ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ಹಾಸನದಲ್ಲಿ ‘ಗೋರ್ ಮಾಟಿ’

ಚಲಂ ಹಾಡ್ಲಹಳ್ಳಿ

**

ದೇಶಪ್ರೇಮಕ್ಕೆ ಪ್ರತಿಯಾಗಿ ಕ್ರಿಮಿನಲ್ ಪಟ್ಟ ಪಡೆದ ‘ಗೋರ್ ಮಾಟಿ’. ಇದೇ ಬುಧವಾರ ಸಂಜೆ ಕಲಾಭವನದಲ್ಲಿ ಪ್ರದರ್ಶನವಾಗುವ ಈ ಚಂದದ ನಾಟಕ ಯಾಕೆ ನೋಡಬೇಕಂದ್ರೆ

ನೋಡಲು ಚಂದವಿರುವ ಕಾರಣಕ್ಕೆ ನಮ್ಮನ್ನು “ಗೋರ್” ಅಂತಾರೆ. ನಮ್ಮ ಸಮುದಾಯದ ಜನ ಎತ್ತರಕ್ಕೆ, ಎಣ್ಣೆಗಂಪು ಬಣ್ಣದ ಸುಂದರ ಜನಗಳು. ಹಾಗಾಗಿ ನಾವು ಗೋರ್. ಮರಾಠಿ ಭಾಷೆಯಲ್ಲಿ ಸುಂದರವಾಗಿರುವ ಜನರನ್ನು ಗೋರ್ ಮಾಟಿ ಅಂತಾರೆ. ಹಾಗಾಗಿ ನಮ್ಮ ಸಮುದಾಯ ಮಹಾರಾಷ್ಟ್ರದಲ್ಲಿ ಗೋರ್ ಮಾಟಿ. ಇಲ್ಲಿ ಲಂಬಾಣಿ, ದೇಶದ ಹದಿನಾರು ರಾಜ್ಯಗಳಲ್ಲಿ ಹದಿನಾರು ಹೆಸರಿನಿಂದ ನಮ್ಮನ್ನು ಕರೆಯುತ್ತಾರೆ ಎಂದು ಶಿಕ್ಷಕರಾದ ಸೋಮನಾಯಕ್ ವಿವರಿಸುವಾಗ ಕಣ್ಣಿನಲ್ಲಿ ಹೆಮ್ಮೆಯ ಹೊಳಪು.

ನಾಡಿದ್ದು ಅಂದರೆ ಜೂನ್ 19 ನೇ ತಾರೀಖು ಹಾಸನದ ಕಲಾಭವನದಲ್ಲಿ ರಂಗಾಯಣ “ಗೋರ್ ಮಾಟಿ” ನಾಟಕ ಪ್ರದರ್ಶನ ಮಾಡುತ್ತಿದೆ. ಹಾಸನದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಈ ನಾಟಕವನ್ನು ಆಯೋಜನೆ ಮಾಡ್ತೀವಿ ಅಂತ ಹೊರಟಾಗ ಸಿಕ್ಕವರೇ ಈ ಸೇವಾಲಾಲರ ಮನೆಮಂದಿ.

ಬಂಜಾರ ಎಂಬುದು ಎಲ್ಲೆಡೆ ಇರುವ ಹೆಸರು. ಈ ಬಂಜಾರ ಸಮುದಾಯದ ಜನ ಸೌಂದರ್ಯವಂತರು ಮಾತ್ರವಲ್ಲ, ಬಹಳ ಶ್ರಮಜೀವಿಗಳು. ಶ್ರಮಜೀವಿಗಳು ಮಾತ್ರವಲ್ಲ, ಕುಟಿಲತೆಯರಿದ ಕುಶಲಮತಿಗಳು. ದೇಶವನ್ನು ಕಟ್ಟಿದವರ ಬಗ್ಗೆ ದೊಡ್ಡ ದೊಡ್ಡ ಪುಸ್ತಕಗಳಿವೆ, ಏನೇನೋ ಸಂಶೋದನೆಗಳಾಗಿವೆ. ಆದರೆ ಸ್ವಾತಂತ್ರ್ಯ ಮುನ್ನ ಮತ್ತು ಸ್ವಾತಂತ್ರ್ಯ ನಂತರ ಈ ದೇಶದಲ್ಲಿ ಕಟ್ಟಿದ ದೊಡ್ಡ ಸೇತುವೆಗಳು, ಉದ್ದದ ರೈಲ್ವೇ ಟ್ರ್ಯಾಕುಗಳು, ಅಣೆಕಟ್ಟುಗಳು ಎಲ್ಲವುಗಳನ್ನು ಕಟ್ಟುವುದಲ್ಲಿ ಮೊದಲ ಕೈ ಅಂತ ಏನಾದರೂ ಇದ್ದರೆ ಅದು ಬಂಜಾರ ಸಮುದಾಯದ್ದು. ದಟ್ಟವಾದ ಕಾಡಿನಲ್ಲಿ ಏನಕ್ಕೂ ಹೆದರದೇ ನುಗ್ಗಿ ರೈಲಿನ ದಾರಿ ಮಾಡಿದವರು ಈ ಗೋರ್ ಮಾಟಿಗಳು. ಇಂದಿಗೂ ರಸ್ತೆಯ ಕೆಲಸ ಹಾಗು ರಸ್ತೆ ಬದಿಯ ಪೈಪ್ ಹೂಳುವ ಕೆಲಸದಂತಹಾ ಶ್ರಮದ ಕೆಲಸಗಳಲ್ಲಿ ದಣಿವರಿಯದೇ ಕೆಲಸ ಮಾಡುವವರು ಈ ಗೋರ್ ಮಾಟಿಯರು ಅಂತ ಹೇಳಿದರೆ ಸಂಪೂರ್ಣ ಪರಿಚಯವಾಗುವುದಿಲ್ಲ.

ಈ ದೇಶಕ್ಕೆ ಬಿಡುಗಡೆ ಬೇಕು ಅಂತ ಅಲ್ಲಲ್ಲೇ ಯುದ್ದಸನ್ನದ್ದರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದೆಡೆಯಿಂದ ಮತ್ತೊಂದೆಡೆಗೆ ಶಸ್ತ್ರಾಸ್ತ್ರ ಪೂರೈಸಿದವರು ಈ ಗೋರ್ ಮಾಟಿಗಳು. ಗೆರಿಲ್ಲಾ ಯುದ್ದದಲ್ಲಿ ಪಳಗಿದ ಬಂಜಾರ ಸಮುದಾಯ ಬ್ರಿಟಿಷರಿಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿತು. ಅದೇ ಕಾರಣಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ಈ ಸಮುದಾಯವನ್ನು ಇಂತಹ ಶ್ರಮಜೀವಿಗಳ ಸಮುದಾಯವನ್ನು ಕ್ರಮಿನಲ್ ಆಕ್ಟ್ ಮೂಲಕ ಕೆಟ್ಟವರನ್ನನ್ನಾಗಿಸಿತು‌. ಬ್ರಿಟೀಷರು ತೊಲಗಿದ ನಂತರವೂ ಈ ಸಮುದಾಯಕ್ಕೆ ಅಂಟಿದ ಕಳಂಕ ಸುಲಭಕ್ಕೆ ತೊಳೆದು ಹೋಗಲಿಲ್ಲ. ಸಣ್ಣಪುಟ್ಟ ವ್ಯಾಪಾರದ ಮೂಲಕ, ಶ್ರಮದ ಕೆಲಸಗಳ ಮೂಲಕ ತಮ್ಮದೇ ಅಸ್ತಿತ್ವ ಹೊಂದಿರುವ ಬಂಜಾರ ಸಮುದಾಯ ಕ್ರಿಮಿನಲ್ ಸಮುದಾಯವಾಗಿ ಬಿಂಬಿತವಾಯಿತು‌. ಉಪ್ಪನ್ನು ಮಾರಿ ಜನರಿಗೆ ರುಚಿ ಪರಿಚಯ ಮಾಡಿಸಿದ ಲವಣಿಗರು ಅಂದರೆ ಈ ಚಂದದ ಲಂಬಾಣಿಗಳು ಜನರ ಕಣ್ಣಲ್ಲಿ ಕಳ್ಳರಾದರು. ಮೇಲ್ಜಾತಿಗಳ ಕುತಂತ್ರಕ್ಕೆ ಬಲಿಯಾಗಿ ಕೆಟ್ಟ ಹೆಸರು ತಂದುಕೊಟ್ಟ ಬಹಳಷ್ಟು ಸಮುದಾಯಗಳ ನಡುವೆ ಮುಖ್ಯವಾದ ಈ ಸಮುದಾಯದ ಹೆಸರು ನಮೂದಾಯಿತು‌.

ಈ ದೇಶದ ಅಥವಾ ಈ ಪ್ರಪಂಚದ ಯಾವುದೇ ಬುಡಕಟ್ಟು ಜನಾಂಗ ದೇಶದ್ರೋಹದ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಹಾಗೆ ನೋಡಿದರೆ ತಮ್ಮ ಅಸ್ತಿತ್ವ ಕೂಡ ಒಂದು ಸ್ವಾತಂತ್ರ್ಯ ಅಂತ ಹೇಳಿಕೊಟ್ಟವರೇ ಇಂತಹ ಸಮುದಾಯಗಳು. ಆದರೆ ಇಂತಹ ಸಮುದಾಯಗಳನ್ನು ಕೆಟ್ಟವು ಅಂತ ಮಾಡಿ ಅಳಿವಿನಂಚಿಗೆ ತರಲಾಯಿತು. ಈಗಲೂ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಅಲ್ಲಲ್ಲಿ ಹರಡಿಹೋಗಿರುವ ಹದಿನಾರು ಕೋಟಿ ಬಂಜಾರ ಜನಾಂಗದ ಸಂಸ್ಕೃತಿ ಕೂಡ ಶ್ರಿಮಂತವಾದುದು. ಮೊದಲಿಗೆ ಎದ್ದು ಕಾಣುವ ಅವರ ಚಂದದ ವಸ್ತ್ರ ವಿನ್ಯಾಸ ಎಂತಹವರ ಮನಸಿನಲ್ಲಿಯೂ ಉಲ್ಲಾಸದ ಭಾವನೆ ಮೂಡಿಸುವಂತದು. ಅವರ ನೃತ್ಯ ಶೈಲಿ, ಹಾಡುಗಳು, ಅವರದೇ ಆದ ಭಾಷೆ ಬಂಜಾರ ಸಮಾಜದ ಸದೃಡತೆಗೆ ಹಿಡಿದ ಕನ್ನಡಿ.

ಹದಿನೇಳನೇ ಶತಮಾನದಲ್ಲಿ ಸೇವಾಲಾಲ್ ಎಂಬ ಶ್ರೀಮಂತ ಕುಟುಂಬದ ಕುಡಿಯೊಂದು ಸಮುದಾಯದ ಚೈತನ್ಯವಾಗಿ ಬಂದ ನಂತರ ಒಂದಷ್ಟು ಜಾಗೃತಿ ಬಂಜಾರ ಸಮುದಾಯಕ್ಕೆ ದಕ್ಕಿತಾದರೂ ಸ್ವಾತಂತ್ರ್ಯ ಪೂರ್ವ ಹಾಗು ಸ್ವಾತಂತ್ರ್ಯ ಬಂದ ನಂತರವೂ ಶಾಪಗ್ರಸ್ತರಾಗಿಯೇ ಉಳಿದುಹೋಗಿರುವ ಈ ಬಂಜಾರರ ಬಗ್ಗೆ ನಮ್ಮ ಅರಿವು ವಿಸ್ತರಿಸಲೇ ಇಲ್ಲ. ಕಳೆದ ವಾರ ರಂಗಾಯಣದ ನಿರ್ಮಲಾ ಹಿರೇಮಠ ಮೇಡಂ ಕರೆಮಾಡಿ ಹಾಸನದಲ್ಲಿ ಈ ತರಹದೊಂದು ನಾಟಕ ಪ್ರದರ್ಶನ ಮಾಡುವ ಅವಕಾಶವಿದೆ ನೋಡಿ ಅಂದಾಗ ಕಡಿಮೆ ಸಮಯವಿದ್ದರೂ “ಥಟ್ ಅಂತ ಹೇಳಿ” ಒಪ್ಪಿಕೊಳ್ಳಲು ಸಂಸ್ಕೃತಿಯ ಕಾರಣವಿತ್ತು. ಅದರಲ್ಲೂ ಸಿ ಬಸವಲಿಂಗಯ್ಯನವರಂತಹ ನಿರ್ದೇಶನದ ಒಂದು ನಾಟಕ ನಾವು ಹಾಸನದವರು ನೋಡದಿದ್ದರೆ, ಬಂಜಾರ, ಲಂಬಾಣಿ ಅಂತೆಲ್ಲಾ ಕರೆಸಿಕೊಳ್ಳುವ ಈ ಗೋರ್ ಮಾಟಿ ಸಮುದಾಯದ ಪರಿಚಯ ಶಕ್ತವಾಗಿ ಪರಿಚಯಿಸಿ ಕೊಳ್ಳದೇ ಹೋದರೆ ನಷ್ಟ ನಮಗಲ್ಲದೇ ಮತ್ಯಾರಿಗೆ ಹೇಳಿ..?

‍ಲೇಖಕರು Admin MM

18 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading