ದೇವನೂರು ಕಂಡಂತೆ ಚೆನ್ನಿ

ಹಿಂದೆ 2003ರಲ್ಲಿ ‘ಅಭಿನವ’ ಪ್ರಕಟಿಸಿದ್ದ ರಾಜೇಂದ್ರ ಚೆನ್ನಿ ಅವರ ‘ಅಮೂರ್ತತೆ ಮತ್ತು ಪರಿಸರ’ ಕೃತಿ ಮರುಮುದ್ರಣಗೊಂಡಿದೆ. ಈ ಕೃತಿಗೆ 2003ನೇ ಸಾಲಿನ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

ಈ ಕೃತಿಗೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ..

rajendra-chenni

 

 

 

 

 

ಚೆನ್ನಿಯವರ ಗ್ರಹಿಕೆಯ ಆಳದ ಸ್ತರವು ಅವರ ಕೇವಲ ನಲವತ್ತು ಪುಟಗಳ ‘ಬೇಂದ್ರೆ ಕಾವ್ಯ: ಸಂಪ್ರದಾಯ ಮತ್ತು ಸ್ವಂತಿಕೆ’ ಪುಸ್ತಿಕೆಯಿಂದ ನನ್ನೊಳಗೆ ಇಳಿಯಿತು. ಎಷ್ಟೆಂದರೆ ಸುಮಾರು ದಿನ ಆ ಪುಸ್ತಕವನ್ನು ಜೇಬಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದೆ.

ಸ್ಥಾಪಿತ ಯಜಮಾನ ಸಂಸ್ಕ್ರತಿಯ ವಿರೋಧಕ್ಕಾಗಿ ತನ್ನ ಕನಸು ಮನಸು ತುಂಬಾ ಉಸಿರಾಡುತ್ತಿರುವವರಂತೆ ಕಾಣುವ ಚೆನ್ನಿಯವರ ವ್ಯಕ್ತಿತ್ವವು ಕೂಡಿಸಿ ಕಟ್ಟುವ ಸಮುದಾಯ ಸಂಸ್ಕೃತಿ ಯಜಮಾನರಾಗಲು ಹದವಾಗಿರುವಂತೆ ಕಾಣುತ್ತದೆ. ಅದಕ್ಕಾಗೆ ಅವರ ಬರಹಗಳ ಆಳವಾದ ಪಾಂಡಿತ್ಯವು ಪಾಂಡಿತ್ಯವಾಗಿ ಉಳಿಯದೆ ಅದು ತಿಳಿಯಾಗಿ ವಿವೇಕವಾಗಿ ಸಮುದಾಯದ ತಳಮಳಕ್ಕೆ ಅಂತಃಕರಣವಾಗಿ ನುಡಿಕೊಟ್ಟಂತೆ ಕಾಣುವುದು.

ಒಂದು ಅನ್ನದ ಅಗುಳನ್ನು ಹಿಚುಕಿ ಹೇಳುವುದಾದರೆ-  ಇವರ ಇಲ್ಲಿನ ‘ದಂತಗೋಪುರ ಮತ್ತು ಮಾರುಕಟ್ಟೆ ರಾಜಕೀಯ’ ಲೇಖನವನ್ನು ಮಾಮೂಲಿ ಇರಬೇಕೆಂದು ಓದಲು ಆರಂಭಿಸಿದ ನಾನು ಬೆಚ್ಚಿಬೀಳಬೇಕಾಯ್ತು. ಈ ಲೇಖನದಲ್ಲಿ ಚೆನ್ನಿಯವರು ಕಾಮಿಕ್ಸ್ ಗಳಲ್ಲಿ ವಸಾಹತುಶಾಹಿಯ ಒಳಚರಿತ್ರೆಗಳಿವೆ ಎಂದು ಹೇಳುತ್ತಾ ‘ಆದಿವಾಸಿಗಳ ಮೇಲೆ ಹುಕುಂ ಮಾಡುವ ಪ್ಯಾಂಟಮ್, ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಿದ ಬಿಳಿಯನ ಮೂಲ ಮಾದರಿ ಎನ್ನುವುದನ್ನೂ, ನಿಸರ್ಗ ಮತ್ತು ಪ್ರಾಣಿಗಳ ಮೇಲೆ ರಮ್ಯವಾದ ರೀತಿಯಲ್ಲಿ ಆಳ್ವಿಕೆ ಮಾಡುವ ಟಾರ್ಜನ್, ನಿಸರ್ಗದ ಮೇಲೆ ದಾಳಿಮಾಡಿ ಅದನ್ನು ಬಳಸಿಕೊಳ್ಳುವ ಯೂರೋಪಿಯನ್ ಮನುಷ್ಯನ ಸಂಕೇತವೆನ್ನುವುದನ್ನು ಮರೆಯುತ್ತೇವೆ (ಟಾರ್ಜನ್ ಎಂಬ ಪದದ ಅರ್ಥ ಬಿಳಿ ಚರ್ಮದವ –White Skin)’ ಎನ್ನುವ ಚೆನ್ನಿಯವರ ಈ ನೋಟ ನನ್ನನ್ನು ಅಲುಗಾಡಿಸಿಬಿಟ್ಟಿತ್ತು.

ಆದರೆ ಹೆಚ್ಚೂಕಮ್ಮಿ ಇದೇ ವಿದ್ಯಮಾನ ಅಗೋಚರವಾಗಿ ನಡೆದಿರುವ ಶಂ.ಬಾ. ಅವರ ಸಾಂಸ್ಕೃತಿಕ ಅಧ್ಯಯನಕ್ಕೆ ಚೆನ್ನಿ ಬಂದಾಗ ತಳೆಯುವ ನಿಲುವು ಗ್ರಹಿಕೆಗಳಲ್ಲಿ ಇದೇ ನಿಷ್ಠುರತೆ ಕಾಣುವುದಿಲ್ಲ. ಯಾಕೆಂದರೆ ಸೌರಭೂಮಿಕೆಯನ್ನು ಬೆಳಕಿಗೆ, ಜೀವೋನ್ಮಖ ಪ್ರವೃತ್ತಿಗೆ ಪ್ರೇರಕ ಶಕ್ತಿ ಎಂಬಂತೆ ನೋಡುವ ಶಂ.ಬಾ. ಅವರು ಅದೇ ಚಾಂದ್ರ ಭೂಮಿಕೆಯ ಕತ್ತಲನ್ನು ಮೃತ್ಯುವಿಗೆ ಪರ್ಯಾಯವಾಗಿ ಕಾಣುತ್ತಾರೆ.

ಸೌರಭೂಮಿಕಯು ಅಗ್ನಿಯನ್ನು ಅಗ್ನಿಯಾಗಿ ನೋಡಿದರೆ, ಚಾಂದ್ರ ಭೂಮಿಕೆಯು ಅಗ್ನಿಯನ್ನು ‘ಅಪಾಂನಪಾತ್’ ನೀರೊಳಗಿನ ಅಗ್ನಿಯಾಗಿ ಕಾಣುತ್ತದೆ. ಈ ನೀರೊಳಗಿನ ಅಗ್ನಿಯಲ್ಲಿ ನಾನು ಅಲ್ಲಮನನ್ನು ಕಂಡೆ. ಆಗ ಸೌರಭೂಮಿಕೆಯು ಬೆಳಕು, ಬುದ್ಧಿ, ತರ್ಕ, ತಂದೆಯಂತೆ ಹಾಗೂ ಚಾಂದ್ರ ಭೂಮಿಕೆಯ ಕತ್ತಲು, ಒಳಗಣ್ಣು, ತರ್ಕಾತೀತ, ತಾಯಿಯಂತೆ ಕಂಡಿತು. ಆಗ ಸೌರಭೂಮಿಕೆ ಯಾಕೆ ಬಿಳಿಯ ಆಗಬಾರದು, ಚಾಂದ್ರಭೂಮಿಕೆ ಯಾಕೆ ಕರಿಯ ಆಗಬಾರದು ಅನ್ನಿಸಿತು. ಅರ್ಥವಾಗದೇ ಪೂರ್ತಿ ಓದಲಾಗದೆ ಉಳಿಯುತ್ತಿದ್ದ ಶಂ.ಬಾ ನನಗೆ ಓದದೇ ಅರ್ಥವಾಗತೊಡಗಿದರು! ಈ ರೀತಿಯ ಚರ್ಚೆಯನ್ನೂ ಕೈಗೊಳ್ಳಲು ಈ ಪುಸ್ತಕ ನಮ್ಮನ್ನು ಕೆಣಕುತ್ತದೆ.

‍ಲೇಖಕರು Admin

December 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. .ಮಹೇಶ್ವರಿ.ಯು

    ಮಾತುಗಳು ಮುತ್ತಿನ ಮಣಿಗಳಾಗಿ ಹೊಳೆಯುವ , ಅಂತ:ಕರಣವನ್ನು ಮುಟ್ಟಿ ಬುದ್ಧಿಯನ್ನು ಮೀಟುವ ದೇವನೂರರ ವಾಕ್ಯಗಳಿಗೆ ಮಣಿಯುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: