ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’

ದೀಪಾ ಗೋನಾಳ

“ಇದು ಕತ್ತಲನ್ನು ಭೇದಿಸುವ ಜ್ಯೋತಿ” ಹೀಗೊಂದು ಹಣೆಬರಹವನ್ನ ಹೊತ್ತ ಪುಸ್ತಕ ಓದಿಸಿಕೊಂಡು ಹೋದ ರೀತಿ ನಿಜಕ್ಕು ಅಚ್ಚರಿ ಹುಟ್ಟಿಸಿತು.

ಕಥೆ ಕುರಿತಾಗಿ ಬರೆಯುವ ಮೊದಲು ಒಂದು ಮುಖ್ಯವಾದ ವಿಷಯ ಹೇಳಿ ಬಿಡ್ತಿನಿ.‌ಅಧ್ಯಾಯ ೧೪,೧೫ ಮತ್ತು ಹತ್ತೊಂಬತ್ತು ಈ ಮೂರು ಅಧ್ಯಾಯಗಳನ್ನ ನಾವು ಈಗಿನ ಹೈಸ್ಕೂಲ್ ಮಕ್ಕಳಿಗೆ ಪಾಠವಾಗಿ ಓದಿಸುವ ಅವಶ್ಯಕೆ ಇದೆ ಅನಿಸ್ತು. ಅದಕ್ಕೆ ಕಾರಣ ಇಷ್ಟೆ ಇತ್ತೀಚೆಗೆ ಕೋಮುಗಲಭೆಗಳು ಸಾಂಕ್ರಾಮಿಕವಾಗುತ್ತಿರುವ ಈ ಕಾಲಗಟ್ಟದಲ್ಲಿ ಗಾಂಧಿ ಹಾಗೂ ಶಾಂತಿ ಇವೆರಡು ಅಂಶಗಳನ್ನ ಇತಿಹಾಸ ಪಾಠದಲ್ಲಿ ತೂರಿಸಿ ಇಸವಿ ಸಮೇತ ಓದಿಸುವ ಬದಲು ಕಥೆ ಹೇಳುವ ಶೈಲಿಯಲ್ಲಿ ಓದಲು ಕೊಟ್ಟರೆ ಸ್ವಲ್ಪವಾದರೂ ಪರಿಣಾಮ ನಿರೀಕ್ಷಿಸಬಹುದು ಅನ್ನೋ ಆಸೆ.

ಬಾಬಾ ಆಮ್ಟೆ, ಅರುಂಡೇಲ್, ವಾಣಿಯ ಸಮಸ್ಯೆ, ಯಾ ದೇವಿ ಸರ್ವ ಭುತೇಷು, appointment with love.. Sonnet 116, ಹೀಗೆ ಯಾವುದೋ ಪಾಠದ ಯಾವುದೋ ವಾಕ್ಯ ನನ್ನನ್ನು ಇವತ್ತಿಗೂ ಕಾಡುತ್ತಿದೆ ಮತ್ತು ಜತನದಿಂದ ಕಾಪಾಡುತ್ತಿವೆ. ಅಂತ ಸಾಕಷ್ಟು ಸಾಲುಗಳು ಈ ಮೂರು ಅಧ್ಯಾಯದಲ್ಲಿವೆ ಅನ್ನುವುದು ನನ್ನ ಗ್ರಹಿಕೆ. ಭವಿಷ್ಯದಲ್ಲಿ ಈ ಕಾದಂಬರಿಯನ್ನ ನಾನು ಪದವಿ ವಿದ್ಯಾರ್ಥಿಗಳ ಪಠ್ಯವಾಗಿ ಕಂಡರೂ ಆಶ್ಚರ್ಯವಿಲ್ಲ ಆದರೆ ಅಂತ ಉದಾತ್ತವಾದಿಗಳು ನಮ್ಮಲ್ಲಿಲ್ಲ ಎಂಬ ವಾಸ್ತವದ ಅರಿವು ಕೂಡ ನನಗಿದೆ.
ಈ ವಿಚಾರ ಪಕ್ಕಕ್ಕಿರಲಿ.

ಸೂಡಿ ಅನ್ನೊ ಪದ ನಂಗೆ ಹೊಸದು ನಾವು ದಾರಿಗಾಗಿ ಚಕ್ಕಡಿ ಕೆಳಗೆ ಲಾಟೀನು ಕಟ್ಟತೀವಿ. ದಾರಿ ತೋರುವಾಗ ಮುಂದಡಿ ಇಡುವವರ ಕೈಲಿ ಹಿಲಾಲು ಕೂಡ ಇರುತ್ತೆ. ಅಥವಾ ಪೆಟ್ರೊಮ್ಯಾಕ್ಸ್.

ಹಿಲಾಲು ಮತ್ತೆ ಸೂಡಿಯ ಸ್ವರೂಪ ಒಂದೇ ಅಂತ ನನಗೆ ಕಥೆ ಓದ್ತಾ ಹೋದ ಹಾಗೆ ನಿಚ್ಚಳವಾಯ್ತು. ದಾರಿ ತೋರಲು ಮೈ ಜಳಪಿಸುವ ಬೆಳಕಿನ ಹುಳು ಕೂಡ ದಾರಿದೀಪವೇ..

ಇಲ್ಲಿ ಇಡೀ ಕಾದಂಬರಿಯಲ್ಲಿ ಸೂಡಿ ಒಂದು ದೊಡ್ಡ ರೂಪಕದಂತೆ ಕೆಲಸ ಮಾಡಿದೆ. ಅದರ ಕೆಲಸ ಕತ್ತಲಿನಲ್ಲಿರುವವರಿಗೆ, ದಾಸ್ಯದಲ್ಲಿರುವವರಿಗೆ, ತಾರತಮ್ಯದ ಅಂಧಕಾರದಲ್ಲಿರುವವರಿಗೆ, ಅಸಮಾನತೆಯಲ್ಲಿ ಸಿಕ್ಕು ನರಳುತ್ತಿರುವವರಿಗೆ ಬಿಡುಗಡೆಯ ಹಾದಿ ತೋರುವ ಜ್ಯೋತಿಯಾಗಿ ಕೆಲಸ‌ಮಾಡಿದೆ. ಕೈ ಯಿಂದ ಕೈಗೆ, ಗಂಡಿನಿಂದ ಹೆಣ್ಣಿಗೆ, ಮೇಲ್ವರ್ಗದ ಗಿರಿಜೆಯಿಂದ ತಳಸಮುದಾಯದ ಸನಿಯಾರುವಿನ ಕೈಗೆ, ಕಡೆಗೆ ತನಿಯಾನ ಸಾವಿನಿಂದ ಪೋಲಿಸ್ ಅಧಿಕಾರಿಯ ಅಂಧಕಾರ ಕಳೆದು ಅವನ ಕೈಗೆ ಚರಕ ಕೊಡುವ ಮಟ್ಟಿಗೆ ಸೂಡಿ ತನ್ನ ಬೆಳಕನ್ನ ಬೆಳಕಿನ ಹಾದಿಯನ್ನ ತಲುಪಬೇಕಾದ ಗಮ್ಯವನ್ನ ಹಂತಹಂತವಾಗಿ ದಾಟುತ್ತ ಹೋಗುತ್ತದೆ. ಮತ್ತು.. ತನ್ನ ಗಮ್ಯವನ್ನ ಎಲ್ಲ ಅಡೆತಡೆಗಳ ನಡುವೆಯು ತಲುಪುತ್ತದೆ.ಬೆಳಕಿಗಿರುವ ಶಕ್ತಿ ಅದೇ ಅಲ್ಲವೇ..!?

ಕಾಡಿನಗುಂಟ ಸಾಗುವ ಸೂಡಿ ಕಾಡಿನ, ವೈಭವನ್ನ ವಿವಿಧ ಹೂ, ಹಣ್ಣು, ಎತ್ತೆರೆತ್ತರದ ಮರ ಸೌಪರ್ಣಿಕಾ ನದಿ, ಗುಡ್ಡ, ಕಾಡಿನ ಎರಡು ಪ್ರಣಯದ ಹಕ್ಕಿ-ತನಿಯಾ ಮತ್ತು ಸನಿಯಾರು. ಎಲ್ಲವನ್ನ ಕಟ್ಟಿಕೊಡುವ ರೀತಿ ಕಥೆಗಾರನನ್ನ ಬರೀ ಲೇಖಕನಲ್ಲದೆ ಒಳ್ಳೆ ಕಲಾಕಾರನು ಎಂಬುದನ್ನ ಬಗೆದು ತೋರಿಸುತ್ತದೆ. ಕಥೆ ಓದುತ್ತ ಕುಳಿತ ಅಷ್ಟು ಸಮಯ ನಾನು ಸ್ವತಃ ಸೌಪರ್ಣಿಕಾ ನದಿಯ ತಟದಲ್ಲಿದ್ದೆ ಮತ್ತು ನನ್ನ ಕೈಯಲ್ಲೊಂದು ಸೂಡಿ ನಿರಂತರವಾಗಿ ಉರಿಯುತ್ತಿತ್ತು. ಸೂಡಿಯನ್ನ ಕಾಡು ದಾಟಿ ಸ್ವಾತಂತ್ರ್ಯ ಹೋರಾಟಗಾರರಿಗೆ ತಲುಪಿಸುವ ಉಮೇದಿನಲ್ಲೆ ನಾನು ಇಡೀ ಕಥೆ ಓದಿ ಮುಗಿಸಿದ್ದೆ.

ಕುಂದಾಪುರದ ಭಾಷೆ ನನ್ನನ್ನ ತನ್ನ ಊರ ಮಗಳೆ ಎಂಬಂತೆ ಓದಲು ಅನುವು ಮಾಡಿ ಕೊಟ್ಟಿತು ಆದರೆ ಇದನ್ನ ಹೀಗೆ ಆ ಪ್ರಾದೇಶಿಕ ಭಾಷೆಯನ್ನ ಸ್ವಲ್ಪವೂ ಮುಕ್ಕಾಗದಂತೆ ಬರೆದು ಅಚ್ಚು ಹಾಕುವಲ್ಲಿ ನಡೆಸಿದ ತಾಂತ್ರಿಕ ಕೆಲಸದ ಶ್ರಮವನ್ನಂತು ನಾನು ಉಹಿಸಬಲ್ಲೆ.

ಇಡೀ ಕಥೆ ತನ್ನ ಪಾತ್ರಗಳು, ನದಿಪಾತ್ರ, ಸೂಡಿಯ ಪಾತ್ರ ಆ ಪ್ರಾದೇಶಿಕ ಸೊಗಡಿನ ಪಾತ್ರ, ಗಾಂಧಿ ಪಾತ್ರ, ಪೋಲಿಸರ ಪಾತ್ರ, ಇಲ್ಲಿರುವ ಯಾವ ಪಾತ್ರಕ್ಕೂ ಅನ್ಯಾಯವಾಗದಂತೆ ಜಾಗರೂಕತೆಯಿಂದ ಕಥೆ ಹೆಣೆಯಲಾಗಿದೆ ಸೊ ಕಥೆಗಾರರಿಗೆ ಒಂದು ಸಲಾಮು.

ಮುಖ್ಯ ವಿಷ್ಯ ಏನಂದ್ರೆ ತುಂಬ ಕಥೆ ಕಾದಂಬರಿಗಳಲ್ಲಿ ಮೇಲ್ವರ್ಗ ಮತ್ತು ಕೆಳವರ್ಗಗಳನ್ನ ತಂದು ಹೆಣೆದಾಗ ಮೇಲ್ವರ್ಗದ ಜನಾಂಗದ ಆಚಾರ, ಅಭಿರುಚಿ, ಶುಚಿ ಕೆಳವರ್ಗದವರಿಗಿಂತ ಹೇಗೆ ಭಿನ್ನ ಮತ್ತು ಶ್ರೇಷ್ಠ ಎಂಬುದನ್ನೆಲ್ಲ ಹೇಳುತ್ತ ಕಥೆಯನ್ನ ಕೊಳೆ ಹಾಕಿ ಕಥೆಯ ದಾರಿಯನ್ನೆ ತಪ್ಪುಸಿರುವ ಉದಾಹರಣೆಗಳಿವೆ. ಇಲ್ಲಿ ಕಥೆಗಾರರು ಸಮಾಜದ ಎಲ್ಲ ವರ್ಗದವರನ್ನು ಬೆಸೆಯುವ ತಂತ್ರ ಮತ್ತು ಯಾರಿಂದ ಯಾರು ಬೇರೆಯಲ್ಲ ಎಲ್ಲರೂ ಮನುಷ್ಯರು ಎಂಬುದನ್ನ ಕಥೆಯ ಒಳಗೆ ಕೂತು ಹೇಳುವ ಪಾತ್ರದಾರಿಯನ್ನ ಸೃಷ್ಟಿಸಿದ್ದು ಇಷ್ಟವಾಯಿತು. ಮತ್ತು ಇವತ್ತಿನ ಅಗತ್ಯ ಕೂಡ ಅದೇ ಆಗಿದೆ.

ಇನ್ನೂ ಹೆಣ್ಣು ಪಾತ್ರಗಳನ್ನ ತಂದಾಗ ಅವಳು ತುಂಬ ನಾಜೂಕು, ಬಳ್ಳಿ, ಹೂ, ಸಕೋಮಲೆ ಮುಟ್ಟಿದಾಗ ಕಿಟಕಿ ಸರಳು ಹಿಡಿದು ಮುಂದೆ ಹೋಗಿ ಚಂದ್ರನನ್ನ ನೋಡಿ ನಾಚಿ ಬಂದು ಇವನ ಎದೆಗೆ ಅಪ್ಪಿಕೊಂಡು ಆಶ್ರಯ ಪಡೆಯುವ ಸುಕುಮಾರಿ ಎಂಬಂತೆಲ್ಲ ಬಿಂಬಿಸದೆ, ಆಕೆ ಕೂಡ ಗಟ್ಟಿಗಿತ್ತಿ ತನ್ನ ಜವಾಬ್ಧಾರಿಗಳನ್ನ ತುಂಬ ಸಂಯಮದಿಂದ ಹಾಗೂ ಸಮಯೋಚಿತವಾಗಿ ನಿಭಾಯಿಸಬಲ್ಲಳು ಎಂಬುದನ್ನ ಗಿರಿಜಾ ಹೆಗಡೆ ಎಂಬ ಹೆಣ್ಣುಮಗಳನ್ನ ಕಥೆಗುಂಟ ಓಡಾಡಿಸಿ ಆಕೆಯ ಪ್ರೌಢಿಮೆಯನ್ನ ಮನದಟ್ಟು ಮಾಡಿದ್ದು ಇಷ್ಟವಾಯಿತು. ಹೆಣ್ಣುಮಕ್ಕಳು ಒಂದು ಉತ್ತಮ ಕಾದಂಬರಿಯಿಂದ ಇದಕ್ಕಿಂತ ಹೆಚ್ಚು ಏನು ನಿರೀಕ್ಷಿಸಬಲ್ಲೆವು‌ ? ನೀವು ಇದ್ದಾಗ ನಿಮಗೆ ಹೆಗಲಾಗಿ, ನೀವು ಇಲ್ಲವಾದಾಗ ನೀವೆ ನಾವಾಗಿ ನಿಂತು ಬದುಕ ದೋಣಿಗೆ ಹುಟ್ಟು ಹಾಕುವುದಿಲ್ಲವೇ.. ಬದುಕಿನಲ್ಲಂತು ಅನಾಯಾಸವಾಗಿ ಅದು ನಡೆದು ಬಂದಿದೆ ಕಥೆಗಳಲ್ಲು ಅದನ್ನು ಕಟ್ಟಿ ಕೊಟ್ಟರೆ ನಮ್ಮ ಖುಷಿಗೆ ಪಾರವಿದೆಯೆ!?

ಸನಿಯಾರುವಿನ ಪಾತ್ರವು ಅಷ್ಟೆ ಹುಂಡಕೋಳಿ ಹೊಡೆದು ತಂದಾಗ ಬೇಯಿಸಿ ಅವನ ಸಮಕ್ಕೆ ಕೂತು ಉಂಡು-ಕುಡಿದು. ಅವನ ಸಮಕ್ಕೆ ಕುಣಿದು. ಅವನಿಗಿಂತಲೂ ಹತ್ತು ಹೆಜ್ಜೆ ಮುಂದಾಗಿ ಆಲೋಚಿಸುವ ಅವಳ ಬುದ್ಧಿಮತ್ತೆ ಚಾಕಚಕ್ಯತೆ ನಿಜಕ್ಕು ಬೆರಗು ಹುಟ್ಟಿಸಿತು.

ಸ್ವಾತಂತ್ರ್ಯದ ಇಷ್ಟು ವರ್ಷಗಳ ನಂತರವೂ ಗಾಂಧಿ ವಿಚಾರಗಳು ಗಾಂಧಿ ತತ್ವಗಳು ಎಷ್ಟು ಅವಶ್ಯಕ ಅನಿಸ್ತು ಒಂದುಕ್ಷಣ. ಈಗ ಹೇಗಾದರೂ ಸರಿ ಗಾಂಧಿಯನ್ನು ಮತ್ತೆ ಮತ್ತೆ ನವಪೀಳಿಗೆಯ ಮುಂದೆ ತರುವ ಜರೂರತ್ತಿದೆ.

ಇಡೀ ಕಾದಂಬರಿಯು ಎಷ್ಟು ಸತ್ಯ ಎಷ್ಟು ಕಾಲ್ಪನಿಕವೆಂಬ ಲೆಕ್ಕ ನನಗೆ ಬೇಡ..ಒಟ್ಟಾರೆ ಕಾದಂಬರಿಯನ್ನ ಕಟ್ಟಿದ ರೀತಿ ಚೆಂದಿದೆ. ತ್ಯಾಂಕ್ಯು ಕಥೆಗಾರರೇ.

‍ಲೇಖಕರು Admin

5 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading