ಸೀಮಾ ಎಸ್ ಆರ್
ಕನ್ನಡಿಗರಾದ ನಾವೆಲ್ಲಾ ಪುಣ್ಯಕೋಟಿ ಗೋವಿನ ಸತ್ಯನಿಷ್ಠೆಯ ಜಾನಪದ ಹಾಡನ್ನು ಕೇಳಿಕೊಂಡೇ ಬೆಳೆದವರು. ಆದರೆ ಇಂದಿನ ಕಾಲಘಟ್ಟದಲ್ಲಿ ಪುಣ್ಯಕೋಟಿಯ ಸತ್ಯವನ್ನು ಎಷ್ಟರಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಊಹಿಸಲೂ ಅಸಾಧ್ಯ. ಆದಾಗ್ಯೂ, ಹತ್ತು ಕೋಟಿಗೆ ಒಬ್ಬರು – ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮಿಗಳಂತವರು – ಸಿಗಬಹುದು.
ಅದೇನೇ ಇರಲಿ, ಇಲ್ಲಿಯವರೆಗೂ ನನಗೆ ಕೆಳಗೆ ತಿಳಿಸಿದ ಪ್ರಶ್ನೆ ಉಧ್ಭವಿಸಿರಲಿಲ್ಲ. ಅದೇನಂದರೆ, ಜಾನಪದದಲ್ಲಿ ಯಾಕೆ ಗೋವನ್ನೇ ಸತ್ಯನಿಷ್ಠೆಗೆ ಹೋಲಿಸಿದ್ದಾರೆ? ಬೇರೆ ಯಾವ ಪ್ರಾಣಿಯೂ ಸತ್ಯನಿಷ್ಠೆಗೆ ಅರ್ಹವಲ್ಲವೇ? ಇಂತಹ ಸಂದೇಹಕ್ಕೆ ಕಾರಣವಾಗಿದ್ದು ಇತ್ತೀಚಿಗಿನ ದಿನಗಲ್ಲಿ ಅತೀರೇಕವಾಗಿ ಗಮನ ಸೆಳೆದ ವಿಷಯ: ಹಸುವನ್ನು ಎಲ್ಲಾ ಹಾಲು ಕೊಡುವ ಪ್ರಾಣಿಗಳಿಗಿಂತ ಮೇಲ್ಜಾತಿಗೆ ಏರಿಸಿರುವುದು. ಒಂದು ಮಟ್ಟಿಗೆ ಕಾಮಧೇನು ಎನ್ನುವದನ್ನು ಸಹಿಸಿಕೊಳ್ಳಬಹುದು. ಆದರೆ ಎಲ್ಲಾ ಪ್ರಾಣಿಗಳಿಗೆ ಹೋಲಿಸಿ ಇನ್ನಾವ ಹಾಲು ಕೊಡುವ ಪ್ರಾಣಿಗಳಿಗೆ ಸಮ ಇಲ್ಲವೆನ್ನುವುದನ್ನು ಓದಿದಾಗ ಈ ಮೇಲಿನ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಎಲ್ಲಾ ಜೀವಿಗಳಿಗೂ ಅದರದೇ ಆದ ಒಂದು ಮೌಲ್ಯ ಇರುತ್ತದೆ. ಎಲ್ಲವೂ ಮುಖ್ಯವೇ, ಯಾವ ಪ್ರಾಣಿಯೂ, ಮನುಷ್ಯಪ್ರಾಣಿಯಷ್ಟು ಸ್ವಾರ್ಥಿಯಾಗಿ, ಅಧೋಗತಿಗೆ ಇಳಿಯಲು ಸಾಧ್ಯವಿಲ್ಲ.

ಎಮ್ಮೆಯನ್ನು ಹಸುವಿಗೆ ಹೋಲಿಸಿ, ಅದರ ಅತಿಯಾದ ಕೊಬ್ಬಿನಂಶ ದೇಹಕ್ಕೂ, ಮನಸಿಗೂ ಒಳ್ಳೆಯದಲ್ಲ ಮತ್ತು ಎಮ್ಮೆಯು ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತದೆ. ಹಾಗಾಗಿ ಎಮ್ಮೆಯು ಹಾಗೂ ಅದರ ಹಾಲು ಹಸು ಮತ್ತು ಹಸುವಿನ ಹಾಲಿಗೆ ಯಾವುದರಲ್ಲೂ ಸಮನಲ್ಲ ಎಂದು ಮೂದಲಿಸುವವರಿಗೆ ಏನು ಕಮ್ಮಿಯಿಲ್ಲ.
ಒಂದೊಂದು ಪ್ರಾಣಿಯೂ ಆಯಾ ಸ್ಥಳದ geographical reason/ ವಾತಾವರಣದಿಂದಾಗಿ ಪ್ರಮುಖ ಸ್ಥಾನ ಪಡೆಯುತ್ತವೆ. ಮತ್ತೆ ಅಲ್ಲಿ ವಾಸಿಸುವ ಜನರು ಕೂಡ ಆಯಾ ಸ್ಥಳಗಳಿಗೆ ಒಗ್ಗಿಕೊಳ್ಳುವಂತಹ ಪ್ರಾಣಿಗಳನ್ನು ಸಾಕಿ ಜೀವನ ನಡೆಸುತ್ತಾರೆ. ಇದಕ್ಕೆ ಎಮ್ಮೆಯೂ ಹೊರತಲ್ಲ. ಎಮ್ಮೆಯನ್ನು ಸ್ವಲ್ಪ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ಕಾಡಿನಲ್ಲಿ ಇದ್ದಿರಬಹುದೆಂದು ತಿಳಿಯುತ್ತದೆ. ಅದರ ದಪ್ಪ ಚರ್ಮವು ವಾತಾವರಣಕ್ಕೆ ರಕ್ಷಣೆ ಕೊಡುತ್ತದೆ ಎಂದು, ಅದರ ದಪ್ಪ ಮತ್ತು ಕೊಬ್ಬಿನಂಶದಿಂದ ಕೂಡಿದ ಹಾಲು ಅಲ್ಲಿಯ ಸ್ಥಳೀಯ ನಿವಾಸಿಗಳ ದೇಹಕ್ಕೆ ಅಗತ್ಯವಾದ ಪೋಷಕಾಂಶ ಮತ್ತು ಕೊಬ್ಬಿನಂಶವನ್ನು ಒದಗಿಸುತ್ತದೆ.
ಎಮ್ಮೆಗಳು ಬೇರೆಯವರನ್ನು ಅವಲಂಬಿಸದೆ ಸ್ವತಃ ಆರೋಗ್ಯವನ್ನು ಕಾಪಾಡಿಕೊಳ್ಳುತ್ತವೆ. ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಚರ್ಮದ ಮೇಲೆ ಇರುವ ಪರಾವಲಂಬಿಗಳನ್ನು ಮತ್ತು ನೊಣಗಳನ್ನು ಹಿಮ್ಮೆಟ್ಟಿಸಲು ಕೆಸರಿನಲ್ಲಿ ಮಿಂದು ಎಳುತ್ತವೆ.
ಸಂಶೋಧನೆಗಳ ಪ್ರಕಾರ ಪ್ರಾಚೀನ ಶಿಲಾಯುಗದಲ್ಲಿ (೨,೫೦೦-೧೭೫೦೦ ಬಿ.ಸಿ.) ಹುಲ್ಲು ಮೇಯುವ ಕಾಡುಪ್ರಾಣಿಗಳನ್ನು ಬೇಟೆ ಮಾಡುತಿದ್ದರು. ಹಾಗೆಯೇ ಕಾಡೆಮ್ಮೆಯು ಬೇಟೆಗೆ ಸುಲಭ ತುತ್ತಾಗುತ್ತಿತ್ತು. ತದನಂತರದ ದಿನಗಳಲ್ಲಿ ಕಾಡೆಮ್ಮೆಯನ್ನು ಸಾಕುಪ್ರಾಣಿಯಾಗಿ ಪಳಗಿಸಲಾಯಿತು. ಬಹುಪಾಲು ಆಧುನಿಕ ಇತಿಹಾಸಕಾರರು (೨,೫೦೦ ಬಿ.ಸಿ.ಗಿಂತ ಮೊದಲು) ಎಮ್ಮೆಗಳನ್ನು ಪಳಗಿಸಿ ನಂತರ ವಿವಿಧ ಕೃಷಿ ಕಾರ್ಯಗಳಲ್ಲಿ ಕೆಲಸ ಮಾಡಲು ಪಳಗಿಸಲಾಯಿತು ಎಂದು ನಂಬುತ್ತಾರೆ. ಮೆಸೆಪಟೋಮಿಯಾದಲ್ಲಿ ಅಕ್ಕಾಡಿಯನ್ ರಾಜವಂಶದ ಅವಧಿಯಲ್ಲಿ, ಭಾರತದ ಸಿಂಧೂ ಕಣಿವೆ ನಾಗರಿಕತೆಯಲ್ಲಿ, ಹರಪ್ಪಾ, ಮೆಹಂಜಾದಾರೋ ಮತ್ತು ಗುಜರಾತ್, ರಾಜಸ್ಥಾನ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಎಮ್ಮೆಗಳ ಕೃಷಿ ಚಟುವಟಿಕೆ ವಿಸ್ತರಿಸಿತ್ತು. ಸಿಂಧೂ ಕಣಿವೆಯ ಬಾಬುಲಸ್ ಅರ್ಣೀ ಎಂಬಾತ ಪಳಗಿಸಿದ್ದ ಎಮ್ಮೆಯ ತಳಿಯು ಪಶ್ಚಿಮದ ಮೆಸೆಪಟೋಮಿಯಾ ಮತ್ತು ಪೂರ್ವದ ಚೀನಾದವರೆಗೂ ಹಬ್ಬಿತ್ತು ಎಂದು ನಂಬಲಾಗಿದೆ. ನಂತರ ಮೆಸೆಪಟೋಮಿಯಾದಿಂದ ಪಾಶಿಮಾತ್ಯ ದೇಶಗಳಿಗೆ ಹರಡಿತು. ಸಿಕ್ಕಿರುವ ಮುದ್ರೆ ಮತ್ತು ಶಿಲ್ಪಗಳ ಮೇಲೆ ಗಂಡು ಎಮ್ಮೆಗಳು ವಿಶಿಷ್ಟವಾದ ಅರ್ಧಚಂದ್ರಾಕಾರದ ಮತ್ತು ಬೃಹತ್ ಕೊಂಬುಗಳಿಂದ ಕೂಡಿದ ಕಿರೀಟವನ್ನು ಹೊಂದಿರುವ ಪುರಾವೆಗಳು ಲಭ್ಯವಿದೆ. ಈಗಲೂ ಭಾರತದ ಹಲವು ಕಡೆ ಮತ್ತು ಏಷ್ಯಾ ಖಂಡದ ನಾನಾ ಕಡೆಗಳಲ್ಲಿ ಎಮ್ಮೆಯನ್ನು ಭತ್ತದ ಕೃಷಿ ಜಮೀನಿನಲ್ಲಿ ಬಳಸುವ ಪದ್ಧತಿ ಇದೆ.
ಆದಾಗ್ಯೂ ಕೋಣವನ್ನು ಸಾಂಸ್ಕೃತಿಕವಾಗಿ ಬಹಿಷ್ಕರಿಸುತ್ತ, ಅದನ್ನು ಮೃತ್ಯುವಿನ symbol ಆಗಿ, ಯಮನ ವಾಹನವಾಗಿ ಮಾಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಎಲ್ಲಾ ಊರುಗಳಲ್ಲಿ ಮಾರಮ್ಮನ ಜಾತ್ರೆಯಂದು ಬಲಿಯಾಗುವ ಪ್ರಾಣಿಯೇ ಕೋಣ!
ಅದಕ್ಕೆ ಪೂರಕವಾದ ಪ್ರಚಲಿತ ಕತೆಯೊಂದು ಬೇರೆ. ಊರಿನ ಮೇಲ್ಜಾತಿಯ ಹುಡುಗಿಯನ್ನು ಕೆಳಜಾತಿಯ ಚಮ್ಮಾರನ ಹುಡುಗ ಸುಳ್ಳು ಹೇಳಿ ಮದುವೆಯಾಗುತ್ತಾನೆ. ವಿಷಯ ತಿಳಿದ ಹುಡುಗಿ ತನ್ನ ಗಂಡನನ್ನು ವಿಚಾರಿಸಲು ಹೊರಟಾಗ ಅವನು ಕೋಣನಲ್ಲಿ ಅವಿತುಕೊಳ್ಳುತ್ತಾನೆ. ಕೊನೆಗೂ ಆತ ಅವಿತ ಜಾಗವನ್ನು ಪತ್ತೆ ಮಾಡಿದ ಹೆಂಡತಿ ಕೋಣನನ್ನು ಕಡಿದು ಗಂಡನನ್ನು ಸಾಯಿಸುತ್ತಾಳೆ. ಈ ಕತೆಯು ಜಾತಿ ಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.
ಗಾಂಧೀಜಿಯವರು ಹಸುವನ್ನು ತುಂಬಾ ಆದರದಿಂದ ಕಾಣುತ್ತಾರೆ. ಹಾಗೆಯೇ ಅವರ ದಿನನಿತ್ಯದ ಓಡಾಟದ ಶಕ್ತಿಗಾಗಿ ಎಲ್ಲಾ ಸೊಪ್ಪುಗಳನ್ನು ತಿನ್ನುವ ಮೇಕೆಯ ಹಾಲನ್ನು ಸೇವಿಸುತ್ತಿರುತ್ತಾರೆ. ಹೀಗೆ ಒಂದೊಂದು ಪ್ರಾಣಿಗಳ ಹಾಲು ಒಂದೊಂದು ರೀತಿಯಲ್ಲಿ ಮನುಷ್ಯನಿಗೆ ಉಪಯುಕ್ತವಾಗಿವೆ.
ಗೊರೂರು ರಾಮಸ್ವಾಮಿ ಅಯಂಗಾರ್‌ರವರ “ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?” ಎಂಬ ಪ್ರಬಂಧವು ಹಾಸ್ಯ ಧಾಟಿಯಲ್ಲಿ ಪ್ರಾರಂಭವಾದರೂ ಎಮ್ಮೆಯ ಬಗ್ಗೆ ಹಲವಾರು ಮಾಹಿತಿಯನ್ನು ತಿಳಿಸುವುದರ ಜೊತೆಗೆ ಎಮ್ಮೆಯ ಹಾಲಿನ ಪೌಷ್ಟಿಕತೆಯ ಬಗ್ಗೆ ಮಾಹಿತಿ ಒದಗಿಸುತ್ತದೆ. ಎಮ್ಮೆಯ ಹಾಲನ್ನು ಕುಡಿಯುವವರು ಮಂದಬುದ್ಧಿಯವರು ಎಂದು ಜರಿಯುವವರನ್ನು ಕುರಿತು ಎಂಬಂತೆ, ಎಮ್ಮೆಯ ತಿಳಿವಳಿಕೆಯ ಅನೇಕ ಪ್ರಸಂಗಗಳನ್ನು (ಎಮ್ಮೆಯ ಚುರುಕು ಬುದ್ಧಿಯನ್ನು) ನಿರೂಪಿಸುತ್ತಾ ನಗೆಯನ್ನು ಉಕ್ಕಿಸುವ ಜೊತೆಗೆ, ಎಮ್ಮೆ ಬಗೆಗಿನ ನಮ್ಮ ಚಿಂತನೆಗಳನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಪ್ರೇರೇಪಿಸುತ್ತಾರೆ.

ಒಬ್ಬ ಮನುಷ್ಯ ಆರೋಗ್ಯವಾಗಿರಲು ಪ್ರತಿದಿನ ಹತ್ತು ಔನ್ಸ್ ಹಾಲನ್ನಾದರೂ ಕುಡಿಯಬೇಕು ಎಂದು ತಿಳಿಸುವ ಅಯಂಗಾರ್‌ರವರು ವಿಶ್ವಾಮಿತ್ರರು (ವಸಿಷ್ಠರು ನಂದಿನಿಯನ್ನು ಕೊಡದೆ ಇದ್ದಾಗ ಸಿಟ್ಟಿನಿಂದ) ಹಸುವಿಗಿಂತ ಹೆಚ್ಚು ಹಾಲು ಕೊಡುವ ಎಮ್ಮೆಯನ್ನೇ ಸೃಷ್ಟಿ ಮಾಡಿದರು ಎಂದು ಹೇಳುತ್ತಾರೆ.
‘ನಮ್ಮ ನಾಡು ಎಮ್ಮೆಯ ನಾಡು. ಮಹಿಷಮಂಡಲವೆಂಬುದು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಹೆಸರು… ನಮ್ಮ ಮನೆಗೆ ಎಮ್ಮೆ ಪ್ರಕೃತಿಯಂತೆ ಶಾಶ್ವತ…’. ಕರ್ನಾಟಕ ಅಥವಾ ಮೈಸೂರು ಪ್ರಾಂತ್ಯವನ್ನು ಮಹಿಷಪುರವೆಂದೇ ಕರೆಯಲಾಗುತಿತ್ತು ಎಂದು ನೆನಪಿಸಿಕೊಂಡರೆ ಎಮ್ಮೆಯ ಮಹತ್ವ ನಮಗೆ ಸ್ಪಷ್ಟವಾಗುತ್ತದೆ.
ಹೀಗೆಯೇ ಮುಂದುವರೆದು ನೋಡಿದಾಗ, ಮನುಷ್ಯನನ್ನು ಕತ್ತೆಗೆ ಹೋಲಿಸಿ ಬಯ್ಯುವುದನ್ನು ನೋಡಿದ್ದೇವೆ. ಹಾಗೆಯೇ ಕತ್ತೆಯ ಹಾಲನ್ನು ಮಾರುವವರನ್ನು ಮತ್ತು ಎಷ್ಟೇ ದುಬಾರಿಯಾದರೂ ಅದನ್ನು ಖರೀದಿಸುವವರನ್ನು ನೋಡಿದ್ದೇವೆ. ಯಾಕೆಂದರೆ, ಕತ್ತೆಯ ಹಾಲು ಮಹತ್ವದ ಪೌಷ್ಟಿಕಾಂಶವನ್ನು ಹೊಂದಿದೆ.
ಹೀಗೆ ಒಂದೊಂದು ಪ್ರಾಣಿಯ ಹಾಲು ಒಂದೊಂದು ರೀತಿಯಲ್ಲಿ ಮನುಷ್ಯನಿಗೆ ಉಪಯುಕ್ತವಾಗಿದೆ, ಅವುಗಳನ್ನು ನಾವು ನಮ್ಮ ದೃಷ್ಟಿಕೋನದಿಂದ ಅಳೆಯುತ್ತೇವೆ ಮತ್ತು ಅವುಗಳ ಕಾಯಕವನ್ನು ನಾವು ನಿಯೋಜಿಸುತ್ತೇವೆ. ಹಾಗಾಗಿ ಒಂದನ್ನು ಮೇಲು ಮತ್ತು ಇನ್ನೊಂದನ್ನು ಮಧ್ಯಮ ಎಂದು ತೂಗುತ್ತೇವೆ. ಆದರೆ ಮನುಷ್ಯನ ಜೀವನಕ್ಕೆ ಧರಣಿಯ ಒಳಗೆ ಇರುವ ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಕೀಟಗಳು ಅತೀಮುಖ್ಯ. ಅದೇನೇ ಇರಲಿ ನಟಸಾರ್ವಭೌಮ ರಾಜ್‌ಕುಮಾರ್ ಹಾಡಿರುವಂತೆ ಬಿಸಿಲು, ಮಳೆಗೆ, ಬಿರುಗಾಳಿ ಮತ್ತು ಚಳಿಗೆ ಅಳುಕದೆ ಮುಂದೆ ಸಾಗುವ ಎಮ್ಮೆಗೆ ಸಾಟಿ ಎಮ್ಮೆಯೇ!






ಗೋವಿನಂತೆ ಚಿಗರೆಯ ಕತೆಯೂ ಇದೆ, ಜನಪದದಲ್ಲಿ.
ಹಿಂಸೆ ಅಹಿಂಸೆಗಳು ಬದುಕಿನಲ್ಲಿ ಎಂತಹ ಸಂಕಿರ್ಣ ಸಂಬಂಧ ಹೊಂದಿವೆ ಎಂಬುದಕ್ಕೆ ಈ ಕತೆ ಸಾಂಕೇತಿಕವಾಗಿದೆ. ಅನನ್ಯ ಅಭಿವ್ಯಕ್ತಿಯಾಗಿದೆ.
ಇದೇ ರೀತಿ ಹುಲಿ ಹಸು ಆಟ (ಹುಳಿಹಳ್ಳು ) ಮತ್ತು ಮಕ್ಕಳು ಆಡುವ ಹುಲಿಹಸು ಆಟವೂ ಇದೆ. ಒಂದು ಸಂಸ್ಕೃತಿಯ ಚಲನಶೀಲ
ಪರಂಪರೆಯಲ್ಲಿ ಮೂಡಿಬಂದ ಸಂರಚನೆಗಳನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗಿದೆ ಎನಿಸುತ್ತದೆ.