ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಧರಣಿ ಮಂಡಲ ಮಧ್ಯದ ಹೊರಗೆ ' – ಸಣ್ಣ ಕಥೆ

-ಕಲಿಗಣನಾಥ ಗುಡದೂರು


ಮೂರು ತಾಳ ಚುಕ್ಕಿ ನೆತ್ತಿ ಮ್ಯಾಲ ಇತ್ತು. ಹೊರಗ ಹೊರಸಿನ ಮ್ಯಾಲ ಮಲಗಿದ್ದ ಹರಳಯ್ಯಗ ನಿದ್ದಿ ಅಂಬದು ಬಂದಿರಲಿಲ್ಲ. ಅದೆಷ್ಟು ಸಲ ಕಣ್ಣು ಮುಚ್ಚಿದರೂ ನಿದ್ದಿ ಸುಳಿಯಲಿಲ್ಲ. ಎದ್ದು ಕೆಳಗ ನೋಡಿದ. ಈಚಲ ಚಾಪೆಯ ಮೇಲೆ ಮಡದಿ ಕಲ್ಯಾಣಮ್ಮ, ಮಗ ಶೀಲವಂತ ಮಲಗಿದ್ರು. ಬ್ಯಾಸಿಗಿ ಅಂತ ಗುಡಿಸಲಿಯ ಅಂಗಳಲ್ಲೇ ಹಾಸಿ ಮಲಗುವುದು ರೂಢಿಯಾಗಿತ್ತು. ಬಾಯಾರಿದಂತೆನಿಸಿತು. ನೀರಿಗಾಗಿ ಹುಡುಕಾಡಿದ. ‘ಕಲ್ಯಾಣಿ…’ ತುಟಿಯಾಚೆ ಹೊರಡಲಿದ್ದ ಶಬ್ದವನ್ನು ಹಾಗೆ ಅವುಡುಗಚ್ಚಿದ. ಮಕ್ಕಂಡು ಒಂದೆಲ್ಡು ತಾಸು ಆಗಿಲ್ಲ. ದಿನವಿಡೀ ಕಾಯಕದಲ್ಲೇ ಜೀವ ತೇಯಬೇಕು. ಪಾಪ ಮಕ್ಕಳ್ಲಿ ಬುಡು… ತನ್ನಷ್ಟಕ್ಕೆ ತಾನು ಅಂದುಕೊಂಡ. ದಕ್ಷಿಣ ದಿಕ್ಕಿನತ್ತ ಕಣ್ಣು ಹಾಯಿಸಿದ. ಎರಡು ಉಲ್ಕೆಗಳು ಫಳ್ ಅಂತ ಹೊಳೆದು ಜೋಡಿಯಾಗಿಯೇ ಉದುರಿದವು. ಹರಳಯ್ಯ ಎದ್ದುದನ್ನ ಕಂಡ ಚೆನ್ನ ಬಾಲ ಅಲ್ಲಾಡಿಸಿ, ಮುಂಗಾಲಿನಿಂದ ಮೋತಿ ತಿಕ್ಕಿಕೊಂಡ. ಮುದುರಿಕೊಂಡು ಮಲಗಿ, ಹರಳಯ್ಯನನ್ನೇ ದಿಟ್ಟಿಸಿನೋಡಿದ. ‘ಇಷ್ಟೊತ್ತಿಗನ ಎದ್ದು ಎಲ್ಲಿಗೆ ಹೊಂಟಾನ ನಮ್ ಶರಣ. ಇನ್ನಾ ಬೆಳಕು ಹರಿಯಾಕ ಭಾಳ ಹೊತ್ತು ಬೇಕು. ಇಷ್ಟು ತಿಳಿಯಂಗಿಲ್ಲನು ಈತಗ’ ಚೆನ್ನ ನೆಲಕ್ಕೆ ಮೋತಿ ತಿಕ್ಕಿ ಮುಂಗಾಲು ಹಿಂಗಾಲು ಮೇಲಕ್ಕೆತ್ತಿ ಆಸನವೊಂದನ್ನ ಹಾಕಿದ. ನೆಲಕ್ಕೆ ಬೆನ್ನು ಉಜ್ಜಿ, ಕೀರಲು ದನಿಯಲ್ಲಿ ‘ಕುಂಯ್…’ ಅಂತ ಎರಡ್ಮೂರು ಸಲ ರಾಗ ತೆಗೆದ. ‘ನಿನ್ನಿ ಸಂಜಿಕಿ ಕಾಯಕ ಮುಗಿಸಿ ಬರೊತ್ನ್ಯಾಗ ಅವ್ರು ನನಗ ಕಾಣದ ಹೋಗಿದ್ರ ಚಲೋ ಇತ್ತು’ ಹರಳಯ್ಯ ಮೈಯೆಲ್ಲ ಬೆವರಿ, ಕ್ಷಣ ನಡುಗಿದ. ‘ಅದು ಸರಿಯಲ್ಲ. ನಾ ನನ್ನ ಮನಸ್ಸನ್ನ ಬದಲಿಸ್ತಿರೋದು ಸರಿಯಲ್ಲ’ ಹೊರಸಿನ ಮುಂದ ಹಾಲಗಂಬದಂತೆ ನಿಂತು ಆಕಾಶದ ಚುಕ್ಕಿಗಳನ್ನೇ ಎಣಿಸುವ ಹಟದಂತೆ ದಿಟ್ಟಿಸಿದ.

‘ನಾವೇನು ಬುದ್ಧನ ಕಾಲ್ದಾಗ ಅದೀವೇನು? ಎಲ್ರೂ ಸಮಾನಂತ ತಿಳಕಳ್ಳಾಕ. ಒಂದಾಗಿ ಬದುಕಾಕ? ಬುದ್ಧನ ನಂತ್ರ ಬಸವಣ್ಣ ಹುಟ್ಟಿ ಬಂದ. ಮುಂದನೂ ಇಂಥ ಮಹಾತ್ಮರು ಹುಟ್ಟಿ ಬರ್ತಾರ. ಇಡೀ ಸಮಾಜನ ಬದ್ಲಾಗೋದು ಕನಸಿನ ಮಾತುಬುಡು. ಶರಣ್ರು ಅಂತ ಕರೆಸಿಕೊಳ್ಳೋರ ಮನಸಿನ್ಯಾಗಷ್ಟ ನಾವೆಲ್ಲ ಒಂದು. ಆದ್ರ ಅರಸರ ಕಣ್ಣಾಗ, ಸಮಾಜದ ಉಳದ ಜನರ ಕಣ್ಣಾಗ ನಮ್ಮಂಥೋರು ಇನ್ನಾ ಕೀಳು ಕುಲದವರು! ಛೇ! ನನ್ನಂಥ ಶರಣ್ರಿಗೆ ಯಾವ ಕುಲ?’ ನಾಲ್ಕಾರು ಹೆಜ್ಜಿ ಅಂಗಳದಲ್ಲಿ ನಡೆದ. ಚೆನ್ನ ದಿಗ್ಗನೆ ಎದ್ದು ಎರಡ್ಮೂರು ಸಲ ಉತ್ತರ-ದಕ್ಷಿಣಕ್ಕೂ ಮೈಬಗ್ಗಿಸಿ ಪಟಾಪಟಾ ಜಾಡಿಸಿಕೊಂಡ. ನೆಲವನ್ನೇ ಮೂಸುತ್ತ ಹರಳಯ್ಯನ ಹಿಂಬಾಲಿಸಿದ. ‘ನಾ ಕಾಲ್ಮಡಿಯಾಕಂತ ಹೋದ್ರೂ ನೀ ನನ್ನ ಜತಿ ಬರ್ಬಕು. ನನ್ನ ನೆಳ್ಳ ನೀ ಆಗಿನೋಡು ಚೆನ್ನ’ ಎದೆಯ ಮಟವಿದ್ದ ಗುಂಡಿನ ಮರೆಗೆ ತುದಿಗುಂಡಿಲೆ ಕುಂತು ಕಾಲ್ಮಡದು ಎದ್ದು ಮತ್ತೆ ಹೊರಸಿನ ಮ್ಯಾಲ ಅಡ್ಡಾದ. ಜಾಲಿಗಿಡದ ಬೊಡ್ಡೆಗೆ ಚೆನ್ನ ಕಾಲೆತ್ತಿ ಉಚ್ಚೆ ಹೊಯ್ದು ಮತ್ತೆ ಮೊದ್ಲು ಮಕ್ಕಂಡಿದ್ದ ಜಾಗದಾಗ ಬಂದು ಮಕ್ಕಂಡ. ‘ಬಸ್ವಣ್ಣಪ್ಪನೋರು ನಮ್ಮಂಥವರನ್ನ ತಮ್ಮಷ್ಟ ಸರಿಸಮಾನ ಅಂತ ತಿಳಿತಾರ. ಆದ್ರ ನಿನ್ನಿ ಯಾಕ ಅವ್ರು ನನ್ನನ್ನ ದೊಡ್ಡವ ಅಂತ ತಿಳಿಬಕು. ನಾ ಶರಣೆಂದು ಅಂದಿದ್ದಕ್ಕ ಅವ್ರು ‘ಶರಣು ಶರಣಾರ್ಥಿ ಹರಳಯ್ಯ’ ಅಂತ ಹೇಳಿದ್ದು ಯಾಕ? ಇದೆಲ್ಲ ಕಲ್ಯಾಣಿ, ಶೀಲವಂತಗ ಜಲ್ದಿ ತಿಳಿಯೋ ವಿಷಯ ಅಲ್ಲ. ಬಸ್ವಣ್ಣಪ್ಪ ಹೊರಿಸಿದ ಭಾರಾನ ಹೆಂಗ ಇಳಿಸಿಕಬಕು ಅಂತ ಕೇಳಿದ್ರ ತಾಯಿ, ಮಗ ಕೋಡು ಮಾಡ್ತಾರ.

‘ನಿನಗ ಬಸ್ವಣ್ಣಪ್ನೋರು ಶರಣು-ಶರಣಾರ್ಥಿ ಅಂದಿದ್ದು ಅವ್ರು ದೊಡ್ಡಗುಣ. ನಿನ್ನ ಮನಸಿಗಿ ಯಾಕ ಹಚ್ಕಂಡಿ. ಹೀಂಗ ಜಗ್ಯ ವಿಚಾರ ಮಾಡಿಕೆಂತ ಕುಂತ್ರ ಮಾಡೋ ಕಾಯಕ ಬುಟ್ಟುಕಾಸಿ ಹುಚ್ಚು ಹಿಡಿದೋರಗತೆ ಎಲ್ಲಿಬೇಕಲ್ಲಿ ತಿರುಗ್ತಿನೋಡು’ ಅಂತ ಕಲ್ಯಾಣೀನ ಕಡ್ಡಿ ಮುರ್ದಂಗ ಅಂತಾಳಂದ್ರ? ನಾ ಯಾರ್ತಲ್ಲಿ ಕೇಳ್ಬಕು? ಮಗ ಶೀಲವಂತ ಕಲಾವಿದ. ನನ್ನ ಮನಸನ್ನ ಒಂದೀಟು ಅರ್ಥಮಾಡಿಕೊಳ್ತಾನ. ಭಾವನೆಗಳನ್ನ ಚಿತ್ರಗಳಲ್ಲಿ ಮೂಡಿಸೋ ಆತಗ ನನ್ನ ಭಾವನೆಗಳು ಅರ್ಥ ಆಗ್ತಾವಂತ ಕೇಳಿದ್ಯ. ಹೊರಸಿನ ಮ್ಯಾಲ ಮಕ್ಕಂಡಿದ್ದ ಹರಳಯ್ಯಗ ಮಗನ ಮಾತುಗಳು ಮನಸಿನ್ಯಾಗ ಎಲ್ಲಿಬೇಕಲ್ಲಿ ಕರಿಜಾಲಿ ಮುಳ್ಳು ಚುಚ್ಚಿದಂಗ ಅನಿಸಿದವು. ‘ಇಲ್ಲಿ ಕೇಳಪ, ನಿನ್ನ ಕಥಿ ಕೇಳಿದ ಮ್ಯಾಲ ನನಗ ಧರಣಿ ಮಂಡಲದ ಹಾಡು ನೆಪ್ಪಾತಿ. ಧರಣಿ ಮಂಡಲದ ಮಧ್ಯದೊಳಗ ಕಾಳಿಂಗ ಅಂಬ ಗೊಲ್ಲ ಇದ್ನಂತ. ಒಂದು ಆಕಳ ಮೇಯಾಕ ಅಡಿವ್ಯಾಗ ಓಡಿ ಬಂತಂತ…’ ಶೀಲವಂತ ಕಥಿ ಹೇಳಿಕಂತ ಹೊಂಟಿದ್ದ. ‘ಆ ಕಥಿ ನನಗ ಗೊತ್ತಿಲ್ಲನು ಶೀಲವಂತ? ಬ್ಯಾರೆ ಏನನ ಇದ್ರ ಹೇಳು?’ ಹರಳಯ್ಯ ಮುಖ ಸಪ್ಗ ಮಾಡಿ  ಕೇಳಿದ್ದ. ‘ಅಡಿವ್ಯಾಗ ಹುಲಿ ಬಂತಂತ. ಕರುವಿಗಿ ಹಾಲುಕುಡಿಸಿ ಮತ್ಯೆ ಬರ್ತೀನಿ ಅಂತ ಆಕಳ ವಚ್ನಾ ಕೊಟ್ತಂತ. ಕೊಟ್ಟ ವಚ್ನಾ ಪಾಲಿಸದಕ ಆಕಳ, ಹುಲಿ ಇದ್ದಲ್ಲಿಗಿ ಬಂತಂತ. ಇದನ್ನ ಮೆಚ್ಚಿದ ಹುಲಿ ಹಸಿವಾಗಿದ್ರೂ ಆಕಳನ್ನ ತಿನ್ಲಿಲ್ಲಂತ. ತಾನಾ ಬೆಟ್ಟದ ಮ್ಯಾಲಿಂದ ಬಿದ್ದು ಪ್ರಾಣ ಕಳಕಂಡಬುಡ್ತಿ ಅಂತ ನಿನ್ನ ಕಥಿ ಹೌದಲ್ಲ ಶೀಲವಂತ?’ ತಾಯಿ ಕಲ್ಯಾಣಮ್ಮ ಮಗನ ಕಥಿ ಪೂರ್ಣಗೊಳಿಸಿದ್ದಳು.

ತಾಯಿ, ಮಗನನ್ನೇ ಹುಳ್ಳಗೆ ನೋಡಿ ನಕ್ಕಿದ್ದ ಹರಳಯ್ಯ. ‘ಹಂಗಲ್ಲವ ಅದು. ಹುಲಿ ಅಂದ್ರ ನಮ್ಮಂಥ ಮಂದಿಯಂಥ. ಒರಟು, ಸಿಟ್ಟು, ದುಡಿಯೋ ಶಕ್ತಿ, ಪ್ರಾಮಾಣಿಕತೆ, ನಿಷ್ಠೆ, ಸ್ವಾಭಿಮಾನ ಎಲ್ಲ ಒಳ್ಳೆ ಗುಣ ಇರೋ ಹೊಲೇರು ಇದ್ದಂಗ. ಹುಲಿ ಹಸ್ದುಕಾಸಿ ಎಂದನ ಹುಲ್ಲು ತಿಂದಿದ್ದು ಕೇಳಿರೇನು? ಇಲ್ಲಲ. ಹಂಗ ಹಸಿದವನ ಮುಂದ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಅಂತ ಉಪದೇಶ ಮಾಡಿದ ಆಕಳ ಅದು ಹಾರವರು ಇದ್ದಂಗಂತ. ತನ್ನ ಚಾಣಾಕ್ಷತನದಿಂದನ ಹುಲಿಯಂಥ ಹುಲೀನ ಸಾಯ್ಸಿಬುಡ್ತೆಲ್ಲಪ ಹಸುವಿನಂಥ ಹಸು! ಅದ್ರಂಗ ನಿಂದು ಆದೀತು ಅಂಬ ಬುಗುಲಿಗೆ ನಾ ಹಂಗ ಹೇಳಿದ್ನಪ. ಅರ್ಥಮಾಡಿಕಳ್ಳದು ಬುಡದು ನಿನಗ ಬುಟ್ಟಿದ್ದು’ ಶೀಲವಂತ ಇಷ್ಟು ಅಂದಾತನೆ ಸಿಡಿಮಿಡಿಗೊಂಡು ಹೊರಗ ಹೋಗಿದ್ದ. ‘ನಿನ್ನ ಮ್ಯಾಲ ಬಸ್ವಣ್ಣಪ್ನೋರು ಹೊರಿಸಿದ ವಿನಮ್ರತೆಯ ಭಾರಾನ ಬ್ಯಾರೆ ರೀತಿಲಿಂದ ತೀರಿಸಾಕ ಬರುತ್ತ. ನಮ್ಮ ತೊಡಿಯಾಗಿನ ಚರ್ಮ ಕಿತ್ತಿ ಚಮ್ಮಾವುಗೆ ಮಾಡಿಕೊಟ್ರ ಬಸ್ವಣ್ಣಪ್ಪ ಮೆಟ್ಟಿಗಂತಾರನು? ನೋಡು ಮಾರಾಯ, ಸುಮ್ಕ ದುಡುಕಬ್ಯಾಡ. ಮೈಮ್ಯಾಲಿನ ಚರ್ಮ ಸುಲ್ಕಂಡು ಚಮ್ಮಾವುಗೆ ಮಾಡೋದು ಅಂದ್ರ ಮೈಮ್ಯಾಲಿನ ಬಟ್ಟಿ ಬಿಚ್ಚಿ, ತೊಟ್ಗಂಡಂಗ ಅಲ್ಲ. ನಿನಗ ಕೈಮುಗ್ದು ಬೇಡಿಕಂತೀನಿ ಪುಣ್ಯಾತ್ಮ, ಬಸ್ವಣ್ಣಪ್ಪಗ ನಾಳಿ ನಾವಿಬ್ರೂ ಹೋಗಿ ತಪ್ಪಾತಿ ಅಂತ ಕೇಳಮು. ನಾವಾ ಮೊದ್ಲು ಅವ್ರಿಗೆ ಶರಣು-ಶರಣಾಥರ್ಿ ಅಂತ ಅಂದು ಆ ಭಾರಾನ ತೀರ್ಸಿಬುಡಾಮು’ ಕಲ್ಯಾಣಮ್ಮ ಕರುಳಿನ ಮಾತನ್ನೇ ಗಂಡಗ ಹೇಳಿದಳು.

‘ಹಂಗಲ್ಲ ಕಲ್ಯಾಣಿ ಅದು. ಶರಣರ ನುಡಿ ಅಂದ್ರ ಬಾಯಿ ಉಪಚಾರದ ಮಾತಲ್ಲ. ಜ್ಞಾನದ ಶಿಖರ ಬಸವಣ್ಣ. ಅಂತಾತ ನನಗ ಶರಣು ಶರಣಾರ್ಥಿ ಅಂತ ಹೇಳೋದು ಅಂದ್ರ? ಇಲ್ಲ ನಾ ಇದಕ್ಕ ಪ್ರಾಯಶ್ಚಿತ್ತ ಮಾಡಿಕ್ಯಬಕು. ನನ್ನ ತೊಡೆಯ ಚರ್ಮ ಸುಲ್ದು, ನನ್ನ ಕೈಯಾರೆ ಚಮ್ಮಾವುಗೆ ಮಾಡಿ ಬಸ್ವಣ್ಣಪ್ಪಗ ಕೊಡ್ತೀನಿ’ ಹರಳಯ್ಯನ ಕಣ್ಣುಗಳಲ್ಲಿ ಮಿಂಚಿನ ಬೆಳಕು ಸೆಳೆಯಿತು. ‘ಕೇಳಿದೋರು ನಿನಗ ಬುದ್ಧಿಗೇಡಿ ಅಂತಾರ. ಒಳ್ಳೆ ಚರ್ಮ ತಂದು ಭಕ್ತಿಯಿಂದ, ತನು, ಮನ ಶುದ್ಧಿಯಿಂದ ಬೇಕಾದ್ರ ಚಮ್ಮಾವುಗೆ ಮಾಡಿಕೊಡಾನ. ಆದ್ರ ಮನ್ಸೇರ ಚರ್ಮ ಬ್ಯಾಡ. ಮಹಾಭಾರತ ಪುರಾಣದ ಕಥಿ ಕೇಳಿಯೋ ಇಲ್ಲೊ? ದ್ರೋಣಾಚಾರ್ಯರು ತಾವು ಕಲಿಸದ ವಿದ್ಯೆಗೆ ಏಕಲವ್ಯನಿಂದ ಬಲಗೈ ಹೆಬ್ಬರಳು ಪಡದಂಗ, ನಿನ್ನ ಕಾಲನ್ನ ಇವ್ರು ಬಲಿ ತಂಗಂತಾರ. ಉಗುರಲ್ಲ, ಕತ್ತರಿಸಿದ್ರ ಚರ್ಮ ಬೆಳ್ದು ಬುಡುತ್ತ ಅಂಬಾಕ. ನೋಡು ವಿಚಾರಮಾಡು. ಶೀಲವಂತಗನೂ ಬಸವಣ್ಣಪ್ಪ ಅಂದ್ರ ಸಾಕ್ಷಾತ್ ಕೂಡಲ ಸಂಗಮನಾಥ ಇದ್ದಂಗ. ಆದ್ರ ಇಂಥ ಹರಕಿ, ಪರಕಿ ಹೊತಗಬ್ಯಾಡ. ಕೊಲುವವನೆ ಮಾದಿಗ ಅಂತ ಶರಣ್ರು ಹೇಳ್ಯಾರ. ನಿನ್ನನ್ನ ನೀನ ಕೊಲ್ಲಿಕೊಳ್ಳೋದು ಬ್ಯಾಡ. ನಿನ್ನ ಕಾಲು ಹಿಡಕಂಡು ಬೇಡಿಕೊಂತೀನಿ’ ಕಲ್ಯಾಣಮ್ಮ ಹರಳಯ್ಯನತ್ತ ಬಾಗಿ ನಮಸ್ಕರಿಸಿದ್ದಳು. ‘ಸಾಯೋ ಮಾತು ಯಾಕ ಆಡ್ತಿ ಕಲ್ಯಾಣಿ. ತೊಡಿಮ್ಯಾಲಿನ ಚರ್ಮ ಸುಲ್ಕಂಡು ಬುಟ್ರ ಜೀವ ಪಟ್ಟಂತ ಹೋಗಿಬುಡುತ್ತನು? ನನಗ ನಿನ್ನ ಉಪದೇಶ ಬ್ಯಾಡ. ನನಗ ನನ್ನ ಅಂಗದ ದೇವರು, ಲಿಂಗದ ದೇವರು, ಕಾಯಕದ ದೇವರು, ಜಂಗಮದ ದೇವರು ಬಸ್ವಣ್ಣಪ್ಪ. ಆತಗ ನಾ ಜೀವ ಬೇಕಾದ್ರೂ ಕೊಡ್ತೀನಿ’ ಎದಿಯಿಂದ ಉಕ್ಕಿಬಂದ ಮಾತುಗಳನ್ನ ತುಂಡರಿಸುತ್ತ, ತಡವರಿಸುತ್ತ ಹೇಳಿದ್ದ.

‘ಪ್ರಭುದೇವ್ರಿಗೆ, ಇಲ್ಲ ಚನ್ನಬಸ್ವಣ್ಣಗ, ಇಲ್ಲ ಅಕ್ಕಮ್ಮಗನ ಈ ವಿಷಯ ತಿಳಿಸ್ಬಕು. ಈತಗ ಒಂದೀಟು ಬುದ್ಧಿ ಹೇಳಸ್ಬಕು. ಹರಕೆ ಬೇಡೋ ದೇವ್ರು ದೇವ್ರಲ್ಲ. ಹರಕೆ ಕೊಡೋ ಭಕ್ತ ಶರಣ ಅಲ್ಲ’ ಕಲ್ಯಾಣಮ್ಮನ ಮಾತು ಇನ್ನಾ ಈಗನ ಹೇಳಿ ಮಕ್ಕಂಡಾಳ ಅನಿಸಿತು. ಹರಳಯ್ಯ ಹೊರಸಿನ ಮ್ಯಾಲ ಮಗ್ಗಲು ಬದಲಿಸಿ ಮಕ್ಕಂಡ. …ಬಸ್ವಣ್ಣಪ್ಪ ಆಸ್ಥಾನದ ಕಡೆ ಅವಸರ ಅವಸರ ಹೊಂಟಿದ್ರು. ಹೃದಯನ ಕೈಯಾಗ ಹಿಡಕಂಡಂಗ ಚಮ್ಮಾವುಗೆ ಹಿಡಕಂಡು ಅವ್ರ ಹಿಂದ ಹಿಂದ ಹೊಂಟೆ. ನನ್ನ ಹೆಜ್ಜಿ ಸಪ್ಪಳಕ್ಕ ಬಸ್ವಣ್ಣಪ್ಪ ಹಿಂದಕ್ಕ ತಿರುಗಿನೋಡಿದ್ರು. ಅವ್ರು ಮೊದ್ಲು ಶರಣು ಅನ್ನಾಕಿನ ಮೊದ್ಲಾ ಶರಣು ಶರಣಾರ್ಥಿ ಅಂದುಬುಟ್ಟೆ. ಬಸವಣ್ಣ ಮುಗಳ್ನಕ್ಕು, ಶರಣು ಶರಣಾರ್ಥಿ ಹರಳಯ್ಯನವರೆ ಅಂದ್ರು. ಮನಸು ಮತ್ತೆ ಮುದುಡಿ ಹಿಡಿಯಾದ್ರೂ ನಾನ ಈ ಸಲ ಮೊದ್ಲು ಶರಣು ಶರಣಾರ್ಥಿ ಅಂದಿದ್ದಕ್ಕ ಸೊಲುಪು ಸಮಾಧಾನ ಆಯ್ತು. ‘ಯಪ್ಪಾ ಭಾಗ್ಯದ ಬಸವರಾಜ, ಬೆಳಕಾದ ಬಸವೇಶ. ನನ್ನ ತೊಡೆಯ ಚರ್ಮ ಸುಲ್ದು ಮಾಡಿದ ಚಮ್ಮಾವುಗೆ ನಿನಗಾಗಿ ತಂದೀನಿ ತಂದೆ’ ಬಸವಣ್ಣನತ್ತ ಚಮ್ಮಾವುಗೆ ಹಿಡಿದೆ. ಜಗದ ಗಾಬರಿಯೆಲ್ಲ ಬಸವಣ್ಣನ ಮಂದಸ್ಮಿತ ಮುಖದಾಗ ತೇಲಿತು. ಹೊಳೆವ ಕಣ್ಣುಗಳಿಂದ ನನ್ನ, ಚಮ್ಮಾವುಗೆಗಳನ್ನ ದಿಟ್ಟಿಸಿದರು. ‘ಕಲ್ಯಾಣಮ್ಮ ತಾಯಿ ಎಲ್ಲಿ?’ ಅಂತ ಕೇಳಿದ್ರು. ‘ಮಗನ ಜತಿ ಚರ್ಮ ಹದ ಮಾಡಾಕ ಹಚ್ಯಾಳ, ಗುರುಬಸವ ತಂದೆ’. ‘ಈ ಚಮ್ಮಾವುಗೆ ನನಗ ಸಲ್ಲಂಗಿಲ್ಲ ಹರಳರಸ. ನಿನ್ನ ಬ್ರಹ್ಮಾಂಡ ಭಕುತಿಗೆ ನನ್ನ ನಿಭ್ರಾಂತಿಯ ಕಳೆಯಿತ್ತು ನೋಡಾ ಕಾಯಕದರಸ.

ನಿನ್ನ ಚರ್ಮವನೇ ಮೈಯೆಲ್ಲ ಹೊದ್ದ ನನಗ, ಮತ್ತ ನಿನ್ನದೇ ಚರ್ಮದ ಚಮ್ಮಾವುಗೆ ಕೂಡದು, ಕೂಡದು. ಕೂಡಲಸಂಗನ ಶರಣರು ಜರಿಯುವರಯ್ಯ. ಸಂಗಮನಾಥಗೆ ಅರ್ಪಿಸಿಬುಡು. ಎನ್ನ ಮನದ ಮಲಿನ ಕಳೆದ ಕೂಡಲಸಂಗಯ್ಯ ಸ್ವರೂಪಿ ಹರಳಯ್ಯ ತಂದೆ…’ ಬಸವಣ್ಣ ಕಣ್ಣಂಚಿಗೆ ತುದಿಬಳ್ಳು ಮುಟ್ಟಿಕೊಂಡರು. ಹೆಗಲಮ್ಯಾಲ ಕೈಯಿಟ್ಟು, ಮೈದಡವಿದರು. ಚಮ್ಮಾವುಗೆಗಳನ್ನ ತಮ್ಮ ಕಂಗಳಿಗೆ ಲಿಂಗದಂತೆ ಮುಟ್ಟಿಸಿದರು. ಉರಿಯ ಮುಂದ ನಿಂತ ಮಗುವಿನಂಗ ನಾ ಅವ್ರನ್ನ ಬೆಕ್ಕಸ ಬೆರಗಾಗಿ ನೋಡುತ್ತ ನಿಂತೆ. ಚಮ್ಮಾವುಗೆಗಳನ್ನ ತಲಿಮ್ಯಾಲ ಹೊತ್ತ ಬಸವಣ್ಣ, ನನ್ನ ಸುತ್ತ ಪ್ರದಕ್ಷಿಣೆ ಹಾಕಿದರು. ‘ಹೋಗಯ್ಯ ಹರಳರಸ, ಸಂಗಮನಾಥನೊಬ್ಬನೆ ಈ ಚಮ್ಮಾವುಗೆ ಧರಿಸಲು ಯೋಗ್ಯನಯ್ಯ. ಭಕ್ತಿಯ ಬಯಲಾದ ಹರಳಯ್ಯ ತಂದೆ’ ಬಸವಣ್ಣ ಆಸ್ಥಾನದತ್ತ ತಲೆತಗ್ಗಿಸಿಕೊಂಡು ಹೊಂಟರು…ಸಂಗಮನಾಥನತ್ತ ಹೊಂಟೆ. ಅದೆಲ್ಲಿದ್ದನೋ ಮಾದರಸ ಎದುರಾದ. ಚಮ್ಮಾವುಗೆ ಕಣ್ಣುಕುಕ್ಕಿದವು. ‘ಅಬ್ಬಾ ಎಂಥ ಅದ್ಭುತ ಚಮ್ಮಾವುಗೆ ಹರಳಯ್ಯ? ಕೊಡಯ್ಯ ನನ್ನ ಕಾಲಿಗಿ ಸರಿಹೊಂದ್ತಾವ’ ಕಸಿದುಕೊಳ್ಳಲು ಕೈಚಾಚಿದ. ನಾ ಹಿಂದ್ಕ ಸರಿದು ನಿಂತೆ. ‘ಬ್ಯಾಡ ಮಾದರಸ. ಎನ್ನ ಮನದ ಮಹಾದೇವ ಬಸ್ವಣ್ಣಪ್ಪನೋರಿಗಂತ ಈ ಚಮ್ಮಾವುಗೆ ಮಾಡಿ ತಂದಿದ್ಯ. ಸಂಗಮನಾಥನೊಬ್ಬನೇ ಈ ಚಮ್ಮಾವುಗೆ ಧರಿಸಾಕ ಯೋಗ್ಯ ಅಂತ ಅವ್ರು ಹಾಕ್ಯಳದ ಕಳಿಸಿದ್ರು. ಸಂಗಮನಾಥ ಬುಟ್ರ ಬ್ಯಾರೆ ಯಾರೂ ಈ ಚಮ್ಮಾವುಗೆ ಧರಿಸಬಾರ್ದು ಮಾದರಸ…’

‘ನಾ ಸೇನಾಪತಿ. ನನಗ ಎದುರುತ್ತರ. ಶರಣ್ರಿಗೆ ಒಪ್ಪದು. ತಾ ಇಲ್ಲಿ’ ಮಾದರಸ ಚಮ್ಮಾವುಗೆ ಕಸಿದುಕೊಂಡರು. ‘ಬ್ಯಾಡ… ಬ್ಯಾಡ… ಕೇಡು… ಕೇಡು…’ ಚೀಟಾರನೆ ಚೀರಿದೆ. ದಿಗ್ಗನ ಎದ್ದುಕುಂತ ಕಲ್ಯಾಣಮ್ಮ, ಶೀಲವಂತ, ‘ಏನಾಯ್ತು ಶರಣ. ಕೆಟ್ಟ ದನೀಲೆ ಚೀರಿದಂಗ ಕೇಳಿಸ್ತು. ಬ್ಯಾಡ, ಕೇಡು ಅಂತ ಬಡಬಡಿಸಿದಂಗ ಆತು’ ಚುಕ್ಕೆಗಳ ಬೆಳಕಲ್ಲಿ ಕಂಡ ಹರಳಯ್ಯನ ಮುಖದ ಆಕಾರದತ್ತ ದಿಟ್ಟಿಸಿನೋಡಿದರು. ಹರಳಯ್ಯ ಕಣ್ಣು ತಿಕ್ಕಿಕೊಳ್ಳುತ್ತ ಎದ್ದುಕುಂತ.ಎದ್ದುಕುಂತ ರಭಸಕ್ಕೆ ಹೊರಸಿನ ಕಾಲುಗಳು ಕಿರ್ರುಗುಟ್ಟಿದವು. ನೆಲದ ಮ್ಯಾಲ ಪಕ್ಕದಾಗ ಮಲಗಿದ್ದ ಚೆನ್ನ ಮೈಮ್ಯಾಲ ಏನೋ ಬಿದ್ದಿತಂಬಂಗ ಮೈಜಾಡಿಸುತ್ತ ಎದ್ದು ‘ಕುಂಯ್, ಕುಂಯ್’ ಅಂದ. ಹರಳಯ್ಯನ ಮುಂದ ನಿಂತು ಮೋತಿಯನ್ನು ದಿಟ್ಟಿಸಿದ. ಒಂದೆರಡು ಸಲ ಬಾಲ ಅಲ್ಲಾಡಿಸುತ್ತ, ಸಣ್ಣಹುಡ್ರು ಲೋಡ್ ಲೋಡ್ ತಿಮ್ಮಯ್ಯ ಅನ್ನುವಂತೆ ಹರಳಯ್ಯನನ್ನೇ ಸುತ್ತಿದ. ‘ಕೆಟ್ಟ ಕನ್ಸು, ಗಿನ್ಸು ಏನನ ಬಿತ್ತನು?’ ಎಷ್ಟು ಬೆವರಾಕ ಹತ್ತೀಯಲ್ಲ ಮಾರಾಯ?’ ಕಲ್ಯಾಣಮ್ಮ ದಿಡಗ್ಗನೆ ಎದ್ದು ತನ್ನ ಸೆರಗಿನ ತುದಿಯಿಂದ ಕುತ್ಗಿ, ಕಪಾಳ ಒರೆಸಿದಳು. ‘ಏನಪ ಅದು ಕನ್ಸು? ಅದ ಬಸ್ವಣ್ಣಪ್ಪಗ ಚಮ್ಮಾವುಗೆ ಕೊಡೊ ಕನ್ಸು ಬಿದ್ದಿರ್ಬಕಲ್ಲ?’ ಶೀಲವಂತ ಅರೆನಿದ್ದೆಯಲ್ಲೇ ಕಣ್ಣು ತಿಕ್ಕಿಕೊಂಡು ಆಕಳಿಸಿದ. ‘ಇಂಥ ಹೊತ್ತಿನ್ಯಾಗನೂ ನಿನಗ ಚ್ಯಾಷ್ಟಿ ಮಾಡದ ಉದ್ಯೋಗ. ನಿಮ್ಮಪ್ಪ ಹೇಳೋತನ್ಕ ಸೊಲುಪು ತಡಕ’ ಬೆದರುಗೊಂಬಿಗತೆ ನಿಂತಿದ್ದ ಹರಳಯ್ಯನನ್ನೇ ನೋಡುತ್ತ ಕಲ್ಯಾಣಮ್ಮ ರಮಿಸಿದಳು. ‘ಬಸ್ವಣ್ಣಪ್ಪಗ ನನ್ನ ತೊಡೆಯ ಚರ್ಮದಿಂದ ಮಾಡಿದ ಚಮ್ಮಾವುಗೆ ಕೊಡಾಕಂತ ಹೋದೆ’ ಕನಸಿನ ಕುಡಿಯನ್ನು ಹರಳಯ್ಯ ಜಗ್ಗತೊಡಗಿದ.

ಇನ್ನೂ ಮುಖದಾಗ ಗಾಬರಿಯಿತ್ತು. ಚೆನ್ನ ಹರಳಯ್ಯನ ಕಾಲಿಗೆ ಮೂತಿ ತಿಕ್ಕಿದ. ತನಗೂ ಕನಸಿನ ಕಥಿ ಹೇಳ್ಬಕು ಅಂಬಂಗ ‘ಕುಂಯ್’ಗುಟ್ಟಿದ. ‘ಚಮ್ಮಾವುಗೆ ಕೊಡಾಕ ಹೋಗಿದ್ದು ಕನಸಿನ್ಯಾಗ ಅಂಬದನ್ನ ನೆನಪಿಟಗಪ. ಇಲ್ಲ ಇನ್ನ ಕನಸಿನ್ಯಾಗನ ಅದಿಯನು ಮತ್ತ?’ ಅಪ್ಪನ ಎಡತೋಳು ಮುಟ್ಟಿ ಶೀಲವಂತ ಮಾತಾಡಿಸಿದ. ‘ನಿನಗ ಎಲ್ಲದು ತಮಾಷಿಗತೆ ಕಾಣುತ್ತ. ಎಲ್ಲದಕ್ಕ ಕೋಡು ಮಾಡ್ತೀದಿ’ ಹರಳಯ್ಯ ಮತ್ತೆ ಹೊರಸಿನ ಮ್ಯಾಲ ಕುಂತು ನಿಟ್ಟುಸಿರುಬಿಟ್ಟ. ‘ಅಯ್ ಆ ಹುಡುಗನ ಮಾತು ಏನ್ ಕೇಳ್ತಿ. ಅದು ಹಂಗನ. ನಿನ್ನ ಕನಸಿನ ಕಥಿ ಹೇಳು. ಬಸ್ವಣ್ಣಪ್ಪನೋರು ನನ್ನ ಕೇಳಿರ್ಬಕಲ್ಲ?’ ಕಲ್ಯಾಣಮ್ಮ ಗಂಡನ ಬಾಜು ಕುಂತು ಕೇಳಿದಳು. ‘ಕೇಳ್ದೆ ಯೇನಬೆ. ಇಡೀ ಕಲ್ಯಾಣಕ್ಕ ಗೊತ್ತೈತಿ. ನೀವಿಬ್ರು ಎಂಥ ಶರಣಜೋಡಿ ಅಂತ. ನೀ ಅಪ್ಪನ ನೆರಳಾದ್ರ, ಅಪ್ಪ ನಿನ್ನ ನೆರಳು. ಒಂದಕ್ಕೊಂದು ಹೆಂಗ ಬಿಟ್ಟಿರ್ತಾವ. ಕೇಳಿರ್ತಾರ ಬುಡಬೇ. ಆತ ಮುಂದ ಹೇಳ್ಲಿ’ ಶೀಲವಂತ ಮತ್ತೊಮ್ಮೆ ನಿದ್ದಿ ತಡಿಯಾಕ ಆಗವಲ್ತು ಅಂಬಂಗ ದೀರ್ಘವಾಗಿ ಆಕಳಿಸಿದ. ಮುಖದ ಮ್ಯಾಲ ಎರಡೂ ಅಂಗೈಗಳಿಂದ ತಿಕ್ಕಿಕೊಂಡ. ‘ಬಸ್ವಣ್ಣಪ್ಪ ನಿನ್ನ ಹೆಂಗ ಕೇಳಲ್ಲ, ಕೇಳಿದ್ರು. ನಾ ತಗೊಂಡ ಚಮ್ಮಾವುಗೆಗಳನ್ನ ಅವ್ರು ಹಾಕ್ಯಳ್ಲಿಲ್ಲ. ತಲಿಮ್ಯಾಲ ಇಟಗಂಡು ಮೆರವಣಿಗೆ ಮಾಡಿದ್ರು. ಸಂಗಮನಾಥಗ ಅವುನ್ನ ಕೊಟ್ಟು ಬರಾಕ ಹೇಳಿದ್ರು. ನಾ ಹಂಗ ಹೊಂಟಿದ್ಯ. ಮಾದರಸ ಅಡ್ಡ ಬಂದ…’ ಹರಳಯ್ಯ ನಿಧಾನವಾಗಿ ಬಿದ್ದ ಕನಸಿನ ಜಾಡು ಹಿಡಿದಿದ್ದ. ಶೀಲವಂತ ನಡುವ ಬಾಯಿಹಾಕಿದ.

‘ಆಮ್ಯಾಲ ಮಾದರಸ ನಿನ್ನ ಚಮ್ಮಾವುಗೆಗಳನ್ನ ಕಸ್ಗಂಡು ಕಾಲಾಗ ಹಾಕ್ಕೆಂಡ. ಮೈಯೆಲ್ಲ ಉರಿ ಉರಿ ಅಂತ ಕುಣಿದಾಡಿದ. ಅದ್ಕ ನೀ ಬ್ಯಾಡ, ಬ್ಯಾಡ… ಕೇಡು ಅಂತ ಕೂಗಿದಿ. ‘ಹೇ ಮುದೇವ, ನಿಮ್ಮಪ್ಪ ಹೇಳ್ಲಿ ತಡಿ. ಆತನ ಕನ್ಸು ನಿನಗ ಬಿದ್ದಿತಂಬಂಗ ಹೇಳಾಕ ಹತ್ತೀಯಲ್ಲ’ ಕಲ್ಯಾಣಮ್ಮ ಆಗ್ಲೆ ನಿದ್ದೆಗೆ ಜಾರಿದ್ದ ಚೆನ್ನನ ಮೈಮ್ಯಾಲ ಕೈಯಾಡಿಸುತ್ತ ಹೇಳಿದಳು. ‘ಬೇ ಯವ್ವಾ, ಅಪ್ಗ ಎಂಥ ಕನ್ಸು ಬಿದ್ದಿರುತ್ತ ಅಂಬದು ನನಗಷ್ಟ ಅಲ್ಲ, ಇಡೀ ಕಲ್ಯಾಣದ ಮಂದಿಗೆಲ್ಲ ಗೊತ್ತಾಗುತ್ತ. ಆಮ್ಯಾಲ ಮಾದರಸ ಬಸ್ವಣ್ಣಪ್ನತಲ್ಲಿ ಹೋತಾನ. ನಮ್ ಮನ್ಯಾಗಿನ ಚರ್ಮ ಹದ ಮಾಡಿದ ನೀರನ್ನ ಮೈಮ್ಯಾಲ ಚುಮುಕಿಸಿದ್ರ ಉರಿ ಕಡಿಮಿ ಆಗುತ್ತಂತ ಬಸ್ವಣ್ಣಪ್ಪ ಹೇಳ್ತಾರ. ನೀರು ಚುಮುಕಿಸಿದ ಮ್ಯಾಲ ಮಾದರಸನ ಮೈಯುರಿ ಕಡಿಮಿ ಆಗುತ್ತ! ಅಬ್ಬಾ ಶರಣರ ಪವಾಡ. ಕಾಲಕಾಲಕ್ಕ ಇದನ್ನ ನೆಪ್ಪು ಇಟಗಬಕು. ಕಲ್ಯಾಣದ ಶರಣ್ರು ಪವಾಡ ಮಾಡ್ತಾರಂದ್ರ ಇಡೀ ಲೋಕಾನ ಕೊಕಾಸಿ ನಗುತ್ತ. ಪವಾಡ, ಗಿವಾಡ ನಂಬೋದು, ಮಾಡೋದು ಶರಣ್ರಿಗೆ ಒಪ್ಪಂಗಿಲ್ಲ. ಮಾಟ, ಮಂತ್ರ, ತಂತ್ರ ಧಿಕ್ಕರಿಸಿದ ಶರಣ್ರಿಗೆ ಇಂಥವೆಲ್ಲ ಅಪವಾದ’ ಆಕಾಶದತ್ತ ಮುಖಮಾಡಿ ಹೊಳೆವ ಚುಕ್ಕೆಗಳನ್ನ ದಿಟ್ಟಿಸಿದ. ಶೀಲವಂತನ ಮಾತು ಕೇಳಿದ ಹರಳಯ್ಯಗ ಏನ್ ಹೇಳ್ಬಕು ಅಂಬದ ಮರ್ತುಹೋಯ್ತು. ಕಂಡ ಕನಸು ನಿಧಾನವಾಗಿ ಅಸ್ಪಷ್ಟವಾಯಿತು. ‘ಹೇ ಮಾರಾಯ್ರ, ಇಬ್ರೂ ಹೀಂಗ ಕಥಿ ಹೇಳಿಕಂತ ಬೆಳಕು ಹರ್ಸಿತೀರೇನು ಇವತ್ತು? ನಾನಂತು ಅಡ್ಡ ಆಗ್ತೀನಿ. ಮುಂಜಾನಿ ಎದ್ದುಕಾಸಿ ಜಗ್ಯ ಕೆಲ್ಸ ಅದ್ಯಾವ ಮಾಡಾಕ. ನೀನೂ ಮಕ್ಕಂಡುಬುಡು. ಇನ್ನೊಂದೆಲ್ಡು ತಾಸಿಗಿ ಬೆಳಕು ಹರಿತೈತಿ. ಎಲ್ಲ ಮರ್ತು ತುಂಬ ಹೊದ್ಕಂಡು ಮಕ್ಕಂಡುಬುಡು’ ಹರಳಯ್ಯ ಹೊರಸಿನ ಮ್ಯಾಲ ಮತ್ತೆ ಅಡ್ಡ ಆದ.

ಶೀಲವಂತ ಅಡ್ಡೊಂದು ಬಡ್ಡೊಂದು ಕಾಲು ಇಟಗಂತ ಮೊದ್ಲು ಮಕ್ಕಂಡಿದ್ದ ಚಾಪಿ ಸಮೀಪ ಬಂದ. ಹಣಿಮ್ಯಾಲ ಮುಂಗೈ ಅಡ್ಡ ಹಿಡ್ಕಂಡು ಮಕ್ಕಂಡ. ಗಂಡಗ ಕೌದಿ ಹೊದಿಸಿದ ಕಲ್ಯಾಣಮ್ಮ, ಜಾಲಿಗಿಡದ ಸಮೀಪ ಹೋಗಿ ಕಾಲ್ಮಡುದು ಬಂದು ಮಕ್ಕಂಡ್ಲು. ಹರಳಯ್ಯ ಹೊರಸಿನ ಮ್ಯಾಲ ಎಡಕ್ಕೊಮ್ಮೆ, ಬಲಕ್ಕೊಮ್ಮೆ ಉರುಳ್ಯಾಡಿ ಮಕ್ಕಂಡ. ಬಸವ ನೆನಪಾದ. ನಿನ್ನಿ ಬೆಳಿಗ್ಗೆ ಚರ್ಮ ಕೊಯ್ಯುತ್ತ ಕುಂತಾಗ ಓಡೋಡಿ ಬಂದು ತೊಡಿಮ್ಯಾಲನ ಕುಂತ್ಗಂಡಿತ್ತು. ತನ್ನ ಮೂತಿಲಿಂದ ನೆಕ್ಕಿತ್ತು. ಬಾಲದಿಂದ ಮುಂಗೈ ಮ್ಯಾಲ ಕಚಗುಳಿ ಇಟ್ಟಿತ್ತು. ಇನ್ನಾ ಈಗನ ನಡದೈತನು ಅಂಬಂಗ ಕಣ್ಮುಂದ ತೇಲಿ, ನೆನಪಿನ ಸುರುಳಿ ಬಿಚ್ಚಿತು. ಬಸವನಂದ್ರ ಬಸವ. ಒಂದಿಷ್ಟೂ ಗರ್ವ ಇಲ್ಲ. ಮನೀ ಮಗಳಂಗ ಇದ್ಲು. ಬೆಳಗ್ಗಿ ಹಾಕಿದ್ದ ಹಾಲು, ಅನ್ನ ಅರ್ಧದಷ್ಟ ತಿಂದು ಇನ್ನಾ ಅರ್ಧ ಮಧ್ಯಾಹ್ನ ತಿಂತೀನಿ ಅಂತ ಮೀಸಿಯಲ್ಲೇ ನಸುನಾಚಿ ಹೇಳಿತ್ತು. ಹೊರಗೋಗಿ ಆಡಿಬರ್ತೀನಿ ಅಂತ ಮುಂಗೈಗಿ ಮುತ್ತಿಟ್ಟುಹೋಗಿತ್ತು. ಅದೆಂಥ ಕೆಟ್ಟ ದನಿ. ‘ಮ್ಯಾಂವ್…’ ಅಂತ ಚೀರಿತ್ತು. ನೆಲಕ್ಕ ಮಾಂಸದ ಮುದ್ದಿ ಹತ್ತಿದಂಗ ಆಗಿತ್ತು. ಸೇನಾಧಿಕಾರಿಯ ಕುದುರಿಗಾಡಿ ಗಾಲಿಗೆ ಸಿಲುಕಿ ಬಸವ ಬಯಲಾಗಿಬುಡ್ತಿ. ‘ಬಸವಾ, ಬಸವಾ, ಎಲ್ಲಿಗಿ ಹೋದಿ ನನ್ನವ್ವ. ನಿತ್ಯ ನನ್ನ ತಲೆದಿಂಬಿನ ಮ್ಯಾಲನ ಮಕ್ಕಂತಿದ್ದಿ. ಬಸವಾ ಅಂತ ಮೈಮರ್ತು, ತಲೆದಿಂಬು ಸವರಿದ. ಬರಿಗೈ ತಲೆದಿಂಬಿನ ಮ್ಯಾಲ ಆಡಿತು. ಬಸವಾ, ಬಸವಾ… ಅಂತ ಹತ್ತಾರು ಸಲ ಕನವರಿಸುತ್ತ ಹರಳಯ್ಯ ನಿದ್ದೆಹೋದ. …ಹರಳಯ್ಯ ತಂದೆ, ನಿಂತ್ಗಳ್ಳಪ. ಬಸವರಸರ ದನಿ.

‘ಬಸವರಾಜ ಶರಣು ಶರಣಾರ್ಥಿ’. ‘ಎನ್ನ ಕಾಯದ ನೆಳಲಾದ ಹರಳಯ್ಯ ತಂದೆ ನಿನಗ ಶರಣು ಶರಣಾರ್ಥಿ. ಯಾವ ಕಡೆ ಹೊಂಟಿ ಶರಣುಪ್ರಭು? ಇಂಥ ಉರಿಬಿಸ್ಲಾಗ ಬರಿಗಾಲಿಲೆ ಹೊಂಟಿಯಲ್ಲ ಹರಳರಸ? ಸುಡೋ ಕಾಲನ್ನ ತಗಂಡು ಬಾಯಾಗ ಇಟಗಳಂಗ ಆಗೈತಿ. ಕಾದ ಹಂಚಿನ ಮ್ಯಾಲ ನೆಡದಂಗ ಆಗೈತಿ. ಇಡೀ ಕಲ್ಯಾಣದ ಮಂದಿಗೆ ಚಮ್ಮಾವುಗೆ ಮಾಡಿ, ಅವ್ರ ಪಾದ ರಕ್ಷಿಸೋ ತಂದಿ ನೀನು. ಅವ್ರ ನೆತ್ತಿ ತಣ್ಣಗ ಇರ್ಲಿ ಅಂತ ಹರಸೋ ತಾಯಿ ನೀನು. ಎಲ್ಲರ ಬಂಧು ನೀನು, ಬಳಗ ನೀನು! ನಿನ್ನಾಂಥಾತನೇ ಉರಿವ ಕೆಂಡದ ಮ್ಯಾಲ ನೆಡಕಂತ ಹೊಂಟಿಯಲ್ಲ ತಂದೆ. ತಗೊ ನನ್ನ ಈ… ಅಲ್ಲ ನಿನ್ನ ಈ ಚಮ್ಮಾವುಗೆ ತಗಾ. ನಾ ಬರಿಗಾಲಿಲೆ ಹೋಗ್ತೀನಿ. ಕಾಲಲ್ಲಿದ್ದ ಚಮ್ಮಾವುಗೆಗಳನ್ನ ಕೈಗಳಲ್ಲಿ ಹಿಡಿದ ಬಸವಣ್ಣ, ಬರಿಗಾಲಲ್ಲಿ ಮುಂದ ಮುಂದ ನಡೆದುಬಂದ. ‘ತಗಾ ಹರಳರಸ, ಈ ಚಮ್ಮಾವುಗೆ ನಿನ್ನ ಕಾಲಾಗ ಇರ್ಲಿ. ನಿನ್ನ ಮಗನ ಕೋರಿಕೆ ಈಡೇರಿಸು ಹಡದಪ್ಪ…’ ಅಂಗಲಾಚಿ ಬೇಡಿದ. ‘ಬ್ಯಾಡ ಬಸವ. ನಾ ಕಾಯಕದವನು. ನನಗ್ಯಾತರ ಆಡಂಭರ? ನಾ ಬಡವ. ಚಮ್ಮಾರ. ಬ್ಯಾಡ ಬಸವಪ್ರಭು. ನನಗ ನಿನ್ನ ಚಮ್ಮಾವುಗೆ ಬ್ಯಾಡ’. ‘ನೀ ಬಡವಲ್ಲ ಹರಳರಸ. ಭಕ್ತಿಯ ಬೆರಗು. ಕಾಯಕದ ಕಾರುಣ್ಯ. ಕಲ್ಯಾಣದ ಮಾಣಿಕ್ಯ. ಈ ಚಮ್ಮಾವುಗೆ ಬ್ಯಾಡ ಅಂದ್ರ ನಿನಗ ನನ್ನ ಮೈಮ್ಯಾಲಿನ ಚರ್ಮದಿಂದಲೇ ನಿನಗ ಚಮ್ಮಾವುಗೆ ಮಾಡಿಸಿತರ್ತೀನಿ. ಅದಕ್ಕಾದ್ರೂ ಒಪ್ಪು ಹರಳರಸ’. ‘ಅಪವಾದ, ಅಪಪಾದ.

ಈ ಮಾತುಗಳನ್ನ ಕೇಳದ್ಕಂತ ನಾ ಕಿವುಡನ ಆಗಿದ್ರ ಚಲೋ ಇತ್ತು. ಬರಿಗಾಲ ನೋಡಿ ಕರಗಿದ ಬಸವರಸನ ಮುಂದ ನಾ ಹೆಳವನಾಗಿದ್ರೂ ಚಲೋ ಇತ್ತು. ಬ್ಯಾಡ ಬಸವರಸ ನೀ ಈ ಲೋಕದ ಒಡೆಯ. ನಿನ್ನ ಚಮ್ಮಾವುಗೆ ನನ್ನ ತಲಿಮ್ಯಾಲ ಹೊತ್ತು ಕುಣದಾಡ್ತೀನಿ. ಆದ್ರ ನಿನ್ನ ಚಮ್ಮಾವುಗೆಗಳನ್ನ ಮಾತ್ರ ನಾ ಹಾಕಿಕೊಳ್ಳಲ್ಲ. ಚಮ್ಮಾವುಗೆ ಹಾಕಿಕೊಳ್ಳಂಗ ಮನಸು ಬಂದ ದಿನನ ಈ ಕಾಲುಗಳು ಸೆಟೆದುಹೋಗ್ಲಿ. ಜೀವ ನಿಜೀರ್ವವವಾಗ್ಲಿ. ಸಂಗಮನಾಥನ ಸೇರಲಿ ಈ ಒಡಲು…’ ‘ಯಾಕ ಹಟಮಾಡ್ತಿ ಹರಳರಸ. ನಿನ್ನ ಮನೆಯವರೆಗೆ ಆದ್ರೂ ಹಾಕಿಕೊಂಡು ಹೋಗು. ಸಂಗಮನಾಥನ ಮ್ಯಾಲಾಣೆ…’ ‘ಬಸವರಸನ ಬಾಯಲ್ಲಿ ಆಣೆ, ಪ್ರಮಾಣ! ಬ್ಯಾಡ ಬಸವ, ನಾ ಚಮ್ಮಾವುಗೆ ಹಾಕ್ಯಳಲ್ಲ. ನನಗ ನೀ ಒತ್ತಾಯಮಾಡಬ್ಯಾಡ ಬಸವರಾಜ’. ‘ನಿಂತಗ ಹರಳರಸ. ತಗೊ ಈ ಚಮ್ಮಾವುಗೆ…’ ‘ಬ್ಯಾಡ ಬಸವ. ನನಗ ಬ್ಯಾಡ. ನಾ ಓಡಿಹೋಗ್ತೀನಿ… ಹೊರಸಿನ ಕೆಳಗ ಮಕ್ಕಂಡಿದ್ದ ಚೆನ್ನ ಸತ್ತೆನೋ ಕೆಟ್ಟೆನೋ ಅಂತ ಕುಂಯ್ಗುಟ್ಟಿ, ದಿಡಗ್ಗನೆ ಎದ್ದು ಮೈಜಾಡಿಸಿಕೊಂಡ. ಆಕಾಶಕ್ಕೆ ಮುಖಮಾಡಿ ಚುಕ್ಕೆಗಳಲ್ಲ ಉದುರುವಂಗ ‘ಬೌಂವೋ…’ ಅಂತ ಒದರಿದ. ಕಲ್ಯಾಣಮ್ಮ ಶೀಲವಂತ ದಿಗ್ಗನೆ ಎದ್ದು ಕುಂತರು. ಆಗ್ಲೆ ಮೂರುತಾಳ ಚುಕ್ಕಿ ಪಶ್ಚಿಮ ದಿಕ್ಕಿನ ಮೂಲಿ ಸೇರ್ತಿತ್ತು. ಸುತ್ತಮುತ್ತಲಿನ ಗಿಡಗಳಲ್ಲಿದ್ದ ಹಕ್ಕಿ ಪಕ್ಷಿಗಳು ರೆಕ್ಕಿ ಬಡಿಯುತಿದ್ವು. ಚೆನ್ನ ಹಿಂಗಾಲನ್ನ ಮೂತಿಲಿಂದ ನೆಕ್ಕಿಕೊಂಡ.

‘ನಾಯಿ ಮ್ಯಾಲ ಕಾಲು ಇಟ್ಟು ಇಳದ್ರ ಹೆಂಗ? ನಿದ್ದಿ ಗಣ್ಣಾಗೂ ಶರಣ್ರು ಎಚ್ಚರ ಇರ್ಬಕು. ಪಾಪ ಚೆನ್ನ ಆದದಕಲೆ ತಡಕಂಡ. ನಮ್ ಬಸವನ ಮ್ಯಾಲ ಏನನ ಕಾಲು ಇಟ್ಟಿದ್ದಿ ಅಂದ್ರ…’ ಕಲ್ಯಾಣಮ್ಮ ಸೆರಗು ಮುಟಿಗಿಮಾಡಿಕೊಂಡು ಬಾಯಿಗಿ ಹಿಡಿದಳು. ಶೀಲವಂತ, ಹರಳಯ್ಯನ ಕಣ್ಣಂಚು ತೇವಗೊಂಡು ಮಿಂಚುಹುಳುಗಳಂಗ ಮಿಂಚಿದವು. ‘ಬಸವ ನಿನ್ನಿಯನ ನಮ್ಮನ್ನ ಬುಟ್ಟು ಹೋದ್ಲಲ್ಲೋ ಕಲ್ಯಾಣಿ…’ ಹೆಂಡತಿಯ ಮುಂಗೈಗೆ ನಮಸ್ಕರಿಸುವಂಗ ಬಗ್ಗಿದ. ‘ಮತ್ತೆ ಏನನ ಕೆಟ್ಟ ಕನ್ಸು ಬಿತ್ತನಪ? ಬೆಳಗಾ ಮುಂಜಾಲಿ ಬಿದ್ದ ಕನ್ಸು ಖರೇವು ಆತಾವ ಅಂತ ಮಂದಿ ನಂಬ್ತಾರ. ಬಸ್ವಣ್ಣಪ್ಪ ಬಂದು ಏನಂದ ಈ ಸಲ?’ ‘ನಾ ಆತನ ಕೈಗಿ ಸಿಗ್ಲಿಲ್ಲ ಈ ಸಲ. ಓಡಿ ಬಂದ್ಬುಟ್ಯ…’ ಹರಳಯ್ಯಗ ಮತ್ತೆ ಕನಸ ಕೊನೆ ನೆನಪಾಗಿ ಸುಳಿವ ತಂಗಾಳಿಯಾಗೂ ಮೈಯೆಂಬೊ ಮೈಯಿಂದ ಬೆವರು ಸೆಲೆಯೊಡಿಯಿತು. ‘ಓಡಿ ಬರೋದು ಬಂದಿ, ಅಲ್ಲೆ ಕಾಲ್ದಸಿಗೆ ಮಕ್ಕಂಡಿದ್ದ ಚೆನ್ನ ಕಾಣ್ಲಿಲ್ಲೇನು ನಿನ್ನ ಕಣ್ಣಿಗೆ?’ ಕಲ್ಯಾಣಮ್ಮ ಗಂಡನ ಮುಖವನ್ನೊಮ್ಮೆ, ಚೆನ್ನನ ಮೂತಿಯನ್ನೊಮ್ಮೆ ನೋಡಿದಳು. ‘ಯವ್ವಾಬೇ ಅಪ್ಪನ ಕಣ್ತುಂಬ ಬಸ್ವಣ್ಣಪ್ಪನೇ ತುಂಬಿಕೊಂಡಾನ. ಚೆನ್ನ ಹೆಂಗ ಕಾಣ್ತಾನ?’ ‘ಹಡದಪ್ಪ ಶೀಲವಂತ, ಕೋಡುಮಾಡ ಹೊತ್ತಲ್ಲ, ಗೊತ್ತಲ್ಲ ಇದು. ಸೊಲುಪು ಮೆಲ್ಕ ಮಾತಾಡು. ಸಮೀಪದ ಶರಣ್ರು ನಮ್ಮ ಕಲಾವುಲಿ ಕೇಳಿ ಎದ್ದು ಬುಟ್ಟಾರು’ ಕಲ್ಯಾಣಮ್ಮ ಪಿಸುಗುಟ್ಟಿದಳು. ‘ಬಸ್ವಣ್ಣಪ್ಪ ತನ್ನ ಕಾಲಾಗಿನ ಚಮ್ಮಾವುಗೆಗಳನ್ನ ನನಗ ಕೊಡಾಕ ಬಂದ.

ಬರಿಗಾಲಿಲೆ ಹೊಂಟಿದ್ದ ನನ್ನ ಕಂಡು ಕನಿಕರಪಟ್ಟ. ನಾ ಎಂಥ ಶರಣ ಅಂಬದು ನಿಮಗ ಗೊತ್ತೈತಲ್ಲ? ಅದ್ಕ ನಾ ಆತನ ಚಮ್ಮಾವುಗೆ ಇಸ್ಗಳ್ಳಲಾರ್ದ ಓಡಿಬಂದ್ಯ…’ ನೆನಪಾದ ಕನಸ ಪುಟ ತೆರೆದ. ‘ಯಾಕ, ನಿನ್ನಂಗ ಆತ ತನ್ನ ಮೈಮ್ಯಾಲಿನ ಚರ್ಮ ಸುಲ್ದು ಚಮ್ಮಾವುಗೆ ಮಾಡಿಕೊಡ್ತೀನಿ ಅಂತ ನಿನಗ ಅನ್ಲಿಲ್ಲೇನು?’ ಶೀಲವಂತ ಅಪ್ಪನನ್ನು ನೋಡಿ ಒಳಗೊಳಗೆ ನಕ್ಕ. ‘ಅದ್ನೂ ಅಂದ. ನಿನಗೆಂಗ ಗೊತ್ತಾತಿ, ಶೀಲವಂತ? ನನಗ ನಿನ್ನ ಮಾತು ಕೇಳಿದ್ರ ಆಶ್ಚರ್ಯ ಆಗತ್ತ. ನನ್ನ ಮನ್ಸಿನ್ಯಾಗಿರೋ, ಕನಸಿನ್ಯಾಗಿರೋ ಮಾತುಗಳೆಲ್ಲ ನಿನಗ ಕೇಳಿಸಿಬುಡ್ತಾವ. ಈ ಚಮ್ಮಾವುಗೆ ಬ್ಯಾಡಂದ್ರ, ನನ್ನ ಮೈಮ್ಯಾಲ ಇರೋ ಚರ್ಮನ ನಿಂದು. ಇದ ಚರ್ಮದಾಗ ನಿನಗ ಚಮ್ಮಾವುಗೆ ಮಾಡ್ಸಿ ಕೊಡ್ತೀನಿ. ಆವಾಗನ ಹಾಕ್ಕೆಂತಿಯಲ್ಲ ಅಂತ ಕೇಳಿದ, ನನ್ ತಂದಿ. ಥೋ ಥೋ ನನ್ ದೇವ್ರಿಗೆ ನಾ ಬ್ಯಾಡ ಆದ್ನ್ಯೋ ಏನೋ? ಬಸವರಸನ ಬಾಯಾಗ ಅಂಥ ಮಾತು?’ ಆಕಾಶದತ್ತ ಮುಖಮಾಡಿ, ಒಂದೊಂದೆ ಮರೆಯಾಗುತ್ತಿದ್ದ ಚುಕ್ಕೆಗಳನ್ನು ದಿಟ್ಟಿಸಿನೋಡಿದ. ‘ಇಡೀ ಕಲ್ಯಾಣದ ಮಂದಿಗಿ ಚಮ್ಮಾವುಗೆ ಮಾಡಿಕೊಡೋ ನೀನ ಬರಿಗಾಲಿಲೆ ತಿರುಗಾಡ್ತಿ ಅಂತ ಬಸ್ವಣ್ಣಪ್ಪ ಹಂಗ ಅಂದಿರ್ಬಕು. ಅದು ಅವ್ರ ದೊಡ್ಡಗುಣ. ಆದ್ರ ಅವ್ರ ಮಕ್ಳು ಬಸ್ವಣ್ಣಪ್ಪನಂಗ ಇಲ್ಲ. ತಮ್ಮಪ್ಪ ಭಕ್ತಿಭಂಡಾರಿ. ಬಿಜ್ಜಳನ ಮಂತ್ರಿ ಅಂತ ಧಿಮಾಕು ಮಾಡ್ತಾರ. ಮೊನ್ನಿ ನಾ ಹರ್ಕಂಡು ಬಂದ ಮಾವಿನ ಹಣ್ಣನ್ನ ಕೊಡಾಕ ಹೋದ್ರ ದೂರ ಸರದ್ರು. ಹಣ್ಣನ್ನ ಕೈಲಿಂದ ಮುಟ್ಲಿಲ್ಲ. ಅವ್ರ ವೇಷ, ಭೂಷಣ ನೋಡ್ಬಕು. ಎಲ್ಡು ಕಣ್ಣು ಸಾಲಂಗಿಲ್ಲ! ನಮ್ಮಂಥೋರ ಜತಿ ಆಡಾಕು ಹಿಂದಮುಂದ ನೋಡ್ತಾರ. ಅರಸರ ಮಕ್ಕಳ ಕುಡನ ಅವ್ರ ಆಟ, ಪಾಠ. ಅದ್ಕ ನನಗ ನೀನ ಗುರು. ನೀನ ತಂದಿ, ನೀನ ಕೂಡಲಸಂಗಯ್ಯ…

‘ ಶೀಲವಂತ ನೆಲದ ಮ್ಯಾಲ ಮಕ್ಕಂಡಿದ್ದ ಚೆನ್ನನ ಮ್ಯಾಲ ಕೈಯಾಡಿಸುತ್ತ ನೆಲದ ಮ್ಯಾಲ ಕೈಯ ಬೆರಳಿಂದಲೇ ಕಾಣದ ಚಿತ್ರ ಬರೆಯತೊಡಗಿದ. ‘ಅಯ್ ಹಡದಪ್ಪ, ನಿನ್ನಿ ಮಧ್ಯಾಹ್ನ ಚಿತ್ರ ಬರಿದಿದ್ದೆಲ್ಲ. ಆ ಚಿತ್ರದಾಗ ಎಲ್ಡು ಹುಡಗ್ರು ದೂರ ನಿಂತಿದ್ರಲ್ಲ. ಮತ್ತೊಂದು ಹುಡುಗ ಹಣ್ಣು ಕೊಡಾಕ ಹೋಗಿದ್ನಲ್ಲ. ಅದ್ಕ ಆ ಚಿತ್ರ ಬರ್ದೇನು? ಆದ್ರೂ ಅವ್ರು ದೊಡ್ಡೋರ ಮಕ್ಳು. ಅಂಥವರ ಬಗ್ಗಿ ಹೀಂಗ ಮಾತಾಡಬಾರ್ದು…’ ಕಲ್ಯಾಣಮ್ಮ ಹೊರಸಿನ ಮ್ಯಾಲಿಂದ ಬಗ್ಗಿ ಮಗನ ತಲೆ ನೇವರಿಸಿದಳು. ‘ನಮ್ಗ ಬಸ್ವಣ್ಣಪ್ಪನೋರಲ್ಲನು ಇಷ್ಟು ಗೌರವದಿಂದ ಬದುಕಾಕ ಕಲ್ಸಿಕೊಟ್ಟೋರು? ಕಾಯಕವೇ ಕೈಲಾಸ ಅಂತ ಹೇಳಿದೋರು? ಎಲ್ಲ ಶರಣ್ರು ಸಂಗಮನಾಥನ ಸಮಾನ್ರು ಅಂತ ಹೇಳಿದ್ದು. ಅವ್ರು ನಮ್ಮಂಥೋರ ಬಾಳ ಬೆಳಗಿದ ದಿವ್ಯ ಜ್ಯೋತಿ…’ ಹರಳಯ್ಯ ಮಗನತ್ತ ನೋಡುತ್ತ ಹೇಳಿದ. ‘ಅಷ್ಟ ಅಲ್ಲ. ಹೆಣ್ಮಕ್ಳು-ಗಣಮಕ್ಳು ಸಮಾನ ಅಂತ ಹೇಳ್ಯಾನ ಬಸ್ವಣ್ಣಪ್ಪ. ಸಮಾನತೆಯ ಕ್ರಾಂತಿ ಮಾಡ್ಯಾನ. ನುಡಿದಂಗ ನಡದಾನ. ಅಂಥೋರ ಬಗ್ಗಿ ಹಂಗ ಮಾತಾಡಬಾರ್ದು. ತಪ್ಪಾತಿ ಅಂತ ಬೇಡಿಕೊಂಡು ಬುಡು ಹಡದಪ್ಪ…’ ಕಲ್ಯಾಣಮ್ಮ ಮಗನಿಗೆ ಆನಿಕೊಂಡೇ ಕೆಳಗ ಕುಂತಳು. ಶೀಲವಂತ ತಲಿ ಎತ್ತಿ ಮಾತಾಡ್ಲಿಲ್ಲ. ತಾಯಿಯ ತೊಡಿಮ್ಯಾಲ ತಲಿಯಿಟ್ಟು ತಿಳಿ ಕಪ್ಪನು ಬಟ್ಟಿ ಹಾಸಿದಂತೆ ಕಂಡ ಆಕಾಶದತ್ತ ನೋಡಿದ. ‘ಇನ್ನೊಂದು ಅರ್ಧ ತಾಸಿಗೆ ಬೆಳಕು ಹರಿಯುತ್ತ. ಸೊಲುಪು ಅಡ್ಡಾಗು ಮಾರಾಯ. ಬೆಳತನಕ ಬರೀ ಹಿರೇನಾಟಗ ಆತಿ. ನಿದ್ದಿ ಮಾಡಿಲ್ಲ ನೀ; ಕಲ್ಯಾಣಮ್ಮ ಗಂಡನನ್ನೇ ದುರುಗುಟ್ಟಿ ನೋಡಿದಳು.

‘ಹಂಗಲ್ಲ ಕಲ್ಯಾಣಿ, ಬಸ್ವಣ್ಣಪ್ಗ ನಾ ಏನಾದ್ರೂ ಸೇವಾ ಮಾಡ್ಬಕು. ನಾ ಅಂದುಕೊಂಡಿದ್ದನ್ನ ಮಾಡ್ಬಕು’ ಹರಳಯ್ಯ ಮತ್ತೆ ಬಡಬಡಿಸುತ್ತ ಹೊರಸಿನ ಮ್ಯಾಲ ಉದ್ದೂಕ ಕಾಲುಚಾಚಿದ. ಚೆನ್ನಗ ಇವ್ರ ಕಾಟ ತಡಿಯಾಕ ಆಗ್ಲಿಲ್ಲೊ ಮೈಜಾಡಿಸುತ್ತ ಎದ್ದು ಜಾಲಿಗಿಡದ ಬುಡದಲ್ಲಿ ಮಕ್ಕಂಡ. ಕಲ್ಯಾಣಮ್ಮ ಮಗನ ಹೆಗಲಮ್ಯಾಲ ಕೈಹಾಕ್ಕೆಂಡು ಹೋಗಿ ಚಾಪೆ ಮ್ಯಾಲ ಮಕ್ಕಂಡಳು. ಚೆನ್ನ ಕಾಲುಸುಟ್ಟ ಬೆಕ್ಕಿನಗತೆ ಅಕ್ಕಡಿ ಇಕ್ಕಡಿ ತಿರುಗಾಡುತ್ತ ಒಂದೇ ಸವನ ಬೊಗಳತೊಡಗಿದ. ಹೊರಸಿನ ಸಮೀಪ ಬಂದು ಕುಂಯ್ಗುಟ್ಟಿದ. ಚಾಪೆ ಸನೇಕ ಹೋಗಿ ‘ಬೌಂವೌ’ ಅಂತ ಒದರಿದ. ಪೂರ್ವದ ಕಡೆ ಆಗ್ಲೆ ಸೂರ್ಯ ಹುಟ್ಟಾಕಹತ್ತಿದ್ದ. ಜಾಲಿಗಿಡದಾಗಿನ ಗುಬ್ಬಿ, ಗೊರವಂಕ, ಕಾಗೆಗಳು ಮುಂಜಾನೆಯ ಸುಪ್ರಭಾತ ಹಾಡುತಿದ್ವು. ಮೂವರು ದಿಗ್ಗನೆ ಎದ್ದು ಕುಂತು ಕಣ್ಣು ತಿಕ್ಕಿಕೊಂಡ್ರು. ‘ಇಷ್ಟು ತಡಮಾಡಿ ಎಂದೂ ಎದ್ದಿರ್ಲಿಲ್ಲ’ ಅಂತ ಮನಸ್ಸಿನಲ್ಲೇ ತಮ್ಮನ್ನು ತಾವು ಬೈಯ್ದುಕೊಂಡ್ರು. ಕೈಯಲ್ಲಿ ಏನೋ ಹಿಡಿದು ರಾಜಭಟರು ಗುಡಿಸಲ ಸಮೀಪದ ಜಾಲಿಯ ಗಿಡದ ಮರೆಗೆ ಬರುವುದು ಕಾಣಿಸಿತು. ಹರಳಯ್ಯ, ಕಲ್ಯಾಣಮ್ಮ ಗಾಬರಿಯಲ್ಲೇ ಹಾಸಿದ ಹಾಸಿಗೆಗಳನ್ನ ಕೈಯಿಂದಲೇ ಉಂಡೆಮಾಡಿ ಹೊರಸಿನ ಕೆಳಗೆ ದಬ್ಬಿದರು. ‘ಬಸವರಸ ಏನ ಕಳಿಸಿರ್ಬಕು? ನನ್ನ ಕನಸಿನ್ಯಾಗ ಕಂಡಿದ್ದು ನಿಜವಾಗಿ ಬುಡ್ತದೋ ಏನೋ? ಬಸವರಸ ತಂದಿ…’ ಹರಳಯ್ಯ ಎಲ್ಡೂ ಕೈಮುಗ್ದು ನಿಂತ. ಕಲ್ಯಾಣಮ್ಮ, ಶೀಲವಂತ ರಾಜಭಟರು ಸಮೀಪ ಬರುತ್ತಿದ್ದುದನ್ನೇ ತದೇಕ ಚಿತ್ತದಿಂದ ದಿಟ್ಟಿಸಿದರು. ಸೂರ್ಯನ ಬಂಗಾರದ ಕಿರಣಗಳು ಅಂಗಳದ ಮ್ಯಾಲ ರೇಷ್ಮೆ ಸೀರೆ ಹಾಸಿದವು.

‘ಶರಣ ಹರಳಯ್ಯ, ಬಿಜ್ಜಳ ಮಹಾಪ್ರಭುಗಳ ಅರಮನ್ಯಾಗ ಇದ ಬರೋ ಹುಣ್ಣಿಮಿಗಿ ಮಂಗಳ ಕಾರ್ಯ ನಡಿತೈತಂತ. ಮಧುಮಕ್ಕಳಿಗೆ ಭಾಳ ಚೆಂದದ ಚಮ್ಮಾವುಗೆ ಮಾಡಿಕೊಡ್ಬಕು ಅಂತ ರಾಜರ ಅಪ್ಪಣೆ ಆಗೈತಿ…’ ಹೊರಸಿನ ಮ್ಯಾಲ ತಾವು ತಂದಿದ್ದ ಬಟ್ಟೆ, ಬರೆ, ಪಡಿ ಪದಾರ್ಥ ಇಟ್ಟು ಮತ್ತೆ ಅರಮನೆಯತ್ತ ನಡೆದರು. ಹರಳಯ್ಯಗ ಹೋದ ಜೀವ ಸಟಕ್ಕನ ಬಂದಂಗ ಅನಿಸಿತು. ಬೆಳಗಿನ ಮುಖ ಮಜ್ಜನ ಮುಗಿಸಿದ ಹರಳಯ್ಯ, ಹಣಿಮ್ಯಾಲ ಢಾಳಾಗಿ ಮೂರು ಬಳ್ಳು ವಿಭೂತಿ ಹಚ್ಚಿದ. ‘ಬಸವ… ಬಸವ…’ ಎನ್ನುತ್ತಲೇ ಬಂದ. ಚೆನ್ನ ಬಾಲ ಅಲ್ಲಾಡಿಸುತ್ತ ಈಶ್ವರಲಿಂಗದ ಎದುರು ಬಸ್ವಣ್ಣನಗತೆ ಉದ್ದೂಕ ನಾಲಿಗೆ ಚಾಚಿ ಮುಂಗಾಲು ಊರಿ ಕುಂತ. ‘ಅಯ್ಯ ನನ ಹಡದ ಚೆನ್ನ, ನಿನಗ ಏನನ ತಿನ್ನಾಕ ಹಾಕೋದನ್ನ ಇವತ್ತು ಮರ್ತುಬುಟ್ಯ’ ತನ್ನಷ್ಟಕ್ಕೆ ಅಂದೆ ಅಂತ ತಿಳಕಂಡ. ಶೀಲವಂತನ ಕಿವಿಗೆ ಅದ್ಹೆಂಗ ಬಿತ್ತೊ, ಕೈಯಲ್ಲಿ ಹಿಡಿದ ಕುಂಚವನ್ನ ಕೆಂಪು ಬಣ್ಣದಲ್ಲಿ ಅದ್ದುತ್ತ ಮಾತಾಡಿದ. ‘ನಿನಗ ಬಿಜ್ಜಳನ ಆಜ್ಞೆ ಆದಮ್ಯಾಲ, ಆತನ ಪಡಿ ಪದಾರ್ಥ ಬಂದ ಮ್ಯಾಲ ಮುಗೀತಿ. ನನ್ನ, ಅವ್ವನ್ನ ಮರ್ತುಬುಡ್ತಿ. ಇನ್ನ ಈ ಮೂಕಪ್ರಾಣಿ ಯಾವ ಲೆಕ್ಕ?’ ಕಾಲು ಹಿಂದಕ್ಕ ಚಾಚಿ, ಬೆನ್ನು ಬಗ್ಗಿಸಿ ಚಿತ್ರ ಬರೆಯತೊಡಗಿದ್ದ. ಚೆನ್ನನಿಗೆ ಹಾಕಲೆಂದು ಕಲ್ಯಾಣಮ್ಮನೇ ನವಣೆ ಅನ್ನದ ಕಣ್ಣೆಯನ್ನು ಹಿಡಿದು ಹೊರಬಂದಳು. ಕುರುಪಿ, ಇಕ್ಳ, ಮೊಳೆ, ಕೊಡತಿ, ಮಸೆಗಲ್ಲು, ಕಟ್ಟಿಗಿ, ಚರ್ಮದ ನಾಲ್ಕಾರು ತುಣುಕುಗಳ ಮಧ್ಯೆ ಎದ್ದೇಳುವಂಗ ತುದಿಗುಂಡಿಲೆ ಕುಂತ ಗಂಡನನ್ನ ನೋಡಿದಳು.

‘ಅಯ್ ಮಾರಾಯ, ರಾಜನ ಮನ್ಯಾಗ ಲಗ್ನ ಇರೋದು ಇನ್ನಾ ಹದಿನೈದು ದಿನಕ್ಕ. ಇವತ್ತು ಮಧ್ಯಾಹ್ನನ ತಾಳಿ ಕಟ್ತಾರ ಅಂಬಂಗ ಕುಂಡಿ ನೆಲಕ್ಕ ಹಚ್ಚಿಕುಂತ್ರ ಎಲ್ಲಿ ತಡ ಆಗುತ್ತಂತ ತುದಿಗುಂಡಿಲೆ ಕುಂತೀಯಲ್ಲ? ಅವಸರ ಮಾಡ್ಬ್ಯಾಡ. ಮೊದ್ಲಾ ಮಾರಾಜ್ರು. ಅಂದ ಚೆಂದದ ಚೆಮ್ಮಾವುಗೆ ಬೇಕಂತ ಹೇಳಿ ಕಳಿಸ್ಯಾರ. ಮೈಮ್ಯಾಲ ಗ್ಯಾನ ಇಟಗಂಡು ಚಮ್ಮಾವುಗೆ ಮಾಡು’ ಚೆನ್ನನಿಗೆಂದೇ ಇಟ್ಟಿದ್ದ ಬಟ್ಟಲಲ್ಲಿ ಅನ್ನದ ಕಣ್ಣೆಹಾಕಿ, ‘ಕುರ್ರ್ಯೋ… ಕುರ್ರ್ಯೋ… ಚೆನ್ನ ಬಾ…’ ಅಂತ ಕರೆದಳು. ‘ಹಿಂದಾಗಡೆ ಹೋಗಿ ಬಸ್ವಣ್ಣಪ್ಗ ಶರಣು ಶರಣಾರ್ಥಿ ಅಂತ ಹೇಳಿ ಆತನ ಭಾರಾನ ಇಳಿಸಿಬುಡಮು. ನೀ ಚಿಂತಿ ಮಾಡಬ್ಯಾಡ ಮಾರಾಯ’ ಗಂಡನಿಗೆ ಎಚ್ಚರಿಸುತ್ತ ಒಳಹೋದಳು. ಶೀಲವಂತ ಅಪ್ಪನನ್ನೇ ಕೆಲ ಹೊತ್ತು ದಿಟ್ಟಿಸಿನೋಡಿ, ತಲೆತಗ್ಗಿಸಿ ಚಿತ್ರ ಬರೆಯುವಲ್ಲೇ ತಲ್ಲೀನನಾದ. ಚೆನ್ನ ಅರ್ಧಮರ್ಧ ತಿಂದು ಜಾಲಿಗಿಡದತ್ತ ಓಡಿದ. ಹದ್ದೊಂದು ಗುಬ್ಬೀನ ಕಚ್ಚಿಹಿಡಿಯಲು ಹೋಗಿ ಕೊಕ್ಕು ಜಾರಿ ಕೆಳಗ ಬೀಳಿಸಿತು. ತನ್ನ ಮುಂಗಾಲಿನಿಂದ ಗುಬ್ಬೀನ ಚೆನ್ನ ಅತ್ತಿತ್ತ ಹೊರಳಿಸಿದ. ಅದರ ಎದಿಗಿ ಮೂತಿ ಇಟ್ಟು ರಮಿಸಿದ. ಗುಬ್ಬಿ ಹಿಂಡು ಕಬಾಕಬಾ ಮಾಡಿತು. ಗುಬ್ಬಿ ಕೊಕ್ಕಿಗೆ ಮುತ್ತುಕೊಡುವಂಗ ಬಗ್ಗಿ ಮತ್ತೆ ಎರಡ್ಮೂರು ಸಲ ಅತ್ತಿತ್ತ ಹೊರಳಿಸಿದ. ಗುಬ್ಬಿ ನೆಲಬಟ್ಟು ಏಳಲಿಲ್ಲ. ಮೇಲಕ್ಕೆ ಹಾರಲಿಲ್ಲ. ತಲೆತಗ್ಗಿಸಿದ ಚೆನ್ನ ಬಾಲ ಮುದುರಿಕೊಂಡು ಕುಂಯ್ ಕುಂಯ್ ಅನ್ನುತ್ತ ಬಂದು ಹರಳಯ್ಯನ ಮುಂದ ಕುಂತ. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದ. ಹತ್ತಾರು ಶರಣರು ತಮ್ಮ ತಮ್ಮ ಕಾಯಕಕ್ಕೆ ಹೊಂಟಿದ್ರು. ಜಾಲಿಗಿಡದ ನೆರಳು ಕಿರಿದಾಗುತ್ತಿತ್ತು. ಸತ್ತ ಒಂಟಿ ಗುಬ್ಬಿಯ ಸಮೀಪ ಒಂದೆರಡು ಗುಬ್ಬಿಗಳು ಇನ್ನಾ ಕುಂತು ಆಡಿ ಆಡಿ ಅಳ್ತಿದ್ವು. ಕಲ್ಯಾಣಮ್ಮ ಮುಸುರಿ ನೀರನ್ನ ಚೆಲ್ಲಲು ಹೊರಬಂದಳು.

ಮಗ, ಗಂಡನತ್ತ ಕಣ್ಣು ಕಿರಿದುಮಾಡಿ ನೋಡುತ್ತ, ಕೈಯಲ್ಲಿದ್ದ ಮುಸುರಿ ನೀರಿದ್ದ ಪಾತ್ರೆಯೊಂದಿಗೆ ಗುಂಡಿನ ಕಡೆ ನಡೆದಳು. ನೀರು ಚೆಲ್ಲಿ ಗುಡಿಸಲಿನತ್ತ ಬಂದಳು. ಬಿಜ್ಜಳ ಮಾಹಾರಾಜ ಹೇಳಿದ್ದ ಚಮ್ಮಾವುಗೆ ಮಾಡಲು ತೊಗಲು ಕತ್ತರಿಸುತ್ತ ಹರಳಯ್ಯ ಕುಂತಿದ್ದ. ‘ಶರಣ್ರು ಅಂದ್ರನ ಹೀಂಗ. ಕಾಯಕದಾಗ ನಿರತರಾದ್ರ ಸಾಕು ಗುರು, ಲಿಂಗ, ಜಂಗಮದ ಹಂಗು ತೊರ್ದುಬುಡ್ತಾರ…’ ಪಿಸಿಪಿಸಿ ಅನ್ನುತ್ತ ಒಳಹೊರಟವಳ ಕಿವಿಗೆ ‘ಬಸವಾ, ಬಸವಾ…’ ದನಿ ಕೇಳಿ ಹೊರಳಿ ನೋಡಿದಳು. ‘ಯವ್ವಾ ಅಪ್ಗ ನಿನ್ನಿ ಸತ್ತ ಬೆಕ್ಕು ಬಸವ ಭಾಳ ಕಾಡಾಕ ಹತ್ತೈತಿ. ಕೆಲಸ ಮಾಡ ಹೊತ್ತಿನ್ಯಾಗ ಆತನ ತೊಡಿಮ್ಯಾಲನ ಬಂದು ಮಕ್ಕಂಡು ಬುಡ್ತಿತ್ತು. ನಾ ಚಿತ್ರ ಬರೆಯೋ ಈ ಬಟ್ಟಿ ಮ್ಯಾಲನ ಬಂದು ಕುಂತ್ಗಂಡು ಸುದ್ದಿ ಹೇಳೋರಗತೆ ನನ್ನ ನೋಡ್ತಿತ್ತು…’ ಶೀಲವಂತ ಕೈಯಲ್ಲಿದ್ದ ಬ್ರಷ್ನ್ನ ಜ್ವಾಪಾನದಿಂದ ಮುಂದ್ಕ ಹಿಡಿದು ಅವ್ವನತ್ತ ನೋಡಿದ. ‘ನಾ ಹೊರಗ ಬರಾಕ ಕಳ್ಳಿ ಆಗಿದ್ಯ. ಕಾಲು ಕಾಲಾಗ ಬರ್ತಿದ್ಲು’ ಕಲ್ಯಾಣಮ್ಮ ಚೆನ್ನನತ್ತ ಕರುಣೆಯಿಂದ ನೋಡಿದಳು. ಚೆನ್ನ ಮೂತಿಲಿಂದ ಕುತ್ತಿಗೆ ಕೆಳಭಾಗ ನೆಕ್ಕಿಕೊಳ್ಳುತ್ತಿದ್ದ. ‘ನನಗ ಬಸ್ವಣ್ಣಪ್ಪ ನೆಪ್ಪಾದ. ಅದ್ಕ ಬಸವಾ, ಬಸವಾ ಅಂದ್ಯ. ಬಸ್ವಣ್ಣಪ್ಪಗ ನಾ ನನ್ನ ಮನಸಿನ್ಯಾಗ ವಚ್ನಾ ಕೊಟ್ಟುಬುಟ್ಟೀನಿ. ಕೊಟ್ಟ ವಚನ ಪಾಲಿಸೋದು ಶರಣರ ಧರ್ಮ’ ಹರಳಯ್ಯ ಕುರುಪಿಲಿಂದ ಚರ್ಮದ ತುಣುಕು ಕತ್ತರಿಸುತ್ತ ಹೇಳಿದ. ‘ಸದಾ ಸಿವುಗ ಅದ ಧ್ಯಾನಂತ. ನೀ ಏನು ಬಸ್ವಣ್ಣಪ್ಪನ ಮುಂದ ಹೇಳಿಯನು? ನನ್ನ ತೊಡೆಯ ಚರ್ಮದಿಂದನ ಚಮ್ಮಾವುಗೆ ಮಾಡಿಕೊಡ್ತೀನಿ ಅಂತ. ಆಗ್ಲೇ ಹೇಳಿನಲ್ಲ. ಹಿಂದಾಗಡೆ ಹೋಗಿ, ಅವ್ರಿಗೆ ನಾವಾ ಮೊದ್ಲು ‘ಶರಣು-ಶರಣಾಥರ್ಿ’ ಹೇಳಿಬರಾಣಂತ.

ಸುಮ್ಕ ಇಲ್ಲದ ವಿಚಾರಮಾಡಿ ತಲಿ ಕೆಡಿಸಿಗಬ್ಯಾಡ ಮಾರಾಯ’ ಕಲ್ಯಾಣಮ್ಮ ಗುಡಿಸಿಲ ಒಳಗ ಹೋಗುತ್ತ ಪಿಸಿಪಿಸಿ ವಟಗುಟ್ಟಿದಳು. ಕೈಯಲ್ಲಿದ್ದ ಪಾತ್ರೆ ಗುಡಿಸಲ ಗೋಡೆಗೆ ಬಡಿಯಿತೋ ‘ಜಣ್’ ಅಂತ ಗಂಟೆ ಬಾರಿಸಿದಂತ ಶಬ್ದ ಕೇಳಿಬಂತು. ಶೀಲವಂತ ತಾನು ಬರೆಯುತ್ತಿದ್ದ ಚಿತ್ರವನ್ನೊಮ್ಮೆ ಎದ್ದು ನಿಂತು ಆ ಕಡೆ ಈ ಕಡೆ ಹೊರಳಿ ನೋಡಿದ. ಮತ್ತೆ ಚಿತ್ರಕ್ಕೆ ರೂಪ ನೀಡತೊಡಗಿದ. ಚೆನ್ನನಿಗೆ ಚೊಣಚಿ ಕಡಿಯಿತೋ, ಕೀರಲು ದನಿಯಲ್ಲಿ ಕುಂಯ್-ಕುಂಯ್ ಅನ್ನುತ್ತ ಎದ್ದು ಮೈಜಾಡಿಸಿಕೊಂಡ. ಬೆನ್ನಿಗೆ ಮೂತಿಲಿಂದ ಎಕರ್ಲಾಡಿ ತಿಕ್ಕಿಕೊಂಡ. ಹರಳಯ್ಯ ‘ಬಸವಾ…’ ಅಂತ ಕೆಟ್ಟ ದನೀಲೆ ಚೀರಿದ. ಕೈಯಲ್ಲಿದ್ದ ಕುರುಪಿ ಕೆಳಗ ಬಿತ್ತು. ಅದರ ತುದಿಗೆ ರಕ್ತ ಮೆತ್ತಿತ್ತು. ತೊಡೆಯ ಭಾಗದಲ್ಲಿ ಚೋಟುದ್ದ ಧೋತರ ಹರಿದಿತ್ತು. ದಳದಳ ರಕ್ತ ಸುರಿಯುತ್ತಿತ್ತು. ಚೆನ್ನ ಅಬ್ಬರಿಸಿ ಬಂದು ಹರಳಯ್ಯನ ನೆಕ್ಕಿದ. ಕುರುಪಿಯ ಮೇಲೂ ನಾಲಿಗಿ ಆಡಿಸಿದ. ಹರಳಯ್ಯನನ್ನೇ ಅಳುವ ಕಂಗಳಲ್ಲಿ ದಿಟ್ಟಿಸಿನೋಡಿದ. ಶೀಲವಂತ ದಿಗ್ಗನೆ ಎದ್ದು ಅಪ್ಪನತ್ತ ಓಡಿಬಂದ. ಕಲ್ಯಾಣಮ್ಮ ಕೈಯಲ್ಲಿ ಸೌಟು ಹಿಡಿದೇ ಹೊರಬಂದಳು. ‘ಅಯ್ ಮಾರಾಯ, ಎಂಥ ಅನಾಹುತ ಮಾಡಿಕೊಂಡಿ. ನೋಡಿದ ಶರಣ್ರು ನಿನಗ ಎಂಥ ಬುದ್ಧಿಗೇಡಿ ಅಂತ ಬಾಯಿಗಿ ಬಂದಂಗ ಬೈಯ್ತಾರ. ಕೆಲಸದಾಗನ ನೀ ಮುಳುಗಿರ್ಬಕು ಅಂತ ತಿಳಕಂಡಿದ್ಯ. ಆದ್ರ ನಿಂದ ಯೋಚ್ನಿ ಬ್ಯಾರೆನ ಐತಿ’ ಕೈಯಲ್ಲಿದ್ದ ಸೌಟನ್ನ ಕೆಳಗ ಒಗೆದ ಕಲ್ಯಾಣಮ್ಮ, ಗಂಡನ ತೊಡೆಯಿಂದ ಇಳಿಯುತ್ತಿದ್ದ ರಕ್ತವನ್ನು ಸೆರಗಿನಿಂದ ಒತ್ತಿಹಿಡಿದಳು. ಬೆರಳು ಗಾತ್ರದ ಗಾಯಕಂಡು ಹೌಹಾರಿದಳು. ‘ಶರಣ್ರಿಗೆ ಇದು ಅಪವಾದ. ಬ್ಯಾರೆ ಜೀವಿಗಳನ್ನ ಹಿಂಸಿಸುವುದು ಎಷ್ಟು ಕೆಟ್ಟದ್ದೋ, ನಮ್ ಜೀವ ಹಿಂಸಿಸಿಕೊಳ್ಳೋದು ಅದಕ್ಕಿಂತ ಕೆಟ್ಟದು.

ಹೀಂಗ ಮಾಡಿದ್ರ ಶರಣ ಸಂಪ್ರದಾಯನ ಮುರಿದಂಗ…’ ಶೀಲವಂತ ಅಪ್ಪನ ಮುಖದ ಮ್ಯಾಲ ತನ್ನ ಅಂಗೈಯಿಂದ ಒರೆಸಿದ. ‘ಗಂಡನೆಂಬ ಮಮಕಾರ ಬುಟ್ಟು ಹೇಳ್ತೀನಿ ಕೇಳಿಲ್ಲಿ. ನಿನ್ನ ಮೈ ಚರ್ಮದಿಂದ ಬಸ್ವಣ್ಣಪ್ಪಗ ಚಮ್ಮಾವುಗೆ ಮಾಡಿಕೊಟ್ಟಿ ಅಂದ್ರ ಅದು ಕಲ್ಯಾಣದ ಕೇಡು ನೋಡಯ್ಯ. ಶರಣರ ಅರಿವಿನ ತಮಂಧ ಕೇಳಯ್ಯ. ಬಯಲಾದ ಬಸವಗೆ ದೇಹ ಏಕಯ್ಯ. ನಿನ್ನ ದೇಹವ ಅಪರ್ಿಸಲೇಕಯ್ಯ. ನನ್ನಾಣೆ, ಕಲ್ಯಾಣದ ಶರಣರಾಣೆ. ಬಸವನಾಣೆ. ಅರಿವಿನ ಬುತ್ತಿ ವಚನದ ಮೇಲಾಣೆ. ನಿಮ್ಮ ಮೈ ಚರ್ಮ ಮತ್ತೊಮ್ಮೆ ಕೊಯ್ದರೆ ಕಲ್ಯಾಣದ ಮರಣ ನೋಡಾ…’ ಕಲ್ಯಾಣಮ್ಮ ಗಂಡನ ಕಾಲಿಗೆ ಹಣಿಹಚ್ಚಿ ಬೋರಾಡಿ ಅತ್ತಳು. ಚೆನ್ನ ಆಕಾಶದತ್ತ ಮೂತಿಮಾಡಿ ‘ಬೌಂವೌ’ ಅಂತ ಕೆಟ್ಟ ದನಿಲೆ ಒದರಿದ. ಈ ದನಿಗೆ ಬೆದರಿದ ಸೂರ್ಯ ಆಕಾಶದ ಏಣಿಯ ಬೇಗ ಬೇಗನೆ ಹತ್ತತೊಡಗಿದ. ಉರಿಯ ಗಾಳಿ ಬೀಸಿತು. ಶೀಲವಂತ ಬರೆದ ಚಿತ್ರದ ಬಟ್ಟೆ ಹಾರಿ ಬಂದು ಹರಳಯ್ಯನ ಮುಂದ ಅಂಗಾತ ಬಿತ್ತು. ಮೈಮ್ಯಾಲ ಒಂದಿಂಚೂ ಬಿಡದಂಗ ಸುಲಿದ ಚರ್ಮ. ರಕ್ತ ಸುರಿಯುತ್ತಿದ್ದ ದೇಹ ಹೊತ್ತ ವ್ಯಕ್ತಿ. ಆತನ ಮುಂದ ಹತ್ತಾರು, ನೂರಾರು ಕೆಂಪು, ಕೆಂಪನು ಚಮ್ಮಾವುಗೆಗಳು. ಬಟ್ಟೆ ತುಂಬ ಕೆಂಪು ಬಣ್ಣ ಚೆಲ್ಲಿ, ಅಲ್ಲಲ್ಲಿ ಬಿಳಿ, ಕರಿ ಬಣ್ಣದಾಗ ಗೆರೆ ಕೊರದಂಗ ಚಿತ್ರ ಕಂಡಿತು. ಹರಳಯ್ಯನ ಬಾಯಿಲಿಂದ ಮಾತು ಹೊರಡಲಿಲ್ಲ. ಅಷ್ಟು ತ್ರಾಸಿನಾಗನೂ ಮೆಲ್ಕ ಮುಂದಕ್ಕ ಬಗ್ಗಿದ. ಚಿತ್ರವನ್ನ ಕೈಗೆತ್ತಿಕೊಂಡ. ಕಣ್ಣ ಮುಂದ ಹಿಡಿದು ಕ್ಷಣ ತದೇಕ ಚಿತ್ತದಿಂದನೋಡಿದ. ಕಣ್ಣಿಗೆ ಒತ್ತಿಕೊಂಡ. ಎದಿಮ್ಯಾಲ ಆ ಚಿತ್ರವಿದ್ದ ಬಟ್ಟೀನ ಹಾಸಿಕೊಂಡ. ಮಗ, ಹೆಂಡತಿಯನ್ನೇ ನೋಡುತ್ತ ಕುಂತ. ಜಾಲಿಗಿಡದ ಕೆಳಗ, ಒಂದೆರಡು ಗುಬ್ಬಿಗಳು, ಸತ್ತ ಗುಬ್ಬಿಯನ್ನು ಇನ್ನೂ ಅತ್ತಿತ್ತ ಹೊರಳಿಸುತಿದ್ವು……………

‍ಲೇಖಕರು avadhi

24 March, 2014

1 Comment

  1. ashwini rao.k.n.

    very nice sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading