ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೋಸೆಯ ಆತ್ಮಕಥೆ…

ಎ ಎನ್ ಪ್ರಹ್ಲಾದ್ ರಾವ್

ಪ್ರಪಂಚದ ಹಲವಾರು ಮಂದಿ ತಮ್ಮ ಆತ್ಮಚರಿತ್ರೆಯನ್ನು ಬರೆದಿರುವುದನ್ನು ನೊಡಿದ್ದೇವೆ. ಆದರೆ, ದೋಸೆಯೊಂದು ತನ್ನ ಆತ್ಮಕಥೆಯನ್ನು ನಿವೇದಿಸಿಕೊಂಡಿರುವುದನ್ನು ಯಾರೂ ಕೇಳಿರಲಾರರು. ದೋಸೆ ಯಾವ ಕಥೆ ಹೇಳೀತು ಎನ್ನಬೇಡಿ. ಏಕೆಂದರೆ ಈ ದೋಸೆಗೆ 80 ವರ್ಷ ವಯಸ್ಸು. ಲಕ್ಷಾಂತರ ಬಾರಿ ಕಾವಲಿಯ ಮೇಲೆ ಬೆಂದು ಬೆಂದು ಪಕ್ವಗೊಂಡಿರುವ ಬೆಂಗಳೂರು ಬಸವನಗುಡಿಯ ‘ವಿದ್ಯಾರ್ಥಿ ಭವನ’ ಆತ್ಮಕಥೆ ಬಿಚ್ಚಿಟ್ಟಿರುವ ದೋಸೆ.

ಬಾಯಲ್ಲಿ ನೀರೂರಿಸುವ ಗರಿ ಗರಿ ದೋಸೆ ಅಷ್ಟೆ ಎಂದುಕೊಂಡರೆ ಅದು ಕಂಡಿತಾ ತಪ್ಪು.

ಈ ದೋಸೆಗೆ ಅದೇನು ಹಿರಿಮೆ! ಅದೇನು ಗರಿಮೆ!!

ಟಿ.ಪಿ.ಕೈಲಾಸಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರೊ.ಕೆ.ಎಸ್.ನಿಸಾರ್ ಅಹಮದ್, ಪ್ರೊ.ಗೋಪಾಲಕೃಷ್ಣ ಅಡಿಗ, ಸಿ.ಅಶ್ವತ್ಥ್, ರವಿ ಬೆಳಗೆರೆ ಹೀಗೆ ತನ್ನನ್ನು ಸವಿದ ಹಿರಿಯರನ್ನೆಲ್ಲ ಈ ದೋಸೆ ನೆನಪಿಸಿಕೊಳ್ಳುತ್ತದೆ. ಹೋಟೆಲಿಗೆ ಬಂದ ಮೊದಲ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪ್ರೀತಿಯನ್ನು ಮೆಲುಕು ಹಾಕುತ್ತದೆ.

ಅಷ್ಟೇ ಏಕೆ, ತಾನು ಬೆಂದು ಪಕ್ವ ದೋಸೆ ಆಗುವ ವೇಳೆ್ಗೆ ಹೊಟೆಲಿಗೆ ಬಂದ ಪ್ರೇಮಿಗಳು ಒಂದಾಗಿ ವರಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತದೆ. ಇದರೊಂದಿಗೆ ತಾನು ಕ್ರಮಿಸಿದ ಪಯಣದ ಹಾದಿಯನ್ನು ಗುರುತಿಸಿಕೊಳ್ಳುತ್ತದೆ. ಹಳೆಯ ಮಾಲೀಕರು ಹಾಗೂ 50 ವರ್ಷ ಮುನ್ನೆಡಿಸಿರುವ ರಾಮಕೃಷ್ಣ ಅಡಿಗ ಹಾಗೂ ಅವರ ಮಗ ಅರುಣ್ ಅಡಿಗ ಅವರ ಶ್ರಮದ ಹಾದಿಯನ್ನು ಜನರ ಮುಂದಿರಿಸುತ್ತದೆ.

‘ವಿದ್ಯಾರ್ಥಿ ಭವನ’ ಸಜ್ಜುಗೊಳಿಸಿದ್ದ ‘ವಿದ್ಯಾರ್ಥಿ ಭವನ’ ನಾಟಕದಲ್ಲಿ ದೋಸೆಯೇ ನಾಯಕ ಪಾತ್ರಧಾರಿ. ದೋಸೆ ಪಾತ್ರವಾಗಿ ಜನರಂಜಿಸಿದವರು ಸಿಹಿಕಹಿ ಚಂದ್ರು. ಕಳೆದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಲ್ಲೇಶ್ವರದ ಚೌಡಯ್ಯ ಸಭಾಣಗಣದಲ್ಲಿ ನಾಟಕದ ನಾಲ್ಕು ಪ್ರದರ್ಶನಗಳು ನಡೆದವು.

ನಾಟಕಕ್ಕೆ ಜೀವ ತುಂಬಿರುವ ನಿರ್ದೇಶಕ ಅರ್ಜುನ್ ಕಬ್ಬಿಣ ನಿಜಕ್ಕೂ ಅಭಿನಂದನಾರ್ಹರು. ಅವರ ತಂದೆ ಬಾಹುಬಲಿ ಸ್ವಾಮಿ ನೇಮಿರಾಜಯ್ಯ 1978ರಿಂದಲೂ ಗಾಂಧಿಬಜಾರಿನಲ್ಲಿ ಪುಟ್ಟ ಅಂಗಡಿ ಇರಿಸಿಕೊಂಡಿದ್ದರು. ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಆತ್ಮೀಯರು. ನಿಸಾರ್ ಅವರ ಜೊತೆ ನಾನು ಹಲವು ಬಾರಿ ಅವರ ಅಂಗಡಿಗೆ ಹೋಗಿದ್ದುಂಟು.

ತಂದೆಯಂತೆಯೇ ಮಗನಲ್ಲಿಯೂ ಗಾಂಧೀ ಬಜಾರಿನ ಬಗ್ಗೆ ಇರುವ ಪ್ರೀತಿ ನಾಟಕದಲ್ಲಿ ಅಭಿವ್ಯಕ್ತಿಗೊಂಡಿದೆ. ನಾಟಕಕಾರ ರಾಜೇಂದ್ರ ಕಾರಂತರು ಅಷ್ಟೇ ಚೆಂದವಾಗಿ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.
ಅರುಣ್ ಅಡಿಗರಲ್ಲಿನ ಎನರ್ಜಿ ವರ್ಣಿಸಲು ಅಸಾಧ್ಯ. ಹೋಟೆಲ್ ಬಳಕೆದಾರರಿಗೆ ದೋಸೆ ಜೊತೆ ವಿಭಿನ್ನವಾಗಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೊಸದನ್ನು ನೀಡುವ ಅವರ ಕನಸು ಸಾಕಾರಗೊಂಡಿದೆ. ವಿದ್ಯಾರ್ಥಿ ಭವನದ ದೋಸೆಯನ್ನು ಪಾತ್ರವಾಗಿಸಿ ಮಲ್ಲೇಶ್ವರ ತಲುಪಿಸಿದ್ದಾರೆ. ಅಭಿನಂದನೆಗಳು ಅರುಣ್.

ನಾಟಕದಲ್ಲಿ ಒಂದು ಸಂದೇಶವೂ ಇದೆ: ಗಾಂಧಿ ಬಜಾರನ್ನು ಚರ್ಚ್ ಸ್ಟ್ರೀಟ್ ಮಾಡಬೇಡಿ

‍ಲೇಖಕರು Admin

11 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading