
ಶಿವಾನಿ ಹೊಸಮನಿ
ತಮ್ಮ ಸೃಜನಾತ್ಮಕ ಚಿಂತನೆಗಳ ಮೂಲಕ ಎಲ್ಲಾ ರೀತಿಯ ಭಕ್ತಿ , ಭಾವನೆಗಳನ್ನು ತಮ್ಮ ಪದಸಂಪತ್ತಿನ ಮೂಲಕ ಕಲಾರಸಿಕರಿಗೆ ಉಣಬಡಿಸುವ ಕಾವ್ಯ ಸಂಪತ್ತಿನ ರಚನೆಕಾರರಾದ ಕವಿಗಳಿಗೆ ಅತ್ಯಂತ ವಿಭಿನ್ನ ರೀತಿಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಗೌರವವನ್ನು ಸಲ್ಲಿಸುವಂತಹ ಕಾರ್ಯಕ್ರಮವೇ ಕವಿನಮನ.
ಗುರು ಶ್ರೀಮತಿ ಅನುರಾಧಾ ವಿಕ್ರಾಂತ್ ಹಾಗೂ ಶ್ರೀಯುತ ಟಿ. ಎಂ ವಿಕ್ರಾಂತ್ ಅವರ ದೃಷ್ಟಿ ಆರ್ಟ್ಸ್ ಸೆಂಟರ್ ಆಯೋಜಿಸಲಾಗಿದ್ದ 16ನೇ ದೃಷ್ಟಿ ನೃತ್ಯೋತ್ಸವ – ಕವಿನಮನ ಕಾರ್ಯಕ್ರಮದಲ್ಲಿ ದೇಶದ ಅತ್ಯಂತ ಶ್ರೇಷ್ಠ ಕಲಾವಿದರು ತಮ್ಮ ನೃತ್ಯದ ಮೂಲಕ ದೇಶದ ವಾಗ್ಗೇಯಕಾರರಿಗೆ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ವಾಂಸರು, ಕವಿಗಳು ಶತಾವಧಾನಿ ಆರ್ ಗಣೇಶ್ ಅವರಿಗೆ ಎಲ್ಲ ನೃತ್ಯ ಕಲಾವಿದರು ಸೇರಿ ಗೌರವ ಸಮರ್ಪಣೆಯನ್ನು ಮಾಡಿದರು.
ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‍ನ ಚೇರ್ಮನ್ ಡಾ. ದಯಾನಂದ ಪೈ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಸಿದ್ಧ ಕೃಷಿ ವಿಜ್ಞಾನಿ ಹಾಗೂ ದೃಷ್ಟಿ ಆರ್ಟ್ ಫೌಂಡೇಶನ್‌ನ ಮುಖ್ಯಸ್ಥರಾದ ಡಾ. ಟಿ. ಎಂ ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದೇಶದ ಶಾಸ್ತ್ರೀಯ ನೃತ್ಯಶೈಲಿಗಳಾದ ಭರತನಾಟ್ಯ, ಕಥಕ್, ಕೂಚಿಪುಡಿ, ಮೋಹಿನಿಯಾಟ್ಟಂಗಳನ್ನು ಕಲಾವಿದರು ಪ್ರಸ್ತುತಪಡಿಸಿದರು. ಉತ್ಕೃಷ್ಟ ಕಲಾವಿದರು ಉಣಬಡಿಸಿದ ಕಾವ್ಯಕಲಾನೃತ್ಯ ರಸದೌತಣದ ಈ ಕಾರ್ಯಕ್ರಮಕ್ಕೆ ಗುರು ಶ್ರೀಮತಿ ಶಮಾ ಕೃಷ್ಣ ಅವರ ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಮೆರುಗು ನೀಡಿತು.

ನೃತ್ಯಗಳಲ್ಲಿ ಮೊದಲಿಗೆ ಕಲಾವಿದೆ ಶಿಲ್ಪ ನಂಜಪ್ಪ ಅವರು ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ಕೃತಿ ’ ಬ್ರೋಚೆವರೆವರುರಾ’ ಮೂಲಕ ರಾಮನನ್ನು ಆರಾಧಿಸಿ, ಹನುಮಂತನಿಂದ ಪೂಜಿಸಲ್ಪಟ್ಟ ಪಾದ ಕಮಲಗಳುಳ್ಳವನೇ ನನ್ನನ್ನು ಪೊರೆಯೆಂದು ಬೇಡುತ್ತಾ , ತಮ್ಮ ನರ್ತನದಿಂದ ಕಾರ್ಯಕ್ರಮಕ್ಕೆ ಸುಂದರ ಚಾಲನೆ ನೀಡಿದರು.
ಕಲಾವಿದೆ ಡಾ. ನೀನಾ ಪ್ರಸಾದ್ ಅವರು ಕವಿ ಸ್ವಾತಿ ತಿರುನಾಳ್ ಮಹಾರಾಜರ ಕಾವ್ಯಕ್ಕೆ ಕೇರಳದ ಮೋಹಿನಿಯಾಟ್ಟಂ ನೃತ್ಯವನ್ನು ಪ್ರಸ್ತುತಪಡಿಸಿದರು. ಶೃಂಗಾರಮಯವಾದ ಅಭಿನಯ ಕೃತಿಗೆ ಕೋಮಲಚಲನೆಗಳಿಂದ, ಮೃದುವಾದ ಪಾದಭೇದಗಳು ಪರಿಣಾಮಕಾರಿ ಅಭಿನಯದಿಂದ ಗಮನ ಸೆಳೆದರು.
ಗುರು ನಿರುಪಮಾ ಹಾಗೂ ರಾಜೇಂದ್ರ ಅವರ ಸಾರಥ್ಯದ ಅಭಿನವ ಡ್ಯಾನ್ಸ್ ಕಂಪೆನಿಯ ಕಲಾವಿದರು ಕವಿ ಲೀಲಾ ಶುಕ ಅವರು ರಚಿಸಿದಂತಹ ಶ್ರೀಕೃಷ್ಣ ಕರ್ಣಾಮೃತದಿಂದ ಆಯ್ದ ಕೆಲವು ಶ್ಲೋಕಗಳಿಗೆ ಕಥಕ್ ನೃತ್ಯವನ್ನು ಪ್ರದರ್ಶಿಸಿದರು. ಶ್ರೀಕೃಷ್ಣನ ಬಾಲ ಲೀಲೆಗಳು ಹಾಗೂ ಗೋಪಿಕೆಯರ ಜೊತೆ ಆತನ ಸಂಬಂಧವನ್ನು ಬಹಳ ಸುಂದರ ಹಾಗೂ ವಿನೋದಮಯವಾಗಿ ಪ್ರದರ್ಶಿಸಲಾಯಿತು. ಗೋಪಿಕೆಯರು ಕೃಷ್ಣನ ಕೊಳಲಿನೊದಿಗೆ ಮಾತನಾಡುವ, ಆಟವಾಡುವ ದೃಶ್ಯ, ಕೃಷ್ಣ ಮತ್ತು ಅವನ ಗೆಳೆಯರು ಬೆಣ್ಣೆಕದಿಯಲು ಹೋಗಿ, ಸಿಕ್ಕಿಬೀಳುವ ಹಾಸ್ಯಮಯ ಪ್ರಸಂಗವನ್ನು ಚತುರತೆಯಿಂದ ಪ್ರದರ್ಶಿಸಲಾಯಿತು.
ಜೊತೆಗೆ ಕಂಸನ ಸೇನಾಧಿಪತಿಯಾದ ಅಕ್ರೂರನು ಕೃಷ್ಣನನ್ನು ಮಥುರೆಗೆ ಕರೆದೊಯ್ಯಲು ಬಂದಾಗ ಗೋಪಿಕೆಯರ ಭಾವವನ್ನು ತೋರುವಂತಹ ಪ್ರಸಂಗವನ್ನು ಅಭಿನಯಿಸಲಾಯಿತು. ಪ್ರೇಕ್ಷಕರನ್ನು ಕೃಷ್ಣಲೋಕಕ್ಕೆ ಕರೆದೊಯ್ದ ಕಥಕ್ ನೃತ್ಯವು ಕರ್ಣಗಳಿಗಷ್ಟೇ ಅಲ್ಲ ಕಣ್ಣುಗಳಿಗೂ ಮುದ ನೀಡಿತು.

ಕೂಚಿಪುಡಿ ನೃತ್ಯಶೈಲಿಯಲ್ಲಿ ಮೈಸೂರು ಸದಾಶಿವರಾವ್ ಅವರ ರಚನೆಯಾದ ಜಾವಳಿಯನ್ನು ಶ್ರೀಲಕ್ಷ್ಮೀ ಗೋವರ್ಧನ್ ಅವರು ಆಕರ್ಷಣೀಯವಾಗಿ ಪ್ರಸ್ತುತಪಡಿಸಿದರು. ತನ್ನ ನಾಯಕನನ್ನು ನೆನಪಿಸಿಕೊಳ್ಳುತ್ತಾ, ನೀನು ಎಲ್ಲಿದ್ದೀಯಾ? ಬೇಗ ನನ್ನ ಬಳಿ ಬಾ ಎಂದು ಹೇಳುವ ಈ ಜಾವಳಿಯಲ್ಲಿ ಸೂಕ್ಷ್ಮಾಭಿಜ್ಞತೆಯಿಂದ ಚೆಲುವಾದ ಅಭಿನಯ, ಸುಸ್ಪಷ್ಟ ಮೋಹಕ ನೃತ್ಯಗಳ ಸಮ್ಮಿಲನವಾಗಿತ್ತು.
ಡಾ. ಶತಾವಧಾನಿ ಗಣೇಶ್ ಅವರು ರಚಿಸಿದಂತಹ ಕವಿನಮನದ ಈ ಸುಂದರ ಪರಿಕಲ್ಪನೆಗೆ ಹೊಂದಿಕೆಯಾಗುವಂತಹ ಸಂಸ್ಕೃತ ಕೃತಿಗೆ ಗುರು ಶ್ರೀಮತಿ ಅನುರಾಧಾ ವಿಕ್ರಾಂತ್ ಅವರ ದೃಷ್ಟಿ ಡ್ಯಾನ್ಸ್ ಸೆಂಟರ್ ಕಲಾವಿದರು ಜೀವ ತುಂಬಿದರು. ಒಂದು ಪಾಕವನ್ನು ತಯಾರಿಸುವಾಗೆ ಹೇಗೆ ಅದರ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು, ಮಸಾಲೆ, ತರಕಾರಿಗಳನ್ನು ಹಾಕಿ ಹದವಾಗಿ ಬೆರೆಸುತ್ತೇವೆಯೋ ಹಾಗೆಯೇ ಒಬ್ಬ ಕವಿ ಪ್ರಕೃತಿ, ಜನಗಳು, ಸಮಾಜ, ಹೀಗೆ ಸುತ್ತಮುತ್ತಲಿನ ಅಂಶಗಳನ್ನು ಆಯ್ದುಕೊಂಡು ಅದರಿಂದ ಪ್ರಭಾವಿತರಾಗಿ ತಮ್ಮ ವಾಕ್ ಚತುರತೆಯ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಿ ಒಂದು ಕೃತಿಯ ಸವಿಯನ್ನು ಉಣಬಡಿಸುತ್ತಾರೆ ಎಂಬುದನ್ನು ಭರತನಾಟ್ಯದ ಮೂಲಕ ಕಲಾವಿದರ ತಂಡ ಅದ್ಭುತವಾಗಿ ಚಿತ್ರೀಕರಿಸಿದರು. ಅನೇಕ ಚಾರಿಗಳು ಹಾಗು ಕರಣಗಳ ಪ್ರಸ್ತುತಿ, ನೃತ್ಯಸಂಯೋಜನೆಯ ವಿಶಿಷ್ಟ ವಿನ್ಯಾಸಗಳು ಮನಮೋಹಕವಾಗಿತ್ತು.
ಗುರು ಶ್ರೀಮತಿ ಶೀಲಾ ಉನ್ನಿಯವರ ಶ್ರೀದೇವಿ ನೃತ್ಯಾಲಯದ ಕಲಾವಿದೆಯರಾದ ಹರಿಣಿ ಜೀವಿತಾ ಹಾಗೂ ಮೃದುಲಾ ಅವರು ಕುಮುದ ಕ್ರಿಯ ರಾಗದಲ್ಲಿ ಸಂಯೋಜಿತವಾದ ಕವಿ ಮುತ್ತುಸ್ವಾಮಿ ದೀಕ್ಷಿತರ ಅರ್ಧನಾರೀಶ್ವರ ಸ್ತೋತ್ರಕ್ಕೆ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು. ಆಕರ್ಷಕ ನೃತ್ಯಭಂಗಿಗಳೊಂದಿಗೆ ಅರ್ಧನಾರೀಶ್ವರನ ಅಂಶಗಳನ್ನು ಅತ್ಯಂತ ಸೃಜನಾತ್ಮಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಸೆಳೆದು ಭಕ್ತಿಭಾವದೆಡೆಗೆ ಕರೆದೊಯ್ದರು.
ಗುರು ಶ್ರೀಮತಿ ವೀಣಾಮೂರ್ತಿ ವಿಜಯ್ ಅವರ ಮಾರ್ಗದರ್ಶನದಲ್ಲಿ ಸಮನ್ವಯ ತಂಡದ ಕಲಾವಿದರು ಕವಿ ಶ್ರೀ ನಾರಾಯಣ ತೀರ್ಥರ ‘ಶಿವ ಶಿವ ಭವ ಭವ’ ತರಂಗಂಗೆ ಕೂಚಿಪುಡಿ ನೃತ್ಯ ವನ್ನು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸಿದರು. ಗಂಗೆಯ ಜೀವನದ ಹಾದಿಯನ್ನು ತಮ್ಮ ಅದ್ಭುತ ನೃತ್ಯದ ಮೂಲಕ ಚಿತ್ರಿಸಿದರು. ಗಂಗೆಯ ಜನನ ಹಾಗೂ ಆಕೆ ಭೂಮಿಯ ಮೇಲೆ ಇಳಿದು ಬರುವಾಗ ಶಿವನು ಜಟೆಯಲ್ಲಿ ಬಂಧಿಸಿದ ಪ್ರಸಂಗಗಳು ಬಹಳ ಮೋಹಕವಾಗಿ ಮೂಡಿ ಬಂದವು. ತಟ್ಟೆ ಹಾಗೂ ಮಡಕೆಗಳ ಮೇಲೆ ಅತ್ಯಂತ ನೈಪುಣ್ಯತೆಯಿಂದ ಕಲಾವಿದರು ನರ್ತಿಸಿ ತಮ್ಮ ನೃತ್ಯ ಚಾತುರ್ಯತೆ ಮೆರೆದರು.

ಕಲಾವಿದೆಯರಾದ ಜನನಿ ಮುರುಳಿ ಹಾಗೂ ಪ್ರತಿಭಾ ರಾಮಸ್ವಾಮಿಯವರು ಕನ್ನಡದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತಹ ಕೃತಿಯಿಂದ ಆಯ್ದ ಪ್ರಸಿದ್ಧ ಭಾವಗೀತೆ ಅಂತರಂಗದಾ ಮೃದಂಗಕ್ಕೆ ತಮ್ಮದೇ ವಿಭಿನ್ನ ಪರಿಕಲ್ಪನೆಯ ಮೂಲಕ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದರು.
ವೈಕುಂಠದ ದ್ವಾರಪಾಲಕರಾದ ಜಯ ವಿಜಯರು ಬ್ರಹ್ಮಪುತ್ರರಿಂದ ಶಾಪವನ್ನು ಪಡೆದು, ಹಿರಣ್ಯಕಶ್ಯಪು-ಹಿರಣ್ಯಾಕ್ಷ, ರಾವಣ-ಕುಂಭಕರ್ಣ, ಶಿಶುಪಾಲ-ದಂತವಕ್ರರಾಗಿ ಮೂರುಜನ್ಮಗಳಲ್ಲಿ ಅವತರಿಸಿ ನಾರಾಯಣನಿಂದ ಮುಕ್ತಿ ಪಡೆದು ಕೊನೆಗೆ ತಮ್ಮ ಜೀವನದ ಅಂತಿಮ ಗುರಿಯನ್ನು ಸಾಧಿಸಿ ತಮ್ಮ ನಿಜಸ್ಥಾನ ಸೇರುವ ಪ್ರಸಂಗಗಳನ್ನು ಭಾವಗೀತೆಯ ಸಾಲುಗಳಿಗೆ ಅಳವಡಿಸಿ ಪ್ರಸ್ತುತ ಪಡಿಸಿದರು. ಹರಿಯಿಂದ ದೂರವಾದ ವಿರಹವನ್ನು ಸಹಿಸಿ, ಹಲವು ಜನ್ಮದ ಧ್ಯಾನದಿಂದ ಮತ್ತೆ ಹರಿಯ ಬಳಿ ಹಿಂದಿರುಗುವರು ಎಂಬ ಪರಿಕಲ್ಪನೆ ಬಹಳ ಕ್ರಿಯಾತ್ಮಕವಾಗಿ ಮೂಡಿಬಂದಿತು.
ನೃತ್ಯಗಾರ್ತಿ ಸಿರೀಶಾ ಶಶಾಂಕ್ ಅವರು ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಅವರ ರಚನೆಗಳಾದ ವರ್ಣ,ಜಾವಳಿ ಹಾಗೂ ತಿಲ್ಲಾನಗಳ ಸಮ್ಮಿಳಿತ ನೃತ್ಯಬಂಧವನ್ನು ಪ್ರದರ್ಶಿಸಿದರು. ಸುಂದರ ನರ್ತನ, ಹಾಗೂ ನುರಿತ ಭಾವಾಭಿನಯದ ಮೂಲಕ ತಮ್ಮ ನೃತ್ಯ ಪ್ರಾವೀಣ್ಯತೆಯನ್ನು ಮೆರೆದರು. ಉಪಾಧ್ಯೆ ನೃತ್ಯ ಶಾಲೆಯ ಗುರುಗಳಾದ ಪಾರ್ಶ್ವನಾಥ್ ಉಪಾಧ್ಯೆ, ಶೃತಿ ಉಪಾಧ್ಯೆ ಹಾಗೂ ಆದಿತ್ಯ ಪಿವಿ ಅವರ ಜೊತೆಯಲ್ಲಿ ತಂಡದ ಕಲಾವಿದರು ಕವಿ ವ್ಯಾಸರಾಜರ ಕೃತಿಗಳಿಗೆ ನರ್ತಿಸುವ ಮೂಲಕ ರಂಗದ ರಂಗೇರಿಸಿದರು. ಕಣ್ಣಿಗೆ ಹಬ್ಬದಂತೆ ನರ್ತಕರ ವಿಶಿಷ್ಟ ಸಮೂಹ ರಚನೆಗಳು ಗಮನ ಸೆಳೆದವು. ನೃತ್ತಗಳ ಪ್ರಭಾವಳಿಯಲ್ಲಿ ಸಾಮರಸ್ಯವು ಸೊಗಸಾಗಿತ್ತು.
ಗಜಮುಖನೇ ಸಿದ್ಧಿದಾಯಕನೇ ಎಂದು ಗಣೇಶನಿಗೆ ಶರಣಾಗಿ, ಮಂದಮತಿಯನು ಬಿಡಿಸಿ ಚಂದಜ್ಞಾನವನ್ನು ನೀಡು ಎಂದು ತ್ರಿಜಗವಂದಿತನ ಹಲವು ರೂಪಗಳನ್ನು ಕಲಾವಿದರು ಸುಂದರ ಭಂಗಿಗಳ ಮೂಲಕ ಬಿಂಬಿಸಿದರು. ನಂತರ ಕೃಷ್ಣಾ ನೀ ಬೇಗನೇ ಬಾರೋ ಎಂಬ ರಚನೆಗೆ ದ್ರೌಪದಿ, ಕನಕದಾಸರು ಹಾಗೂ ಅರ್ಜುನನು ಕೃಷ್ಣನನ್ನು ಆರಾಧಿಸುವ ಸನ್ನಿವೇಶಗಳನ್ನು ಅಭಿನಯಿಸಿದರು. ಗಂಟೆಯ ನಾದದೊಂದಿಗೆ ಕಲಾರಸಿಕರಿಗೆ ದೈವಿಕ ಭಾವದ ಅನುಭೂತಿ ನೀಡಿದರು.









ಕಾರ್ಯಕ್ರಮದ ವಿವರ ವರದಿ ಚೆನ್ನಾಗಿ ಮೂಡಿ ಬಂದಿದೆ. ಲೇಖನ ಓದುತ್ತಿದ್ದರೆ ಸ್ವತಹ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ಭಾಸವಾಯಿತು. ಕುಮಾರಿ ಶಿವಾನಿ ಹೊಸಮನಿ ಅವರ ಬರವಣಿಗೆ ಶೈಲಿಗೆ ಒಂದು ನಮನ.