ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದ್ವೇಷ ರಾಜಕಾರಣದ ಈ ಸಂದರ್ಭದಲ್ಲಿ ಕಾರ್ನಾಡ್ ಇರಬೇಕಿತ್ತು..

ನಾ ದಿವಾಕರ

ಖ್ಯಾತ ಸಾಹಿತಿ, ನಟ, ನಾಟಕಕಾರ, ಕ್ರಿಯಾಶೀಲ ಚಿಂತಕ ,ಜನಪರ ಕಾಳಜಿಯ ಸಂಕೇತ ಮತ್ತು ಕರ್ನಾಟಕ ಕಂಡ ಒಂದು ಮೇರು ಚೇತನ ಇಂದು ಅಸ್ತಂಗತವಾಗಿದೆ.

ಗಿರೀಶ್ ಕಾರ್ನಾಡ್ ಕನ್ನಡ ರಂಗಭೂಮಿಗೆ ಸಲ್ಲಿಸಿರುವ ನಾಟಕಗಳು ಮತ್ತು ಹೊಸ ಪ್ರಯೋಗಗಳು ಅದ್ಭುತವಾದದ್ದು. ತುಘಲಕ್, ಯಯಾತಿ, ಅಗ್ನಿ ಮತ್ತು ಮಳೆ, ಮಾ ನಿಷಾದ, ಹಯವದನ, ತಲೆದಂಡ, ನಾಗಮಂಡಲ ಹೀಗೆ ಹಲವು ನಾಟಕಗಳ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು, ಸಾಂಸ್ಕೃತಿಕ ಹಿರಿಮೆಯನ್ನೂ ಮೆರೆದ ಒಂದು ಚೇತನ ಇಂದು ನಿರ್ಗಮಿಸಿದೆ.

ಕಲಾತ್ಮಕ ಚಲನ ಚಿತ್ರಗಳಿಗೆ ಒಂದು ಹೊಸ ಸ್ಪರ್ಶ ನೀಡುವ ಮೂಲಕ ಕಾರ್ನಾಡ್ ತಮ್ಮ ನಟನಾ ಸಾಮರ್ಥ್ಯವನ್ನೂ ಮೆರೆದಿದ್ದಾರೆ. ಸಾಹಿತ್ಯ ಮತ್ತು ರಂಗಭೂಮಿ ಸಾಮಾಜಿಕ ಸ್ಥಿತ್ಯಂತರಗಳಿಂದ ವಿಮುಖವಾಗದಂತೆ ಎಚ್ಚರ ವಹಿಸಿದ್ದ ಕಾರ್ನಾಡ್ ತಮ್ಮ ಸಾಮಾಜಿಕ ಕಳಕಳಿಗಾಗಿ ಫ್ಯಾಸಿಸ್ಟ್ ಮನಸುಗಳ ವೈಮನಸ್ಯ, ದ್ವೇಷ, ಅಸೂಯೆ ಮತ್ತು ಆಕ್ರಮಣವನ್ನು ಎದುರಿಸಿದ್ದೂ ಹೌದು.

ಅವರ ಸಾವಿನ ಸಂದರ್ಭದಲ್ಲೂ “ಪುಣ್ಯಕೋಟಿಯ ಶಾಪ. ಸಾಯುವ ವಯಸ್ಸಲ್ಲ, ಆದರೆ ಮಾಡಿದ ಪಾಪ?” ಎಂಬ ಮಾತುಗಳು ಕೇಳಿಬರುತ್ತಿರುವುದನ್ನು ನೋಡಿದರೆ (ಫೇಸ್ ಬುಕ್ ಹೇಳಿಕೆ) ಈ ದ್ವೇಷ, ಮತ್ಸರ ಮತ್ತು ಹಗೆ ಕಾರ್ನಾಡ್ ಅವರನ್ನು ಹೇಗೆ ಕಾಡಿರಬಹುದು ಎಂದು ಗ್ರಹಿಸಬಹುದು. ಇಡೀ ದೇಶವೇ ಮತಾಂಧತೆ ಮತ್ತು ದ್ವೇಷ ರಾಜಕಾರಣದ ಬೆಂಕಿಯಲ್ಲಿ ಬೇಯುತ್ತಿರುವ ಸಂದರ್ಭದಲ್ಲಿ ಕಾರ್ನಾಡ್ ಅವರಂತಹ ಚೇತನಗಳು ನಮ್ಮೊಡನೆ ಇರಬೇಕಿತ್ತು.

ಸಾಂಸ್ಕೃತಿಕ ವಿಷಬೀಜಗಳ ಸೃಷ್ಟಿಗಳು ತಮ್ಮ ವಿಕೃತಿಯನ್ನು ಪ್ರದರ್ಶಿಸಲು ಮತ್ತೊಂದು ಅವಕಾಶ ದೊರೆತಿದೆ. ಇರಲಿ. ಈ ವಿಕೃತಿಗಳ ನಡುವೆಯೇ ಕಾರ್ನಾಡ್ ಕರ್ನಾಟಕದ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ, ಜನಪರ ಚಳುವಳಿಗಳಲ್ಲಿ, ಪ್ರಗತಿಪರ ಚಿಂತನೆಗಳಲ್ಲಿ ಜೀವಂತವಾಗಿರುತ್ತಾರೆ. ಭಾರತದಲ್ಲಿ ಮತಾಂಧತೆ ವಿಜೃಂಭಿಸುತ್ತಿದೆ. ಆದರೆ ಸಂವೇದನೆ ಸತ್ತಿಲ್ಲ ಎನ್ನುವುದನ್ನು ಕಾರ್ನಾಡ್ ಅವರಂತಹ ವ್ಯಕ್ತಿತ್ವಗಳು ಸಾಬೀತುಪಡಿಸುತ್ತವೆ.

ಪ್ರತಿರೋಧದ ದನಿಗಳೆಲ್ಲವೂ ಸಾವಿನ ಪರವಾನಗಿ ಪಡೆದಿರುವ ನಕ್ಸಲ್ ದನಿಗಳು ಎನ್ನುವ ಪ್ರಭುತ್ವದ ಧೋರಣೆಗೆ ಸೆಡ್ಡುಹೊಡೆದು ನಾನೂ ನಗರ ನಕ್ಸಲ್ ನನ್ನನ್ನೂ ಬಂಧಿಸಿ ಎಂದು ದಿಟ್ಟತನದಿಂದ ಹೇಳಿದ ಕಾರ್ನಾಡ್ ನಮ್ಮ ನಡುವಿನ ಕೊಂಡಿಯಾಗಿಯೇ ಇರುತ್ತಾರೆ. ಚಿಂತನೆಗಳನ್ನು ಹೊಸಕಿಹಾಕಿ, ಚಿಂತಕರನ್ನು ಇಲ್ಲವಾಗಿಸುವ ಒಂದು ದುರಂತ ಸನ್ನಿವೇಶದಲ್ಲಿ ನಾವಿದ್ದೇವೆ. ನಮ್ಮೊಡನೆ ಇವರು ಇರಬೇಕಿತ್ತು ಎಂದು ಪಟ್ಟಿ ಮಾಡುತ್ತಾ ಹೋದರೆ ಹಲವು ಚೇತನಗಳು ನೆನಪಾಗುತ್ತವೆ. ಅವರ ಪೈಕಿ ಕಾರ್ನಾಡ್ ಒಬ್ಬರಾಗಿ ಹೋಗಿದ್ದಾರೆ.

ಸಾಹಿತ್ಯ ಸತ್ಯಾನ್ವೇಷಣೆಯ ಒಂದು ಅಸ್ತ್ರ ಎಂಬ ವಾಸ್ತವವನ್ನು ಸ್ಪಷ್ಟವಾಗಿ ಬಿಂಬಿಸಿರುವ ಕಾರ್ನಾಡ್ ತಮ್ಮ ನಾಟಕಗಳಲ್ಲಿನ ವಿಶಿಷ್ಟ ಪ್ರಯೋಗದಿಂದಲೂ ಇದನ್ನು ನಿರೂಪಿಸಿದ್ದಾರೆ. ಕಾರ್ನಾಡ್ ಇನ್ನು ನಮ್ಮೊಡನಿಲ್ಲ. ಆದರೆ ಅವರ ಚಿಂತನೆಗಳು ಮತ್ತು ಜನಪರ ಕಾಳಜಿಯ ಸೂಕ್ಷ್ಮ ತಂತುಗಳು ಸದಾ ನಮ್ಮೊಡನೆ ಇರುತ್ತವೆ. ಚಿಂತನಾ ವಾಹಿನಿಯ ಮತ್ತೊಂದು ತೊರೆ ಅಗಲಿದೆ. ಆದರೆ ಈ ವಾಹಿನಿ ಬತ್ತುವುದಿಲ್ಲ ಎನ್ನುವುದನ್ನು ಕಾರ್ನಾಡ್ ನಿರೂಪಿಸಿ ಅಗಲಿದ್ದಾರೆ. ಅವರ ಹೆಜ್ಜೆ ಗುರುತುಗಳು ನಮ್ಮೊಡನೆ ಇರುತ್ತವೆ ನಮ್ಮ ಹೆಜ್ಜೆಯೊಡನೆ ಹೆಜ್ಜೆ ಹಾಕುತ್ತಲೇ ಇರುತ್ತವೆ. ಆ ಹೆಜ್ಜೆ ಗುರುತುಗಳ ವಾರಸುದಾರ ಕಾರ್ನಾಡರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ.

‍ಲೇಖಕರು avadhi

10 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading