–ನಾ ದಿವಾಕರ
ರಾಜಕೀಯದಲ್ಲಿ ಶಾಶ್ವತ ಮಿತ್ರರಾಗಲೀ ಶತ್ರುಗಳಾಗಲೀ ಇರುವುದಿಲ್ಲ. ಇದು ಸಾರ್ವಕಾಲಿಕ, ಸರ್ವವ್ಯಾಪ್ತಿ ಹೊಂದಿರುವ ಜಾಗತಿಕ ಲಕ್ಷಣ. ಪ್ರಜಾತಂತ್ರ ವ್ಯವಸ್ಥೆಯಾಗಲೀ, ನಿರಂಕುಶ ಪ್ರಭುತ್ವವಾಗಲೀ, ಸವರ್ಾಧಿಕಾರಿಯಾಗಲೀ ಇದೇ ಧೋರಣೆ ಅನುಸರಿಸುವುದು ಅಧಿಕಾರ ರಾಜಕಾರಣದ ಅನಿವಾರ್ಯತೆ. ಎಷ್ಟೇ ಮೌಲ್ಯ, ಸಿದ್ಧಾಂತ ಮತ್ತು ನೈತಿಕತೆಗಳ ಪ್ರತಿಪಾದನೆ ಮಾಡಿದರೂ ಆಳುವ ಚಪಲ ಮತ್ತು ಅಧಿಕಾರ ದಾಹ ಈ ಉದಾತ್ತತೆಗಳನ್ನು ಹಿಮ್ಮೆಟ್ಟಿ ನಿಲ್ಲುತ್ತವೆ. ಭಾರತದ ರಾಜಕಾರಣದಲ್ಲಂತೂ ಇದು ದಿನನಿತ್ಯ ಕಾಣುವ ಸತ್ಯ. ಜಾಗತಿಕ ರಾಜಕಾರಣದಲ್ಲಿ ಈ ನಿಯಮವನ್ನು ಶಿಷ್ಟಾಚಾರದಿಂದ, ವ್ಯವಸ್ಥಿತವಾಗಿ ಪಾಲಿಸಿಕೊಂಡು ಬಂದಿರುವ ಏಕೈಕ ರಾಷ್ಟ್ರವೆಂದರೆ ಸಾಮ್ರಾಜ್ಯಶಾಹಿ ಸಮೂಹದ ನೇತಾರ ಅಮೆರಿಕ. ಬದಲಾವಣೆಗಳ ಹರಿಕಾರ ಎಂದು ಹೆಸರು ಪಡೆದಿದ್ದರೂ ತನ್ನ ವಿದೇಶಾಂಗ ನೀತಿಯಲ್ಲಿ ಮತ್ತು ಸಾಮ್ರಾಜ್ಯಶಾಹಿ ವಿಸ್ತರಣಾ ಧೋರಣೆಯಲ್ಲಿ ಎಂದೂ ಬದಲಾಗದ ದೇಶ ಅಮೆರಿಕ.
ಆದರೆ ಕೆಲವು ವರ್ಷಗಳ ಹಿಂದೆ ಅಮೆರಿಕದ ಪ್ರಜಾಸತ್ತಾತ್ಮಕ ವ್ಯವಸ್ಥೆ ಒಂದು ವಿಭಿನ್ನ ಸನ್ನಿವೇಶ ಎದುರಿಸಿತ್ತು. ಶತಮಾನಗಳ ಕಾಲ ಶೋಷಣೆಗೊಳಗಾಗಿದ್ದ ಕರಿಯ ಜನಾಂಗದ ವ್ಯಕ್ತಿಯೊಬ್ಬ ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಂತರ ಗೆಲುವನ್ನೂ ಸಾಧಿಸಿದ್ದು ಐತಿಹಾಸಿಕ ಘಟನೆ ಎನಿಸಿತ್ತು. ತನ್ನ ರಾಜಕೀಯ ಜೀವನದ ಆರಂಭದಿಂದಲೇ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದು, ಜನಪರ ಕಾಳಜಿಯನ್ನೇ ಬಂಡವಾಳವನ್ನಾಗಿಸಿಕೊಂಡು ರಾಜಕೀಯ ಪ್ರವೇಶಿಸಿದ್ದ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದು ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿತ್ತು. ಅಷ್ಟೇ ಅಲ್ಲ ಅಮೆರಿಕದ ದಶಕಗಳ ಕಾಲದ ನೀತಿಗಳು ಬದಲಾಗುತ್ತವೆ ಎಂಬ ಆಶಾಭಾವನೆಯನ್ನೂ ಮೂಡಿಸಿತ್ತು. ತನ್ನ ಆಥರ್ಿಕ ಸದೃಢತೆಗಾಗಿ, ರಾಜಕೀಯ ಸ್ಥಿರತೆಗಾಗಿ ಅನ್ಯ ರಾಷ್ಟ್ರಗಳನ್ನು ಅಸ್ತ್ರಗಳನ್ನಾಗಿ, ಸಮರಾಂಗಣವಾಗಿ ಪರಿಗಣಿಸುವ ಅಮೆರಿಕದ ಯುದ್ಧೋನ್ಮಾದ ನೀತಿಗೆ ಒಬಾಮ ಆಳ್ವಿಕೆಯಲ್ಲಿ ಕೊಂಚ ಮಟ್ಟಿಗಾದರೂ ಹಿನ್ನಡೆ ಉಂಟಾಗಬಹುದು ಎಂಬ ಭ್ರಮೆ ಜಗತ್ತನ್ನು ಆವರಿಸಿತ್ತು.
ಅಧ್ಯಕ್ಷ ಪದವಿ ಅಲಂಕರಿಸಿದ ಆರಂಭಿಕ ದಿನಗಳಲ್ಲಿ ಒಬಾಮ ಅವರ ಘೋಷಣೆಗಳೂ ಇದೇ ದಿಕ್ಕಿನಲ್ಲಿ ಸಾಗಿದ್ದವು. ಇರಾಕ್ನಿಂದ ಸೇನೆಯ ಹಿಂತೆಗೆತ, ಆಘ್ಘಾನಿಸ್ತಾನವನ್ನು ಮುಕ್ತಗೊಳಿಸುವುದು, ಅನ್ಯ ರಾಷ್ಟ್ರಗಳಲ್ಲಿ ಹಸ್ತಕ್ಷೇಪವನ್ನು ಕಡಿತಗೊಳಿಸುವುದು, ಆಕ್ರಮಣಶೀಲತೆಯನ್ನು ತಗ್ಗಿಸುವುದು, ಗ್ವಾತನಾಮೋ ಶಿಬಿರಗಳಲ್ಲಿ ಬಂಧಿತರಾಗಿರುವ ಯುದ್ಧ ಖೈದಿಗಳ ವಿಮೋಚನೆಗೆ ಕ್ರಮ ಕೈಗೊಳ್ಳುವುದು, ಪಾಲೆಸ್ಟೈನ್ಗೆ ನ್ಯಾಯ ಒದಗಿಸುವುದು ಹೀಗೆ ಒಬಾಮ ಅವರಿಂದ ಅನೇಕ ದಿಟ್ಟ ಹೆಜ್ಜೆಗಳನ್ನು ನಿರೀಕ್ಷಿಸಲಾಗಿತ್ತು. ಜಾಜರ್್ ಬುಷ್ ಕಾಲದ ಅನೇಕ ಆಕ್ರಮಣಕಾರಿ ನೀತಿಗಳಿಂದ ಭಿನ್ನವಾಗಿ ಒಂದು ಪ್ರಜಾತಾಂತ್ರಿಕ ನೆಲೆಯನ್ನು ನಿಮರ್ಿಸುವ ನಿರೀಕ್ಷೆ ಜಾಗೃತವಾಗಿತ್ತು. ಇದು ಕೇವಲ ಭ್ರಮೆ ಎಂಬ ಭಾವನೆ ಒಂದೆಡೆ ವ್ಯಕ್ತವಾಗುತ್ತಿದ್ದರೂ ಮಾಧ್ಯಮಗಳಲ್ಲಿ, ರಾಜಕೀಯ ವಲಯಗಳಲ್ಲಿ ಈ ನಿರೀಕ್ಷೆಗಳು ರಂಜನೀಯವಾಗಿ ಬಿಂಬಿತವಾಗಿದ್ದಂತೂ ಸತ್ಯ.
ಆದರೆ ದಿನ ಕಳೆದಂತೆ ಜಗತ್ತು ಕಂಡ ಸತ್ಯಗಳೇ ಬೇರೆ. ಇರಾಕ್ನಿಂದ 50 ಸಾವಿರ ಸೈನಿಕರನ್ನು ಹಿಂಪಡೆಯುವ ಒಬಾಮ ಅವರ ವಾಗ್ವಾದ ಸಾಕಾರಗೊಂಡರೂ ಅಲ್ಲಿ ಅಮೆರಿಕದ ದಬ್ಬಾಳಿಕೆ ನಿಂತಿಲ್ಲ. ಇಂದಿಗೂ ದಿನನಿತ್ಯ ಇರಾಕ್ನ ಅಮಾಯಕ ಜನತೆ ಪೆಂಟಗನ್ನ ಶಸ್ತ್ರಾಸ್ತ್ರಗಳಿಗೆ ಆಹಾರವಾಗುತ್ತಲೇ ಇದ್ದಾರೆ. ಅಲ್ಲಿನ ಸುನ್ನಿ-ಶಿಯಾ ಪಂಗಡಗಳ ಘéರ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಒಬಾಮ ಆಡಳಿತ ಮಾಡುತ್ತಲೇ ಇದೆ. ಇತ್ತ ಆಘ್ಘಾನಿಸ್ತಾನದಲ್ಲಿ ಮಾನವರಹಿತ ವಿಮಾನಗಳು ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಈ ಎರಡೂ ರಾಷ್ಟ್ರಗಳ ಆಳ್ವಿಕರನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡು ಅಲ್ಲಿನ ತೈಲ ಸಂಪತ್ತಿನ ಮೇಲೆ ಅಧಿಪತ್ಯ ನಡೆಸುವ ನಿಟ್ಟಿನಲ್ಲಿ ಒಬಾಮ ಬುಷ್ ಅವರನ್ನೂ ಮೀರಿಸಿರುವುದು ಸ್ಪಷ್ಟ. ಇನ್ನು ಇಸ್ರೇಲ್ ಮತ್ತು ಪಾಲೆಸ್ಟೈನ್ ಸಂಘರ್ಷದಲ್ಲಿ ಅಮೆರಿಕದ ನೀತಿ ಕಿಂಚಿತ್ತೂ ಬದಲಾಗದಿರುವುದು ಸ್ಪಷ್ಟ. ಗಾಝಾ ಪಟ್ಟಿಯ ಮೇಲೆ ಅನಗತ್ಯ ದಾಳಿ ನಡೆಸಿ ಸಾವಿರಾರು ಅಮಾಯಕರ ಮಾರಣಹೋಮ ನಡೆಸಿದ ಇಸ್ರೇಲ್ನ ಆಳ್ವಿಕರ ವಿರುದ್ಧ ಚಕಾರವೆತ್ತದೆ ತಮ್ಮ ಸಮ್ಮತಿ ಸೂಚಿಸಿದ ಒಬಾಮ ತಮ್ಮ ಹಿಂದಿನ ಅಧ್ಯಕ್ಷರಿಗಿಂತಲೂ ಯಾವ ರೀತಿಯಲ್ಲೂ ಭಿನ್ನವಾಗಿ ನಡೆದುಕೊಂಡಿಲ್ಲ.
ಈಗ ಮಧ್ಯಪ್ರಾಚ್ಯ-ಅರಬ್ ರಾಷ್ಟ್ರಗಳಲ್ಲಿ ಪ್ರಜೆಗಳು ಪ್ರಜಾತಂತ್ರಕ್ಕಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಒಬಾಮ ತಮ್ಮ ಪ್ರಜಾತಂತ್ರದ ಮುಖವಾಡವನ್ನು ಕಳಚಿ ಸಾಮ್ರಾಜ್ಯಶಾಹಿ ಸಮವಸ್ತ್ರವನ್ನು ಧರಿಸಿರುವುದು ಸ್ಪಷ್ಟವಾಗುತ್ತಿದೆ. ಈಜಿಪ್ಟ್ನಲ್ಲಿ ಪರೋಕ್ಷವಾಗಿ ತನ್ನ ಕೈಗೊಂಬೆ ಸಕರ್ಾರವನ್ನು ಮಿಲಿಟರಿ ಆಡಳಿತದ ಮೂಲಕ ಸ್ಥಾಪಿಸಲೆತ್ನಿಸುತ್ತಿರುವ ಒಬಾಮ ಟುನಿಷಿಯ, ಯಮನ್, ಸಿರಿಯಾ, ಬಹ್ರೇನ್, ಜೋಡರ್ಾನ್ ಮುಂತಾದ ರಾಷ್ಟ್ರಗಳಲ್ಲಿ ಭುಗಿಲೆದ್ದಿರುವ ಪ್ರಜಾಚಳುವಳಿಗಳಿಗೆ ಯಾವುದೇ ರೀತಿಯ ನೈತಿಕ ಬೆಂಬಲ ವ್ಯಕ್ತಪಡಿಸಿಲ್ಲ. ಅಷ್ಟೇ ಅಲ್ಲ ಲಿಬಿಯಾದಲ್ಲಿ ಕರ್ನಲ್ ಗಡಾಫಿ ವಿರುದ್ಧ ಪ್ರಜೆಗಳು ದಂಗೆ ಎದ್ದಿರುವ ಸಂದರ್ಭದಲ್ಲಿ ಗಡಾಫಿಯನ್ನು ಇಳಿಸುವ ನೆಪದಲ್ಲಿ ತನ್ನ ಸಾಮ್ರಾಜ್ಯಶಾಹಿ ನೀತಿಯನ್ನೇ ಅನಾವರಣಗೊಳಿಸಿರುವುದು ಅಮೆರಿಕದ ಕುಹಕ ನೀತಿಯ ಸಂಕೇತವಾಗಿದೆ. ಸದಾ ತನ್ನ ತೆಕ್ಕೆಯಲ್ಲೇ ಇರುವ ವಿಶ್ವಸಂಸ್ಥೆಯ ಒಪ್ಪಿಗೆ ಪಡೆದು ಲಿಬಿಯಾದ ಮೇಲೆ ವೈಮಾನಿಕ ಆಕ್ರಮಣ ನಡೆಸಿರುವ ಒಬಾಮ ಮತ್ತು ಮಿತ್ರರಿಗೆ ಲಿಬಿಯಾದ ಜನತೆಯ ಆಶಯಗಳಿಗಿಂತಲೂ ಮುಖ್ಯವಾದದ್ದು ಅಲ್ಲಿನ ತೈಲ ಸಂಪತ್ತು ಮತ್ತು ಅದರ ಮೇಲಿನ ಅಧಿಪತ್ಯ.
ಪ್ರಜಾತಂತ್ರದ ಉಳಿವಿಗೆ ಸಮರಶೀಲ ನೀತಿಯೇ ಪರಿಹಾರ ಎಂಬ ಅಮೆರಿಕದ ಶತಮಾನಗಳ ನೀತಿಯನ್ನೇ ಒಬಾಮಾ ಪಾಲಿಸುತ್ತಿರುವುದನ್ನು ನೋಡಿದರೆ, ಜಗತ್ತಿನಾದ್ಯಂತ ಒಂದು ಭರವಸೆ ಮೂಡಿಸಿದ್ದ ಬರಾಕ್ ಒಬಾಮ, ಜಾಜರ್್ ಬುಷ್ಗಿಂತಲೂ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ ಎಂದು ಸ್ಪಷ್ಟವಾಗುತ್ತದೆ. ಹಾಗಾಗಿ ಇವರನ್ನು ಜಾರಾಕ್ ಬುಷಾಮ ಎಂದು ಕರೆಯುವುದು ಸೂಕ್ತವಲ್ಲವೇ ?






ಹೊಸ ಹೆಸರನ್ನಿಡುವ ಅವಶ್ಯವೇನೂ ಇಲ್ಲ. ಅಮೆರಿಕನ್ ರಾಜಕಾರಣಿಗಳೊಂದೇ, ನಾಮ ಹಲವು ಎನ್ನುವದು ಸೂಕ್ತವಾದೀತು.
ಪ್ರಪಂಚದ ಗಾಲಿಗಳ ಉರುಳುವಿಕೆಗೆ ತೈಲವಲ್ಲದೆ ಬೇರೆ ಇಂಧನ ಉಪಯೋಗಕ್ಕೆ ಬಂದರೆ ಈ ಭೂಮಿಯಲ್ಲಿ ಸ್ವಲ್ಪವಾದರೂ ಶಾಂತಿ ಮೂಡೀತೇನೋ! ಇಲ್ಲಾ ಬೇರೆ ಇಂಧನ ಬಾರದಂತೆ ಈ ತೈಲತೃಷೆಯ ದೇಶಗಳು ನೋಡಿಕೊಳ್ಳುತ್ತವೆಯೇನೋ. ಅಥವಾ ಆ ಇಂಧನದ ಮೇಲೂ ತಮ್ಮ ಸ್ವಾಮ್ಯವನ್ನು ನಿರಾಯಾಸವಾಗಿ ಸ್ಥಾಪಿಸಿಕೊಳ್ಳುತ್ತವೆಯೇನೋ!
“ಅಷ್ಟೇ ಅಲ್ಲ ಲಿಬಿಯಾದಲ್ಲಿ … ನೀತಿಯನ್ನೇ ಅನಾವರಣಗೊಳಿಸಿರುವುದು ಅಮೆರಿಕದ ಕುಹಕ ನೀತಿಯ ಸಂಕೇತವಾಗಿದೆ.” ಎಂದಿರುವದರಲ್ಲಿ ‘ಅಮೆರಿಕದ ಕುಟಿಲ ನೀತಿಯ ಸಂಕೇತವಾಗಿದೆ” ಎಂದಿದ್ದರೆ ಹೆಚ್ಚು ಸಮಂಜಸವಾಗುತ್ತಿತ್ತೇನೋ?
ondee pada saku – gomikha vaGrhra