ಗೋಲಗುಂಬಜ್ ಮತ್ತು ಇತಿಹಾಸದ ಕುಟಿಲತೆ..
ದಿಲಾವರ್ ರಾಮದುರ್ಗ
ಗೋಲಗುಂಬಜ್ ನಲ್ಲಿ ಒಂದು ಸಲ ಹಾಕುವ ಕೂಗು ಏಳು ಸಾರಿ ಪ್ರತಿಧ್ವನಿಯಾಗಿ ಕೇಳಿಸುತ್ತದೆ. ಮೊದಲು ಇಪ್ಪತ್ತು, ಹದಿನೈದು ಸಲ ಕೇಳಿಸುತ್ತಿತ್ತು, ಈಗದು ಏಳು ಸಲವಾದರೂ ಕೇಳಿಸುತ್ತದೆ ಎಂದು ನಮಗೆ ಇತಿಹಾಸದಲ್ಲಿ ಹೇಳುತ್ತಲೇ ಬಂದಿದ್ದಾರೆ. ಅದಷ್ಟೇ ಗೋಲಗುಂಬಜ್ ನ ವಿಶೇಷವಂತೂ ಖಂಡಿತ ಅಲ್ಲ. ಇದರ ಇನ್ನಷ್ಟು, ಮತ್ತಷ್ಟು ವಿಶೇಷತೆಗಳನ್ನು ಬೇಕೂಂತ ಯಾರೋ ವ್ಯವಸ್ಥಿತವಾಗೇ ಮುಚ್ಚಿಡುವ ಯತ್ನ ಮಾಡಿದ್ದಾರೆ ಅನಿಸುತ್ತದೆ. ಬರಿಯ ಏಳು ಸಲ ಸದ್ದಿಗೋಸ್ಕರ ಅಂಥದೊಂದು ಬೃ…ಹತ್ ಗುಂಬಜ್ ರೂಪಿಸಲು ಆದಿಲ್ ಶಾಹಿಗಳಿಗೆ ತಲೆಕೆಟ್ಟಿತ್ತಾ?
ಅದು Echo ಅಷ್ಟೇ ಅಲ್ಲ Reverberation. ಈ ಗೋಲಗುಂಬಜ್ ನ ಗೋಳದಲ್ಲಿ ಶಬ್ದ ಹುಟ್ಟಿದ ಜಾಗದಿಂದ ಹಲವಾರು echo ಆಗಿ ಅದರ ಅಂಪ್ಲಿಟ್ಯೂಡ್ ಒಮ್ಮೆಗೇ ಹೆಚ್ಚಾಗುತ್ತ ಅಂಪ್ಲಿಫೈ ಅಂತಾರಲ್ಲ ಹಾಗಾಗುತ್ತ ಮುಂದೆ ಸಾಗುತ್ತದೆ. ಅದರೊಳಗಿನ ಗಾಳಿ ಮತ್ತು ಗೋಡೆಗಳು ಶಬ್ದವನ್ನು ಅಬ್ಸಾರ್ಬ್ ಮಾಡುವುದರಿಂದ ಅಂಪ್ಲಿಟ್ಯೂಡ್ ಕ್ರಮೇಣ ಇಳಿಕೆಯಾಗುತ್ತ ಹೋಗುತ್ತದೆ. ಆದರೆ ರಿಫ್ಲೆಕ್ಷನ್ ಗಳು ಮತ್ತಷ್ಟು ಕಾಲ ಮುಂದುವರಿಯುತ್ತವೆ. ಅಂದರೆ ಧ್ವನಿಯ ರಿಫ್ಲೆಕ್ಷನ್ ಗಳನ್ನು ಆಧಾರವಾಗಿಟ್ಟುಕೊಂಡು ಅಂದಿನ ವಾಸ್ತುಶಿಲ್ಪಿ ಇಡೀ ಗೋಳದಲ್ಲಿ ಶಬ್ದ ಮಾರ್ದನಿಸುವಂತೆ ಮಾಡಿದ್ದಾನೆ. ಇಲ್ಲಿ ಒಂದು ಸಣ್ಣ ಸದ್ದು ಕೂಡ ತನ್ನ ಜಾಗದಿಂದ ಮತ್ತೊಂದು ಜಾಗಕ್ಕೆ ಹಬ್ಬಿ ಪ್ರತಿಫಲನಗೊಳ್ಳುತ್ತ ಬೇರೊಂದು ಜಾಗಕ್ಕೆ ಸ್ಪಷ್ಟವಾಗಿ ರವಾನೆಯಾಗುತ್ತದೆ. ಮೂಲ ಸದ್ದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸ್ಪಷ್ಟವಾಗಿ!
ಅದು Echo ಅಷ್ಟೇ ಅಲ್ಲ Reverberation. ಈ ಗೋಲಗುಂಬಜ್ ನ ಗೋಳದಲ್ಲಿ ಶಬ್ದ ಹುಟ್ಟಿದ ಜಾಗದಿಂದ ಹಲವಾರು echo ಆಗಿ ಅದರ ಅಂಪ್ಲಿಟ್ಯೂಡ್ ಒಮ್ಮೆಗೇ ಹೆಚ್ಚಾಗುತ್ತ ಅಂಪ್ಲಿಫೈ ಅಂತಾರಲ್ಲ ಹಾಗಾಗುತ್ತ ಮುಂದೆ ಸಾಗುತ್ತದೆ. ಅದರೊಳಗಿನ ಗಾಳಿ ಮತ್ತು ಗೋಡೆಗಳು ಶಬ್ದವನ್ನು ಅಬ್ಸಾರ್ಬ್ ಮಾಡುವುದರಿಂದ ಅಂಪ್ಲಿಟ್ಯೂಡ್ ಕ್ರಮೇಣ ಇಳಿಕೆಯಾಗುತ್ತ ಹೋಗುತ್ತದೆ. ಆದರೆ ರಿಫ್ಲೆಕ್ಷನ್ ಗಳು ಮತ್ತಷ್ಟು ಕಾಲ ಮುಂದುವರಿಯುತ್ತವೆ. ಅಂದರೆ ಧ್ವನಿಯ ರಿಫ್ಲೆಕ್ಷನ್ ಗಳನ್ನು ಆಧಾರವಾಗಿಟ್ಟುಕೊಂಡು ಅಂದಿನ ವಾಸ್ತುಶಿಲ್ಪಿ ಇಡೀ ಗೋಳದಲ್ಲಿ ಶಬ್ದ ಮಾರ್ದನಿಸುವಂತೆ ಮಾಡಿದ್ದಾನೆ. ಇಲ್ಲಿ ಒಂದು ಸಣ್ಣ ಸದ್ದು ಕೂಡ ತನ್ನ ಜಾಗದಿಂದ ಮತ್ತೊಂದು ಜಾಗಕ್ಕೆ ಹಬ್ಬಿ ಪ್ರತಿಫಲನಗೊಳ್ಳುತ್ತ ಬೇರೊಂದು ಜಾಗಕ್ಕೆ ಸ್ಪಷ್ಟವಾಗಿ ರವಾನೆಯಾಗುತ್ತದೆ. ಮೂಲ ಸದ್ದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸ್ಪಷ್ಟವಾಗಿ!

ಇದನ್ನೇ ಲೌಡ್ ಸ್ಪೀಕರ್ ತಂತ್ರಜ್ಞಾನದಲ್ಲೂ ಗಮನಿಸಬಹುದು. ಹಾಗೆ ಗುಂಬಜ್ ನ ಮೂಲ ಸಭಾಂಗಣದಿಂದ ಹೊರಟ ಶಬ್ದ ಅದರ ಅಕ್ಕಪಕ್ಕ ಮತ್ತು ಒಳಗೆ ರೂಪಿಸಿದ ವಿಶಿಷ್ಠ ಕಮಾನುಗಳು ಮತ್ತು ಪ್ರತಿಫಲನಕ್ಕೆ ಸೂಕ್ತವಾಗುವಂತೆ ರೂಪಿಸಿದ ವಿಶಿಷ್ಠ ಸಂಯೋಜನೆಗಳ ಮೂಲಕ ಪ್ರತಿಫಲನಗೊಳ್ಳುತ್ತ ಮೇಲಿನ ಗೋಳಕ್ಕೆ ವ್ಯಾಪಿಸಿ ಅಲ್ಲಿನ ಗಾಳಿ ಮತ್ತು ಬೆಳಕಿನ ಜತೆ ಚಿಮ್ಮಿಕೊಂಡು ವಿಶಿಷ್ಠವಾದ ಲಯದಲ್ಲಿ ಧ್ವನಿ ಮಾರ್ದನಿಸತೊಡಗುತ್ತದೆ. ಗ್ಯಾಲರಿಯಲ್ಲಿ ಅಲ್ಲಲ್ಲಿ ರೂಪಿಸಿದ ಸಣ್ಣ ಬಾಗಿಲುಗಳ ಬಳಿ ಶಬ್ದ ಲೌಡ್ ಸ್ಪೀಕರ್ ನಲ್ಲಿ ಕೇಳಿಸುವಂತೆ ಅತ್ಯಂತ ಸ್ಪಷ್ಟವಾಗಿ ಕೇಳಿಸುತ್ತದೆ. ಇಡೀ ವಾತಾವರಣ ಒಂದು ಬಗೆಯ ಗುಂಗು ಹಿಡಿಸಿಬಿಡುತ್ತದೆ. ಬೇಕಿದ್ದರೆ ಬೆಳಗ್ಗೆ ಬೇಗನೆ ಹೋಗಿ ಗುಂಬಜ್ ನಲ್ಲಿ ಪರೀಕ್ಷೆ ಮಾಡಿ.
* * *
ಕಳೆದ ಮೂರು ವರ್ಷಗಳ ಹಿಂದೆ ಚಿತ್ರನಟಿ/ನಿರೂಪಕಿ ಅಪರ್ಣಾ, ಕಿರುತೆರೆ ನಟಿ ಜ್ಯೋತಿ ರೈ ಮತ್ತು ರಂಗಗೆಳೆಯ ನರೇಶನ ಕರಕೊಂಡು ವಿಜಾಪುರ ಗೋಳಗುಮ್ಮಟಕ್ಕೆ ಹೋಗಿದ್ದೆ. ಅದರ ವಿಶೇಷತೆಯನ್ನು ತಿಳಿಸಲೆಂದೇ ಕರೆದುಕೊಂಡು ಹೋಗಿದ್ದೆ. ಪ್ರವಾಸಿಗರು ಗುಂಬಜ್ ಗೆ ಕಾಲಿಡುವ ಮುನ್ನವೇ ನಾವಲ್ಲಿ ಹಾಜರಿದ್ದೆವು. ಅಪರ್ಣಾ, ಜ್ಯೋತಿ ಮತ್ತು ನರೇಶ್ ಅವರನ್ನು ಗ್ಯಾಲರಿಯ ಒಂದೊಂದು ಸಣ್ಣ ಬಾಗಿಲು ಪ್ರದೇಶದ ಬಳಿ ಕೂರಿಸಿ, ಕೆಳಗಿನ ಸಭಾಂಗಣದಲ್ಲಿ ಅಲ್ಲಿನ ಗೈಡ್ ಭಾಂಡಿ (ಈತ ಒಳ್ಳೆಯ ಹಾಡುಗಾರ ಕೂಡ) ಕಡೆಯಿಂದ ಒಂದು ಗಜಲ್ ಹಾಡಿಸಿದೆ. ಅದು ಮೇಲೆ ಕುಳಿತುಕೊಂಡಿದ್ದ ಅಪರ್ಣಾ, ಜ್ಯೋತಿ ಅವರಿಗೆ ಅತ್ಯಂತ ಸ್ಪಷ್ಟವಾಗಿ ಕೇಳಿಸಿತು. “ಡಾಲ್ಬಿ ಸೌಂಡ್ ಸಿಸ್ಟಂ ಇಫೆಕ್ಟ್ ನಲ್ಲಿ ಕೇಳಿದಂತೆನಿಸಿತು. ತುಂಬ ಎಂಜಾಯ್ ಮಾಡಿದೆವು” ಎಂದವರೇ ಹೇಳಿದರು. ಎಲ್ಲಿಂದ ಈ ಹಾಡು ಕೇಳಿಸುತ್ತದೆ! ಎನ್ನುವ ಅಚ್ಚರಿ ಅವರಿಬ್ಬರಲ್ಲಿ. ಗೋಲಗುಂಬಜ್ ನ ಈ ವಿಶೇಷತೆಯನ್ನು ನಾವೆಲ್ಲೂ ಕೇಳಿರಲಿಲ್ಲ, ಅನುಭವಿಸಿರಲಿಲ್ಲ ಎಂದವರು ಪದೇ ಪದೇ ಹೇಳಿದ್ದರು. ನಂತರ ಅವರಿಗೆ ಇದರ ಚಮತ್ಕಾರ ತಿಳಿಸಿದೆ. ಅದು ವಿಜ್ಞಾನ ಮೂಡಿಸಿದ ಪರಿಣಾಮ ಎಂದು ವಿವರಿಸಿದೆ. ಅಕಾಸ್ಟಿಕ್ ಸಿಸ್ಟಂ ನ ಕೆಲವು ಸಿದ್ಧಾಂತಗಳನ್ನು ವಿವರಿಸುವ ಯತ್ನ ಮಾಡಿದೆ.
ಗ್ಯಾಲರಿಯ ಒಂದು ಗೋಡೆಯಲ್ಲಿ ಪಿಸುಗುಟ್ಟಿದರೂ ಸಾಕು ಆ ತುದಿಯ ಗೋಡೆಗೆ ಕಿವಿಕೊಟ್ಟವರಿಗೆ ಅತ್ಯಂತ ಸ್ಪಷ್ಟವಾಗಿ ಫೋನಿನಲ್ಲಿ ಮಾತನಾಡಿದಂತೆ ಧ್ವನಿ ಕೇಳಿಸುತ್ತದೆ. ಇದೇ ಅಲ್ಲಿನ ವಿಜ್ಞಾನ ಮತ್ತು ವಿಸ್ಮಯ.
* * *
ಇದನ್ನೇ ಕಳೆದ ಎರಡು ವರ್ಷಗಳ ಹಿಂದೆ ಆತ್ಮೀಯ ಗೆಳೆಯರಾದ ವಿಷ್ಣುಕುಮಾರ್, ತಿಪಟೂರು ಕಲ್ಪತರು ಕಾಲೇಜಿನ ಮುಖ್ಯ ಗ್ರಂಥಪಾಲಕ ಜಿ. ತಿಪ್ಪೇಸ್ವಾಮಿ (ತಿಪ್ಪಣ್ಣ), ಅದೇ ಸಂಸ್ಥೆಯ ಕೃಷ್ಣಮೂರ್ತಿ ವಿಜ್ಞಾನ ಮೇಷ್ಟ್ರು, ಮತ್ತೋರ್ವ ಅವರ ಗೆಳೆಯ ಹಾಗೂ ಲೇಖಕ ಎಸ್. ಗಂಗಾಧರಯ್ಯ ಮತ್ತಿತರರ ಸಮ್ಮುಖದಲ್ಲಿ ಪ್ರಯೋಗ ಮಾಡಿದೆ. ಬೆಳಿಗ್ಗೆ 6ರೊಳಗೇ ನಾವೆಲ್ಲ ಗೋಲಗುಂಬಜ್ ಬಳಿ ಜಮಾಯಿಸಿದೆವು. ಬರೋಬ್ಬರಿ ಗೋಲಗುಂಬಜ್ ಮುಖ್ಯದ್ವಾರ ತೆಗೆಯುವ ವೇಳೆಗೆ ಒಳ ಹೊಕ್ಕೆವು. ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಸೋರಗಾಂವಿ ಅವರಿಂದ ಒಂದು ಗಾಯನಗೋಷ್ಠಿಯನ್ನು ಮುದ್ದಾಂ ಏರ್ಪಡಿಸಿದ್ದೆ. ಪ್ರಾಚ್ಯವಸ್ತು ಇಲಾಖೆಯ ನಾಯಕ್ ಅವರನ್ನೂ ಗ್ಯಾಲರಿಯಲ್ಲಿ ಕೂರಿಸಿ ಸಂಗೀತ ಸವಿಯುವಂತೆ ವಿನಂತಿಸಿಕೊಂಡಿದ್ದೆವು. ಒಂದು ಗಂಟೆ ಕಾಲ ಸೋರಗಾಂವಿ ಅವರು ಹಿಂದೂಸ್ತಾನಿ ಮುಂಜಾನೆ ರಾಗಗಳನ್ನು, ವಚನಗಳನ್ನು ಹಾಗೂ ಸೂಫಿ, ಶರೀಫರ ಪದಗಳನ್ನು ಪ್ರಸ್ತುತಪಡಿಸಿದರು. ಖೇಲ್ ಅಲಾವಾ ದೇಖ್ ಮೊಹಮ್ಮದ್…. ಅಲೀ ಪೀರ್ ಪೈಗಂಬರ್ … ಮೊಹಮ್ಮದ್… ಮೊಹಮ್ಮದ್… ಎನ್ನುವ ತತ್ವಪದ ಇಡೀ ಗುಂಬಜ್ ನಲ್ಲಿ ಮಾರ್ದನಿಸುತ್ತಲೇ ಸಾಗಿತು. ಒಳಕ್ಕೆ ಆಗಲೇ ನೂರಾರು ಜನ ಜಮಾಯಿಸಿಬಿಟ್ಟಿದ್ದರು. ಅವರಿಗರಿವಿಲ್ಲದಂತೆ ಮೌನವಾಗಿ ಸಂಗೀತವನ್ನು ಆಲಿಸುತ್ತ ಮಂತ್ರಮುಗ್ಧರಾಗಿದ್ದರು. ನಂತರದಲ್ಲಿ ಒಂದೈದು ನಿಮಿಷ ಈ ಧ್ವನಿ ಪರಿಣಾಮದ ಬಗ್ಗೆ ನೆರೆದ ಎಲ್ಲರಿಗೂ ವಿವರಿಸಿದೆ. ಗೋಲಗುಂಬಜ್ ಅನ್ನು ಹೀಗೆ ಸವಿಯಬೇಕು ಚೀರುವುದು, ಕೂಗುವುದರ ಮೂಲಕವಲ್ಲ ಎಂದು ಅಲ್ಲಿನವರಿಗೆ ವಿವರಿಸಿದೆ. ಒಂದು ದೀರ್ಘ ಚಪ್ಪಾಳೆ ಕೆಲ ಹೊತ್ತು ಇಡೀ ಗುಂಬಜ್ ತುಂಬ ಮಾರ್ದನಿಸಿತು. ಆದಿಲ್ ಶಾಹೀಗಳ ಕಾಲದ ಸೌಂಡ್ ಸಿಸ್ಟಂ ಇದು.
* * *
ಗುಂಬಜ್ ರೂಪಿಸಿದ್ದು ಒಂದು ಸುಂದರ ಮೆಹಫಿಲ್ ಗಾಗಿಯೂ ಹೌದು. ಆದಿಲ್ ಶಾಹಿಗಳ ಕಾಲದಲ್ಲಿ ಇಲ್ಲಿ ಗಾಯನ, ಪ್ರವಚನ, ವಿಚಾರಸಂಕಿರಣಗಳ ಜತೆ ನೃತ್ಯ ಕಾರ್ಯಕ್ರಮವೂ ನಡೀತಿತ್ತು. ಅಲ್ಲಿ ವೇದಿಕೆಗೆ ಆಗಿನ ಕಾಲದ ಗ್ಯಾಸ್ ಅಥವಾ ಎಣ್ಣೆದೀಪದ ಲೈಟಿಂಗ್ ವ್ಯವಸ್ಥೆಯೂ ಇತ್ತು. ಅದಕ್ಕೆ ನಿದರ್ಶನವಾಗಿ ವೇದಿಕೆಗೆ ಎದುರಾಗಿ ಒಂದಷ್ಟು ದೀಪ ಇಡುವ ಕಂಭಗಳಿರುವುದನ್ನು ಗಮನಿಸಬಹುದು. ಇಡೀ ಗುಂಬಜ್ ನಲ್ಲಿ ಎಲ್ಲೂ ಬಲ್ಬು ಉರಿಸುವುದಿಲ್ಲ. ಫ್ಯಾನ್ ಗಳೂ ಇಲ್ಲ. ಎಸಿ ಮಷೀನುಗಳೂ ಇಲ್ಲ. ಅದರ ಅಗತ್ಯವೇ ಇಲ್ಲ. ಹಾಗೆ ಗಾಳಿ, ಬೆಳಕು, ವಾತಾನುಕೂಲತೆಯನ್ನು ಅಂದಿನ ವಾಸ್ತು ಶಿಲ್ಪಿಗಳು ವೈಜ್ಞಾನಿಕವಾಗಿ ಇಲ್ಲಿ ರೂಪಿಸಿದ್ದಾರೆ. ನಮ್ಮ ಇಂದಿನ ಯಾವ ಸಭಾಂಗಣಗಳೂ ಇದರ ಹತ್ತು ಪ್ರತಿಶತದಷ್ಟೂ ಸರಿಸಮನಾಗುವುದಿಲ್ಲ ವೈಜ್ಞಾನಿಕ ದೃಷ್ಟಿಕೋನದಲ್ಲಿ. ಈ ಗುಂಬಜ್ ನಿರ್ಮಾಣಕ್ಕೆ ಧಾರ್ಮಿಕ ಆಯಾಮವೂ ಇದೆ. ನನ್ನ ಸಂಶೋಧನೆ ಇನ್ನೂ ಮುಂದುವರಿದಿದೆ. ಮತ್ತೆ ಯಾವತ್ತಾದರೂ ಅದರ ಬಗ್ಗೆ ಬರೆಯುತ್ತೇನೆ.
ಏಳು ಬಾರಿ ಪ್ರತಿಧ್ವನಿ ಎನ್ನುವ ಒಂದೇ ಒಂದು ಸುಳ್ಳು ವಿಶೇಷತೆಯನ್ನೇ ಹೇಳಿ ಇಡೀ ವಾಸ್ತುಶಿಲ್ಪದ ಮಹತ್ವವನ್ನು ಸೀಮಿತಗೊಳಿಸುವ ಸಣ್ಣತನದ, ಸಿನಿಕಲ್ ಇತಿಹಾಸಕಾರರು ಮಾಡುವ ಅವಘಡಗಳಿಂದ ಇಡೀ ವಾಸ್ತುಶಿಲ್ಪದ ಮಹತ್ವವೇ ಕಡೆಗಣಿಸಲ್ಪಡುವಂತಾಗಿದ್ದು ದುರದೃಷ್ಟಕರ.







“ಪಿಸುಮಾತಿನ ಗ್ಯಾಲರಿ” ವಿಶೇಷತೆ ಕೊನೆಗೂ ತಿಳಿಯಿತು 🙂 ಧನ್ಯವಾದಗಳು .
ನಿಮ್ಮ ಲೇಖನ ತುಂಬಾ ಸೊಗಸಾಗಿದೆ…ಮತ್ತು ಮಾಹಿತಿಯು ನಿಖರವಾಗಿ ಹೇಳಿದ್ದೀರ….ನಿಮ್ಮ ಪ್ರತಿಯೊಂದು ಮಾಹಿತಿಯು ಅಕ್ಷರಶಃ ನಿಜ..ಜನರು ಕೇವಲ ಕೂಗಾಟ ಕಿರುಚಾಟಕ್ಕೆ ಅಂತ ಹೋಗಿ ಅಲ್ಲಿನ ನಿಜವಾದ ವಿಶೇಷವನ್ನು ತಿಳಿಯದೆ ಬರುವುದನ್ನು ನೋಡಿದರೆ ಬೇಸರವಾಗುತ್ತದೆ…ಆ ನಿಟ್ಟಿನಲ್ಲಿ ನಿಮ್ಮ ಮಾಹಿತಿ ಉಪಯುಕ್ತ ಹಾಗು ಕಣ್ಣು(ಕಿವಿ) ತೆರೆಸುವಂತಹದ್ದು… ನಿಮ್ಮಿಂದ ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿ…
(೨೦೦೫ ರಲ್ಲಿ ಈ ಗುಮ್ಮಟ್ಟಕ್ಕೆ ಭೇಟಿ ಕೊಟ್ಟಾಗ.ನಮ್ಮನ್ನು ಕರೆದೊಯ್ದಿದ್ದ ಮಾರ್ಗದರ್ಶಿ…ತನ್ನ ಜೇಬಿನಿಂದ ನಾಣ್ಯದ ತೀರ ಸಣ್ಣ ಸದ್ದು ಕೂಡ ಏಳಕ್ಕಿಂತ ಅಧಿಕ ಬಾರಿ ಮಾರ್ಧನಿ ಯಾಗುವದನ್ನು ಕೇಳಿಸಿದ್ದರು. ಬೆಂಕಿ ಪೊಟ್ಟಣದ ಕಡ್ಡಿಗಳ ಸದ್ದು, ಕೈಯನ್ನು ಉಜ್ಜಿದಾಗ, ಕಾಗದದ ಪರ ಪರ ಸದ್ದು, ನೆಟಿಕೆ ಸದ್ದು . ..ಕಮಾನಿನ ಒಂದು ತುದಿಯಲ್ಲಿ ನಿಂತು ಗೋಡೆಗೆ ಕಿವಿಯಾನಿಸಿದರೆ ಇನ್ನೊಂದು ಬದಿಯಲ್ಲಿ ದೂರವಾಣಿಯ ಸಂಭಾಷಣೆಯಂತೆ ಸ್ಪಷ್ಟವಾಗಿ ಕೇಳಿಸಿದ್ದರು)
ದಿಲೇವಾರ್..
‘ಪಿಸು ಮಾತಿನ ಮೊಗಸಾಲೆ’ಯ ಹಿಂದೆ ಇಷ್ಟೆಲ್ಲ ತಂತ್ರಜ್ಞಾನವಿದೆ ಎಂದು ಗೊತ್ತಿರಲಿಲ್ಲ. ಎಲೆಕ್ಟ್ರಾನಿಕ್ಸ್ ಪದವಿಧರನಾದ ನನಗೆ ನಿಮ್ಮ ವೈಜ್ಞಾನಿಕ ವಿವರಣೆ ಸೊಗಸಾಗಿ ಅರ್ಥವಾಯಿತು. ಆಂಪ್ಲಿಫೈಯರ್ ಸಿಸ್ಟಂ, ಊಫರ್, ಡಾಲ್ಫಿ ಸಿಸ್ಟಂ ತಯಾರಿಕೆ ಬಗ್ಗೆ ಅಂತಿಮ ಪದವಿಯಲ್ಲಿ ಅಭ್ಯಾಸ ಮಾಡಿದ್ದೇನೆ. ಖಂಡಿತಾ ಈ ತಂತ್ರಜ್ಞಾನ ಗುಂಬಜ್ ಒಳಗಿರಬಹುದು. ಮುಂದೊಮ್ಮೆ ಹೋದಾಗ ಗುರುತಿಸುವೆ. ನಿಮ್ಮ ಜೊತೆಯಲ್ಲೇ ಹೋದರೆ, ಸಂಗೀತ ಕೇಳುವ ಅವಕಾಶ ಸಿಗಬಹುದು…
ನಿಮ್ಮ ಶೋಧನೆ ಮುಂದುವರಿಯಲಿ
ಶುಭಕಾಮನೆಗಳು
ಗಾಣಧಾಳು ಶ್ರೀಕಂಠ
ಬಹಳ ಮಾಹಿತಿಯುಕ್ತ ರೋಚಕ ಬರಹ. ವಿಜ್ಞಾನದ ವಿಸ್ಮಯಗಳು ಹೀಗೆಯೇ ರೋಚಕತೆ ಸೃಷ್ಟಿಸುತ್ತಾ ಸಾಗುತ್ತವೆ. ಗೋಲ್ ಗುಂಬಜ್ ನ ವಿಶೇಷತೆಗಳನ್ನು ಸೌಂಡ್ಸ್ ಮತ್ತು ಅಕಾಸ್ಟಿಕ್ಸ್ ಗಳ ಆಯಾಮದಲ್ಲಿ ತೆಗೆದಿಟ್ಟ ಬಗೆ ಹಿಡಿಸುವಂತದ್ದು. ನಮಗೆ ಸೌಂಡ್ ಮತ್ತು ಅಕಾಸ್ಟಿಕ್ ಗಳ ಬಗ್ಗೆ ಪಾಠ ಮಾಡಿದ ಬಿ.ಆರ್.ಏನ್ ಸರ್ ನೆನಪಾದರು. 🙂
ಇನ್ನೊಮ್ಮೆ ಗೋಲಗುಮ್ಮಟಕ್ಕೆ ಹೋದಾಗ ಹೊಸ ಬೆರಗಿನಿಂದ ಅದನ್ನು ನೋಡಲು ಸಾಧ್ಯವಾಗಿಸಿದ ನಿಮಗೆ ಕೃತಜ್ನತೆಗಳು.
Thanks for sharing
ಗೋಲ್ ಗುಮ್ಗುಮಟದ ಪಿಸುಮಾತಿನ ಮರುದನಿ ಮಾತ್ರ ಗೊತ್ತಿತ್ತು. ನಿಮ್ಮ ಲೇಖನ ಅದಕ್ಕೊಂದು ಹೊಸ ಆಯಾಮ ನೀಡಿದೆ.ಅಭಿನಂದನೆಗಳು- ಅಪ್ಪಾಜಿ
Thank you dilawar sir. I had been in golgumbaz yesterday itself. But there was a huge crowd