ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುರಿತ ಗಜಕೆ ಪಂಚಾನನ

-ವಿಜಿತ

‘ಎನಿಗ್ಮ‘ ಬ್ಲಾಗ್ ನಿಂದ

ಮೆರಿಕೆಯಲ್ಲಿ ಗುಲಾಮಗಿರಿ ಪದ್ಧತಿ ವ್ಯಾಪಕವಾಗಿ ರೂಢಿಯಲ್ಲಿದ್ದ ಕಾಲ. ಕರಿಯರ ಪಾಲಿಗೆ ನರಕಸದೃಶವೆಂಬಂತಿದ್ದ ಅಂಥ ಪರಿಸ್ಥಿತಿಯಲ್ಲಿ, ಕರಿಯನೊಬ್ಬನ ವಿರುದ್ಧ ಬಿಳಿಯ ಹೆಂಗಸನ್ನು ಬಲಾತ್ಕರಿಸಿದ ಆರೋಪ ಬರುತ್ತದೆ. ಕರಿಯನ ಪರವಾಗಿ ವಾದಿಸಲು ಯಾವೊಬ್ಬ ವಕೀಲನೂ ಒಪ್ಪುವುದಿಲ್ಲ. ವಿಚಿತ್ರ ತಬ್ಬಲಿಯಂತೆ ನಿರ್ಮಾನುಷ ಬಯಲಲ್ಲಿ ಒಬ್ಬಂಟಿಯಾಗಿ ನಿಲ್ಲುತ್ತಾನೆ ಆ ಅಮಾಯಕ. ಆಗ ಬರುತ್ತಾನೆ ಆತನ ಬಳಿಗೊಬ್ಬ ವಕೀಲ. ಅಚ್ಚರಿಯೆಂದರೆ ಆತ ಬಿಳಿಯ. ಆಟಿಕಸ್ ಫಿಂಚ್ ಎಂದು ಆತನ ಹೆಸರು. ಆರೋಪಿ ಸ್ಥಾನದಲ್ಲಿ ನಿಂತ ಕರಿಯನ ಪರವಾಗಿ ವಾದಿಸಲು ಮುಂದಾಗುವಾಗ ತಾನು ನೈತಿಕವಾಗಿ ಸರಿಯಾದದ್ದನ್ನೇ ಮಾಡುತ್ತಿದ್ದೇನೆ ಎಂಬುದೊಂದೇ ಫಿಂಚ್ ಬಲಕ್ಕಿರುವುದು. ಹೆಜ್ಜೆಹೆಜ್ಜೆಗೂ ಸೋಲಿನತ್ತಲೇ ಸಾಗುತ್ತಿರುವವನನ್ನು ಕಾಪಾಡಿಕೊಳ್ಳಲು ಸಮರ್ಥಿಸಿಕೊಳ್ಳಲು ವಸ್ತುಸ್ಥಿತಿ ಗೊತ್ತಿದ್ದೂ ಫಿಂಚ್ ಸತತ ಹೋರಾಡುತ್ತಾನೆ.

ತೀರ್ಪು ಹೊರಬೀಳುತ್ತದೆ. ನಿರೀಕ್ಷೆಯಂತೆ ಕರಿಯನನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಗೆದ್ದೆವೆಂಬ ಜೋರಿನಲ್ಲಿ ಬಿಳಿಯರೆಲ್ಲ ಕೇಕೆ ಹಾಕುತ್ತ ಕೋರ್ಟಿನಿಂದ ಹೊರಹೋಗುತ್ತಿರುವಾಗ, ಕೋರ್ಟ್ ರೂಮಿನಲ್ಲಿ ಫಿಂಚ್ ತನ್ನ ಫೈಲುಗಳನ್ನು ಮರಳಿ ಬ್ಯಾಗಿನಲ್ಲಿಡುತ್ತ ಒಬ್ಬಂಟಿಯಾಗಿ ನಿಂತಿರುತ್ತಾನೆ. ವಿಜಯೋತ್ಸವ ಆಚರಿಸಿಕೊಂಡು ಹೋಗುತ್ತಿದ್ದ ಬಿಳಿಯರ ಮಧ್ಯೆಯಿಂದಲೇ ಫಿಂಚ್ ಹೊರಹೋಗುತ್ತಿದ್ದಾಗ ಅಲ್ಲೆ ಒಂದು ಬದಿಯಲ್ಲಿ ಕೂತಿದ್ದ ಕರಿಯರ ಸಮೂಹ ಎದ್ದುನಿಂತು ಆತನಿಗೆ ಗೌರವ ಸೂಚಿಸುತ್ತದೆ. ಜತೆಯಲ್ಲೇ ಕೂತಿದ್ದ ಫಿಂಚ್ ಮಗಳಿಗೆ ಅದೇ ಕರಿಯರ ಹೆಣ್ಣೊಬ್ಬಳು “ಎದ್ದು ನಿಲ್ಲಮ್ಮಾ, ನಿನ್ನ ಅಪ್ಪ ಬರುತ್ತಿದ್ದಾರೆ” ಎಂದು ಸೂಚಿಸುತ್ತಾಳೆ. ಈ ಬಗೆಯಲ್ಲಿ, ತಮ್ಮ ಸಲುವಾಗಿ ಹೋರಾಡಿದವನನ್ನು ಆ ಜನಾಂಗ ಸೋತ ಉರಿಯನ್ನೂ ಮರೆತು ಅಭಿಮಾನದ ದೀಪ ಹಚ್ಚಿ ಎದೆಯೊಳಗೆ ತುಂಬಿಕೊಳ್ಳುತ್ತದೆ.

to1

ಹತಾಶ ಸ್ಥಿತಿಯಲ್ಲೂ ಸತ್ಯ ಮತ್ತು ನೈತಿಕತೆಯ ಒಂದು ಸಣ್ಣ ಎಳೆಯನ್ನು ತುಂಡಾಗದಂತೆ ಉಳಿಸಿಕೊಳ್ಳಬೇಕೆಂದು ಇಡೀ ತನ್ನ ಸಮುದಾಯವನ್ನೇ ಎದುರುಹಾಕಿಕೊಳ್ಳುವ ಫಿಂಚ್ ಹೋರಾಟಗಾಥೆ ಅಮೆರಿಕನ್ ಲೇಖಕಿ ಹಾರ್ಪರ್ ಲೀ ಬರೆದ To Kill A Mockingbird ಎಂಬ ಕೃತಿ. (೧೯೬೦ರಲ್ಲಿ ಪ್ರಕಟಗೊಂಡ ಈ ಕೃತಿ ಪುಲಿಟ್ಜರ್ ಪ್ರಶಸ್ತಿ ಪಡೆದಿದೆ. ಅದಕ್ಕಿಂತ ಹೆಚ್ಚಾಗಿ ಹಾರ್ಪರ್ ಲೀ ಗುರುತಾಗುವುದೇ ಈ ಕೃತಿಯ ಮೂಲಕ. ಇದು ೧೯೬೨ರಲ್ಲಿ ಚಲನಚಿತ್ರವಾಗಿಯೂ ಅಷ್ಟೇ ಗಮನ ಸೆಳೆಯಿತು.) ಇಡೀ ಕಥೆ ನಿರೂಪಿತವಾಗಿರುವುದು ಫಿಂಚ್ ಮಗಳ ಗ್ರಹಿಕೆಯಲ್ಲಿ. ೮ ವರ್ಷದ ಆ ಎಳೆಯಳ ಕಣ್ಣಲ್ಲಿ ಅಪ್ಪ ಆ ಕರಿಯನ ಪರವಾಗಿ ವಾದಿಸುತ್ತ ಹೋಗುವ ಚಿತ್ರ ಅಗಾಧದ್ದಾಗಿ ನಿಲ್ಲುತ್ತದೆ. ಅಪ್ಪನ ಅಂತಃಶಕ್ತಿ, ಬುದ್ಧಿಮತ್ತೆ, ಸಾಹಸೀ ಮನೋಭಾವ ಅವಳೆದುರು ತೆರೆದುಕೊಳ್ಳುತ್ತ ಹೋಗುತ್ತದೆ. ಹೀರೋ ಆಗಿ ಅಪ್ಪ ಅವಳ ಕಣ್ಮನಗಳಲ್ಲಿ ಸ್ಥಾಪಿತವಾಗುತ್ತಾನೆ. ಫಿಂಚ್ ಪ್ರತಿನಿಧಿಸುವ ಮೌಲ್ಯಗಳು, ಕ್ರೌರ್ಯ ಮತ್ತು ಹಿಂಸೆ ತುಂಬಿರುವ ಜಗತ್ತಿನಲ್ಲೇ ದಯಾಮಯತೆ ಮತ್ತು ಘನತೆ ಕೂಡ ತನ್ನ ಪರಮ ರೂಪದಲ್ಲಿ ಗೋಚರವಾಗಬಲ್ಲದು ಎಂಬ ಭರವಸೆಯನ್ನು ತುಂಬುತ್ತವೆ.

ಮೋಕಿಂಗ್ ಬರ್ಡ್, ಇತರ ಪಕ್ಷಿಗಳ ದನಿಯನ್ನು ಅನುಕರಿಸುವ ಅಮೆರಿಕದ ಒಂದು ಜಾತಿಯ ಹಾಡುಹಕ್ಕಿ. ಅದು ನಿರುಪದ್ರವಿ ಕೂಡ. ನಮ್ಮನ್ನು ಘಾಸಿಗೊಳಿಸದವರ ಬದುಕನ್ನು ನಾಶಮಾಡಹೊರಡುವುದು ಎಂಥ ನೀಚತನ ಎಂಬ ಕಳವಳವನ್ನು ಧ್ವನಿಸುತ್ತದೆ ಈ ಪುಸ್ತಕ.

ಫಿಂಚ್ ತನ್ನ ಮಗಳಿಗೆ ಹೇಳುವ ಮಾತೊಂದು ಯಾವತ್ತಿಗೂ ಜೀವಂತವಾಗುಳಿಯುವಂಥದ್ದು: “ಒಬ್ಬ ಮನುಷ್ಯನ ಸಂದರ್ಭವನ್ನು ಸ್ವತಃ ಆತನ ದೃಷ್ಟಿಯಿಂದ ಗ್ರಹಿಸುವುದು ಸಾಧ್ಯವಾಗದೇ ಹೋದರೆ ಎಂದಿಗೂ ನೀನು ಆತನನ್ನು ಅರ್ಥ ಮಾಡಿಕೊಳ್ಳಲಾರೆ.”

* * *

ಇವತ್ತಿನ ದುರಂತವೇನೆಂದರೆ, ಹೀಗೆ ನಿರುಪದ್ರವಿ ಜೀವಿಯ ಮನಸ್ಸಿಗೆ ಕಿವಿಗೊಡುವ ತಾಳ್ಮೆಯಾಗಲಿ, ಅದರ ಮಿಡಿತವನ್ನು ಕೇಳಿಸಿಕೊಳ್ಳುವ ಗ್ರಹಣಶಕ್ತಿಯಾಗಲಿ ರಣೋತ್ಸಾಹಿಗಳಿಗೆ ಇಲ್ಲದೇ ಇರುವುದು. ಈ ವಿಚ್ಛಿದ್ರಕಾರಿಗಳಿಗೆ ಒಡೆಯುವುದೊಂದೇ ಗೊತ್ತು; ಬಲಹೀನರನ್ನು ಬೆದರಿಸುವುದಷ್ಟೇ ಗೊತ್ತು. ಯಾರೋ ಕಟ್ಟಿಕೊಂಡಿದ್ದ ಕನಸು ನುಚ್ಚುನೂರಾಗಿ ಬೀಳುವಾಗ, ಯಾರೋ ನರಳುವಾಗ ಇವರು ಅತ್ಯಂತ ಸಂತೋಷದಿಂದ ಕೇಕೆ ಹಾಕುತ್ತಾರೆ. ಏನೋ ಮಹತ್ತರವಾದದ್ದನ್ನು ಮಾಡಿದೆವೆಂಬ ಹಮ್ಮಿನಿಂದ ಬೀಗುತ್ತಾರೆಯೇ ಹೊರತು ಕಿಂಚಿತ್ ಅಪರಾಧಿ ಪ್ರಜ್ಞೆಯೂ ಇವರನ್ನು ಕಾಡುವುದಿಲ್ಲ.

To Kill A Mockingbird ಕೃತಿಯ ಕಥಾನಾಯಕ ಫಿಂಚ್ ಯಾಕೆ ಒಂದು ಘನವಾದ ರೂಪಕವಾಗಿ ಉಳಿದುಬಿಡುತ್ತಾನೆಂದರೆ, ಈ ಬಗೆಯ ವಿಚ್ಛಿದ್ರಕಾರಿಗಳನ್ನು ಕೆಲ ಸಮಯದ ಮಟ್ಟಿಗಾದರೂ ಅಧೀರರನ್ನಾಗಿ ನಿಲ್ಲಿಸಿಬಿಡುವುದರಿಂದ. ದುರ್ಬಲ ಅಮಾಯಕರ ಪಾಲಿನ ದಾರಿದೀಪದಂತಿರುವ ಅಂಥ ವ್ಯಕ್ತಿತ್ವವೂ ಅಧರ್ಮದ ಗೆಲುವಿನ ಮುಂದೆ ನಿಸ್ಸಹಾಯಕವಾಗಿ ನಿಲ್ಲುವಾಗ ಒಂದು ಸಮುದಾಯ ಅನುಭವಿಸುವ ಆಘಾತ ಎಲ್ಲ ಕಾಲದ ಕಥಾನಕಗಳ ಒಂದು ಭಾಗವೇ ಆಗಿರುವಂಥದ್ದು.

ಗಾಂಧಿಯ ಬಗ್ಗೆ ಬರೆಯುತ್ತ ಲೋಹಿಯಾ ಹೇಳುತ್ತಾರೆ: “…ಮಗನನ್ನು ಕಳೆದುಕೊಂಡ ತಾಯಿಯೇ ಆಗಲಿ, ಪ್ರೇಯಸಿಯನ್ನು ಕಳೆದುಕೊಂಡ ಪ್ರಿಯತಮನೇ ಆಗಲಿ ಅವರಿಂದ ಏನೋ ಒಂದು ಸಮಾಧಾನ ಶಾಂತಿ ಪಡೆಯುತ್ತಿದ್ದರು. ಇದೊಂದು ಅತ್ಯಂತ ವಿಚಿತ್ರ ಸಂಗತಿ. ಆದರೂ ಸತ್ಯ ಸಂಗತಿ. ಎಲ್ಲ ದೀನರೂ ದಲಿತರೂ ಸಂಕಟಕ್ಕೊಳಗಾದವರೂ ಅವರಲ್ಲಿ ಧನ್ಯತೆಯನ್ನೂ ಶಾಂತಿಯನ್ನೂ ಹೊಂದುತ್ತಿದ್ದರು. ಆದ್ದರಿಂದಲೇ ಆತ ಸತ್ತಾಗ ಕೋಟಿಗಟ್ಟಲೆ ಜನರು ಅನುಭವಿಸಿದ ಹತಾಶೆ, ದುಃಖ ಇವು ಹಿಂದೆಂದೂ ಸಂಭವಿಸಿರಲಿಲ್ಲ.”

ಗಾಂಧಿಯ ನಿರ್ಗಮನ ಉಂಟುಮಾಡಿದ ಹತಾಶೆ ಬಲು ದೊಡ್ಡ ಪ್ರಮಾಣದ್ದಾಗಿದ್ದಾಗಲೇ, ಗಾಂಧಿಯನ್ನು ಕೊಂದವರ ವಕೀಲಿಕೆ, ವಶೀಲಿಗಳೂ ಅಷ್ಟೇ ಮಟ್ಟದಲ್ಲಿ ಮತ್ತೊಂದು ಮಗ್ಗುಲಲ್ಲಿ ನಡೆದವು. ಲೋಹಿಯಾ ಅವರೇ ಗಾಂಧಿ ಕಗ್ಗೊಲೆಯ ಸಂದರ್ಭವನ್ನು ವಿವರಿಸುತ್ತ ಹೀಗೆ ಬರೆಯುತ್ತಾರೆ: “ದೇಶದ ರಕ್ಷಕ ಕಣ್ಣೆದುರೇ ಸತ್ತುಬಿದ್ದಿದ್ದ. ಹಾಗೂ ದೇಶದ ದೊರೆಗಳೆನ್ನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಾಂಧೀಜಿಯ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯ ಮೇಲಿರುವಾಗಲೇ ಗಾಂಧಿಯವರ ಹತ್ಯೆ ನಡೆದಿತ್ತು.”

ಗಾಂಧಿಯ ಆತ್ಮಚೈತನ್ಯವನ್ನು ತಮ್ಮ ಮಿತಿಯಲ್ಲಾದರೂ ಕಾಯ್ದುಕೊಳ್ಳಬೇಕೆಂದು ಶ್ರಮಿಸುತ್ತಿರುವವರ ವಿಚಾರದಲ್ಲೂ ಈ ವಿಪರ್ಯಾಸ ಮುಂದುವರಿದೇ ಇದೆ. ಗಾಂಧಿಯ ಹೆಜ್ಜೆಯನ್ನು ಕಾಯಾ ವಾಚಾ ಮನಸಾ ಅನುಸರಿಸುತ್ತಿರುವವರ ಸಂಕಟ ಒಂದೆಡೆಯಾದರೆ, ಗಾಂಧಿಯನ್ನು ಅನುಸರಿಸುತ್ತಿದ್ದೇವೆಂದು ನಾಟಕವಾಡುವವರ ಅಟ್ಟಹಾಸ ಮತ್ತೊಂದೆಡೆ ನಡೆದೇ ಇದೆ. ಅಥವಾ ಹೀಗೆಲ್ಲ ಹೇಳುವುದೇ ಅತ್ಯಂತ ಕ್ಲೀಷೆಯಾಗುತ್ತದೆ.

ಯಾಕೆಂದರೆ, ಇವತ್ತು ಗಾಂಧಿ ಎಂದರೆ ಮೋಹನದಾಸ ಕರಮಚಂದ ಗಾಂಧಿ ಖಂಡಿತ ಅಲ್ಲ; ಅದೊಂದು ರಾಜಕೀಯ ಮನೆತನದ ಹೆಸರು ಮಾತ್ರ. ಗಾಂಧಿಯ ಗುರುತೇ ಇಲ್ಲದವರು ಗಾಂಧಿ ಹೇಳುತ್ತಿದ್ದ ಸಾಂತ್ವನವನ್ನು ಹೇಗೆ ಹೇಳಿಯಾರು? ಗಾಂಧಿ ಆಲಿಸುತ್ತಿದ್ದಂತೆ ಮತ್ತೊಂದು ಮನಸ್ಸಿನ ತಳಮಳವನ್ನು ಹೇಗೆ ಆಲಿಸಿಯಾರು?

ಯಾರದೋ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ವಿಚ್ಛಿದ್ರಕಾರಿಗಳಿಗೆ, ಆ ಬೆಂಕಿಯನ್ನು ಮನೆ ಬೆಳಗುವ ದೀಪವಾಗಿಸಬಹುದಿತ್ತಲ್ಲ  ಎಂದು ಯಾವುದೋ ಒಂದು ಅಸಾಧಾರಣ ಕ್ಷಣದಲ್ಲಾದರೂ ಅನ್ನಿಸಿಬಿಡುವ ಹಾಗಿದ್ದರೆ ಮತ್ತಷ್ಟು ಅಮಾಯಕರ ಮನೆಗಳು ಉಳಿದುಕೊಳ್ಳುತ್ತವೆ ಎನ್ನುವುದಕ್ಕಿಂತ, ಮನಸ್ಸುಗಳು ಬೇಯುವುದು ತಪ್ಪಿದಂತಾಗುತ್ತದೆ.

ಫಿಂಚ್ ಹೇಳಿದ ಬಗೆಯಲ್ಲಿ ಮನುಷ್ಯನನ್ನು ಮನುಷ್ಯ ಅರ್ಥ ಮಾಡಿಕೊಳ್ಳುವುದು ಯಾವಾಗ?

‍ಲೇಖಕರು avadhi

15 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading