಕಣ್ಣಲ್ಲಿ ನೀರು ತರಿಸಿಕೊಂಡಾಗಲೇ ಏ ಭಾವುಕ ಕವಿಮಹಾಶಯ. ನಾನು ಸುಮ್ಮನೆ ತಮಾಶೆಗೆ ಅಂದರೆ ನೀನು ಹೀಗೆ ಅಳುವುದೇ? ಛೆ ಎಂದು ನನ್ನನ್ನು ರಮಿಸಿದ್ದಳು. ಅಂದು ರಾತ್ರಿ ಮಲಗಿದಲ್ಲೆ ಸಜೀದಾ ನನ್ನ ಮನೆಯಲ್ಲಿ ಹುಟ್ಟಬೇಕಾಗಿತ್ತು. ನನ್ನ ಅಕ್ಕಳೋ ತಂಗಿಯೋ ಆಗಬೆಕಾಗಿತ್ತು ಎಂದು ಒಂದು ಮನ ಯೋಚಿಸುತ್ತಿದ್ದಾಗಲೇ ಇನ್ನೊಂದು ಮನ ಛೆ ಒಂದು ವೇಳೆ ಸಜೀದಾ ನನ್ನ ತಂಗಿಯಾದರೆ ನನ್ನ ಮನೆಯಲ್ಲಿ ಹುಟ್ಟಿದ್ದರೆ ಅಮ್ಮು , ಅಬ್ಬಾಜಾನ್ ಆಸೀಫ್ ನನಗೆ ಸಿಗುತ್ತಿರಲಿಲ್ಲ ಎಂದು ನೆನಸಿಕೊಂಡೆ. ಅಂತಹ ಹುಡುಗಿ ನನ್ನ ಈ ಘಟನೆಗೆ ಕಾರಣಳಾಗುತ್ತಾಳೆಯೇ?
ಎಂದು ನನ್ನ ಮನದ ಕುದುರೆ ಹುಚ್ಚಾಪಟ್ಟೆ ಓಡುತ್ತಿರುವಾಗಲೇ ಫರ್ನ ಗಿಡದಲ್ಲಿ ಅಡಗಿ ಕುಳಿತಿರುವ ಕಾಡುಪಾಪಗಳು ಕಿಚಿಪಿಚಿ ಎಂದು ಶಬ್ದ ಮಾಡಹತ್ತಿ ನನ್ನನ್ನು ಅಲ್ಲಿಂದ ಓಟ ಕಿತ್ತಿಸಿದವು. ನಾನಿಂದು ಊಟ ಮಾಡಿಲ್ಲ. ನನಗೆ ಗೊತ್ತು. ಅಮ್ಮು ಸಜ್ಜು ಆಸೀಫ್ ಯಾರೂ ಊಟ ಮಾಡಿಲ್ಲ. ಅಬ್ಬಾಜಾನ್ ಮಾತ್ರ ಊಟ ಮಾಡಿ ಮಲಗಿರಬಹದು.ಸಮಯ ನೋಡಿಕೊಂಡೆ. ರಾತ್ರಿ ಹನ್ನೊಂದು ಘಂಟೆ. ಆ ನಿಶಬ್ದದಲ್ಲೆ ನನ್ನ ಹೆಜ್ಜೆಗಳ ಶಬ್ದ ಮಾತ್ರ ಕೇಳುತ್ತಲಿದ್ದವು. ನಾನು ಈ ಐದು ದಿನ ಇಬ್ರಾಹಿಂ ಕುಟ್ಟಿಯವರ ಮನೆಯಲ್ಲಿ ಬಿಟ್ಟು ಹೊರಗೆ ಇರಬೇಕು. ಎರಡು ವರ್ಷದಲ್ಲಿ ನನ್ನ ಜೊತೆ ಬೆಳೆದ ಹಳೆಯ ಕೊಟ್ಟಾಯಂ ಸಂಬಂಧಗಳನ್ನು ಶಿರಶ್ಚೆದಿಸಬೆಕು. ಈ ಹೊಸ ನರಕಸದೃಶ್ಯ ಐದು ದಿನಕ್ಕಾಗಿ ನಾನು ಸೂರ್ಯೋದಯವನ್ನು ನೋಡುತ್ತಿರಬೇಕು ಎಂದು ಏನೇನೋ ಯೋಚನೆಗಳನ್ನು ಮಾಡುತ್ತಿರುವಾಗಲೇ ಇಬ್ರಾಹಿಂ ಕುಟ್ಟಿ ಎಕ್ಸಿಕ್ಯೂಟಿವ ಇಂಜಿನಿಯರ್ ಎನ್ನುವ ಬೋರ್ಡ್ ಮುಂದೆ ಬಂದು ನಿಂತಿದ್ದೆ. ಬೆಲ್ ಬಾರಿಸಲೆ? ಕದ ತಟ್ಟಲೆ? ಅಮ್ಮ ಎಂದು ಕೂಗಲೇ? ಮೌನವಾಗೇ ಹಿಂದಿರುಗಿ ಮನೆಯ ಎದುರುಗಡೆಯ ಗೋಡಂಬಿಯ ಮರದ ಕೆಳಗೆ ಅಂಗಾತ ಮಲಗಿದ್ದೆ, ನಾನು ಮಲಗಿದ ಸ್ವಲ್ಪ ಕ್ಷಣದಲ್ಲಿಯೇ ಬಾಗಿಲು ತೆಗೆದುಕೊಂಡು ಬೆಳಕಿನ ಕಿರಣಗಳು ನನ್ನ ಮೇಲೆ ಬಿದ್ದಿದ್ದವು.
ಅದರ ಹಿಂದೆಯೇ ಅಮ್ಮುವಿನ ಆಕೃತಿ ಪ್ರತ್ಯಕ್ಷವಾಗಿ ಕ್ರಮವಾಗಿ ಆಸೀಫ್ ಸಜ್ಜು ಗಾಬರಿಗೊಂಡಿದ್ದಳು. ಆಸೀಫ್ ಮೌನಿಯಾಗಿದ್ದ ನನ್ನನ್ನು ಒಳಗೆ ಕರೆದಿದ್ದರೂ ನಾನು ಹಾಗೇ ನಿಂತುಕೊಂಡಿದ್ದೆ. ಅಪರಿಚಿತನಂತೆ. ಅಮ್ಮು ಹೇಳುತ್ತಿದ್ದರು ಇವರು ಯಾರ ಮಾತು ಕೇಳುವವರಲ್ಲ. ಗಿರಿಯ ಬಗ್ಗೆ ಸಾವಿರ ಜನ ಅಂದುಕೊಂಡರೂ ಅವನನ್ನು ಎಂದೂ ಅನಮಾನಿಸಿದವರಲ್ಲ. ಹೀಗೇಕೆ ಈ ದಿನ ಮಾತನಡಿದರು? ಅಲ್ಲಾಹುವಿನೇ ಹೇಳಬೇಕು ನೀನು ಮನೆಯ ಒಳಗಡೆ ಬರದಿದ್ದರೆ ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಅಮ್ಮು ಹಠ ಮಾಡಿದರೆ ಸಜ್ಜು ನನ್ನನ್ನು ಇದೇ ಸಂದರ್ಭದಲ್ಲಿ ಬಾಯಿಗೆ ಬಂದ ಹಾಗೆ ಬಯ್ಯಹತ್ತಿದಳು. ನೀನು ಹೇಡಿ ಕಣೋ… ನಡೆದಿದ್ದಾರೂ ಏನು ಎಂದು ಎದುರಿಗೆ ನಿಂತು ಅಬ್ಬಾಜಾನ್ನ ಕೆಳಿದ್ದಿಯಾ? ಒಂದು ಸಲವಾದರೂ ಜಗಳವಾಡಿದ್ದಿಯಾ? ಅವರು ಹಾಗೆಂದ ತಕ್ಷಣ ಚೇ ನೀನು ಹೊರಟಿದ್ದು ಎಲ್ಲಿಗೆ… ನನಗೆ ಗೊತ್ತು ಅದೇ ಹಳ್ಳ ಕೊಳ್ಳ ಬೆಟ್ಟ ಗುಡ್ಡಗಳು.. ನಿನಗೇನು ಬುದ್ಧಿಯೇ ಇಲ್ಲ. ನೀನು ನಮ್ಮ ಮನೆಯವನಂತೆಯೇ ನಾನು ಜಗಳವಾಡಿದಂತೆಯೇ ಅಬ್ಬಾಜಾನ್ನ ಜೊತೆ ಜಗಳವಾಡಬೇಕು. ನಾನು ಅವರನ್ನು ಕಾಡಿದಂತೆಯೇ ನೀನೂ ಕಾಡಬೇಕು ಎಂದಾಗ ನನಗೆ ಅಬ್ಬಾಜಾನ್ ಹೇಳಿದ ದ್ರೋಹಿ ಎನ್ನುವ ಶಬ್ದಗಳು ಗುಂಗು ಬಿಟ್ಟು ಸಜ್ಜು ಹೇಳಿದ ಯಾವ ವಾಕ್ಯಗಳೂ ಕಿವಿಗೆ ಬೀಳಲಿಲ್ಲ. ಅಮ್ಮು ಅಲ್ಲೆ ಹೊರಗೆ ಕುಳಿತಿದ್ದರು. ಸಜ್ಜು ಮುಖ ಗಂಟಿಕ್ಕಿ ನಿಂತೇ ಇದ್ದಳು.
ಆಸೀಫ್ ಅಣ್ಣ ಪ್ಲೀಜ್ ಎನ್ನುತ್ತಿದ್ದ. ನಾನು ಮತ್ತೆ ಹೊಸ್ತಿಲು ತುಳಿದು ಒಳನಡೆದಿದ್ದೆ. ಮೌನವಾಗೇ ಉಟ ಮಾಡಿದ್ದೆ ಸ್ವಲ್ಪ ಅನ್ನ ಅಮಾಟೋ ಸಾರು ನುಂಗಿ ಕೈ ತೊಳೆದುಕೊಳ್ಳುತ್ತಿರುವಾಗಲೇ ಅಬ್ಬಾಜಾನನ ರೂಮಿನ ಕೊಂಡಿಯ ಸಪ್ಪಳ ನಾನು ಗಾಬರಿಯಾಗಿದ್ದೆ. ಅಮ್ಮು ಸಜ್ಜು ಪೂರ್ವಯೋಜಿತವಾಗಿ ಜಗಳವಾಡಲು ತಯಾರಾದವರಂತೆ ಬಾಗಿಲ ಕಡೆ ನೋಡುತ್ತಿದ್ದರು. ಅಬ್ಬಾಜಾನ್ ಮೆಲ್ಲನೆ ಬಂದಿದ್ದರು. ಕಣ್ಣಲ್ಲಿ ಉಗ್ರತೆ ಇರಲಿಲ್ಲ. ಅದೇ ಶಾಂತತೆ ಎಲ್ಲೆಡೆ ಹರಡಿತ್ತು. ಆದರೆ ಅಮ್ಮು ತಡೆದುಕೊಳ್ಳದೆ ಅಂದೆಬಿಟ್ಟಲು. ನೀವು ಮಾಡಿದ ದುಡುಕಿಗೆ ಈ ಮಗು ಈ ದಿನ ಊಟ ಮಾಡಿಲ್ಲ. ನೀವು ಏನಾದರೂ ಅಂದರೆ ಗಿರಿ ನಾಳೆಯೇ ಊರು ಬಿಡುತ್ತಾನೆ. ನೀವು ನಿಮ್ಮ ಮನೆಯಲ್ಲಿ ಆರಾಮವಾಗಿರಬಹುದು… ನೀವು ಉಪಯೋಗಿಸಿದ ದ್ರೋಹಿ ಶಬ್ದಕ್ಕಂತೂ ಈ ಹುಡುಗ ಅರ್ಹನಲ್ಲ. ಇದೊಂದು ತಿಳಿದರೆ ಸಾಕು ಎಂದು ಅಮ್ಮು ಹೇಳಿದೊಡನೆಯೇ ಸಜ್ಜು ಅದಕ್ಕೆ ಶೃತಿ ಸೇರಿಸಿ ಅಬ್ಬಾಜಾನ್ ನಿಮಗೆ ಈ ಬುದ್ಧಿ ಬರಬಾರದಾಗಿತ್ತು.
ಗಿರಿಯ ಬಗ್ಗೆ ಎಂದೂ ಬದಲಾಗದಿದ್ದ ನೀವು ಇಂದೇಕೆ ಬದಲಾದಿರಿ. ಗಿರಿಯೆಂದರೆ ನಿಮ್ಮ ದೊಡ್ಡ ಮಗನಂತೆ ಪ್ರೀತಿಸುತ್ತಿದ್ದ ನೀವು ಅವನಿಗೆ ದ್ರೋಹದ ಪಟ್ಟಿ ಕಟ್ಟಿದ್ದಿರಿ. ಇದರಲ್ಲೆ ನಿಮ್ಮ ಸೋಲು ಅಡಗಿದೆ. ಇದರಲ್ಲೆ ನಿಮ್ಮ ಕೀಳರಿಮೆಅಡಗಿದೆ. ಯಾವನೋ ಮೂರ್ಖನ ಮಾತಿಗೆ ಬೆಲೆ ಕೊಡುವವನು ನನ್ನ ಅಬ್ಬಾಜಾನ್ ನಾನು ಅಮ್ಮುಗೆ ಸಜೀದಾಎ ಸನ್ನೆ ಮಾಡಿ ಸುಮ್ಮನಿರಲು ಹೇಳಿದೆ. ಆಸೀಫ್ ಮಾತ್ರ ಎನೂ ತಿಳಿಯದಂತೆ ಎಲ್ಲಾ ಕೆಳುತ್ತಲಿದ್ದ. ಅಬ್ಬಾಜಾನ್ ಒಂದೇ ಮಾತು ಹೇಳಿ ತಮ್ಮ ರೂಮಿಗೆ ಹೋಗಿ ಮಲಗಿಬಿಟ್ಟ. ಗಿರಿ ನನ್ನಿಂದ ಪ್ರಮಾದವಾಗಿದ್ದರೆ ಕ್ಷಮಿಸು ಎನ್ನುವ ಅವರ ಮಾತು.
ನಾನು ಮೇಲ್ಮಾಳಿಗೆಯಲ್ಲಿ ಬಡಬಡಿಸುತ್ತಾ ಯಾಕೆ ಅಬ್ಬಾಜಾನನ ಕದಲದ ಮನಸು ಕದಲಿತು. ಓಡದ ತಲೆ ಓಡಿತು? ಯಾಕೆ ಈ ಸಂದರ್ಭಗಳ ಸೃಷ್ಟಿ ಎಂದು ಚಿಂತಿಸುತ್ತಿರುವಾಗಲೇ ಅಬ್ಬಾಜಾನ್ ಮತ್ತೆ ನನ್ನ ಹತ್ತಿರ ಬಂದಿದ್ದರು. ಗಿರಿ ನಿನಗೆ ಹೀಗೆ ಮಾತಾಡಿದ್ದು ನಿನಗೆ ಬಯದ್ದ್ದು ನಾನು ಸುಮ್ಮಸುಮ್ಮನೆ ಮಾಡಲಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ವಿರೋಧಿಸುವಾಗ ನಿರ್ದಿಷ್ಟ ಕಾರಣಗಳಿರುತ್ತವೆಂಬುದು ಅಷ್ಟೆ ಸತ್ಯ. ನೀನು ನನ್ನನ್ನು ತಂದೆಯಂತೆ ಸ್ವೀಕರಿಸಿದ ಕ್ಷಣದಿಂದಲೇ ನಾನು ನಿನ್ನ ಮೇಲೆ ಇರುವ ಜಗದ ಎಲ್ಲ ನಿಂದೆಗಳನ್ನು ತಿರಸ್ಕರಿಸಿದೆ. ನಿನ್ನ ಬಗ್ಗೆ ಯಾರಾದರೂ ಹಗುರವಾಗಿ ಮಾತಾಡಿ ಅವರಿಗೆ ಚೆನ್ನಾಗಿ ತರಾಟೆ ತೆಗೆದುಕೊಂಡೆ. ಅದಲ್ಲ ನಿನಗೆ ಗೊತ್ತೇ ಇದೆ. ಅಬ್ಬಾಜಾನ್ ಎನ್ನುವ ನನ್ನ ಕಲ್ಪನೆಯ ಗಿರಿ ಮತ್ತೆ ನನ್ನ ಅಳಿಯನಾಗಿ ಸ್ಥಿತ್ಯಂತರಗೊಳ್ಳುವುದು. ನನಗೆ ಇಷ್ಟವಿಲ್ಲದ ಮಾತು. ಆದರೆ ಒಂದು ಮಾತು ಸಜೀದಾ ಒಪ್ಪಿದರೆ ನನ್ನ ಅಭ್ಯಂತರವಿಲ್ಲಎಂದರು ಇದು ಎಲ್ಲಿಗೊ ತೆಗೆದುಕೊಂಡು ಹೊಗಹತ್ತಿತ್ತು ಸಜಿದ ನನ್ನತಂಗಿಯೆ ಸಂಬದದಲ್ಲಿ ಎಂದಿಗು ಬದಲಾವಣೆ ಇಲ್ಲಾ ಎಂದೆ . ಅಬ್ಬಾಜಾನ್ ಮೌನಕ್ಕೆ ಶರಣಾದರು ಗೋಡಂಬಿಯಾ ಮರ ಪರಿಮಳ ಉಗಳತ್ತಿತ್ತು






Sajida’s sentence ನೀನು ನಮ್ಮ ಮನೆಯವನಂತೆಯೇ ನಾನು ಜಗಳವಾಡಿದಂತೆಯೇ ಅಬ್ಬಾಜಾನ್ನ ಜೊತೆ ಜಗಳವಾಡಬೇಕು. ನಾನು ಅವರನ್ನು ಕಾಡಿದಂತೆಯೇ ನೀನೂ ಕಾಡಬೇಕು is very meaningful and the pivotal point of the story and is also the precursor to the conclusion ಸಜಿದ ನನ್ನತಂಗಿಯೆ ಸಂಬದದಲ್ಲಿ ಎಂದಿಗು ಬದಲಾವಣೆ ಇಲ್ಲಾ. Good analysis of characters.